Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ‘ವಿಕಸಿತ ಭಾರತ, ವಿಕಸಿತ ಪಶ್ಚಿಮ ಬಂಗಾಳ’ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

​​​​​​​  ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ‘ವಿಕಸಿತ ಭಾರತ, ವಿಕಸಿತ ಪಶ್ಚಿಮ ಬಂಗಾಳ’ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ‘ವಿಕಸಿತ ಭಾರತ, ವಿಕಸಿತ ಪಶ್ಚಿಮ ಬಂಗಾಳ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪಶ್ಚಿಮ ಬಂಗಾಳದಲ್ಲಿ 4500 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ರೈಲು ಹಾಗೂ ರಸ್ತೆ ವಲಯದ ಅನೇಕ ಯೋಜನೆಗಳನ್ನು ಅವರು ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸುಂದರ ಚಹಾ ತೋಟಗಳ ನಾಡಿನಲ್ಲಿ ಉಪಸ್ಥಿತರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇಂದಿನ ಯೋಜನೆಗಳನ್ನು ʻವಿಕಸಿತ ಪಶ್ಚಿಮ ಬಂಗಾಳʼದ ಕಡೆಗೆ ಮತ್ತೊಂದು ಹೆಜ್ಜೆ ಎಂದು ಅವರು ಬಣ್ಣಿಸಿದರು.

ಪಶ್ಚಿಮ ಬಂಗಾಳದ ಉತ್ತರ ಭಾಗವು ಈಶಾನ್ಯದ ಹೆಬ್ಬಾಗಿಲು ಮತ್ತು ನೆರೆಯ ರಾಷ್ಟ್ರಗಳೊಂದಿಗೆ ವ್ಯಾಪಾರ ಮಾರ್ಗಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಆದ್ದರಿಂದ, ರಾಜ್ಯದ ಉತ್ತರ ಭಾಗದ ಜೊತೆಗೆ ಪಶ್ಚಿಮ ಬಂಗಾಳದ ಅಭಿವೃದ್ಧಿಯು ಸಹ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು. ಆಧುನೀಕರಿಸಿದ ರೈಲು ಮತ್ತು ರಸ್ತೆ ಮೂಲಸೌಕರ್ಯದ ಅಗತ್ಯವನ್ನು ಒತ್ತಿ ಹೇಳಿದ ಅವರು, ಏಕಲಾಖಿ – ಬಲೂರ್‌ಘಾಟ್, ರಾಣಿನಗರ ಜಲ್‌ಪೈಗುರಿ – ಹಲ್ದಿಬಾರಿ ಮತ್ತು ಸಿಲಿಗುರಿ – ಅಲುಬಾರಿ ವಿಭಾಗಗಳಲ್ಲಿ ರೈಲು ಮಾರ್ಗಗಳ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿರುವುದನ್ನು ಉಲ್ಲೇಖಿಸಿದರು. ಇದು ಉತ್ತರ ಮತ್ತು ದಕ್ಷಿಣ ದಿನಾಜ್‌ಪುರ, ಕೂಚ್ ಬೆಹಾರ್ ಮತ್ತು ಜಲ್‌ಪೈಗುರಿ ಪ್ರದೇಶಗಳಲ್ಲಿ ರೈಲುಗಳ ವೇಗವನ್ನು ಹೆಚ್ಚಿಸುತ್ತದೆ. ಸಿಲಿಗುರಿ – ಸಮುಕ್ತಲಾ ಮಾರ್ಗವು ಹತ್ತಿರದ ಅರಣ್ಯ ಪ್ರದೇಶಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಬರ್ಸೋಯ್-ರಾಧಿಕಾಪುರ ವಿಭಾಗದ ವಿದ್ಯುದ್ದೀಕರಣವು ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ರಾಧಿಕಾಪುರ ಮತ್ತು ಸಿಲಿಗುರಿ ನಡುವಿನ ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಿದ್ದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಲ್ಲಿ ರೈಲ್ವೆಯನ್ನು ಬಲಪಡಿಸುವುದರಿಂದ ಅಭಿವೃದ್ಧಿಯ ಹೊಸ ಸಾಧ್ಯತೆಗಳಿಗೆ ವೇಗ ಸಿಗುತ್ತದೆ ಜೊತೆಗೆ ಇದು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಹೇಳಿದರು

ಭಾರತದ ಉಳಿದ ಭಾಗಗಳಂತೆ ಈ ಪ್ರದೇಶದಲ್ಲಿ ರೈಲುಗಳ ವೇಗವನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ ಮತ್ತು ಆಧುನಿಕ ಹೈಸ್ಪೀಡ್‌ ರೈಲುಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ʻಮಿಥಾಲಿ ಎಕ್ಸ್‌ಪ್ರೆಸ್ʼ,  ನ್ಯೂ ಜಲ್‌ಪೈಗುರಿಯಿಂದ ಢಾಕಾ ಕಂಟೋನ್ಮೆಂಟ್‌ವರೆಗೆ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದೊಂದಿಗಿನ ರೈಲು ಸಂಪರ್ಕವನ್ನು ಅವರು ಉಲ್ಲೇಖಿಸಿದರು ಮತ್ತು ಬಾಂಗ್ಲಾದೇಶ ಸರ್ಕಾರದ ಸಹಯೋಗದೊಂದಿಗೆ ರಾಧಿಕಾಪುರ ನಿಲ್ದಾಣದವರೆಗೆ ಸಂಪರ್ಕವನ್ನು ವಿಸ್ತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ಪೂರ್ವ ಭಾರತದ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಪ್ರಸ್ತುತ ಸರ್ಕಾರ ಪೂರ್ವ ಭಾರತವನ್ನು ರಾಷ್ಟ್ರದ ಬೆಳವಣಿಗೆಯ ಎಂಜಿನ್ ಎಂದು ಪರಿಗಣಿಸಿದೆ ಎಂದರು. ಅದಕ್ಕಾಗಿಯೇ ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸಲು ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳದ ವಾರ್ಷಿಕ ಸರಾಸರಿ ರೈಲ್ವೆ ಬಜೆಟ್ ಕೇವಲ 4,000 ಕೋಟಿ ರೂ.ಗಳಿಂದ ಈಗ 14,000 ಕೋಟಿ ರೂ.ಗೆ ಏರಿದೆ ಎಂದು ಪ್ರಧಾನಿ ಹೇಳಿದರು. ಉತ್ತರ ಬಂಗಾಳದಿಂದ ಗುವಾಹಟಿ ಮತ್ತು ಹೌರಾಗೆ ಸೆಮಿ ಹೈಸ್ಪೀಡ್ ʻವಂದೇ ಭಾರತ್ʼ ರೈಲು ಹಾಗೂ ಆಧುನೀಕರಣಕ್ಕಾಗಿ ಕೈಗೆತ್ತಿಕೊಂಡಿರುವ 500 ʻಅಮೃತ್ ಭಾರತ್ʼ ನಿಲ್ದಾಣಗಳಲ್ಲಿ ಸಿಲಿಗುರಿ ನಿಲ್ದಾಣದ ಸೇರ್ಪಡೆ ಬಗ್ಗೆ ಪ್ರಧಾನಿ ಮಾತನಾಡಿದರು. “ಈ 10 ವರ್ಷಗಳಲ್ಲಿ, ನಾವು ರೈಲ್ವೆ ಅಭಿವೃದ್ಧಿಯನ್ನು ʻಪ್ಯಾಸೆಂಜರ್‌ʼ ವೇಗದಿಂದ ʻಎಕ್ಸ್‌ಪ್ರೆಸ್‌ʼ ವೇಗಕ್ಕೆ ಕೊಂಡೊಯ್ದಿದ್ದೇವೆ. ನಮ್ಮ ಮೂರನೇ ಅವಧಿಯಲ್ಲಿ ಇದು ʻಸೂಪರ್ ಫಾಸ್ಟ್ʼ ವೇಗದಲ್ಲಿ ಮುಂದುವರಿಯುತ್ತದೆ,” ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಉತ್ತರ ಪಶ್ಚಿಮ ಬಂಗಾಳದಲ್ಲಿ 3,000 ಕೋಟಿ ರೂ.ಗೂ ಅಧಿಕ ಮೌಲ್ಯದ ಎರಡು ರಸ್ತೆ ಯೋಜನೆಗಳ ಉದ್ಘಾಟನೆಯ ಬಗ್ಗೆ ಪ್ರಧಾನಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ-27ರ ಘೋಷ್ಪುಕುರ್–ಧೂಪ್‌ಗುರಿ ವಿಭಾಗದ ಚತುಷ್ಪಥ ಹಾಗೂ ನಾಲ್ಕು ಪಥದ ಇಸ್ಲಾಂಪುರ ಬೈಪಾಸ್ ಮಾರ್ಗವು  ಜಲ್‌ಪೈಗುರಿ, ಸಿಲಿಗುರಿ ಮತ್ತು ಮೈನಗುರಿ ನಗರಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಸಿಲಿಗುರಿ, ಜಲ್‌ಪೈಗುರಿ ಮತ್ತು ಅಲಿಪುರ್ದುವಾರ್ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. “ದುವಾರ್, ಡಾರ್ಜಿಲಿಂಗ್, ಗಂಗ್ಟಕ್‌, ಮತ್ತು ಮಿರಿಕ್‌ನಂತಹ ಪ್ರವಾಸಿ ತಾಣಗಳನ್ನು ತಲುಪುವುದು ಇದರಿಂದ ಸುಲಭವಾಗಲಿದೆ,” ಎಂದು ಪ್ರಧಾನಿ ಮೋದಿ ಹೇಳಿದರು, ಇದು ಈ ಪ್ರದೇಶದ ವ್ಯಾಪಾರ, ಕೈಗಾರಿಕೆ ಮತ್ತು ಚಹಾ ತೋಟಗಳನ್ನು ಸಹ ಉತ್ತೇಜಿಸುತ್ತದೆ ಎಂದು ಹೇಳಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ನಾಗರಿಕರನ್ನು ಅಭಿನಂದಿಸುವ ಮೂಲಕ ಶ್ರೀ ಮೋದಿ ಅವರು ತಮ್ಮ ಮಾತು ಮುಗಿಸಿದರು.

ಪಶ್ಚಿಮ ಬಂಗಾಳದ ರಾಜ್ಯಪಾಲ ಶ್ರೀ ಸಿ.ವಿ.ಆನಂದ ಬೋಸ್, ಕೇಂದ್ರದ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಮತ್ತು ಸಂಸತ್ ಸದಸ್ಯ ಶ್ರೀ ರಾಜು ಬಿಸ್ತಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಉತ್ತರ ಬಂಗಾಳ ಮತ್ತು ಸುತ್ತಮುತ್ತಲ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ರೈಲು ಮಾರ್ಗಗಳ ವಿದ್ಯುದ್ದೀಕರಣದ ಹಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳಲ್ಲಿ ಎಕಲಾಖಿ – ಬಲೂರ್‌ಘಾಟ್ ವಿಭಾಗ; ಬರ್ಸೋಯಿ – ರಾಧಿಕಾಪುರ ವಿಭಾಗ; ರಾಣಿನಗರ್ ಜಲ್‌ಪೈಗುರಿ – ಹಲ್ದಿಬಾರಿ ವಿಭಾಗ; ಸಿಲಿಗುರಿ-ಅಲುಬಾರಿ ವಿಭಾಗದ ಮೂಲಕ ಬಾಗ್ಡೋಗ್ರಾ ಮತ್ತು ಸಿಲಿಗುರಿ-ಸಿವೊಕ್- ಅಲಿಪುರ್ದುವಾರ್ ಜಂಕ್ಷನ್ – ಸಮುಕ್ತಾಲಾ (ಅಲಿಪುರ್ದುವಾರ್ ಜಂಕ್ಷನ್ – ನ್ಯೂ ಕೂಚ್ ಬೆಹಾರ್ ಸೇರಿದಂತೆ) ವಿಭಾಗ ಸೇರಿವೆ.

ಮಣಿಗ್ರಾಮ್- ನಿಮ್ತಿಟಾ ವಿಭಾಗದಲ್ಲಿ ರೈಲು ಮಾರ್ಗದ ಡಬ್ಲಿಂಗ್‌ ಯೋಜನೆ; ನ್ಯೂ ಜಲ್‌ಪೈಗುರಿಯಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್, ಅಂಬಾರಿ ಫಲಕಟಾ – ಅಲುಬಾರಿಯಲ್ಲಿ ಸ್ವಯಂಚಾಲಿತ ಬ್ಲಾಕ್ ಸಿಗ್ನಲಿಂಗ್ ಸೇರಿದಂತೆ ಇತರ ಪ್ರಮುಖ ರೈಲ್ವೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಸಮರ್ಪಿಸಿದರು. ಸಿಲಿಗುರಿ ಮತ್ತು ರಾಧಿಕಾಪುರ ನಡುವಿನ ಹೊಸ ಪ್ಯಾಸೆಂಜರ್ ರೈಲು ಸೇವೆಗೆ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಿದರು. ಈ ರೈಲು ಯೋಜನೆಗಳು ರೈಲು ಸಂಪರ್ಕವನ್ನು ಸುಧಾರಿಸುತ್ತವೆ, ಸರಕು ಸಾಗಣೆಗೆ ಅನುಕೂಲ ಮಾಡಿಕೊಡುತ್ತವೆ ಮತ್ತು ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.

ಪ್ರಧಾನಮಂತ್ರಿಯವರು ಪಶ್ಚಿಮ ಬಂಗಾಳದಲ್ಲಿ 3,100 ಕೋಟಿ ರೂಪಾಯಿ ಮೌಲ್ಯದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ-27ರ ಘೋಷ್ಪುಕುರ್–ಧೂಪ್‌ಗುರಿ ವಿಭಾಗದ ಚತುಷ್ಪಥ ಹಾಗೂ ರಾಷ್ಟ್ರೀಯ ಹೆದ್ದಾರಿ-27ರಲ್ಲಿ ನಾಲ್ಕು ಪಥದ ಇಸ್ಲಾಂಪುರ ಬೈಪಾಸ್ ಸೇರಿವೆ. ಘೋಷ್ಪುಕುರ್ – ಧೂಪ್‌ಗುರಿ ವಿಭಾಗವು ಪೂರ್ವ ಭಾರತವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ʻಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ʼನ ಭಾಗವಾಗಿದೆ. ಈ ವಿಭಾಗದ ಚತುಷ್ಪಥವು ಉತ್ತರ ಬಂಗಾಳ ಮತ್ತು ಈಶಾನ್ಯ ಪ್ರದೇಶಗಳ ನಡುವೆ ತಡೆರಹಿತ ಸಂಪರ್ಕಕ್ಕೆ ದಾರಿ ಮಾಡುತ್ತದೆ. ನಾಲ್ಕು ಪಥದ ಇಸ್ಲಾಂಪುರ ಬೈಪಾಸ್, ಇಸ್ಲಾಂಪುರ ಪಟ್ಟಣದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರಸ್ತೆ ಯೋಜನೆಗಳು ಪ್ರದೇಶದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ.

***