Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

3 ಪರಮ್ ರುದ್ರ ಸೂಪರ್‌ಕಂಪ್ಯೂಟರ್‌ಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಪ್ರಧಾನ ಮಂತ್ರಿ ಭಾಷಣ

3 ಪರಮ್ ರುದ್ರ ಸೂಪರ್‌ಕಂಪ್ಯೂಟರ್‌ಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಪ್ರಧಾನ ಮಂತ್ರಿ ಭಾಷಣ


ನಮಸ್ಕಾರ!

ಸನ್ಮಾನ್ಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರೆ, ರಾಷ್ಟ್ರದಾದ್ಯಂತ ವಿವಿಧ ಸಂಶೋಧನಾ ಸಂಸ್ಥೆಗಳ ಗೌರವಾನ್ವಿತ ನಿರ್ದೇಶಕರೆ, ಗಣ್ಯ ಹಿರಿಯ ವಿಜ್ಞಾನಿಗಳೆ, ಎಂಜಿನಿಯರ್ ಗಳೆ, ಸಂಶೋಧಕರೆ, ವಿದ್ಯಾರ್ಥಿಗಳೆ, ಇತರೆ ಗಣ್ಯರೆ, ಮತ್ತು ಮಹಿಳೆಯರು ಮತ್ತು ಮಹನೀಯರೆ!

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಇಂದು ಮಹತ್ವದ ಸಾಧನೆ ಮಾಡಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗೆ ಆದ್ಯತೆ ನೀಡುವ ಮೂಲಕ 21ನೇ ಶತಮಾನದ ಭಾರತವು ಹೇಗೆ ಮುನ್ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಭಾರತ ಇಂದು ಅಪರಿಮಿತವಾದ ಸಾಧ್ಯತೆಗಳಲ್ಲಿ ಹೊಸ ಅವಕಾಶಗಳನ್ನು ರೂಪಿಸುತ್ತಿದೆ. ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು 3 ‘ಪರಮ್ ರುದ್ರ ಸೂಪರ್‌ಕಂಪ್ಯೂಟರ್‌’ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಅತ್ಯಾಧುನಿಕ ಸೂಪರ್ ಕಂಪ್ಯೂಟರ್‌ಗಳನ್ನು ದೆಹಲಿ, ಪುಣೆ ಮತ್ತು ಕೋಲ್ಕತಾದಲ್ಲಿ ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ, 2 ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸಿಸ್ಟಂಗಳು, ಅರ್ಕಾ ಮತ್ತು ಅರುಣಿಕಾವನ್ನು ಉದ್ಘಾಟಿಸಲಾಗಿದೆ. ಈ ಮಹತ್ವದ ಸಂದರ್ಭದಲ್ಲಿ, ರಾಷ್ಟ್ರದ ವೈಜ್ಞಾನಿಕ ಸಮುದಾಯ, ಎಂಜಿನಿಯರ್‌ಗಳು ಮತ್ತು ಎಲ್ಲಾ ನಾಗರಿಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸಹೋದರ ಸಹೋದರಿಯರೆ,

ನನ್ನ 3ನೇ ಅವಧಿಯ ಆರಂಭದ 100 ದಿನಗಳ ಚೌಕಟ್ಟು ಮೀರಿ ಯುವಕರಿಗೆ ಹೆಚ್ಚುವರಿ 25 ದಿನಗಳನ್ನು ಮೀಸಲಿರಿಸಲು ನಾನು ಸಂಕಲ್ಪ ಮಾಡಿದ್ದೇನೆ. ಆ ಬದ್ಧತೆಗೆ ಅನುಗುಣವಾಗಿ, ಈ ಸೂಪರ್‌ಕಂಪ್ಯೂಟರ್‌ಗಳನ್ನು ಇಂದು ನಮ್ಮ ರಾಷ್ಟ್ರದ ಯುವಕರಿಗೆ ಅರ್ಪಿಸುತ್ತಿರುವುದು ನನಗೆ ಸಂತೋಷವಾಗಿದೆ. ಭಾರತದ ಯುವ ವಿಜ್ಞಾನಿಗಳು ತಮ್ಮ ದೇಶದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಪ್ರವೇಶ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಈ ಸುಧಾರಿತ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಬಿಡುಗಡೆ ಮಾಡಲಾದ 3 ಸೂಪರ್‌ಕಂಪ್ಯೂಟರ್‌ಗಳು ಭೌತಶಾಸ್ತ್ರ, ಭೂ ವಿಜ್ಞಾನ ಮತ್ತು ವಿಶ್ವವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಾದ್ಯಂತ ಸುಧಾರಿತ ಸಂಶೋಧನೆಯನ್ನು ಸುಗಮಗೊಳಿಸುತ್ತದೆ – ಇದು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುತ್ತದೆ.

ಸ್ನೇಹಿತರೆ,

ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ, ಕಂಪ್ಯೂಟಿಂಗ್ ಶಕ್ತಿಯು ರಾಷ್ಟ್ರೀಯ ಶಕ್ತಿಗೆ ಸಮಾನಾರ್ಥಕವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನಾ ಅವಕಾಶಗಳು, ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಕಾರ್ಯತಂತ್ರ ಸಾಮರ್ಥ್ಯ, ವಿಪತ್ತು ನಿರ್ವಹಣೆ, ಸುಲಭವಾಗಿ ಜೀವನ ನಿರ್ವಹಣೆ, ಅಥವಾ ಸುಲಭವಾಗಿ ವ್ಯಾಪಾರ ನಿರ್ವಹಣೆ ಸೇರಿದಂತೆ ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್ ಸಾಮರ್ಥ್ಯದಿಂದ ಸ್ಪರ್ಶಿಸದ ಯಾವುದೇ ಕ್ಷೇತ್ರವಿಲ್ಲ. ಇದು ಇಂಡಸ್ಟ್ರಿ 4.0ರಲ್ಲಿ ಭಾರತದ ಯಶಸ್ಸಿಗೆ ಭದ್ರ ಬುನಾದಿಯಾಗಿದೆ. ಈ ಕ್ರಾಂತಿಗೆ ನಮ್ಮ ಕೊಡುಗೆ ಕೇವಲ ಬಿಟ್‌ಗಳು ಮತ್ತು ಬೈಟ್‌ಗಳಲ್ಲಿರಬಾರದು, ಆದರೆ ಟೆರಾಬೈಟ್‌ಗಳು ಮತ್ತು ಪೆಟಾಬೈಟ್‌ಗಳಲ್ಲಿರಬೇಕು. ನಾವು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ವೇಗದಲ್ಲಿ ಮುನ್ನಡೆಯುತ್ತಿದ್ದೇವೆ ಎಂಬುದಕ್ಕೆ ಇಂದಿನ ಸಾಧನೆಯೇ ಸಾಕ್ಷಿಯಾಗಿದೆ.

ಸ್ನೇಹಿತರೆ,

ಇಂದಿನ ನವ ಭಾರತವು ಕೇವಲ ಅಭಿವೃದ್ಧಿ ಮತ್ತು ತಂತ್ರಜ್ಞಾನದಲ್ಲಿ ಪ್ರಪಂಚದ ಉಳಿದ ಭಾಗಗಳೊಂದಿಗೆ ಸ್ಪರ್ಧಿಸುವುದರೊಂದಿಗೆ ತೃಪ್ತವಾಗಿಲ್ಲ. ಈ ನವ ಭಾರತವು ತನ್ನ ವೈಜ್ಞಾನಿಕ ಸಂಶೋಧನೆಯ ಮೂಲಕ ಮಾನವತೆಗೆ ಸೇವೆ ಸಲ್ಲಿಸುವುದು ಜವಾಬ್ದಾರಿ ಎಂದು ಪರಿಗಣಿಸುತ್ತದೆ. ಇದು ನಮ್ಮ ಕರ್ತವ್ಯ. ‘ಸಂಶೋಧನೆಯ ಮೂಲಕ ಸ್ವಾವಲಂಬನೆ’. ಸ್ವಾವಲಂಬನೆಗಾಗಿ ವಿಜ್ಞಾನವು ನಮ್ಮ ಮಾರ್ಗದರ್ಶಿ ಮಂತ್ರವಾಗಿದೆ. ಈ ನಿಟ್ಟಿನಲ್ಲಿ, ನಾವು ಡಿಜಿಟಲ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಹಲವಾರು ಐತಿಹಾಸಿಕ ಉಪಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಭಾರತದ ಭವಿಷ್ಯದ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಶಾಲೆಗಳಲ್ಲಿ 10,000ಕ್ಕಿಂತ ಹೆಚ್ಚಿನ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.

ಹೆಚ್ಚುವರಿಯಾಗಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ(ಸ್ಟೆಮ್) ವಿಷಯಗಳಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ 1 ಲಕ್ಷ ಕೋಟಿ ರೂಪಾಯಿ ಸಂಶೋಧನಾ ನಿಧಿಯನ್ನೂ ಘೋಷಿಸಲಾಗಿದೆ. 21ನೇ ಶತಮಾನದ ಜಗತ್ತನ್ನು ತನ್ನ ನಾವೀನ್ಯತೆಗಳೊಂದಿಗೆ ಸಶಕ್ತಗೊಳಿಸಲು ಮತ್ತು ಜಾಗತಿಕ ಸಮುದಾಯವನ್ನು ಬಲಪಡಿಸಲು ಭಾರತವನ್ನು ಸಕ್ರಿಯಗೊಳಿಸುವುದು ನಮ್ಮ ಗುರಿಯಾಗಿದೆ.

ಸ್ನೇಹಿತರೆ,

ಇಂದು ಭಾರತವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳದ ಅಥವಾ ಹೊಸ ನೀತಿಗಳನ್ನು ರೂಪಿಸದ ಯಾವುದೇ ಕ್ಷೇತ್ರವಿಲ್ಲ. ಬಾಹ್ಯಾಕಾಶ ಭಾರತ್ ಈಗ ಬಾಹ್ಯಾಕಾಶ ಪರಿಶೋಧನೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿರುವುದು ಇದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. ಇತರ ರಾಷ್ಟ್ರಗಳು ಶತಕೋಟಿ ಡಾಲರ್‌ಗಳಿಂದ ಸಾಧಿಸಿದ್ದನ್ನು ನಮ್ಮ ವಿಜ್ಞಾನಿಗಳು ಸೀಮಿತ ಸಂಪನ್ಮೂಲಗಳಿಂದ ಸಾಧಿಸಿದ್ದಾರೆ. ಈ ಸಂಕಲ್ಪದಿಂದ ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಯಿತು. ಅದೇ ಸಂಕಲ್ಪದೊಂದಿಗೆ ಭಾರತವು ಈಗ ಮಿಷನ್ ಗಗನ್‌ಯಾನ್‌ಗೆ ತಯಾರಿ ನಡೆಸುತ್ತಿದೆ. “ಭಾರತದ ಮಿಷನ್ ಗಗನ್‌ಯಾನ್‌ ಕೇವಲ ಬಾಹ್ಯಾಕಾಶ ತಲುಪುವ ಬಗ್ಗೆ ಅಲ್ಲ, ಆದರೆ ನಮ್ಮ ವೈಜ್ಞಾನಿಕ ಆಕಾಂಕ್ಷೆಗಳ ಮಿತಿಯಿಲ್ಲದ ಎತ್ತರಕ್ಕೆ ಏರುತ್ತದೆ.” ನಿಮಗೆ ತಿಳಿದಿರಬಹುದು, ಭಾರತವು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದೆ. ಕೆಲವೇ ದಿನಗಳ ಹಿಂದೆ ಈ ಮಹತ್ವಾಕಾಂಕ್ಷೆಯ ಯೋಜನೆಯ ಮೊದಲ ಹಂತಕ್ಕೆ ಸರ್ಕಾರ ಅನುಮೋದನೆ ನೀಡಿತು.

ಸ್ನೇಹಿತರೆ,

ಸೆಮಿಕಂಡಕ್ಟರ್ ಆಧುನಿಕ ಅಭಿವೃದ್ಧಿಯ ನಿರ್ಣಾಯಕ ಅಂಶಗಳಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಹೆಸರಿನ ಮಹತ್ವದ ಉಪಕ್ರಮ ಪ್ರಾರಂಭಿಸಿದೆ. ಗಮನಾರ್ಹವಾಗಿ ಕಡಿಮೆ ಸಮಯದಲ್ಲಿ, ನಾವು ಈಗಾಗಲೇ ಸಕಾರಾತ್ಮಕ ಫಲಿತಾಂಶಗಳನ್ನು ನೋಡುತ್ತಿದ್ದೇವೆ. ಭಾರತವು ತನ್ನದೇ ಆದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಜಾಗತಿಕ ಪೂರೈಕೆ ಸರಪಳಿಯ ಪ್ರಮುಖ ಭಾಗವಾಗಿದೆ. ಇಂದು, ಭಾರತದ ಬಹು ಆಯಾಮದ ವೈಜ್ಞಾನಿಕ ಪ್ರಗತಿಯನ್ನು 3 ಪರಮ್ ರುದ್ರ ಸೂಪರ್‌ಕಂಪ್ಯೂಟರ್‌ಗಳು ಮತ್ತಷ್ಟು ಹೆಚ್ಚಿಸುತ್ತವೆ.

ಸ್ನೇಹಿತರೆ,

ಒಂದು ದೇಶವು ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿಸಿದಾಗ ದೊಡ್ಡ ಯಶಸ್ಸು ಸಾಧಿಸುತ್ತದೆ. ಸೂಪರ್‌ಕಂಪ್ಯೂಟರ್‌ನಿಂದ ಕ್ವಾಂಟಮ್ ಕಂಪ್ಯೂಟಿಂಗ್‌ ತನಕ ಭಾರತದ ಪ್ರಯಾಣವು ಈ ದೂರದೃಷ್ಟಿಯ ವಿಧಾನಕ್ಕೆ ಸಾಕ್ಷಿಯಾಗಿದೆ. ಸೂಪರ್‌ಕಂಪ್ಯೂಟರ್‌ಗಳನ್ನು ಕೆಲವೇ ಕೆಲವು ಆಯ್ದ ರಾಷ್ಟ್ರಗಳ ಪ್ರಮುಖ ವಲಯ  ಎಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಆದಾಗ್ಯೂ, 2015ರಲ್ಲಿ ನಾವು ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಷನ್ ಪ್ರಾರಂಭಿಸಿದ್ದೇವೆ. ಇಂದು ಭಾರತವು ಸೂಪರ್ ಕಂಪ್ಯೂಟರ್ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಸ್ಪರ್ಧಿಸುತ್ತಿದೆ. ಆದರೆ ನಾವು ಇಲ್ಲಿಗೇ ನಿಲ್ಲುವುದಿಲ್ಲ. ಭಾರತ ಈಗಾಗಲೇ ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿದೆ. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಭಾರತದ ಸಾಮರ್ಥ್ಯಗಳನ್ನು ಮುನ್ನಡೆಸುವಲ್ಲಿ ನಮ್ಮ ರಾಷ್ಟ್ರೀಯ ಕ್ವಾಂಟಮ್ ಮಿಷನ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಕ್ರಾಂತಿಕಾರಿ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಇಡೀ ಜಗತ್ತನ್ನು ಗಣನೀಯವಾಗಿ ಪರಿವರ್ತಿಸುತ್ತದೆ, ಐಟಿ, ಉತ್ಪಾದನೆ, ಎಂಎಸ್‌ಎಂಇಗಳು ಮತ್ತು ಸ್ಟಾರ್ಟಪ್‌ಗಳಂತಹ ಕ್ಷೇತ್ರಗಳಿಗೆ ಅಭೂತಪೂರ್ವ ಬದಲಾವಣೆಗಳನ್ನು ತರುತ್ತದೆ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತವು ಮುನ್ನಡೆ ಸಾಧಿಸಲು ಮತ್ತು ಜಗತ್ತಿಗೆ ಹೊಸ ದಿಕ್ಕು ನೀಡಲು ನಿರ್ಧರಿಸಿದೆ.

ಸ್ನೇಹಿತರೆ,

“ವಿಜ್ಞಾನದ ನಿಜವಾದ ಮಹತ್ವವು ಕೇವಲ ಆವಿಷ್ಕಾರ ಮತ್ತು ಅಭಿವೃದ್ಧಿಯಲ್ಲಿ ಇರದೆ, ಅದು ಅತ್ಯಂತ ಹಿಂದುಳಿದವರ ಆಕಾಂಕ್ಷೆಗಳನ್ನು ಸಹಪೂರೈಸುವುದರಲ್ಲಿದೆ.”

ನಾವು ಹೈಟೆಕ್ ಪ್ರಗತಿ ಸ್ವೀಕರಿಸಿದಂತೆ, ಈ ತಂತ್ರಜ್ಞಾನಗಳು ಬಡವರಿಗೆ ಸಬಲೀಕರಣದ ಮೂಲವಾಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ನಮ್ಮ ಯುಪಿಐ ವ್ಯವಸ್ಥೆಯಿಂದ ಉದಾಹರಿಸಿದ ಭಾರತದ ಡಿಜಿಟಲ್ ಆರ್ಥಿಕತೆಯು ಇದಕ್ಕೆ ಉಜ್ವಲ ಉದಾಹರಣೆಯಾಗಿದೆ. ಇತ್ತೀಚೆಗೆ ನಾವು ‘ಮಿಷನ್ ಮೌಸಮ್’ ಪ್ರಾರಂಭಿಸಿದ್ದೇವೆ, ಇದು ಭಾರತವನ್ನು ಹವಾಮಾನ-ಸಿದ್ಧ ಮತ್ತು ಹವಾಮಾನ-ಸ್ಮಾರ್ಟ್ ಮಾಡುವ ನಮ್ಮ ಕನಸನ್ನು ನನಸಾಗಿಸುವ ಗುರಿ ಹೊಂದಿದೆ. ನಾವು ಇಂದು ಆಚರಿಸುವ ಸಾಧನೆಗಳಾದ ಸೂಪರ್‌ಕಂಪ್ಯೂಟರ್‌ಗಳು ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಸಿಸ್ಟಮ್(ಎಚ್|ಪಿಸಿ), ಅಂತಿಮವಾಗಿ ನಮ್ಮ ದೇಶದ ಬಡ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತದೆ. ಎಚ್|ಪಿಸಿ ವ್ಯವಸ್ಥೆಗಳ ಪರಿಚಯದೊಂದಿಗೆ, ಹವಾಮಾನ ಊಹಿಸಲು ದೇಶದ ವೈಜ್ಞಾನಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ನಾವು ಈಗ ಹೈಪರ್-ಸ್ಥಳೀಯ ಮಟ್ಟದಲ್ಲಿ ಹೆಚ್ಚು ನಿಖರವಾದ ಹವಾಮಾನ ಮಾಹಿತಿ ಒದಗಿಸಲು ಸಾಧ್ಯವಾಗುತ್ತಿದೆ, ಅಂದರೆ ನಾವು ಪ್ರತ್ಯೇಕ ಹಳ್ಳಿಗಳಿಗೆ ಸಹ ನಿಖರವಾದ ಮುನ್ಸೂಚನೆಗಳನ್ನು ನೀಡಬಹುದು. ಒಂದು ಸೂಪರ್‌ಕಂಪ್ಯೂಟರ್ ದೂರದ ಹಳ್ಳಿಯ ಹವಾಮಾನ ಮತ್ತು ಮಣ್ಣಿನ ಸ್ಥಿತಿ ವಿಶ್ಲೇಷಿಸಿದಾಗ, ಇದು ಕೇವಲ ವೈಜ್ಞಾನಿಕ ಸಾಧನೆಯಲ್ಲ, ಆದರೆ ಲಕ್ಷಾಂತರ ಅಲ್ಲದಿದ್ದರೂ ಸಾವಿರಾರು ಜನರ ಜೀವನದಲ್ಲಿ ಪರಿವರ್ತನೀಯ ಬದಲಾವಣೆಯಾಗಿದೆ. ಸೂಪರ್‌ಕಂಪ್ಯೂಟರ್‌ ಅತ್ಯಂತ ಚಿಕ್ಕ-ಪ್ರಮಾಣದ ರೈತರಿಗೂ ವಿಶ್ವದ ಅತ್ಯಾಧುನಿಕ ಜ್ಞಾನದ ಪ್ರವೇಶ ಖಚಿತಪಡಿಸುತ್ತದೆ.

ಈ ಪ್ರಗತಿಯು ರೈತರಿಗೆ ದೀರ್ಘ ಪ್ರಯೋಜನಗಳನ್ನು ತರುತ್ತದೆ, ವಿಶೇಷವಾಗಿ ಅತ್ಯಂತ ದೂರದ ಪ್ರದೇಶಗಳಲ್ಲಿ, ಅವರು ವಿಶ್ವದರ್ಜೆಯ ಜ್ಞಾನದ ಪ್ರವೇಶ ಹೊಂದಿರುತ್ತಾರೆ. ರೈತರು ತಮ್ಮ ಬೆಳೆಗಳ ಬಗ್ಗೆ ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದ, ಮೀನುಗಾರರು ಸಮುದ್ರಕ್ಕೆ ಹೋಗುವಾಗ ಹೆಚ್ಚು ನಿಖರವಾದ ಮಾಹಿತಿಯಿಂದ ಪ್ರಯೋಜನ ಪಡೆಯುತ್ತಾರೆ. ರೈತರು ಅನುಭವಿಸುತ್ತಿರುವ ನಷ್ಟ ಕಡಿಮೆ ಮಾಡಲು ನಾವು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ, ಇದು ವಿಮಾ ಯೋಜನೆಗಳಿಗೆ ಉತ್ತಮ ಪ್ರವೇಶ ಒದಗಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಈ ತಂತ್ರಜ್ಞಾನವು ಕೃತಕ ಬುದ್ದಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಮಾದರಿಗಳನ್ನು ರೂಪಿಸಲು ನಮಗೆ ಅನುಮತಿಸುತ್ತದೆ. ಅದು ಎಲ್ಲಾ ಪಾಲುದಾರರಿಗೆ ಪ್ರಯೋಜನ ನೀಡುತ್ತದೆ. ಸೂಪರ್‌ಕಂಪ್ಯೂಟರ್‌ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ನಮ್ಮ ಸಾಮರ್ಥ್ಯವು ರಾಷ್ಟ್ರೀಯ ಹೆಮ್ಮೆಯ ವಿಚಾರವಾಗಿದೆ, ಆದರೆ ಇದು ಮುಂದಿನ ದಿನಗಳಲ್ಲಿ ಸಾಮಾನ್ಯ ನಾಗರಿಕರ ದೈನಂದಿನ ಜೀವನದಲ್ಲಿ ಪರಿವರ್ತನೀಯ ಬದಲಾವಣೆಗಳಿಗೆ ದಾರಿ ಮಾಡಿಕೊಡುತ್ತದೆ.

ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನದ ಈ ಯುಗದಲ್ಲಿ, ಸೂಪರ್‌ಕಂಪ್ಯೂಟರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತವು ದೇಶೀಯ ತಂತ್ರಜ್ಞಾನ ಬಳಸಿಕೊಂಡು ತನ್ನ 5-ಜಿ ಜಾಲ ಅಭಿವೃದ್ಧಿಪಡಿಸಿದಂತೆ ಮತ್ತು ಪ್ರಮುಖ ಕಂಪನಿಗಳು ಈಗ ಭಾರತದಲ್ಲಿ ಮೊಬೈಲ್ ಫೋನ್‌ಗಳನ್ನು ತಯಾರಿಸುತ್ತಿರುವಂತೆ, ಇದು ರಾಷ್ಟ್ರದ ಡಿಜಿಟಲ್ ಕ್ರಾಂತಿಗೆ ಹೊಸ ವೇಗ ನೀಡಿದೆ. ಇದರ ಪರಿಣಾಮವಾಗಿ, ತಂತ್ರಜ್ಞಾನ ವ್ಯಾಪ್ತಿಯನ್ನು ಮತ್ತು ಅದರ ಪ್ರಯೋಜನಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರಿಗೂ ವಿಸ್ತರಿಸಲು ನಮಗೆ ಸಾಧ್ಯವಾಗಿದೆ. ಅದೇ ರೀತಿ, ಭವಿಷ್ಯದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಮ್ಮ ಸಾಮರ್ಥ್ಯ ಮತ್ತು ಮೇಕ್ ಇನ್ ಇಂಡಿಯಾದ ಯಶಸ್ಸು ಸಾಮಾನ್ಯ ಜನರನ್ನು ಭವಿಷ್ಯಕ್ಕಾಗಿ ಸಜ್ಜುಗೊಳಿಸುತ್ತದೆ. ಸೂಪರ್‌ಕಂಪ್ಯೂಟರ್‌ಗಳು ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳನ್ನು ನಡೆಸುತ್ತವೆ, ಹೊಸ ಸಾಧ್ಯತೆಗಳು ಮತ್ತು ಅವಕಾಶಗಳನ್ನು ಸೃಷ್ಟಿಸುತ್ತವೆ. ಸಾರ್ವಜನಿಕರು ಇದರಿಂದ ನೇರವಾಗಿ ಪ್ರಯೋಜನ ಪಡೆಯುತ್ತಾರೆ, ಅವರು ಹಿಂದೆ ಬೀಳದೆ ಪ್ರಪಂಚದ ಇತರ ಭಾಗಗಳೊಂದಿಗೆ ಪ್ರಗತಿ ಸಾಧಿಸುತ್ತಾರೆ.

ನನ್ನ ದೇಶದ ಯುವಕರಿಗೆ ಭಾರತವು ಜಾಗತಿಕವಾಗಿ ಅತ್ಯಂತ ಕಿರಿಯ ರಾಷ್ಟ್ರವಾಗಿರುವಾಗ ಮತ್ತು ಭವಿಷ್ಯವು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಡೆಸಲ್ಪಡುವುದರಿಂದ, ಇದು ಅಸಂಖ್ಯಾತ ಹೊಸ ಅವಕಾಶಗಳಿಗೆ ಬಾಗಿಲು ತೆರೆಯುವ ಕ್ಷಣವಾಗಿದೆ. ಈ ಗಮನಾರ್ಹ ಸಾಧನೆಗಳಿಗಾಗಿ ನಾನು ಯುವಕರಿಗೆ ಮತ್ತು ನನ್ನ ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಮ್ಮ ಯುವಜನರು ಮತ್ತು ಸಂಶೋಧಕರು ವಿಜ್ಞಾನ ಕ್ಷೇತ್ರದಲ್ಲಿ ಹೊಸದನ್ನು ಅನ್ವೇಷಿಸಲು ಈ ಸುಧಾರಿತ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

ಧನ್ಯವಾದಗಳು!

 

*****