ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಸೆಯ್ಯದ್ ಇಬ್ರಾಹಿಂ ರೈಸಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಪಶ್ಚಿಮ ಏಷ್ಯಾದಲ್ಲಿನ ಸಂದಿಗ್ಧ ಪರಿಸ್ಥಿತಿ ಹಾಗೂ ಇಸ್ರೇಲ್- ಹಮಾಸ್ ನಡುವಿನ ಸಂಘರ್ಷ ಕುರಿತಂತೆ ಉಭಯ ನಾಯಕರು ವಿಚಾರ ವಿನಿಮಯ ನಡೆಸಿದರು.
ಭಯೋತ್ಪಾದಕ ಕೃತ್ಯಗಳು, ಹಿಂಸಾಚಾರ ಹಾಗೂ ನಾಗರಿಕರ ಮಾರಣ ಹೋಮದ ಬಗ್ಗೆ ಪ್ರಧಾನ ಮಂತ್ರಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು. ಹಾಗೆಯೇ ಇಸ್ರೇಲ್-ಪ್ಯಾಲೆಸ್ಟೈನ್ ವಿಷಯದಲ್ಲಿ ಭಾರತದ ದೀರ್ಘಕಾಲಿಕ ಮತ್ತು ಸ್ಥಿರವಾದ ನಿಲುವನ್ನು ಅವರು ಪುನರುಚ್ಚರಿಸಿದರು.
ಇದೇ ವೇಳೆ ಅಧ್ಯಕ್ಷ ರೈಸಿ ಅವರು ಸಹ ಪರಿಸ್ಥಿತಿಯನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದರು.
ಉಭಯ ನಾಯಕರು ಹಿಂಸಾಚಾರ ಇನ್ನಷ್ಟು ಉಲ್ಬಣವಾಗುವುದನ್ನು ತಡೆಗಟ್ಟುವ ಅಗತ್ಯತೆ, ಮಾನವೀಯ ನೆಲೆಯಲ್ಲಿ ನೆರವು ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯ ಮರುಸ್ಥಾಪನೆ ಖಾತರಿಯ ಅಗತ್ಯವನ್ನು ಒತ್ತಿ ಹೇಳಿದರು.
ಹಾಗೆಯೇ ಉಭಯ ನಾಯಕರು ಬಹುಮುಖಿ ದ್ವಿಪಕ್ಷೀಯ ಸಹಕಾರದಲ್ಲಿ ಪ್ರಗತಿ ಪರಿಶೀಲನೆ ಜತೆಗೆ ಧನಾತ್ಮಕ ಬೆಳವಣಿಗೆ ಬಗ್ಗೆಯೂ ಮೌಲ್ಯಮಾಪನ ನಡೆಸಿದರು. ಜತೆಗೆ ಪ್ರಾದೇಶಿಕ ಸಂಪರ್ಕ ವೃದ್ಧಿ ದೃಷ್ಟಿಯಿಂದ ಇರಾನ್‌ನ ಚಬಹಾರ್ ಬಂದರಿನ ವಿಚಾರಕ್ಕೆ ನೀಡಲಾಗಿರುವ ಆದ್ಯತೆಯನ್ನು ಅವರು ಸ್ವಾಗತಿಸಿದರು.
ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸುಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಪರಸ್ಪರ ಗಮನ ನೀಡಿ ಸಂಪರ್ಕದಲ್ಲಿರಲು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು
***
Good exchange of perspectives with President @raisi_com of Iran on the difficult situation in West Asia and the Israel-Hamas conflict. Terrorist incidents, violence and loss of civilian lives are serious concerns. Preventing escalation, ensuring continued humanitarian aid and…
— Narendra Modi (@narendramodi) November 6, 2023