Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಕ್ಟೋಬರ್ 26ರಂದು ಪ್ರಧಾನಿ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಭೇಟಿ ನೀಡಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಅಕ್ಟೋಬರ್ 26ರಂದು ಮಹಾರಾಷ್ಟ್ರ ಮತ್ತು ಗೋವಾಕ್ಕೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಹ್ಮದ್‌ನಗರ ಜಿಲ್ಲೆಯ ಶಿರಡಿ ತಲುಪಲಿರುವ ಪ್ರಧಾನಿ, ಅಲ್ಲಿ ಶ್ರೀ ಸಾಯಿಬಾಬಾ ಸಮಾಧಿ ದೇವಸ್ಥಾನದ ದರ್ಶನ ಮಾಡಿ, ಪೂಜೆ ನೆರವೇರಿಸಲಿದ್ದಾರೆ. ದೇವಸ್ಥಾನದಲ್ಲಿ ನೂತನ ದರ್ಶನ ಕ್ಯೂ ಕಾಂಪ್ಲೆಕ್ಸ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಅವರು ನೀಲವಾಂಡೆ ಅಣೆಕಟ್ಟಿಗೆ ಜಲಪೂಜೆ ನೆರವೇರಿಸಲಿದ್ದಾರೆ. ಜತೆಗೆ, ಅಣೆಕಟ್ಟಿನ ಕಾಲುವೆ ಜಾಲವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಮಧ್ಯಾಹ್ನ 3.15ರ ಸುಮಾರಿಗೆ ಶಿರಡಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಧಾನಿ ಅವರು ಆರೋಗ್ಯ, ರೈಲು, ರಸ್ತೆ ಮತ್ತು ತೈಲ, ಅನಿಲ ಸೇರಿದಂತೆ ಸುಮಾರು 7,500 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಸಂಜೆ 6.30ರ ಸುಮಾರಿಗೆ ಪ್ರಧಾನಿ ಗೋವಾ ತಲುಪಲಿದ್ದು, ಅಲ್ಲಿ 37ನೇ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ.
 
ಮಹಾರಾಷ್ಟ್ರದಲ್ಲಿ ಪಿಎಂ

ಪ್ರಧಾನ ಮಂತ್ರಿ ಅವರು ಉದ್ಘಾಟಿಸಲಿರುವ ಶಿರಸಿಯಲ್ಲಿ ನೂತನ ದರ್ಶನ ಕ್ಯೂ ಸಂಕೀರ್ಣವು ಅತ್ಯಾಧುನಿಕ ಬೃಹತ್ ಕಟ್ಟಡವಾಗಿದ್ದು, ಭಕ್ತರಿಗೆ ಆರಾಮದಾಯಕವಾಗಿ ಕಾಯುವ ಸ್ಥಳಗಳನ್ನು ಕಲ್ಪಿಸಲಾಗಿದೆ. ಇದು 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳ ಆಸನ ಸಾಮರ್ಥ್ಯದೊಂದಿಗೆ ಕಾಯುವ ಹಲವಾರು ಹಾಲ್‌ಗಳನ್ನು ಹೊಂದಿದೆ. ಇದು ಕ್ಲೋಕ್ ರೂಮ್‌ಗಳು, ಶೌಚಾಲಯಗಳು, ಬುಕಿಂಗ್ ಕೌಂಟರ್‌ಗಳು, ಪ್ರಸಾದ ಕೌಂಟರ್‌ಗಳು, ಮಾಹಿತಿ ಕೇಂದ್ರ ಮುಂತಾದ ಹವಾನಿಯಂತ್ರಿತ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸಿದೆ. ಈ ಹೊಸ ದರ್ಶನ್ ಕ್ಯೂ ಕಾಂಪ್ಲೆಕ್ಸ್‌ಗೆ ಪ್ರಧಾನ ಮಂತ್ರಿ 2018 ಅಕ್ಟೋಬರ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಪ್ರಧಾನಿ ಅವರು ನೀಲವಾಂಡೆ ಅಣೆಕಟ್ಟಿನ ಎಡದಂಡೆ (85 ಕಿಮೀ) ಕಾಲುವೆ ಜಾಲವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ನೀರಿನ ಪೈಪ್ ವಿತರಣಾ ಜಾಲಗಳನ್ನು ಸುಗಮಗೊಳಿಸುವ ಮೂಲಕ 7 ತೆಹಸಿಲ್‌ಗಳ(ಅಹಮದ್‌ನಗರ ಜಿಲ್ಲೆಯ 6 ಮತ್ತು ನಾಸಿಕ್ ಜಿಲ್ಲೆಯ 1 ಸೇರಿದಂತೆ) 182 ಹಳ್ಳಿಗಳಿಗೆ ಪ್ರಯೋಜನ ಒದಗಿಸುತ್ತದೆ. 1970ರಲ್ಲಿ ಮೊದಲ ಬಾರಿಗೆ ನೀಲವಂಡೆ ಅಣೆಕಟ್ಟಿನ ಕಲ್ಪನೆ ಹುಟ್ಟಿಕೊಂಡಿದ್ದು, ಸುಮಾರು 5,177 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ‘ನಮೋ ಶೇತ್ಕರಿ ಮಹಾಸನ್ಮಾನ್ ನಿಧಿ ಯೋಜನೆ’ಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯು ಮಹಾರಾಷ್ಟ್ರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 86 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ವರ್ಷಕ್ಕೆ 6,000 ರೂ. ಹೆಚ್ಚುವರಿ ಮೊತ್ತ ಒದಗಿಸುವ ಮೂಲಕ ಪ್ರಯೋಜನ ನೀಡುತ್ತದೆ.

ಅಹ್ಮದ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಆಯುಷ್ ಆಸ್ಪತ್ರೆ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸುತ್ತಾರೆ ಮತ್ತು ದೇಶಕ್ಕೆ ಸಮರ್ಪಿಸುತ್ತಾರೆ. ಕುರ್ದುವಾಡಿ-ಲಾತೂರ್ ರಸ್ತೆ ರೈಲ್ವೆ ವಿಭಾಗದ ವಿದ್ಯುದೀಕರಣ (186 ಕಿಮೀ), ಜಲಗಾಂವ್‌ನಿಂದ ಭೂಸಾವಲ್‌ಗೆ ಸಂಪರ್ಕಿಸುವ 3ನೇ ಮತ್ತು 4ನೇ ರೈಲು ಮಾರ್ಗ (24.46 ಕಿಮೀ), ಎನ್ಎಚ್-166 (ಪ್ಯಾಕೇಜ್-I)ನ ಬೋರ್ಗಾಂವ್ ವಿಭಾಗದಿಂದ ಸಾಂಗ್ಲಿಯಿಂದ 4 ಲೇನಿಂಗ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಮನ್ಮಾಡ್ ಟರ್ಮಿನಲ್‌ನಲ್ಲಿ ಹೆಚ್ಚುವರಿ ಸೌಲಭ್ಯಗಳು ಇದರಲ್ಲಿ ಸೇರಿವೆ.

ಪ್ರಧಾನ ಮಂತ್ರಿ ಅವರು ಅಹ್ಮದ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಆಯುಷ್ಮಾನ್ ಕಾರ್ಡ್ ಮತ್ತು ಸ್ವಾಮಿತ್ವ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ.
 
ಗೋವಾದಲ್ಲಿ ಪಿಎಂ

ಪ್ರಧಾನಿ ನಾಯಕತ್ವದಲ್ಲಿ ದೇಶದಲ್ಲಿ ಕ್ರೀಡಾ ಸಂಸ್ಕೃತಿಯು ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ. ಸರ್ಕಾರದ ನಿರಂತರ ಬೆಂಬಲದ ನೆರವಿನಿಂದ ಅಥ್ಲೀಟ್‌ಗಳ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಸುಧಾರಣೆ ಕಂಡಿದೆ. ಉತ್ತಮ ಸಾಧಕರನ್ನು ಗುರುತಿಸಲು ಮತ್ತು ಕ್ರೀಡೆಯ ಜನಪ್ರಿಯತೆ ಹೆಚ್ಚಿಸಲು ರಾಷ್ಟ್ರ ಮಟ್ಟದ ಪಂದ್ಯಾವಳಿಗಳನ್ನು ನಡೆಸುವ ಮಹತ್ವವನ್ನು ಗುರುತಿಸಿ, ದೇಶದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಗುತ್ತಿದೆ.

2023 ಅಕ್ಟೋಬರ್ 26ರಂದು ಗೋವಾದ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅವರು ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗೋವಾದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕೂಟವು ಅಕ್ಟೋಬರ್ 26ರಿಂದ ನವೆಂಬರ್ 9ರ ವರೆಗೆ ನಡೆಯಲಿದೆ. ದೇಶದಾದ್ಯಂತ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು 28 ಸ್ಥಳಗಳಲ್ಲಿ ನಡೆಯಲಿರುವ 43 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

****