Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಿಗ್ನೋಸೆಲ್ಯುಲೋಸಿಕ್ ಜೈವಿಕ ಪದಾರ್ಥ ಮತ್ತು ಇತರ ನವೀಕರಿಸಬಹುದಾದ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಸುಧಾರಿತ ಜೈವಿಕ ಇಂಧನ ಯೋಜನೆಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು “ಪ್ರಧಾನ ಮಂತ್ರಿ JI-VAN ಯೋಜನೆ” ಯಲ್ಲಿನ ತಿದ್ದುಪಡಿಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ


ಜೈವಿಕ ಇಂಧನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳೊಂದಿಗೆ ವೇಗಕ್ಕೆ ಇಂಬು ನೀಡಲು ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ತಿದ್ದುಪಡಿ ಮಾಡಿದ ಪ್ರಧಾನಮಂತ್ರಿ JI-VAN ಯೋಜನೆಯನ್ನು ಅನುಮೋದಿಸಿದೆ.

ಮಾರ್ಪಡಿಸಿದ ಯೋಜನೆಯ ಅನುಷ್ಠಾನಕ್ಕೆ ಐದು (5) ವರ್ಷ ಅಂದರೆ 2028-29 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಮತ್ತು ಲಿಗ್ನೋಸೆಲ್ಯುಲೋಸಿಕ್ ಕೃಷಿ ಉತ್ಪನ್ನಗಳಿಂದ ಉತ್ಪತ್ತಿಯಾಗುವ ಸುಧಾರಿತ ಜೈವಿಕ ಇಂಧನಗಳನ್ನು ಅಂದರೆ ಕೃಷಿ ಮತ್ತು ಅರಣ್ಯ ಅವಶೇಷಗಳು, ಕೈಗಾರಿಕಾ ತ್ಯಾಜ್ಯ, ಸಂಶ್ಲೇಷಣೆ (ಸಿನ್) ಅನಿಲ, ಪಾಚಿ ಇತ್ಯಾದಿಗಳೂ ಇದರ ವ್ಯಾಪ್ತಿಗೆ ಒಳಪಡುತ್ತವೆ. “ಬೋಲ್ಟ್ ಆನ್” ಪ್ಲಾಂಟ್‌ಗಳು ಮತ್ತು “ಬ್ರೌನ್‌ಫೀಲ್ಡ್ ಜೋಜನೆಗಳು” ಈಗ ತಮ್ಮ ಅನುಭವವನ್ನು ಕಾರ್ಯರೂಪಕ್ಕೆ ತರಲು ಮತ್ತು ಅವುಗಳ ಕಾರ್ಯಸಾಧ್ಯತೆಯಲ್ಲಿ ಸುಧಾರಣೆ ತರಲು ಅರ್ಹವಾಗಿವೆ.

ಬಹು ತಂತ್ರಜ್ಞಾನಗಳು ಮತ್ತು ಬಹು ಕೃಷಿ ತ್ಯಾಜ್ಯಗಳನ್ನು ಉತ್ತೇಜಿಸಲು, ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳೊಂದಿಗೆ ಯೋಜನಾ ಪ್ರಸ್ತಾವನೆಗಳಿಗೆ ಈಗ ಆದ್ಯತೆ ನೀಡಲಾಗುವುದು.

ರೈತರಿಗೆ ಅವರ ಕೃಷಿ ತ್ಯಾಜ್ಯಗಳಿಗೆ ಲಾಭದಾಯಕ ಆದಾಯವನ್ನು ಒದಗಿಸುವುದು, ಪರಿಸರ ಮಾಲಿನ್ಯವನ್ನು ಪರಿಹರಿಸುವುದು, ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಭಾರತದ ಇಂಧನ ಭದ್ರತೆ ಮತ್ತು ಸ್ವಾವಲಂಬನೆಗೆ ಕೊಡುಗೆ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದು ಸುಧಾರಿತ ಜೈವಿಕ ಇಂಧನ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾ ಮಿಷನ್ ಅನ್ನು ಉತ್ತೇಜಿಸುತ್ತದೆ. ಭಾರತದ ಮಹತ್ವಾಕಾಂಕ್ಷೆಯ ಗುರಿಯಾದ 2070 ರ ವೇಳೆಗೆ ನಿವ್ವಳ-ಶೂನ್ಯ GHG ಹೊರಸೂಸುವಿಕೆಯನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿ JI-VAN ಯೋಜನೆಯ ಮೂಲಕ ಸುಧಾರಿತ ಜೈವಿಕ ಇಂಧನಗಳನ್ನು ಉತ್ತೇಜಿಸುವಲ್ಲಿ ಭಾರತ ಸರ್ಕಾರದ ಬದ್ಧತೆ ಸುಸ್ಥಿರ ಮತ್ತು ಸ್ವಾವಲಂಬಿ ಇಂಧನ ಕ್ಷೇತ್ರಕ್ಕೆ ಅದರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ಹಿನ್ನೆಲೆ:

ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ, ಇದರಡಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಮಾರಾಟ ಮಾಡುತ್ತವೆ. EBP ಕಾರ್ಯಕ್ರಮದಡಿಯಲ್ಲಿ, ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ – ಎಥೆನಾಲ್ ಪೂರೈಕೆ ವರ್ಷ (ESY) 2013-14 ರಲ್ಲಿನ 38 ಕೋಟಿ ಲೀಟರ್‌ಗಳಿಂದ ESY 2022-23 ರಲ್ಲಿ 500 ಕೋಟಿ ಲೀಟರ್‌ಗಳಿಗಿಂತ ಹೆಚ್ಚು ವೃದ್ಧಿಸಿದೆ ಅಂದರೆ 1.53% ರಿಂದ 12.06% ಗೆ ಹೆಚ್ಚಳವಾಗಿದೆ. ಜುಲೈ, 2024 ರಲ್ಲಿ ಮಿಶ್ರಣ 15.83% ಅನ್ನು ಮುಟ್ಟಿದೆ ಮತ್ತು ಚಾಲ್ತಿಯಲ್ಲಿರುವ ESY 2023-24 ರಲ್ಲಿ ಸಂಚಿತ ಮಿಶ್ರಣ ಶೇಕಡಾವಾರು 13% ಅನ್ನು ದಾಟಿದೆ.

ESY 2025-26 ರ ಅಂತ್ಯದ ವೇಳೆಗೆ OMC ಗಳು 20% ರ ಮಿಶ್ರಣದ ಗುರಿಯನ್ನು ಸಾಧಿಸುವ ಹಾದಿಯಲ್ಲಿವೆ.  ESY 2025-26 ರ ಅವಧಿಯಲ್ಲಿ 20% ಮಿಶ್ರಣವನ್ನು ಸಾಧಿಸಲು 1100 ಕೋಟಿ ಲೀಟರ್ ಎಥೆನಾಲ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮಿಶ್ರಣದ ಅಗತ್ಯವನ್ನು ಪೂರೈಸಲು ಮತ್ತು ಇತರ ಬಳಕೆಗಳಿಗೆ (ಕುಡಿಯಬಹುದಾದ, ರಾಸಾಯನಿಕ, ಔಷಧೀಯ ಇತ್ಯಾದಿ) ಗಳಿಗಾಗಿ 1750 ಕೋಟಿ ಲೀಟರ್ ಎಥೆನಾಲ್ ಭಟ್ಟಿ ಇಳಿಸುವ ಸಾಮರ್ಥ್ಯವನ್ನು ವೃದ್ಧಿಸಬೇಕಿದೆ. 
ಎಥೆನಾಲ್ ಮಿಶ್ರಣದ ಗುರಿಗಳನ್ನು ಪೂರೈಸಲು, ಸರ್ಕಾರವು 2 ನೇ ತಲೆಮಾರಿನ (2G) ಎಥೆನಾಲ್ (ಸುಧಾರಿತ ಜೈವಿಕ ಇಂಧನಗಳು) ನಂತಹ ಪರ್ಯಾಯ ಮೂಲಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಸೆಲ್ಯುಲೋಸಿಕ್ ಮತ್ತು ಲಿಗ್ನೋಸೆಲ್ಯುಲೋಸಿಕ್ ಅಂಶವನ್ನು ಹೊಂದಿರುವ ಹೆಚ್ಚುವರಿ ಜೈವಿಕ ತ್ಯಾಜ್ಯ / ಕೃಷಿ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಇತ್ಯಾದಿಗಳನ್ನು ಸುಧಾರಿತ ಜೈವಿಕ ಇಂಧನ ತಂತ್ರಜ್ಞಾನವನ್ನು ಬಳಸಿಕೊಂಡು ಎಥೆನಾಲ್ ಆಗಿ ಪರಿವರ್ತಿಸಬಹುದು.

ದೇಶದಲ್ಲಿ 2G ಎಥೆನಾಲ್ ಸಾಮರ್ಥ್ಯವನ್ನು ಉತ್ತೇಜಿಸಲು ಮತ್ತು ಈ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು, 2G ಬಯೋ-ಎಥೆನಾಲ್ ಯೋಜನೆಗಳಿಗೆ ಹಣಕಾಸಿನ ನೆರವು ನೀಡಲು 07.03.2019 ರಂದು “ಪ್ರಧಾನ ಮಂತ್ರಿ JI-VAN (ಜೈವಿಕ ಇಂಧನ-ವಾತಾವರಣಕ್ಕೆ ಅನುಕೂಲವಾಗುವಂತೆ ಕೃಷಿ ತ್ಯಾಜ್ಯ ನಿವಾರಣೆ) ಯೋಜನೆಗೆ ಮುಂದಡಿ ಇರಿಸಲಾಗಿದೆ.

ಈ ಯೋಜನೆಯಡಿಯಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಹರಿಯಾಣದ ಪಾಣಿಪತ್‌ನಲ್ಲಿ ಸ್ಥಾಪಿಸಿದ ಮೊದಲ 2G ಎಥೆನಾಲ್ ಯೋಜನೆಯನ್ನು ಮಾನ್ಯ ಪ್ರಧಾನಮಂತ್ರಿಯವರು 10 ಆಗಸ್ಟ್ 2022 ರಂದು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಅಲ್ಲದೆ BPCL, HPCL ಮತ್ತು NRL  ಕ್ರಮವಾಗಿ ಬರ್ಗಢ್ (ಒಡಿಶಾ), ಬಟಿಂಡಾ (ಪಂಜಾಬ್) ಮತ್ತು ನುಮಾಲಿಗಢ್ (ಅಸ್ಸಾಂ) ನಲ್ಲಿ ಸ್ಥಾಪಿಸುತ್ತಿರುವ ಇತರ 2G ವಾಣಿಜ್ಯ ಯೋಜನೆಗಳು ಕೂಡ ಪೂರ್ಣಗೊಳ್ಳುವ ಹಂತದಲ್ಲಿದೆ.

 

*****