Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾರ್ಯಕಾರ್ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಕಾರ್ಯಕಾರ್ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಜೈ ಸ್ವಾಮಿನಾರಾಯಣ!

ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್, ಪೂಜ್ಯ ಋಷಿವರ್ಯರೆ, ಸತ್ಸಂಗಿ ಕುಟುಂಬದ ಗೌರವಾನ್ವಿತ ಸದಸ್ಯರೆ, ಈ ಭವ್ಯವಾದ ಕ್ರೀಡಾಂಗಣದಲ್ಲಿ ನೆರೆದಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಕಾರ್ಯಕಾರ್(ಕಾರ್ಯಕರ್ತರು) ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ನಾನು ಭಗವಾನ್ ಸ್ವಾಮಿನಾರಾಯಣ ಅವರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಇಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರ 103ನೇ ಜನ್ಮದಿನ ಆಚರಿಸಲಾಗುತ್ತಿದೆ, ಅವರಿಗೂ ಸಹ ನಾನು ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ, ಏಕೆಂದರೆ ಅವರು ದೈವಿಕ ಗುರು ಹರಿ ಪ್ರಗತ್ ಬ್ರಹ್ಮನ ಮೂರ್ತರೂಪವಾಗಿದ್ದರು. ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳು ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸಂಕಲ್ಪಗಳು ಮತ್ತು ನಿರ್ಣಯಗಳು ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಅವರ ಅವಿರತ ಪ್ರಯತ್ನ ಮತ್ತು ಸಮರ್ಪಣೆಯ ಮೂಲಕ ಇಂದು ಸಾಕಾರಗೊಳ್ಳುತ್ತಿವೆ. 1 ಲಕ್ಷ ಸ್ವಯಂಸೇವಕರು, ಯುವಕರು ಮತ್ತು ಮಕ್ಕಳನ್ನು ಒಳಗೊಂಡ ಈ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮವು ಬೀಜ, ಮರ ಮತ್ತು ಹಣ್ಣುಗಳ ಸಾರವನ್ನು ಸುಂದರವಾಗಿ ಪ್ರತಿನಿಧಿಸುತ್ತಿದೆ. ನಾನು ನಿಮ್ಮ ನಡುವೆ ದೈಹಿಕವಾಗಿ ಇರಲು ಸಾಧ್ಯವಾಗದಿದ್ದರೂ, ಈ ಘಟನೆಯ ಚೈತನ್ಯ ಮತ್ತು ಶಕ್ತಿಯನ್ನು ನನ್ನ ಹೃದಯದಲ್ಲಿ ಆಳವಾಗಿ ಅನುಭವಿಸುತ್ತೇನೆ. ಇಂತಹ ಭವ್ಯವಾದ ಮತ್ತು ದಿವ್ಯವಾದ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಮತ್ತು ಎಲ್ಲಾ ಪೂಜ್ಯ ಸಾಧು ಸಂತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರಿಗೆ ಅಪಾರ ಗೌರವದಿಂದ ನಮಸ್ಕರಿಸುತ್ತೇನೆ.

ಸ್ನೇಹಿತರೆ,

ಕಾರ್ಯಕಾರ್ ಸುವರ್ಣ ಮಹೋತ್ಸವವು 50 ವರ್ಷಗಳ ಸಮರ್ಪಿತ ಸೇವೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. 50 ವರ್ಷಗಳ ಹಿಂದೆ, ಸ್ವಯಂಸೇವಕರನ್ನು ನೋಂದಾಯಿಸುವ ಮತ್ತು ಸೇವಾ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವ ಉಪಕ್ರಮವು ಕಾರ್ಯರೂಪಕ್ಕೆ ಬಂದಿತು – ಇದು ಆ ಸಮಯದಲ್ಲಿ ಎಲ್ಲೂ ಕೇಳಿರದ ಸಂಗತಿಯಾಗಿತ್ತು. ಇಂದು, ಲಕ್ಷಾಂತರ ಬೋಚಸನ್ಯಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿ ನಾರಾಯಣ ಸಂಸ್ಥೆ(ಬಿಎಪಿಎಸ್)ಯ ಸ್ವಯಂಸೇವಕರು ಅಚಲವಾದ ಭಕ್ತಿ ಮತ್ತು ಬದ್ಧತೆಯಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಸಂತೋಷಕರವಾಗಿದೆ. ಯಾವುದೇ ಸಂಸ್ಥೆಗೆ ಇದು ನಿಜಕ್ಕೂ ಗಮನಾರ್ಹ ಸಾಧನೆಯಾಗಿದೆ. ಈ ಸಾಧನೆಗಾಗಿ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ, ನಿಮ್ಮ ನಿರಂತರ ಯಶಸ್ಸಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೆ,

ಕಾರ್ಯಕಾರ್ ಸುವರ್ಣ ಮಹೋತ್ಸವವು ಭಗವಾನ್ ಸ್ವಾಮಿನಾರಾಯಣರ ಕರುಣಾಮಯಿ ಬೋಧನೆಗಳ ಆಚರಣೆಯಾಗಿದೆ, ಕೋಟಿಗಟ್ಟಲೆ ಜನರ ಜೀವನ ಪರಿವರ್ತಿಸಿದ ದಶಕಗಳ ನಿಸ್ವಾರ್ಥ ಸೇವೆಗೆ ಸಂದ ಗೌರವವಾಗಿದೆ. ಬಿಎಪಿಎಸ್ ನ ಸೇವಾ ಉಪಕ್ರಮಗಳನ್ನು ಹತ್ತಿರದಿಂದ ನೋಡಿರುವುದು ಮತ್ತು ಅವರೊಂದಿಗೆ ಸಂಬಂಧ ಹೊಂದುವ ಅವಕಾಶ ಪಡೆದಿರುವುದು ನನ್ನ ದೊಡ್ಡ ಅದೃಷ್ಟ. ಭುಜ್ ಭೂಕಂಪದಿಂದ ಉಂಟಾದ ವಿನಾಶ ಸಂದರ್ಭದಲ್ಲಿ ನೀಡಿದ ಸ್ಪಂದನೆಯೇ ಇರಲಿ,  ನಾರ್ನಾರಾಯಣ ನಗರ ಗ್ರಾಮದ ಪುನರ್ ನಿರ್ಮಾಣವೇ ಇರಲಿ, ಕೇರಳ ಪ್ರವಾಹದ ಸಂದರ್ಭದಲ್ಲಿ ನೀಡಿದ ಪರಿಹಾರ ಕಾರ್ಯಾಚರಣೆಯೇ ಇರಲಿ, ಉತ್ತರಾಖಂಡದಲ್ಲಿ ಭೂಕುಸಿತದಿಂದ ಉಂಟಾದ ದುಃಖ  ಪರಿಹರಿಸಿದ ರೀತಿಯೇ ಇರಲಿ ಅಥವಾ ಇತ್ತೀಚಿನ ಜಾಗತಿಕ ಸಾಂಕ್ರಾಮಿಕ ಕೋವಿಡ್-19ರ ಸವಾಲುಗಳನ್ನು ನಿಭಾಯಿಸಿದ್ದೇ ಇರಲಿ, ಬಿಎಪಿಎಸ್ ಸ್ವಯಂಸೇವಕರು ಯಾವಾಗಲೂ ಮುಂಚೂಣಿಯಲ್ಲಿ ನಿಂತಿದ್ದಾರೆ. ಕೌಟುಂಬಿಕ ಮನೋಭಾವ ಮತ್ತು ಆಳವಾದ ಸಹಾನುಭೂತಿಯೊಂದಿಗೆ, ಅವರು ಅಗತ್ಯವಿರುವಲ್ಲೆಲ್ಲಾ ತಮ್ಮ ಬೆಂಬಲ ವಿಸ್ತರಿಸಿದ್ದಾರೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಎಪಿಎಸ್ ದೇವಾಲಯಗಳನ್ನು ಸೇವಾ ಕೇಂದ್ರಗಳಾಗಿ ಪರಿವರ್ತಿಸಿದ್ದು ಅವರ ಸೇವಾ ಬದ್ಧತೆಯ ಉಜ್ವಲ ಉದಾಹರಣೆಯಾಗಿದೆ.

ನಾನು ಮತ್ತೊಂದು ಸ್ಫೂರ್ತಿದಾಯಕ ಉದಾಹರಣೆ ಹಂಚಿಕೊಳ್ಳಲು ಬಯಸುತ್ತೇನೆ, ಅದು ಹಲವರಿಗೆ ವ್ಯಾಪಕವಾಗಿ ತಿಳಿದಿಲ್ಲ. ಉಕ್ರೇನ್‌ ಯುದ್ಧ ಉಲ್ಬಣಗೊಂಡ ಸಂದರ್ಭದಲ್ಲಿ, ಸಂಘರ್ಷ ವಲಯದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ತಕ್ಷಣದ ನಿರ್ಧಾರವನ್ನು ತೆಗೆದುಕೊಂಡಿತು. ಇದರ ಪರಿಣಾಮವಾಗಿ, ಪೋಲೆಂಡ್‌ಗೆ ಹೆಚ್ಚಿನ ಸಂಖ್ಯೆಯ ಭಾರತೀಯರು ಆಗಮಿಸಲಾರಂಭಿಸಿದರು. ಆದಾಗ್ಯೂ, ಒಂದು ಮಹತ್ವದ ಸವಾಲು ಇತ್ತು, ಯುದ್ಧದ ಅವ್ಯವಸ್ಥೆಯ ನಡುವೆ ಪೋಲೆಂಡ್ ತಲುಪಿದ ಭಾರತೀಯರಿಗೆ ಗರಿಷ್ಠ ಸಹಾಯ ಹೇಗೆ ನೀಡುವುದು. ಆ ಕ್ಷಣದಲ್ಲಿ, ನಾನು ಬಿಎಪಿಎಸ್ ನ ಸೇವಾ ಋಷಿಯನ್ನು ಕಂಡೆ. ನಾನು ಕರೆ ಮಾಡಿದಾಗ ಅದು ತಡರಾತ್ರಿ-ಮಧ್ಯರಾತ್ರಿ ಅಥವಾ 1 ಗಂಟೆಯ ಸಮಯವಾಗಿತ್ತು ಎಂದು ನಾನು ನಂಬುತ್ತೇನೆ. ಪೋಲೆಂಡ್‌ಗೆ ಆಗಮಿಸುವ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಸಹಾಯ ಮಾಡಲು ನಾನು ಬೆಂಬಲವನ್ನು ಕೋರಿದೆ. ನಾನು ಕಂಡದ್ದು ನಿಜಕ್ಕೂ ಗಮನಾರ್ಹ. ನಿಮ್ಮ ಸಂಸ್ಥೆಯು ರಾತ್ರೋರಾತ್ರಿ ಯುರೋಪಿನಾದ್ಯಂತ ಬಿಎಪಿಎಸ್ ಸ್ವಯಂಸೇವಕರನ್ನು ಸಜ್ಜುಗೊಳಿಸಿತು, ಅವರು ಯುದ್ಧ-ಪೀಡಿತ ಪರಿಸರದಲ್ಲಿ ಅಗತ್ಯವಿರುವವರಿಗೆ ಅಮೂಲ್ಯವಾದ ಸಹಾಯವನ್ನು ಒದಗಿಸಿದರು.

ಬಿಎಪಿಎಸ್ ನ ಈ ಅಸಾಧಾರಣ ಶಕ್ತಿ ಮತ್ತು ಜಾಗತಿಕ ಮಟ್ಟದಲ್ಲಿ ಮಾನವೀಯತೆಗೆ ತೋರಿದ ಅದರ ಅಚಲವಾದ ಬದ್ಧತೆ ನಿಜವಾಗಿಯೂ ಶ್ಲಾಘನೀಯವಾಗಿದೆ. ಆದುದರಿಂದ ಕಾರ್ಯಕಾರ್ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಂದು, ಬಿಎಪಿಎಸ್ ಸ್ವಯಂಸೇವಕರು ತಮ್ಮ ಸೇವೆಯ ಮೂಲಕ ಪ್ರಪಂಚದಾದ್ಯಂತ ಜೀವನವನ್ನು ಪರಿವರ್ತಿಸುತ್ತಿದ್ದಾರೆ, ಅಸಂಖ್ಯಾತ ಆತ್ಮಗಳನ್ನು ಸ್ಪರ್ಶಿಸುತ್ತಿದ್ದಾರೆ ಮತ್ತು ಸಮಾಜದ ಅತ್ಯಂತ ಅಂಚಿನಲ್ಲಿರುವವರಿಗೆ ಅಧಿಕಾರ ನೀಡುತ್ತಿದ್ದಾರೆ. ನೀವು ಅನೇಕರಿಗೆ ಸ್ಫೂರ್ತಿ ಮತ್ತು ಅತ್ಯಂತ ಗೌರವಕ್ಕೆ ಅರ್ಹರಾಗಿದ್ದೀರಿ.

ಸ್ನೇಹಿತರೆ,

ಬಿಎಪಿಎಸ್ ಕೈಗೊಂಡ ಕೆಲಸವು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಮತ್ತು ಸ್ಥಾನಮಾನವನ್ನು ಗಮನಾರ್ಹವಾಗಿ ಬಲಪಡಿಸಿದೆ. 28 ದೇಶಗಳಲ್ಲಿ ಭಗವಾನ್ ಸ್ವಾಮಿನಾರಾಯಣನ 1,800 ದೇವಾಲಯಗಳು, ಪ್ರಪಂಚದಾದ್ಯಂತ 21,000ಕ್ಕೂ ಹೆಚ್ಚು ಆಧ್ಯಾತ್ಮಿಕ ಕೇಂದ್ರಗಳು ಮತ್ತು ಹಲವಾರು ಸೇವಾ ಯೋಜನೆಗಳೊಂದಿಗೆ, ಜಗತ್ತು ಬಿಎಪಿಎಸ್ ನಲ್ಲಿ ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ಗುರುತಿನ ಪ್ರತಿಬಿಂಬವನ್ನು ನೋಡುತ್ತಿದೆ. ಈ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗದೆ, ಆದರೆ ಭಾರತದ ಸಾಂಸ್ಕೃತಿಕ ಪ್ರಾತಿನಿಧಿಕ ತಾಣಗಳಾಗಿವೆ. ಪ್ರಪಂಚದ ಅತ್ಯಂತ ಹಳೆಯ ಜೀವಂತ ನಾಗರಿಕತೆಯನ್ನು ಸಾಕಾರಗೊಳಿಸುತ್ತವೆ. ಈ ದೇವಾಲಯಗಳೊಂದಿಗೆ ಸಂಪರ್ಕ ಸಾಧಿಸುವ ಯಾರಾದರೂ ಅನಿವಾರ್ಯವಾಗಿ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಗೆ ಆಕರ್ಷಿತರಾಗುತ್ತಾರೆ.

ಕೆಲವೇ ತಿಂಗಳ ಹಿಂದೆ ಅಬುಧಾಬಿಯ ಭಗವಾನ್ ಸ್ವಾಮಿನಾರಾಯಣ ದೇವಸ್ಥಾನದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆದಿದ್ದು, ಆ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನ್ನದಾಗಿತ್ತು. ಈ ದೇವಾಲಯ ಮತ್ತು ಸಮಾರಂಭವು ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಮೂಲಕ ಜಾಗತಿಕ ಗಮನ ಸೆಳೆದಿದೆ. ಇಂತಹ ಉಪಕ್ರಮಗಳು ಭಾರತದ ಸಾಂಸ್ಕೃತಿಕ ವೈಭವ ಮತ್ತು ಮಾನವ ಉದಾರತೆಯ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಇದಕ್ಕಾಗಿ, ಈ ಪ್ರಯತ್ನಗಳಿಗೆ ಸಹಕರಿಸುತ್ತಿರುವ ಸಮರ್ಪಿತ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಬಿಎಪಿಎಸ್ ಅಂತಹ ಭವ್ಯವಾದ ನಿರ್ಣಯಗಳನ್ನು ಸಾಧಿಸುವ ಸುಲಭತೆಯು ಭಗವಾನ್ ಸ್ವಾಮಿ ನಾರಾಯಣ, ಸಹಜಾನಂದ ಸ್ವಾಮಿಗಳ ದೈವಿಕ ತಪಸ್ಸಿಗೆ ಸಾಕ್ಷಿಯಾಗಿದೆ. ಅವರ ಸಹಾನುಭೂತಿಯು ಸಂತ್ರಸ್ತ ಪ್ರತಿ ಜೀವಿ ಮತ್ತು ಪ್ರತಿ ಆತ್ಮಕ್ಕೂ ವಿಸ್ತರಿಸಿದೆ.  ಅವರ ಜೀವನದ ಪ್ರತಿ ಕ್ಷಣವೂ ಮಾನವೀಯತೆಯ ಕಲ್ಯಾಣಕ್ಕಾಗಿ ಮೀಸಲಾಗಿತ್ತು. ಅವರು ಸ್ಥಾಪಿಸಿದ ಮೌಲ್ಯಗಳು ಬಿಎಪಿಎಸ್ ಮೂಲಕ ಬೆಳಗುತ್ತಲೇ ಇರುತ್ತವೆ, ಪ್ರಪಂಚದಾದ್ಯಂತ ಬೆಳಕು ಮತ್ತು ಭರವಸೆಯನ್ನು ಹರಡುತ್ತವೆ.

ಬಿಎಪಿಎಸ್ ನ ಸೇವೆಯ ಸಾರವನ್ನು ಹಾಡಿನ ಸಾಲುಗಳಲ್ಲಿ ಸುಂದರವಾಗಿ ಸೆರೆಹಿಡಿಯಬಹುದು, ಅದು ಪ್ರತಿ ಮನೆಯಲ್ಲೂ ಪ್ರತಿಧ್ವನಿಸುತ್ತದೆ:

“ನದಿ ತನ್ನ ನೀರನ್ನು ಕುಡಿಯಲು ಬಿಡಬಾರದು”

 ಮರಗಳು ತಮ್ಮ ಹಣ್ಣುಗಳನ್ನು ತಿನ್ನಬಾರದು, ನದಿಗಳು ತಮ್ಮ ನೀರನ್ನು ಕುಡಿಯಬಾರದು.

ಮರವು ತನ್ನ ಹಣ್ಣುಗಳನ್ನು ತಿನ್ನುವುದಿಲ್ಲ,

ತನ್ನ ದೇಹ, ಮನಸ್ಸು ಮತ್ತು ಸಂಪತ್ತನ್ನು ಇತರರಿಗೆ ದಾನ ಮಾಡುವವನು ನಿಜವಾದ ವ್ಯಕ್ತಿ … ಅವನೇ ಈ ಭೂಮಿಯ ದೇವರು.

ಸ್ನೇಹಿತರೆ,

ನಾನು ಬಾಲ್ಯದಿಂದಲೂ ಬಿಎಪಿಎಸ್ ಮತ್ತು ಭಗವಾನ್ ಸ್ವಾಮಿ ನಾರಾಯಣರೊಂದಿಗೆ ಸಂಪರ್ಕ ಹೊಂದಿದ್ದು ನನ್ನ ಅದೃಷ್ಟವೇ ಸರಿ. ಅಂತಹ ಉದಾತ್ತ ಸಂಪ್ರದಾಯದೊಂದಿಗಿನ ಈ ಒಡನಾಟವು ನನ್ನ ಜೀವನದಲ್ಲಿ ಮಾರ್ಗದರ್ಶಿ ಶಕ್ತಿಯಾಗಿದೆ. ಪ್ರಮುಖ್ ಸ್ವಾಮಿ ಮಹಾರಾಜ್ ಅವರಿಂದ ನಾನು ಪಡೆದ ಪ್ರೀತಿ ಮತ್ತು ವಾತ್ಸಲ್ಯವು ನನ್ನ ಜೀವನದ ದೊಡ್ಡ ಸಂಪತ್ತಾಗಿ ಉಳಿದಿದೆ. ಅವರೊಂದಿಗಿನ ಅಸಂಖ್ಯಾತ ವೈಯಕ್ತಿಕ ಕ್ಷಣಗಳು ನನ್ನ ಜೀವನ ಪ್ರಯಾಣದಿಂದ ಬೇರ್ಪಡಿಸಲಾಗದವು.

ನನ್ನ ಸಾರ್ವಜನಿಕ ಜೀವನದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮತ್ತು ಪ್ರಧಾನಿಯಾಗಿಯೂ ಅವರ ಮಾರ್ಗದರ್ಶನ ಯಾವಾಗಲೂ ನನ್ನೊಂದಿಗೆ ಇದೆ. ನರ್ಮದೆಯ ನೀರು ಸಬರಮತಿಯನ್ನು ತಲುಪಿದ ಐತಿಹಾಸಿಕ ಸಂದರ್ಭವನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ – ಪ್ರಮುಖ ಸ್ವಾಮಿ ಮಹಾರಾಜ್ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದರು. ಅಂತೆಯೇ, ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಸ್ವಾಮಿ ನಾರಾಯಣ ಮಹಾಮಂತ್ರ ಮಹೋತ್ಸವ ಮತ್ತು ಮುಂದಿನ ವರ್ಷ ನಡೆಯುವ ಸ್ವಾಮಿ ನಾರಾಯಣ ಮಂತ್ರ ಲೇಖನ ಮಹೋತ್ಸವದ ನೆನಪುಗಳನ್ನು ನಾನು ಪ್ರೀತಿಸುತ್ತೇನೆ.

ಮಂತ್ರ ಬರವಣಿಗೆಯ ಪರಿಕಲ್ಪನೆಯು ಸ್ವತಃ ಅಸಾಧಾರಣವಾಗಿತ್ತು, ಇದು ಅವರ ಅಪ್ರತಿಮ ಆಧ್ಯಾತ್ಮಿಕ ದೃಷ್ಟಿಯ ಪ್ರತಿಬಿಂಬವಾಗಿದೆ. ತಂದೆ ಮಗನ ಮೇಲೆ ತೋರುವ ವಾತ್ಸಲ್ಯವನ್ನು ಅವರು ನನ್ನ ಮೇಲೆ ಧಾರೆ ಎರೆದಿದ್ದಾರೆ. ಅವರ ಆಶೀರ್ವಾದ ಯಾವಾಗಲೂ ಸಾರ್ವಜನಿಕ ಕಲ್ಯಾಣಕ್ಕಾಗಿ ಪ್ರತಿ ಪ್ರಯತ್ನದಲ್ಲಿ ನನ್ನನ್ನು ಬೆಂಬಲಿಸುತ್ತದೆ.

ಇಂದು, ಈ ಭವ್ಯವಾದ ಕಾರ್ಯಕ್ರಮದ ನಡುವೆ ನಿಂತಿರುವ ನಾನು, ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಆಧ್ಯಾತ್ಮಿಕ ಉಪಸ್ಥಿತಿ ಮತ್ತು ಮಾರ್ಗದರ್ಶಕ ಮತ್ತು ತಂದೆಯಾಗಿ ಅವರ ಶಾಶ್ವತ ಮಾರ್ಗದರ್ಶನವನ್ನು ಆಳವಾಗಿ ನೆನಪಿಸಿಕೊಳ್ಳುತ್ತೇನೆ.

ಸ್ನೇಹಿತರೆ,

ನಮ್ಮ ಸಂಸ್ಕೃತಿಯಲ್ಲಿ, ಸೇವೆಯನ್ನು ಅತ್ಯುನ್ನತ ಸದ್ಗುಣವೆಂದು ಪರಿಗಣಿಸಲಾಗಿದೆ. ‘ಸೇವಾ ಪರಮೋ ಧರ್ಮ’-ಸೇವೆಯೇ ಪರಮ ಕರ್ತವ್ಯ. ಈ ಪದಗಳು ಕೇವಲ ಅಭಿವ್ಯಕ್ತಿಗಳಲ್ಲ ಆದರೆ ನಮ್ಮ ಜೀವನದಲ್ಲಿ ಆಳವಾಗಿ ಬೇರೂರಿರುವ ಮೌಲ್ಯಗಳು. ಸೇವೆಯು ಭಕ್ತಿ, ನಂಬಿಕೆ ಅಥವಾ ಆರಾಧನೆಗಿಂತ ಹೆಚ್ಚಿನ ಸ್ಥಾನ ಹೊಂದಿದೆ. ಸಾರ್ವಜನಿಕ ಸೇವೆಯು ದೈವಿಕ ಸೇವೆಗೆ ಸಮಾನವಾಗಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ನಿಜವಾದ ಸೇವೆಯು ನಿಸ್ವಾರ್ಥವಾಗಿದೆ.

ನೀವು ವೈದ್ಯಕೀಯ ಶಿಬಿರದಲ್ಲಿ ರೋಗಿಗಳನ್ನು ನೋಡಿಕೊಳ್ಳುವಾಗ, ಅಗತ್ಯವಿರುವವರಿಗೆ ಆಹಾರ ನೀಡಿದಾಗ ಅಥವಾ ಮಗುವಿಗೆ ಕಲಿಸುವಾಗ, ನೀವು ಕೇವಲ ಇತರರಿಗೆ ಸಹಾಯ ಮಾಡುತ್ತಿಲ್ಲ. ಈ ಕ್ಷಣಗಳಲ್ಲಿ, ರೂಪಾಂತರದ ಅಸಾಮಾನ್ಯ ಪ್ರಕ್ರಿಯೆಯು ನಿಮ್ಮೊಳಗೆ ಪ್ರಾರಂಭವಾಗುತ್ತದೆ. ಈ ಆಂತರಿಕ ಬದಲಾವಣೆಯು ನಿಮ್ಮ ಆಧ್ಯಾತ್ಮಿಕ ಪ್ರಯಾಣಕ್ಕೆ ದಿಕ್ಕು ಮತ್ತು ಶಕ್ತಿಯನ್ನು ಒದಗಿಸುತ್ತದೆ. ಈ ಸೇವೆಯನ್ನು ಸಾಮೂಹಿಕವಾಗಿ-ಸಾವಿರಾರು ಅಥವಾ ಲಕ್ಷಗಟ್ಟಲೆ ಜನರಿಂದ, ಸಂಘಟನೆ ಅಥವಾ ಚಳುವಳಿಯ ಭಾಗವಾಗಿ ನಡೆಸಿದಾಗ-ಅದು ಅಸಾಧಾರಣ ಫಲಿತಾಂಶಗಳನ್ನು ಸಾಧಿಸುತ್ತದೆ. ಅಂತಹ ಸಾಂಸ್ಥಿಕ ಸೇವೆಯು ಸಮಾಜದ ಮತ್ತು ರಾಷ್ಟ್ರದ ಅತ್ಯಂತ ಗುರುತರ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತದೆ. ಇದು ಹಲವಾರು ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಬಹುದು ಮತ್ತು ಅಸಂಖ್ಯಾತ ವ್ಯಕ್ತಿಗಳನ್ನು ಸಾಮಾನ್ಯ ಗುರಿಯತ್ತ ಸಜ್ಜುಗೊಳಿಸಬಹುದು, ಸಮಾಜ ಮತ್ತು ರಾಷ್ಟ್ರ ಎರಡಕ್ಕೂ ಅಪಾರ ಶಕ್ತಿಯನ್ನು ಸೃಷ್ಟಿಸುತ್ತದೆ.

ಇಂದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೃಷ್ಟಿಯತ್ತ ಮುನ್ನಡೆಯುತ್ತಿರುವಾಗ, ನಾವು ಎಲ್ಲಾ ಕ್ಷೇತ್ರಗಳಲ್ಲಿ ಏಕತೆ ಮತ್ತು ಸಾಮೂಹಿಕ ಪ್ರಯತ್ನದ ಮನೋಭಾವ ನೋಡುತ್ತಿದ್ದೇವೆ. ಅದು ಸ್ವಚ್ಛ ಭಾರತ್ ಮಿಷನ್ ಆಗಿರಲಿ, ನೈಸರ್ಗಿಕ ಕೃಷಿಯ ಉತ್ತೇಜನ, ಪರಿಸರ ಜಾಗೃತಿ, ಹೆಣ್ಣು ಮಕ್ಕಳ ಶಿಕ್ಷಣ ಅಥವಾ ಬುಡಕಟ್ಟು ಸಮುದಾಯಗಳ ಉನ್ನತಿಗಾಗಿ, ಸಮಾಜದ ಎಲ್ಲಾ ವರ್ಗಗಳ ಜನರು ರಾಷ್ಟ್ರ ನಿರ್ಮಾಣದ ಈ ಪ್ರಯಾಣವನ್ನು ಮುನ್ನಡೆಸಲು ಮುಂದಾಗುತ್ತಿದ್ದಾರೆ. ಈ ಪ್ರಯತ್ನಗಳು ನಿಮ್ಮಿಂದ ಅಪಾರವಾದ ಸ್ಫೂರ್ತಿ ಪಡೆಯುತ್ತವೆ. ಆದ್ದರಿಂದ, ಇಂದು, ನಾನು ಹೃತ್ಪೂರ್ವಕ ವಿನಂತಿ ಮಾಡಲು ಬಯಸುತ್ತಿದ್ದೇನೆ.

ಹೊಸ ಸಂಕಲ್ಪಗಳನ್ನು ಮಾಡಲು ಮತ್ತು ಪ್ರತಿ ವರ್ಷವನ್ನು ಅರ್ಥಪೂರ್ಣ ಉದ್ದೇಶಕ್ಕಾಗಿ ಮೀಸಲಿಡುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಉದಾಹರಣೆಗೆ, ಒಂದು ವರ್ಷವನ್ನು ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸಲು ಮೀಸಲಿಡಬಹುದು, ಆದರೆ ಇನ್ನೊಂದು ಹಬ್ಬಗಳ ಮೂಲಕ ವಿವಿಧತೆಯಲ್ಲಿ ಭಾರತದ ಏಕತೆ ಆಚರಿಸಬಹುದು. ನಮ್ಮ ಯುವಕರನ್ನು ರಕ್ಷಿಸಲು ಮಾದಕ ದ್ರವ್ಯ ಸೇವನೆಯನ್ನು ಎದುರಿಸಲು ನಾವು ಸಂಕಲ್ಪ ಮಾಡಬೇಕು. ರಾಷ್ಟ್ರದಾದ್ಯಂತ, ಜನರು ನದಿಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ – ಅಂತಹ ಉಪಕ್ರಮಗಳು ನಿಮ್ಮ ಪ್ರಯತ್ನಗಳ ಭಾಗವಾಗಬಹುದು. ಇದಲ್ಲದೆ, ಭೂಮಿಯ ಭವಿಷ್ಯ ರಕ್ಷಿಸಲು ಸುಸ್ಥಿರ ಜೀವನಶೈಲಿ ಅಳವಡಿಸಿಕೊಳ್ಳಲು ನಾವು ಬದ್ಧರಾಗಿರಬೇಕು.

ಮಿಷನ್ ಲೈಫ್‌ನ ವಿಶ್ವಾಸಾರ್ಹತೆ ಮತ್ತು ಪ್ರಭಾವ ಪ್ರದರ್ಶಿಸುವತ್ತ ನಾವು ಕೆಲಸ ಮಾಡೋಣ – ಭಾರತವು ಪ್ರಪಂಚದೊಂದಿಗೆ ಹಂಚಿಕೊಂಡಿರುವ ಸುಸ್ಥಿರ ಜೀವನದ ದೃಷ್ಟಿ. ಒಟ್ಟಾಗಿ, ನಾವು ಈ ನಿರ್ಣಯಗಳನ್ನು ಪರಿವರ್ತನೆಯ ಕ್ರಿಯೆಗಳಾಗಿ ಪರಿವರ್ತಿಸಬಹುದು ಅದು ಪ್ರಗತಿಯನ್ನು ಪ್ರೇರೇಪಿಸುತ್ತದೆ ಮತ್ತು ಮುಂದಿನ ಪೀಳಿಗೆಗೆ ನಮ್ಮ ಗ್ರಹವನ್ನು ಸಂರಕ್ಷಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ‘ಏಕ್ ಪೆದ್ ಮಾ ಕೆ ನಾಮ್’ ಅಭಿಯಾನ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ದಿಕ್ಕಿನಲ್ಲಿ ನಿಮ್ಮ ಪ್ರಯತ್ನಗಳು ಅಷ್ಟೇ ಮಹತ್ವದ್ದಾಗಿದೆ. ನೀವು ಕೊಡುಗೆ ನೀಡಬಹುದಾದ ಅನೇಕ ಪರಿಣಾಮಕಾರಿ ಉಪಕ್ರಮಗಳಿವೆ, ಉದಾಹರಣೆಗೆ ಭಾರತದ ಅಭಿವೃದ್ಧಿಯನ್ನು ವೇಗಗೊಳಿಸುವ ಅಭಿಯಾನಗಳು: ಫಿಟ್ ಇಂಡಿಯಾ, ಲೋಕಲ್ ಫಾರ್ ವೋಕಲ್ ಮತ್ತು ಸಿರಿಧಾನ್ಯಗಳ ಪ್ರಚಾರ ಇತ್ಯಾದಿ. ಯುವ ಚಿಂತಕರನ್ನು ಮತ್ತಷ್ಟು ಪ್ರೇರೇಪಿಸಲು, ಇನ್ನು ಕೆಲವೇ ವಾರಗಳಲ್ಲಿ ಜನವರಿಯಲ್ಲಿ ‘ವಿಕಸಿತ ಭಾರತದ ಯುವ ನಾಯಕರ ಸಂವಾದ’ ನಡೆಯಲಿದೆ. ಈ ವೇದಿಕೆಯು ನಮ್ಮ ಯುವಕರು ವಿಕಸಿತ ಭಾರತ(ಅಭಿವೃದ್ಧಿ ಹೊಂದಿದ ಭಾರತ)ದ ದೃಷ್ಟಿಕೋನ ಸಾಕಾರಗೊಳಿಸಲು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ಈ ಗುರಿಗೆ ಅವರ ಕೊಡುಗೆಗಳನ್ನು ವಿವರಿಸಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮದಲ್ಲಿ ಭಾಗವಹಿಸುವಂತೆ ನಿಮ್ಮೆಲ್ಲಾ ಯುವ ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತೇವೆ.

ಸ್ನೇಹಿತರೆ,

ಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಭಾರತದ ಕುಟುಂಬ-ಆಧಾರಿತ ಸಂಸ್ಕೃತಿಗೆ ವಿಶೇಷ ಒತ್ತು ನೀಡಿದರು. ಘರ್ ಸಭೆಯಂತಹ ಉಪಕ್ರಮಗಳ ಮೂಲಕ ಸಮಾಜದಲ್ಲಿ ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ಬಲಪಡಿಸಿದರು. ಈ ಅಭಿಯಾನಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಇಂದು ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಮಹತ್ವಾಕಾಂಕ್ಷೆಯ ಗುರಿಯತ್ತ ಶ್ರಮಿಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ದೇಶದ ಪ್ರಯಾಣವು ಪ್ರತಿಯೊಬ್ಬ ಬಿಎಪಿಎಸ್ ಸ್ವಯಂಸೇವಕನಂತೆ ಭಾರತಕ್ಕೆ ನಿರ್ಣಾಯಕವಾಗಿದೆ.

ಭಗವಾನ್ ಸ್ವಾಮಿ ನಾರಾಯಣ ಅವರ ಆಶೀರ್ವಾದದೊಂದಿಗೆ, ಬಿಎಪಿಎಸ್ ಕಾರ್ಯಕರ್ತರ ನೇತೃತ್ವದ ಈ ಸೇವಾ ಅಭಿಯಾನವು ಅದೇ ಅಚಲವಾದ ಸಮರ್ಪಣೆಯೊಂದಿಗೆ ಮುಂದುವರಿಯುತ್ತದೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ಕಾರ್ಯಕರ್ತರ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಜೈ ಸ್ವಾಮಿನಾರಾಯಣ!

 

*****