Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಡಿಶಾದಲ್ಲಿ 18ನೇ ಪ್ರವಾಸಿ ಭಾರತೀಯ ದಿನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಒಡಿಶಾದಲ್ಲಿ 18ನೇ ಪ್ರವಾಸಿ ಭಾರತೀಯ ದಿನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಭುವನೇಶ್ವರದಲ್ಲಿ ಇಂದು 18ನೇ ಪ್ರವಾಸಿ ಭಾರತೀಯ ದಿನವನ್ನು ಉದ್ಘಾಟಿಸಿದರು. ಜಗತ್ತಿನ ನಾನಾ ಮೂಲೆಗಳಿಂದ ಆಗಮಿಸಿರುವ ಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯರನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದಲ್ಲಿ ಜಗತ್ತಿನಾದ್ಯಂತದ ವಿವಿಧ ಭಾರತೀಯ ಅನಿವಾಸಿ ಕಾರ್ಯಕ್ರಮಗಳಲ್ಲಿ ಉದ್ಘಾಟನಾ ಗೀತೆಯನ್ನು ನುಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ವಲಸಿಗರ ಭಾವನೆಗಳು ಮತ್ತು ಅನುಭವಗಳನ್ನು ಸೆರೆಹಿಡಿದ ಅದ್ಭುತ ಗಾಯನಕ್ಕಾಗಿ ಅವರು ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ರಿಕಿ ಕೇಜ್ ಮತ್ತು ಅವರ ತಂಡವನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾದ ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷೆ ಕ್ರಿಸ್ಟೀನ್ ಕಾರ್ಲಾ ಕಂಗಲೂ ಅವರ ವೀಡಿಯೊ ಸಂದೇಶದಲ್ಲಿನ ಆತ್ಮೀಯ ಮತ್ತು ಪ್ರೀತಿಯ ಮಾತುಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನಮಂತ್ರಿ ಅವರು ಭಾರತದ ಪ್ರಗತಿಯ ಬಗ್ಗೆಯೂ ಮಾತನಾಡುತ್ತಿದ್ದಾರೆ ಮತ್ತು ಅವರ ಮಾತುಗಳು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರ ಮೇಲೆ ಪ್ರಭಾವ ಬೀರಿದವು ಎಂದು ಹೇಳಿದರು. ಭಾರತದಲ್ಲಿ ಈಗ ಹಬ್ಬಗಳು ಮತ್ತು ಜಾತ್ರೆಗಳ ಸಮಯ ಎಂದು ಹೇಳಿದ ಶ್ರೀ ನರೇಂದ್ರ ಮೋದಿ, ಕೆಲವೇ ದಿನಗಳಲ್ಲಿ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಆರಂಭವಾಗಲಿದ್ದು, ಮಕರ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಮಾಘ ಬಿಹು ಹಬ್ಬಗಳು ಸಹ ಬರಲಿವೆ ಎಂದು ಹೇಳಿದರು. ಎಲ್ಲೆಡೆ ಸಂತೋಷದ ವಾತಾವರಣವಿರಲಿದೆ ಎಂದು ಅವರು ಹೇಳಿದರು. 1915ರ ಈ ದಿನದಂದು ಮಹಾತ್ಮ ಗಾಂಧೀಜಿ ಅವರು ದೀರ್ಘ ಕಾಲ ವಿದೇಶದಲ್ಲಿ ಕಳೆದ ನಂತರ ಭಾರತಕ್ಕೆ ಮರಳಿದರು ಎಂದು ಶ್ರೀ ನರೇಂದ್ರ ಮೋದಿ ನೆನಪಿಸಿಕೊಂಡರು, ಇಂತಹ ಅದ್ಭುತ ಸಮಯದಲ್ಲಿ ಭಾರತದಲ್ಲಿ ಅನಿವಾಸಿ ಭಾರತೀಯರ ಉಪಸ್ಥಿತಿಯು ಹಬ್ಬದ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಹೇಳಿದರು. ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಯ ಈ ಆವೃತ್ತಿಯು ಮತ್ತೊಂದು ಕಾರಣಕ್ಕಾಗಿ ವಿಶೇಷವಾಗಿದೆ ಎಂದು ಹೇಳಿದ ಅವರು, ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಕೆಲವು ದಿನಗಳ ನಂತರ ಈ ಕಾರ್ಯಕ್ರಮವನ್ನು ನಡೆಸಲಾಗಿದೆ, ಅವರ ದೂರದೃಷ್ಟಿಯು ಪಿಬಿಡಿಗೆ ಪ್ರಮುಖ ಕಾರಣವಾಗಿತ್ತು ಎಂದರು. “ಪ್ರವಾಸಿ ಭಾರತೀಯ ದಿನ ಭಾರತ ಮತ್ತು ಅದರ ವಲಸಿಗರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಸಂಸ್ಥೆಯಾಗಿದೆ” ಎಂದು ಅವರು ಹೇಳಿದರು. ನಾವು ಭಾರತ, ಭಾರತೀಯತೆ, ನಮ್ಮ ಸಂಸ್ಕೃತಿ ಮತ್ತು ಪ್ರಗತಿಯನ್ನು ನಮ್ಮ ಬೇರುಗಳೊಂದಿಗೆ ಸಂಪರ್ಕಿಸುವುದರ ಜೊತೆಗೆ ಆಚರಿಸುತ್ತೇವೆ ಎಂದು ಶ್ರೀ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು.

“ನಾವು ಒಗ್ಗೂಡಿರುವ ಒಡಿಶಾದ ಮಹಾನ್ ಭೂಮಿ ಭಾರತದ ಶ್ರೀಮಂತ ಪರಂಪರೆಯ ಪ್ರತಿಬಿಂಬವಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಉದ್ಗರಿಸಿದರು. ಒಡಿಶಾದಲ್ಲಿ ನಮ್ಮ ಪರಂಪರೆಯನ್ನು ನಾವು ಪ್ರತಿ ಹಂತದಲ್ಲೂ ವೀಕ್ಷಿಸಬಹುದು ಎಂದು ಹೇಳಿದರು. ಉದಯಗಿರಿ ಮತ್ತು ಖಂಡಗಿರಿಯ ಐತಿಹಾಸಿಕ ಗುಹೆಗಳು ಅಥವಾ ಕೋನಾರ್ಕ್‌ನ ಭವ್ಯವಾದ ಸೂರ್ಯ ದೇವಾಲಯ ಅಥವಾ ತಾಮ್ರಲಿಪ್ತಿ, ಮಾಣಿಕ್‌ಪಟ್ಣ ಮತ್ತು ಪಾಲೂರಿನ ಪ್ರಾಚೀನ ಬಂದರುಗಳಿಗೆ ಭೇಟಿ ನೀಡಿದಾಗ ಪ್ರತಿಯೊಬ್ಬರೂ ಹೆಮ್ಮೆಯಿಂದ ಕೂಡಿರುತ್ತಾರೆ ಎಂದು ಪ್ರಧಾನಿ ಹೇಳಿದರು.

ನೂರಾರು ವರ್ಷಗಳ ಹಿಂದೆ ಒಡಿಶಾದ ವ್ಯಾಪಾರಿಗಳು ಮತ್ತು ವರ್ತಕರು ಬಾಲಿ, ಸುಮಾತ್ರಾ ಮತ್ತು ಜಾವಾದಂತಹ ಸ್ಥಳಗಳಿಗೆ ದೀರ್ಘಕಾಲ ಸಮುದ್ರಯಾನ ಮಾಡುತ್ತಿದ್ದರು ಎಂದು ಹೇಳಿದ ಪ್ರಧಾನಿ, ಅದರ ನೆನಪಿಗಾಗಿ ಇಂದಿಗೂ ಒಡಿಶಾದಲ್ಲಿ ಬಾಲಿ ಯಾತ್ರೆಯನ್ನು ಆಚರಿಸಲಾಗುತ್ತದೆ ಎಂದರು. ಒಡಿಶಾದ ಮಹತ್ವದ ಐತಿಹಾಸಿಕ ತಾಣವಾದ ಧೌಲಿ ಶಾಂತಿಯ ಸಂಕೇತವಾಗಿದೆ ಎಂದು ಅವರು ಹೇಳಿದರು. ಜಗತ್ತು ಕತ್ತಿಯ ಶಕ್ತಿಯ ಮೂಲಕ ಸಾಮ್ರಾಜ್ಯಗಳನ್ನು ವಿಸ್ತರಿಸುತ್ತಿದ್ದಾಗ ಸಾಮ್ರಾಟ್ ಅಶೋಕ ಇಲ್ಲಿ ಶಾಂತಿಯ ಮಾರ್ಗವನ್ನು ಆರಿಸಿಕೊಂಡಿದ್ದನೆಂದು ಅವರು ಉಲ್ಲೇಖಿಸಿದರು. ಈ ಪರಂಪರೆಯು ಭವಿಷ್ಯವು ಬುದ್ಧನಲ್ಲಿದೆ, ಯುದ್ಧದಲ್ಲಿ ಅಲ್ಲ ಎಂದು ಭಾರತವು ಜಗತ್ತಿಗೆ ಹೇಳಲು ಸ್ಫೂರ್ತಿ ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಕರೆ ನೀಡಿದರು. ಆದ್ದರಿಂದ, ಒಡಿಶಾ ಭೂಮಿಗೆ ಎಲ್ಲರನ್ನೂ ಸ್ವಾಗತಿಸುವುದು ತಮಗೆ ತುಂಬಾ ವಿಶೇಷವಾಗಿದೆ ಎಂದು ಅವರು ಹೇಳಿದರು.

ಅನಿವಾಸಿ ಭಾರತೀಯರನ್ನು ಸದಾ ಭಾರತದ ರಾಯಭಾರಿಗಳೆಂದು ಪರಿಗಣಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ವಿಶ್ವದಾದ್ಯಂತ ಇರುವ ಸಹ ಭಾರತೀಯರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಮಾತನಾಡುವುದರಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಅವರು, ಅವರಿಂದ ಪಡೆದ ಪ್ರೀತಿ ಮತ್ತು ಆಶೀರ್ವಾದಗಳು ಅವಿಸ್ಮರಣೀಯ ಮತ್ತು ಅದು ಸದಾ ತಮ್ಮೊಂದಿಗೆ ಇರುತ್ತವೆ ಎಂದು ಹೇಳಿದರು.

ಜಾಗತಿಕ ವೇದಿಕೆಗಳಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಡೆಯಲು ಅವಕಾಶ ನೀಡಿದ ಭಾರತೀಯ ವಲಸಿಗರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಶ್ರೀ ನರೇಂದ್ರ ಮೋದಿ, ಕಳೆದ ಒಂದು ದಶಕದಲ್ಲಿ ಹಲವು ಜಾಗತಿಕ ನಾಯಕರನ್ನು ಭೇಟಿ ಮಾಡಿದ್ದೇನೆ, ಅವರೆಲ್ಲರೂ ಅನಿವಾಸಿ ಭಾರತೀಯರು ತಮ್ಮ ಸಾಮಾಜಿಕ ಮೌಲ್ಯಗಳು ಮತ್ತು ತಮ್ಮ ಸಮಾಜಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ಹೊಗಳಿದ್ದಾರೆ ಎಂದು  ಅವರು ಒತ್ತಿ ಹೇಳಿದರು.

“ಭಾರತಕ್ಕೆ ಪ್ರಜಾಪ್ರಭುತ್ವ ತಾಯಿ ಮಾತ್ರವಲ್ಲ, ಪ್ರಜಾಪ್ರಭುತ್ವವು ಭಾರತೀಯ ಜೀವನದ ಅವಿಭಾಜ್ಯ ಅಂಗವಾಗಿದೆ” ಎಂದು ಪ್ರಧಾನಿ ನುಡಿದರು. ಭಾರತೀಯರು ಸ್ವಾಭಾವಿಕವಾಗಿ ವೈವಿಧ್ಯತೆಯನ್ನು ಪೋಷಿಸುತ್ತಾರೆ ಮತ್ತು ಸ್ಥಳೀಯ ನಿಯಮಗಳು ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತಾ ಅವರು ಸೇರುವ ಸಮಾಜಗಳಲ್ಲಿ ಸುಲಭವಾಗಿ ಹೊಂದಿಕೊಳ್ಳಲಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಭಾರತೀಯರು ತಮ್ಮ ಆತಿಥೇಯ ರಾಷ್ಟ್ರಗಳಿಗೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾರೆ, ಅವರ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಾರೆ ಮತ್ತು ಭಾರತವನ್ನು ಸದಾ ತಮ್ಮ ಹೃದಯಕ್ಕೆ ಹತ್ತಿರವಾಗಿರಿಸಿಕೊಳ್ಳುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತದ ಪ್ರತಿಯೊಂದು ಸಂತೋಷ ಮತ್ತು ಸಾಧನೆಯನ್ನು ಅವರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ ಎಂದು ಅವರು ಹೇಳಿದರು.

21 ನೇ ಶತಮಾನದ ಭಾರತದಲ್ಲಿನ ಅಭಿವೃದ್ಧಿಯ ಅದ್ಭುತ ವೇಗ ಮತ್ತು ಪ್ರಮಾಣವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ, ಕೇವಲ 10 ವರ್ಷಗಳಲ್ಲಿ ಭಾರತ 250 ಮಿಲಿಯನ್ ಜನರನ್ನು ಬಡತನ ರೇಖೆಯಿಂದ  ಹೊರತಂದಿದೆ ಮತ್ತು ವಿಶ್ವದ 10 ನೇ ಅತಿದೊಡ್ಡ ಆರ್ಥಿಕತೆಯಿಂದ 5 ನೇ ಸ್ಥಾನಕ್ಕೆ ಏರಿದೆ ಎಂದು ಹೇಳಿದರು. ಭಾರತ ಶೀಘ್ರದಲ್ಲೇ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚಂದ್ರಯಾನ ಮಿಷನ್ ಶಿವ-ಶಕ್ತಿ ತಾಣವನ್ನು ತಲುಪಿದ್ದು ಮತ್ತು ಡಿಜಿಟಲ್ ಇಂಡಿಯಾದ ಶಕ್ತಿಯನ್ನು ಜಾಗತಿಕವಾಗಿ ಗುರುತಿಸಿರುವುದು ಮತ್ತಿತರ ಭಾರತದ ಸಾಧನೆಗಳನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಭಾರತದ ಪ್ರತಿಯೊಂದು ವಲಯವು ನವೀಕರಿಸಬಹುದಾದ ಇಂಧನ, ವಾಯುಯಾನ, ಎಲೆಕ್ಟ್ರಿಕ್ ಮೊಬಿಲಿಟಿ, ಮೆಟ್ರೋ ಜಾಲಗಳು ಮತ್ತು ಬುಲೆಟ್ ರೈಲು ಯೋಜನೆಗಳಲ್ಲಿ ದಾಖಲೆಗಳನ್ನು ಮುರಿಯುತ್ತಾ ಹೊಸ ಎತ್ತರಕ್ಕೆ ಮುನ್ನಡೆಯುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಭಾರತವು ಈಗ “ಮೇಡ್ ಇನ್ ಇಂಡಿಯಾ” ಯುದ್ಧ ವಿಮಾನಗಳು ಮತ್ತು ಸಾರಿಗೆ ವಿಮಾನಗಳನ್ನು ತಯಾರಿಸುತ್ತಿದೆ ಎಂದು ಅವರು ಹೇಳಿದರು. “ಮೇಡ್ ಇನ್ ಇಂಡಿಯಾ” ವಿಮಾನಗಳಲ್ಲಿ ಜನರು ಪ್ರವಾಸಿ ಭಾರತೀಯ ದಿನಕ್ಕೆ ಭಾರತಕ್ಕೆ ಪ್ರಯಾಣಿಸುವ ಭವಿಷ್ಯ ಹೇಗಿರುತ್ತದೆ ಊಹಿಸಿಕೊಳ್ಳಿ ಎಂದು ಅವರು ತಿಳಿಸಿದರು.

ಭಾರತದ ಸಾಧನೆಗಳು ಮತ್ತು ಸಂಭವನೀಯತೆಯಿಂದಾಗಿ ಜಾಗತಿಕವಾಗಿ ಬೆಳೆಯುತ್ತಿರುವ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು “ಇಂದಿನ ಭಾರತವು ತನ್ನದೇ ಆದ ನಿಲುವನ್ನು ದೃಢವಾಗಿ ಪ್ರತಿಪಾದಿಸುವುದಲ್ಲದೆ, ಜಾಗತಿಕ ದಕ್ಷಿಣದ ಧ್ವನಿಯನ್ನು ಬಲವರ್ಧನೆಗೊಳಿಸುತ್ತದೆ” ಎಂದು ಹೇಳಿದರು. “ಮಾನವೀಯತೆ ಮೊದಲು” ಎಂಬ ಭಾರತದ ಬದ್ಧತೆಯನ್ನು ಸಾರುತ್ತಾ ಆಫ್ರಿಕನ್ ಒಕ್ಕೂಟವನ್ನು ಜಿ-20 ರ ಕಾಯಂ ಸದಸ್ಯರನ್ನಾಗಿ ಮಾಡುವ ಭಾರತದ ಪ್ರಸ್ತಾಪಕ್ಕೆ ಸರ್ವಾನುಮತದ ಬೆಂಬಲ ವ್ಯಕ್ತವಾಗಿದ್ದನ್ನು ಅವರು ಎತ್ತಿ ತೋರಿಸಿದರು.

ಪ್ರಮುಖ ಕಂಪನಿಗಳ ಮೂಲಕ ಜಾಗತಿಕ ಬೆಳವಣಿಗೆಗೆ ವೃತ್ತಿಪರರು ಕೊಡುಗೆ ನೀಡುತ್ತಿರುವುದರಿಂದ ಭಾರತೀಯ ಪ್ರತಿಭೆಗಳಿಗೆ ಜಾಗತಿಕ ಮನ್ನಣೆ ದೊರಕುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರವಾಸಿ ಭಾರತೀಯ ಸಮ್ಮಾನ್ ಪಡೆದವರಿಗೆ ಶುಭ ಹಾರೈಸಿದ ಅವರು, ಜಾಗತಿಕ ಕೌಶಲ್ಯ ಬೇಡಿಕೆಗಳನ್ನು ಪೂರೈಸುವ ಮೂಲಕ ಭಾರತವು ದಶಕಗಳ ಕಾಲ ವಿಶ್ವದ ಅತ್ಯಂತ ಕಿರಿಯ ಮತ್ತು ಅತ್ಯಂತ ಕೌಶಲ್ಯಪೂರ್ಣ ಜನಸಂಖ್ಯೆಯಾಗಿ ಉಳಿಯುತ್ತದೆ ಎಂದು ಹೇಳಿದರು. ಅನೇಕ ದೇಶಗಳು ಈಗ ಕೌಶಲ್ಯಪೂರ್ಣ ಭಾರತೀಯ ಯುವಕರನ್ನು ಸ್ವಾಗತಿಸುತ್ತಿವೆ ಮತ್ತು ವಿದೇಶಗಳಿಗೆ ಹೋಗುವ ಭಾರತೀಯರು ನಿರಂತರ ಕೌಶಲ್ಯ, ಮರು ಕೌಶಲ್ಯ ಮತ್ತು ಉನ್ನತೀಕರಣ ಪ್ರಯತ್ನಗಳ ಮೂಲಕ ಹೆಚ್ಚು ಕೌಶಲ್ಯ ಪೂರ್ಣರಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಅನಿವಾಸಿ ಭಾರತೀಯರಿಗೆ ಅನುಕೂಲ ಮತ್ತು ಸೌಕರ್ಯದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಅವರ ಸುರಕ್ಷತೆ ಮತ್ತು ಕಲ್ಯಾಣವು ಪ್ರಮುಖ ಆದ್ಯತೆಗಳಾಗಿವೆ ಎಂದು ಹೇಳಿದರು. “ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ವಲಸಿಗರಿಗೆ ಸಹಾಯ ಮಾಡುವುದು ಭಾರತದ ಜವಾಬ್ದಾರಿಯಾಗಿದೆ. ಇದು ಭಾರತದ ವಿದೇಶಾಂಗ ನೀತಿಯ ಪ್ರಮುಖ ತತ್ವವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು. ಕಳೆದ ದಶಕದಲ್ಲಿ ಜಗತ್ತಿನಾದ್ಯಂತ  ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಚೇರಿಗಳು ಸೂಕ್ಷ್ಮ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಸುತ್ತಿವೆ ಎಂದು ಅವರು ಹೇಳಿದರು.

ರಾಯಭಾರ ಕಚೇರಿಯ ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ದೂರ ಪ್ರಯಾಣಿಸಿ ದಿನಗಟ್ಟಲೆ ಕಾಯಬೇಕಾದ ಜನರ ಹಿಂದಿನ ಅನುಭವಗಳನ್ನು ನೆನಪಿಸಿಕೊಂಡ ಶ್ರೀ ನರೇಂದ್ರ ಮೋದಿ, ಕಳೆದ ಎರಡು ವರ್ಷಗಳಲ್ಲಿ ಹದಿನಾಲ್ಕು ಹೊಸ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳನ್ನು ತೆರೆಯುವುದರೊಂದಿಗೆ ಈ ಸಮಸ್ಯೆಗಳನ್ನು ಈಗ ಪರಿಹರಿಸಲಾಗುತ್ತಿದೆ ಎಂದು ಹೇಳಿದರು. ಮಾರಿಷಸ್‌ನ 7ನೇ ತಲೆಮಾರಿನ ಭಾರತೀಯ ಮೂಲದ ವ್ಯಕ್ತಿಗಳು (PIOs) ಮತ್ತು ಸುರಿನಾಮ್, ಮಾರ್ಟಿನಿಕ್ ಮತ್ತು ಗ್ವಾಡೆಲೋಪ್‌ನ 6 ನೇ ತಲೆಮಾರಿನವರನ್ನು ಸೇರಿಸಲು ಒಸಿಐ (OCI) ಕಾರ್ಡ್‌ಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜಗತ್ತಿನಾದ್ಯಂತ ಇರುವ ಅನಿವಾಸಿ ಭಾರತೀಯರ ಮಹತ್ವದ ಇತಿಹಾಸವನ್ನು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸುತ್ತಾ, ವಿವಿಧ ದೇಶಗಳಲ್ಲಿ ಅವರ ಸಾಧನೆಗಳನ್ನು ಭಾರತದ ಪರಂಪರೆಯ ಪ್ರಮುಖ ಭಾಗವೆಂದು ಹೇಳಿದರು. ಈ ಆಸಕ್ತಿದಾಯಕ ಮತ್ತು ಸ್ಪೂರ್ತಿದಾಯಕ ಕಥೆಗಳನ್ನು ನಮ್ಮ ಹಂಚಿಕೆಯ ಪರಂಪರೆ ಮತ್ತು ಸಂಪ್ರದಾಯದ ಭಾಗವಾಗಿ ಹಂಚಿಕೊಳ್ಳಬೇಕು, ಪ್ರದರ್ಶಿಸಬೇಕು ಮತ್ತು ಸಂರಕ್ಷಿಸಬೇಕು ಎಂದು ಅವರು ಕರೆ ನೀಡಿದರು. ತಮ್ಮ ಇತ್ತೀಚಿನ “ಮನ್ ಕಿ ಬಾತ್’ ಚರ್ಚೆಯಲ್ಲಿ ಶತಮಾನಗಳ ಹಿಂದೆ ಗುಜರಾತ್‌ನ ಹಲವು ಕುಟುಂಬಗಳು ಒಮಾನ್‌ನಲ್ಲಿ ನೆಲೆಸಿದ್ದನ್ನು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ಅವರ 250 ವರ್ಷಗಳ ಪ್ರಯಾಣವು ಸ್ಪೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದರು ಮತ್ತು ಇದಕ್ಕೆ ಸಂಬಂಧಿಸಿದ ಸಾವಿರಾರು ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಹೆಚ್ಚುವರಿಯಾಗಿ  ‘ಮೌಖಿಕ ಇತಿಹಾಸ ಯೋಜನೆ’ಯನ್ನು ನಡೆಸಲಾಯಿತು, ಅಲ್ಲಿ ಸಮುದಾಯದ ಹಿರಿಯ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದು ಅವರು ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ಈ ಕುಟುಂಬಗಳಲ್ಲಿ ಹಲವು ಉಪಸ್ಥಿತರಿರುವುದು ಸಂತೋಷಕರ ಸಂಗತಿ ಎಂದರು.

ವಿವಿಧ ದೇಶಗಳಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಇದೇ ರೀತಿಯ ಪ್ರಯತ್ನಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು “ಗಿರ್ಮಿಟಿಯಾ” ಸಹೋದರ ಸಹೋದರಿಯರ ಉದಾಹರಣೆ ಉಲ್ಲೇಖಿಸಿದರು. ಭಾರತದಲ್ಲಿನ ಹಳ್ಳಿಗಳು ಮತ್ತು ನಗರಗಳು ಯಾವ ಸ್ಥಳಗಳಿಂದ ಹುಟ್ಟಿಕೊಂಡವು ಮತ್ತು ಅವರು ನೆಲೆಸಿದ ಮೂಲ ಸ್ಥಳಗಳನ್ನು ಗುರುತಿಸಲು ದತ್ತಾಂಶ ಸೃಷ್ಟಿಸಬೇಕೆಂದು ಅವರು ಕರೆ ನೀಡಿದರು. ಅವರ ಜೀವನವನ್ನು ದಾಖಲಿಸುವುದು, ಅವರು ಸವಾಲುಗಳನ್ನು ಅವಕಾಶಗಳಾಗಿ ಹೇಗೆ ಪರಿವರ್ತಿಸಿದರು ಎಂಬುದನ್ನು ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳ ಮೂಲಕ ಪ್ರದರ್ಶಿಸಬಹುದಾಗಿದೆ ಎಂದು ಅವರು ಹೇಳಿದರು. ಗಿರ್ಮಿಟಿಯಾ ಪರಂಪರೆಯ ಅಧ್ಯಯನ ಮತ್ತು ಸಂಶೋಧನೆಯ ಮಹತ್ವ ಉಲ್ಲೇಖಿಸಿದ ಪ್ರಧಾನಮಂತ್ರಿ ಸಿ, ಈ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯದ ಪೀಠವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಅಗ್ಗಾಗ್ಗೆ ವಿಶ್ವ ಗಿರ್ಮಿಟಿಯಾ  ಸಮ್ಮೇಳನಗಳನ್ನು ಆಯೋಜಿಸುವಂತೆ ಕರೆ ನೀಡಿದರು ಮತ್ತು ಈ ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಈ ಉಪಕ್ರಮಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ತಮ್ಮ ತಂಡಕ್ಕೆ ನಿರ್ದೇಶನ ನೀಡಿದರು.

“ಆಧುನಿಕ ಭಾರತವು ಅಭಿವೃದ್ಧಿ ಮತ್ತು ಪರಂಪರೆಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಜಿ-20 ಸಭೆಗಳ ಸಮಯದಲ್ಲಿ, ಭಾರತದ ವೈವಿಧ್ಯತೆಯ ನೇರ ಅನುಭವವನ್ನು ಜಗತ್ತಿಗೆ ಒದಗಿಸಲು ದೇಶಾದ್ಯಂತ ಗೋಷ್ಠಿಗಳನ್ನು ನಡೆಸಲಾಯಿತು ಎಂದು ಅವರು ಹೇಳಿದರು. ಕಾಶಿ-ತಮಿಳು ಸಂಗಮ, ಕಾಶಿ ತೆಲುಗು ಸಂಗಮ ಮತ್ತು ಸೌರಾಷ್ಟ್ರ ತಮಿಳು ಸಂಗಮದಂತಹ ಕಾರ್ಯಕ್ರಮಗಳನ್ನು ಅವರು ಹೆಮ್ಮೆಯಿಂದ ಉಲ್ಲೇಖಿಸಿದರು. ಮುಂಬರುವ ಸಂತ ತಿರುವಳ್ಳುವರ್ ದಿನವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಅವರ ಬೋಧನೆಗಳನ್ನು ಪ್ರಚುರಪಡಿಸಲು ತಿರುವಳ್ಳುವರ್ ಸಂಸ್ಕೃತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು. ಸಿಂಗಾಪುರದಲ್ಲಿ ಮೊದಲ ಕೇಂದ್ರ ಆರಂಭವಾಗಿದ್ದು, ಅಮೆರಿಕದ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಿರುವಳ್ಳುವರ್ ಪೀಠವನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ತಮಿಳು ಭಾಷೆ ಮತ್ತು ಪರಂಪರೆ ಮತ್ತು ಭಾರತದ ಪರಂಪರೆಯನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯುವ ಗುರಿಯನ್ನು ಹೊಂದಿವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಭಾರತದಲ್ಲಿನ ಪಾರಂಪರಿಕ ತಾಣಗಳನ್ನು ಸಂಪರ್ಕಿಸಲು ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ರಾಮಾಯಣ ಎಕ್ಸ್‌ಪ್ರೆಸ್‌ನಂತಹ ವಿಶೇಷ ರೈಲುಗಳು ಭಗವಾನ್ ರಾಮ ಮತ್ತು ಸೀತಾ ಮಾತೆಗೆ ಸಂಬಂಧಿಸಿದ ಸ್ಥಳಗಳಿಗೆ ಪ್ರವೇಶವನ್ನು ಒದಗಿಸಿವೆ ಎಂದು ಹೇಳಿದರು. ಭಾರತ್ ಗೌರವ್ ರೈಲುಗಳು ದೇಶಾದ್ಯಂತದ ಪ್ರಮುಖ ಪಾರಂಪರಿಕ ತಾಣಗಳನ್ನು ಸಂಪರ್ಕಿಸಿದರೆ, ಸೆಮಿ-ಹೈಸ್ಪೀಡ್ ವಂದೇ ಭಾರತ್ ರೈಲುಗಳು ಭಾರತದ ಪ್ರಮುಖ ಪಾರಂಪರಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ ಎಂದು ಅವರು ಹೇಳಿದರು. ಪ್ರವಾಸೋದ್ಯಮ ಮತ್ತು ನಂಬಿಕೆಗೆ ಸಂಬಂಧಿಸಿದ ಹದಿನೇಳು ತಾಣಗಳ ಪ್ರವಾಸಕ್ಕೆ ಸುಮಾರು 150 ಜನರನ್ನು ಕರೆದೊಯ್ಯುವ ವಿಶೇಷ ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್ ರೈಲಿಗೆ ಇಂದು ಚಾಲನೆ ನೀಡಿದ್ದನ್ನು ಪ್ರಧಾನಿ ಪ್ರಸ್ತಾಪಿಸಿದರು. ಒಡಿಶಾದ ಹಲವು ಮಹತ್ವದ ಸ್ಥಳಗಳಿಗೆ ಎಲ್ಲರೂ ಭೇಟಿ ನೀಡಬೇಕೆಂದು ಅವರು ಉತ್ತೇಜಿಸಿದರು ಮತ್ತು ಪ್ರಯಾಗ್‌ರಾಜ್‌ನಲ್ಲಿ ಮುಂಬರುವ ಮಹಾಕುಂಭದ ಬಗ್ಗೆ ಗಮನ ಸೆಳೆದು, ಆ ಅಪರೂಪದ ಅವಕಾಶವನ್ನು ಬಳಸಿಕೊಳ್ಳುವಂತೆ ಜನತೆಗೆ ಕರೆ ನೀಡಿದರು.

1947ರ ಭಾರತದ ಸ್ವಾತಂತ್ರ್ಯಸಂಗ್ರಾಮದಲ್ಲಿ ಅನಿವಾಸಿ ಭಾರತೀಯರ ಮಹತ್ವದ ಪಾತ್ರವನ್ನು ಪ್ರಸ್ತಾಪಿಸಿದ ಪ್ರಧಾನಿ  ಮತ್ತು ಅನಿವಾಸಿ ಭಾರತೀಯರು ಭಾರತದ ಬೆಳವಣಿಗೆಗೆ ಕೊಡುಗೆ ನೀಡುತ್ತಲೇ ಇದ್ದಾರೆ, ಭಾರತವು ವಿಶ್ವದ ಅತಿ ಹೆಚ್ಚು ಹಣ ಪಡೆಯುವ ದೇಶವಾಗಿದೆ ಎಂದು ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಅನಿವಾಸಿ ಭಾರತೀಯರ ಹಣಕಾಸು ಸೇವೆಗಳು ಮತ್ತು ಹೂಡಿಕೆ ಅಗತ್ಯಗಳನ್ನು ಪೂರೈಸುವಲ್ಲಿ ಗಿಫ್ಟ್ ಸಿಟಿ ಪೂರಕ ವ್ಯವಸ್ಥೆಯ ಮಹತ್ವವನ್ನು ಪ್ರಧಾನಿ ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಭಾರತದ ಅಭಿವೃದ್ಧಿಯ ಪಯಣವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಅದರ ಪ್ರಯೋಜನಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.  “ಅನಿವಾಸಿ ಭಾರತೀಯರ ಪ್ರತಿಯೊಂದು ಪ್ರಯತ್ನವೂ ಭಾರತದ ಪ್ರಗತಿಗೆ ಕೊಡುಗೆ ನೀಡುತ್ತದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಪಾರಂಪರಿಕ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಭಾರತವು ತನ್ನ ಪ್ರಮುಖ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ, ಭಾರತದ ಪರಂಪರೆಯನ್ನು ಪ್ರದರ್ಶಿಸುವ 2ನೇ ದರ್ಜೆ ಮತ್ತು 3ನೇ ದರ್ಜೆ  ನಗರಗಳು ಮತ್ತು ಹಳ್ಳಿಗಳನ್ನು ಸಹ ಒಳಗೊಂಡಿದೆ ಎಂದು ಹೇಳಿದ ಅವರು, ಈ ಪರಂಪರೆಯೊಂದಿಗೆ ಜಗತ್ತನ್ನು ಸಂಪರ್ಕಿಸಲು ಅನಿವಾಸಿ ಭಾರತೀಯರಿಗೆ ಮನವಿ ಮಾಡಿದರು. ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ. ಭಾರತಕ್ಕೆ ಮುಂದಿನ ಭೇಟಿಯಲ್ಲಿ ಭಾರತೀಯ ಮೂಲದವರಲ್ಲದ ಕನಿಷ್ಠ ಐದು ಸ್ನೇಹಿತರನ್ನು ಕರೆತರುವಂತೆ, ಅವರು ದೇಶವನ್ನು ಸುತ್ತುವಂತೆ ಮತ್ತು ಶ್ಲಾಘಿಸುವಂತೆ ಮಾಡಬೇಕೆಂದು ಅನಿವಾಸಿ ಭಾರತೀಯರನ್ನು ಪ್ರೋತ್ಸಾಹಿಸಿದರು.  

ಭಾರತವನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು “ಭಾರತ್ ಕೋ ಜನಿಯೇ” ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಶ್ರೀ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯ ಯುವ ಸದಸ್ಯರಿಗೆ ಮನವಿ ಮಾಡಿದರು. “ಭಾರತದಲ್ಲಿ ಅಧ್ಯಯನ” ಕಾರ್ಯಕ್ರಮ ಮತ್ತು ಐಸಿಸಿಆರ್ ವಿದ್ಯಾರ್ಥಿವೇತನ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತರ ಅವರು ಕರೆ ನೀಡಿದರು. ಪ್ರಧಾನಮಂತ್ರಿ ಅವರು, ಅನಿವಾಸಿ ಭಾರತೀಯರು ತಾವು ವಾಸಿಸುವ ದೇಶಗಳಲ್ಲಿ ಭಾರತದ ನಿಜವಾದ ಇತಿಹಾಸವನ್ನು ಹರಡುವ ಮಹತ್ವವನ್ನು ಒತ್ತಿ ಹೇಳಿದರು. ಆ ದೇಶಗಳಲ್ಲಿನ ಸದ್ಯದ ಪೀಳಿಗೆಗೆ ಭಾರತದ ಸಮೃದ್ಧಿ, ದೀರ್ಘಾವಧಿಯ ಅಧೀನತೆ ಮತ್ತು ಹೋರಾಟಗಳ ಬಗ್ಗೆ ತಿಳಿದಿಲ್ಲದಿರಬಹುದು ಎಂದು ಅವರು ಹೇಳಿದರು. ಭಾರತದ ನಿಜವಾದ ಇತಿಹಾಸವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವಂತೆ ಅವರು ವಲಸಿಗರನ್ನು ಕರೆ ನೀಡಿದರು.

“ಭಾರತ ಈಗ ವಿಶ್ವ ಬಂಧು ಎಂದು ಗುರುತಿಸಲ್ಪಟ್ಟಿದೆ” ಎಂದು ಪ್ರಧಾನಮಂತ್ರಿ ನುಡಿದರು ಮತ್ತು ಅನಿವಾಸಿ ಭಾರತೀಯರು ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವ ಮೂಲಕ ಈ ಜಾಗತಿಕ ಸಂಪರ್ಕವನ್ನು ಮತ್ತಷ್ಟು ಬಲವರ್ಧನೆಗೊಳಿಸಬೇಕು ಎಂದು ಅವರು ಕರೆ ನೀಡಿದರು. ಅವರು ಆಯಾ ದೇಶಗಳಲ್ಲಿ ವಿಶೇಷವಾಗಿ ಸ್ಥಳೀಯ ನಿವಾಸಿಗಳಿಗೆ ಪ್ರಶಸ್ತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆ ನೀಡಿದರು. ಈ ಪ್ರಶಸ್ತಿಗಳನ್ನು ಸಾಹಿತ್ಯ, ಕಲೆ ಮತ್ತು ಕರಕುಶಲ ವಸ್ತುಗಳು, ಚಲನಚಿತ್ರ ಮತ್ತು ರಂಗಭೂಮಿಯಂತಹ ವಿವಿಧ ಕ್ಷೇತ್ರಗಳಲ್ಲಿನ ಪ್ರಮುಖ ವ್ಯಕ್ತಿಗಳಿಗೆ ನೀಡಬಹುದು ಎಂದು ಪ್ರಧಾನಿ ಹೇಳಿದರು. ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳ ಬೆಂಬಲದೊಂದಿಗೆ, ಸಾಧಕರಿಗೆ ಪ್ರಮಾಣಪತ್ರಗಳನ್ನು ನೀಡಬೇಕೆಂದು ಅವರು ಅನಿವಾಸಿ ಭಾರತೀಯರನ್ನು ಪ್ರೋತ್ಸಾಹಿಸಿದರು. ಇದರಿಂದ ಸ್ಥಳೀಯ ಜನರೊಂದಿಗೆ ವೈಯಕ್ತಿಕ ಸಂಪರ್ಕ  ಮತ್ತು ಭಾವನಾತ್ಮಕ ಬಾಂಧವ್ಯವನ್ನು ವೃದ್ಧಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಸ್ಥಳೀಯ ಭಾರತೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಅನಿವಾಸಿ ಭಾರತೀಯರ ಮಹತ್ವದ ಪಾತ್ರವನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ,  “ಭಾರತದಲ್ಲಿಯೇ ತಯಾರಿಸಿದ”(ಮೇಡ್ ಇನ್ ಇಂಡಿಯಾ) ಆಹಾರ ಪ್ಯಾಕೆಟ್‌ಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಸ್ಥಳೀಯವಾಗಿ ಅಥವಾ ಆನ್‌ಲೈನ್‌ನಲ್ಲಿ ಖರೀದಿಸುವಂತೆ ಮತ್ತು ಈ ಉತ್ಪನ್ನಗಳನ್ನು ತಮ್ಮ ಅಡುಗೆಕೋಣೆಗಳು ಮತ್ತು ಉಡುಗೊರೆಗಳಿಗೆ ಡ್ರಾಯಿಂಗ್ ರೂಮ್‌ಗಳಲ್ಲಿ ಇಟ್ಟುಕೊಳ್ಳುವಂತೆ ಕರೆ ನೀಡಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಇದು ಗಮನಾರ್ಹ ಕೊಡುಗೆಯಾಗಲಿದೆ ಎಂದು ಅವರು ಹೇಳಿದರು.

ತಾಯಿ ಮತ್ತು ಭೂತಾಯಿಗೆ ಸಂಬಂಧಿಸಿದ ಮತ್ತೊಂದು ಮನವಿ ಮಾಡಿದ ಪ್ರಧಾನಮಂತ್ರಿ ಅವರು ಇತ್ತೀಚೆಗೆ ಗಯಾನಾಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದರು. ಅಲ್ಲಿ ಅವರು ಗಯಾನಾ ಅಧ್ಯಕ್ಷರೊಂದಿಗೆ “ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ ‘’ (ಏಕ್ ಪೆಡ್ ಮಾ ಕೆ ನಾಮ್) ಉಪಕ್ರಮಲ್ಲಿ ಭಾಗವಹಿಸಿದ್ದರು. ಭಾರತದಲ್ಲಿ ಲಕ್ಷಾಂತರ ಜನರು ಈಗಾಗಲೇ ಇದನ್ನು ಮಾಡುತ್ತಿದ್ದಾರೆ ಎಂದು ಅವರು ಪ್ರಸ್ತಾಪಿಸಿದರು. ಅನಿವಾಸಿ ಭಾರತೀಯರು ಎಲ್ಲೇ ಇದ್ದರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಮರ ಅಥವಾ ಸಸಿಯನ್ನು ನೆಡುವಂತೆ ಪ್ರೋತ್ಸಾಹಿಸಿದರು. ಅವರು ಭಾರತದಿಂದ ಹಿಂತಿರುಗುವಾದ, ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿ ಅವರು 2025 ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಂಪತ್ತು ದೊರೆಯಲಿ ಎಂದು ಹಾರೈಸಿದರು ಮತ್ತು ಮತ್ತೆ  ಸ್ವದೇಶಕ್ಕೆ ಬಂದಿರುವ ಭಾರತೀಯರನ್ನು ಮತ್ತೊಮ್ಮೆ ಸ್ವಾಗತಿಸಿದರು.

ಒಡಿಶಾದ ರಾಜ್ಯಪಾಲರಾದ ಡಾ. ಹರಿ ಬಾಬು ಕಂಭಂಪತಿ, ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಂಝಿ, ಕೇಂದ್ರ ಸಚಿವರಾದ ಶ್ರೀ ಎಸ್. ಜೈಶಂಕರ್, ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಪ್ರಲ್ಹಾದ್ ಜೋಶಿ, ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀ ಜುವಾಲ್ ಓರಂ ಮತ್ತು ಕೇಂದ್ರ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ, ಶ್ರೀ ಕೀರ್ತಿ ವರ್ಧನ್ ಸಿಂಗ್, ಶ್ರೀ ಪಾಬಿತ್ರ ಮಾರ್ಗರಿಟಾ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶವು ಭಾರತ ಸರ್ಕಾರದ ಪ್ರಮುಖ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಅದು ಭಾರತೀಯ ವಲಸಿಗರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಮತ್ತು ಪರಸ್ಪರ ಸಂವಹನ ನಡೆಸಲು ಒಂದು ಪ್ರಮುಖ ವೇದಿಕೆ ಒದಗಿಸುತ್ತದೆ. 18ನೇ ಪ್ರವಾಸಿ ಭಾರತೀಯ ದಿನದ ಸಮಾವೇಶವನ್ನು ಒಡಿಶಾ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2025 ರ ಜನವರಿ 8 ರಿಂದ 10 ರವರೆಗೆ ಭುವನೇಶ್ವರದಲ್ಲಿ ಆಯೋಜಿಸಲಾಗುತ್ತಿದೆ. ಈ ಪಿಬಿಡಿ ಸಮಾವೇಶದ ವಿಷಯ “ವಿಕಸಿತ ಭಾರತಕ್ಕೆ ಅನಿವಾಸಿ ಭಾರತೀಯರ ಕೊಡುಗೆ”ಎಂಬುದಾಗಿದೆ. 50 ಕ್ಕೂ ಅಧಿಕ ವಿವಿಧ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಾರತೀಯ ಅನಿವಾಸಿ ಸದಸ್ಯರು ಪಿಬಿಡಿ ಸಮಾವೇಶದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.

ಅಲ್ಲದೆ, ಪ್ರಧಾನಮಂತ್ರಿ ಅವರು ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ಹೊರಡುವ ಮತ್ತು ಭಾರತದ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಹಲವು ತಾಣಗಳಿಗೆ ಮೂರು ವಾರಗಳ ಪ್ರಯಾಣಿಸುವ ಭಾರತೀಯ ವಲಸಿಗರಿಗಾಗಿ ವಿಶೇಷ ಪ್ರವಾಸಿ ರೈಲು ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು. ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್ ಅನ್ನು ಪ್ರವಾಸಿ ತೀರ್ಥ ದರ್ಶನ್ ಯೋಜನೆಯಡಿಯಲ್ಲಿ ಮುನ್ನಡೆಸಲಾಗುವುದು.

 

 

*****