Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಪ್ಟೆಂಬರ್ 26 ರಂದು ಮಹಾರಾಷ್ಟ್ರಕ್ಕೆ ಪ್ರಧಾನಮಂತ್ರಿ ಭೇಟಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26ರಂದು(ನಾಳೆ) ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಜಿಲ್ಲಾ ನ್ಯಾಯಾಲಯ ಮೆಟ್ರೋ ನಿಲ್ದಾಣದಲ್ಲಿ ಅವರು ಜಿಲ್ಲಾ ನ್ಯಾಯಾಲಯ-ಪುಣೆಯ ಸ್ವರ್ಗೇಟ್‌ ವರೆಗೆ ಸಂಚರಿಸುವ ಮೆಟ್ರೋ ರೈಲಿಗೆ ಹಸಿರುನಿಶಾನೆ ತೋರಲಿದ್ದಾರೆ. ನಂತರ ಸಂಜೆ 6:30ರ ಸುಮಾರಿಗೆ ಅವರು ಸುಮಾರು 20,900 ಕೋಟಿ ರೂ. ವೆಚ್ಚದ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಪುಣೆ ಮೆಟ್ರೋ ವಿಭಾಗದ ಉದ್ಘಾಟನೆಯು ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್‌ವರೆಗಿನ ಪುಣೆ ಮೆಟ್ರೋ ರೈಲು ಯೋಜನೆ(ಹಂತ-1) ಪೂರ್ಣಗೊಂಡಿರುವುದನ್ನು ಸೂಚಿಸುತ್ತದೆ. ಜಿಲ್ಲಾ ನ್ಯಾಯಾಲಯ-ಸ್ವರ್ಗೇಟ್ ನಡುವಿನ ಭೂಗತ ಮಾರ್ಗ ನಿರ್ಮಾಣಕ್ಕೆ ಸುಮಾರು 1,810 ಕೋಟಿ ರೂ. ವೆಚ್ಚವಾಗಿದೆ.

ಇದಲ್ಲದೆ, ಸುಮಾರು 2,950 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ಪುಣೆ ಮೆಟ್ರೋ ಹಂತ-1ರ ಸ್ವರ್ಗೇಟ್-ಕಟ್ರಾಜ್ ಮಾರ್ಗ ವಿಸ್ತರಣೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 5.46 ಕಿಮೀ ಉದ್ದದ ಪುಣೆ ದಕ್ಷಿಣ ಭಾಗದ ಮಾರ್ಗ ವಿಸ್ತರಣೆಯು ಮಾರ್ಕೆಟ್ ಯಾರ್ಡ್, ಪದ್ಮಾವತಿ ಮತ್ತು ಕಾಟ್ರಾಜ್ ಎಂಬ 3 ನಿಲ್ದಾಣಗಳನ್ನು ಸಂಪರ್ಕಿಸುವ ಸಂಪೂರ್ಣ ಭೂಗತ ಮಾರ್ಗವಾಗಿದೆ.

ಭಿದೇವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥದ ಚೊಚ್ಚಲ ಬಾಲಕಿಯರ ಶಾಲೆ ಕಟ್ಟಡ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸೂಪರ್‌ಕಂಪ್ಯೂಟಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಧಾನಿ ಬದ್ಧತೆಗೆ ಅನುಗುಣವಾಗಿ, ಮೋದಿ ಅವರು ಸುಮಾರು 130 ಕೋಟಿ ರೂ ಮೌಲ್ಯದ 3 ಪರಮ್ ರುದ್ರ ಸೂಪರ್‌ಕಂಪ್ಯೂಟರ್‌ಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಷನ್(ಎನ್ಎಸ್ಎಂ) ಅಡಿ,  ಇವುಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಸೂಪರ್ ಕಂಪ್ಯೂಟರ್‌ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತಾದಲ್ಲಿ ಪ್ರವರ್ತಕ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವಂತೆ ನಿಯೋಜಿಸಲಾಗಿದೆ. ಪುಣೆಯಲ್ಲಿರುವ ದೈತ್ಯ ಮೀಟರ್ ರೇಡಿಯೊ ಟೆಲಿಸ್ಕೋಪ್(ಜಿಎಂಆರ್|ಟಿ) ವೇಗದ ರೇಡಿಯೊ ಸ್ಫೋಟಗಳು (ಎಫ್ಆರ್|ಬಿಗಳು) ಮತ್ತು ಇತರೆ ಖಗೋಳ ವಿದ್ಯಮಾನಗಳನ್ನು ಅನ್ವೇಷಿಸಲು ಸೂಪರ್‌ಕಂಪ್ಯೂಟರ್ ಅನ್ನು ನಿಯಂತ್ರಿಸುತ್ತದೆ. ದೆಹಲಿಯಲ್ಲಿರುವ ಇಂಟರ್ ಯೂನಿವರ್ಸಿಟಿ ವೇಗವರ್ಧಕ ಕೇಂದ್ರ(ಐಯುಎಸಿ)ವು ವಸ್ತು ವಿಜ್ಞಾನ ಮತ್ತು ಪರಮಾಣು ಭೌತಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಸಂಶೋಧನೆ ಹೆಚ್ಚಿಸುತ್ತದೆ. ಕೋಲ್ಕತ್ತಾದ ಎಸ್.ಎನ್. ಬೋಸ್ ಸೆಂಟರ್ ಭೌತಶಾಸ್ತ್ರ, ವಿಶ್ವವಿಜ್ಞಾನ ಮತ್ತು ಭೂ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಮುಂದುವರಿದ ಸಂಶೋಧನೆಗೆ ಚಾಲನೆ ನೀಡುತ್ತದೆ.

ಹವಾಮಾನ ಮತ್ತು ಹವಾಮಾನ ಸಂಶೋಧನೆಗೆ ಅನುಗುಣವಾಗಿ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್(ಎಚ್|ಪಿಸಿ) ವ್ಯವಸ್ಥೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಯೋಜನೆಯು 850 ಕೋಟಿ ರೂ. ಹೂಡಿಕೆ ಪ್ರತಿನಿಧಿಸುತ್ತದೆ. ಹವಾಮಾನ ಶಾಸ್ತ್ರದ ಅನ್ವಯಗಳಿಗೆ ಭಾರತದ ಕಂಪ್ಯೂಟಿಂಗ್ ಸಾಮರ್ಥ್ಯಗಳಲ್ಲಿ ಗಮನಾರ್ಹವಾದ ಹೂಡಿಕೆಯನ್ನು ಇದು ಗುರುತಿಸುತ್ತದೆ. ಪುಣೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೊರಾಲಜಿ(ಐಐಟಿಎಂ) ಮತ್ತು ನೊಯ್ಡಾದ ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ(ಎನ್|ಸಿಎಂಆರ್|ಡಬ್ಲ್ಯುಎಫ್), ಈ 2 ಪ್ರಮುಖ ತಾಣಗಳಲ್ಲಿ ನೆಲೆಗೊಂಡಿರುವ ಎಚ್|ಪಿಸಿ ವ್ಯವಸ್ಥೆಯು ಅಸಾಧಾರಣ ಕಂಪ್ಯೂಟಿಂಗ್ ಶಕ್ತಿ ಹೊಂದಿದೆ. ಹೊಸ ಎಚ್|ಪಿಸಿ ವ್ಯವಸ್ಥೆಗಳಿಗೆ ‘ಅರ್ಕಾ’ ಮತ್ತು ‘ಅರುಣಿಕಾ’ ಎಂದು ಹೆಸರಿಸಲಾಗಿದೆ, ಇದು ಸೂರ್ಯನೊಂದಿಗಿನ ಅವರ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಈ ಹೆಚ್ಚಿನ ರೆಸಲ್ಯೂಶನ್ ಮಾದರಿಗಳು ಉಷ್ಣವಲಯದ ಚಂಡಮಾರುತಗಳು, ಭಾರಿ ಮಳೆ, ಗುಡುಗು, ಆಲಿಕಲ್ಲುಗಳು, ಶಾಖದ ಅಲೆಗಳು, ಬರಗಳು ಮತ್ತು ಇತರ ನಿರ್ಣಾಯಕ ಹವಾಮಾನ ವಿದ್ಯಮಾನಗಳಿಗೆ ಸಂಬಂಧಿಸಿದ ಮುನ್ಸೂಚನೆಗಳ ನಿಖರತೆ ಮತ್ತು ಪ್ರಮುಖ ಸಮಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ.

10,400 ಕೋಟಿ ರೂ. ಮೌಲ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದ ವಿವಿಧ ಉಪಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಉಪಕ್ರಮಗಳು ಇಂಧನ, ಮೂಲಸೌಕರ್ಯ, ಸುರಕ್ಷತೆ ಮತ್ತು ಟ್ರಕ್ ಮತ್ತು ಕ್ಯಾಬ್ ಚಾಲಕರ ಅನುಕೂಲತೆ, ಸ್ವಚ್ಛ ಚಲನಶೀಲತೆ ಮತ್ತು ಸುಸ್ಥಿರ ಭವಿಷ್ಯದ ಮೇಲೆ ಗಮನ ಕೇಂದ್ರೀಕರಿಸುತ್ತವೆ.

ವಾಹನಗಳ ಚಾಲನೆ ಆರಾಮದಾಯಕವಾಗಿಸಲು, ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ, ಪಂಜಾಬಿನ ಫತೇಘರ್ ಸಾಹಿಬ್, ಗುಜರಾತಿನ ಸೋಂಗಾಧ್,  ಕರ್ನಾಟಕದ ಬೆಳಗಾವಿ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಟ್ರಕ್ ಚಾಲಕರಿಗೆ ರಸ್ತೆ ಬದಿಯ ಸೌಕರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಟ್ರಕ್ಕರ್‌ಗಳು ಮತ್ತು ಕ್ಯಾಬ್ ಚಾಲಕರು ದೀರ್ಘ ಪ್ರಯಾಣ ಸಮಯದಲ್ಲಿ ಆರಾಮದಾಯಕವಾಗಿ ವಿರಮಿಸಲು ಪೂರಕವಾದ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೈಗೆಟುಕುವ ಬೋರ್ಡಿಂಗ್, ವಸತಿ ಸೌಲಭ್ಯಗಳು, ಸ್ವಚ್ಛ ಶೌಚಾಲಯಗಳು, ಸುರಕ್ಷಿತ ಪಾರ್ಕಿಂಗ್ ಸ್ಥಳ, ಅಡುಗೆ ಪ್ರದೇಶ, ವೈಫೈ, ಜಿಮ್ ಇತ್ಯಾದಿಗಳನ್ನು 1,000 ಚಿಲ್ಲರೆ ಮಳಿಗೆಗಳಲ್ಲಿ ಸುಮಾರು 2,170 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಒಂದೇ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್|ಜಿ, ಇವಿ, ಸಿಬಿಜಿ, ಎಥೆನಾಲ್ ಮಿಶ್ರಿತ ಪೆಟ್ರೋಲ್(ಇಬಿಪಿ) ಮುಂತಾದ ಬಹು-ಇಂಧನ ಆಯ್ಕೆಗಳನ್ನು ಅಭಿವೃದ್ಧಿಪಡಿಸಲು, ಪ್ರಧಾನಿ ಅವರು ಇಂಧನ ಕೇಂದ್ರಗಳನ್ನು ಆರಂಭಿಸಲಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಸುವರ್ಣ ಚತುಷ್ಪಥ, ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳು ಮತ್ತು ಇತರ ಪ್ರಮುಖ ಹೆದ್ದಾರಿಗಳಲ್ಲಿ ಸುಮಾರು 4,000 ಇಂಧನ ಕೇಂದ್ರಗಳನ್ನು 6000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಇಂಧನ ಬಯಸುವ ಗ್ರಾಹಕರಿಗೆ ಒಂದೇ ಸೂರಿನಡಿ ಪರ್ಯಾಯ ಇಂಧನಗಳನ್ನು ಒದಗಿಸುವ ಮೂಲಕ ತಡೆರಹಿತ ಚಲನಶೀಲತೆ ಒದಗಿಸಲು ಇಂಧನ ಕೇಂದ್ರಗಳು ಸಹಾಯ ಮಾಡುತ್ತವೆ.

ಹಸಿರು ಇಂಧನ, ಇಂಗಾಲ ಹೊರಸೂಸುವಿಕೆ ನಿಯಂತ್ರಣ ಮತ್ತು ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಕ್ರಮಗಳ ಸುಗಮ ಸ್ಥಿತ್ಯಂತರ ಸುಲಭಗೊಳಿಸಲು ಮತ್ತು ಎಲೆಕ್ಟ್ರಿಕ್ ವಾಹನ ಚಾಲಕರ ವ್ಯಾಪ್ತಿಯ ಆತಂಕವನ್ನು ಕಡಿಮೆ ಮಾಡಲು, ಪ್ರಧಾನ ಮಂತ್ರಿ ಅವರು 500 ಇವಿ ಚಾರ್ಜಿಂಗ್ ಸೌಲಭ್ಯಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದಲ್ಲದೆ, 2025ರ ವೇಳೆಗೆ ಅಂದಾಜು 1,500 ಕೋಟಿ ರೂ. ವೆಚ್ಚದಲ್ಲಿ 10,000 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

ಮಹಾರಾಷ್ಟ್ರದ 3 ಸೇರಿದಂತೆ ದೇಶಾದ್ಯಂತ 20 ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಕೇಂದ್ರಗಳನ್ನು ಪ್ರಧಾನಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ. ದೂರದ ಸಾರಿಗೆಗಾಗಿ ಎಲ್‌ಎನ್‌ಜಿಯಂತಹ ಶುದ್ಧ ಇಂಧನ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಲು, ದೇಶದ ವಿವಿಧ ರಾಜ್ಯಗಳಲ್ಲಿ 50 ಎಲ್‌ಎನ್‌ಜಿ ಇಂಧನ ಕೇಂದ್ರಗಳನ್ನು ತೈಲ ಮತ್ತು ಅನಿಲ ಕಂಪನಿಗಳು ಸುಮಾರು 500 ಕೋಟಿ. ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿವೆ.

ಪ್ರಧಾನಿ ಅವರು ಸುಮಾರು 225 ಕೋಟಿ ರೂಪಾಯಿ ಮೌಲ್ಯದ 1,500 ಇ20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಬಿಡಿ ಮಾರಾಟ ಮಳಿಗೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

ಪ್ರವಾಸಿಗರು, ವ್ಯಾಪಾರ ಪ್ರಯಾಣಿಕರು ಮತ್ತು ಹೂಡಿಕೆದಾರರಿಗೆ ಸೋಲಾಪುರವನ್ನು ಹೆಚ್ಚು ಪ್ರವೇಶಿಸುವಂತೆ ಮಾಡುವ ಮೂಲಕ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುವ ಸೋಲಾಪುರ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅಸ್ತಿತ್ವದಲ್ಲಿರುವ ಸೊಲ್ಲಾಪುರ ಟರ್ಮಿನಲ್|ನಲ್ಲಿ ವಾರ್ಷಿಕ ಸುಮಾರು 4.1 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುವಂತೆ ಕಟ್ಟಡ ನವೀಕರಿಸಲಾಗಿದೆ.

ಭಾರತ ಸರ್ಕಾರದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿ, 7,855 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಪರಿವರ್ತನೀಯ ಯೋಜನೆಯಾದ ಬಿಡ್ಕಿನ್ ಕೈಗಾರಿಕಾ ಪ್ರದೇಶವನ್ನು ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ದಕ್ಷಿಣಕ್ಕೆ 20 ಕಿಮೀ ದೂರದಲ್ಲಿದೆ. ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅಡಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಮರಾಠವಾಡ ಪ್ರದೇಶದಲ್ಲಿ ರೋಮಾಂಚಕ ಆರ್ಥಿಕ ಕೇಂದ್ರವಾಗುವ ಅಪಾರ ಸಾಮರ್ಥ್ಯ ಹೊಂದಿದೆ. ಒಟ್ಟಾರೆ, 6,400 ಕೋಟಿ ರೂ. ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, 3 ಹಂತಗಳಲ್ಲಿ ಅಭಿವೃದ್ಧಿ ಆಗಲಿದೆ.

 

*****