Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ


ನಮಸ್ಕಾರ!

ಜಾರ್ಖಂಡ್‌ನ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಸಂತೋಷ್ ಗಂಗ್ವಾರ್ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಜುವಾಲ್ ಓರಮ್ ಅವರೇ, ನನ್ನ ಸಹ ಸಚಿವರು ಮತ್ತು ನೆಲದ ಮಗಳೂ ಆಗಿರುವ ಅನ್ನಪೂರ್ಣ ದೇವಿ ಅವರೇ, ಸಂಜಯ್ ಸೇಠ್ ಅವರೇ, ಶ್ರೀ ದುರ್ಗಾದಾಸ್ ಉಯಿಕೆ ಅವರೇ, ಈ ಕ್ಷೇತ್ರದ ಸಂಸದರಾದ ಶ್ರೀ ಮನೀಶ್ ಜೈಸ್ವಾಲ್ ಅವರೇ ಹಾಗೂ ಎಲ್ಲಾ ಸಾರ್ವಜನಿಕ ಪ್ರತಿನಿಧಿಗಳೇ ಮತ್ತು ಇಲ್ಲಿ ಉಪಸ್ಥಿತರಿರುವ ನನ್ನ ಸಹೋದರ ಸಹೋದರಿಯರೇ!

ಇಂದು, ಜಾರ್ಖಂಡ್‌ನ ಅಭಿವೃದ್ಧಿಯ ಪಯಣದ ಭಾಗವಾಗಲು ನನಗೆ ಮತ್ತೊಮ್ಮೆ ಅವಕಾಶ ದೊರೆತಿದೆ. ಕೆಲವು ದಿನಗಳ ಹಿಂದೆ ನಾನು ಜೆಮ್‌ಶೆಡ್‌ಪುರಕ್ಕೆ ಭೇಟಿ ನೀಡಿದ್ದೆ. ನಾನು ಜೆಮ್‌ಶೆಡ್‌ಪುರದಲ್ಲಿ ಜಾರ್ಖಂಡ್‌ಗೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದೇನೆ. ʻಪಿಎಂ-ಆವಾಸ್ ಯೋಜನೆʼಯಡಿ ಜಾರ್ಖಂಡ್ನ ಸಾವಿರಾರು ಬಡ ಜನರು ತಮ್ಮ ಸ್ವಂತ ಶಾಶ್ವತ ಮನೆಗಳನ್ನು ಪಡೆದಿದ್ದಾರೆ. ಈಗ ಕೆಲವೇ ದಿನಗಳಲ್ಲಿ ನಾನು ಮತ್ತೆ ಇಲ್ಲಿಗೆ ಬಂದಿದ್ದೇನೆ. ಇಂದು, ಜಾರ್ಖಂಡ್‌ನಲ್ಲಿ 80,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಅವುಗಳಿಗೆ ಅಡಿಪಾಯ ಹಾಕಲಾಗಿದೆ. ಈ ಯೋಜನೆಗಳು ಬುಡಕಟ್ಟು ಸಮುದಾಯದ ಕಲ್ಯಾಣ ಮತ್ತು ಉನ್ನತಿಗೆ ಸಂಬಂಧಿಸಿದವಾಗಿವೆ. ಈ ಯೋಜನೆಗಳು ದೇಶಾದ್ಯಂತದ ಬುಡಕಟ್ಟು ಸಮುದಾಯಕ್ಕೆ ಭಾರತ ಸರ್ಕಾರ ನೀಡುತ್ತಿರುವ ಆದ್ಯತೆಗೆ ಸಾಕ್ಷಿಯಾಗಿದೆ. ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ನಾನು ಜಾರ್ಖಂಡ್‌ನ ಎಲ್ಲಾ ಜನತೆ ಮತ್ತು ಇಡೀ ದೇಶಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು ಪೂಜ್ಯ ಬಾಪು ಮಹಾತ್ಮ ಗಾಂಧಿ ಅವರ ಜನ್ಮದಿನ. ಬುಡಕಟ್ಟು ಅಭಿವೃದ್ಧಿ ವಿಚಾರದಲ್ಲಿ ಅವರ ದೂರದೃಷ್ಟಿ ಮತ್ತು ಆಲೋಚನೆಗಳೇ ನಮಗೆ ನಿಧಿಯಾಗಿದೆ. ಬುಡಕಟ್ಟು ಸಮುದಾಯವು ವೇಗವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ಭಾರತದ ಅಭಿವೃದ್ಧಿಯನ್ನು ಸಾಧಿಸಬಹುದು ಎಂದು ಗಾಂಧೀಜಿ ನಂಬಿದ್ದರು. ಇಂದು ನಮ್ಮ ಸರ್ಕಾರ ಬುಡಕಟ್ಟು ಸಮುದಾಯದ ಉನ್ನತಿಗಾಗಿ ಹಿಂದೆಂದಿಗಿಂತಲೂ ಹೆಚ್ಚು ಗಮನ ಹರಿಸುತ್ತಿರುವುದು ನನಗೆ ಸಂತೋಷವಾಗಿದೆ. ನಾನು ಈಗಷ್ಟೇ ʻಧರ್ತಿ ಆಬಾ ಜನ್‌ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ್ʼ ಎಂಬ ಪ್ರಮುಖ ಕಾರ್ಯಕ್ರಮವನ್ನು ಆರಂಭಿಸಿದ್ದೇನೆ. ಈ ಯೋಜನೆಗಾಗಿ ಸುಮಾರು 80,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ʻಧರ್ತಿ ಆಬಾ ಜನ್‌ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನʼದ ಅಡಿಯಲ್ಲಿ 550 ಜಿಲ್ಲೆಗಳಲ್ಲಿ ಸುಮಾರು 63,000 ಬುಡಕಟ್ಟು ಪ್ರಾಬಲ್ಯದ ಗ್ರಾಮಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು. ಬುಡಕಟ್ಟು ಪ್ರಾಬಲ್ಯದ ಹಳ್ಳಿಗಳಲ್ಲಿ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಲಾಗುವುದು. ಈ ಉಪಕ್ರಮವು ದೇಶಾದ್ಯಂತದ ನನ್ನ 5 ಕೋಟಿಗೂ ಹೆಚ್ಚು ಬುಡಕಟ್ಟು ಸಹೋದರ-ಸಹೋದರಿಯರಿಗೆ ಪ್ರಯೋಜನ  ನೀಡುತ್ತದೆ. ಜಾರ್ಖಂಡ್‌ನ ಬುಡಕಟ್ಟು ಸಮುದಾಯವೂ ಉಪಕ್ರಮದಿಂದ ಗಮನಾರ್ಹ ಪ್ರಯೋಜನಗಳನ್ನು ಪಡೆಯಲಿದೆ.

ಸ್ನೇಹಿತರೇ,

ಭಗವಾನ್ ಬಿರ್ಸಾ ಮುಂಡಾ ಅವರ ಪುಣ್ಯಭೂಮಿಯಿಂದ ʻಧರ್ತಿ ಆಬಾ ಜನ್‌ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನʼವನ್ನು ಪ್ರಾರಂಭಿಸಲಾಗುತ್ತಿರುವುದು ನನಗೆ ಸಂತೋಷ ತಂದಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಂದು ಜಾರ್ಖಂಡ್‌ನಲ್ಲಿ ʻಪಿಎಂ-ಜನಮಾನ್ ಯೋಜನೆʼಯನ್ನು ಪ್ರಾರಂಭಿಸಲಾಯಿತು. ಮುಂದಿನ ತಿಂಗಳು, ನವೆಂಬರ್ 15ರಂದು ʻಜನ್‌ಜಾತೀಯ ಗೌರವ್ ದಿವಸ್ʼ(ಬುಡಕಟ್ಟು ಹೆಮ್ಮೆ ದಿನ)ದಂದು ನಾವು ʻಪಿಎಂ-ಜನಮಾನ್ ಯೋಜನೆʼಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಿದ್ದೇವೆ. ʻಪಿಎಂ-ಜನಮಾನ್ ಯೋಜನೆʼಯ ಮೂಲಕ, ಒಂದು ಕಾಲದಲ್ಲಿ ಹಿಂದುಳಿದಿದ್ದ, ಯಾರೂ ಗಮನ ಹರಿಸದೆ ಉಳಿದಿದ್ದ ಬುಡಕಟ್ಟು ಪ್ರದೇಶಗಳಿಗೂ ಇಂದು  ಅಭಿವೃದ್ಧಿ ತಲುಪುತ್ತಿದೆ. ಇಂದು, ʻಪಿಎಂ-ಜನಮಾನ್ʼ ಯೋಜನೆಯಡಿ ಸುಮಾರು 1,300 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹ ಉದ್ಘಾಟಿಸಲಾಗಿದೆ. ಈ ಯೋಜನೆಯಡಿ ಅತ್ಯಂತ ಹಿಂದುಳಿದ ಬುಡಕಟ್ಟು ಪ್ರದೇಶಗಳಲ್ಲಿ ಜೀವನವನ್ನು ಸುಧಾರಿಸಲು ಶಿಕ್ಷಣ, ಆರೋಗ್ಯ ಮತ್ತು ರಸ್ತೆ ಸೌಲಭ್ಯಗಳನ್ನು ನಿರ್ಮಿಸಲಾಗುವುದು.

ಸಹೋದರ-ಸಹೋದರಿಯರೇ,

ಕೇವಲ ಒಂದು ವರ್ಷದಲ್ಲಿ, ʻಪಿಎಂ-ಜನಮಾನ್ʼ ಯೋಜನೆ ಜಾರ್ಖಂಡ್‌ನಲ್ಲಿ ಅನೇಕ ಮೈಲುಗಲ್ಲುಗಳನ್ನು ಸಾಧಿಸಿದೆ. ಅತ್ಯಂತ ಹಿಂದುಳಿದ 950ಕ್ಕೂ ಹೆಚ್ಚು ಹಳ್ಳಿಗಳಲ್ಲಿ, ಪ್ರತಿ ಮನೆಗೆ ನೀರು ಒದಗಿಸುವ ಕಾರ್ಯ ಪೂರ್ಣಗೊಂಡಿದೆ. ರಾಜ್ಯದಲ್ಲಿ ಮೂವತ್ತೈದು ʻವನ್ ಧನ್ ವಿಕಾಸ್ ಕೇಂದ್ರʼಗಳನ್ನು ಸಹ ಅನುಮೋದಿಸಲಾಗಿದೆ. ಹೆಚ್ಚುವರಿಯಾಗಿ, ದೂರದ ಬುಡಕಟ್ಟು ಪ್ರದೇಶಗಳಿಗೆ ಮೊಬೈಲ್ ಸಂಪರ್ಕ ಒದಗಿಸುವ ಕೆಲಸ ನಡೆಯುತ್ತಿದೆ. ಈ ಬೆಳವಣಿಗೆಯು, ಈ ಬದಲಾವಣೆಯು ನಮ್ಮ ಬುಡಕಟ್ಟು ಸಮುದಾಯಕ್ಕೆ ಪ್ರಗತಿಗೆ ಸಮಾನ ಅವಕಾಶಗಳನ್ನು ಒದಗಿಸಲಿದೆ.

ಸ್ನೇಹಿತರೇ,

ನಮ್ಮ ಬುಡಕಟ್ಟು ಸಮಾಜವು, ಅಲ್ಲಿನ ಯುವಕರಿಗೆ ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಒದಗಿಸಿದಾಗ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ʻಏಕಲವ್ಯ ವಸತಿ ಶಾಲೆʼಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಇಂದು, ಇಲ್ಲಿಂದ 40 ʻಏಕಲವ್ಯ ವಸತಿ ಶಾಲೆʼಗಳನ್ನು ಉದ್ಘಾಟಿಸಲಾಯಿತು. 25 ಹೊಸ ʻಏಕಲವ್ಯ ಶಾಲೆʼಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪ್ರತಿ ಶಾಲೆಯೂ ಆಧುನಿಕ ಸೌಲಭ್ಯಗಳು ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ಅನುದಾನವನ್ನು ದ್ವಿಗುಣಗೊಳಿಸಿದ್ದೇವೆ.

ಸಹೋದರ-ಸಹೋದರಿಯರೇ,

ಸರಿಯಾದ ಪ್ರಯತ್ನಗಳನ್ನು ಮಾಡಿದಾಗ ಮಾತ್ರ ಸರಿಯಾದ ಫಲಿತಾಂಶಗಳು ಬರುತ್ತವೆ. ನಮ್ಮ ಬುಡಕಟ್ಟು ಸಮುದಾಯದ ಯುವಕರು ಪ್ರಗತಿ ಸಾಧಿಸುತ್ತಾರೆ ಮತ್ತು ರಾಷ್ಟ್ರವು ಅವರ ಸಾಮರ್ಥ್ಯದಿಂದ ಪ್ರಯೋಜನ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೇ,

ನಾನು ಇಲ್ಲಿ ಸುದೀರ್ಘ ಭಾಷಣ ಮಾಡಲು ಹೋಗುವುದಿಲ್ಲ, ಏಕೆಂದರೆ ನಾನು ಶೀಘ್ರದಲ್ಲೇ ಇಲ್ಲಿಂದ 3-4 ಕಿಲೋಮೀಟರ್ ದೂರದಲ್ಲಿರುವ ಬುಡಕಟ್ಟು ಸಮುದಾಯದ ದೊಡ್ಡ ಜಾತ್ರೆಗೆ ಹೋಗುವವನಿದ್ದೇನೆ. ನಾನು ನನ್ನ ಹೃದಯದಿಂದ  ಮಾತನಾಡುತ್ತೇನೆ, ಮತ್ತು ನಾನು ಭಾವೋದ್ರಿಕ್ತನಾಗಿ ಮಾತನಾಡುತ್ತೇನೆ. ಆದ್ದರಿಂದ, ಈ ಸರ್ಕಾರಿ ಕಾರ್ಯಕ್ರಮದ ಶಿಷ್ಟಾಚಾರವನ್ನು ಗೌರವಿಸಿ, ನಾನು ಭಾಷಣವನ್ನು ಲಂಬಿಸಲು ಹೋಗುವುದಿಲ್ಲ. ಆದಾಗ್ಯೂ, ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಇಷ್ಟೊಂದು ಮಂದಿ ಜಮಾಯಿಸಿದರೆ, “ಓಹ್ … ಎಷ್ಟು ದೊಡ್ಡ ಕಾರ್ಯಕ್ರಮ” ಎಂದು ಜನರು ಉದ್ಗರಿಸುತ್ತಾರೆ. ಆದರೆ ಇಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಸಣ್ಣ ಮಟ್ಟದ ವ್ಯವಸ್ಥೆಯಷ್ಟೇ ಮಾಡಲಾಗಿತ್ತು; ದೊಡ್ಡ ಕಾರ್ಯಕ್ರಮ ಶೀಘ್ರದಲ್ಲೇ ನಡೆಯಲಿದೆ. ಈ ಕಾರ್ಯಕ್ರಮವೇ ಇಷ್ಟು ದೊಡ್ಡದಾಗಿದ್ದರೆ, ಇನ್ನು ದೊಡ್ಡ ಕಾರ್ಯಕ್ರಮ ಎಷ್ಟು ಭವ್ಯವಾಗಿರಬಹುದೆಂದು ಊಹಿಸಿ. ಇಂದು, ನಾನು ಇಳಿದ ಕೂಡಲೇ, ಜಾರ್ಖಂಡ್‌ನ ನನ್ನ ಸಹೋದರ-ಸಹೋದರಿಯರ ಅದ್ಭುತ ಪ್ರೀತಿ ಮತ್ತು ಬೆಂಬಲವನ್ನು ನಾನು ನೋಡಿದೆ. ಈ ಪ್ರೀತಿ ಮತ್ತು ಆಶೀರ್ವಾದವು ಬುಡಕಟ್ಟು ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ನನಗೆ ಶಕ್ತಿಯನ್ನು ನೀಡುತ್ತದೆ. ಈ ಉತ್ಸಾಹದಿಂದ, ಮತ್ತೊಮ್ಮೆ, ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ನಾನು ನಿಮಗೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವೆಲ್ಲರೂ ಖಂಡಿತವಾಗಿಯೂ ಅಲ್ಲಿಗೆ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ, ಮತ್ತು ಇನ್ನೂ ಅನೇಕ ವಿಷಯಗಳ ಬಗ್ಗೆ ಮಾತನಾಡಲು ನನಗೆ ಅವಕಾಶ ಸಿಗಲಿದೆ.

ಜೈ ಜೋಹರ್!

 

*****