ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 20 ರಂದು ಮಹಾರಾಷ್ಟ್ರದ ವಾರ್ಧಾಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:30 ರ ಸುಮಾರಿಗೆ, ಅವರು ಪಿಎಂ ವಿಶ್ವಕರ್ಮ ಅಡಿಯಲ್ಲಿ ಒಂದು ವರ್ಷದ ಪ್ರಗತಿಯನ್ನು ಆಚರಿಸುತ್ತಿರುವ ರಾಷ್ಟ್ರೀಯ ‘ಪಿಎಂ ವಿಶ್ವಕರ್ಮ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಸಮಯದಲ್ಲಿ, ಪ್ರಧಾನಮಂತ್ರಿಯವರು ಪಿಎಂ ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣಪತ್ರಗಳು ಮತ್ತು ಸಾಲಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆಯಡಿ ಕರಕುಶಲ ಕಲಾವಿದರಿಗೆ ನೀಡಲಾಗುವ ಬೆಂಬಲವನ್ನು ಸಂಕೇತಿಸುವ ರೀತಿಯಲ್ಲಿ, ಅವರು 18 ಟ್ರೇಡ್ ಗಳ ಅಡಿಯಲ್ಲಿ 18 ಫಲಾನುಭವಿಗಳಿಗೆ ಪಿಎಂ ವಿಶ್ವಕರ್ಮ ಅಡಿಯಲ್ಲಿ ಸಾಲವನ್ನು ವಿತರಿಸಲಿದ್ದಾರೆ. ಅವರ ಪರಂಪರೆ ಮತ್ತು ಸಮಾಜಕ್ಕೆ ನೀಡಿದ ಶಾಶ್ವತ ಕೊಡುಗೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಒಂದು ವರ್ಷದ ಪ್ರಗತಿಯನ್ನು ಗುರುತಿಸಲು ಸ್ಮರಣೀಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.
ಪ್ರಧಾನಮಂತ್ರಿಯವರು ಮಹಾರಾಷ್ಟ್ರದ ಅಮರಾವತಿಯಲ್ಲಿ ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ರೀಜನ್ಸ್ ಅಂಡ್ ಅಪ್ಯಾರೆಲ್ (ಪಿಎಂ ಮಿತ್ರ) ಪಾರ್ಕ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 1000 ಎಕರೆ ವಿಸ್ತೀರ್ಣದ ಈ ಪಾರ್ಕ್ ಅನ್ನು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (ಎಂಐಡಿಸಿ) ರಾಜ್ಯ ಅನುಷ್ಠಾನ ಸಂಸ್ಥೆಯಾಗಿ ಅಭಿವೃದ್ಧಿಪಡಿಸುತ್ತಿದೆ. ಜವಳಿ ಉದ್ಯಮಕ್ಕಾಗಿ 7 ಪಿಎಂ ಮಿತ್ರ ಪಾರ್ಕ್ ಗಳನ್ನು ಸ್ಥಾಪಿಸಲು ಭಾರತ ಸರ್ಕಾರ ಅನುಮೋದನೆ ನೀಡಿತ್ತು. ಪಿಎಂ ಮಿತ್ರ ಪಾರ್ಕ್ ಗಳು ಭಾರತವನ್ನು ಜಾಗತಿಕ ಜವಳಿ ತಯಾರಿಕೆ ಮತ್ತು ರಫ್ತು ಕೇಂದ್ರವನ್ನಾಗಿ ಮಾಡುವ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ವಿದೇಶಿ ನೇರ ಹೂಡಿಕೆ (FDI) ಸೇರಿದಂತೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುವ ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ವಲಯದಲ್ಲಿ ಹೊಸತನ ಹಾಗೂ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಪ್ರಧಾನಮಂತ್ರಿಯವರು ಮಹಾರಾಷ್ಟ್ರ ಸರ್ಕಾರದ “ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರ” ಯೋಜನೆಗೆ ಚಾಲನೆ ನೀಡಲಿದ್ದಾರೆ. 15 ರಿಂದ 45 ವರ್ಷದೊಳಗಿನ ಯುವಕರಿಗೆ ತರಬೇತಿ ನೀಡಲು ರಾಜ್ಯದಾದ್ಯಂತ ಪ್ರಸಿದ್ಧ ಕಾಲೇಜುಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಿಂದ ಅವರು ಸ್ವಾವಲಂಬಿಗಳಾಗಲು ಮತ್ತು ವಿವಿಧ ಉದ್ಯೋಗಾವಕಾಶಗಳನ್ನು ಪಡೆಯಬಹುದು. ರಾಜ್ಯಾದ್ಯಂತ ಸುಮಾರು 1,50,000 ಯುವಕರು ಪ್ರತಿ ವರ್ಷ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆಯುತ್ತಾರೆ.
ಪ್ರಧಾನಮಂತ್ರಿಯವರು “ಪುಣ್ಯಶ್ಲೋಕ ಅಹಲ್ಯಾ ದೇವಿ ಹೋಳ್ಕರ್ ಮಹಿಳಾ ಸ್ಟಾರ್ಟ್ಅಪ್ ಯೋಜನೆ ” ಯನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಯಡಿಯಲ್ಲಿ, ಮಹಾರಾಷ್ಟ್ರದಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ ಗಳಿಗೆ ಆರಂಭಿಕ ಹಂತದಲ್ಲಿ ನೆರವು ನೀಡಲಾಗುತ್ತದೆ. ಯೋಜನೆಯಡಿ 25 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುವುದು. ಸರ್ಕಾರವು ನಿರ್ದಿಷ್ಟಪಡಿಸಿದಂತೆ ಈ ಯೋಜನೆಯಡಿಯಲ್ಲಿ ಒಟ್ಟು ನಿಬಂಧನೆಗಳ 25 ಪ್ರತಿಶತವನ್ನು ಹಿಂದುಳಿದ ವರ್ಗಗಳ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಇದು ಮಹಿಳಾ ನೇತೃತ್ವದ ಸ್ಟಾರ್ಟ್ಅಪ್ ಗಳು ಸ್ವಾವಲಂಬಿ ಮತ್ತು ಸ್ವತಂತ್ರವಾಗಲು ಸಹಾಯ ಮಾಡುತ್ತದೆ.
*****