Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

28.07.2024ರಂದು ‘ಮನ್ ಕಿ ಬಾತ್’ನ 112ನೇ ಸಂಚಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ


ನನ್ನ ಪ್ರೀತಿಯ ದೇಶವಾಸಿಗಳೆ, ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ, ಆತ್ಮೀಯ ಶುಭಾಶಯಗಳು. ಈ ಕ್ಷಣದಲ್ಲಿ ಜರುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಇಡೀ ವಿಶ್ವದ ಗಮನ ಸೆಳೆದಿದೆ, ಈ ಋತುವಿನ ಫ್ಲೇವರ್ ಆಗಿದೆ. ಒಲಿಂಪಿಕ್ಸ್ ನಮ್ಮ ಆಟಗಾರರಿಗೆ ವಿಶ್ವ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿದೆ.  ದೇಶಕ್ಕಾಗಿ ಏನನ್ನಾದರೂ ಮಾಡಲು ಅವರಿಗೆ ಅವಕಾಶ ನೀಡಿದೆ. ನಮ್ಮ ಆಟಗಾರರನ್ನು ಪ್ರೋತ್ಸಾಹಿಸೋಣ… ಭಾರತ ತಂಡಕ್ಕೆ ಚಿಯರ್!!

ಸ್ನೇಹಿತರೆ, ಕ್ರೀಡಾ ಜಗತ್ತಿನಲ್ಲಿ ಈ ಒಲಿಂಪಿಕ್ಸ್‌ನ ಜತೆಗೆ ಕೆಲವು ದಿನಗಳ ಹಿಂದೆ, ಗಣಿತ ಜಗತ್ತಿನ ಒಲಿಂಪಿಕ್ಸ್ ಕೂಡ ನಡೆದಿದೆ. ಅದು ಅಂತಾರಾಷ್ಟ್ರೀಯ ಗಣಿತ ಒಲಂಪಿಯಾಡ್. ಈ ಒಲಿಂಪಿಯಾಡ್‌ನಲ್ಲಿ ಭಾರತದ ವಿದ್ಯಾರ್ಥಿಗಳು ಅಸಾಧಾರಣ ಸಾಧನೆ ಮಾಡಿದ್ದಾರೆ. ನಮ್ಮ ತಂಡ ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 4 ಚಿನ್ನ ಮತ್ತು 1 ಬೆಳ್ಳಿ ಪದಕ ಗೆದ್ದಿದೆ. 100ಕ್ಕೂ ಹೆಚ್ಚು ದೇಶಗಳ ಯುವಕರು ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಲೆಕ್ಕಾಚಾರದಲ್ಲಿ ನಮ್ಮ ತಂಡವು ಅಗ್ರ 5 ಸ್ಥಾನಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ದೇಶಕ್ಕೆ ಕೀರ್ತಿ ತಂದ ಈ ವಿದ್ಯಾರ್ಥಿಗಳ ಹೆಸರು –

ಪುಣೆಯ ಆದಿತ್ಯ ವೆಂಕಟ್ ಗಣೇಶ್, ಪುಣೆಯಿಂದಲೇ ಸಿದ್ಧಾರ್ಥ್ ಚೋಪ್ರಾ, ದೆಹಲಿಯ ಅರ್ಜುನ್ ಗುಪ್ತಾ, ಗ್ರೇಟರ್ ನೋಯ್ಡಾದಿಂದ ಕನವ್ ತಲ್ವಾರ್, ಮುಂಬೈನಿಂದ ರುಶಿಲ್ ಮಾಥುರ್ ಮತ್ತು ಗುವಾಹಟಿಯಿಂದ ಆನಂದೋ ಭಾದುರಿ.

ಸ್ನೇಹಿತರೆ, ಇಂದು ನಾನು ಈ ಯುವ ವಿಜೇತರನ್ನು ‘ಮನ್ ಕಿ ಬಾತ್’ಗೆ ವಿಶೇಷವಾಗಿ ಆಹ್ವಾನಿಸಿದ್ದೇನೆ. ಅವರೆಲ್ಲರೂ ಸದ್ಯಕ್ಕೆ ನಮ್ಮೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದಾರೆ.

ಪ್ರಧಾನ ಮಂತ್ರಿ: ನಮಸ್ತೆ ಸ್ನೇಹಿತರೆ. ‘ಮನ್ ಕಿ ಬಾತ್’ನಲ್ಲಿ ನಾನು ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ. ನೀವೆಲ್ಲರೂ ಹೇಗಿದ್ದೀರಿ?

ವಿದ್ಯಾರ್ಥಿಗಳು: ನಾವು ಚೆನ್ನಾಗಿದ್ದೇವೆ ಸರ್.

ಪ್ರಧಾನಮಂತ್ರಿ: ಸ್ನೇಹಿತರೆ, ‘ಮನ್ ಕಿ ಬಾತ್’ ಮೂಲಕ ದೇಶವಾಸಿಗಳು ನಿಮ್ಮೆಲ್ಲರ ಅನುಭವಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ನಾನು ಆದಿತ್ಯ ಮತ್ತು ಸಿದ್ಧಾರ್ಥ್ ಅವರೊಂದಿಗೆ ಸಂವಾದ ಪ್ರಾರಂಭಿಸುತ್ತೇನೆ. ನೀವು ಪುಣೆಯಲ್ಲಿ ಇದ್ದೀರಿ… ಮೊದಲು ನಾನು ನಿಮ್ಮೊಂದಿಗೆ ಪ್ರಾರಂಭಿಸುತ್ತೇನೆ. ಒಲಿಂಪಿಯಾಡ್‌ನಲ್ಲಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

 

ಆದಿತ್ಯ: ನನಗೆ ಬಾಲ್ಯದಿಂದಲೂ ಗಣಿತದಲ್ಲಿ ಆಸಕ್ತಿ ಇತ್ತು. ನನ್ನ ಗುರುಗಳಾದ ಓಂ ಪ್ರಕಾಶ್ ಸರ್ ನನಗೆ 6ನೇ ತರಗತಿಯ ಗಣಿತ ಕಲಿಸಿದರು, ಅವರು ಗಣಿತದಲ್ಲಿ ನನ್ನ ಆಸಕ್ತಿ ಹೆಚ್ಚಿಸಿದರು, ಇದರಿಂದ ನನಗೆ ಕಲಿಯಲು ಅವಕಾಶ ಸಿಕ್ಕಿತು.

ಪ್ರಧಾನ ಮಂತ್ರಿ: ನಿಮ್ಮ ಸ್ನೇಹಿತ ಏನು ಹೇಳುತ್ತಾರೆ?

ಸಿದ್ಧಾರ್ಥ್: ಸರ್, ನಾನು ಸಿದ್ಧಾರ್ಥ್, ನಾನು ಪುಣೆ. ಈಗಷ್ಟೇ 12ನೇ ತರಗತಿ ಪಾಸಾಗಿದ್ದೇನೆ. ಐಎಂಒನಲ್ಲಿ ಇದು 2ನೇ ಬಾರಿಗೆ ಸ್ಪರ್ಧಿಸಿದ್ದೆ. ನನಗೂ ಬಾಲ್ಯದಿಂದಲೇ ಗಣಿತದಲ್ಲಿ ಆಸಕ್ತಿ ಇತ್ತು. ನಾನು ಆದಿತ್ಯನೊಂದಿಗೆ 6ನೇ ತರಗತಿಯಲ್ಲಿದ್ದಾಗ, ಓಂ ಪ್ರಕಾಶ್ ಸರ್ ನಮ್ಮಿಬ್ಬರಿಗೂ ತರಬೇತಿ ನೀಡಿ ನಮಗೆ ಸಾಕಷ್ಟು ಸಹಾಯ ಮಾಡಿದರು. ಈಗ ನಾನು ಚಾರ್ಟರ್ಡ್ ಮ್ಯಾನೇಜ್|ಮೆಂಟ್ ಇನ್|ಸ್ಟಿಟ್ಯೂಟ್(ಸಿಎಂಐ) ಕಾಲೇಜಿಗೆ ಹೋಗುತ್ತಿದ್ದೇನೆ, ಅಲ್ಲಿ ಗಣಿತ & ಸಿಎಸ್ ಕಲಿಕೆ ಮುಂದುವರಿಸುತ್ತಿದ್ದೇನೆ.

ಪ್ರಧಾನ ಮಂತ್ರಿ: ಸರಿ, ಅರ್ಜುನ್ ಈಗ ಗಾಂಧಿನಗರದಲ್ಲಿದ್ದಾರೆ, ಕನವ್ ಗ್ರೇಟರ್ ನೋಯ್ಡಾದವರು ಎಂದು ನನಗೆ ತಿಳಿದುಬಂದಿದೆ. ಅರ್ಜುನ್ ಮತ್ತು ಕನವ್, ನಾವು ಒಲಿಂಪಿಯಾಡ್ ಕುರಿತು ಚರ್ಚಿಸಿದ್ದೇವೆ. ಆದರೆ ನೀವಿಬ್ಬರೂ ನಿಮ್ಮ ತಯಾರಿ ಮತ್ತು ಯಾವುದೇ ವಿಶೇಷ ಅನುಭವ ಹೇಳಿದರೆ, ನಮ್ಮ ಕೇಳುಗರು ಅದನ್ನು ಇಷ್ಟಪಡುತ್ತಾರೆ.

ಅರ್ಜುನ್: ನಮಸ್ತೆ ಸರ್, ಜೈ ಹಿಂದ್, ನಾನು ಅರ್ಜುನ್.

ಪ್ರಧಾನ ಮಂತ್ರಿ: ಜೈ ಹಿಂದ್ ಅರ್ಜುನ್.

ಅರ್ಜುನ್: ನಾನು ದೆಹಲಿಯಲ್ಲಿ ನೆಲೆಸಿದ್ದೇನೆ, ನನ್ನ ತಾಯಿ ಆಶಾ ಗುಪ್ತಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ನನ್ನ ತಂದೆ ಅಮಿತ್ ಗುಪ್ತಾ ಚಾರ್ಟರ್ಡ್ ಅಕೌಂಟೆಂಟ್. ನಾನು ನನ್ನ ದೇಶದ ಪ್ರಧಾನ ಮಂತ್ರಿ ಜತೆ ಮಾತನಾಡುತ್ತಿದ್ದೇನೆ ಎಂಬುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ಮೊದಲನೆಯದಾಗಿ ನನ್ನ ಯಶಸ್ಸಿನ ಶ್ರೇಯಸ್ಸನ್ನು ನನ್ನ ಹೆತ್ತವರಿಗೆ ಸಲ್ಲಿಸಲು ಬಯಸುತ್ತೇನೆ. ಕುಟುಂಬ ಸದಸ್ಯರೊಬ್ಬರು ಇಂತಹ ಸ್ಪರ್ಧೆಗೆ ತಯಾರಿ ನಡೆಸಿದಾಗ, ಅದು ಆ ಸದಸ್ಯರ ಹೋರಾಟ ಮಾತ್ರವಲ್ಲ, ಇಡೀ ಕುಟುಂಬದ ಹೋರಾಟ ಎಂದು ನನಗನಿಸುತ್ತಿದೆ.

ಮೂಲಭೂತವಾಗಿ ನಮ್ಮ ಪ್ರಶ್ನೆಪತ್ರಿಕೆಯಲ್ಲಿ ನಾವು 3 ಸಮಸ್ಯೆ ಪರಿಹರಿಸಲು  ನಾಲ್ಕೂವರೆ ತಾಸು ಇರುತ್ತದೆ. 1 ಸಮಸ್ಯೆ ಪರಿಹಾರಕ್ಕೆ ಒಂದೂವರೆ ತಾಸು – ಆದ್ದರಿಂದ ನಾವು ಸಮಸ್ಯೆಯನ್ನು ಪರಿಹರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತೇವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ, ನಾವು ಮನೆಯಲ್ಲಿ ನಿಜವಾಗಿಯೂ ಕಷ್ಟಪಟ್ಟು ಕಲಿಕೆ ಮಾಡಬೇಕು. ನಾವು ಸಮಸ್ಯೆಗಳಿಗೆ ಹಲವು ಗಂಟೆಗಳನ್ನು ವ್ಯಯಿಸಬೇಕಾಗುತ್ತದೆ, ಕೆಲವೊಮ್ಮೆ ಸಮಸ್ಯೆ ಪರಿಹರಿಸಲು 1 ದಿನ ಅಥವಾ 3 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ, ಅದಕ್ಕಾಗಿ, ನಾವು ಆನ್‌ಲೈನ್‌ನಲ್ಲಿ ಸಮಸ್ಯೆಗಳನ್ನು ಹುಡುಕಬೇಕಾಗುತ್ತದೆ.

ನಾವು ಹಿಂದಿನ ವರ್ಷದ ಹಳೆಯ ಸಮಸ್ಯೆಗಳನ್ನು ಪ್ರಯತ್ನಿಸುತ್ತೇವೆ. ನಾವು ಕಷ್ಟಪಟ್ಟು ಕೆಲಸ ಮಾಡಿದಾಗ, ನಮ್ಮ ಅನುಭವ ಹೆಚ್ಚಾಗುತ್ತದೆ, ಪ್ರಮುಖ ವಿಷಯವೆಂದರೆ, ನಮ್ಮ ಸಮಸ್ಯೆ ಪರಿಹರಿಸುವ ಸಾಮರ್ಥ್ಯವೂ ಹೆಚ್ಚಾಗುತ್ತದೆ, ಇದು ಗಣಿತಶಾಸ್ತ್ರದಲ್ಲಿ ಮಾತ್ರವಲ್ಲದೆ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಮಗೆ ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿ: ಸರಿ ಕನವ್. ಈ ಎಲ್ಲಾ ತಯಾರಿಯಲ್ಲಿ ನಮ್ಮ ಯುವ ಸ್ನೇಹಿತರು ನಿಜವಾಗಿಯೂ ತಿಳಿದುಕೊಳ್ಳಲು ಬಯಸುವ ಯಾವುದೇ ವಿಶೇಷ ಅನುಭವ, ಯಾವುದೇ ವಿಶೇಷ ವಿಷಯ ಇದ್ದರೆ ಹೇಳುವಿರಾ?

ಕನವ್ ತಲ್ವಾರ್: ನನ್ನ ಹೆಸರು ಕನವ್ ತಲ್ವಾರ್. ನಾನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದೇನೆ, ನಾನು 11ನೇ ತರಗತಿಯ ವಿದ್ಯಾರ್ಥಿಯಾಗಿದ್ದೇನೆ. ಗಣಿತ ನನ್ನ ನೆಚ್ಚಿನ ವಿಷಯ. ನನಗೆ ಬಾಲ್ಯದಿಂದಲೂ ಗಣಿತ ಎಂದರೆ ತುಂಬಾ ಇಷ್ಟ. ನನ್ನ ಬಾಲ್ಯದಲ್ಲಿ, ನನ್ನ ತಂದೆ ನನಗೆ ಪಝಲ್ ಗಳನ್ನು ಬಿಡಿಸುವಂತೆ ಹೇಳುತ್ತಿದ್ದರು. ಇದು ನನ್ನ ಆಸಕ್ತಿ ಹೆಚ್ಚಿಸಿತು. 7ನೇ ತರಗತಿಯಿಂದ ಒಲಿಂಪಿಯಾಡ್‌ಗೆ ತಯಾರಿ ಆರಂಭಿಸಿದ್ದೆ. ಇದರಲ್ಲಿ ನನ್ನ ಸಹೋದರಿ ಅಪಾರ ಕೊಡುಗೆ ನೀಡಿದ್ದಾರೆ. ನನ್ನ ಹೆತ್ತವರು ಸಹ ನನಗೆ ಯಾವಾಗಲೂ ಬೆಂಬಲ ನೀಡುತ್ತಿದ್ದಾರೆ. ಈ ಒಲಿಂಪಿಯಾಡ್ ಅನ್ನು ಎಚ್|ಬಿಸಿಎಸ್ಇ  ನಡೆಸುತ್ತದೆ. ಇದು 5 ಹಂತಗಳ ಪ್ರಕ್ರಿಯೆ. ಕಳೆದ ವರ್ಷ ನಾನು ತಂಡಕ್ಕೆ ಬರಲಾಗಲಿಲ್ಲ, ಆದರೂ ನಾನು ಅದಕ್ಕೆ ತುಂಬಾ ಹತ್ತಿರದಲ್ಲಿದ್ದೆ. ಅದನ್ನು ಮಾಡಲು ಸಾಧ್ಯವಾಗದ ಬಗ್ಗೆ ತುಂಬಾ ದುಃಖಿತನಾಗಿದ್ದೆ. ಆಗ ನನ್ನ ಹೆತ್ತವರು ನನಗೆ ಹೇಳಿದ್ದರು –  ನಾವು ಗೆಲ್ಲಬೇಕು, ಇಲ್ಲವೇ ಕಲಿಯಬೇಕು ಎಂದು.

ಪ್ರಯಾಣ ಮುಖ್ಯ, ಯಶಸ್ಸಲ್ಲ. ಆದ್ದರಿಂದ ನಾನು ಇದನ್ನು ಹೇಳಲು ಬಯಸುತ್ತೇನೆ – ‘ನೀವು ಮಾಡುವುದನ್ನು ಇಷ್ಟಪಡಿ ಅಥವಾ ಪ್ರೀತಿಸಿ ಮತ್ತು ನೀವು ಇಷ್ಟಪಡುವುದನ್ನೇ ಮಾಡಿ’. ಪ್ರಯಾಣ ಮುಖ್ಯ, ಯಶಸ್ಸು ಅಲ್ಲ. ನಾವು ನಮ್ಮ ವಿಷಯವನ್ನು ಪ್ರೀತಿಸಿದರೆ ಮತ್ತು ಪ್ರಯಾಣವನ್ನು ಆನಂದಿಸಿದರೆ ನಾವು ಖಂಡಿತಾ ಯಶಸ್ವಿಯಾಗುತ್ತೇವೆ.

ಪ್ರಧಾನ ಮಂತ್ರಿ: ಹಾಗಾದರೆ ಕನವ್, ನಿಮಗೆ ಗಣಿತದಲ್ಲಿ ಆಸಕ್ತಿ ಇದೆ, ಸಾಹಿತ್ಯದಲ್ಲಿಯೂ ಆಸಕ್ತಿ ಇರುವಂತೆ ಮಾತನಾಡುತ್ತಿದ್ದೀರಾ!

ಕನವ್ ತಲ್ವಾರ್: ಹೌದು ಸರ್! ನಾನು ಬಾಲ್ಯದಲ್ಲಿ ಚರ್ಚಾ ಸ್ಪರ್ಧೆ ಮತ್ತು ಭಾಷಣಗಳನ್ನು ಮಾಡುತ್ತಿದ್ದೆ.

ಪ್ರಧಾನ ಮಂತ್ರಿ: ಸರಿ, ಈಗ ನಾವು ಆನಂದೊ ಜತೆ ಮಾತನಾಡೋಣ. ಆನಂದೊ, ನೀವು ಇದೀಗ ಗುವಾಹತಿಯಲ್ಲಿದ್ದೀರಿ, ನಿಮ್ಮ ಸ್ನೇಹಿತ ರುಶಿಲ್ ಮುಂಬೈನಲ್ಲಿದ್ದಾರೆ. ನಿಮ್ಮಿಬ್ಬರಿಗೂ ನನ್ನದೊಂದು ಪ್ರಶ್ನೆ. ನೋಡಿ, ನಾನು “ಪರೀಕ್ಷಾ ಪೇ ಚರ್ಚಾ” ಮಾಡುತ್ತಲೇ ಇರುತ್ತೇನೆ. ಪರೀಕ್ಷೆಗಳ ಬಗ್ಗೆ ಚರ್ಚಿಸುವ ಹೊರತಾಗಿ, ನಾನು ಇತರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತೇನೆ. ಅನೇಕ ವಿದ್ಯಾರ್ಥಿಗಳು ಗಣಿತದ ಬಗ್ಗೆ ತುಂಬಾ ಹೆದರುತ್ತಾರೆ, ಗಣಿತದ ಪದ ಕೇಳಿದರೆ ಸಾಕು,  ಅವರು ಉದ್ವೇಗಕ್ಕೆ ಒಳಗಾಗುತ್ತಾರೆ, ಗಣಿತದೊಂದಿಗೆ ಸ್ನೇಹಿತರಾಗುವುದು ಹೇಗೆ ಎಂದು ಹೇಳಿ?

ರುಶಿಲ್ ಮಾಥುರ್: ಸರ್, ನಾನು ರುಶಿಲ್ ಮಾಥುರ್. ನಾವು ಚಿಕ್ಕವರಿದ್ದಾಗ ಅಥವಾ ಮಕ್ಕಳಾಗಿದ್ದಾಗ ನಾವು ಮೊದಲ ಬಾರಿಗೆ ಸಂಕಲನ ಕಲಿತಾಗ, ಅದು ಮುಂದೆ ಸಾಗಲು ಅಥವಾ ಕ್ಯಾರಿ ಫಾರ್ವರ್ಡ್  ಮಾಡಲು ಕಲಿಸುತ್ತದೆ. ಆದರೆ ಕ್ಯಾರಿ ಫಾರ್ವರ್ಡ್ ಏಕೆ ಮಾಡಬೇಕು ಎಂದು ನಮಗೆ ಹೇಳಿರುವುದಿಲ್ಲ. ನಾವು ಸಂಯುಕ್ತ ಬಡ್ಡಿಯನ್ನು ಅಧ್ಯಯನ ಮಾಡುವಾಗ, ಚಕ್ರಬಡ್ಡಿಯ ಸೂತ್ರ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯನ್ನು ನಾವು ಎಂದಿಗೂ ಕೇಳುವುದಿಲ್ಲ? ಗಣಿತವು ನಿಜವಾಗಿಯೂ ಯೋಚಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕಲೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾವೆಲ್ಲರೂ ಗಣಿತಕ್ಕೆ ಹೊಸ ಪ್ರಶ್ನೆಯನ್ನು ಸೇರಿಸಿದರೆ, ನಾವು ಇದನ್ನು ಏಕೆ ಮಾಡುತ್ತಿದ್ದೇವೆ ಎಂಬುದು ಪ್ರಶ್ನೆ ಎಂದು ನಾನು ಭಾವಿಸುತ್ತೇನೆ. ಯಾಕೆ ಹೀಗಾಗುತ್ತದೆ? ಹಾಗಾಗಿ ಇದು ಗಣಿತದಲ್ಲಿ ಜನರ ಆಸಕ್ತಿ ಹೆಚ್ಚಿಸಬಹುದು ಎಂದು ನಾನು ಭಾವಿಸುತ್ತೇನೆ! ಏಕೆಂದರೆ ನಾವು ಏನನ್ನಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ನಾವು ಅದರ ಬಗ್ಗೆ ಭಯಪಡಲು ಪ್ರಾರಂಭಿಸುತ್ತೇವೆ. ಇದರ ಹೊರತಾಗಿ, ಗಣಿತವು ತುಂಬಾ ತಾರ್ಕಿಕ ವಿಷಯ ಎಂದು ಎಲ್ಲರೂ ಭಾವಿಸುತ್ತಾರೆ ಎಂದು ನನಗೆ ಅನಿಸುತ್ತದೆ. ಆದರೆ ಅದರ ಹೊರತಾಗಿ, ಗಣಿತದಲ್ಲಿ ಸೃಜನಶೀಲತೆ ಕೂಡ ಬಹಳ ಮುಖ್ಯ. ಏಕೆಂದರೆ ಕಲಿತಿದ್ದರ ಹೊರತಾಗಿ ಸೃಜನಶೀಲತೆಯ ಮೂಲಕ ಮಾತ್ರ ನಾವು ಒಲಿಂಪಿಯಾಡ್‌ನಲ್ಲಿ ತುಂಬಾ ಉಪಯುಕ್ತವಾದ ಪರಿಹಾರಗಳ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಗಣಿತ ಒಲಿಂಪಿಯಾಡ್ ಗಣಿತದಲ್ಲಿ ಆಸಕ್ತಿ ಹೆಚ್ಚಿಸಲು ಹೆಚ್ಚಿನ ಪ್ರಸ್ತುತತೆ ಹೊಂದಿದೆ.

ಪ್ರಧಾನ ಮಂತ್ರಿ: ಆನಂದೋ, ನೀವು ಏನಾದರೂ ಹೇಳಲು ಬಯಸುವಿರಾ?

ಆನಂದೋ ಭಾದುರಿ: ನಮಸ್ತೆ ಪಿಎಂ ಜಿ, ನಾನು ಗುವಾಹತಿಯ ಆನಂದೋ ಭಾದುರಿ. ನಾನು ಈಗಷ್ಟೇ 12ನೇ ತರಗತಿ ಪಾಸಾಗಿದ್ದೇನೆ. ನಾನು 6 ಮತ್ತು 7ನೇ ತರಗತಿಯಲ್ಲಿ ಸ್ಥಳೀಯ ಒಲಿಂಪಿಯಾಡ್‌ನಲ್ಲಿ ಭಾಗವಹಿಸುತ್ತಿದ್ದೆ. ಆಗ ನನ್ನ ಆಸಕ್ತಿ ಬೆಳೆಯಿತು. ಇದು ನನ್ನ ಎರಡನೇ ಐಎಂಒ. ನಾನು ಎರಡೂ ಐಎಂಒಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ರುಶಿಲ್ ಹೇಳಿದ ಮಾತನ್ನು ನಾನು ಒಪ್ಪುತ್ತೇನೆ. ಗಣಿತದ ಬಗ್ಗೆ ಭಯಪಡುವವರಿಗೆ ತುಂಬಾ ತಾಳ್ಮೆ ಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಏಕೆಂದರೆ ನಮಗೆ ಗಣಿತ ಕಲಿಸುವ ವಿಧಾನ ಏನಾಗುತ್ತದೆ ಎಂದರೆ, ಒಂದು ಸೂತ್ರ ನೀಡಲಾಗುತ್ತದೆ. ನಾವುಅದನ್ನು ನೆನಪಿಟ್ಟುಕೊಳ್ಳುತ್ತೇವೆ. ನಂತರ ಆ ಸೂತ್ರ ಆಧರಿಸಿ ನೂರಾರು ಪ್ರಶ್ನೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಆದರೆ ಸೂತ್ರ ಅರ್ಥವಾಗಿದೆಯೋ ಇಲ್ಲವೋ ಎಂದು ನೋಡಲಾಗುವುದಿಲ್ಲ, ಸಮಸ್ಯೆಗಳನ್ನು ಪರಿಹರಿಸುತ್ತಲೇ ಇರುತ್ತೀರಿ. ಸೂತ್ರವನ್ನು ಕಂಠಪಾಠ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ನೀವು ಸೂತ್ರ ಮರೆತರೆ ನೀವು ಏನು ಮಾಡುತ್ತೀರಿ? ಆದ್ದರಿಂದ ನಾನು ಹೇಳುವುದೇನೆಂದರೆ, ಸೂತ್ರವನ್ನು ಅರ್ಥ ಮಾಡಿಕೊಳ್ಳಿ. ರುಶಿಲ್ ಹೇಳಿದಂತೆ, ನಂತರ ತಾಳ್ಮೆಯಿಂದ ಅಧ್ಯಯನ ಮಾಡಿ. ನೀವು ಸೂತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನೀವು 100 ಪ್ರಶ್ನೆಗಳನ್ನು ಪರಿಹರಿಸಬೇಕಾಗಿಲ್ಲ. ನೀವು ಇದನ್ನು ಕೇವಲ 1 ಅಥವಾ 2 ಪ್ರಶ್ನೆಗಳೊಂದಿಗೆ ಮಾಡಬಹುದು. ಹಾಗಾಗಿ, ಗಣಿತಕ್ಕೆ ಯಾರೂ ಹೆದರಬೇಕಿಲ್ಲ.

ಪ್ರಧಾನ ಮಂತ್ರಿ: ಆದಿತ್ಯ ಮತ್ತು ಸಿದ್ಧಾರ್ಥ್, ನೀವು ಆರಂಭದಲ್ಲಿ ಮಾತನಾಡುವಾಗ, ಸಂಭಾಷಣೆ ಸರಿಯಾಗಿ ಆಗಲಿಲ್ಲ, ಈಗ ಈ ಸ್ನೇಹಿತರೆಲ್ಲರ ಮಾತುಗಳನ್ನು ಕೇಳಿದ ನಂತರ ನೀವು ಖಂಡಿತವಾಗಿಯೂ ಏನನ್ನಾದರೂ ಹೇಳಬೇಕು ಎಂದು ಅನಿಸುತ್ತಿದೆಯಾ. ನಿಮ್ಮ ಅನುಭವಗಳನ್ನು ಉತ್ತಮ ರೀತಿಯಲ್ಲಿ ಹಂಚಿಕೊಳ್ಳಬಹುದೇ?

ಸಿದ್ಧಾರ್ಥ್: ನಾವು ಅನೇಕ ಇತರ ದೇಶಗಳ ಜನರೊಂದಿಗೆ ಸಂವಾದ ನಡೆಸಿದ್ದೇವೆ, ಅಲ್ಲಿ ಅನೇಕ ಸಂಸ್ಕೃತಿಗಳಿವೆ, ಇತರೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಮತ್ತು ಅವರನ್ನು ಸಂಪರ್ಕಿಸುವುದು ತುಂಬಾ ಒಳ್ಳೆಯದು. ಅನೇಕ ಖ್ಯಾತ ಗಣಿತ ಶಾಸ್ತ್ರಜ್ಞರು ಇದ್ದರು.

ಪ್ರಧಾನ ಮಂತ್ರಿ: ಹೌದು ಆದಿತ್ಯ.

ಆದಿತ್ಯ: ಇದು ತುಂಬಾ ಒಳ್ಳೆಯ ಅನುಭವ, ಅವರು ನಮಗೆ ಬಾತ್ ಸಿಟಿಯ ಸುತ್ತಲೂ ತೋರಿಸಿದರು. ನಮಗೆ ಬಹಳ ಸುಂದರವಾದ ನೋಟಗಳನ್ನು ತೋರಿಸಿದರು, ನಮ್ಮನ್ನು ಉದ್ಯಾನವನಗಳಿಗೆ ಕರೆದೊಯ್ದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೂ ನಮ್ಮನ್ನು ಕರೆದೊಯ್ದರು. ಹಾಗಾಗಿ ಅದು ತುಂಬಾ ಒಳ್ಳೆಯ ಅನುಭವವಾಗಿತ್ತು.

ಪ್ರಧಾನಮಂತ್ರಿ: ಸರಿ ಸ್ನೇಹಿತರೆ, ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ನಾನು ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ, ಏಕೆಂದರೆ ಈ ರೀತಿಯ ಸ್ಪರ್ಧೆಗಳಿಗೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಚಟುವಟಿಕೆಯ ಅಗತ್ಯವಿದೆ ಎಂಬುದು ನನಗೆ ತಿಳಿದಿದೆ, ನೀವು ನಿಮ್ಮ ಮೆದುಳಿಗೆ ಕೆಲಸ ನೀಡಬೇಕು, ಕೆಲವೊಮ್ಮೆ ನಿಮ್ಮ ಕುಟುಂಬ ಸದಸ್ಯರು ಸಹ ಕಿರಿಕಿರಿಗೊಳ್ಳುತ್ತಾರೆ – ಈ ವ್ಯಕ್ತಿ ಅಂತ್ಯವಿಲ್ಲದಂತೆ ಏನು ಮಾಡುತ್ತಿದ್ದಾನೆ… ಗುಣಾಕಾರ, ಭಾಗಾಕಾರ ಇತ್ಯಾದಿ. ಆದರೆ ನಾನು ನಿಮಗೆ ಶುಭ ಹಾರೈಸುತ್ತೇನೆ. ನೀವು ದೇಶದ ಕೀರ್ತಿ ಮತ್ತು ಹೆಸರನ್ನು ಹೆಚ್ಚಿಸಿದ್ದೀರಿ. ಧನ್ಯವಾದಗಳು ಸ್ನೇಹಿತರೆ.

ವಿದ್ಯಾರ್ಥಿಗಳು: ಧನ್ಯವಾದಗಳು ಸರ್.

ಪ್ರಧಾನ ಮಂತ್ರಿ: ತುಂಬು ಧನ್ಯವಾದಗಳು.

ವಿದ್ಯಾರ್ಥಿಗಳು: ಧನ್ಯವಾದಗಳು ಸರ್, ಜೈ ಹಿಂದ್.

ಪ್ರಧಾನ ಮಂತ್ರಿ: ಜೈ ಹಿಂದ್ – ಜೈ ಹಿಂದ್.

ನಿಮ್ಮೆಲ್ಲರ ಜತೆ ಮಾತನಾಡಿದ್ದು ಖುಷಿ ತಂದಿದೆ. ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು. ಗಣಿತದ ಈ ಯುವ ದಿಗ್ಗಜರ ಸಂಭಾಷಣೆ ಕೇಳಿದ ನಂತರ, ಇತರ ಯುವಕರು ಗಣಿತವನ್ನು ಆನಂದಿಸಲು ಸ್ಫೂರ್ತಿ ಪಡೆಯುತ್ತಾರೆ ಎಂಬುದು ನನಗೆ ಖಾತ್ರಿಯಿದೆ.

ನನ್ನ ಪ್ರೀತಿಯ ದೇಶವಾಸಿಗಳೆ, ‘ಮನ್ ಕಿ ಬಾತ್’ನಲ್ಲಿ, ನಾನು ಈಗ ಒಂದು ವಿಷಯ ಹಂಚಿಕೊಳ್ಳಲು ಬಯಸುತ್ತೇನೆ, ಅದನ್ನು ಕೇಳಿದ ನಂತರ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ಆದರೆ ಅದರ ಬಗ್ಗೆ ನಿಮಗೆ ಹೇಳುವ ಮೊದಲು, ನಾನು ನಿಮಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಚರೈಡಿಯೊ ಮೈದಾಮ್ ಹೆಸರನ್ನು ನೀವು ಕೇಳಿದ್ದೀರಾ? ಇಲ್ಲದಿದ್ದರೆ, ನೀವು ಈಗ ಈ ಹೆಸರನ್ನು ಮತ್ತೆ ಮತ್ತೆ ಕೇಳುತ್ತೀರಿ,  ಇತರರಿಗೆ ಬಹಳ ಉತ್ಸಾಹದಿಂದ ಹೇಳುತ್ತೀರಿ. ಅಸ್ಸಾಂನ ಚರೈಡಿಯೊ ಮೈದಾಮ್ ಅನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ, ಇದು ಭಾರತದ 43ನೇ ತಾಣವಾಗಿದೆ. ವಿಶೇಷವಾಗಿ, ಈಶಾನ್ಯದ ಮೊದಲ ತಾಣವಾಗಿದೆ.

ಸ್ನೇಹಿತರೆ, ನಿಮ್ಮ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ, ಚರೈಡಿಯೊ ಮೈದಾಮ್ ಎಂದರೇನು? ಅದು ಏಕೆ ತುಂಬಾ ವಿಶೇಷವಾಗಿದೆ? ಚರೈಡಿಯೊ ಎಂದರೆ ಬೆಟ್ಟಗಳ ಮೇಲೆ ಹೊಳೆಯುವ ನಗರ. ಇದು ಅಹೋಮ್ ರಾಜವಂಶದ ಮೊದಲ ರಾಜಧಾನಿಯಾಗಿತ್ತು. ಅಹೋಮ್ ರಾಜವಂಶಸ್ಥರು ಸಾಂಪ್ರದಾಯಿಕವಾಗಿ ತಮ್ಮ ಪೂರ್ವಜರ ಅವಶೇಷಗಳನ್ನು ಮತ್ತು ಅವರ ಅಮೂಲ್ಯ ವಸ್ತುಗಳನ್ನು ಮೈದಾಮ್‌ನಲ್ಲಿ ಇರಿಸುತ್ತಿದ್ದರು.

ಮೈದಾಮ್ ಒಂದು ದಿಬ್ಬ ಅಥವಾ ಗುಡ್ಡೆಯಂತಹ ರಚನೆಯಾಗಿದ್ದು, ಮೇಲ್ಭಾಗದಲ್ಲಿ ಮಣ್ಣಿನಿಂದ ಮುಚ್ಚಲ್ಪಟ್ಟಿದೆ, ಕೆಳಗೆ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕೊಠಡಿಗಳನ್ನು ಹೊಂದಿದೆ. ಈ ಮೈದಾಮ್ ಅಹೋಮ್ ಸಾಮ್ರಾಜ್ಯದ ಅಗಲಿದ ರಾಜರು ಮತ್ತು ಗಣ್ಯರಿಗೆ ಗೌರವ ಸೂಚಿಸುವ ಸಂಕೇತವಾಗಿದೆ. ಪೂರ್ವಜರಿಗೆ ಗೌರವ ತೋರಿಸುವ ಈ ವಿಧಾನವು ತುಂಬಾ ವಿಶಿಷ್ಟವಾಗಿದೆ. ಈ ಸ್ಥಳದಲ್ಲಿ ಸಮುದಾಯ ಪೂಜೆಯೂ ನಡೆಯುತ್ತಿತ್ತು.

ಸ್ನೇಹಿತರೆ, ಅಹೋಮ್ ಸಾಮ್ರಾಜ್ಯದ ಇತರೆ ಮಾಹಿತಿಯು ನಿಮ್ಮನ್ನು ಇನ್ನಷ್ಟು ಆಶ್ಚರ್ಯಗೊಳಿಸುತ್ತದೆ. 13ನೇ ಶತಮಾನದಲ್ಲಿ ಪ್ರಾರಂಭವಾದ ಈ ಸಾಮ್ರಾಜ್ಯವು 19ನೇ ಶತಮಾನದ ಆರಂಭದ ತನಕ ಅಸ್ತಿತ್ವದಲ್ಲಿತ್ತು. ಒಂದು ಸಾಮ್ರಾಜ್ಯವು ಇಷ್ಟು ದೀರ್ಘಾವಧಿಯವರೆಗೆ ಉಳಿಯುವುದು ಒಂದು ದೊಡ್ಡ ಸಾಧನೆಯಾಗಿದೆ. ಪ್ರಾಯಶಃ ಅಹೋಮ್ ಸಾಮ್ರಾಜ್ಯದ ತತ್ವಗಳು ಮತ್ತು ನಂಬಿಕೆಗಳು ಎಷ್ಟು ಪ್ರಬಲವಾಗಿದ್ದವೆಂದರೆ, ಅದು ಈ ರಾಜವಂಶವನ್ನು ದೀರ್ಘಕಾಲ ಜೀವಂತವಾಗಿರಿಸಿತು. ಈ ವರ್ಷದ ಮಾರ್ಚ್ 9ರಂದು, ಅದಮ್ಯ ಧೈರ್ಯ ಮತ್ತು ಶೌರ್ಯದ ಸಂಕೇತವಾದ ಮಹಾನ್ ಅಹೋಮ್ ಯೋಧ ಲಸಿತ್ ಬೊರ್ಫುಕನ್ ಅವರ ಅತಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ನನಗೆ ಸಿಕ್ಕಿತು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಈ ಕಾರ್ಯಕ್ರಮ ಸಮಯದಲ್ಲಿ, ಅಹೋಮ್ ಸಮುದಾಯದ ಆಧ್ಯಾತ್ಮಿಕ ಸಂಪ್ರದಾಯ ಅನುಸರಿಸುವಾಗ ನನಗೆ ಒಂದು ವಿಶಿಷ್ಟವಾದ ಅನುಭವವಾಯಿತು. ಲಸಿತ್ ಮೈದಾನದಲ್ಲಿ ಅಹೋಮ್ ಸಮುದಾಯದ ಪೂರ್ವಜರಿಗೆ ಗೌರವ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿರುವುದು ನಿಜಕ್ಕೂ ದೊಡ್ಡ ಭಾವನೆ. ಚರೈಡಿಯೊ ಮೈದಾಮ್ ಈಗ ವಿಶ್ವ ಪಾರಂಪರಿಕ ತಾಣವಾಗಿರುವುದರಿಂದ ಹೆಚ್ಚಿನ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ನಿಮ್ಮ ಭವಿಷ್ಯದ ಪ್ರಯಾಣ ಯೋಜನೆಗಳ ಪಟ್ಟಿಗೆ ನೀವು ಸಹ ಈ ತಾಣವನ್ನು ಸೇರಿಸಬೇಕು.

ಸ್ನೇಹಿತರೆ, ಒಂದು ದೇಶವು ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದರಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಭಾರತದಲ್ಲೂ ಇಂತಹ ಹಲವು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಒಂದು ಪ್ರಯತ್ನವೆಂದರೆ – ಪ್ರಾಜೆಕ್ಟ್ ಪರಿ. ಪರಿ ಪದ ಕೇಳಿ ಗೊಂದಲಕ್ಕೀಡಾಗಬೇಡಿ. ಈ ಪರಿಯು ಸ್ವರ್ಗದ ಕಲ್ಪನೆಗೆ ಸಂಬಂಧಿಸಿಲ್ಲ ಆದರೆ ಭೂಮಿಯನ್ನು ಸ್ವರ್ಗವನ್ನಾಗಿ ಮಾಡುತ್ತಿದೆ. ಪರಿ(PARI) ಎಂದರೆ ಭಾರತದ ಸಾರ್ವಜನಿಕ ಕಲೆ – ಪ್ರಾಜೆಕ್ಟ್ ಪರಿ, ಸಾರ್ವಜನಿಕ ಕಲೆಯನ್ನು ಜನಪ್ರಿಯಗೊಳಿಸಲು ಉದಯೋನ್ಮುಖ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತರಲು ಇದು ಉತ್ತಮ ಮಾಧ್ಯಮವಾಗುತ್ತಿದೆ. ರಸ್ತೆ ಬದಿಗಳಲ್ಲಿ, ಗೋಡೆಗಳಲ್ಲಿ, ಅಂಡರ್‌ಪಾಸ್‌ಗಳಲ್ಲಿ ಸುಂದರವಾದ ವರ್ಣಚಿತ್ರಗಳನ್ನು ರಚಿಸುವುದನ್ನು ನೀವು ನೋಡಿರಬೇಕು. ಈ ವರ್ಣಚಿತ್ರಗಳು ಮತ್ತು ಈ ಕಲಾಕೃತಿಗಳು ಪರಿ(PARI)ಯೊಂದಿಗೆ ಸಂಬಂಧ ಹೊಂದಿರುವ ಅದೇ ಕಲಾವಿದರಿಂದ ರೂಪುಗೊಂಡಿವೆ. ಇದು ನಮ್ಮ ಸಾರ್ವಜನಿಕ ಸ್ಥಳಗಳ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ನಮ್ಮ ಸಂಸ್ಕೃತಿಯನ್ನು ಹೆಚ್ಚು ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ ದೆಹಲಿಯಲ್ಲಿರುವ ಭಾರತ ಮಂಟಪವನ್ನೇ ತೆಗೆದುಕೊಳ್ಳಿ. ಇಲ್ಲಿ ನೀವು ದೇಶಾದ್ಯಂತದ ಅದ್ಭುತ ಕಲಾಕೃತಿಗಳನ್ನು ಕಾಣಬಹುದು. ದೆಹಲಿಯ ಕೆಲವು ಅಂಡರ್‌ಪಾಸ್‌ಗಳು ಮತ್ತು ಫ್ಲೈಓವರ್‌ಗಳಲ್ಲಿ ನೀವು ಅಂತಹ ಸುಂದರವಾದ ಸಾರ್ವಜನಿಕ ಕಲೆಯನ್ನು ಸಹ ನೋಡಬಹುದು. ಕಲೆ ಮತ್ತು ಸಂಸ್ಕೃತಿ ಪ್ರೇಮಿಗಳು ಸಾರ್ವಜನಿಕ ಕಲೆಯಲ್ಲಿ ಹೆಚ್ಚು ಕೆಲಸ ಮಾಡುವಂತೆ ನಾನು ವಿನಂತಿಸುತ್ತೇನೆ. ಇದು ನಮ್ಮ ಬೇರುಗಳ ಬಗ್ಗೆ ಹೆಮ್ಮೆಪಡುವ ಆಹ್ಲಾದಕರ ಭಾವನೆ ನೀಡುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೆ, ‘ಮನ್ ಕಿ ಬಾತ್’ನಲ್ಲಿ, ನಾವು ಈಗ ‘ಬಣ್ಣ’ಗಳ ಬಗ್ಗೆ ಮಾತನಾಡುತ್ತೇವೆ – ಹರಿಯಾಣದ ರೋಹ್ಟಕ್ ಜಿಲ್ಲೆಯ 250ಕ್ಕೂ ಹೆಚ್ಚು ಮಹಿಳೆಯರ ಜೀವನದಲ್ಲಿ ಸಮೃದ್ಧಿಯ ವರ್ಣಗಳನ್ನು ತುಂಬಿದ ಬಣ್ಣಗಳು. ಕೈಮಗ್ಗ ಉದ್ಯಮಕ್ಕೆ ಸಂಬಂಧಿಸಿದ ಈ ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಸಣ್ಣ ಅಂಗಡಿಗಳನ್ನು ನಡೆಸುತ್ತಿದ್ದರು, ಕೂಲಿ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಪ್ರತಿಯೊಬ್ಬರಿಗೂ ಮುಂದೆ ಸಾಗುವ ಆಸೆ ಇರುತ್ತದೆ. ಆದ್ದರಿಂದ ಅವರು ಉನ್ನತಿ ಸ್ವಸಹಾಯ ಸಂಘಕ್ಕೆ ಸೇರಲು ನಿರ್ಧರಿಸಿದರು. ಈ ಗುಂಪಿಗೆ ಸೇರುವ ಮೂಲಕ ಅವರು ಬ್ಲಾಕ್ ಪ್ರಿಂಟಿಂಗ್ ಮತ್ತು ಡೈಯಿಂಗ್ ತರಬೇತಿ ಪಡೆದರು. ಬಟ್ಟೆಯ ಮೇಲೆ ಬಣ್ಣಗಳ ಮಾಯಾಜಾಲ ಹರಡುವ ಈ ಮಹಿಳೆಯರು, ಇಂದು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಇವರು ತಯಾರಿಸುವ ಬೆಡ್ ಕವರ್, ಸೀರೆ, ದುಪಟ್ಟಾಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

ಸ್ನೇಹಿತರೆ, ರೋಹ್ಟಕ್‌ನ ಈ ಮಹಿಳೆಯರಂತೆ, ದೇಶದ ವಿವಿಧ ಭಾಗಗಳ ಕುಶಲಕರ್ಮಿಗಳು ಕೈಮಗ್ಗ ಜನಪ್ರಿಯಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ಒಡಿಶಾದ ಸಂಬಲ್ಪುರಿ ಸೀರೆಯಾಗಿರಲಿ, ಸಂಸದರ ಮಹೇಶ್ವರಿ ಸೀರೆಯಾಗಿರಲಿ, ಮಹಾರಾಷ್ಟ್ರದ ಪೈಥಾನಿಯಾಗಿರಲಿ ಅಥವಾ ವಿದರ್ಭದ ಹ್ಯಾಂಡ್ ಬ್ಲಾಕ್ ಪ್ರಿಂಟ್‌ಗಳು, ಹಿಮಾಚಲದ ಭುಟಿಕೊ ಶಾಲುಗಳು ಮತ್ತು ಉಣ್ಣೆಯ ಬಟ್ಟೆಗಳು ಅಥವಾ ಜಮ್ಮು-ಕಾಶ್ಮೀರದ ಕಣಿ ಶಾಲುಗಳೇ ಇರಬಹುದು… ಕೈಮಗ್ಗ ಕುಶಲಕರ್ಮಿಗಳ ಕೆಲಸ ದೇಶದ ಮೂಲೆ ಮೂಲೆಗಳಲ್ಲಿ ಹರಡಿದೆ. ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್ 7ರಂದು ನಾವು ರಾಷ್ಟ್ರೀಯ ಕೈಮಗ್ಗ ದಿನ ಆಚರಿಸುತ್ತೇವೆ ಎಂಬುದನ್ನು ನೀವು ತಿಳಿದಿರಬೇಕು. ಇತ್ತೀಚಿನ ದಿನಗಳಲ್ಲಿ, ಕೈಮಗ್ಗ ಉತ್ಪನ್ನಗಳು ಜನರ ಹೃದಯದಲ್ಲಿ ಸ್ಥಾನ ಪಡೆದಿರುವ ರೀತಿ ನಿಜವಾಗಿಯೂ ಅತ್ಯಂತ ಯಶಸ್ವಿಯಾಗಿದೆ, ಅದ್ಭುತವಾಗಿದೆ. ಈಗ ಅನೇಕ ಖಾಸಗಿ ಕಂಪನಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಕೈಮಗ್ಗ ಉತ್ಪನ್ನಗಳು ಮತ್ತು ಸುಸ್ಥಿರ ಫ್ಯಾಷನ್ ಗಳಿಗೆ ಉತ್ತೇಜನ ನೀಡಿ, ಪ್ರಚಾರ ಮಾಡುತ್ತಿವೆ.

ಕೋಶಾ ಎಐ, ಹ್ಯಾಂಡ್|ಲೂಮ್ ಇಂಡಿಯಾ, ಡಿ-ಜಂಕ್, ನೊವಾಟ್ಯಾಕ್ಸ್, ಬ್ರಹ್ಮಪುತ್ರ ಫೇಬಲ್ಸ್ ಇಂತಹ ಹಲವು ಸ್ಟಾರ್ಟಪ್‌ಗಳು ಕೈಮಗ್ಗ ಉತ್ಪನ್ನಗಳನ್ನು ಜನಪ್ರಿಯಗೊಳಿಸುವಲ್ಲಿ ನಿರತವಾಗಿವೆ. ಅನೇಕ ಜನರು ತಮ್ಮ ಸ್ಥಳದ ಅಂತಹ ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನೀವು ಕೂಡ ನಿಮ್ಮ ಸ್ಥಳೀಯ ಉತ್ಪನ್ನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಹ್ಯಾಶ್‌ಟ್ಯಾಗ್ ಮೈ ಪ್ರಾಡಕ್ಟ್ ಮೈ ಪ್ರೈಡ್’ ಎಂಬ ಹೆಸರಿನೊಂದಿಗೆ ಅಪ್‌ಲೋಡ್ ಮಾಡಬಹುದು. ನಿಮ್ಮ ಈ ಸಣ್ಣ ಪ್ರಯತ್ನವು ಅನೇಕ ಜನರ ಜೀವನವನ್ನು ಬದಲಾಯಿಸುತ್ತದೆ.

ಸ್ನೇಹಿತರೆ, ಕೈಮಗ್ಗದ ಜತೆಗೆ ನಾನು ಖಾದಿ ಬಗ್ಗೆಯೂ ಮಾತನಾಡಲು ಬಯಸುತ್ತೇನೆ. ಖಾದಿ ಉತ್ಪನ್ನಗಳನ್ನು ಹಿಂದೆಂದೂ ಬಳಸದ ನಿಮ್ಮಲ್ಲಿ ಅನೇಕರು ಇದ್ದಿರಬಹುದು. ಆದರೆ ಇಂದು ಬಹಳ ಹೆಮ್ಮೆಯಿಂದ ಖಾದಿ ಧರಿಸುತ್ತಾರೆ. ಖಾದಿ ಗ್ರಾಮೋದ್ಯೋಗದ ವಹಿವಾಟು ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಒಂದೂವರೆ ಲಕ್ಷ ಕೋಟಿ ರೂಪಾಯಿಯ ಬಗ್ಗೆ ಯೋಚಿಸಿದರೆ ಖಾದಿ ಮಾರಾಟ ಎಷ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗುತ್ತದೆ. ಅದು 400% ಹೆಚ್ಚಳವಾಗಿದೆ. ಖಾದಿ, ಕೈಮಗ್ಗದ ಈ ಹೆಚ್ಚುತ್ತಿರುವ ಮಾರಾಟವು ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತಿದೆ. ಹೆಚ್ಚಾಗಿ, ಮಹಿಳೆಯರು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ನಾನು ಮತ್ತೊಮ್ಮೆ ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು ಹಲವು ಬಗೆಯ ಬಟ್ಟೆಗಳನ್ನು ಹೊಂದಿರಬೇಕು. ನೀವು ಇಲ್ಲಿಯವರೆಗೆ ಖಾದಿ ಬಟ್ಟೆಗಳನ್ನು ಖರೀದಿಸಿಲ್ಲದಿದ್ದರೆ, ಈ ವರ್ಷದಿಂದ ಪ್ರಾರಂಭಿಸಿ.

ಆಗಸ್ಟ್ ತಿಂಗಳು ಸಮೀಪಿಸುತ್ತಿದೆ. ಇದು ಸ್ವಾತಂತ್ರ್ಯ ಗಳಿಸಿದ ತಿಂಗಳು, ಇದು ಕ್ರಾಂತಿಯ ತಿಂಗಳು. ಖಾದಿ ಖರೀದಿಸಲು ಅದಕ್ಕಿಂತ ಉತ್ತಮ ಅವಕಾಶ ಬೇರೇನಿದೆ! ನನ್ನ ಪ್ರೀತಿಯ ದೇಶವಾಸಿಗಳೆ, ‘ಮನ್ ಕಿ ಬಾತ್’ನಲ್ಲಿ ನಾನು ನಿಮ್ಮೊಂದಿಗೆ ಡ್ರಗ್ಸ್ ಹಾವಳಿಯ ಸವಾಲುಗಳನ್ನು ಆಗಾಗ್ಗೆ ಚರ್ಚಿಸಿದ್ದೇನೆ. ಪ್ರತಿಯೊಂದು ಕುಟುಂಬವೂ ತಮ್ಮ ಮಗು ಡ್ರಗ್ಸ್‌ ಹಿಡಿತಕ್ಕೆ ಸಿಲುಕಬಹುದೆಂಬ ಆತಂಕದಲ್ಲಿದೆ. ಈಗ ಅಂತಹ ಜನರಿಗೆ ಸಹಾಯ ಮಾಡಲು, ಸರ್ಕಾರವು ವಿಶೇಷ ಕೇಂದ್ರ ತೆರೆದಿದೆ – ‘ಮಾನಸ್’. ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಇದು ಬಹುದೊಡ್ಡ ಹೆಜ್ಜೆಯಾಗಿದೆ. ಕೆಲವು ದಿನಗಳ ಹಿಂದೆ, ‘ಮಾನಸ್’ನ ಸಹಾಯವಾಣಿ ಮತ್ತು ಪೋರ್ಟಲ್ ಆರಂಭಿಸಲಾಯಿತು. ಸರ್ಕಾರವು ಟೋಲ್ ಫ್ರೀ ಸಂಖ್ಯೆ ‘1933’ ಬಿಡುಗಡೆ ಮಾಡಿದೆ. ಪುನರ್ವಸತಿಗೆ ಸಂಬಂಧಿಸಿದ ಅಗತ್ಯ ಸಲಹೆ ಅಥವಾ ಮಾಹಿತಿ ಪಡೆಯಲು ಯಾರಾದರೂ ಈ ಸಂಖ್ಯೆಗೆ ಕರೆ ಮಾಡಬಹುದು. ಯಾರಿಗಾದರೂ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೆ, ಅವರು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು. ಮಾನಸ್ ಜತೆಗೆ ಹಂಚಿಕೊಳ್ಳಲಾದ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ.

ಎಲ್ಲಾ ಜನರು, ಎಲ್ಲಾ ಕುಟುಂಬಗಳು, ಭಾರತವನ್ನು ‘ಡ್ರಗ್ಸ್ ಮುಕ್ತ’ ಮಾಡುವಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಮಾನಸ್ ಸಹಾಯವಾಣಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೆ, ನಾಳೆ ವಿಶ್ವಾದ್ಯಂತ ಹುಲಿ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ, ಹುಲಿಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಾವೆಲ್ಲರೂ ಹುಲಿಗಳಿಗೆ ಸಂಬಂಧಿಸಿದ ಘಟನೆಗಳ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಕಾಡಿನ ಸುತ್ತಲಿನ ಹಳ್ಳಿಗಳಲ್ಲಿ ಹುಲಿಯೊಂದಿಗೆ ಹೇಗೆ ಸಾಮರಸ್ಯದಿಂದ ಬದುಕಬೇಕು ಎಂದು ಎಲ್ಲರಿಗೂ ತಿಳಿದಿದೆ. ನಮ್ಮ ದೇಶದಲ್ಲಿ ಮನುಷ್ಯರು ಮತ್ತು ಹುಲಿಗಳ ನಡುವೆ ಸಂಘರ್ಷವಿಲ್ಲದ ಅನೇಕ ಹಳ್ಳಿಗಳಿವೆ. ಆದರೆ ಅಂತಹ ಸಂದರ್ಭ ಬಂದಾಗ ಅಲ್ಲಿಯೂ ಹುಲಿಗಳ ರಕ್ಷಣೆಗೆ ಅಭೂತಪೂರ್ವ ಪ್ರಯತ್ನಗಳು ನಡೆಯುತ್ತಿವೆ. ಸಾರ್ವಜನಿಕ ಸಹಭಾಗಿತ್ವದ ಅಂತಹ ಒಂದು ಪ್ರಯತ್ನವೆಂದರೆ “ಕುಲ್ಹಾಡಿ ಬ್ಯಾಂಡ್ ಪಂಚಾಯತ್”. ರಾಜಸ್ಥಾನದ ರಣಥಂಬೋರ್‌ನಿಂದ ಪ್ರಾರಂಭವಾದ “ಕುಲ್ಹಾಡಿ ಬ್ಯಾಂಡ್ ಪಂಚಾಯತ್” ಅಭಿಯಾನವು ತುಂಬಾ ಆಸಕ್ತಿದಾಯಕವಾಗಿದೆ. ಕೊಡಲಿ ಹಿಡಿದು ಕಾಡಿಗೆ ಹೋಗುವುದಿಲ್ಲ, ಮರ ಕಡಿಯುವುದಿಲ್ಲ ಎಂದು ಸ್ಥಳೀಯ ಸಮುದಾಯಗಳೇ ಸಂಕಲ್ಪ ಮಾಡಿವೆ. ಈ ಒಂದು ನಿರ್ಧಾರದಿಂದ ಇಲ್ಲಿನ ಕಾಡುಗಳು ಮತ್ತೊಮ್ಮೆ ಹಸಿರಿನಿಂದ ಕಂಗೊಳಿಸುತ್ತಿದ್ದು, ಹುಲಿಗಳಿಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ.

ಸ್ನೇಹಿತರೆ, ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶವು ಹುಲಿಗಳ ಪ್ರಮುಖ ಆವಾಸಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯ ಸಮುದಾಯಗಳು, ವಿಶೇಷವಾಗಿ ಗೊಂಡ ಮತ್ತು ಮನ ಬುಡಕಟ್ಟು ಜನಾಂಗದ ನಮ್ಮ ಸಹೋದರ ಸಹೋದರಿಯರು ಪರಿಸರ ಪ್ರವಾಸೋದ್ಯಮದತ್ತ ಕ್ಷಿಪ್ರ ದಾಪುಗಾಲು ಹಾಕಿದ್ದಾರೆ.

ಇಲ್ಲಿ ಹುಲಿಗಳ ಚಟುವಟಿಕೆ ಹೆಚ್ಚಲಿ ಎಂದು ಅರಣ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದ್ದಾರೆ. ಆಂಧ್ರ ಪ್ರದೇಶದ ನಲ್ಲಮಲೈ ಬೆಟ್ಟಗಳಲ್ಲಿ ವಾಸಿಸುವ ‘ಚೆಂಚು’ ಬುಡಕಟ್ಟು ಜನಾಂಗದ ಪ್ರಯತ್ನವನ್ನು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ. ಹುಲಿ ಟ್ರ್ಯಾಕರ್‌ಗಳಾಗಿರುವ ಅವರು, ಕಾಡಿನಲ್ಲಿ ಕಾಡು ಪ್ರಾಣಿಗಳ ಚಲನವಲನದ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಜತೆಗೆ ಆ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರೆ. ಅದೇ ರೀತಿ, ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆಯುತ್ತಿರುವ ‘ಬಾಗ್ ಮಿತ್ರ್ ಕಾರ್ಯಕ್ರಮ್’ ಕೂಡ ಸದ್ದು ಮಾಡುತ್ತಿದೆ. ಇದರ ಅಡಿ, ಸ್ಥಳೀಯ ಜನರಿಗೆ ‘ಟೈಗರ್ ಫ್ರೆಂಡ್ಸ್’ ಆಗಿ ಕೆಲಸ ಮಾಡಲು ತರಬೇತಿ ನೀಡಲಾಗುತ್ತದೆ. ಈ ‘ಟೈಗರ್ ಫ್ರೆಂಡ್ಸ್’ ಹುಲಿಗಳು ಮತ್ತು ಮನುಷ್ಯರ ನಡುವೆ ಯಾವುದೇ ಸಂಘರ್ಷವಿಲ್ಲ ಎಂಬುದನ್ನು ಕಟ್ಟುನಿಟ್ಟಾಗಿ ಖಚಿತಪಡಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಇಂತಹ ಹಲವು ಪ್ರಯತ್ನಗಳು ನಡೆಯುತ್ತಿವೆ. ನಾನು ಇಲ್ಲಿ ಕೆಲವು ಪ್ರಯತ್ನಗಳನ್ನು ಮಾತ್ರ ಚರ್ಚಿಸಿದ್ದೇನೆ, ಆದರೆ ಹುಲಿ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ತುಂಬಾ ಉಪಯುಕ್ತವಾಗಿದೆ ಎಂಬುದು ಸಂತೋಷವಾಗಿದೆ. ಇಂತಹ ಪ್ರಯತ್ನಗಳಿಂದಲೇ ಭಾರತದಲ್ಲಿ ಪ್ರತಿ ವರ್ಷ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಜಗತ್ತಿನಲ್ಲಿರುವ 70 ಪ್ರತಿಶತ ಹುಲಿಗಳು ನಮ್ಮ ದೇಶದಲ್ಲಿವೆ ಎಂದು ತಿಳಿದರೆ ನಿಮಗೆ ಸಂತೋಷ ಮತ್ತು ಹೆಮ್ಮೆ ಅನಿಸುತ್ತದೆ. ಊಹಿಸಿಕೊಳ್ಳಿ! ಭಾರತದಲ್ಲಿವೆ 70ರಷ್ಟು ಹುಲಿಗಳು! ಅದಕ್ಕಾಗಿಯೇ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಅನೇಕ ಹುಲಿ ಅಭಯಾರಣ್ಯಗಳಿವೆ.

ಸ್ನೇಹಿತರೆ, ಹುಲಿಗಳ ಸಂಖ್ಯೆ ಹೆಚ್ಚಳದ ಜತೆಗೆ ನಮ್ಮ ದೇಶದಲ್ಲಿ ಅರಣ್ಯ ಪ್ರದೇಶವೂ ವೇಗವಾಗಿ ಹೆಚ್ಚುತ್ತಿದೆ. ಅದರಲ್ಲಿಯೂ ಸಮುದಾಯದ ಪ್ರಯತ್ನದಿಂದ ದೊಡ್ಡ ಯಶಸ್ಸು ಸಿಗುತ್ತಿದೆ. ಕಳೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಏಕ್ ಪೆಡ್ ಮಾ ಕೆ ನಾಮ್’ ಕಾರ್ಯಕ್ರಮ ಕುರಿತು ನಿಮ್ಮೊಂದಿಗೆ ಚರ್ಚಿಸಿದ್ದೆ. ದೇಶದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಅಭಿಯಾನದೊಂದಿಗೆ ಸಂಪರ್ಕ ಸಾಧಿಸುತ್ತಿರುವುದು ನನಗೆ ಖುಷಿ ತಂದಿದೆ. ಕೆಲ ದಿನಗಳ ಹಿಂದೆ ಸ್ವಚ್ಛತೆಗೆ ಹೆಸರಾದ ಇಂದೋರ್‌ನಲ್ಲಿ ಅದ್ದೂರಿ ಕಾರ್ಯಕ್ರಮವೊಂದು ನಡೆಯಿತು. ‘ಏಕ್ ಪೆದ್ ಮಾ ಕೆ ನಾಮ್’ ಕಾರ್ಯಕ್ರಮದಲ್ಲಿ ಒಂದೇ ದಿನ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ನಿಮ್ಮ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಈ ಅಭಿಯಾನದಲ್ಲಿ ನೀವೂ ಕೈಜೋಡಿಸಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಕು. ಈ ಅಭಿಯಾನಕ್ಕೆ ಸೇರುವ ಮೂಲಕ, ನನ್ನ ತಾಯಿ ಮತ್ತು ನನ್ನ ಭೂಮಿತಾಯಿಗಾಗಿ ಏನನ್ನಾದರೂ ಮಾಡಿದ್ದೀನಿ ಎಂಬ ಭಾವನೆ ನಿಮ್ಮದಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೆ, ಆಗಸ್ಟ್ 15 ದೂರವಿಲ್ಲ, ಈಗ ಆಗಸ್ಟ್ 15ಕ್ಕೆ ಮತ್ತೊಂದು ಅಭಿಯಾನ ಸೇರಿಸಲಾಗಿದೆ, ‘ಹರ್ ಘರ್ ತಿರಂಗ ಅಭಿಯಾನ’. ಕಳೆದ ಕೆಲವು ವರ್ಷಗಳಿಂದ ಇಡೀ ದೇಶದಲ್ಲಿ ‘ಹರ್ ಘರ್ ತಿರಂಗ ಅಭಿಯಾನ’ಕ್ಕಾಗಿ ಎಲ್ಲರ ಉತ್ಸಾಹವು ಹೆಚ್ಚಾಗಿದೆ. ಬಡವರಿರಲಿ,  ಶ್ರೀಮಂತರಿರಲಿ, ಸಣ್ಣ ಮನೆಗಳಿರಲಿ, ದೊಡ್ಡ ಮನೆಯವರಿರಲಿ, ಪ್ರತಿಯೊಬ್ಬರೂ ತ್ರಿವರ್ಣ ಧ್ವಜ ಹಾರಿಸಲು ಹೆಮ್ಮೆ ಪಡುತ್ತಾರೆ.

ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಕ್ರೇಜ್ ಸಹ ಇದೆ. ಕಾಲೋನಿ ಅಥವಾ ಸೊಸೈಟಿಯ ಪ್ರತಿಯೊಂದು ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿದಾಗ, ಸ್ವಲ್ಪ ಸಮಯದೊಳಗೆ ತ್ರಿವರ್ಣವು ಇತರ ಮನೆಗಳ ಮೇಲೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಎಂಬುದನ್ನು ನೀವು ಗಮನಿಸಿರಬೇಕು. ಅದೇನೆಂದರೆ, ‘ಹರ್ ಘರ್ ತಿರಂಗ ಅಭಿಯಾನ’ – ತ್ರಿವರ್ಣ ಧ್ವಜದ ವೈಭವ ಎತ್ತಿ ಹಿಡಿಯುವ ವಿಶಿಷ್ಟವಾದ ಹಬ್ಬ ಇದಾಗಿದೆ. ಈಗ ಅದಕ್ಕೆ ಸಂಬಂಧಿಸಿದ ನಾನಾ ರೀತಿಯ ಆವಿಷ್ಕಾರಗಳೂ ನಡೆಯುತ್ತಿವೆ. ಆಗಸ್ಟ್ 15 ಸಮೀಪಿಸುತ್ತಿದ್ದಂತೆ, ಮನೆಗಳು, ಕಚೇರಿಗಳು, ಕಾರುಗಳಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಲು ವಿವಿಧ ರೀತಿಯ ಉತ್ಪನ್ನಗಳು ಕಂಡುಬರುತ್ತವೆ. ಕೆಲವರು ತ್ರಿವರ್ಣ ಧ್ವಜವನ್ನು ತಮ್ಮ ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಹಂಚುತ್ತಾರೆ. ಈ ಸಂತೋಷ, ತ್ರಿವರ್ಣದೊಂದಿಗೆ ಈ ಉತ್ಸಾಹವು ನಮ್ಮನ್ನು ಪರಸ್ಪರ ಸಂಪರ್ಕಿಸುತ್ತದೆ.

ಸ್ನೇಹಿತರೆ, ಮೊದಲಿನಂತೆಯೇ ಈ ವರ್ಷವೂ ನೀವು ತ್ರಿವರ್ಣ ಧ್ವಜದೊಂದಿಗೆ ನಿಮ್ಮ ಸೆಲ್ಫಿಯನ್ನು ‘harghartiranga.com’ ನಲ್ಲಿ ಅಪ್‌ಲೋಡ್ ಮಾಡಬೇಕು. ನಾನು ನಿಮಗೆ ಇನ್ನೂ ಹೆಚ್ಚಿನದನ್ನು ನೆನಪಿಸಲು ಬಯಸುತ್ತೇನೆ. ಪ್ರತಿ ವರ್ಷ ಆಗಸ್ಟ್ 15ರ ಮೊದಲು, ನೀವು ನನಗೆ ಬಹಳಷ್ಟು ಸಲಹೆಗಳನ್ನು ಕಳುಹಿಸುತ್ತೀರಿ. ಈ ವರ್ಷವೂ ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಬೇಕು. ನೀವು MyGov ಅಥವಾ NaMo ಅಪ್ಲಿಕೇಶನ್‌ನಲ್ಲಿ ನಿಮ್ಮ ಸಲಹೆಗಳನ್ನು ಕಳುಹಿಸಬಹುದು. ನಾನು  ಆಗಸ್ಟ್ 15ರ ಭಾಷಣದಲ್ಲಿ ಸಾಧ್ಯವಾದಷ್ಟು ಸಲಹೆಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೆ, ಈ ‘ಮನ್ ಕಿ ಬಾತ್’ ಸಂಚಿಕೆಯಲ್ಲಿ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ನನಗೆ ತುಂಬಾ ಸಂತೋಷವಾಯಿತು. ದೇಶದ ಹೊಸ ಸಾಧನೆಗಳೊಂದಿಗೆ, ಸಾರ್ವಜನಿಕ ಸಹಭಾಗಿತ್ವದ ಹೊಸ ಪ್ರಯತ್ನಗಳೊಂದಿಗೆ ನಾವು ಮುಂದಿನ ಬಾರಿ ಮತ್ತೆ ಭೇಟಿಯಾಗುತ್ತೇವೆ. ನೀವು ‘ಮನ್ ಕಿ ಬಾತ್’ಗಾಗಿ ನಿಮ್ಮ ಸಲಹೆಗಳನ್ನು ಕಳುಹಿಸುತ್ತಲೇ ಇರಬೇಕು. ಮುಂದಿನ ದಿನಗಳಲ್ಲಿ ಅನೇಕ ಹಬ್ಬಗಳು ಸಹ ಬರಲಿವೆ. ನಿಮಗೆ ಈ ಎಲ್ಲಾ ಹಬ್ಬಗಳ ಶುಭಾಶಯಗಳು. ನಿಮ್ಮ ಕುಟುಂಬದೊಂದಿಗೆ ಹಬ್ಬ ಆನಂದಿಸಿ. ದೇಶಕ್ಕಾಗಿ ಏನಾದರೂ ಹೊಸದನ್ನು ಮಾಡುವ ಶಕ್ತಿಯನ್ನು ಇಟ್ಟುಕೊಳ್ಳಿ.

ತುಂಬು ಧನ್ಯವಾದಗಳು. ನಮಸ್ಕಾರ.

 

*****