Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು  ದಿನಾಂಕ 19.01.2025 ರಂದು ಮಾಡಿದ ‘ಮನ್ ಕಿ ಬಾತ್’ – 118ನೇ ಭಾಷಣದ ಕನ್ನಡ ಅವತರಣಿಕೆ 


ನನ್ನ ಪ್ರಿಯ ದೇಶವಾಸಿಗಳಿಗೆ ನಮಸ್ಕಾರ. ಇಂದು 2025ರ ಮೊದಲ ‘ಮನದ ಮಾತು’ ಮಾತನಾಡಲಾಗುತ್ತಿದೆ. ನೀವು ಖಂಡಿತ ಈ ವಿಷಯವನ್ನು  ಗಮನಿಸಿರಬಹುದು. ಪ್ರತಿ ಬಾರಿ ತಿಂಗಳ ಕೊನೆಯ ಭಾನುವಾರದಂದು ‘ಮನದ ಮಾತು’ ಪ್ರಸಾರವಾಗುತ್ತದೆ, ಆದರೆ ಈ ಬಾರಿ ನಾವು ನಾಲ್ಕನೇ ಭಾನುವಾರದ ಬದಲು ಮೂರನೇ ಭಾನುವಾರದಂದು ಒಂದು ವಾರ ಮುಂಚಿತವಾಗಿ ಭೇಟಿಯಾಗುತ್ತಿದ್ದೇವೆ. ಏಕೆಂದರೆ ಮುಂದಿನ ಭಾನುವಾರದಂದೇ ಗಣರಾಜ್ಯೋತ್ಸವವಿದೆ. ಮುಂಚಿತವಾಗಿಯೇ ಎಲ್ಲಾ ದೇಶವಾಸಿಗಳಿಗೆ ನಾನು ಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ, ಈ ಬಾರಿಯ ‘ಗಣರಾಜ್ಯೋತ್ಸವ’ ಬಹಳ ವಿಶೇಷವಾಗಿದೆ. ಇದು ಭಾರತೀಯ ಗಣರಾಜ್ಯೋತ್ಸವದ ೭೫ ನೇ ವರ್ಷಾಚರಣೆ ಆಗಿದೆ. ಈ ಬಾರಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತವೆ. ನಮ್ಮ ಪವಿತ್ರ ಸಂವಿಧಾನವನ್ನು ನಮಗೆ ನೀಡಿದ ಸಂವಿಧಾನ ರಚನಾ ಸಭೆಯ ಎಲ್ಲ ಮಹನೀಯರಿಗೆ ನಾನು ವಂದಿಸುತ್ತೇನೆ. ಸಂವಿಧಾನ ರಚನಾ ಸಭೆಯಲ್ಲಿ ಹಲವಾರು  ವಿಷಯಗಳ ಮೇಲೆ ಸುದೀರ್ಘ ಚರ್ಚೆಗಳು ನಡೆದಿದ್ದವು. ಆ ಚರ್ಚೆಗಳು, ಸಂವಿಧಾನ ಸಭೆಯ ಸದಸ್ಯರ ಚಿಂತನೆಗಳು, ಅವರ ಅನಿಸಿಕೆಗಳು ನಮ್ಮ ಶ್ರೇಷ್ಠ ಪರಂಪರೆಯಾಗಿದೆ. ಇಂದು ಮನದ ಮಾತಿನಲ್ಲಿ ಕೆಲವು ಮಹಾನ್ ನಾಯಕರ ಮೂಲ ಧ್ವನಿಯನ್ನು ನಿಮಗೆ ಕೇಳಿಸುವ ಪ್ರಯತ್ನ ನನ್ನದು.

ಸ್ನೇಹಿತರೇ, ಸಂವಿಧಾನ ರಚನಾ ಸಭೆಯು ತನ್ನ ಕೆಲಸವನ್ನು ಆರಂಭಿಸಿದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಸ್ಪರ ಸಹಕಾರದ ಕುರಿತು ಬಹು ಮುಖ್ಯವಾದ ವಿಷಯವನ್ನು ಹೇಳಿದ್ದರು. ಅವರ ಈ ಸಂಬೋಧನೆ ಇಂಗ್ಲಿಷ್‌ನಲ್ಲಿದೆ. ಅದರ ಆಯ್ದ ಒಂದು ಭಾಗವನ್ನುನಿಮಗೆ  ಕೇಳಿಸುತ್ತೇನೆ –

“ಅಂತಿಮ ಗುರಿಗೆ ಸಂಬಂಧಿಸಿದಂತೆ, ಇಲ್ಲಿಯವರೆಗೆ ನಮ್ಮಲ್ಲಿ ಯಾರಿಗೂ ಯಾವುದೇ ಆತಂಕಗಳಾಗಲಿ, ಸಂದೇಹವಾಗಲಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನನಗಿರುವ ಆತಂಕವನ್ನು ನಾನು ಇಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಬೇಕಾಗಿದೆ. ಅದೇನೆಂದರೆ ಅಂತಿಮ ಭವಿಷ್ಯವೆಂಬುದು ನಮ್ಮ ಸಮಸ್ಯೆಯಲ್ಲ ಆದರೆ ಇಂದು ನಮ್ಮಲ್ಲಿರುವ ವೈವಿಧ್ಯಮಯ ಸಮೂಹವನ್ನು ಹೇಗೆ ಒಂದು ಗೂಡಿಸುವುದು, ಒಕ್ಕೊರಲಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಮತ್ತು ನಮ್ಮನ್ನು ಒಗ್ಗಟ್ಟಿನತ್ತ ಕೊಂಡೊಯ್ಯುವ ಹಾದಿಯಲ್ಲಿ ಸಹಕಾರಿ ಮಾರ್ಗದಲ್ಲಿ ಸಾಗುವುದು ಹೇಗೆ ಎಂಬುದಾಗಿದೆ. ಅಂತಿಮ ಗಮ್ಯ ನಮ್ಮ ಸಮಸ್ಯೆಯಲ್ಲ ಆದರೆ ಸಮಸ್ಯೆ ಆರಂಭಕ್ಕೆ ಸಂಬಂಧಿಸಿದ್ದಾಗಿದೆ. ”

ಸ್ನೇಹಿತರೇ, ಸಂವಿಧಾನ ರಚನಾ ಸಭೆಯು ಒಗ್ಗಟ್ಟಿನಿಂದಿರಬೇಕು, ಒಕ್ಕೊರಲಿನಿಂದ ಮತ್ತು ಎಲ್ಲರ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂಬುದರ ಕುರಿತು ಬಾಬಾ ಸಾಹೇಬರು ಒತ್ತಿ ಹೇಳಿದರು. ಸಂವಿಧಾನ ಸಭೆಯ ಇನ್ನೊಂದು ಆಡಿಯೋ ತುಣುಕುಗಳನ್ನು ನಿಮಗಾಗಿ ಕೇಳಿಸುತ್ತೇನೆ. ಈ ಆಡಿಯೋ ನಮ್ಮ ಸಂವಿಧಾನ ರಚನಾ ಸಭೆಯ ಮುಖ್ಯಸ್ಥರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರದ್ದು. ಬನ್ನಿ ಡಾ.ರಾಜೇಂದ್ರ ಪ್ರಸಾದ್ ಅವರ ಮಾತುಗಳನ್ನು ಕೇಳೋಣ –

“ನಾವು ಶಾಂತಿ ಪ್ರಿಯರಾಗಿದ್ದೇವೆ ಮತ್ತು ಶಾಂತಿ ಪ್ರಿಯರಾಗಿದ್ದೆವು ಎಂದು ನಮ್ಮ ಇತಿಹಾಸವು ನಮಗೆ ಹೇಳುತ್ತದೆ ಮತ್ತು ನಮ್ಮ ಸಂಸ್ಕೃತಿ ನಮಗೆ ಕಲಿಸುತ್ತದೆ. ನಮ್ಮ ಸಾಮ್ರಾಜ್ಯ ವಿಸ್ತರಣೆ ಮತ್ತು ನಮ್ಮ ವಿಜಯಗಳು ವಿಭಿನ್ನ ರೀತಿಯದ್ದಾಗಿದ್ದವು, ನಾವು ಎಂದಿಗೂ ಯಾರನ್ನು ಕಬ್ಬಿಣ ಅಥವಾ ಚಿನ್ನದ ಸರಪಳಿಗಳಿಂದ ಬಂಧಿಸಲು ಪ್ರಯತ್ನಿಸಿದವರಲ್ಲ. ಕಬ್ಬಿಣದ ಸರಪಳಿಗಿಂತ ಗಟ್ಟಿಯಾದ ಆದರೆ ಸುಂದರ ಮತ್ತು ಹಿತಕರವಾದ ರೇಷ್ಮೆ ದಾರದಿಂದ ನಾವು ಇತರರನ್ನು ಬಾಂಧವ್ಯದಲ್ಲಿ ಬಂಧಿಸಿದ್ದೇವೆ.  ಅದು ಧರ್ಮ, ಸಂಸ್ಕೃತಿ ಮತ್ತು  ಜ್ಞಾನದ ಬಂಧವಾಗಿದೆ. ನಾವು ಇಂದು ಕೂಡಾ ಅದೇ ಮಾರ್ಗದಲ್ಲಿ ಮುಂದುವರಿಯುತ್ತೇವೆ ಮತ್ತು ನಮ್ಮದು ಒಂದೇ ಒಂದು ಆಸೆ ಮತ್ತು ಅಪೇಕ್ಷೆಯಾಗಿದೆ. ಅದೇನೆಂದರೆ ನಾವು ಜಗತ್ತಿನಲ್ಲಿ ಸಂತೋಷ ಮತ್ತು ಶಾಂತಿಯನ್ನು ಸ್ಥಾಪಿಸಲು ಸಹಾಯ ಮಾಡುವಂಥದ್ದು ಮತ್ತು ನಮ್ಮನ್ನು ಸ್ವಾತಂತ್ರ್ಯದವರೆಗೆ ಕೊಂಡೊಯ್ದ ಸತ್ಯ ಮತ್ತು ಅಹಿಂಸೆ ಎಂಬ ಗುರಿ ತಪ್ಪದ ಅಸ್ತ್ರಗಳನ್ನು ವಿಶ್ವಕ್ಕೆ ನೀಡುವುದು. ಕಾಲನ  ಹೊಡೆತಗಳ ಮಧ್ಯೆಯಿ ಬದುಕುವ ಶಕ್ತಿಯನ್ನು ನೀಡುವಂತಹ ಶಕ್ತಿ ನಮ್ಮ ಜೀವನ ಮತ್ತು ಸಂಸ್ಕೃತಿಯಲ್ಲಿದೆ. ನಮ್ಮ ಆದರ್ಶಗಳನ್ನು ನಾವು ಮುಂದಿಟ್ಟುಕೊಂಡು ಸಾಗಿದರೆ ಜಗತ್ತಿಗೆ ಮಹತ್ತರವಾದ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.”

ಸ್ನೇಹಿತರೇ, ಡಾ.ರಾಜೇಂದ್ರ ಪ್ರಸಾದ್ ಅವರು ಮಾನವೀಯ ಮೌಲ್ಯಗಳತ್ತ ದೇಶದ ಬದ್ಧತೆಯ ಕುರಿತು ಮಾತನಾಡಿದ್ದರು. ಈಗ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಧ್ವನಿಯನ್ನು ಕೇಳಿಸುತ್ತೇನೆ. ಅವರು ಅವಕಾಶಗಳಲ್ಲಿ ಸಮಾನತೆ ಬಗ್ಗೆ ಮಾತನಾಡಿದ್ದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಹೀಗೆ ಹೇಳಿದ್ದರು –

“ಸರ್ ಎಲ್ಲಾ ಸಂಕಷ್ಟಗಳ ಮಧ್ಯೆಯೂ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಮತ್ತು ತನ್ಮೂಲಕ ಮಹಾನ್ ಭಾರತ ರಚನೆಗೆ ಸಹಾಯ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ. ಈ ಮಾತೃಭೂಮಿ, ಈ  ಸಮುದಾಯ, ಆ ಸಮುದಾಯ, ಈ ವರ್ಗ ಆ ವರ್ಗಕ್ಕೆ ಮಾತ್ರ ಸೀಮಿತವಾಗಿರದೆ, ಪ್ರತಿಯೊಬ್ಬ ವ್ಯಕ್ತಿ, ಮನುಷ್ಯ, ಜನಾಂಗ, ಜಾತಿ, ಮತ ಅಥವಾ ಸಮುದಾಯವನ್ನು ಲೆಕ್ಕಿಸದೆ ಈ ಮಹಾನ್ ರಾಷ್ಟ್ರದಲ್ಲಿ  ವಾಸಿಸುವ ಪ್ರತಿ ಪುರುಷ, ಮಹಿಳೆ ಮತ್ತು ಮಗುವಿಗೆ ಹೀಗೆ . ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಇದರಿಂದ ಮಹಿಳೆ ಅಥವಾ ಪುರುಷ ತನ್ನನ್ನು ತಾನು ಅತ್ಯುತ್ತಮ ಪ್ರತಿಭೆಗನುಸಾರ ಅಭಿವೃದ್ಧಿ ಹೊಂದಿ ಮಹಾನ್ ಮಾತೃಭೂಮಿ ಭಾರತಕ್ಕೆ ಸೇವೆ ಸಲ್ಲಿಸಬಹುದು.

ಸ್ನೇಹಿತರೇ, ಸಂವಿಧಾನ ರಚನಾ ಸಭೆಯ ಚರ್ಚೆಯ ಈ ಮೂಲ ಆಡಿಯೋವನ್ನು ಕೇಳಿ ನಿಮಗೂ ಆನಂದವಾಗಿದೆ ಎಂದು ನಾನು ಭಾವಿಸುತ್ತೇನೆ. ದೇಶವಾಸಿಗಳಾದ ನಮಗೆ, ಈ ಚಿಂತನೆಗಳಿಂದ ಸ್ಫೂರ್ತಿ ಪಡೆದು, ನಮ್ಮ ಸಂವಿಧಾನವನ್ನು ರಚಿಸಿದವರೂ ಹೆಮ್ಮೆಪಡುವಂತಹ ಭಾರತವನ್ನು ನಿರ್ಮಿಸುವತ್ತ ಕೆಲಸ ಮಾಡಬೇಕಾಗಿದೆ.

ಸ್ನೇಹಿತರೇ, ‘ಗಣರಾಜ್ಯೋತ್ಸವ’ದ ಒಂದು ದಿನ ಮುಂಚೆ. ಅಂದರೆ ಜನವರಿ 25 ರಾಷ್ಟ್ರೀಯ ಮತದಾರರ ದಿನವಾಗಿದೆ. ಈ ದಿನದಂದು ‘ಭಾರತೀಯ ಚುನಾವಣಾ ಆಯೋಗ’ ಸ್ಥಾಪನೆಯಾಗಿತ್ತು ಆದ್ದರಿಂದ ಈ ದಿನವು ಮಹತ್ವದ್ದಾಗಿದೆ. ನಮ್ಮ ಸಂವಿಧಾನದ ನಿರ್ಮಾಪಕರು ಸಂವಿಧಾನದಲ್ಲಿ, ನಮ್ಮ ಚುನಾವಣಾ ಆಯೋಗಕ್ಕೆ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ಭಾಗವಹಿಸುವಿಕೆಗೆ ಬಹು ದೊಡ್ಡ ಸ್ಥಾನವನ್ನು ನೀಡಿದ್ದಾರೆ. 1951-52ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆದಾಗ ದೇಶದ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂಬ ಅನುಮಾನ ಕೆಲವರಿಗಿತ್ತು. ಆದರೆ, ನಮ್ಮ ಪ್ರಜಾಪ್ರಭುತ್ವವು ಎಲ್ಲಾ ಆತಂಕಗಳನ್ನು ತೊಡೆದುಹಾಕಿತು – ಎಷ್ಟೇ ಆಗಲಿ ಭಾರತ ಪ್ರಜಾಪ್ರಭುತ್ವದ ತಾಯಿಯಲ್ಲವೇ. ಕಳೆದ ದಶಕಗಳಲ್ಲಿಯೂ ದೇಶದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ ಮತ್ತು ಸಮೃದ್ಧವಾಗಿದೆ. ಕಾಲಕಾಲಕ್ಕೆ, ನಮ್ಮ ಮತದಾನ ಪ್ರಕ್ರಿಯೆಯನ್ನು ಆಧುನೀಕರಿಸಿದ ಮತ್ತು ಬಲಪಡಿಸಿದ ಚುನಾವಣಾ ಆಯೋಗಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಆಯೋಗವು ಜನಶಕ್ತಿಗೆ ಹೆಚ್ಚಿನ ಬಲವನ್ನು ನೀಡಲು ತಂತ್ರಜ್ಞಾನದ ಸದುಪಯೋಗ ಮಾಡಿಕೊಂಡಿತು. ನ್ಯಾಯಸಮ್ಮತ ಚುನಾವಣೆಯ ಬದ್ಧತೆಗಾಗಿ   ಚುನಾವಣಾ ಆಯೋಗವನ್ನು ನಾನು ಅಭಿನಂದಿಸುತ್ತೇನೆ. ದೇಶವಾಸಿಗಳು ತಮ್ಮ ಮತದಾನದ ಹಕ್ಕನ್ನು ಯಾವಾಗಲೂ ಗರಿಷ್ಠ ಸಂಖ್ಯೆಯಲ್ಲಿ ಬಳಸಲು ಮತ್ತು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಮತ್ತು ಈ ಪ್ರಕ್ರಿಯೆಯನ್ನು ಬಲಪಡಿಸಲು ನಾನು ಕೋರುತ್ತೇನೆ

ನನ್ನ ಪ್ರಿಯ ದೇಶವಾಸಿಗಳೇ, ಪ್ರಯಾಗರಾಜ್‌ನಲ್ಲಿ ಮಹಾಕುಂಭ ಆರಂಭವಾಗಿದೆ. ಚಿರಸ್ಮರಣೀಯ ಜನಸಾಗರ , ಊಹಿಸಲಾಗದಂತಹ  ನೋಟ ಮತ್ತು ಸಮಾನತೆ ಮತ್ತು ಸಾಮರಸ್ಯದ ಅಸಾಧಾರಣ ಸಂಗಮ! ಈ ಬಾರಿ ಕುಂಭದಲ್ಲಿ ಹಲವು ವಿಶಿಷ್ಟತೆಗಳು ಸಾಕಾರಗೊಳ್ಳುತ್ತಿವೆ.  ಮಹಾಕುಂಭದ ಈ ಉತ್ಸವ ವಿವಿಧತೆಯಲ್ಲಿ ಏಕತೆಯನ್ನು ಆಚರಿಸುತ್ತಿದೆ.  ಸಂಗಮದ ತಟದಲ್ಲಿ ಭಾರತದಾದ್ಯಂತದ ಮತ್ತು ಪ್ರಪಂಚದಾದ್ಯಂತದ ಜನರು  ಸೇರುತ್ತಾರೆ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ ಯಾವುದೇ ತಾರತಮ್ಯ, ಜಾತಿಭೇದ ಇಲ್ಲ. ಭಾರತದ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದಿಂದ ಜನರು ಇಲ್ಲಿಗೆ ಬರುತ್ತಾರೆ. ಶ್ರೀಮಂತರು ಮತ್ತು ಬಡವರು ಕುಂಭದಲ್ಲಿ ಒಂದಾಗುತ್ತಾರೆ. ಎಲ್ಲರೂ ಸಂಗಮದಲ್ಲಿ ಸ್ನಾನ ಮಾಡುತ್ತಾರೆ, ಅಂಗಡಿಗಳಲ್ಲಿ ಒಟ್ಟಿಗೆ ಊಟ ಮಾಡುತ್ತಾರೆ, ಪ್ರಸಾದವನ್ನು ತೆಗೆದುಕೊಳ್ಳುತ್ತಾರೆ – ಅದಕ್ಕಾಗಿಯೇ ‘ಕುಂಭ’ ಏಕತೆಯ ಮಹಾಕುಂಭವಾಗಿದೆ. ನಮ್ಮ ಸಂಪ್ರದಾಯಗಳು ಹೇಗೆ ಸಂಪೂರ್ಣ ಭಾರತವನ್ನು ಒಗ್ಗೂಡಿಸುತ್ತದೆ ಎಂಬುದನ್ನುಕುಂಭದ ಆಯೋಜನೆ ನಮಗೆ ತಿಳಿಸುತ್ತದೆ. ಉತ್ತರದಿಂದ ದಕ್ಷಿಣದವರೆಗೆ ಆಚಾರ ವಿಚಾರ ನಂಬಿಕೆಗಳನ್ನು ಅನುಸರಿಸುವ ವಿಧಾನಗಳು ಒಂದೇ ರೀತಿಯೇ ಆಗಿರುತ್ತವೆ. ಒಂದೆಡೆ, ಪ್ರಯಾಗರಾಜ್, ಉಜ್ಜಯಿನಿ, ನಾಸಿಕ್ ಮತ್ತು ಹರಿದ್ವಾರದಲ್ಲಿ ಕುಂಭವನ್ನು ಆಯೋಜಿಸಲಾಗುತ್ತದೆ, ಅದೇ ರೀತಿ, ದಕ್ಷಿಣ ಭಾಗದಲ್ಲಿ, ಗೋದಾವರಿ, ಕೃಷ್ಣ, ನರ್ಮದಾ ಮತ್ತು ಕಾವೇರಿ ನದಿಗಳ ದಡದಲ್ಲಿ ಪುಷ್ಕರಂಗಳನ್ನು ಆಯೋಜಿಸಲಾಗುತ್ತದೆ. ಈ ಎರಡೂ ಉತ್ಸವಗಳು ನಮ್ಮ ಪವಿತ್ರ ನದಿಗಳು ಮತ್ತು ಅವುಗಳ ಆಸ್ಥೆಗಳಿಗೆ  ಸಂಬಂಧಿಸಿದ್ದಾಗಿದೆ. ಅಂತೆಯೇ, ಕುಂಭಕೋಣಂನಿಂದ ತಿರುಕ್ಕಡಯೂರ್, ಕೂಡವಾಸಲ್ನಿಂದ ತಿರುಚೆರೈಯಲ್ಲಿರುವ ಅನೇಕ ದೇವಾಲಯಗಳ ಪರಂಪರೆಯು ಕುಂಭದೊಂದಿಗೆ ಮೇಳೈಸಿದೆ.

ಸ್ನೇಹಿತರೇ, ಈ ಬಾರಿ ಕುಂಭದಲ್ಲಿ ಯುವಕರ ಪಾಲ್ಗೊಳ್ಳುವಿಕೆ ಬಹಳ ವ್ಯಾಪಕವಾಗಿದೆ ಎಂಬುದನ್ನು ನೀವೆಲ್ಲರೂ ಗಮನಿಸಿರಬಹುದು.  ಯಾವಾಗ ಯುವ ಪೀಳಿಗೆಯು ತಮ್ಮ ನಾಗರಿಕತೆಯ ಮೂಲದೊಂದಿಗೆ  ಹೆಮ್ಮೆಯಿಂದ ಪಾಲ್ಗೊಳ್ಳುತ್ತದೆಯೋ ಆಗ ಅದರ ಬೇರುಗಳು ಗಟ್ಟಿಗೊಳ್ಳುತ್ತವೆ ಮತ್ತು ಅದರ ಸುವರ್ಣ ಭವಿಷ್ಯವೂ ಸಹ ರೂಪುಗೊಳ್ಳುವುದು ಖಚಿತವಾಗುತ್ತದೆ. ಈ ಬಾರಿ ನಾವು ಕುಂಭದ ಡಿಜಿಟಲ್ ಪುಟ್ ಪ್ರಿಂಟ್ಸ್ ಕೂಡಾ ಬಹು ದೊಡ್ಡ ಪ್ರಮಾಣದಲ್ಲಿ ಕಾಣುತಿದ್ದೇವೆ. ಕುಂಭದ ಈ ಜಾಗತಿಕ ಜನಪ್ರಿಯತೆಯು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ.

ಸ್ನೇಹಿತರೇ, ಕೆಲವೇ ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಅದ್ಭುತವಾದ ‘ಗಂಗಾ ಸಾಗರ’ ಜಾತ್ರೆಯನ್ನು ಆಯೋಜಿಸಲಾಗಿತ್ತು. ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ‘ಕುಂಭ’, ‘ಪುಷ್ಕರಂ’ ಮತ್ತು ‘ಗಂಗಾ ಸಾಗರ ಮೇಳ’ ದಂತಹ ನಮ್ಮ ಈ ಉತ್ಸವಗಳು ನಮ್ಮ ಸಾಮಾಜಿಕ ಸಂವಹನ, ಸಾಮರಸ್ಯ ಮತ್ತು ಏಕತೆಯನ್ನು ಹೆಚ್ಚಿಸುವ ಹಬ್ಬಗಳಾಗಿವೆ. ಈ ಉತ್ಸವಗಳು ಭಾರತದ ಜನರನ್ನು ಭಾರತದ ಸಂಪ್ರದಾಯಗಳೊಂದಿಗೆ ಬೆರೆಯುವಂತೆ ಮಾಡುತ್ತವೆ. ನಮ್ಮ ಶಾಸ್ತ್ರಗಳು ವಿಶ್ವದಲ್ಲಿ – ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಪ್ರಪಂಚದ ಎಲ್ಲ ನಾಲ್ಕಕ್ಕೂ ಹೇಗೆ ಒತ್ತು ನೀಡಿವೆಯೋ ಹಾಗೆ ನಮ್ಮ ಹಬ್ಬಗಳು ಮತ್ತು ಸಂಪ್ರದಾಯಗಳು ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕತೆಯ ಪ್ರತಿಯೊಂದು ಅಂಶವನ್ನು ಬಲಪಡಿಸುತ್ತವೆ.

ಸ್ನೇಹಿತರೇ, ಈ ತಿಂಗಳು ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ನಾವು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪಣಾ ಉತ್ಸವದ  ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿದ್ದೇವೆ. ಈ ವರ್ಷ ಜನವರಿ 11 ರಂದು ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ಇತ್ತು. ಈ ದಿನದಂದು ಲಕ್ಷಾಂತರ ರಾಮ ಭಕ್ತರು ಅಯೋಧ್ಯೆಯಲ್ಲಿ ರಾಮಲಲ್ಲಾ ಅವರ ಪ್ರತ್ಯಕ್ಷ ದರ್ಶನ ಮಾಡಿ ಆಶೀರ್ವಾದ ಪಡೆದರು. ಪ್ರಾಣ ಪ್ರತಿಷ್ಠೆಯ ಈ ದ್ವಾದಶಿಯು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಪುನಃಸ್ಥಾಪನೆಯ ದ್ವಾದಶಿಯಾಗಿದೆ. ಆದುದರಿಂದ ಒಂದು ರೀತಿಯಲ್ಲಿ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ಪ್ರತಿಷ್ಠಾ ದ್ವಾದಶಿಯ ದಿನವೂ ಆಗಿದೆ. ಈ ರೀತಿ ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ನಮ್ಮ ಪರಂಪರೆಯನ್ನು ಉಳಿಸಿಕೊಂಡು ಅದರಿಂದ ಸ್ಫೂರ್ತಿ ಪಡೆದು ಮುನ್ನಡೆಯಬೇಕು.

ನನ್ನ ಪ್ರಿಯ ದೇಶವಾಸಿಗಳೇ, 2025 ರ ಪ್ರಾರಂಭದಲ್ಲಿಯೇ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಇಂದು, ಬೆಂಗಳೂರು ಮೂಲದ Pixxel, ಭಾರತೀಯ ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟ್-ಅಪ್, ಭಾರತದ ಮೊದಲ ಖಾಸಗಿ ಉಪಗ್ರಹ ಸಮೂಹ – ‘ಫೈರ್‌ಫ್ಲೈ’ ಅನ್ನು ಯಶಸ್ವಿಯಾಗಿ ಉಡಾಯಿಸಿತ್ತು ಎಂಬ ವಿಷಯ  ಹಂಚಿಕೊಳ್ಳಲು ಹೆಮ್ಮೆಪಡುತ್ತೇನೆ. ಈ ಉಪಗ್ರಹ ಸಮೂಹವು ವಿಶ್ವದ ಅತಿ ಹೆಚ್ಚು ರೆಸಲ್ಯೂಶನ್ ಹೊಂದಿರುವ ಹೈಪರ್ ಸ್ಪೆಕ್ಟ್ರಲ್ ಉಪಗ್ರಹ ಸಮೂಹವಾಗಿದೆ. ಈ ಸಾಧನೆಯು ಭಾರತವನ್ನು ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರಿಸಿದ್ದಲ್ಲದೆ, ಸ್ವಾವಲಂಬಿ ಭಾರತದತ್ತ ಒಂದು ದಾಪುಗಾಲಾಗಿದೆ. ಈ ಯಶಸ್ಸು ನಮ್ಮ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ವೃದ್ಧಿಸುತ್ತಿರುವ ಶಕ್ತಿ ಮತ್ತು ನಾವೀನ್ಯತೆಯ ಸಂಕೇತವಾಗಿದೆ. ಈ ಸಾಧನೆಗಾಗಿ ಸಂಪೂರ್ಣ ರಾಷ್ಟ್ರದ ಪರವಾಗಿ ನಾನು Pixxel ತಂಡ, ISRO ಮತ್ತು IN-SPAce ಅನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಸಾಧನೆಯನ್ನು ಮಾಡಿದ್ದಾರೆ.  ನಮ್ಮ ವಿಜ್ಞಾನಿಗಳು ಉಪಗ್ರಹಗಳ ಸ್ಪೇಸ್ಫ್ ಡಾಕಿಂಗ್ ಮಾಡಿದ್ದಾರೆ. ಎರಡು ಬಾಹ್ಯಾಕಾಶ ನೌಕೆಗಳಿಗೆ ಬಾಹ್ಯಾಕಾಶದಲ್ಲಿ ಸಂಪರ್ಕ ಕಲ್ಪಿಸುವ, ಪ್ರಕ್ರಿಯೆಯನ್ನು ಸ್ಪೇಸ್ ಡಾಕಿಂಗ್ ಎಂದು ಕರೆಯುತ್ತಾರೆ. ಈ ತಂತ್ರಜ್ಞಾನವು ಬಾಹ್ಯಾಕಾಶ ನಿಲ್ದಾಣಕ್ಕೆ ಅವಶ್ಯಕ ವಸ್ತುಗಳ ಸರಬರಾಜಿಗೆ ಮತ್ತು ಸಿಬ್ಬಂದಿ ಕಾರ್ಯಾಚರಣೆಗಳಿಗೆ ಪ್ರಮುಖವಾಗಿದೆ. ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತಕ್ಕೆ ಲಭಿಸಿದೆ .

ಸ್ನೇಹಿತರೇ, ನಮ್ಮ ವಿಜ್ಞಾನಿಗಳು ಸಹ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಮತ್ತು ಅವುಗಳನ್ನು ಜೀವಂತವಾಗಿಡುವ ಪ್ರಯತ್ನಗಳಲ್ಲಿ  ತೊಡಗಿದ್ದಾರೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಅಲಸಂದೆ ಬೀಜಗಳನ್ನು ಆಯ್ದುಕೊಂಡರು. ಡಿಸೆಂಬರ್ 30 ರಂದು ಕಳುಹಿಸಲಾದ ಈ ಬೀಜಗಳು ಬಾಹ್ಯಾಕಾಶದಲ್ಲಿಯೇ  ಮೊಳಕೆಯೊಡೆದವು. ಇದು ಅತ್ಯಂತ ಸ್ಪೂರ್ತಿದಾಯಕ ಪ್ರಯೋಗವಾಗಿದ್ದು, ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ತರಕಾರಿಗಳನ್ನು ಬೆಳೆಯಲು ಅವಕಾಶ ಕಲ್ಪಿಸಲಿದೆ. ಇದು ನಮ್ಮ ವಿಜ್ಞಾನಿಗಳ ದೂರದೃಷ್ಟಿಯನ್ನು ತೋರಿಸುತ್ತದೆ.

ಸ್ನೇಹಿತರೇ, ನಾನು ನಿಮಗೆ ಮತ್ತೊಂದು ಸ್ಪೂರ್ತಿದಾಯಕ ಉಪಕ್ರಮದ ಬಗ್ಗೆ ಹೇಳಬಯಸುತ್ತೇನೆ. ಐಐಟಿ ಮದ್ರಾಸ್‌ ನಲ್ಲಿರುವ ಎಕ್ಸ್‌ ಟೆಮ್ ಕೇಂದ್ರವು ಬಾಹ್ಯಾಕಾಶ ಉತ್ಪಾದನೆಗಾಗಿ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರವು 3D–Printed buildings, metal foams ಮತ್ತು ಬಾಹ್ಯಾಕಾಶದಲ್ಲಿ ಆಪ್ಟಿಕಲ್ ಫೈಬರ್‌ ಗಳಂತಹ ತಂತ್ರಜ್ಞಾನಗಳ ಸಂಶೋಧನೆ ನಡೆಸುತ್ತಿದೆ. ಈ ಕೇಂದ್ರವು ನೀರಿಲ್ಲದೆ ಕಾಂಕ್ರೀಟ್ ತಯಾರಿಸುವಂತಹ ಕ್ರಾಂತಿಕಾರಿ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ExTeM ನ ಈ ಸಂಶೋಧನೆಯು ಭಾರತದ ಗಗನಯಾನ ಮಿಷನ್ ಮತ್ತು ಭವಿಷ್ಯದ ಬಾಹ್ಯಾಕಾಶ ನಿಲ್ದಾಣವನ್ನು ಬಲಪಡಿಸುತ್ತದೆ. ಇದು ಉತ್ಪಾದನಾ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಹೊಸ ದ್ವಾರಗಳನ್ನು ತೆರೆಯುತ್ತದೆ.

 

ಸ್ನೇಹಿತರೇ, ಈ ಎಲ್ಲಾ ಸಾಧನೆಗಳು ಭಾರತದ ವಿಜ್ಞಾನಿಗಳು ಮತ್ತು ಆವಿಷ್ಕಾರಕರು ಭವಿಷ್ಯದ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಎಷ್ಟು ದೂರದೃಷ್ಟಿಯುಳ್ಳವರಾಗಿದ್ದಾರೆ ಎನ್ನುವುದಕ್ಕೆ ಪುರಾವೆಯಾಗಿದೆ. ಇಂದು ನಮ್ಮ ದೇಶ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇಡೀ ದೇಶದ ಪರವಾಗಿ, ಭಾರತದ ವಿಜ್ಞಾನಿಗಳು, ಆವಿಷ್ಕಾರಕರು ಮತ್ತು ಯುವ ಉದ್ಯಮಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಅನೇಕ ಸಲ ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಅದ್ಭುತ ಸ್ನೇಹದ ಚಿತ್ರಗಳನ್ನು ನೋಡಿರುತ್ತೀರಿ; ಪ್ರಾಣಿಗಳ ನಿಷ್ಠೆಯ ಕಥೆಗಳನ್ನು ಸಹ ನೀವು ಕೇಳಿರುತ್ತೀರಿ. ಸಾಕುಪ್ರಾಣಿಗಳೇ ಆಗಲಿ ಅಥವಾ ಕಾಡು ಪ್ರಾಣಿಗಳೇ ಆಗಲಿ ಮನುಷ್ಯರೊಂದಿಗಿನ ಅವುಗಳ ಬಾಂಧವ್ಯ ಕೆಲವೊಮ್ಮೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಪ್ರಾಣಿಗಳಿಗೆ ಮಾತನಾಡಲು ಸಾಧ್ಯವಾಗದಿದ್ದರೂ, ಅವು ಮನುಷ್ಯರನ್ನು, ಅವರ ಭಾವನೆಗಳನ್ನು ಮತ್ತು ಸಂಜ್ಞೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲವು.  ಪ್ರಾಣಿಗಳು ಸಹ ಪ್ರೀತಿಯ ಭಾಷೆಯನ್ನು ಅನುಸರಿಸುತ್ತವೆ ಮತ್ತು ಅರ್ಥ ಮಾಡಿಕೊಳ್ಳುತ್ತವೆ. ನಾನು ನಿಮಗೆ ಅಸ್ಸಾಂನ ಒಂದು ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅಸ್ಸಾಂನಲ್ಲಿ ನೌಗಾಂವ್ ಎಂಬ ಸ್ಥಳವೊಂದಿದೆ. ‘ನೌಗಾಂವ್’ ನಮ್ಮ ದೇಶದ ಮಹಾನ್ ವ್ಯಕ್ತಿ ಶ್ರೀಮಂತ್ ಶಂಕರ್ ದೇವ್ ಅವರ ಜನ್ಮಸ್ಥಳವಾಗಿದೆ. ಈ ಸ್ಥಳ ಬಹಳ ಸುಂದರವಾಗಿದೆ. ಇಲ್ಲಿ ಆನೆಗಳ ಒಂದು ದೊಡ್ಡ ವಾಸಸ್ಥಾನವೂ ಇದೆ. ಆನೆಗಳ ಹಿಂಡು ಬೆಳೆಗಳನ್ನು ಹಾಳುಮಾಡಿದ್ದ ಹಲವಾರು ಘಟನೆಗಳು ನಡೆದಿವೆ, ರೈತರು ಬಹಳ ಚಿಂತೆಗೊಳಗಾಗುತ್ತಿದ್ದರು, ಸುತ್ತಮುತ್ತಲಿನ ಸುಮಾರು 100 ಗ್ರಾಮಗಳ ಜನರು ಅಸಮಾಧಾನಗೊಂಡಿದ್ದರು, ಆದರೆ ಗ್ರಾಮಸ್ಥರು ಆನೆಗಳ ಆಸಹಾಯಕತೆಯನ್ನು ಕೂಡಾ ಅರ್ಥ ಮಾಡಿಕೊಂಡಿದ್ದರು. ಆನೆಗಳು ತಮ್ಮ ಹಸಿವನ್ನು ನೀಗಿಸಲು ಹೊಲಗಳಿಗೆ ನುಗ್ಗುತ್ತಿದ್ದವು, ಹೀಗಾಗಿ ಗ್ರಾಮಸ್ಥರು ಇದಕ್ಕೆ ಒಂದು ಪರಿಹಾರ ಹುಡುಕಬೇಕೆಂದು ಆಲೋಚಿಸಿದರು. ಗ್ರಾಮಸ್ಥರು ಒಂದು ತಂಡವನ್ನು ರಚಿಸಿದರು, ಆ ತಂಡದ ಹೆಸರು ‘ಹಾಥಿ ಬಂಧು‘ ಅಥವಾ ‘ಆನೆಯ ಬಂಧು‘ ಎಂಬುದಾಗಿತ್ತು. ಆನೆಯ ಬಂಧುಗಳು ತಮ್ಮ ಬುದ್ಧಿಮತ್ತೆ ಪ್ರದರ್ಶಿಸುತ್ತಾ, ಸುಮಾರು 800 ಬಿಘಾ ಬಂಜರು ಪ್ರದೇಶದಲ್ಲಿ ಒಂದು ವಿಶಿಷ್ಠ ಪ್ರಯತ್ನ ಮಾಡಿದರು. ಇಲ್ಲಿ ಗ್ರಾಮಸ್ಥರು ಪರಸ್ಪರ ಒಗ್ಗೂಡಿ, ನೇಪಿಯರ್ ಹುಲ್ಲು ಬಿತ್ತಿದರು.  ಈ ಹುಲ್ಲು ಆನೆಗಳಿಗೆ ಬಹಳ ಪ್ರಿಯವಾದುದು. ಇದರಿಂದಾಗಿ ಆನೆಗಳು ಹೊಲದ ಕಡೆ ಬರುವುದನ್ನು ಕಡಿಮೆ ಮಾಡಿದವು. ಇದರಿಂದ ಸಾವಿರಾರು ಗ್ರಾಮಸ್ಥರಿಗೆ ಬಹಳ ನಿರಾಳವಾಯಿತು. ಆನೆಗಳೂ ಈ ಪ್ರಯತ್ನದಿಂದ ಸಂತಸಪಟ್ಟಂತಾಯಿತು.

ಸ್ನೇಹಿತರೇ, ನಮ್ಮ ಸಂಸ್ಕೃತಿ ಮತ್ತು ಪರಂಪರೆ ನಮಗೆ ಸುತ್ತ ಮುತ್ತಲಿನ ಪಶು-ಪಕ್ಷಿಗಳೊಡನೆ ಪ್ರೀತಿಯಿಂದ ಬಾಳುವುದನ್ನು ಕಲಿಸುತ್ತದೆ. ಕಳೆದ ಎರಡು ತಿಂಗಳುಗಳಲ್ಲಿ ನಮ್ಮ ದೇಶದಲ್ಲಿ ಎರಡು ಹೊಸ ಹುಲಿ ಅಭಯಾರಣ್ಯಗಳು (ಮೀಸಲು ಪ್ರದೇಶಗಳು) ಸೇರ್ಪಡೆಯಾಗಿವೆ ಎನ್ನುವುದು ನಮ್ಮೆಲ್ಲರಿಗೂ ಬಹಳ ಸಂತಸದ ವಿಷಯವಾಗಿದೆ. ಇವುಗಳ ಪೈಕಿ ಒಂದು ಛತ್ತೀಸ್ ಗಢದಲ್ಲಿರುವ ಗುರು ಘಾಸೀದಾಸ್-ಕಮೋರ್ ಪಿಂಗಲಾ ಹುಲಿ ಅಭಯಾರಾಣ್ಯ ಮತ್ತು ಎರಡನೆಯದು ಮಧ್ಯಪ್ರದೇಶದ ರಾತಾಪಾನಿ ಹುಲಿ ಅಭಯಾರಣ್ಯ.

ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದಾರೆ-ಯಾವ ವ್ಯಕ್ತಿ ತನ್ನ ಚಿಂತನೆಗಳ ಬಗ್ಗೆ ಉತ್ಸುಕನಾಗಿರುತ್ತಾನೋ ಅವರೇ ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಸಫಲರಾಗುತ್ತಾರೆ. ಯಾವುದೇ ಆಲೋಚನೆಯನ್ನು ಸಾಕಾರಗೊಳಿಸಲು ನಮ್ಮ ಉತ್ಸಾಹ ಹಾಗೂ ಸಮರ್ಪಣಾ ಭಾವ ಬಹಳ ಅಗತ್ಯವಾಗಿರುತ್ತದೆ. ಸಂಪೂರ್ಣ ಶ್ರದ್ಧೆ ಮತ್ತು ಉತ್ಸಾಹದಿಂದಲೇ ಆವಿಷ್ಕಾರ, ಸೃಜನಾತ್ಮಕತೆ, ಮತ್ತು ಸಫಲತೆಯ ಮಾರ್ಗ ಖಂಡಿತವಾಗಿಯೂ ತೆರೆದುಕೊಳ್ಳುತ್ತದೆ. ಕೆಲವು ದಿನಗಳ ಹಿಂದಷ್ಟೇ, ಸ್ವಾಮಿ ವಿವೇಕಾನಂದರ ಜಯಂತಿಯಂದು, ನನಗೆ ‘ವಿಕಸಿತ ಭಾರತ ಯುವ ಮುಖಂಡರ ಸಂವಾದ’ದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ದೊರೆತಿತ್ತು. ಅಲ್ಲಿ ನಾನು ದೇಶದ ಮೂಲೆ ಮೂಲೆಗಳಿಂದ ಬಂದಂತಹ ಹಲವು ಯುವ-ಸ್ನೇಹಿತರೊಂದಿಗೆ ಇಡೀ ದಿನವನ್ನು ಕಳೆದೆ. ಯುವಜನತೆ ನವೋದ್ಯಮಗಳು, ಸಂಸ್ಕೃತಿ, ಮಹಿಳೆ, ಯುವಜನತೆ ಮತ್ತು ಮೂಲಸೌಕರ್ಯದಂತಹ ಹಲವಾರು ಕ್ಷೇತ್ರಗಳ ಕುರಿತಂತೆ ತಮ್ಮ ಯೋಜನೆಗಳನ್ನು ನನ್ನೊಂದಿಗೆ ಹಂಚಿಕೊಂಡರು. ಈ ಕಾರ್ಯಕ್ರಮ ನನಗೆ ಸ್ಮರಣೀಯವಾಯಿತು.

ಸ್ನೇಹಿತರೇ, ಕೆಲವು ದಿನಗಳ ಹಿಂದಷ್ಟೇ ಸ್ಟಾರ್ಟಪ್ ಇಂಡಿಯಾಗೆ 9 ವರ್ಷಗಳು ಪೂರ್ಣಗೊಂಡಿತು. ನಮ್ಮ ದೇಶದಲ್ಲಿ ಈ 9 ವರ್ಷಗಳಲ್ಲಿ ಎಷ್ಟು ನವೋದ್ಯಮಗಳು ಸ್ಥಾಪನೆಯಾಗಿದೆಯೋ, ಅವುಗಳ ಪೈಕಿ ಅರ್ಧಕ್ಕಿಂತ ಹೆಚ್ಚು ನವೋದ್ಯಮಗಳು 2 ಮತ್ತು 3ನೇ ಸ್ತರದ ನಗರಗಳಲ್ಲಿವೆ ಮತ್ತು ನಮ್ಮ ನವೋದ್ಯಮಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರಾ ಸೀಮಿತವಾಗಿಲ್ಲ ಎಂಬುದನ್ನು ಕೇಳಿ ಪ್ರತಿಯೊಬ್ಬ ಭಾರತೀಯನ ಹೃದಯವೂ ಸಂತಸದಿಂದ ತುಂಬುತ್ತದೆ. ಸಣ್ಣ ನಗರಗಳ ನವೋದ್ಯಮಗಳ ಪೈಕಿ ಅರ್ಧಕ್ಕಿಂತ ಹೆಚ್ಚು ನವೋದ್ಯಮಗಳ ನೇತೃತ್ವ ನಮ್ಮ ಹೆಣ್ಣುಮಕ್ಕಳು ವಹಿಸಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಅಂಬಾಲ, ಹಿಸಾರ್, ಕಾಂಗ್ರಾ, ಚೆಂಗಲ್ಪಟ್ಟು, ಬಿಲಾಸ್ಪುರ್, ಗ್ವಾಲಿಯರ್ ಮತ್ತು ವಾಶಿಮ್ನಂತಹ ನಗರಗಳು ನವೋದ್ಯಮಗಳ  ಕೇಂದ್ರಗಳಾಗುತ್ತಿವೆ ಎಂದು ತಿಳಿದಾಗ, ನಮ್ಮ ಮನಸ್ಸು ಸಂತೋಷದಿಂದ ತುಂಬಿ ಬರುತ್ತದೆ. ನಾಗಾಲ್ಯಾಂಡ್‌ ನಂತಹ ರಾಜ್ಯದಲ್ಲಿ, ಕಳೆದ ವರ್ಷ ನವೋದ್ಯಮಗಳ ನೋಂದಣಿ ಶೇಕಡಾ 200 ಕ್ಕಿಂತ ಹೆಚ್ಚಾಗಿದೆ. ತ್ಯಾಜ್ಯ ನಿರ್ವಹಣೆ, ನವೀಕರಿಸಲಾಗದ ಇಂಧನ, ಜೈವಿಕ ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ಸ್ ನಂತಹ ಕ್ಷೇತ್ರಗಳಲ್ಲಿ ನವೋದ್ಯಮಗಳು ಹೆಚ್ಚಾಗಿ ಕಂಡುಬರುತ್ತಿವೆ. ಇವು ಸಾಂಪ್ರದಾಯಿಕ ವಲಯಗಳಲ್ಲ, ಆದರೆ ನಮ್ಮ ಯುವಜನತೆ ಸಾಂಪ್ರದಾಯಿಕತೆಯನ್ನು ಮೀರಿ ಯೋಚಿಸುತ್ತಾರೆ, ಆದ್ದರಿಂದಲೇ ಅವರಿಗೆ ಯಶಸ್ಸು ಕೂಡಾ ದೊರೆಯುತ್ತಿದೆ.

ಸ್ನೇಹಿತರೇ, 10 ವರ್ಷಗಳ ಹಿಂದೆ ಯಾರಾದರೂ ನವೋದ್ಯಮ ಕ್ಷೇತ್ರದಲ್ಲಿ ತೊಡಗಬೇಕೆಂಬ ಕುರಿತು ಮಾತನಾಡಿದ್ದರೆ, ಅವರು ಬೇರೆಯವರಿಂದ ಅಪಹಾಸ್ಯದ, ವ್ಯಂಗ್ಯದ ಮಾತುಗಳನ್ನು ಕೇಳಬೇಕಾಗುತ್ತಿತ್ತು. ಕೆಲವರಂತೂ ನವೋದ್ಯಮ ಎಂದರೇನು? ಎಂದು ಕೂಡಾ ಕೇಳುತ್ತಿದ್ದರೆ ಕೆಲವರು ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂದೇ ಹೇಳುತ್ತಿದ್ದರು. ಆದರೆ ಈಗ ನೋಡಿ, ಒಂದು ದಶಕದಲ್ಲಿ ಎಷ್ಟು ದೊಡ್ಡ ಪರಿವರ್ತನೆಯಾಗಿದೆ. ನೀವು ಕೂಡಾ ಭಾರತದಲ್ಲಿ ತಯಾರಾಗುತ್ತಿರುವ ಹೊಸ ಅಗತ್ಯತೆಗಳ ಸಂಪೂರ್ಣ ಲಾಭ ಪಡೆದುಕೊಳ್ಳಿ. ನಿಮ್ಮ ಮೇಲೆ ನಿಮಗೆ ಸಂಪೂರ್ಣ ಭರವಸೆ ಇದ್ದಲ್ಲಿ, ನಿಮ್ಮ ಕನಸುಗಳಿಗೆ ಹೊಸ ರೆಕ್ಕೆಗಳು ದೊರೆಯುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ, ಒಳ್ಳೆಯ ಉದ್ದೇಶ ಮತ್ತು ನಿಸ್ವಾರ್ಥ ಮನೋಭಾವದಿಂದ ಮಾಡಿದ ಕೆಲಸವು ದೂರದೂರದವರೆಗೆ ತಲುಪುತ್ತದೆ. ಮತ್ತು ನಮ್ಮ ‘ಮನದ ಮಾತು’ ಇದಕ್ಕೆ ಬಹಳ ದೊಡ್ಡ ವೇದಿಕೆಯಾಗಿದೆ. ನಮ್ಮಂತಹ ವಿಶಾಲವಾದ ದೇಶದಲ್ಲಿ, ಯಾರಾದರೂ ದೂರದ ಪ್ರದೇಶಗಳಲ್ಲಿಯೂ ಸಹ ಉತ್ತಮ ಕೆಲಸ ಮಾಡುತ್ತಿದ್ದರೆ ಮತ್ತು ಕರ್ತವ್ಯ ಪ್ರಜ್ಞೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರೆ, ಅವರ ಪ್ರಯತ್ನಗಳನ್ನು ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಅರುಣಾಚಲ ಪ್ರದೇಶದಲ್ಲಿ ದೀಪಕ್ ನಾಬಾಮ್ ಅವರು ಸೇವೆಗೆ ಒಂದು ವಿಶಿಷ್ಠ ಉದಾಹರಣೆ ನೀಡಿದ್ದಾರೆ. ದೀಪಕ್ ಅವರು ಇಲ್ಲಿ ಒಂದು Living-Home ನಡೆಸುತ್ತಾರೆ. ಇಲ್ಲಿ ಮಾನಸಿಕ ಅಸ್ವಸ್ಥರಿಗೆ, ಶಾರೀರಿಕವಾಗಿ ಅಸಮರ್ಥರಾಗಿರುವವರಿಗೆ ಮತ್ತು ವೃದ್ಧರಿಗೆ ಸೇವೆ ಮಾಡಲಾಗುತ್ತದೆ, ಇಲ್ಲಿ ಮಾದಕ ಪದಾರ್ಥ ವ್ಯಸನಗಳಿಗೆ ಬಲಿಯಾದವರನ್ನು ಕೂಡಾ ನೋಡಿಕೊಂಡು ಆರೈಕೆ ಮಾಡಲಾಗುತ್ತದೆ. ದೀಪಕ್ ನಾಬಾಮ್ ಅವರು ಸಮಾಜದಿಂದ ವಂಚಿತರಾದವರಿಗೆ, ಹಿಂಸಾಚಾರ ಪೀಡಿತ ಕುಟುಂಬಗಳಿಗೆ, ಮತ್ತು ವಸತಿಹೀನರಿಗೆ ಆಶ್ರಯ ಕಲ್ಪಿಸುವ ಅಭಿಯಾನ ಆರಂಭಿಸಿದ್ದಾರೆ. ಇಂದು ಅವರ ಸೇವೆಯು ಒಂದು ಸಂಸ್ಥೆಯ ರೂಪ ತಾಳಿದೆ. ಅವರ ಸಂಸ್ಥೆಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಲಕ್ಷದ್ವೀಪದ ಕವರತ್ತೀ ದ್ವೀಪದಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಹಿಂಡುಂಬಿ ಅವರ ಕೆಲಸ ಕೂಡಾ ಬಹಳ ಪ್ರೇರಣಾದಾಯಕವಾಗಿದೆ. ಅವರು 18 ವರ್ಷಗಳಿಗೆ ಮುನ್ನವೇ ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಅವರು ಈಗಲೂ ಹಿಂದಿನಂತೆಯೇ ಅದೇ ಕರುಣೆ, ಸ್ನೇಹ, ಸಹಾನುಭೂತಿಯ ಮನೋಭಾವದಿಂದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿಯೇ ಇರುವ ಕೆಜೀ ಮೊಹಮ್ಮದ್  ಅವರ ಪ್ರಯತ್ನವೂ ಕೂಡಾ ಬಹಳ ಅದ್ಭುತವಾಗಿದೆ. ಅವರ ಶ್ರಮದಿಂದಾಗಿ ಮಿನೀಕಾಂಯ್ ದ್ವೀಪದ ಸಾಗರ ಪರಿಸರ ವ್ಯವಸ್ಥೆಯು ಬಲಿಷ್ಟವಾಗುತ್ತಿದೆ. ಅವರು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಹಲವಾರು ಗೀತೆಗಳನ್ನು ರಚಿಸಿದ್ದಾರೆ. ಅವರಿಗೆ ಲಕ್ಷದ್ವೀಪದ ಸಾಹಿತ್ಯ ಕಲಾ ಅಕಾಡೆಮಿ ಕಡೆಯಿಂದ ಅತ್ಯುತ್ತಮ ಜಾನಪದ ಗೀತೆ ಪ್ರಶಸ್ತಿ ಕೂಡಾ ದೊರೆತಿದೆ. ಕೇಜಿ ಮೊಹಮ್ಮದ್ ಅವರು ನಿವೃತ್ತಿಯ ನಂತರ ಅಲ್ಲಿನ ಸಂಗ್ರಹಾಲಯದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ.

ಸ್ನೇಹಿತರೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಕ್ಕೆ ಸಂಬಂಧಿಸಿದ ದೊಡ್ಡ ಉತ್ತಮ ಸಮಾಚಾರವೊಂದಿದೆ. ನಿಕೋಬಾರ್ ಜಿಲ್ಲೆಯಲ್ಲಿ ವರ್ಜಿನ್ ಕೊಬ್ಬರಿ ಎಣ್ಣೆಗೆ ಇತ್ತೀಚೆಗೆ ಜಿಐ ಟ್ಯಾಗ್ ದೊರೆತಿದೆ. ಈ ತೈಲದ ಉತ್ಪಾದನೆಯಲ್ಲಿ ತೊಡಗಿರುವ ಮಹಿಳೆಯರನ್ನು ಒಂದುಗೂಡಿಸಿ ಸ್ವ ಸಹಾಯ ಗುಂಪು ರಚಿಸಲಾಗುತ್ತಿದ್ದು, ಅವರಿಗೆ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕುರಿತಂತೆ ವಿಶೇಷ ತರಬೇತಿಯನ್ನು ಕೂಡಾ ನೀಡಲಾಗುತ್ತಿದೆ. ಇದು ನಮ್ಮ ಬುಡಕಟ್ಟು ಸಮುದಾಯದವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ನಿಕೋಬಾರ್ ನ ವರ್ಜಿನ್ ಕೊಬ್ಬರಿ ಎಣ್ಣೆ ವಿಶ್ವದಲ್ಲಿ ಸಂಚಲನ ಸೃಷ್ಟಿಸಲಿದೆ ಮತ್ತು ಇದರಲ್ಲಿ ಬಹುದೊಡ್ಡ ಕೊಡುಗೆ ಅಂಡಮಾನ್ ಮತ್ತು ನಿಕೋಬಾರ್ ನ ಮಹಿಳಾ ಸ್ವ ಸಹಾಯ ಗುಂಪಿನದ್ದಾಗಿರುತ್ತದೆ ಎಂಬ ನಂಬಿಕೆ ನನಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಒಂದು ಕ್ಷಣ ನೀವು ಒಂದು ದೃಶ್ಯವನ್ನು ಕಲ್ಪಿಸಿಕೊಳ್ಳಿ – ಕೊಲ್ಕತ್ತಾದಲ್ಲಿ, ಜನವರಿ ತಿಂಗಳ ಕಾಲ. ಎರಡನೇ ಮಹಾಯುದ್ಧ ಉತ್ತುಂಗದಲ್ಲಿದೆ ಅಂತೆಯೇ ಭಾರತದಲ್ಲಿ ಬ್ರಿಟಿಷರ ವಿರುದ್ಧದ ಕೋಪವೂ ಪರಾಕಾಷ್ಠೆ ತಲುಪಿದೆ. ಹೀಗಾಗಿ ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಪೋಲೀಸರನ್ನು ನಿಯೋಜಿಸಲಾಗಿದೆ. ಕೋಲ್ಕತ್ತಾದ ಮಧ್ಯಭಾಗದಲ್ಲಿ ಒಂದು ಮನೆಯ ಸುತ್ತಮುತ್ತ ಪೋಲೀಸರ ಕಣ್ಗಾವಲು ಹೆಚ್ಚಿದೆ. ಈ ನಡುವೆ, ಉದ್ದದ ಕಂದುಬಣ್ಣದ ಕೋಟ್, ಪ್ಯಾಂಟ್ ಹಾಗೂ ಕಪ್ಪು ಟೋಪಿ ಧರಿಸಿದ ವ್ಯಕ್ತಿಯೊಬ್ಬರು ರಾತ್ರಿಯ ಕತ್ತಲಿನಲ್ಲಿ ಒಂದು ಬಂಗಲೆಯಿಂದ ಕಾರ್ ನಲ್ಲಿ ಮನೆಯಿಂದ ಹೊರಗೆ ಹೊರಡುತ್ತಾರೆ. ಬಲಿಷ್ಠ ಸುರಕ್ಷತೆಯಿರುವ ಹಲವಾರು ಚೆಕ್ ಪೋಸ್ಟ್ ಗಳನ್ನು ದಾಟಿದ ನಂತರ ಅವರು ಗೋಮೋ ಎಂಬ ರೈಲು ನಿಲ್ದಾಣವನ್ನು ತಲುಪುತ್ತಾರೆ. ಈ ಸ್ಟೇಷನ್ ಈಗ ಝಾರ್ಖಂಡ್ ನಲ್ಲಿದೆ. ಇಲ್ಲಿಂದ ಒಂದು ರೈಲಿನಲ್ಲಿ ಅವರು ಮುಂದಿನ ಪಯಣ ಕೈಗೊಳ್ಳುತ್ತಾರೆ. ಆ ನಂತರ ಆಫ್ಘಾನಿಸ್ತಾನ್ ತಲುಪಿ, ಅಲ್ಲಿಂದ ಯೂರೋಪ್ ತಲುಪುತ್ತಾರೆ – ಬ್ರಿಟಿಷ್ ಆಳ್ವಿಕೆಯ ತೂರಲಾಗದ ಅಭೇದ ಕೋಟೆಗಳ ಹೊರತಾಗಿಯೂ ಇದೆಲ್ಲವೂ ಸಂಭವಿಸುತ್ತದೆ.

ಸ್ನೇಹಿತರೇ, ಈ ಕತೆ ನಿಮಗೆ ಚಲನಚಿತ್ರವೊಂದರ ದೃಶ್ಯದಂತೆ ತೋರಬಹುದು. ಇಷ್ಟೊಂದು ಧೈರ್ಯ ತೋರಿದ ವ್ಯಕ್ತಿ ಯಾರಾಗಿರಬಹುದು ಎಂದು ನೀವು ಯೋಚಿಸಬಹುದು. ವಾಸ್ತವದಲ್ಲಿ ಈ ವ್ಯಕ್ತಿ ಬೇರಾರೂ ಅಲ್ಲ, ಅವರೇ ನಮ್ಮ ದೇಶದ ಮಹಾನ್ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್. ಜನವರಿ 23 ಅಂದರೆ ಬೋಸ್ ಅವರ ಜಯಂತಿಯನ್ನು ನಾವು ‘ಪರಾಕ್ರಮ ದಿನ’ವಾಗಿ ಆಚರಿಸುತ್ತೇವೆ. ಅವರ ಶೌರ್ಯಕ್ಕೆ ಸಂಬಂಧಿಸಿದ ಈ ಕಥೆಯು ಅವರ ಶೌರ್ಯದ ಒಂದು ನೋಟವನ್ನು ನೀಡುತ್ತದೆ. ಕೆಲವು ವರ್ಷಗಳ ಹಿಂದೆ, ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರಿಂದ ತಪ್ಪಿಸಿಕೊಂಡು ಬಂದಿದ್ದ ಅದೇ ಮನೆಗೆ ನಾನು ಭೇಟಿ ನೀಡಿದ್ದೆ. ಅವರ ಆ ಕಾರು ಇನ್ನೂ ಅಲ್ಲೇ ಇದೆ. ಆ ಅನುಭವ ನನಗೆ ತುಂಬಾ ವಿಶೇಷವಾಗಿತ್ತು. ಸುಭಾಷ್ ಅವರು ಒಬ್ಬ ದಾರ್ಶನಿಕರಾಗಿದ್ದರು. ಅವರ ಸ್ವಭಾವದಲ್ಲೇ ಧೈರ್ಯ ಎನ್ನುವುದು ಆಳವಾಗಿ ಬೇರೂರಿತ್ತು. ಇಷ್ಟೇ ಅಲ್ಲ, ಅವರು ಬಹಳ ದಕ್ಷ ಆಡಳಿತಗಾರರೂ ಆಗಿದ್ದರು. ಕೇವಲ ತಮ್ಮ 27ನೇ ವಯಸ್ಸಿನಲ್ಲಿ, ಅವರು ಕೋಲ್ಕತ್ತಾ ನಗರ ನಿಗಮದ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದರು ಮತ್ತು ನಂತರ ಅವರು ಮೇಯರ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡರು. ಅವರು ಆಡಳಿತಗಾರರಾಗಿಯೂ ಅನೇಕ ಉತ್ತಮ ಕೆಲಸಗಳನ್ನು ಮಾಡಿದರು. ಮಕ್ಕಳಿಗೆ ಶಾಲೆಗಳು, ಬಡ ಮಕ್ಕಳಿಗೆ ಹಾಲು ಮತ್ತು ಸ್ವಚ್ಛತೆಯನ್ನು ಒದಗಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿದ್ದ ಪ್ರಯತ್ನಗಳು ಇಂದಿಗೂ ಪ್ರಸ್ತುತವಾಗಿವೆ, ಸ್ಮರಣೀಯವಾಗಿವೆ. ನೇತಾಜಿ ಸುಭಾಷ್ ಅವರಿಗೆ ರೇಡಿಯೋ ಜೊತೆಯಲ್ಲಿಯೂ ಅತ್ಯಂತ ಗಹನವಾದ ಬಾಂಧವ್ಯವಿತ್ತು. ಅವರು ‘ಆಜಾದ್ ಹಿಂದ್ ರೇಡಿಯೋ’ ಸ್ಥಾಪಿಸಿದ್ದರು, ಇದರಲ್ಲಿ ಅವರ ಮಾತುಗಳನ್ನು ಆಲಿಸಲು ಜನರು ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದರು. ಅವರ ಭಾಷಣಗಳಿಂದ ವಿದೇಶೀ ಆಡಳಿತದ ವಿರುದ್ಧ, ಸಮರಕ್ಕೆ ಹೊಸ ಶಕ್ತಿ ದೊರೆಯುತ್ತಿತ್ತು. ‘ಆಜಾದ್ ಹಿಂದ್ ರೇಡಿಯೋ’ ದಲ್ಲಿ ಇಂಗ್ಲೀಷ್, ಹಿಂದೀ, ತಮಿಳು, ಬಂಗಾಳಿ, ಮರಾಠಿ, ಪಂಜಾಬಿ, ಪಾಷ್ಟೋ ಮತ್ತು ಉರ್ದು ಭಾಷೆಯಲ್ಲಿ ವಾರ್ತಾ ಸಂಚಿಕೆಗಳು ಪ್ರಸಾರವಾಗುತ್ತಿದ್ದವು. ನಾನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಹೆಚ್ಚು ಹೆಚ್ಚು ಓದಿ ಮತ್ತು ಅವರ ಜೀವನದಿಂದ ಸದಾ ಪ್ರೇರಣೆ ಹೊಂದಿ ಎಂದು ನಾನು ದೇಶಾದ ಯುವಜನರಲ್ಲಿ ಮನವಿ ಮಾಡುತ್ತೇನೆ.

ಸ್ನೇಹಿತರೆ, ‘ಮನದ ಮಾತು’ ಎಂಬ ಈ ಕಾರ್ಯಕ್ರಮ, ನನಗೆ ಪ್ರತಿಬಾರಿಯೂ ದೇಶದ ಸಾಮೂಹಿಕ ಪ್ರಯತ್ನಗಳೊಂದಿಗೆ, ನಿಮ್ಮೆಲ್ಲರ ಸಾಮೂಹಿಕ ಇಚ್ಛಾಶಕ್ತಿಯೊಂದಿಗೆ ನನ್ನನ್ನು ಜೋಡಿಸುತ್ತದೆ. ಪ್ರತಿ ತಿಂಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಸಲಹೆ, ಸೂಚನೆ, ನಿಮ್ಮ ಚಿಂತನೆಗಳು ದೊರೆಯುತ್ತವೆ ಮತ್ತು ಪ್ರತಿಬಾರಿಯೂ ಇವುಗಳನ್ನು ನೋಡಿದಾಗ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದಲ್ಲಿ ನನ್ನ ನಂಬಿಕೆ ಮತ್ತಷ್ಟು ವೃದ್ಧಿಯಾಗುತ್ತದೆ. ನೀವೆಲ್ಲರೂ ಇದೇ ರೀತಿ ನಿಮ್ಮ ನಿಮ್ಮ ಕೆಲಸ ಕಾರ್ಯದಿಂದ ಭಾರತವನ್ನು ಸರ್ವಶ್ರೇಷ್ಠ ರಾಷ್ಟ್ರವನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಿರಿ, ಈ ಬಾರಿಯ ಮನ್ ಕಿ ಬಾತ್ ಅನ್ನು ಇಲ್ಲಿಗೆ ಮುಗಿಸೋಣ. ಮುಂದಿನ ತಿಂಗಳು ಭಾರತೀಯರ ಸಾಧನೆಗಳು, ಸಂಕಲ್ಪಗಳು ಮತ್ತು ಯಶಸ್ಸುಗಳ ಹೊಸ ಗಾಥೆಗಳೊಂದಿಗೆ ಪುನಃ ಭೇಟಿಯಾಗೋಣ. ಅನೇಕಾನೇಕ ಧನ್ಯವಾದ. ನಮಸ್ಕಾರ.

 

*****