Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಲಖ್ಪತಿ ದೀದಿ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಲಖ್ಪತಿ ದೀದಿ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಜಲಗಾಂವ್ ನಲ್ಲಿ ನಡೆದ ಲಖ್ಪತಿ ದೀದಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಸರ್ಕಾರದ ಮೂರನೇ ಅವಧಿಯಲ್ಲಿ ಇತ್ತೀಚೆಗೆ ಲಖ್ಪತಿಯಾದ 11 ಲಕ್ಷ ಹೊಸ ಲಖ್ಪತಿ ದೀದಿಗಳಿಗೆ ಅವರು ಪ್ರಮಾಣಪತ್ರಗಳನ್ನು ವಿತರಿಸಿದರು ಮತ್ತು ಸನ್ಮಾನಿಸಿದರು.

ಪ್ರಧಾನಮಂತ್ರಿಯವರು ದೇಶಾದ್ಯಂತದ ಲಖ್ಪತಿ ದೀದಿಗಳೊಂದಿಗೆ ಸಂವಾದ ನಡೆಸಿದರು. ಶ್ರೀ ಮೋದಿ ಅವರು 2,500 ಕೋಟಿ ರೂ.ಗಳ ಆವರ್ತ ನಿಧಿಯನ್ನು ಬಿಡುಗಡೆ ಮಾಡಿದರು, ಇದು 4.3 ಲಕ್ಷ ಸ್ವಸಹಾಯ ಗುಂಪುಗಳ (SHG) ಸುಮಾರು 48 ಲಕ್ಷ ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ. ಅವರು 5,000 ಕೋಟಿ ರೂ.ಗಳ ಬ್ಯಾಂಕ್ ಸಾಲವನ್ನು ವಿತರಿಸಿದರು, ಇದು 2.35 ಲಕ್ಷ ಸ್ವಸಹಾಯ ಗುಂಪುಗಳ 25.8 ಲಕ್ಷ ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ. ಲಖ್ಪತಿ ದೀದಿ ಯೋಜನೆ ಪ್ರಾರಂಭವಾದಾಗಿನಿಂದ, ಒಂದು ಕೋಟಿ ಮಹಿಳೆಯರನ್ನು ಈಗಾಗಲೇ ಲಖ್ಪತಿ ದೀದಿಗಳನ್ನಾಗಿ ಮಾಡಲಾಗಿದೆ ಮತ್ತು ಸರ್ಕಾರವು ಮೂರು ಕೋಟಿ ಲಖ್ಪತಿ ದೀದಿಗಳ ಗುರಿಯನ್ನು ನಿಗದಿಪಡಿಸಿದೆ.

ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾತೆಯರು ಮತ್ತು ಸಹೋದರಿಯರ ಬೃಹತ್ ಸಮೂಹಕ್ಕೆ ಕೃತಜ್ಞತೆ ಸಲ್ಲಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಆರಂಭಿಸಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ನೇಪಾಳದ ತನಾಹುನ್ ನಲ್ಲಿ ಸಂಭವಿಸಿದ ಬಸ್ ಅಪಘಾತ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಜಲಗಾಂವ್ ನ ಅನೇಕ ಮಂದಿ ಈ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಅಧಿಕಾರಿಗಳು ತಮ್ಮ ನೇಪಾಳದ ಸಹವರ್ತಿಗಳನ್ನು ಸಂಪರ್ಕಿಸಿದ್ದಾರೆ ಮತ್ತು ಕೇಂದ್ರ ಸಚಿವೆ ರಕ್ಷಾತಾಯಿ ಖಾಡ್ಸೆ ಅವರನ್ನು ನೇಪಾಳಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮೃತರ ಪಾರ್ಥಿವ ಶರೀರವನ್ನು ವಿಶೇಷ ವಾಯುಪಡೆಯ ವಿಮಾನದ ಮೂಲಕ ತರಲಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆ ನೀಡಿ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಪ್ರಧಾನ ಮಂತ್ರಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದರು.

ಲಖ್ಪತಿ ದೀದಿ ಸಮ್ಮೇಳನದ ಬೃಹತ್  ಕಾರ್ಯಕ್ರಮದಲ್ಲಿ ಮಾತೆಯರು  ಮತ್ತು ಸಹೋದರಿಯರನ್ನು ಒಳಗೊಂಡ  ಬೃಹತ್ ಜನಸಮೂಹದ ಹಾಜರಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶ್ರೀ ಮೋದಿ, “ಇಂದು, ಭಾರತದಾದ್ಯಂತ ಹರಡಿರುವ ಲಕ್ಷಾಂತರ ಮಹಿಳಾ ಎಸ್.ಎಚ್.ಜಿ.ಗಳಿಗೆ (SHG ) 6000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ವಿತರಿಸಲಾಗಿದೆ” ಎಂದು ಹೇಳಿದರು. ಈ ನಿಧಿಯು  ಅನೇಕ ಮಹಿಳೆಯರನ್ನು ‘ಲಖ್ಪತಿ ದೀದಿ’ಗಳಾಗಿ ಪರಿವರ್ತಿಸಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.  ಪ್ರಧಾನಿ ಈ ಸಂದರ್ಭ ಶುಭ ಕೋರಿದರು.

ಮಹಾರಾಷ್ಟ್ರದ ತಾಯಂದಿರು ಮತ್ತು ಸಹೋದರಿಯರು ರಾಜ್ಯದ ಭವ್ಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಒಂದು ನೋಟವನ್ನು ನೀಡುತ್ತಾರೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಒತ್ತಿ ಹೇಳಿದರು. “ಮಹಾರಾಷ್ಟ್ರದ ಸಂಪ್ರದಾಯಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ” ಎಂದು ಪ್ರಧಾನಿ ಹೇಳಿದರು. ಇತ್ತೀಚೆಗೆ ಪೋಲೆಂಡ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದ ಸಂಸ್ಕೃತಿಗೆ ಸಾಕ್ಷಿಯಾಗಿರುವುದನ್ನು ಪ್ರಸ್ತಾಪಿಸಿದ ಅವರು, ಮಹಾರಾಷ್ಟ್ರದ ಜನರನ್ನು ಪೋಲಿಷ್ ನಾಗರಿಕರು ಹೆಚ್ಚು ಗೌರವಿಸುತ್ತಾರೆ ಎಂದರು. ಪೋಲೆಂಡ್ ಜನತೆಯಿಂದ  ಕೊಲ್ಹಾಪುರದ ಜನರ ಸೇವಾ ಮನೋಭಾವ ಮತ್ತು ಆತಿಥ್ಯಕ್ಕೆ ಸಮರ್ಪಿತವಾಗಿರುವ ಕೊಲ್ಹಾಪುರ ಸ್ಮಾರಕದ ಬಗ್ಗೆ ಅವರು ಮಾತನಾಡಿದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಶಿವಾಜಿ ಮಹಾರಾಜರು ಹಾಕಿಕೊಟ್ಟ ಸಂಪ್ರದಾಯಗಳನ್ನು ಅನುಸರಿಸಿ ಕೊಲ್ಹಾಪುರದ ರಾಜಮನೆತನವು ಪೋಲೆಂಡ್ ಸಾವಿರಾರು ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಾವು ಆ ರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಂತಹ ಶೌರ್ಯದ ಕಥೆಗಳನ್ನು ತಮಗೆ ವಿವರಿಸಿದಾಗ ತಾವು ಹೆಮ್ಮೆ ಅನುಭವಿಸಿದ್ದಾಗಿಯೂ ಹೇಳಿದರು. ಇದೇ ಮಾರ್ಗವನ್ನು ಅನುಸರಿಸುವಂತೆ ಮತ್ತು ವಿಶ್ವದಲ್ಲಿ ರಾಜ್ಯದ ಹೆಸರನ್ನು ಇನ್ನಷ್ಟು ಎತ್ತರಕ್ಕೇರಿಸಲು  ನಿರಂತರ ಪ್ರಯತ್ನಗಳನ್ನು ಮಾಡುವಂತೆ ಅವರು ನಾಗರಿಕರಲ್ಲಿ ಮನವಿ ಮಾಡಿದರು.  

ಮಹಾರಾಷ್ಟ್ರದ ಸಂಸ್ಕೃತಿಯು ನೆಲದ ಶೌರ್ಯವಂತ ಮತ್ತು ಧೈರ್ಯಶಾಲಿ ಮಹಿಳೆಯರ ಸೃಷ್ಟಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಇಡೀ ಭಾರತವು ಮಹಾರಾಷ್ಟ್ರದ ‘ಮಾತೃಶಕ್ತಿ’ಯಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ನುಡಿದರು. “ನಮ್ಮ ಜಲಗಾಂವ್ ವಾರ್ಕರಿ ಸಂಪ್ರದಾಯದ ಪುಣ್ಯಕ್ಷೇತ್ರವಾಗಿದೆ. ಇದು ಮಹಾನ್ ಸಂತ ಮುಕ್ತೈ ಅವರ ನೆಲೆ/ಭೂಮಿ.” ಅವರ ಸಾಧನೆಗಳು ಮತ್ತು ತಪಸ್ಸು ಇಂದಿನ ಪೀಳಿಗೆಗೂ ಸ್ಫೂರ್ತಿಯಾಗಿದೆ ಎಂದು ಅವರು ವಿವರಿಸಿದರು.

ಇಂದಿಗೂ ಬಹಿನಾಬಾಯಿಯವರ ಕವಿತೆಗಳು ಸಮಾಜವನ್ನು ಸ್ಟೀರಿಯೊಟೈಪ್ ಗಳನ್ನು ಮೀರಿ ಯೋಚಿಸುವಂತೆ ಒತ್ತಾಯಿಸುತ್ತವೆ ಎಂದು ಶ್ರೀ ಮೋದಿ ಹೇಳಿದರು. “ಅದು ಮಹಾರಾಷ್ಟ್ರದ ಯಾವುದೇ ಮೂಲೆಯಾಗಿರಲಿ, ಇತಿಹಾಸದ ಯಾವುದೇ ಅವಧಿಯಾಗಿರಲಿ, ಮಾತೃಶಕ್ತಿಯ ಕೊಡುಗೆಗೆ ಸಾಟಿಯಿಲ್ಲ” ಎಂದು ಪ್ರಧಾನಿ ಹೇಳಿದರು. ಮಹಾರಾಷ್ಟ್ರದ ಮಾತೃಶಕ್ತಿಯ ಬಗ್ಗೆ ಮತ್ತಷ್ಟು ವಿವರಿಸಿದ ಶ್ರೀ ಮೋದಿ, ಮಾತಾ ಜೀಜಾಬಾಯಿ ಅವರು ಛತ್ರಪತಿ ಶಿವಾಜಿಯ ಜೀವನಕ್ಕೆ ನಿರ್ದೇಶನ ನೀಡಿದರೆ, ಮತ್ತೊಬ್ಬ ಮರಾಠಿ ಮಹಿಳೆ ಸಾವಿತ್ರಿಬಾಯಿ ಫುಲೆ ಅವರು ಸಮಾಜ ಮಹತ್ವ ಕೊಡದೇ ಇದ್ದ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಅವರ ಕೆಲಸದ ಹಿಂದಿನ ಶಕ್ತಿಯಾಗಿದ್ದರು ಎಂದರು.

ಭಾರತದ ಮಹಿಳಾ ಶಕ್ತಿ ಸದಾ ಸಮಾಜ ಮತ್ತು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸಲು ಕೊಡುಗೆ ನೀಡಿದೆ ಎಂದು ಪ್ರಧಾನಿ ಹೇಳಿದರು. “ಇಂದು ಭಾರತವು ಅಭಿವೃದ್ಧಿ ಹೊಂದಲು ಪ್ರಯತ್ನಿಸುತ್ತಿರುವಾಗ, ನಮ್ಮ ಮಹಿಳಾ ಶಕ್ತಿ ಮತ್ತೊಮ್ಮೆ ಮುಂದೆ ಬರುತ್ತಿದೆ” ಎಂದು ಅವರು ಒತ್ತಿ ಹೇಳಿದರು. ಮಹಾರಾಷ್ಟ್ರದ ಮಹಿಳೆಯರ ಪ್ರಯತ್ನಗಳನ್ನು ಶ್ಲಾಘಿಸಿದ ಶ್ರೀ ಮೋದಿ, “ನಿಮ್ಮೆಲ್ಲರಲ್ಲೂ ರಾಜಮಾತಾ ಜೀಜಾಬಾಯಿ ಮತ್ತು ಸಾವಿತ್ರಿಬಾಯಿ ಫುಲೆ ಅವರ ಪ್ರಭಾವವನ್ನು ನಾನು ನೋಡುತ್ತಿದ್ದೇನೆ” ಎಂದು ಹೇಳಿದರು.

2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾವು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿಯವರು 3 ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದರು.  ಕಳೆದ 10 ವರ್ಷಗಳಲ್ಲಿ 1 ಕೋಟಿ ಲಖ್ಪತಿ ದೀದಿಗಳನ್ನು ರೂಪಿಸಲಾಗಿದೆ ಮತ್ತು ಕಳೆದ ಎರಡು ತಿಂಗಳಲ್ಲಿ 11 ಲಕ್ಷ ಹೊಸ ಲಖ್ಪತಿ ದೀದಿಗಳನ್ನು ರೂಪಿಸಲಾಗಿದೆ ಎಂದು ಪ್ರಧಾನಿಯವರು ಮಾಹಿತಿ ನೀಡಿದರು. “ಮಹಾರಾಷ್ಟ್ರದಲ್ಲೂ 1 ಲಕ್ಷ ಲಖ್ಪತಿ ದೀದಿಗಳನ್ನು ರೂಪಿಸಲಾಗಿದೆ. ” ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಅನೇಕ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೂಲಕ ಮಹಾರಾಷ್ಟ್ರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಬಲಪಡಿಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಂಪೂರ್ಣ ತಂಡ ಒಗ್ಗೂಡಿದೆ ಎಂದು ಒತ್ತಿ ಹೇಳಿದರು.

ಲಖ್ಪತಿ ದೀದಿ ಅಭಿಯಾನವು ಕೇವಲ ತಾಯಂದಿರು ಮತ್ತು ಸಹೋದರಿಯರ ಆದಾಯವನ್ನು ಹೆಚ್ಚಿಸುವ ಮಾರ್ಗವಲ್ಲ, ಆದರೆ ಕುಟುಂಬ ಮತ್ತು ಭವಿಷ್ಯದ ಪೀಳಿಗೆಯನ್ನು ಬಲಪಡಿಸುವ ಬೃಹತ್  ಅಭಿಯಾನವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಇದು ಗ್ರಾಮೀಣ ಆರ್ಥಿಕತೆಯನ್ನು ಪರಿವರ್ತಿಸುತ್ತಿದೆ ಎಂದರು. “ಇಲ್ಲಿ ಹಾಜರಿರುವ ಪ್ರತಿಯೊಬ್ಬ ಮಹಿಳೆಯೂ ತಾನು ಜೀವನೋಪಾಯವನ್ನು ಪ್ರಾರಂಭಿಸಿದಾಗ ಸಮಾಜದಲ್ಲಿ ತನ್ನ ಸಾಮಾಜಿಕ ಸ್ಥಾನಮಾನವು ಎತ್ತರಕ್ಕೇರುತ್ತದೆ  ಎಂಬುದನ್ನು ತಿಳಿದುಕೊಂಡಿರುತ್ತಾರೆ” ಎಂದು ಉದ್ಗರಿಸಿದ ಪ್ರಧಾನಿ, ಆದಾಯದ ಹೆಚ್ಚಳದೊಂದಿಗೆ ಕುಟುಂಬದ ಕೊಳ್ಳುವ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಹೇಳಿದರು. “ಒಬ್ಬ ಸಹೋದರಿ ಲಖ್ಪತಿ ದೀದಿಯಾದಾಗ ಇಡೀ ಕುಟುಂಬದ ಅದೃಷ್ಟವು ಬದಲಾಗುತ್ತದೆ” ಎಂದು ಅವರು ಹೇಳಿದರು.

ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಮಹಿಳೆಯರ ಕೊಡುಗೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಹಿಂದೆ ಮಹಿಳೆಯರ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು ಎಂಬುದರತ್ತ ಗಮನಸೆಳೆದರು. ದೇಶದ ಕೋಟ್ಯಂತರ ಮಹಿಳೆಯರು ಯಾವುದೇ ಆಸ್ತಿಯನ್ನು ಹೊಂದಿಲ್ಲ, ಇದು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಬ್ಯಾಂಕ್ ಸಾಲಗಳನ್ನು ಪಡೆಯಲು ದೊಡ್ಡ ಅಡಚಣೆಯಾಗಿದೆ ಎಂದು ಅವರು ಉಲ್ಲೇಖಿಸಿದರು. “ಆದ್ದರಿಂದ, ಮಹಿಳೆಯರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ನಾನು ಪ್ರತಿಜ್ಞೆ ಮಾಡಿದೆ, ಮತ್ತು ಮೋದಿ ಸರ್ಕಾರವು ಮಹಿಳೆಯರ ಹಿತದೃಷ್ಟಿಯಿಂದ ಒಂದರ ನಂತರ ಒಂದರಂತೆ ನಿರ್ಧಾರಗಳನ್ನು ತೆಗೆದುಕೊಂಡಿತು” ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ಸರ್ಕಾರದ 10 ವರ್ಷಗಳ ಆಡಳಿತವನ್ನು ಏಳು ದಶಕಗಳ ಹಿಂದಿನ ಸರ್ಕಾರಗಳೊಂದಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಹಿಂದಿನ ಯಾವುದೇ ಸರ್ಕಾರಗಳಿಗಿಂತ ಪ್ರಸ್ತುತ ಸರ್ಕಾರವು ಮಹಿಳೆಯರ ಹಿತದೃಷ್ಟಿಯಿಂದ ಹೆಚ್ಚಿನ ಕೆಲಸ ಮಾಡಿದೆ ಎಂದು ಹೇಳಿದರು.

ಬಡವರಿಗೆ ನೀಡುತ್ತಿರುವ ಮನೆಗಳನ್ನು ಆ ಮನೆಯ ಮಹಿಳೆಯ ಹೆಸರಿನಲ್ಲಿ ನೋಂದಾಯಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈವರೆಗೆ ನಿರ್ಮಿಸಲಾದ 4 ಕೋಟಿ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿವೆ ಎಂದು ಶ್ರೀ ಮೋದಿ ಹೇಳಿದರು. ಇನ್ನು ನಿರ್ಮಾಣವಾಗಲಿರುವ 3 ಕೋಟಿ ಮನೆಗಳಲ್ಲಿಯೂ ಹೆಚ್ಚಿನವುಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೈಗೊಂಡಿರುವ ಸುಧಾರಣೆಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಲ್ಲೂ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಮಹಿಳೆಯರ ಹೆಸರಿನಲ್ಲಿ ತೆರೆಯಲಾಗಿದೆ ಎಂದರು. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಫಲಾನುಭವಿಗಳಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ರಾಷ್ಟ್ರದ ತಾಯಂದಿರು ಮತ್ತು ಸಹೋದರಿಯರು ಇದ್ದಾರೆ ಎಂದು ಅವರು ಒತ್ತಿ ಹೇಳಿದರು.

ಹಿಂದೆ ಮಹಿಳೆಯರಿಗೆ ಸಾಲ ನೀಡುವುದರ ವಿರುದ್ಧ ತಮಗೆ ಹೇಗೆ ಎಚ್ಚರಿಕೆ ನೀಡಲಾಗಿತ್ತು ಎಂಬುದನ್ನು ಸ್ಮರಿಸಿದ ಶ್ರೀ ಮೋದಿ ಅವರು, ಮಾತೃಶಕ್ತಿಯ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅವರು ಪ್ರಾಮಾಣಿಕವಾಗಿ ಸಾಲವನ್ನು ತಪ್ಪದೇ ಮರುಪಾವತಿಸುತ್ತಾರೆ ಎಂದರು. ಮಹಿಳೆಯರ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಅವರು, ತಮ್ಮ ಸರ್ಕಾರವು ಪಿಎಂ ಮುದ್ರಾ ಯೋಜನೆಯ ಸಾಲದ ಮಿತಿಯನ್ನು 20 ಲಕ್ಷ ರೂ.ಗೆ ಹೆಚ್ಚಿಸಿದೆ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಾರಂಭಿಸಲಾದ ಸ್ವನಿಧಿ ಯೋಜನೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವನಿಧಿಯಲ್ಲಿಯೂ ಸಹ ಯಾವುದೇ ಖಾತರಿಯಿಲ್ಲದೆ ಸಾಲಗಳನ್ನು ನೀಡಲಾಗುತ್ತಿದೆ, ಅದರ ಪ್ರಯೋಜನಗಳು ಮಹಿಳೆಯರಿಗೆ ತಲುಪಿವೆ ಎಂದು ಒತ್ತಿ ಹೇಳಿದರು. ಕರಕುಶಲ ಕೆಲಸಗಳನ್ನು ಮಾಡುತ್ತಿರುವ ವಿಶ್ವಕರ್ಮ ಕುಟುಂಬಗಳ ಅನೇಕ ಮಹಿಳೆಯರಿಗೆ ತಮ್ಮ ಸರ್ಕಾರ ಯಾವುದೇ ಖಾತರಿಯಿಲ್ಲದೆ ಪ್ರಯೋಜನಗಳನ್ನು ವಿಸ್ತರಿಸಿದೆ ಎಂದೂ ಶ್ರೀ ಮೋದಿ ಹೇಳಿದರು.

ಸಖಿ ಮಂಡಲಿಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಮಹತ್ವವನ್ನು ಹಿಂದೆ ಗುರುತಿಸಲಾಗಿರಲಿಲ್ಲ, ಆದರೆ ಇಂದು ಅವು ಭಾರತದ ಆರ್ಥಿಕತೆಯಲ್ಲಿ ಬೃಹತ್ ಶಕ್ತಿಯಾಗುವ ಹಾದಿಯಲ್ಲಿವೆ ಎಂದು ಪ್ರಧಾನಿ ಹೇಳಿದರು. ಪ್ರತಿ ಗ್ರಾಮ ಮತ್ತು ಬುಡಕಟ್ಟು ಪ್ರದೇಶವು ಮಹಿಳಾ ಸ್ವಸಹಾಯ ಗುಂಪುಗಳು ತಂದ ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಹತ್ತು ಕೋಟಿ ಮಹಿಳೆಯರು ಅಭಿಯಾನಕ್ಕೆ ಸೇರಿದ್ದಾರೆ ಮತ್ತು ಕಡಿಮೆ ಬಡ್ಡಿದರದ ಸಾಲಗಳನ್ನು ಸುಲಭವಾಗಿ ಒದಗಿಸಲು ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2014 ರಲ್ಲಿ ಸ್ವಸಹಾಯ ಗುಂಪುಗಳಿಗೆ 25,000 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಬ್ಯಾಂಕ್ ಸಾಲವನ್ನು ಮಂಜೂರು ಮಾಡಲಾಗಿದ್ದು, ಇಂದು ಸಂಖ್ಯೆ ಕಳೆದ 10 ವರ್ಷಗಳಲ್ಲಿ 9 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಅವರು ವಿವರಿಸಿದರು. ಸರ್ಕಾರವು ಒದಗಿಸುವ ನೇರ ಸಹಾಯವನ್ನು ಸುಮಾರು 30 ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ತಾಯಂದಿರು ಮತ್ತು ಸಹೋದರಿಯರ ಪಾತ್ರಗಳನ್ನು ಇಂದು ವಿಸ್ತಾರಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರತಿ ಹಳ್ಳಿಯಲ್ಲಿ 1.25 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಸಖಿಗಳು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದಾರೆ, ಮಹಿಳೆಯರು ಡ್ರೋನ್ಗಳೊಂದಿಗೆ ಆಧುನಿಕ ಕೃಷಿಗೆ ಸಹಾಯ ಮಾಡಲು ಡ್ರೋನ್ ಪೈಲಟ್ಗಳಾಗಿದ್ದಾರೆ ಮತ್ತು ಜಾನುವಾರು ಸಾಕುವ ರೈತರಿಗೆ ಸಹಾಯ ಮಾಡಲು 2 ಲಕ್ಷ ಪಶು ಸಖಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಉದಾಹರಣೆ ನೀಡಿದರು. ಆಧುನಿಕ ಕೃಷಿ ಮತ್ತು ನೈಸರ್ಗಿಕ ಕೃಷಿಗಾಗಿ ನಾರಿಶಕ್ತಿಗೆ ನಾಯಕತ್ವವನ್ನು ನೀಡಲು ಕೃಷಿ ಸಖಿ ಕಾರ್ಯಕ್ರಮವನ್ನು ಪ್ರಾರಂಭಿಸುವುತ್ತಿರುವುದನ್ನೂ  ಪ್ರಧಾನಿ ಉಲ್ಲೇಖಿಸಿದರು. ಮುಂಬರುವ ದಿನಗಳಲ್ಲಿ ದೇಶದ ಪ್ರತಿ ಹಳ್ಳಿಯಲ್ಲಿ ಇಂತಹ ಲಕ್ಷಾಂತರ ಕೃಷಿ ಸಖಿಗಳನ್ನು ಸರ್ಕಾರ ಸೃಷ್ಟಿಸಲಿದೆ ಎಂದು ಅವರು ಹೇಳಿದರು. ಈ ಅಭಿಯಾನಗಳು ಹೆಣ್ಣುಮಕ್ಕಳಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಪ್ರಧಾನಿ ಹೇಳಿದರು. “ಹೆಣ್ಣು ಮಕ್ಕಳ ಶಕ್ತಿಯ ಬಗ್ಗೆ ಸಮಾಜದಲ್ಲಿ ಹೊಸ ಚಿಂತನೆಯನ್ನು ಮೂಡಿಸಲಾಗುವುದು” ಎಂದು ಶ್ರೀ ಮೋದಿ ಹೇಳಿದರು.

ಕಳೆದ ತಿಂಗಳು ಸದನವು ಅಂಗೀಕರಿಸಿದ ಕೇಂದ್ರ ಬಜೆಟ್ ಬಗ್ಗೆ ಪ್ರಸ್ತಾಪಿಸಿದ  ಪ್ರಧಾನಿ, ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳಿಗಾಗಿ 3 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಖಾನೆಗಳು ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್ ಗಳು ಮತ್ತು ಮಕ್ಕಳಿಗಾಗಿ ಶಿಶುಪಾಲನಾ ಸೌಲಭ್ಯಗಳಂತಹ ವಿಶೇಷ ಸೌಲಭ್ಯಗಳನ್ನು ರಚಿಸಲು ತೆಗೆದುಕೊಂಡ ನಿರ್ಧಾರಗಳನ್ನು ಅವರು ಉಲ್ಲೇಖಿಸಿದರು. ಒಂದು ಕಾಲದಲ್ಲಿ ಮಹಿಳೆಯರಿಗೆ ಸೀಮಿತವಾಗಿದ್ದ ಎಲ್ಲಾ ಕ್ಷೇತ್ರಗಳನ್ನು ಮಹಿಳೆಯರಿಗಾಗಿ ತೆರೆಯುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಒತ್ತಿಹೇಳಿದ ಅವರು, ಫೈಟರ್ ಪೈಲಟ್ಗಳು ಸೇರಿದಂತೆ ಎಲ್ಲಾ ಮೂರು ಸಶಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳು, ಸೈನಿಕ ಶಾಲೆಗಳು ಮತ್ತು ಅಕಾಡೆಮಿಗಳಿಗೆ ಪ್ರವೇಶ ಮತ್ತು ಪೊಲೀಸ್ ಪಡೆ ಮತ್ತು ಅರೆಸೈನಿಕ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವ ಉದಾಹರಣೆಗಳನ್ನು ನೀಡಿದರು.  ಹಳ್ಳಿಗಳಲ್ಲಿ ಕೃಷಿ ಮತ್ತು ಹೈನುಗಾರಿಕೆ ವಲಯದಿಂದ ಹಿಡಿದು ನವೋದ್ಯಮ ಕ್ರಾಂತಿಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು. ರಾಜಕೀಯದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅವರು ನಾರಿಶಕ್ತಿ ವಂದನ್ ಅಧಿನಿಯಮ್ ಬಗ್ಗೆಯೂ ಪ್ರಸ್ತಾಪಿಸಿದರು.

ಮಹಿಳೆಯರ ಸಬಲೀಕರಣದ ಜೊತೆಗೆ ಅವರ ಸುರಕ್ಷತೆಯು ರಾಷ್ಟ್ರದ ಉನ್ನತ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು. “ರಾಜ್ಯಗಳನ್ನು ಮೀರಿ ನನ್ನ ಸಹೋದರಿಯರು ಮತ್ತು ಹೆಣ್ಣುಮಕ್ಕಳ ನೋವು ಮತ್ತು ಕೋಪವನ್ನು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದು ಶ್ರೀ ಮೋದಿ ಹೇಳಿದರು. ಕಠಿಣ ನಿಲುವನ್ನು ಪುನರುಚ್ಚರಿಸಿದ  ಪ್ರಧಾನಿ, ಮಹಿಳೆಯರ ಮೇಲಿನ ದೌರ್ಜನ್ಯಗಳು ಕ್ಷಮಿಸಲಾಗದ ಪಾಪ ಕೃತ್ಯಗಳು ಮತ್ತು ತಪ್ಪಿತಸ್ಥರು ಹಾಗು ಆತನ ಸಹಚರರನ್ನು ಸುಮ್ಮನೆ ಬಿಡಬಾರದು” ಎಂದು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳಿಗೆ ನೆನಪಿಸಿದರು.

ಸಾರ್ವಜನಿಕ ಸಂಸ್ಥೆಗಳು, ಅದು ಆಸ್ಪತ್ರೆಯಾಗಿರಲಿ, ಶಾಲೆಯಾಗಿರಲಿ, ಕಚೇರಿಯಾಗಿರಲಿ ಅಥವಾ ಪೊಲೀಸ್ ವ್ಯವಸ್ಥೆಯಾಗಿರಲಿ, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಅವರ ಕಡೆಯಿಂದ ಯಾವುದೇ ರೀತಿಯ ನಿರ್ಲಕ್ಷ್ಯ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ಹೇಳಿದರು. “ಸರ್ಕಾರಗಳು ಬದಲಾಗಬಹುದು, ಆದರೆ ಸಮಾಜವಾಗಿ ಮತ್ತು ಸರ್ಕಾರವಾಗಿ ನಮ್ಮ ದೊಡ್ಡ ಜವಾಬ್ದಾರಿ ಮಹಿಳೆಯರ ಜೀವನ ಮತ್ತು ಘನತೆಯನ್ನು ರಕ್ಷಿಸುವುದು” ಎಂದು ಶ್ರೀ ಮೋದಿ ಹೇಳಿದರು.

ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ನಿರಂತರವಾಗಿ ಕಾನೂನುಗಳನ್ನು ಕಠಿಣಗೊಳಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ದೂರುಗಳಿಗಾಗಿ ಎಫ್ಐಆರ್ಗಳನ್ನು ಹಿಂದೆ ಸಮಯಕ್ಕೆ ಸರಿಯಾಗಿ ದಾಖಲಿಸಲಾಗುತ್ತಿರಲಿಲ್ಲ ಮತ್ತು ಪ್ರಕರಣಗಳು ಬಹಳ ಸಮಯ ತೆಗೆದುಕೊಳ್ಳುತ್ತಿದ್ದವು ಎಂದು ಗಮನಸೆಳೆದ ಪ್ರಧಾನಿ, ಭಾರತೀಯ ನ್ಯಾಯ ಸಂಹಿತಾದಲ್ಲಿ (ಬಿಎನ್ಎಸ್) ಅಂತಹ ಅಡೆತಡೆಗಳನ್ನು ತೆಗೆದುಹಾಕಲಾಗಿದೆ, ಅಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ಸಂಪೂರ್ಣ ಅಧ್ಯಾಯವೇ ಇದೆ ಎಂದು ಹೇಳಿದರು. ಸಂತ್ರಸ್ತರು ಪೊಲೀಸ್ ಠಾಣೆಗೆ ಹೋಗಲು ಬಯಸದಿದ್ದರೆ ಇ-ಎಫ್ಐಆರ್ ದಾಖಲಿಸಬಹುದು ಮತ್ತು ತ್ವರಿತ ಕ್ರಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಪೊಲೀಸ್ ಠಾಣೆ ಮಟ್ಟದಲ್ಲಿ ಇ-ಎಫ್ಐಆರ್ ಅನ್ನು ತಿರುಚದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದು ತ್ವರಿತ ತನಿಖೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಹೊಸ ಕಾನೂನುಗಳಲ್ಲಿ ಅಪ್ರಾಪ್ತರ ವಿರುದ್ಧದ ಲೈಂಗಿಕ ಅಪರಾಧಗಳಿಗೆ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮದುವೆಯ ಹೆಸರಿನಲ್ಲಿ ಮೋಸದ ವಿರುದ್ಧ ಕ್ರಮ ಕೈಗೊಳ್ಳಲು ಮದುವೆ ಮತ್ತು ಮೋಸದ ಸುಳ್ಳು ಭರವಸೆಗಳನ್ನು ಬಿಎನ್ಎಸ್ ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ ಎಂದು ಅವರು ವಿವರಿಸಿದರು. “ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಭಾರತೀಯ ಸಮಾಜದಿಂದ ಪಾಪದ ಮನಸ್ಥಿತಿಯನ್ನು ನಿರ್ಮೂಲನೆ ಮಾಡುವವರೆಗೂ ನಾವು ವಿರಮಿಸಲು  ಸಾಧ್ಯವಿಲ್ಲ”, ಎಂದು ಪ್ರಧಾನಿ ಉದ್ಗರಿಸಿದರು.

ಅಭಿವೃದ್ಧಿಯ ಪಥದಲ್ಲಿ ಭಾರತದ ಉತ್ತುಂಗದಲ್ಲಿ ಮಹಾರಾಷ್ಟ್ರದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಯವರು, ಮಹಾರಾಷ್ಟ್ರವು ವಿಕ್ಷಿತ ಭಾರತದ ಹೊಳೆಯುವ ನಕ್ಷತ್ರವಾಗಿದೆ ಎಂದರು. ಮಹಾರಾಷ್ಟ್ರವು ವಿಶ್ವದಾದ್ಯಂತದ ಹೂಡಿಕೆದಾರರ ಆಕರ್ಷಣೆಯ ಕೇಂದ್ರವಾಗುತ್ತಿದೆ ಮತ್ತು ರಾಜ್ಯದ ಭವಿಷ್ಯವು ಹೆಚ್ಚು ಹೆಚ್ಚು ಹೂಡಿಕೆಗಳು ಮತ್ತು ಹೊಸ ಉದ್ಯೋಗಾವಕಾಶಗಳಲ್ಲಿದೆ ಎಂದು ಅವರು ಒತ್ತಿ ಹೇಳಿದರು. ಕೈಗಾರಿಕೆಗಳನ್ನು ಉತ್ತೇಜಿಸಲು ಮತ್ತು ಯುವಜನರ ಶಿಕ್ಷಣ, ಕೌಶಲ್ಯ ಹಾಗು  ಉದ್ಯೋಗಕ್ಕೆ ಒತ್ತು ನೀಡುವುದಕ್ಕಾಗಿ ರಾಜ್ಯದಲ್ಲಿ ಸ್ಥಿರ ಸರ್ಕಾರದ ಅಗತ್ಯವನ್ನು ಪ್ರಧಾನಿ ಪ್ರತಿಪಾದಿಸಿದರು. ಭಾಷಣವನ್ನು ಮುಕ್ತಾಯಗೊಳಿಸುವಾಗ  ಪ್ರಧಾನ ಮಂತ್ರಿಯವರು, ಸ್ಥಿರ ಮತ್ತು ಸಮೃದ್ಧ ಮಹಾರಾಷ್ಟ್ರಕ್ಕಾಗಿ ರಾಜ್ಯದ ತಾಯಂದಿರು ಮತ್ತು ಹೆಣ್ಣುಮಕ್ಕಳು ಒಗ್ಗೂಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಸಿ.ಪಿ.ರಾಧಾಕೃಷ್ಣನ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****