Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಡಲ ಪವನ ಶಕ್ತಿ ಯೋಜನೆಗಳ ಅನುಷ್ಠಾನಕ್ಕಾಗಿ ಕಾರ್ಯಸಾಧ್ಯತೆಯ ಅಂತರ ನಿಧಿ (ವಿಜಿಎಫ್) ಯೋಜನೆಗೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಕಡಲ  ಪವನ ಶಕ್ತಿ ಯೋಜನೆಗಳಿಗೆ ಕಾರ್ಯಸಾಧ್ಯತೆ ಅಂತರ ನಿಧಿ (ವಿಜಿಎಫ್) ಯೋಜನೆಗೆ ಒಟ್ಟು ರೂ.7453 ಕೋಟಿ ವೆಚ್ಚದ ಅನುಮೋದನೆ ನೀಡಿದ್ದು, ಇದು 1 ಗಿಗಾ ವ್ಯಾಟ್, ಕಡಲತೀರದ  ಪವನ ಶಕ್ತಿ ಯೋಜನೆಗಳ (ಗುಜರಾತ್ ಮತ್ತು ತಮಿಳುನಾಡು ಕರಾವಳಿಯಲ್ಲಿ ತಲಾ 500 ಮೆ.ವ್ಯಾ) ಸ್ಥಾಪನೆ ಮತ್ತು ಕಾರ್ಯಾರಂಭಕ್ಕೆ ರೂ.6853 ಕೋಟಿ ವೆಚ್ಚವನ್ನು ಮತ್ತು ಕಡಲ ಪವನ ಶಕ್ತಿ ಯೋಜನೆಗಳಿಗೆ ಸಾರಿಗೆ ಅವಶ್ಯಕತೆಗಳನ್ನು ಪೂರೈಸಲು ಎರಡು ಬಂದರುಗಳ ಉನ್ನತೀಕರಣಕ್ಕಾಗಿ ರೂ.600 ಕೋಟಿ ಅನುದಾನವನ್ನು ಒಳಗೊಂಡಿದೆ.

ಕಾರ್ಯಸಾಧ್ಯತೆ ಅಂತರ ನಿಧಿ (ವಿಜಿಎಫ್) ಯೋಜನೆಯು 2015 ರಲ್ಲಿ ಸೂಚಿಸಲಾದ ರಾಷ್ಟ್ರೀಯ ಕಡಲ ಪವನ ಶಕ್ತಿ ನೀತಿಯ ಅನುಷ್ಠಾನಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಅಸ್ತಿತ್ವದಲ್ಲಿರುವ ವಿಶಾಲವಾದ ಕಡಲ ಪವನ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಸರ್ಕಾರದ ವಿಜಿಎಫ್ ಯೋಜನೆಯ ಬೆಂಬಲವು ಕಡಲ ಪವನ ಶಕ್ತಿ ಯೋಜನೆಗಳಿಂದ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ಡಿಸ್ಕಾಮ್ (DISCOMs) ಗಳಿಂದ ಖರೀದಿಸಲು ಸಾಧ್ಯವಾಗಿಸುತ್ತದೆ. ಪಾರದರ್ಶಕ ಹರಾಜು ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಖಾಸಗಿ ಡೆವಲಪರ್ ಗಳು ಯೋಜನೆಗಳನ್ನು ಸ್ಥಾಪಿಸಿದರೆ, ಕಡಲಿನ ಸಬ್ ಸ್ಟೇಷನ್ ಗಳನ್ನು ಒಳಗೊಂಡಂತೆ ವಿದ್ಯುತ್ ಉತ್ಖನನ ಮೂಲಸೌಕರ್ಯವನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್  (ಪಿಜಿಸಿಐಎಲ್) ನಿರ್ಮಿಸುತ್ತದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ನೋಡಲ್ ಸಚಿವಾಲಯವಾಗಿ, ಯೋಜನೆಯ ಯಶಸ್ವಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. 

ಕಡಲ ಪವನಶಕ್ತಿ ಯೋಜನೆಗಳ ನಿರ್ಮಾಣ ಮತ್ತು ಅದರ ಕಾರ್ಯಾಚರಣೆಗಳಿಗೆ ನಿರ್ದಿಷ್ಟ ಬಂದರಿನ ಮೂಲಸೌಕರ್ಯ ಅಗತ್ಯವಿರುತ್ತದೆ, ಇದು ಭಾರೀ ಮತ್ತು ದೊಡ್ಡ ಆಯಾಮದ ಉಪಕರಣಗಳ ಸಂಗ್ರಹಣೆ ಮತ್ತು  ಸಾಗಾಣಿಕೆಯನ್ನು ನಿಭಾಯಿಸುತ್ತದೆ. ಈ ಯೋಜನೆಯಡಿಯಲ್ಲಿ, ಕಡಲ ಪವನಶಕ್ತಿ ಅಭಿವೃದ್ಧಿಯ ಅವಶ್ಯಕತೆಗಳನ್ನು ಪೂರೈಸಲು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ದೇಶದ ಎರಡು ಬಂದರುಗಳಿಗೆ ನೆರವು ನೀಡುತ್ತವೆ.

ಕಡಲ ಪವನಶಕ್ತಿಯು ನವೀಕರಿಸಬಹುದಾದ ಶಕ್ತಿಯ ಮೂಲವಾಗಿದೆ, ಇದು ಕಡಲ  ಗಾಳಿ ಮತ್ತು ಸೌರ ಯೋಜನೆಗಳ ಮೇಲೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಉದಾಹರಣೆಗೆ ಹೆಚ್ಚಿನ ಸಮರ್ಪಕತೆ ಮತ್ತು ವಿಶ್ವಾಸಾರ್ಹತೆ, ಕಡಿಮೆ ಸಂಗ್ರಹಣೆಯ ಅವಶ್ಯಕತೆ ಮತ್ತು ಹೆಚ್ಚಿನ ಉದ್ಯೋಗದ ಸಾಮರ್ಥ್ಯ. ಕಡಲ ಗಾಳಿ ವಲಯದ ಅಭಿವೃದ್ಧಿಯು ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಆರ್ಥಿಕವಾಗಿ ವ್ಯಾಪಕ ಪ್ರಯೋಜನಗಳಿಗೆ, ದೇಶದ ಉತ್ಪಾದನಾ ಸಾಮರ್ಥ್ಯಗಳ ಅಭಿವೃದ್ಧಿ, ಮೌಲ್ಯ ಸರಪಳಿಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ದೇಶದಲ್ಲಿ ಕಡಲ ಗಾಳಿಗಾಗಿ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದು ಭಾರತದ ಶಕ್ತಿ ಪರಿವರ್ತನೆಯ ಗುರಿಗಳನ್ನು ಸಾಧಿಸಲು ಸಹ ಕೊಡುಗೆ ನೀಡುತ್ತದೆ.

1 ಗಿಗಾ ವ್ಯಾಟ್ ಕಡಲ ಪವನ ಶಕ್ತಿ ಯೋಜನೆಗಳ ಯಶಸ್ವಿ ಕಾರ್ಯಾರಂಭವು ವಾರ್ಷಿಕವಾಗಿ ಸುಮಾರು 3.72 ಶತಕೋಟಿ ಯೂನಿಟ್ ಗಳ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುತ್ತದೆ, ಇದು 25 ವರ್ಷಗಳ ಅವಧಿಗೆ 2.98 ಮಿಲಿಯನ್ ಟನ್  ಇಂಗಾಲದ ಡೈಆಕ್ಸೈಡ್ ಸಮಾನವಾದ  ಹೊರಸೂಸುವಿಕೆಯನ್ನು ವಾರ್ಷಿಕವಾಗಿ ಕಡಿಮೆ ಮಾಡುತ್ತದೆ. ಇದಲ್ಲದೆ, ಈ ಯೋಜನೆಯು ಭಾರತದಲ್ಲಿ ಕಡಲ ಪವನ ಶಕ್ತಿಯ ಅಭಿವೃದ್ಧಿಯನ್ನು ಪ್ರಾರಂಭಿಸುವುದಲ್ಲದೆ, ಅದರ ಕಡಲು ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ದೇಶದಲ್ಲಿ ಅಗತ್ಯವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಕಾರಣವಾಗುತ್ತದೆ. ಈ ಪರಿಸರ ವ್ಯವಸ್ಥೆಯು ಸುಮಾರು ರೂ.4,50,000 ಕೋಟಿ ಹೂಡಿಕೆಯಲ್ಲಿ ಆರಂಭಿಕ 37 ಗಿ.ವ್ಯಾ ಕಡಲ ಪವನ ಶಕ್ತಿಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.

*****