ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ನಿತಿನ್ ಗಡ್ಕರಿ ಜಿ, ಜಿತನ್ ರಾಮ್ ಮಾಂಝಿ ಜಿ, ಮನೋಹರ್ ಲಾಲ್ ಜಿ, ಎಚ್.ಡಿ. ಕುಮಾರಸ್ವಾಮಿ ಜಿ, ಪಿಯೂಷ್ ಗೋಯಲ್ ಜಿ, ಹರ್ದೀಪ್ ಸಿಂಗ್ ಪುರಿ ಜಿ, ದೇಶ ಮತ್ತು ವಿದೇಶಗಳಿಂದ ಆಗಮಿಸಿರುವ ಆಟೋಮೊಬೈಲ್ ಉದ್ಯಮದ ಎಲ್ಲಾ ದಿಗ್ಗಜರೆ, ಇಲ್ಲಿರುವ ಇತರೆ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!
ಕಳೆದ ಬಾರಿ ನಾನು ನಿಮ್ಮ ನಡುವೆ ಇದ್ದಾಗ, ಲೋಕಸಭೆ ಚುನಾವಣೆ ಸಮೀಪಿಸಿತ್ತು. ಆ ಸಮಯದಲ್ಲಿ, ನಿಮ್ಮೆಲ್ಲರ ನಂಬಿಕೆಯಿಂದಾಗಿ, ಮುಂದಿನ ಬಾರಿಯೂ ನಾನು ಖಂಡಿತವಾಗಿಯೂ ಇಂಡಿಯಾ ಮೊಬಿಲಿಟಿ ಎಕ್ಸ್ಪೋಗೆ ಬರುತ್ತೇನೆ ಎಂದು ಹೇಳಿದ್ದೆ. ದೇಶವು ನಮ್ಮನ್ನು 3ನೇ ಬಾರಿಗೆ ಆಶೀರ್ವದಿಸಿತು. ನೀವೆಲ್ಲರೂ ಮತ್ತೊಮ್ಮೆ ನನ್ನನ್ನು ಇಲ್ಲಿಗೆ ಆಹ್ವಾನಿಸಿದ್ದೀರಿ, ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಸ್ನೇಹಿತರೆ,
ಈ ವರ್ಷ, ಇಂಡಿಯಾ ಮೊಬಿಲಿಟಿ ಎಕ್ಸ್ಪೋದ ವ್ಯಾಪ್ತಿ ವಿಸ್ತಾರವಾಗಿದೆ ಎಂಬುದನ್ನು ನೋಡಿ ನನಗೆ ಅಪಾರ ಸಂತೋಷವಾಗಿದೆ. ಕಳೆದ ವರ್ಷ 800ಕ್ಕಿಂತ ಹೆಚ್ಚಿನ ಪ್ರದರ್ಶಕರು ಇಲ್ಲಿ ಭಾಗವಹಿಸಿದ್ದರು, 1.5 ಲಕ್ಷಕ್ಕಿಂತ ಹೆಚ್ಚಿನ ಜನರು ಭೇಟಿ ನೀಡಿದ್ದರು, ಈ ಬಾರಿ ಭಾರತ್ ಮಂಟಪದ ಜತೆಗೆ, ಈ ಎಕ್ಸ್ಪೋವನ್ನು ದ್ವಾರಕಾದ ಯಶೋಭೂಮಿ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಸೆಂಟರ್ನಲ್ಲೂ ನಡೆಸಲಾಗುತ್ತಿದೆ. ಮುಂಬರುವ 5-6 ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರಲಿದ್ದಾರೆ. ಇಲ್ಲಿ ಅನೇಕ ಹೊಸ ವಾಹನಗಳು ಬಿಡುಗಡೆಯಾಗಲಿವೆ. ಭಾರತದಲ್ಲಿ ಚಲನಶೀಲತೆಯ ಭವಿಷ್ಯದ ಬಗ್ಗೆ ಎಷ್ಟು ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ. ಇಲ್ಲಿ ಕೆಲವು ಪ್ರದರ್ಶನಗಳಿಗೆ ಭೇಟಿ ನೀಡುವ ಅವಕಾಶವೂ ನನಗೆ ಸಿಕ್ಕಿದೆ. ಭಾರತದ ಆಟೋಮೋಟಿವ್ ಉದ್ಯಮವು ಅದ್ಭುತವಾಗಿದೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ. ಹಾಗಾಗಿ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೆ,
ಭಾರತದ ಆಟೋಮೋಟಿವ್ ವಲಯದಲ್ಲಿ ಇಂತಹ ಬೃಹತ್ ಕಾರ್ಯಕ್ರಮದಲ್ಲಿ ನಾನು ಇಂದು ರತನ್ ಟಾಟಾ ಜಿ ಮತ್ತು ಒಸಾಮು ಸುಜುಕಿ ಜಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಈ ಇಬ್ಬರೂ ಮಹಾನ್ ದಿಗ್ಗಜರು ಭಾರತದ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆಯಲ್ಲಿ ಮತ್ತು ಮಧ್ಯಮ ವರ್ಗದ ಕನಸುಗಳನ್ನು ನನಸಾಗಿಸುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ರತನ್ ಟಾಟಾ ಜಿ ಮತ್ತು ಒಸಾಮು ಸುಜುಕಿ ಜಿ ಅವರ ಭವ್ಯ ಪರಂಪರೆಯು ಭಾರತದ ಇಡೀ ಚಲನಶೀಲತೆ(ಸಂಚಾರ) ವಲಯಕ್ಕೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ,
ಇಂದಿನ ಭಾರತವು ಆಕಾಂಕ್ಷೆಗಳಿಂದ ತುಂಬಿ ತುಳುಕುತ್ತಿದೆ, ಇದು ಯುವ ಶಕ್ತಿಯಿಂದ ತುಂಬಿದೆ. ಭಾರತದ ಆಟೋಮೋಟಿವ್ ಉದ್ಯಮದಲ್ಲಿ ನಾವು ಈ ಆಕಾಂಕ್ಷೆಗಳನ್ನು ನೋಡುತ್ತೇವೆ. ಕಳೆದ ವರ್ಷದಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ಸುಮಾರು 12% ಬೆಳೆದಿದೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಎಂಬ ಮಂತ್ರವನ್ನು ಅನುಸರಿಸಿ, ರಫ್ತುಗಳು ಈಗ ಹೆಚ್ಚಾಗುತ್ತಿವೆ. ವಿಶ್ವದ ಅನೇಕ ದೇಶಗಳ ಜನಸಂಖ್ಯೆಯು ಭಾರತದಲ್ಲಿ ಪ್ರತಿ ವರ್ಷ ಮಾರಾಟವಾಗುವ ವಾಹನಗಳ ಸಂಖ್ಯೆಯಷ್ಟು ಹೆಚ್ಚಿಲ್ಲ. ಒಂದು ವರ್ಷದಲ್ಲಿ ಸುಮಾರು 2.5 ಕೋಟಿ ವಾಹನಗಳು ಮಾರಾಟವಾಗುತ್ತಿರುವುದು ಭಾರತದಲ್ಲಿ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತಿದೆ. ಚಲನಶೀಲತೆಯ ಭವಿಷ್ಯದ ವಿಷಯಕ್ಕೆ ಬಂದಾಗ ಭಾರತವನ್ನು ಏಕೆ ಇಷ್ಟೊಂದು ಭರವಸೆಯಿಂದ ನೋಡಲಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.
ಸ್ನೇಹಿತರೆ,
ಇಂದು ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ನಾವು ಅದನ್ನು ಪ್ರಯಾಣಿಕ ವಾಹನ ಮಾರುಕಟ್ಟೆಯಾಗಿ ನೋಡಿದರೆ, ನಾವು ವಿಶ್ವದಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾದಾಗ ನಮ್ಮ ಆಟೋಮೊಬೈಲ್ ಮಾರುಕಟ್ಟೆ ಎಲ್ಲಿರುತ್ತದೆ ಎಂಬುದನ್ನು ಊಹಿಸಿ? ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣವು ಅಭೂತಪೂರ್ವ ಪರಿವರ್ತನೆ ಮತ್ತು ಚಲನಶೀಲತೆ ವಲಯದ ಬಹುಪಟ್ಟು ವಿಸ್ತರಣೆಯ ಪ್ರಯಾಣವಾಗಿರುತ್ತದೆ. ಭಾರತದಲ್ಲಿ ಚಲನಶೀಲತೆಯ ಭವಿಷ್ಯವನ್ನು ಪ್ರೇರೇಪಿಸುವ ಹಲವು ಅಂಶಗಳಿವೆ. ಉದಾಹರಣೆಗೆ, ಭಾರತದ ಅತಿ ದೊಡ್ಡದಿರುವ ಯುವ ಜನಸಂಖ್ಯೆ, ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚುತ್ತಿದೆ, ತ್ವರಿತ ನಗರೀಕರಣ, ಭಾರತದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಮೂಲಸೌಕರ್ಯ, ಮೇಕ್ ಇನ್ ಇಂಡಿಯಾದಿಂದ ಕೈಗೆಟುಕುವ ವಾಹನಗಳು, ಈ ಎಲ್ಲಾ ಅಂಶಗಳು ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆಯನ್ನು ಹೆಚ್ಚಿಸಲಿವೆ, ಅದಕ್ಕೆ ಹೊಸ ಶಕ್ತಿ ನೀಡಲಿವೆ.
ಸ್ನೇಹಿತರೆ,
ಆಟೋಮೊಬೈಲ್ ಉದ್ಯಮದ ಅಭಿವೃದ್ಧಿಗೆ ಅಗತ್ಯಗಳು ಮತ್ತು ಆಕಾಂಕ್ಷೆಗಳು ಬಹಳ ಮುಖ್ಯ. ಅದೃಷ್ಟವಶಾತ್, ಇವೆರಡೂ ಇಂದು ಭಾರತದಲ್ಲಿ ಚೈತನ್ಯಶೀಲವಾಗಿವೆ. ಭಾರತವು ಮುಂದಿನ ಹಲವಾರು ದಶಕಗಳವರೆಗೆ ವಿಶ್ವದ ಅತ್ಯಂತ ಚಿರಯೌವ್ವನ ದೇಶವಾಗಿ ಉಳಿಯಲಿದೆ. ಈ ಯುವಕರೇ ನಿಮ್ಮ ಅತಿದೊಡ್ಡ ಗ್ರಾಹಕರು. ಇಷ್ಟು ದೊಡ್ಡ ಯುವ ಸಮೂಹವು ಎಷ್ಟು ದೊಡ್ಡ ಬೇಡಿಕೆಯನ್ನು ಸೃಷ್ಟಿಸುತ್ತಿದೆ ಎಂದು ನೀವು ಚೆನ್ನಾಗಿ ಅಂದಾಜು ಮಾಡಬಹುದು. ನಿಮ್ಮ ಮತ್ತೊಂದು ದೊಡ್ಡ ಗ್ರಾಹಕರೆಂದರೆ, ಅದು ಭಾರತದ ಮಧ್ಯಮ ವರ್ಗ. ಕಳೆದ 10 ವರ್ಷಗಳಲ್ಲಿ 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ. ಈ ನವ ಮಧ್ಯಮ ವರ್ಗವು ತನ್ನ ಮೊದಲ ವಾಹನವನ್ನು ಖರೀದಿಸುತ್ತಿದೆ. ಪ್ರಗತಿ ಸಂಭವಿಸಿದಂತೆ, ಅವರು ತಮ್ಮ ವಾಹನಗಳನ್ನು ಸಹ ನವೀಕರಿಸುತ್ತಾರೆ. ಆಟೋಮೊಬೈಲ್ ವಲಯವು ಇದರಿಂದ ಪ್ರಯೋಜನ ಪಡೆಯುವುದು ಖಚಿತ.
ಸ್ನೇಹಿತರೆ,
ಒಮ್ಮೆ ಭಾರತದಲ್ಲಿ ವಾಹನಗಳನ್ನು ಖರೀದಿಸದಿರಲು ಉತ್ತಮವಾದ, ವಿಶಾಲವಾದ ರಸ್ತೆಗಳ ಕೊರತೆಯು ಒಂದು ಕಾರಣವಾಗಿತ್ತು. ಈಗ ಈ ಪರಿಸ್ಥಿತಿ ಬದಲಾಗುತ್ತಿದೆ. ಪ್ರಯಾಣದ ಸುಲಭತೆಯು ಇಂದು ಭಾರತಕ್ಕೆ ದೊಡ್ಡ ಆದ್ಯತೆಯಾಗಿದೆ. ಕಳೆದ ವರ್ಷದ ಬಜೆಟ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಮೀಸಲಿಡಲಾಗಿತ್ತು. ಇಂದು ಭಾರತದಲ್ಲಿ ಬಹುಪಥ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳ ಜಾಲ ನಿರ್ಮಿಸಲಾಗುತ್ತಿದೆ. ಪ್ರಧಾನ ಮಂತ್ರಿಗಳ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಮೂಲಕ ಬಹುಮಾದರಿ ಸಂಪರ್ಕ ಹೆಚ್ಚಿನ ವೇಗ ಪಡೆಯುತ್ತಿದೆ. ಇದು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತಿದೆ. ರಾಷ್ಟ್ರೀಯ ಸರಕು ಸಾಗಣೆ ನೀತಿಯಿಂದಾಗಿ, ಭಾರತವು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಸರಕು ಸಾಗಣೆ ವೆಚ್ಚಗಳನ್ನು ಹೊಂದಿರುವ ದೇಶವಾಗಲಿದೆ. ಈ ಎಲ್ಲಾ ಪ್ರಯತ್ನಗಳಿಂದಾಗಿ, ಆಟೋಮೊಬೈಲ್ ಉದ್ಯಮಕ್ಕೆ ಹಲವು ಹೊಸ ಸಾಧ್ಯತೆಗಳ ಬಾಗಿಲುಗಳು ತೆರೆಯುತ್ತಿವೆ. ದೇಶದಲ್ಲಿ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಇದು ಒಂದು ದೊಡ್ಡ ಕಾರಣವಾಗಿದೆ.
ಸ್ನೇಹಿತರೆ,
ಇಂದು ಉತ್ತಮ ಮೂಲಸೌಕರ್ಯದೊಂದಿಗೆ ಹೊಸ ತಂತ್ರಜ್ಞಾನವನ್ನು ಸಹ ಸಂಯೋಜಿಸಲಾಗುತ್ತಿದೆ. ಫಾಸ್ಟ್ಟ್ಯಾಗ್ ಭಾರತದಲ್ಲಿ ಚಾಲನಾ ಅನುಭವವನ್ನು ಹೆಚ್ಚು ಸುಲಭಗೊಳಿಸಿದೆ. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಭಾರತದಲ್ಲಿ ತಡೆರಹಿತ ಪ್ರಯಾಣದ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತಿದೆ. ಈಗ ನಾವು ಸ್ಮಾರ್ಟ್ ಮೊಬಿಲಿಟಿಯತ್ತ ಸಾಗುತ್ತಿದ್ದೇವೆ. ಸಂಪರ್ಕಿತ ವಾಹನಗಳು ಮತ್ತು ಸ್ವಾಯತ್ತ ಚಾಲನೆಯ ದಿಕ್ಕಿನಲ್ಲಿ ಭಾರತವು ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ.
ಸ್ನೇಹಿತರೆ,
ಭಾರತದಲ್ಲಿ ಆಟೋಮೊಬೈಲ್ ಉದ್ಯಮದ ಬೆಳವಣಿಗೆಯ ನಿರೀಕ್ಷೆಗಳಲ್ಲಿ ಮೇಕ್ ಇನ್ ಇಂಡಿಯಾದ ಬಲವು ಪ್ರಮುಖ ಪಾತ್ರ ವಹಿಸುತ್ತಿದೆ. ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆಗಳಿಂದ ಮೇಕ್ ಇನ್ ಇಂಡಿಯಾ ಅಭಿಯಾನವು ಹೊಸ ಉತ್ತೇಜನ ಪಡೆದುಕೊಂಡಿದೆ. ಪಿಎಲ್ಐ ಯೋಜನೆಯು 2.25 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮಾರಾಟಕ್ಕೆ ಸಹಾಯ ಮಾಡಿದೆ. ಈ ಯೋಜನೆಯ ಮೂಲಕ ಈ ವಲಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ನಿಮಗೆ ತಿಳಿದಿರುವಂತೆ, ನೀವು ನಿಮ್ಮ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ, ಇತರ ವಲಯಗಳಲ್ಲಿಯೂ ಸಹ ಇದು ಗುಣಕ ಪರಿಣಾಮವನ್ನು ಬೀರುತ್ತದೆ. ನಮ್ಮ ಎಂಎಸ್ಎಂಇ ವಲಯವು ಹೆಚ್ಚಿನ ಸಂಖ್ಯೆಯ ಆಟೋ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಆಟೋ ವಲಯವು ಬೆಳೆದಾಗ, ಎಂಎಸ್ಎಂಇಗಳ ಸರಕು ಸಾಗಣೆ, ಪ್ರವಾಸ ಮತ್ತು ಸಾರಿಗೆ ವಲಯಗಳಲ್ಲಿಯೂ ಹೊಸ ಉದ್ಯೋಗಗಳು ಸ್ವಯಂಚಾಲಿತವಾಗಿ ಹೆಚ್ಚಾಗಲು ಪ್ರಾರಂಭಿಸುತ್ತವೆ.
ಸ್ನೇಹಿತರೆ,
ಭಾರತ ಸರ್ಕಾರವು ಆಟೋಮೊಬೈಲ್ ವಲಯವನ್ನು ಪ್ರತಿ ಹಂತದಲ್ಲೂ ಬೆಂಬಲಿಸುತ್ತಿದೆ. ಕಳೆದ ದಶಕದಲ್ಲಿ, ಈ ಉದ್ಯಮದಲ್ಲಿ ಎಫ್ಡಿಐ, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಪಾಲುದಾರಿಕೆಯ ಹೊಸ ಮಾರ್ಗಗಳನ್ನು ಸೃಷ್ಟಿಸಲಾಗಿದೆ. ಕಳೆದ 4 ವರ್ಷಗಳಲ್ಲಿ, ಈ ವಲಯದಲ್ಲಿ 36 ಶತಕೋಟಿ ಡಾಲರ್ಗಳಿಗೂ ಹೆಚ್ಚು ವಿದೇಶಿ ನೇರ ಹೂಡಿಕೆ ಹರಿದುಬಂದಿದೆ. ಮುಂಬರುವ ವರ್ಷಗಳಲ್ಲಿ ಇದು ಹಲವು ಪಟ್ಟು ಹೆಚ್ಚಾಗಲಿದೆ. ಭಾರತದಲ್ಲಿಯೇ ಆಟೋ ಉತ್ಪಾದನೆಗೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಆದ್ಯತೆಯ ಪ್ರಯತ್ನವಾಗಿದೆ.
ಸ್ನೇಹಿತರೆ,
ಚಲನಶೀಲತೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ 7-ಸಿ(ಕಾರಣಗಳು)ಗಳ ದೃಷ್ಟಿಕೋನವನ್ನು ನಾನು ಚರ್ಚಿಸಿದೆ ಎಂಬುದು ನನಗೆ ನೆನಪಿದೆ. ನಮ್ಮ ಚಲನಶೀಲತೆ ಪರಿಹಾರಗಳೆಂದರೆ ಸಾಮಾನ್ಯ, ಸಂಪರ್ಕಿತ, ಅನುಕೂಲಕರ, ದಟ್ಟಣೆ-ಮುಕ್ತ, ವಿದ್ಯುತ್ ಪೂರಣ, ಸ್ವಚ್ಛ ಮತ್ತು ಅತ್ಯಾಧುನಿಕವಾಗಿರಬೇಕು. ಹಸಿರು ಚಲನಶೀಲತೆಯ ಮೇಲಿನ ನಮ್ಮ ಗಮನವು ಈ ದೃಷ್ಟಿಕೋನದ ಒಂದು ಭಾಗವಾಗಿದೆ. ಇಂದು ನಾವು ಆರ್ಥಿಕತೆ ಮತ್ತು ಪರಿಸರ ವಿಜ್ಞಾನ ಎರಡನ್ನೂ ಬೆಂಬಲಿಸುವ ಅಂತಹ ಚಲನಶೀಲ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ತೊಡಗಿಸಿಕೊಂಡಿದ್ದೇವೆ. ಉರವಲು ಇಂಧನಗಳ ನಮ್ಮ ಆಮದು ವೆಚ್ಚ ಕಡಿಮೆ ಮಾಡುವ ವ್ಯವಸ್ಥೆ ಇದಾಗಿದೆ. ಆದ್ದರಿಂದ, ಇಂದು ನಾವು ಹಸಿರು ತಂತ್ರಜ್ಞಾನ, ವಿದ್ಯುಚ್ಛಾಲಿತ ವಾಹನಗಳು, ಹೈಡ್ರೋಜನ್ ಇಂಧನ, ಜೈವಿಕ ಇಂಧನಗಳು, ಅಂತಹ ತಂತ್ರಜ್ಞಾನಗಳ ಅಭಿವೃದ್ಧಿಯ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ. ಈ ದೃಷ್ಟಿಕೋನದೊಂದಿಗೆ ರಾಷ್ಟ್ರೀಯ ವಿದ್ಯುತ್ ಚಲನಶೀಲತೆ ಮಿಷನ್ ಮತ್ತು ಹಸಿರು ಹೈಡ್ರೋಜನ್ ಮಿಷನ್ನಂತಹ ಅಭಿಯಾನಗಳನ್ನು ಪ್ರಾರಂಭಿಸಲಾಗಿದೆ.
ಸ್ನೇಹಿತರೆ,
ಕಳೆದ ಕೆಲವು ವರ್ಷಗಳಿಂದ ಭಾರತವು ವಿದ್ಯುತ್ ಚಲನಶೀಲತೆಯಲ್ಲಿ ತ್ವರಿತ ಬೆಳವಣಿಗೆ ಕಂಡಿದೆ. ಕಳೆದ ದಶಕದಲ್ಲಿ ವಿದ್ಯುತ್ ವಾಹನಗಳ ಮಾರಾಟವು 640 ಪಟ್ಟು ಹೆಚ್ಚಾಗಿದೆ. 10 ವರ್ಷಗಳ ಹಿಂದೆ, ಒಂದು ವರ್ಷದಲ್ಲಿ ಸುಮಾರು 2,600 ವಿದ್ಯುತ್ ವಾಹನಗಳು ಮಾತ್ರ ಮಾರಾಟವಾಗುತ್ತಿದ್ದವು, ಆದರೆ 2024ರಲ್ಲಿ, 16 ಲಕ್ಷದ 80 ಸಾವಿರಕ್ಕೂ ಹೆಚ್ಚಿನ ವಾಹನಗಳು ಮಾರಾಟವಾಗಿವೆ. ಅಂದರೆ ಇಂದು 10 ವರ್ಷಗಳ ಹಿಂದೆ ಇಡೀ ವರ್ಷದಲ್ಲಿ ಮಾರಾಟವಾದ ವಿದ್ಯುತ್ ವಾಹನಗಳ 2 ಪಟ್ಟು ಹೆಚ್ಚು ವಿದ್ಯುತ್ ವಾಹನಗಳು ಒಂದೇ ದಿನದಲ್ಲಿ ಮಾರಾಟವಾಗುತ್ತಿವೆ. ಈ ದಶಕದ ಅಂತ್ಯದ ವೇಳೆಗೆ, ಭಾರತದಲ್ಲಿ ವಿದ್ಯುತ್ ವಾಹನಗಳ ಮಾರಾಟ ಸಂಖ್ಯೆ 8 ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ವಿಭಾಗದಲ್ಲಿ ನಿಮಗೆ ಎಷ್ಟು ಸಾಧ್ಯತೆಗಳು ಹೆಚ್ಚುತ್ತಿವೆ ಎಂಬುದನ್ನು ಇದು ತೋರಿಸುತ್ತಿದೆ.
ಸ್ನೇಹಿತರೆ,
ದೇಶದಲ್ಲಿ ವಿದ್ಯುತ್ ಚಲನಶೀಲತೆ ವಿಸ್ತರಿಸಲು, ಉದ್ಯಮವನ್ನು ಬೆಂಬಲಿಸಲು ಸರ್ಕಾರ ನಿರಂತರವಾಗಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. FAME-2 ಯೋಜನೆಯನ್ನು 5 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಇದರ ಅಡಿ, 8 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗಿದೆ. ಈ ಮೊತ್ತದಿಂದ, ವಿದ್ಯುತ್ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡಲಾಯಿತು ಮತ್ತು ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸಲಾಯಿತು. ಇದು 16 ಲಕ್ಷಕ್ಕೂ ಹೆಚ್ಚು ವಿದ್ಯುತ್ ವಾಹನಗಳನ್ನು ಬೆಂಬಲಿಸಿತು, ಅದರಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯುತ್ ಬಸ್ಗಳು. ದೆಹಲಿಯಲ್ಲೂ ಸಹ, ಭಾರತ ಸರ್ಕಾರ ಒದಗಿಸಿದ 1,200ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳು ಓಡುತ್ತಿವೆ. ನಮ್ಮ 3ನೇ ಅವಧಿಯಲ್ಲಿ ನಾವು ಪ್ರಧಾನ ಮಂತ್ರಿಗಳ ಇ-ಡ್ರೈವ್ ಯೋಜನೆ ತಂದಿದ್ದೇವೆ. ಇದರ ಅಡಿ, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಇ-ಆಂಬ್ಯುಲೆನ್ಸ್ಗಳು, ಇ-ಟ್ರಕ್ಗಳಂತಹ ಸುಮಾರು 28 ಲಕ್ಷ ವಿದ್ಯುಚ್ಛಾಲಿತ ವಾಹನಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು. ಸುಮಾರು 14 ಸಾವಿರ ಎಲೆಕ್ಟ್ರಿಕ್ ಬಸ್ಗಳನ್ನು ಸಹ ಖರೀದಿಸಲಾಗುವುದು. ದೇಶಾದ್ಯಂತ ವಿವಿಧ ವಾಹನಗಳಿಗೆ 70 ಸಾವಿರಕ್ಕೂ ಹೆಚ್ಚು ಫಾಸ್ಟ್ ಚಾರ್ಜರ್ಗಳನ್ನು ಅಳವಡಿಸಲಾಗುವುದು. 3ನೇ ಅವಧಿಯಲ್ಲೇ ಪಿಎಂ ಇ-ಬಸ್ ಸೇವೆಯನ್ನು ಸಹ ಪ್ರಾರಂಭಿಸಲಾಗಿದೆ. ಇದರ ಅಡಿ, ದೇಶದ ಸಣ್ಣ ನಗರಗಳಲ್ಲಿ ಸುಮಾರು 38 ಸಾವಿರ ಇ-ಬಸ್ಗಳನ್ನು ಓಡಿಸಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ. ಸರ್ಕಾರವು ಇವಿ ಉತ್ಪಾದನೆಗಾಗಿ ಉದ್ಯಮವನ್ನು ನಿರಂತರವಾಗಿ ಬೆಂಬಲಿಸುತ್ತಿದೆ. ಇವಿ ಕಾರು ತಯಾರಿಕೆಗಾಗಿ ಭಾರತಕ್ಕೆ ಬರಲು ಬಯಸುವ ಜಾಗತಿಕ ಹೂಡಿಕೆದಾರರಿಗೆ ಮಾರ್ಗಗಳನ್ನು ಸಹ ರೂಪಿಸಲಾಗಿದೆ. ಇದು ಭಾರತದಲ್ಲಿ ಗುಣಮಟ್ಟದ ಇವಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಮತ್ತು ಮೌಲ್ಯ ಸರಪಳಿಯನ್ನು ನಿರ್ಮಿಸಲು ಸಹಾಯ ಮಾಡಲಿದೆ.
ಸ್ನೇಹಿತರೆ,
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನದ ಸವಾಲು ಎದುರಿಸಲು, ನಾವು ಸೌರಶಕ್ತಿ ಮತ್ತು ಪರ್ಯಾಯ ಇಂಧನ ಉತ್ತೇಜಿಸುವುದನ್ನು ಮುಂದುವರಿಸಬೇಕು. ಭಾರತವು ತನ್ನ ಜಿ-20 ಅಧ್ಯಕ್ಷತೆಯಲ್ಲಿ ಹಸಿರು ಭವಿಷ್ಯಕ್ಕೆ ಸಾಕಷ್ಟು ಒತ್ತು ನೀಡಿದೆ. ಇಂದು, ಇವಿ ಜತೆಗೆ, ಭಾರತದಲ್ಲಿ ಸೌರಶಕ್ತಿಗೆ ಸಂಬಂಧಿಸಿದಂತೆ ಬಹಳ ದೊಡ್ಡ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ. ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆಯೊಂದಿಗೆ ಮೇಲ್ಛಾವಣಿ ಸೌರಶಕ್ತಿಯ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಲಯದಲ್ಲಿ ಬ್ಯಾಟರಿಗಳು ಮತ್ತು ಶೇಖರಣಾ ವ್ಯವಸ್ಥೆಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚಾಗಲಿದೆ. ಮುಂದುವರಿದ ರಾಸಾಯನಿಕ ಕೋಶ ಬ್ಯಾಟರಿ ಸಂಗ್ರಹಣೆ ಉತ್ತೇಜಿಸಲು ಸರ್ಕಾರವು 18 ಸಾವಿರ ಕೋಟಿ ರೂ.ಗಳ ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್ಐ) ಯೋಜನೆ ಪ್ರಾರಂಭಿಸಿದೆ. ಅಂದರೆ ಈ ವಲಯದಲ್ಲಿ ನೀವು ದೊಡ್ಡ ಹೂಡಿಕೆಗಳನ್ನು ಮಾಡಲು ಇದು ಸರಿಯಾದ ಸಮಯ. ಇಂಧನ ಶೇಕರಣಾ ವಲಯದಲ್ಲಿ ಉದ್ಯಮ ಪ್ರಾರಂಭಿಸುವಂತೆ ನಾನು ದೇಶದ ಹೆಚ್ಚು ಹೆಚ್ಚು ಯುವಕರನ್ನು ಆಹ್ವಾನಿಸುತ್ತೇನೆ. ಭಾರತದಲ್ಲೇ ಲಭ್ಯವಿರುವ ವಸ್ತುಗಳಿಂದ ಬ್ಯಾಟರಿಗಳು ಮತ್ತು ಶೇಖರಣಾ ವ್ಯವಸ್ಥೆಗಳನ್ನು ಮಾಡಬಹುದಾದ ಅಂತಹ ನಾವೀನ್ಯತೆಗಳ ಮೇಲೆ ನಾವು ಕೆಲಸ ಮಾಡಬೇಕು. ಈ ಬಗ್ಗೆ ದೇಶದಲ್ಲಿ ಬಹಳಷ್ಟು ಕೆಲಸಗಳು ನಡೆಯುತ್ತಿವೆ, ಆದರೆ ಅದನ್ನು ಕಾರ್ಯಾಚರಣೆ ಮಾದರಿ(ಮಿಷನ್ ಮೋಡ್)ಯಲ್ಲಿ ಮುಂದುವರಿಸುವುದು ಮುಖ್ಯವಾಗಿದೆ.
ಸ್ನೇಹಿತರೆ,
ಕೇಂದ್ರ ಸರ್ಕಾರದ ಉದ್ದೇಶ ಮತ್ತು ಬದ್ಧತೆ ಬಹಳ ಸ್ಪಷ್ಟವಾಗಿದೆ. ಹೊಸ ನೀತಿಗಳನ್ನು ರೂಪಿಸುವುದೇ ಇರಲಿ ಅಥವಾ ಸುಧಾರಣೆಗಳನ್ನು ತರುವುದೇ ಇರಲಿ, ನಮ್ಮ ಪ್ರಯತ್ನಗಳು ಮುಂದುವರಿಯುತ್ತಿವೆ. ಈಗ ನೀವು ಅವುಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು, ಅವುಗಳ ಲಾಭ ಪಡೆದುಕೊಳ್ಳಬೇಕು. ಈಗ ವಾಹನ ಸ್ಕ್ರ್ಯಾಪಿಂಗ್ ನೀತಿ ಇದೆ. ಎಲ್ಲಾ ತಯಾರಕರು ಈ ನೀತಿಯ ಲಾಭ ಪಡೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ನಿಮ್ಮ ಕಂಪನಿಯಲ್ಲಿ ಪ್ರೋತ್ಸಾಹಕ ಯೋಜನೆಯನ್ನು ಸಹ ನೀವು ತರಬಹುದು. ಇದರೊಂದಿಗೆ, ಹೆಚ್ಚು ಹೆಚ್ಚು ಜನರು ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಮುಂದೆ ಬರುತ್ತಾರೆ. ಈ ಪ್ರೇರಣೆ ಬಹಳ ಮುಖ್ಯ. ಇದು ದೇಶದ ಪರಿಸರಕ್ಕೆ ನಿಮ್ಮ ಕಡೆಯಿಂದ ಉತ್ತಮ ಸೇವೆಯಾಗಲಿದೆ.
ಸ್ನೇಹಿತರೆ,
ಆಟೋಮೊಬೈಲ್ ಉದ್ಯಮವು ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತವಾಗಿದೆ. ಅದು ನಾವೀನ್ಯತೆ, ತಂತ್ರಜ್ಞಾನ, ಕೌಶಲ್ಯ ಅಥವಾ ಬೇಡಿಕೆಯೇ ಇರಲಿ, ಇಡೀ ಭವಿಷ್ಯವು ಪೂರ್ವ, ಏಷ್ಯಾ ಮತ್ತು ಭಾರತಕ್ಕೆ ಸೇರಿದೆ. ಚಲನಶೀಲತೆಯಲ್ಲಿ ತನ್ನ ಭವಿಷ್ಯ ನೋಡುವ ಪ್ರತಿಯೊಂದು ವಲಯಕ್ಕೂ ಮತ್ತು ಹೂಡಿಕೆದಾರರಿಗೂ ಭಾರತವು ಉತ್ತಮ ತಾಣವಾಗಿದೆ. ಸರ್ಕಾರವು ಎಲ್ಲ ರೀತಿಯಲ್ಲೂ ನಿಮ್ಮೊಂದಿಗಿದೆ ಎಂದು ನಾನು ನಿಮಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಎಂಬ ಮಂತ್ರದೊಂದಿಗೆ ಮುಂದುವರಿಯಿರಿ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭಾಶಯಗಳು.
ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Speaking at the Bharat Mobility Global Expo 2025. Driven by the aspirations of the people, India's automobile sector is witnessing an unprecedented transformation. @bharat_mobility
— Narendra Modi (@narendramodi) January 17, 2025
https://t.co/w6LYEJy2gX
The journey of Viksit Bharat is set to be one of unprecedented transformation and exponential growth in the mobility sector. pic.twitter.com/Z1T5KR5nUJ
— PMO India (@PMOIndia) January 17, 2025
Ease of travel is a top priority for India today. pic.twitter.com/0jHBkIdNjA
— PMO India (@PMOIndia) January 17, 2025
The strength of the Make in India initiative fuels the growth prospects of the country's auto industry. pic.twitter.com/T1aVhDO1nM
— PMO India (@PMOIndia) January 17, 2025
Seven Cs of India's mobility solution. pic.twitter.com/QYtxCEKR4v
— PMO India (@PMOIndia) January 17, 2025
Today, India is focusing on the development of Green Technology, EVs, Hydrogen Fuel and Biofuels. pic.twitter.com/yWmey6vjlk
— PMO India (@PMOIndia) January 17, 2025
India stands as an outstanding destination for every investor looking to shape their future in the mobility sector. pic.twitter.com/V57UcW0Oem
— PMO India (@PMOIndia) January 17, 2025
Inaugurated the Bharat Mobility Global Expo 2025 earlier today. Was particularly glad to witness the cutting-edge innovations and advancements in the mobility sector. pic.twitter.com/IVZsUXifNT
— Narendra Modi (@narendramodi) January 17, 2025
India's automobile industry is thriving, reflecting the rising aspirations of people. pic.twitter.com/IxEFaeck8D
— Narendra Modi (@narendramodi) January 17, 2025
Our focus is on creating seamless travel experiences and unlocking new opportunities for the auto industry. pic.twitter.com/XctAhjHZR1
— Narendra Modi (@narendramodi) January 17, 2025
The @makeinindia initiative, supported by PLI schemes, is driving growth in the automotive industry. pic.twitter.com/3MbYHmpECV
— Narendra Modi (@narendramodi) January 17, 2025