Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 29.10.2023 ರಂದು ಮಾಡಿದ ‘ಮನ್ ಕಿ ಬಾತ್’ – 106 ನೇ ಸಂಚಿಕೆಯ ಕನ್ನಡ ಅವತರಣಿಕೆ


ನನ್ನ ಪ್ರೀತಿಯ ಪರಿವಾರದವರೆ, ನಮಸ್ಕಾರ. ‘ಮನದ ಮಾತಿಗೆ’ ನಿಮಗೆ ಮತ್ತೊಮ್ಮೆ ಸ್ವಾಗತ. ನಾಡಿನಾದ್ಯಂತ ಹಬ್ಬ ಹರಿದಿನಗಳ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಈ ಕಂತು ಪ್ರಸಾರವಾಗುತ್ತಿದೆ. ಮುಂಬರುವ ಎಲ್ಲಾ ಹಬ್ಬಗಳಿಗೆ ನಿಮ್ಮೆಲ್ಲರಿಗೂ ಅನಂತ ಶುಭ ಹಾರೈಕೆಗಳು.

ಸ್ನೇಹಿತರೇ, ಈ ಹಬ್ಬಗಳ ಸಂಭ್ರಮದ ಮಧ್ಯೆ ದೆಹಲಿಯಿಂದ ಬಂದ ಸುದ್ದಿಯೊಂದಿಗೆ ನಾನು ‘ಮನದ ಮಾತನ್ನು’ ಆರಂಭಿಸಬಯಸುತ್ತೇನೆ. ಈ ತಿಂಗಳ ಆರಂಭದಲ್ಲಿ ಗಾಂಧಿ ಜಯಂತಿ ಸಂದರ್ಭದಲ್ಲಿ ದೆಹಲಿಯಲ್ಲಿ ಖಾದಿ ವಸ್ತ್ರಗಳ ದಾಖಲೆಯ ಮಾರಾಟವಾಗಿತ್ತು. ಇಲ್ಲಿನ ಕನ್ನಾಟ್ ಪ್ಲೇಸ್ ನಲ್ಲಿ ಒಂದೇ ಖಾದಿ ಅಂಗಡಿಯಿಂದ ಒಂದೇ ದಿನದಲ್ಲಿ 1.5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜನರು ಖರೀದಿಸಿದ್ದರು. ಈ ತಿಂಗಳಿನಲ್ಲಿ ನಡೆಯುತ್ತಿರುವ ಖಾದಿ ಮಹೋತ್ಸವವು ಮತ್ತೊಮ್ಮೆ ತನ್ನ ಹಳೆಯ ಮಾರಾಟದ ದಾಖಲೆಗಳನ್ನೆಲ್ಲ ಮುರಿದಿದೆ. ನಿಮಗೆ ಇನ್ನೊಂದು ವಿಷಯ ಬಗ್ಗೆ ತಿಳಿದು ಸಂತೋಷವಾಗಬಹುದು. ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಖಾದಿ ಉತ್ಪನ್ನಗಳ ಮಾರಾಟಕ್ಕೆ ಸಾಕಷ್ಟು ಶ್ರಮಿಸಿದರೂ 30 ಸಾವಿರ ಕೋಟಿ ರೂಪಾಯಿಗಿಂತ ಕಡಿಮೆಯಾಗುತ್ತಿತ್ತು. ಈಗ ಇದು ವೃದ್ಧಿಗೊಂಡು ಸುಮಾರು 1.25 ಲಕ್ಷ ಕೋಟಿ ರೂಪಾಯಿಗೆ ತಲುಪುತ್ತಿದೆ. ಖಾದಿ ಮಾರಾಟವನ್ನು ಹೆಚ್ಚಿಸುವುದು ಎಂದರೆ ಅದರ ಪ್ರಯೋಜನಗಳು ನಗರದಿಂದ ಹಳ್ಳಿಯವರೆಗೆ ಸಮಾಜದ ವಿವಿಧ ವರ್ಗಗಳಿಗೆ ತಲುಪುತ್ತವೆ. ಈ ಮಾರಾಟದ ಲಾಭ ನಮ್ಮ ನೇಕಾರರು, ಕುಶಲಕರ್ಮಿಗಳು, ನಮ್ಮ ರೈತರು, ಆಯುರ್ವೇದ ಸಸ್ಯಗಳನ್ನು ನೆಡುವ ಗುಡಿ ಕೈಗಾರಿಕೆಗಳು, ಪ್ರತಿಯೊಬ್ಬರಿಗೂ ಲಭಿಸುತ್ತಿದೆ ಮತ್ತು ಇದೇ ‘ವೋಕಲ್ ಫಾರ್ ಲೋಕಲ್’ ಅಭಿಯಾನದ ಶಕ್ತಿಯಾಗಿದೆ. ಹಾಗೆಯೇ ಕ್ರಮೇಣ ದೇಶಬಾಂಧವರ ಬೆಂಬಲವೂ ವೃದ್ಧಿಸುತ್ತಿದೆ.

ಸ್ನೇಹಿತರೇ, ಇಂದು ನಾನು ಮತ್ತೊಂದು ವಿನಂತಿಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ನಾನು ಆ ಕುರಿತು ಬಹಳಷ್ಟು ವಿನಂತಿಸಬಯಸುತ್ತೇನೆ. ನೀವು ಯಾವಾಗಲಾದರೂ ಪ್ರವಾಸಕ್ಕೆ ತೆರಳಿದರೆ, ತೀರ್ಥಯಾತ್ರೆಗೆ ಹೋದರೆ, ಅಲ್ಲಿನ ಸ್ಥಳೀಯ ಕಲಾವಿದರ ಉತ್ಪನ್ನಗಳನ್ನು ಖಂಡಿತ ಖರೀದಿಸಿ. ನಿಮ್ಮ ಪ್ರವಾಸದ ಒಟ್ಟಾರೆ ಬಜೆಟ್‌ನಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಖಂಡಿತ ಪ್ರಮುಖ ಆದ್ಯತೆ ನೀಡಿ. ಅದು ಶೇಕಡಾ 10 ಆಗಿರಲಿ 20 ಆಗಿರಲಿ, ನಿಮ್ಮ ಬಜೆಟ್ ಅನುಮತಿಸುವಷ್ಟು, ಸ್ಥಳೀಯ ವಸ್ತುಗಳಿಗಾಗಿ ಖರ್ಚು ಮಾಡಿ ಮತ್ತು ಅದನ್ನು ಅಲ್ಲಿಯೇ ಖರ್ಚು ಮಾಡಿ.

ಸ್ನೇಹಿತರೇ, ಪ್ರತಿ ಬಾರಿಯಂತೆ, ಈ ಬಾರಿಯೂ, ನಮ್ಮ ಹಬ್ಬಗಳಲ್ಲಿ, ನಮ್ಮ ಆದ್ಯತೆಯು ‘ವೋಕಲ್ ಫಾರ್ ಲೋಕಲ್’ ಗಾಗಿ ಆಗಿರಬೇಕು ಮತ್ತು ನಾವೆಲ್ಲರೂ ಒಗ್ಗೂಡಿ ಆ ಕನಸನ್ನು ನನಸಾಗಿಸೋಣ, ನಮ್ಮ ಕನಸು ‘ಸ್ವಾವಲಂಬಿ ಭಾರತ’. ನನ್ನ ದೇಶದ ಪ್ರಜೆಯ ಶ್ರಮದ ಘಮವಿರುವಂತಹ, ನನ್ನ ನಾಡಿನ ಯುವಕರ ಪ್ರತಿಭೆವುಳ್ಳಂತಹ, ನನ್ನ ದೇಶವಾಸಿಗಳಿಗೆ ಉದ್ಯೋಗ ಒದಗಿಸಿದ ಉತ್ಪಾದನೆಯಿಂದಲೇ ಈ ಬಾರಿ ಮನೆಯನ್ನು ಬೆಳಗಿಸಿ. ದೈನಂದಿನ ಜೀವನದ ಯಾವುದೇ ಅವಶ್ಯಕ ವಸ್ತುವಿದ್ದರೂ ಅಂತಹ ಉತ್ಪನ್ನವನ್ನು ಸ್ಥಳೀಯವಾಗಿಯೇ ಖರೀದಿಸೋಣ. ಆದರೆ, ನೀವು ಇನ್ನೊಂದು ವಿಷಯದ ಮೇಲೆ ಗಮನಹರಿಸಬೇಕು. ಈ ‘ವೋಕಲ್ ಫಾರ್ ಲೋಕಲ್’ ಎಂಬ ಸ್ಪೂರ್ತಿ ಕೇವಲ ಹಬ್ಬದ ಶಾಪಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ ಮತ್ತು ನಾನು ಎಲ್ಲೋ ನೋಡಿದ್ದೆ, ಜನರು ದೀಪಾವಳಿ ಹಣತೆಗಳನ್ನು ಖರೀದಿಸುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ‘ವೋಕಲ್ ಫಾರ್ ಲೋಕಲ್’ ಎಂದು ಪೋಸ್ಟ್ ಮಾಡುತ್ತಾರೆ – ಇಲ್ಲ, ಇದು ಕೇವಲ ಪ್ರಾರಂಭವಷ್ಟೇ. ನಾವು ಬಹಳಷ್ಟು ಮುಂದೆ ಸಾಗಬೇಕಿದೆ, ಜೀವನದ ಪ್ರತಿಯೊಂದು ಅವಶ್ಯಕತೆ ಪೂರೈಸುವ ವಸ್ತುಗಳು – ನಮ್ಮ ದೇಶದಲ್ಲಿ, ಈಗ ಲಭ್ಯವಿವೆ.

ಈ ಧ್ಯೇಯ ಕೇವಲ ಸಣ್ಣ ವ್ಯಾಪಾರಿಗಳಿಂದ ಮತ್ತು ಬೀದಿಬದಿ ವ್ಯಾಪಾರಿಗಳಿಂದ ಸರಕುಗಳನ್ನು ಖರೀದಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದು ಭಾರತ ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ಅನೇಕ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿವೆ. ನಾವು ಆ ಉತ್ಪನ್ನಗಳನ್ನು ಒಪ್ಪಿಕೊಂಡಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚು ಪ್ರಚಾರ ಲಭಿಸುತ್ತದೆ, ಜೊತೆಗೆ, ಇದು ಕೂಡ ಒಂದು ರೀತಿ ‘ವೋಕಲ್ ಫಾರ್ ಲೋಕಲ್’ ಆಗುತ್ತದೆ. ಅಂತಹ ಉತ್ಪನ್ನಗಳನ್ನು ಖರೀದಿಸುವಾಗ, ನಾವು ನಮ್ಮ ದೇಶದ ಹೆಮ್ಮೆಯಾದ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿ ಮಾಡುವುದನ್ನು ಮರೆಯಬೇಡಿ. ಜೀವನದಲ್ಲಿ ಇದನ್ನು ರೂಢಿಸಿಕೊಳ್ಳಿ. ಆ ಉತ್ಪನ್ನದೊಂದಿಗೆ ಅಥವಾ ಆ ಕುಶಲಕರ್ಮಿಯೊಂದಿಗೆ ಸೆಲ್ಫಿಯನ್ನು ಅದರಲ್ಲೂ ವಿಶೇಷವಾಗಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್ ಫೋನ್‌ನಿಂದ ತೆಗೆದುಕೊಂಡು NamoApp ನಲ್ಲಿ ನನ್ನೊಂದಿಗೆ ಹಂಚಿಕೊಳ್ಳಿ. ಅವುಗಳಲ್ಲಿ ಕೆಲವು ಪೋಸ್ಟ್‌ಗಳನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತೇನೆ ಇದರಿಂದ ಇತರರಿಗೂ ‘ವೋಕಲ್ ಫಾರ್ ಲೋಕಲ್’ ಗೆ ಪ್ರೇರಣೆ ಲಭಿಸಬಹುದಾಗಿದೆ.

ಸ್ನೇಹಿತರೇ, ನೀವು ಭಾರತದಲ್ಲಿ ತಯಾರಿಸಿದ, ಭಾರತೀಯರೇ ತಯಾರಿಸಿದ ಉತ್ಪನ್ನಗಳಿಂದ ನಿಮ್ಮ ದೀಪಾವಳಿಯನ್ನು ಬೆಳಗಿಸಿದಾಗ ಮತ್ತು ನಿಮ್ಮ ಕುಟುಂಬದ ಪ್ರತಿಯೊಂದು ಸಣ್ಣ ಅಗತ್ಯವನ್ನು ಸ್ಥಳೀಯ ವಸ್ತುಗಳಿಂದ ಪೂರೈಸಿದಾಗ, ದೀಪಾವಳಿಯ ಹೊಳಪು ಖಂಡಿತ ಮತ್ತಷ್ಟು ವೃದ್ಧಿಸುತ್ತದೆ. ಜೊತೆಗೆ, ಆ ಕುಶಲಕರ್ಮಿಗಳ ಜೀವನದಲ್ಲಿ, ಒಂದು ಹೊಸ ದೀಪಾವಳಿಯ ಆಗಮನವಾಗುತ್ತದೆ, ಜೀವನದಲ್ಲಿ ಹೊಸ ಬೆಳಕು ಮೂಡಿಸುತ್ತದೆ, ಅವರ ಜೀವನ ಸಂತೋಷಭರಿತವಾಗುತ್ತದೆ. ಭಾರತವನ್ನು ಸ್ವಾವಲಂಬಿಯನ್ನಾಗಿಸಿ, ‘ಮೇಕ್ ಇನ್ ಇಂಡಿಯಾ’ ಆಯ್ಕೆಯನ್ನು ಮುಂದುವರಿಸಿ, ಇದರಿಂದ ನಿಮ್ಮ ಜೊತೆಗೆ ಕೋಟಿಗಟ್ಟಲೆ ದೇಶವಾಸಿಗಳ ದೀಪಾವಳಿ ಆನಂದಮಯವಾಗಲಿ, ಸುಖಕರವಾಗಲಿ, ಪ್ರಕಾಶಮಾನವಾಗಲಿ ಮತ್ತು ಆಸಕ್ತಿದಾಯಕವಾಗಲಿ.

ನನ್ನ ಪ್ರೀತಿಯ ದೇಶವಾಸಿಗಳೇ, ಅಕ್ಟೋಬರ್ 31 ನಮ್ಮೆಲ್ಲರಿಗೂ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ನಾವು ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮಜಯಂತಿಯನ್ನು ಆಚರಿಸುತ್ತೇವೆ. ನಾವು, ಭಾರತೀಯರು ಅವರನ್ನು ಅನೇಕ ಕಾರಣಗಳಿಗಾಗಿ ನೆನಪಿಸಿಕೊಳ್ಳುತ್ತೇವೆ ಮತ್ತು ಶೃದ್ಧೆಯಿಂದ ನಮಿಸುತ್ತೇವೆ. ದೇಶದ 580 ಕ್ಕೂ ಹೆಚ್ಚು ರಾಜಪ್ರಭುತ್ವ ಹೊಂದಿದ ರಾಜ್ಯಗಳನ್ನು ಒಗ್ಗೂಡಿಸುವಲ್ಲಿ ಅವರ ಅನುಪಮ ಪಾತ್ರ ಅವರನ್ನು ನೆನೆಯಲು ಬಹುದೊಡ್ಡ ಕಾರಣವಾಗಿದೆ – ಪ್ರತಿ ವರ್ಷ ಅಕ್ಟೋಬರ್ 31 ರಂದು, ಏಕತಾ ದಿನಕ್ಕೆ ಸಂಬಂಧಿಸಿದ ಮುಖ್ಯ ಕಾರ್ಯಕ್ರಮವು ಗುಜರಾತ್‌ನ ಏಕತಾ ಪ್ರತಿಮೆಯ ಬಳಿ ನಡೆಯುತ್ತದೆ ಎಂದು ನಮಗೆ ತಿಳಿದಿದೆ. ಇದಲ್ಲದೇ ಈ ಬಾರಿ ದೆಹಲಿಯ ಕರ್ತವ್ಯಪಥದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇತ್ತೀಚಿಗೆ ನಾನು ದೇಶದ ಪ್ರತಿಯೊಂದು ಹಳ್ಳಿ ಮತ್ತು ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲು ವಿನಂತಿಸಿದ್ದು ನಿಮಗೆ ನೆನಪಿರಬಹುದು. ಪ್ರತಿ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ನಂತರ ಕಲಶದಲ್ಲಿ ಇರಿಸಲಾಯಿತು, ನಂತರ ಅಮೃತ ಕಲಶ ಯಾತ್ರೆ ಆರಂಭಿಸಲಾಯಿತು. ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ ಈ ಮಣ್ಣು, ಸಾವಿರಾರು ಅಮೃತ ಕಲಶ ಯಾತ್ರೆಗಳು ಈಗ ದೆಹಲಿ ತಲುಪುತ್ತಿವೆ. ಇಲ್ಲಿ ದೆಹಲಿಯಲ್ಲಿ ಆ ಮಣ್ಣನ್ನು ಬೃಹತ್ ಭಾರತ ಕಲಶದಲ್ಲಿ ಹಾಕಲಾಗುತ್ತದೆ ಮತ್ತು ಈ ಪವಿತ್ರ ಮಣ್ಣಿನಿಂದ ದೆಹಲಿಯಲ್ಲಿ ‘ಅಮೃತ ವಾಟಿಕ’ ನಿರ್ಮಾಣವಾಗಲಿದೆ. ಇದು ದೇಶದ ರಾಜಧಾನಿಯ ಹೃದಯದಲ್ಲಿ ಅಮೃತ್ ಮಹೋತ್ಸವದ ಭವ್ಯ ಪರಂಪರೆಯ ರೂಪದಲ್ಲಿ ಉಳಿಯಲಿದೆ. ದೇಶಾದ್ಯಂತ ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಅಕ್ಟೋಬರ್ 31ರಂದು ಮುಕ್ತಾಯಗೊಳ್ಳಲಿದೆ. ನೀವೆಲ್ಲರೂ ಒಗ್ಗೂಡಿ ಇದನ್ನು ವಿಶ್ವದ ಅತಿ ದೀರ್ಘಾವಧಿಯ ಉತ್ಸವಗಳಲ್ಲಿ ಒಂದನ್ನಾಗಿ ರೂಪಿಸಿದ್ದೀರಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ತಮ್ಮ ಹೋರಾಟಗಾರರಿಗೆ ಗೌರವ ಸೂಚಿಸುವ ಮೂಲಕ ಮತ್ತು ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವುದಾಗಲಿ, ಜನರು ತಮ್ಮ ಸ್ಥಳೀಯ ಇತಿಹಾಸಕ್ಕೆ ಹೊಸ ಮೆರುಗನ್ನು ನೀಡಿದ್ದಾರೆ. ಈ ಅವಧಿಯಲ್ಲಿ, ಸಾಮುದಾಯಿಕ ಸೇವೆಯ ಅದ್ಭುತ ಉದಾಹರಣೆಗಳನ್ನು ಕೂಡ ನೋಡಿದ್ದೇವೆ.

ಸ್ನೇಹಿತರೇ, ಇಂದು ನಿಮ್ಮೊಂದಿಗೆ ಅದರಲ್ಲೂ ವಿಶೇಷವಾಗಿ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಉತ್ಸಾಹ, ಕನಸು ಮತ್ತು ದೃಢಸಂಕಲ್ಪ ಹೊಂದಿರುವ ನನ್ನ ಯುವಜನತೆಯೊಂದಿಗೆ ಇನ್ನೊಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ.

ಇದು ದೇಶದ ಜನತೆಗಂತೂ ಒಳ್ಳೆಯ ಸುದ್ದಿಯೇ, ಆದರೆ ನನ್ನ ಯುವ ಸ್ನೇಹಿತರೇ, ಇದು ನಿಮಗೆ ವಿಶೇಷವಾಗಿದೆ. ಎರಡು ದಿನಗಳ ನಂತರ ಅಕ್ಟೋಬರ್ 31 ರಂದು, ಒಂದು ದೊಡ್ಡ ರಾಷ್ಟ್ರವ್ಯಾಪಿ ಸಂಘಟನೆಗೆ ಅಡಿಪಾಯ ಹಾಕಲಾಗುತ್ತಿದೆ ಮತ್ತು ಅದು ಕೂಡ ಸರ್ದಾರ್ ಸಾಹೇಬ್ ರ ಜನ್ಮಜಯಂತಿಯ ದಿನದಂದು. ಈ ಸಂಘಟನೆಯ ಹೆಸರು – ನನ್ನ ಯುವ ಭಾರತ, ಅಂದರೆ MYBharat. MYBharat ಸಂಘಟನೆಯು ಭಾರತದ ಯುವಕರಿಗೆ ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಭಾರತದ ಯುವ ಶಕ್ತಿಯನ್ನು ಒಗ್ಗೂಡಿಸುವ ವಿಶಿಷ್ಟ ಮಾರ್ಗವಾಗಿದೆ. ನನ್ನ ಯುವ ಭಾರತದ ಜಾಲತಾಣ MYBharat ಕೂಡ ಆರಂಭಗೊಳ್ಳಲಿದೆ. MYBharat.Gov.in ನಲ್ಲಿ ನೋಂದಾಯಿಸಿ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಸೈನ್ ಅಪ್ ಮಾಡಿ ಎಂದು ನಾನು ಯುವಕರನ್ನು ಆಗ್ರಹಿಸುತ್ತೇನೆ, ನನ್ನ ದೇಶದ ಯುವಕರೇ, ನನ್ನ ದೇಶದ ಎಲ್ಲಾ ಪುತ್ರರೇ ಮತ್ತು ಪುತ್ರಿಯರೇ, ನಿಮ್ಮೆಲ್ಲರಿಗೂ ನಾನು ನೋಂದಾಯಿಸಿಕೊಳ್ಳುವಂತೆ ಮತ್ತೆ ಮತ್ತೆ ಆಗ್ರಹಿಸುತ್ತೇನೆ. ಅಕ್ಟೋಬರ್ 31 ರಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯತಿಥಿಯೂ ಇದೆ. ಅವರಿಗೂ ನನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.

ನನ್ನ ಪರಿವಾರ ಜನರೆ, ನಮ್ಮ ಸಾಹಿತ್ಯ, literature, ಏಕ್ ಭಾರತ – ಶ್ರೇಷ್ಠ ಭಾರತ ಭಾವನೆಯನ್ನು ಗಾಢವಾಗಿಸುವ ಅತ್ಯುತ್ತಮ ಮಾಧ್ಯಮಗಳಲ್ಲಿ ಒಂದಾಗಿದೆ. ತಮಿಳುನಾಡಿನ ಭವ್ಯ ಪರಂಪರೆಗೆ ಸಂಬಂಧಿಸಿದ ಎರಡು ಸ್ಪೂರ್ತಿದಾಯಕ ಪ್ರಯತ್ನಗಳ ಕುರಿತು ನಿಮಗೆ ಹೇಳಬಯಸುತ್ತೇನೆ. ತಮಿಳಿನ ಖ್ಯಾತ ಲೇಖಕಿ ಸಹೋದರಿ ಶಿವಶಂಕರಿ ಅವರ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ಲಭಿಸಿದೆ. ಅವರು ಒಂದು Project ಮಾಡಿದ್ದಾರೆ – Knit India, Through Literature, ಅದರ ಅರ್ಥ ಸಾಹಿತ್ಯದ ಮೂಲಕ ದೇಶವನ್ನು ಒಂದು ಸೂತ್ರದಲ್ಲಿ ಹೆಣೆಯುವುದು ಮತ್ತು ಒಗ್ಗೂಡಿಸುವುದು. ಅವರು ಈ ಯೋಜನೆಗಾಗಿ ಕಳೆದ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯ ಮೂಲಕ ಅವರು 18 ಭಾರತೀಯ ಭಾಷೆಗಳಲ್ಲಿ ಬರೆದ ಸಾಹಿತ್ಯವನ್ನು ಅನುವಾದಿಸಿದ್ದಾರೆ.

ಅವರು ವಿವಿಧ ರಾಜ್ಯಗಳ ಬರಹಗಾರರು ಮತ್ತು ಕವಿಗಳನ್ನು ಸಂದರ್ಶಿಸಲೆಂದು ಹಲವಾರು ಬಾರಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಇಂಫಾಲ್‌ನಿಂದ ಜೈಸಲ್ಮೇರ್‌ವರೆಗೆ ದೇಶದಾದ್ಯಂತ ಪ್ರಯಾಣಿಸಿದ್ದಾರೆ. ಇದರಿಂದಾಗಿ. ಶಿವಶಂಕರಿ ಅವರು ವಿವಿಧ ಸ್ಥಳಗಳಿಗೆ ಪ್ರವಾಸ ಮಾಡಿದ travel commentary ಜೊತೆಗೆ ಅವನ್ನು ಪ್ರಕಟಿಸಿದ್ದಾರೆ. ಇದು ತಮಿಳು ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿದೆ. ಈ ಯೋಜನೆಯಲ್ಲಿ ನಾಲ್ಕು ದೊಡ್ಡ ಸಂಗ್ರಹಗಳಿವೆ ಮತ್ತು ಪ್ರತಿ ಸಂಗ್ರಹವನ್ನು ಭಾರತದ ಬೇರೆ ಬೇರೆ ಭಾಗಕ್ಕೆ ಸಮರ್ಪಿಸಲಾಗಿದೆ. ಅವರ ಸಂಕಲ್ಪ ಶಕ್ತಿಯ ಬಗ್ಗೆ ನನಗೆ ಹೆಮ್ಮೆ ಇದೆ.

ಸ್ನೇಹಿತರೇ, ಕನ್ಯಾಕುಮಾರಿಯ ತಿರು ಎ. ಕೆ. ಪೆರುಮಾಳ್ ಅವರ ಕೆಲಸವೂ ತುಂಬಾ ಸ್ಪೂರ್ತಿದಾಯಕವಾಗಿದೆ. ತಮಿಳುನಾಡಿನ ಕಥೆ ಹೇಳುವ ಸಂಪ್ರದಾಯವನ್ನು ಉಳಿಸುವ ಅವರ ಕಾರ್ಯ ಅತ್ಯಂತ ಶ್ಲಾಘನೀಯ. ಅವರು ಕಳೆದ 40 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ತಮಿಳುನಾಡಿನ ವಿವಿಧ ಭಾಗಗಳಿಗೆ ತೆರಳಿ ಜಾನಪದ ಕಲಾ ಪ್ರಕಾರಗಳನ್ನು ಹುಡುಕಿ ಅದನ್ನು ತಮ್ಮ ಪುಸ್ತಕದಲ್ಲಿ ಸೇರಿಸುತ್ತಾರೆ. ಅವರು ಇಲ್ಲಿಯವರೆಗೆ ಇಂತಹ ಸುಮಾರು 100 ಪುಸ್ತಕಗಳನ್ನು ಬರೆದಿದ್ದಾರೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಇದಲ್ಲದೇ ಪೆರುಮಾಳ್ ಅವರಿಗೆ ಇನ್ನೊಂದು Passion ಕೂಡ ಇದೆ. ತಮಿಳುನಾಡಿನ ದೇವಾಲಯ ಸಂಸ್ಕೃತಿಯ ಬಗ್ಗೆ ಸಂಶೋಧನೆ ಮಾಡುವುದು ಅವರಿಗೆ ಬಹಳ ಇಷ್ಟವಾದ ಕೆಲಸ. ಅವರು ತೊಗಲು ಬೊಂಬೆಗಳ ಕುರಿತು ಸಾಕಷ್ಟು ಸಂಶೋಧನೆ ನಡೆಸಿದ್ದು, ಅಲ್ಲಿನ ಸ್ಥಳೀಯ ಜನಪದ ಕಲಾವಿದರಿಗೆ ಇದರಿಂದ ಬಹಳ ಅನುಕೂಲವಾಗುತ್ತಿದೆ.

ಶಿವಶಂಕರಿ ಮತ್ತು ಎ. ಕೆ. ಪೆರುಮಾಳ್ ಅವರ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ. ತನ್ನ ಸಂಸ್ಕೃತಿಯನ್ನು ಉಳಿಸುವ ಪ್ರತಿಯೊಂದು ಪ್ರಯತ್ನದ ಬಗ್ಗೆ ಭಾರತ ಹೆಮ್ಮೆಪಡುತ್ತದೆ, ಇಂಥ ಪ್ರಯತ್ನಗಳು ನಮ್ಮ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಅಲ್ಲದೆ ದೇಶದ ಹೆಸರು, ದೇಶದ ಗೌರವ, ಎಲ್ಲವನ್ನೂ ವೃದ್ಧಿಸುತ್ತವೆ.

  • ಪ್ರೀತಿಯ ಪರಿವಾರ ಸದಸ್ಯರೇ, ಮುಂದಿನ ತಿಂಗಳು ನವೆಂಬರ್ 15 ರಂದು ಇಡೀ ದೇಶ ಜನಜಾತೀಯ ಗೌರವ ದಿನ ಆಚರಿಸಲಿದೆ. ಈ ವಿಶೇಷ ದಿನದಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಆಚರಣೆಯಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರು ನಮ್ಮೆಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ನಿಜವಾದ ಧೈರ್ಯ, ಸಾಹಸವೆಂದರೇನು ಮತ್ತು ನಮ್ಮ ಸಂಕಲ್ಪಕ್ಕೆ ಬದ್ಧರಾಗಿರುವುದು ಎಂದರೇನು ಎನ್ನುವುದನ್ನು ನಾವು ಅವರ ಜೀವನದಿಂದ ಕಲಿಯಬಹುದಾಗಿದೆ. ಅವರು ವಿದೇಶಿಯರ ಆಡಳಿತವನ್ನು ಎಂದಿಗೂ ಒಪ್ಪಲಿಲ್ಲ. ಅನ್ಯಾಯಕ್ಕೆ ಅವಕಾಶವೇ ಇಲ್ಲದಂತಹ ಸಮಾಜದ ಕಲ್ಪನೆ ಮಾಡಿದ್ದರು. ಪ್ರತಿಯೊಬ್ಬರಿಗೂ ಗೌರವದಿಂದ ಕೂಡಿದ ಮತ್ತು ಸಮಾನ ಜೀವನ ದೊರೆಯಬೇಕೆಂದು ಅವರು ಬಯಸುತ್ತಿದ್ದರು. ಭಗವಾನ್ ಬಿರ್ಸಾ ಮುಂಡಾ ಅವರು ಪ್ರಕೃತಿಯೊಂದಿಗೆ ಮಾನವ ಸಾಮರಸ್ಯದಿಂದ ಹೇಗೆ ಜೀವನ ನಡೆಸಬೇಕು ಎಂಬುದಕ್ಕೆ ಯಾವಾಗಲೂ ಒತ್ತು ನೀಡುತ್ತಿದ್ದರು. ನಮ್ಮ ಬುಡಕಟ್ಟು ಜನಾಂಗದ ಸೋದರ-ಸೋದರಿಯರು ಪ್ರಕೃತಿಯ ಸಂರಕ್ಷಣೆಗೆ ಮತ್ತು ಅದನ್ನು ಜತನದಿಂದ ಕಾಪಾಡಲು ಎಲ್ಲ ರೀತಿಯಿಂದಲೂ ಸಮರ್ಪಣಾ ಭಾವ ಹೊಂದಿರುವುದನ್ನು ನಾವು ಈಗಲೂ ಕಾಣಬಹುದು. ನಮ್ಮೆಲ್ಲರಿಗೂ, ನಮ್ಮ ಈ ಬುಡಕಟ್ಟು ಜನಾಂಗದ ಸೋದರ ಸೋದರಿಯರ ಕಾರ್ಯ ಬಹಳ ಪ್ರೇರಣಾದಾಯಕವಾಗಿದೆ.

ಸ್ನೇಹಿತರೇ, ನಾಳೆ ಅಂದರೆ ಅಕ್ಟೋಬರ್ 30 ರಂದು ಗೋವಿಂದ ಗುರು ಅವರ ಪುಣ್ಯತಿಥಿ. ನಮ್ಮ ಗುಜರಾತ್ ಮತ್ತು ರಾಜಸ್ತಾನದ ಬುಡಕಟ್ಟು ಮತ್ತು ವಂಚಿತ ಸಮುದಾಯದವರ ಜೀವನದಲ್ಲಿ ಗೋವಿಂದ ಗುರು ಅವರ ಪ್ರಾಮುಖ್ಯತೆ ಬಹಳವಿದೆ. ನಾನು ಗೋವಿಂದ ಗುರು ಅವರಿಗೆ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ನವೆಂಬರ್ ತಿಂಗಳಿನಲ್ಲಿ ನಾವು ಮಾನಗಢ ಹತ್ಯಾಕಾಂಡದ ವರ್ಷಾಚರಣೆಯನ್ನು ಕೂಡಾ ಮಾಡುತ್ತೇವೆ. ಆ ಹತ್ಯಾಕಾಂಡದಲ್ಲಿ ಹುತಾತ್ಮರಾದ ತಾಯಿ ಭಾರತಿಯ ಎಲ್ಲಾ ಮಕ್ಕಳಿಗೂ ನಾನು ನಮನ ಸಲ್ಲಿಸುತ್ತೇನೆ.

ಸ್ನೇಹಿತರೇ, ನಮ್ಮ ದೇಶದಲ್ಲಿ ಬುಡಕಟ್ಟು ಯೋಧರ ಶ್ರೀಮಂತ ಇತಿಹಾಸವಿದೆ. ಈ ಭಾರತದ ನೆಲದಲ್ಲಿ ಮಹಾನ್ ತಿಲಕಾ ಮಾಂಜಿ ಅವರು ಅನ್ಯಾಯದ ವಿರುದ್ಧ ಸಿಡಿದೆದ್ದು ಕಹಳೆ ಮೊಳಗಿಸಿದ್ದರು. ಈ ನೆಲದಿಂದಲೇ ಸಿದ್ಧೋ-ಕಾನ್ಹೂ ಅವರು ಸಮಾನತೆಯ ಧ್ವನಿ ಎತ್ತಿದ್ದರು. ತಾಂತ್ಯಾ ಭೀಲ್ ಎನ್ನುವ ಜನ ಯೋಧ ಕೂಡಾ ನಮ್ಮ ನೆಲದಲ್ಲಿ ಜನಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಜನರ ಪರವಾಗಿ ನಿಂತ ಹುತಾತ್ಮ ವೀರ ನಾರಾಯಣ್ ಸಿಂಗ್ ಅವರನ್ನು ನಾವು ಬಹಳ ಗೌರವದಿಂದ ಸ್ಮರಿಸುತ್ತೇವೆ. ವೀರ ರಾಮಜೀ ಗೋಂಡ್ ಆಗಿರಲಿ, ವೀರ ಗುಂಡಾಧುರ್ ಆಗಿರಲಿ, ಭೀಮಾ ನಾಯಕ್ ಆಗಿರಲಿ, ಇಂತಹ ವ್ಯಕ್ತಿಗಳ ಶೌರ್ಯ, ಸಾಹಸ ಇಂದಿಗೂ ನಮಗೆ ಪ್ರೇರಣಾದಾಯಕವಾಗಿದೆ. ಅಲ್ಲೂರಿ ಸೀತಾರಾಮರಾಜು ಅವರು ಬುಡಕಟ್ಟು ಸೋದರ ಸೋದರಿಯರಲ್ಲಿ ತುಂಬಿದ ಚೈತನ್ಯವನ್ನು ದೇಶ ಇಂದಿಗೂ ಸ್ಮರಿಸುತ್ತದೆ. ಈಶಾನ್ಯದಲ್ಲಿ ಕಿಯಾಂಗ್ ನೋಬಂಗ್ ಮತ್ತು ರಾಣಿ ಗಾಯ್ದಿಲನ್ಯೂ ಅವರಂತಹ ಸ್ವಾಂತಂತ್ರ್ಯ ಹೋರಾಟಗಾರರಿಂದ ನಮಗೆ ಸಾಕಷ್ಟು ಸ್ಫೂರ್ತಿ ದೊರೆಯುತ್ತದೆ. ಬುಡಕಟ್ಟು ಸಮಾಜದಿಂದಲೇ ನಮ್ಮ ದೇಶಕ್ಕೆ ರಾಜಮೋಹಿನೀ ದೇವಿ ಮತ್ತು ರಾಣಿ ಕಲಮಾಪತಿಯಂತಹ ವೀರಾಂಗನೆಯರು ದೊರೆತಿದ್ದಾರೆ. ಬುಡಕಟ್ಟು ಸಮಾಜಕ್ಕೆ ಸ್ಫೂರ್ತಿ ನೀಡಿದ್ದ ರಾಣಿ ದುರ್ಗಾವತಿ ಅವರ 500 ನೇ ಜಯಂತಿಯನ್ನು ದೇಶ ಈಗ ಆಚರಿಸುತ್ತಿದೆ. ದೇಶದ ಹೆಚ್ಚು ಹೆಚ್ಚು ಯುವಜನತೆ ತಮ್ಮ ತಮ್ಮ ಪ್ರದೇಶದಲ್ಲಿ ಖ್ಯಾತರಾಗಿರುವ ಬುಡಕಟ್ಟು ಜನಾಂಗದ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಮತ್ತು ಅವರಿಂದ ಪ್ರೇರಿತರಾಗುತ್ತಾರೆ ಎಂದು ನಾನು ಆಶಿಸುತ್ತೇನೆ. ರಾಷ್ಟ್ರದ ಸ್ವಾಭಿಮಾನ ಮತ್ತು ಪ್ರಗತಿಗೆ ಸದಾ ಪ್ರಾಮುಖ್ಯತೆ ನೀಡಿದ ನಮ್ಮ ಬುಡಕಟ್ಟು ಸಮುದಾಯಕ್ಕೆ ದೇಶ ಸದಾ ಕೃತಜ್ಞತೆ ತೋರುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ, ಹಬ್ಬಗಳ ಈ ಋತುವಿನಲ್ಲಿ, ದೇಶದಲ್ಲಿ ಕ್ರೀಡೆಗಳ ಪತಾಕೆಯೂ ಹಾರಾಡುತ್ತಿದೆ. ಇತ್ತೀಚಿಗಷ್ಟೇ ಏಷ್ಯನ್ ಗೇಮ್ಸ್ ನಂತರ ಪ್ಯಾರಾ ಏಷ್ಟನ್ ಗೇಮ್ಸ್ ನಲ್ಲಿ ಕೂಡಾ ಭಾರತದ ಕ್ರೀಡಾಪಟುಗಳು ಅದ್ಭುತ ಯಶಸ್ಸನ್ನು ಗಳಿಸಿದ್ದಾರೆ. ಈ ಪಂದ್ಯಾವಳಿಗಳಲ್ಲಿ ಭಾರತ 111 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದೆ. ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕ್ರೀಡಾಪಟುಗಳಿಗೂ ನಾನು ಅನೇಕಾನೇಕ ಅಭಿನಂದನೆ ಸಲ್ಲಿಸುತ್ತೇನೆ.

ಸ್ನೇಹಿತರೇ, ನಿಮ್ಮ ಗಮನವನ್ನು ವಿಶೇಷ ಒಲಿಂಪಿಕ್ಸ್ ವಿಶ್ವ ಬೇಸಿಗೆ ಕ್ರೀಡೆ ಕೂಟದತ್ತ ಕೂಡಾ (Special Olympics World Summer Games) ಕೊಂಡೊಯ್ಯಲು ನಾನು ಬಯಸುತ್ತೇನೆ. ಇದನ್ನು ಬರ್ಲಿನ್ ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯು ನಮ್ಮ ಬೌದ್ಧಿಕವಾಗಿ ವಿಕಲಚೇತನರಾಗಿರುವ ಕ್ರೀಡಾಪಟುಗಳ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಸ್ಪರ್ಧೆಗಳಲ್ಲಿ ಭಾರತೀಯ ತಂಡವು 75 ಚಿನ್ನದ ಪದಕಗಳೂ ಸೇರಿದಂತೆ 200 ಪದಕಗಳನ್ನು ತನ್ನದಾಗಿಸಿಕೊಂಡಿತು. ರೋಲರ್ ಸ್ಕೇಟಿಂಗ್ ಇರಬಹುದು, ಬೀಚ್ ವಾಲಿಬಾಲ್ ಇರಬಹುದು, ಫುಟ್ ಬಾಲ್ ಅಥವಾ ಲಾನ್ ಟೆನ್ನಿಸ್ ಇರಬಹುದು, ಭಾರತೀಯ ಆಟಗಾರರು ಪದಕಗಳ ರಾಶಿಯನ್ನೇ ಸೂರೆಗೈದರು. ಈ ಪದಕ ವಿಜೇತರ ಜೀವನ ಪಯಣ ಬಹಳ ಸ್ಫೂರ್ತಿದಾಯಕವಾಗಿದೆ. ಹರಿಯಾಣದ ನಿವಾಸಿ ರಣವೀರ್ ಸೈನಿ ಅವರು ಗಾಲ್ಫ್ ನಲ್ಲಿ ಚಿನ್ನದ ಪದಕ ಗೆದ್ದರು. ಬಾಲ್ಯದಿಂದಲೇ ಆಟಿಸಂ ತೊಂದರೆಯಿಂದ ಬಳಲುತ್ತಿರುವ ರಣವೀರ್ ಅವರ ಗಾಲ್ಫ್ ಮೇಲಿನ ಆಸಕ್ತಿ, ಉತ್ಸಾಹವನ್ನು ಕಡಿಮೆ ಮಾಡಲು ಯಾವುದೇ ಸವಾಲಿಗೂ ಸಾಧ್ಯವಾಗಲಿಲ್ಲ. ಈಗ ಕುಟುಂಬದವರೆಲ್ಲರೂ ಗಾಲ್ಫ್ ಆಟಗಾರರಾಗಿದ್ದಾರೆಂದು ಆತನ ತಾಯಿ ಹೇಳುತ್ತಾರೆ. ಪುದುಚೆರಿಯ 16 ವರ್ಷದ ಟಿ ವಿಶಾಲ್ ಅವರು ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೋವಾ ನಿವಾಸಿ ಸಿಯಾ ಸರೋದೆ ಅವರು ಪವರ್ ಲಿಫ್ಟಿಂಗ್ ನಲ್ಲಿ 2 ಚಿನ್ನದ ಪದಕಗಳೂ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 9 ವರ್ಷ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡ ನಂತರವೂ ಅವರು ಸ್ವಯಂ ನಿರಾಶೆ ಹೊಂದಲಿಲ್ಲ. ಛತ್ತೀಸ್ ಗಢದ ದುರ್ಗ್ ನಿವಾಸಿ ಅನುರಾಗ್ ಪ್ರಸಾದ್ ಅವರು ಪವರ್ ಲಿಫ್ಟಿಂಗ್ ನಲ್ಲಿ ಮೂರು ಚಿನ್ನದ ಪದಕ ಮತ್ತು ಒಂದು ರಜತ ಪದಕ ಗೆದ್ದಿದ್ದಾರೆ. ಇಂತಹದ್ದೇ ಸ್ಫೂರ್ತಿದಾಯಕ ಕತೆ ಝಾರ್ಖಂಡ್ ನಿವಾಸಿ ಇಂದುಪ್ರಕಾಶ್ ಅವರದ್ದು, ಇವರು ಸೈಕ್ಲಿಂಗ್ ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ. ಅತ್ಯಂತ ಸಾಧಾರಣ ಕುಟುಂಬದಿಂದ ಬಂದಿದ್ದರೂ, ಇಂದು ಅವರು ತಮ್ಮ ಯಶಸ್ಸಿಗೆ ಬಡತನ ಅಡಚಣೆಯಾಗಲು ಬಿಡಲಿಲ್ಲ. ಈ ಕ್ರೀಡೆಗಳಲ್ಲಿ ಭಾರತೀಯ ಆಟಗಾರರ ಯಶಸ್ಸು ಬೌದ್ಧಿಕ ಅಸಮರ್ಥತೆ ಎದುರಿಸುತ್ತಿರುವ ಇತರ ಮಕ್ಕಳು ಮತ್ತು ಕುಟುಂಬಗಳಿಗೆ ಸ್ಫೂರ್ತಿ ನೀಡುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಿಮ್ಮ ಹಳ್ಳಿಯಲ್ಲಿ, ನಿಮ್ಮ ಗ್ರಾಮದ ಸುತ್ತ ಮುತ್ತಲ ಪ್ರದೇಶಗಳಲ್ಲಿ, ಈ ಕ್ರೀಡೆಯಲ್ಲಿ ಭಾಗವಹಿಸಿದ ಅಥವಾ ವಿಜೇತರಾಗಿ ಹೊರಹೊಮ್ಮಿದ ಅಂತಹ ಮಕ್ಕಳ ಬಳಿಗೆ ನೀವು, ನಿಮ್ಮ ಕುಟುಂಬದವರು ಹೋಗಬೇಕೆಂದೂ, ಅವರನ್ನು ಅಭಿನಂದಿಸಬೇಕೆಂದೂ ಮತ್ತು ಆ ಮಕ್ಕಳೊಂದಿಗೆ ಕೆಲವು ಕ್ಷಣಗಳನ್ನು ಕಳೆಯಬೇಕೆಂದೂ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಇದು ನಿಮಗೆ ಹೊಸದಂದು ಅನುಭವ ನೀಡುತ್ತದೆ. ಇಂತಹ ಮಕ್ಕಳಲ್ಲಿ ಆ ಭಗವಂತ ತುಂಬಿರುವ ಅದ್ಭುತ ಶಕ್ತಿಯನ್ನು ಕಾಣುವ ಅವಕಾಶ ನಿಮಗೆ ದೊರೆಯುತ್ತದೆ. ಖಂಡಿತವಾಗಿಯೂ ಭೇಟಿಯಾಗಿ.

ನನ್ನ ಬಾಂಧವರೇ, ಗುಜರಾತ್ ನಲ್ಲಿರುವ ಪುಣ್ಯಕ್ಷೇತ್ರ ಅಂಬಾಜಿ ದೇವಾಲಯದ ಬಗ್ಗೆ ನೀವೆಲ್ಲರೂ ಖಂಡಿತವಾಗಿಯೂ ಕೇಳಿರುತ್ತೀರಿ. ಇದೊಂದು ಪ್ರಮುಖ ಶಕ್ತಿಪೀಠವಾಗಿದ್ದು, ದೇಶ ವಿದೇಶಗಳಿಂದ ಭಕ್ತಾದಿಗಳು ತಾಯಿ ಅಂಬೆಯ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿ ಗಬ್ಬರ್ ಪರ್ವತಕ್ಕೆ ಹೋಗುವ ಹಾದಿಯಲ್ಲಿ ನಿಮಗೆ ವಿಭಿನ್ನ ರೀತಿಯ ಯೋಗ ಮುದ್ರೆಗಳಲ್ಲಿ ಮತ್ತು ಆಸನಗಳಲ್ಲಿ ಇರುವಂತಹ ಪ್ರತಿಮೆಗಳು ಕಂಡುಬರುತ್ತವೆ. ಈ ಪ್ರತಿಮೆಗಳ ವಿಶೇಷತೆಯೇನು ಎಂಬುದು ನಿಮಗೆ ತಿಳಿದಿದೆಯೇ? ವಾಸ್ತವದಲ್ಲಿ ಇವು ಸ್ಕ್ರ್ಯಾಪ್ ನಿಂದ ಮಾಡಿರುವಂತಹ ಶಿಲ್ಪಗಳು, ಒಂದು ರೀತಿಯಲ್ಲಿ ಹೇಳಬೇಕೆಂದರೆ ತ್ಯಾಜ್ಯದಿಂದ ಮಾಡಿರುವಂತಹ ಆದರೆ ಬಹಳ ಅದ್ಭುತವಾದ ಶಿಲ್ಪಗಳಿವು. ಅಂದರೆ ಬಳಸಿ ಬಿಸಾಡಿದ, ಹಳೆಯ ವಸ್ತುಗಳನ್ನು ಬಳಸಿ ಈ ಪ್ರತಿಮೆಗಳನ್ನು ತಯಾರಿಸಲಾಗಿದೆ. ಅಂಬಾಜಿ ಶಕ್ತಿ ಪೀಠದಲ್ಲಿ ದೇವಿ ದರ್ಶನದೊಂದಿಗೆ ಈ ಪ್ರತಿಮೆಗಳು ಕೂಡಾ ಭಕ್ತಾದಿಗಳಿಗೆ ಆಕರ್ಷಣೆಯ ಕೇಂದ್ರವಾಗಿದೆ. ಈ ಪ್ರಯತ್ನದ ಯಶಸ್ಸು ಕಂಡು, ನನ್ನ ಮನಸ್ಸಿನಲ್ಲಿ ಒಂದು ಸಲಹೆಯೂ ಮೂಡುತ್ತಿದೆ. ಕಸದಿಂದ ರಸ ತಯಾರಿಸುವ, ತ್ಯಾಜ್ಯದಿಂದ ಇಂತಹ ಕಲಾಕೃತಿಗಳನ್ನು ರಚಿಸುವಂತಹ ಬಹಳಷ್ಟು ಜನರು ನಮ್ಮ ದೇಶದಲ್ಲಿದ್ದಾರೆ. ಒಂದು ಸ್ಪರ್ಧೆಯನ್ನು ಆಯೋಜಿಸಬೇಕೆಂದೂ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂದು ಇಂತಹ ವ್ಯಕ್ತಿಗಳನ್ನು ಆಹ್ವಾನಿಸಬೇಕೆಂದೂ ನಾನು ಗುಜರಾತ್ ಸರ್ಕಾರವನ್ನು ಕೋರುತ್ತಿದ್ದೇನೆ. ಈ ಪ್ರಯತ್ನ ಗಬ್ಬರ್ ಪರ್ವತದ ಆಕರ್ಷಣೆಯನ್ನು ಹೆಚ್ಚಿಸುವ ಜೊತೆಗೆ, ಇಡೀ ದೇಶದಲ್ಲಿ ‘ಕಸದಿಂದ ರಸ’ – ‘ವೇಸ್ಟ್ ಟು ವೆಲ್ತ್ ’ ಅಭಿಯಾನಕ್ಕಾಗಿ ಜನರಿಗೆ ಪ್ರೇರಣೆ ನೀಡುತ್ತದೆ.

ಸ್ನೇಹಿತರೇ, ಸ್ವಚ್ಛ ಭಾರತ ಮತ್ತು ವೇಸ್ಟ್ ಟು ವೆಲ್ತ್ (Waste to wealth) ವಿಷಯ ಬಂದಾಗಲೆಲ್ಲಾ, ದೇಶದ ಮೂಲೆ ಮೂಲೆಗಳಿಂದ ನಮಗೆ ಅಸಂಖ್ಯಾತ ಉದಾಹರಣೆಗಳು ಕಾಣಸಿಗುತ್ತವೆ. ಅಸ್ಸಾಂ ನ ಕಾಮರೂಪ್ ಮೆಟ್ರೋಪಾಲಿಟನ್ ಜಿಲ್ಲೆಯಲ್ಲಿ ಅಕ್ಷರ್ ಫೋರಮ್ ಹೆಸರಿನ ಒಂದು ಶಾಲೆಯು, ಸುಸ್ಥಿರ ಅಭಿವೃದ್ಧಿ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ತುಂಬುವ, ಅವರಿಗೆ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಪ್ರತಿ ವಾರ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ, ಇವುಗಳನ್ನು ಪರಿಸರ ಸ್ನೇಹಿ ಇಟ್ಟಿಗೆ ಮತ್ತು ಬೀಗದಕೈ ಗೊಂಚಲು ಇತ್ಯಾದಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ರೀಸೈಕ್ಲಿಂಗ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಕೂಡಾ ಕಲಿಸಲಾಗುತ್ತದೆ. ಸಣ್ಣ ವಯಸ್ಸಿನಿಂದಲೇ ಪರಿಸರದ ಬಗ್ಗೆ ಕಾಳಜಿಯು, ಈ ಮಕ್ಕಳನ್ನು ದೇಶದ ಕರ್ತವ್ಯನಿಷ್ಠ ನಾಗರಿಕರನ್ನಾಗಿಸಲು ಸಹಾಯ ಮಾಡುತ್ತದೆ.

ನನ್ನ ಕುಟುಂಬದ ಬಾಂಧವರೇ, ಇಂದು ನಮಗೆ ಮಹಿಳಾ ಶಕ್ತಿ, ಸಾಮರ್ಥ್ಯ ಕಾಣಸಿಗದ ಯಾವುದೇ ಕ್ಷೇತ್ರವಿಲ್ಲ. ಪ್ರಸ್ತುತ, ಎಲ್ಲೆಡೆಯೂ ಆಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಭಕ್ತಿಯ ಶಕ್ತಿಯನ್ನು ತೋರಿಸಿದಂತಹ ಓರ್ವ ಮಹಿಳಾ ಭಕ್ತೆಯನ್ನೂ ನಾವು ಸ್ಮರಿಸಬೇಕು, ಆಕೆಯ ಹೆಸರು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ದೇಶ ಈ ವರ್ಷ ಮಹಾನ್ ಸನ್ಯಾಸಿನಿ ಸಂತ ಮೀರಾಬಾಯಿಯವರ 525ನೇ ಜನ್ಮ ಜಯಂತಿ ಆಚರಿಸುತ್ತಿದೆ. ಅವರು ದೇಶಾದ್ಯಂತ ಜನರಲ್ಲಿ ಅನೇಕ ಕಾರಣಗಳಿಂದ ಪ್ರೇರಣಾ ಶಕ್ತಿಯೆನಿಸಿದ್ದಾರೆ. ಸಂಗೀತದಲ್ಲಿ ಆಸಕ್ತಿಯಿರುವವರಿಗೆ ಆಕೆ ಸಂಗೀತಕ್ಕೆ ಸಮರ್ಪಣಾ ಭಾವದ ಉದಾಹರಣೆಯೆನಿಸಿದ್ದರೆ, ಕವಿತಾ ಪ್ರೇಮಿಗಳಿಗೆ ಭಕ್ತಿರಸದಲ್ಲಿ ಮುಳುಗಿರುವ ಮೀರಾಬಾಯಿಯವರ ಭಜನೆಯು ವಿಶೇಷ ಆನಂದ ನೀಡುತ್ತದೆ. ದೈವಿಕ ಶಕ್ತಿಯಲ್ಲಿ ನಂಬಿಕೆಯಿಟ್ಟಿರುವ ಜನರಿಗೆ ಮೀರಾಬಾಯಿಯ ಕೃಷ್ಣನಲ್ಲಿ ಲೀನವಾಗುವ ಭಕ್ತಿ ಭಾವ ಬಹುದೊಡ್ಡ ಪ್ರೇರಣೆಯಾಗಬಲ್ಲದು. ಮೀರಾಬಾಯಿ ಸಂತ ರವಿದಾಸರನ್ನು ತನ್ನ ಗುರುಗಳೆಂದು ನಂಬಿದ್ದರು. ಅವರು ಹೀಗನ್ನುತ್ತಿದ್ದರು.

ಗುರು ಮಿಲಿಯಾ ರೈದಾಸ್, ದೀನ್ಹೀ ಜ್ಞಾನ್ ಕೀ ಗುಟಕೀ

ದೇಶದ ಮಾತೆಯರು-ಸೋದರಿಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಮೀರಾಬಾಯಿ ಇಂದಿಗೂ ಪ್ರೇರಣೆಯ ಚಿಲುಮೆಯಾಗಿದ್ದಾರೆ. ಆ ಕಾಲದಲ್ಲೇ ಆಕೆ ತನ್ನ ಅಂತರಂಗದ ಧ್ವನಿಯನ್ನು ಆಲಿಸಿದಳು ಮತ್ತು ಸಂಪ್ರದಾಯವಾದಿ ನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ್ದರು. ಓರ್ವ ಸನ್ಯಾಸಿನಿಯ ರೂಪದಲ್ಲಿಯೇ ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತಾರೆ. ಭಾರತೀಯ ಸಮಾಜ ಮತ್ತು ಸಂಸ್ಕೃತಿಯನ್ನು ಬಲಪಡಿಸಲು ಆಕೆ ಮುಂದೆ ಬಂದಾಗ ದೇಶ ಅನೇಕ ರೀತಿಯ ದಾಳಿಗಳನ್ನು ಎದುರಿಸುತ್ತಿತ್ತು. ಸರಳತೆಯಲ್ಲಿ ಎಷ್ಟು ಶಕ್ತಿ ಅಡಗಿದೆ ಎನ್ನುವುದು ನಮಗೆ ಮೀರಾಬಾಯಿಯವರ ಜೀವನದಿಂದ ನಮಗೆ ತಿಳಿದುಬರುತ್ತದೆ. ನಾನು ಸಂತ ಮೀರಾಬಾಯಿಗೆ ನಮನ ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ಕುಟುಂಬಸ್ಥರೇ, ಇಂದಿನ ಮನದ ಮಾತನ್ನು ನಾನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ನಿಮ್ಮೊಂದಿಗೆ ನಡೆಸುವ ಪ್ರತಿಯೊಂದು ಸಂವಾದವೂ ನನ್ನೊಳಗೆ ಹೊಸ ಚೈತನ್ಯ, ಶಕ್ತಿಯನ್ನು ತುಂಬುತ್ತದೆ. ನಿಮ್ಮ ಸಂದೇಶಗಳಲ್ಲಿ ಭರವಸೆ ಮತ್ತು ಸಕಾರಾತ್ಮಕತೆ ತುಂಬಿದ ನೂರಾರು ವಿಷಯಗಳು ನನ್ನನ್ನು ತಲುಪುತ್ತಿರುತ್ತವೆ. ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಒತ್ತು ನೀಡುವಂತೆ ನಾನು ನಿಮ್ಮಲ್ಲಿ ಪುನಃ ಮನವಿ ಮಾಡುತ್ತಿದ್ದೇನೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಮತ್ತು ಲೋಕಲ್ ಗೆ ವೋಕಲ್ ನೀವಾಗಿ, ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ. ನಿಮ್ಮ ಮನೆಗಳನ್ನು ನೀವು ಯಾವರೀತಿ ಸ್ವಚ್ಛವಾಗಿ ಇರಿಸಿಕೊಳ್ಳುತ್ತೀರೋ ಅದೇ ರೀತಿ ನೀವು ವಾಸಿಸುವ ಪ್ರದೇಶ ಮತ್ತು ನಗರವನ್ನು ಸ್ವಚ್ಛವಾಗಿರಿಸಿ. ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜಯಂತಿಯೆಂದು ನಿಮಗೆಲ್ಲಾ ತಿಳಿದೇ ಇದೆ. ಪಟೇಲ್ ಅವರ ಜನ್ಮದಿನವನ್ನು ದೇಶ ಏಕತಾ ದಿವಸವೆಂದು ಆಚರಿಸುತ್ತದೆ. ದೇಶದಲ್ಲಿ ಹಲವೆಡೆ ಏಕತೆಗಾಗಿ ಓಟ ಕಾರ್ಯಕ್ರಮ ಆಯೋಜಿಸಲಾಗುತ್ತದೆ, ನೀವು ಕೂಡಾ ಅಕ್ಟೋಬರ್ 31 ರಂದು ಏಕತೆಗಾಗಿ ಓಟ ಆಯೋಜಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಸೇರಿಕೊಳ್ಳಿ ಮತ್ತು ಏಕತೆಯ ಸಂಕಲ್ಪವನ್ನು ಬಲಗೊಳಿಸಿ. ಮುಂಬರುವ ಹಬ್ಬಗಳಿಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಶುಭ ಹಾರೈಕೆಗಳು. ನೀವೆಲ್ಲರೂ ಕುಟುಂಬದವರೊಡನೆ ಸಂತೋಷದಿಂದ ಹಬ್ಬಗಳನ್ನು ಆಚರಿಸಿ, ಆರೋಗ್ಯದಿಂದ ಇರಿ, ಸಂತೋಷದಿಂದಿರಿ ಎನ್ನುವುದು ನನ್ನ ಹಾರೈಕೆ. ಅಂತೆಯೇ ದೀಪಾವಳಿ ಹಬ್ಬದ ಸಮಯದಲ್ಲಿ ಅಗ್ನಿ ಅವಘಢಗಳು ಸಂಭವಿಸುವಂತಹ ತಪ್ಪುಗಳು ಆಗದಂತೆ ಎಚ್ಚರಿಕೆಯಿಂದ ಇರಿ. ಯಾರಿಗಾದರೂ ಅಪಾಯ ಸಂಭವಿಸಿದಲ್ಲಿ ಅವರ ಬಗ್ಗೆ ಖಂಡಿತವಾಗಿಯೂ ಕಾಳಜಿ ವಹಿಸಿ ಸಹಾಯ ಮಾಡಿ. ನೀವು ಕೂಡಾ ನಿಮ್ಮ ಬಗ್ಗೆ ಜಾಗರೂಕರಾಗಿರಿ. ಹಾಗೆಯೇ ನಿಮ್ಮ ಸುತ್ತ ಮುತ್ತಲಿನವರ ಬಗ್ಗೆ ಕೂಡಾ ಕಾಳಜಿ ವಹಿಸಿ. ಅನೇಕಾನೇಕ ಹಾರೈಕೆಗಳು, ಅನೇಕಾನೇಕ ಧನ್ಯವಾದ.

****