ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನಲ್ಲಿ 141ನೇ ʻಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿʼ(ಐಒಸಿ) ಅಧಿವೇಶನವನ್ನು ಉದ್ಘಾಟಿಸಿದರು. ಕ್ರೀಡೆಗೆ ಸಂಬಂಧಿಸಿದ ವಿವಿಧ ಮಧ್ಯಸ್ಥಗಾರರ ನಡುವೆ ಸಂವಾದ ಮತ್ತು ಜ್ಞಾನ ಹಂಚಿಕೆಗೆ ಅವಕಾಶವನ್ನು ಒದಗಿಸುವುದು ಈ ಅಧಿವೇಶನದ ಉದ್ದೇಶವಾಗಿದೆ.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 40 ವರ್ಷಗಳ ನಂತರ ಭಾರತದಲ್ಲಿ ನಡೆಯುತ್ತಿರುವ ಅಧಿವೇಶನದ ಮಹತ್ವವನ್ನು ಒತ್ತಿ ಹೇಳಿದರು. ಅಹ್ಮದಾಬಾದ್‌ನ ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿಜಯದ ಬಗ್ಗೆ ಅವರು ಪ್ರೇಕ್ಷಕರಿಗೆ ಮಾಹಿತಿ ನೀಡಿದರು. “ಈ ಐತಿಹಾಸಿಕ ವಿಜಯಕ್ಕಾಗಿ ನಾನು ಭಾರತ ತಂಡವನ್ನು ಮತ್ತು ಪ್ರತಿಯೊಬ್ಬ ಭಾರತೀಯರನ್ನು ಅಭಿನಂದಿಸುತ್ತೇನೆ,” ಎಂದು ಅವರು ಹೇಳಿದರು.
ಕ್ರೀಡೆ ಭಾರತದ ಸಂಸ್ಕೃತಿ ಮತ್ತು ಜೀವನಶೈಲಿಯ ಪ್ರಮುಖ ಭಾಗವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನೀವು ಭಾರತದ ಹಳ್ಳಿಗಳಿಗೆ ಹೋದಾಗ, ಯಾವುದೇ ಹಬ್ಬವು ಕ್ರೀಡೆಯಿಲ್ಲದೆ ಅಲ್ಲಿ ಅಪೂರ್ಣವಾಗಿರುವುದನ್ನು ಕಾಣಬಹುದು ಎಂದು ಪ್ರಧಾನಿ ಹೇಳಿದರು. “ಭಾರತೀಯರು ಕೇವಲ ಕ್ರೀಡಾ ಪ್ರೇಮಿಗಳಲ್ಲ, ನಾವು ಕ್ರೀಡೆಯನ್ನು ಬದುಕುತ್ತಿದ್ದೇವೆ” ಎಂದು ಶ್ರೀ ಮೋದಿ ಹೇಳಿದರು. ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಕ್ರೀಡಾ ಸಂಸ್ಕೃತಿ ಪ್ರತಿಬಿಂಬಿತವಾಗಿದೆ ಎಂದು ಅವರು ಒತ್ತಿ ಹೇಳಿದರು. ಅದು ಸಿಂಧೂ ಕಣಿವೆ ನಾಗರೀಕತೆಯಾಗಿರಲಿ, ವೈದಿಕ ಕಾಲವಾಗಲಿ ಅಥವಾ ಅದರ ನಂತರದ ಯುಗವಾಗಲಿ, ಭಾರತದ ಕ್ರೀಡಾ ಪರಂಪರೆಯು ಬಹಳ ಸಮೃದ್ಧವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಧರ್ಮಗ್ರಂಥಗಳು ಕುದುರೆ ಸವಾರಿ, ಈಜು, ಬಿಲ್ಲುಗಾರಿಕೆ, ಕುಸ್ತಿ ಮುಂತಾದ ಕ್ರೀಡೆಗಳು ಸೇರಿದಂತೆ 64 ಪ್ರಕಾರಗಳಲ್ಲಿ ಪ್ರವೀಣರಾಗಿರುವುದನ್ನು ಉಲ್ಲೇಖಿಸಿವೆ ಮತ್ತು ಅವುಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಒತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಬಿಲ್ಲುಗಾರಿಕೆ ಕ್ರೀಡೆಯನ್ನು ಕಲಿಯಲು ‘ಧನುರ್ ವೇದ ಸಂಹಿತೆ’ ಅಂದರೆ ಬಿಲ್ಲುಗಾರಿಕೆ ಸಂಹಿತೆಯನ್ನು ಪ್ರಕಟಿಸಲಾಗಿದೆ, ಇದು ಬಿಲ್ಲುಗಾರಿಕೆಯನ್ನು ಕಲಿಯಲು 7 ಕಡ್ಡಾಯ ಕೌಶಲ್ಯಗಳನ್ನು ಉಲ್ಲೇಖಿಸುತ್ತದೆ, ಅವುಗಳೆಂದರೆ ʻಧನುಷ್‌ವನ್ʼ, ಚಕ್ರ, ಭಾಲಾ, ಕತ್ತಿ ವರಸೆ, ಖಡ್ಗ, ಗದೆ ಮತ್ತು ಕುಸ್ತಿ.
ಭಾರತದ ಈ ಪ್ರಾಚೀನ ಕ್ರೀಡಾ ಪರಂಪರೆಯ ವೈಜ್ಞಾನಿಕ ಪುರಾವೆಗಳನ್ನು ಪ್ರಧಾನಿ ಪ್ರಸ್ತುತಪಡಿಸಿದರು. ʻಧೋಲಾವಿರಾʼ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನು ಉಲ್ಲೇಖಿಸಿದ ಅವರು, 5000 ವರ್ಷಗಳಷ್ಟು ಹಳೆಯದಾದ ಈ ನಗರದ ನಗರ ಯೋಜನೆಯಲ್ಲಿ ಕ್ರೀಡಾ ಮೂಲಸೌಕರ್ಯಗಳ ಬಗ್ಗೆ ಮಾತನಾಡಿದರು. ಉತ್ಖನನದಲ್ಲಿ ಎರಡು ಕ್ರೀಡಾಂಗಣಗಳು ಕಂಡುಬಂದಿವೆ, ಅವುಗಳಲ್ಲಿ ಒಂದು ಆ ಸಮಯದಲ್ಲಿ ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಕ್ರೀಡಾಂಗಣವಾಗಿತ್ತು ಎಂದು ಪ್ರಧಾನಿ ಹೇಳಿದರು. ಅಂತೆಯೇ, ರಾಖಿಗರ್ಹಿಯಲ್ಲಿ ಕ್ರೀಡೆಗೆ ಸಂಬಂಧಿಸಿದ ರಚನೆಗಳು ಕಂಡುಬಂದಿವೆ. “ಭಾರತದ ಈ ಕ್ರೀಡಾ ಪರಂಪರೆ ಇಡೀ ವಿಶ್ವಕ್ಕೆ ಸೇರಿದ್ದು,” ಎಂದು ಶ್ರೀ ಮೋದಿ ಹೇಳಿದರು.
“ಕ್ರೀಡೆಯಲ್ಲಿ ಸೋತವರು ಯಾರೂ ಇರುವುದಿಲ್ಲ, ಅಲ್ಲಿ ವಿಜೇತರು ಮತ್ತು ಕಲಿಯುವವರು ಮಾತ್ರ ಇರುತ್ತಾರೆ. ಕ್ರೀಡೆಯ ಭಾಷೆ ಮತ್ತು ಸ್ಫೂರ್ತಿಯು ಸಾರ್ವತ್ರಿಕವಾದುದು. ಕ್ರೀಡೆ ಕೇವಲ ಸ್ಪರ್ಧೆಯಲ್ಲ. ಕ್ರೀಡೆಯು ಮಾನವೀಯತೆಯನ್ನು ವಿಸ್ತರಿಸಲು ಅವಕಾಶವನ್ನು ನೀಡುತ್ತದೆ. ಅದಕ್ಕಾಗಿಯೇ ದಾಖಲೆಗಳನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಕ್ರೀಡೆಯು ‘ವಸುದೈವ ಕುಟುಂಬಕಂ’ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಸ್ಫೂರ್ತಿಯನ್ನು ಬಲಪಡಿಸುತ್ತದೆ,” ಎಂದು ಅವರು ಹೇಳಿದರು. ಭಾರತದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಇತ್ತೀಚಿನ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ʻಖೇಲೋ ಇಂಡಿಯಾ ಗೇಮ್ಸ್ʼ, ʻಖೇಲೋ ಇಂಡಿಯಾ ಯೂತ್ ಗೇಮ್ಸ್ʼ, ʻಖೇಲೋ ಇಂಡಿಯಾ ವಿಂಟರ್ ಗೇಮ್ಸ್ʼ, ಸಂಸತ್ ಸದಸ್ಯರ ಕ್ರೀಡಾ ಸ್ಪರ್ಧೆಗಳು ಮತ್ತು ಮುಂಬರುವ ʻಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ʼಗಳನ್ನು ಅವರು ಉಲ್ಲೇಖಿಸಿದರು. “ನಾವು ಭಾರತದಲ್ಲಿ ಕ್ರೀಡೆಯಲ್ಲಿ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಮೇಲೆ ಗಮನ ಹರಿಸುತ್ತಿದ್ದೇವೆ,” ಎಂದು ಪ್ರಧಾನಿ ಒತ್ತಿ ಹೇಳಿದರು
ಕ್ರೀಡಾ ಜಗತ್ತಿನಲ್ಲಿ ಭಾರತದ ಉಜ್ವಲ ಸಾಧನೆಗೆ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಒಲಿಂಪಿಕ್ಸ್‌ನ ಕಳೆದ ಆವೃತ್ತಿಯಲ್ಲಿ ಅನೇಕ ಕ್ರೀಡಾಪಟುಗಳ ಅದ್ಭುತ ಪ್ರದರ್ಶನವನ್ನು ಅವರು ಸ್ಮರಿಸಿದರು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ʻಏಷ್ಯನ್ ಗೇಮ್ಸ್ʼ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಮತ್ತು ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾರತದ ಯುವ ಕ್ರೀಡಾಪಟುಗಳು ಮಾಡಿದ ಹೊಸ ದಾಖಲೆಗಳನ್ನು ಎತ್ತಿ ತೋರಿದರು. ಸಕಾರಾತ್ಮಕ ಬದಲಾವಣೆಗಳು ಭಾರತದಲ್ಲಿ ಕ್ರೀಡಾ ಕ್ಷೇತ್ರದ ಶರವೇಗದ ಬದಲಾವಣೆಯ ಸಂಕೇತವಾಗಿವೆ ಎಂದು ಅವರು ಒತ್ತಿ ಹೇಳಿದರು.
ಜಾಗತಿಕ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಭಾರತ ಯಶಸ್ವಿಯಾಗಿ ಸಾಬೀತುಪಡಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. 186 ದೇಶಗಳು ಭಾಗವಹಿಸಿದ್ದ ʻಚೆಸ್ ಒಲಿಂಪಿಯಾಡ್ʼ, 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್, ಹಾಕಿ ವಿಶ್ವಕಪ್, ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್, ಶೂಟಿಂಗ್ ವಿಶ್ವಕಪ್ ಮತ್ತು ಈಗ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನಂತಹ ಜಾಗತಿಕ ಪಂದ್ಯಾವಳಿಗಳನ್ನು ಅವರು ಉಲ್ಲೇಖಿಸಿದರು. ರಾಷ್ಟ್ರವು ಪ್ರತಿವರ್ಷ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಅನ್ನು ಆಯೋಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಒಲಿಂಪಿಕ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಲು ʻಐಒಸಿ ಕಾರ್ಯಕಾರಿ ಮಂಡಳಿʼ ಶಿಫಾರಸು ಮಾಡಿದೆ ಎಂದು ಹೇಳಿದ ಪ್ರಧಾನಿ, ಶಿಫಾರಸುಗಳನ್ನು ಸ್ವೀಕರಿಸಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಾಗತಿಕ ಕಾರ್ಯಕ್ರಮಗಳು ವಿಶ್ವವನ್ನು ಸ್ವಾಗತಿಸಲು ಭಾರತಕ್ಕೆ ಒಂದು ಅವಕಾಶವಾಗಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತವು ವೇಗವಾಗಿ ವಿಸ್ತರಿಸುತ್ತಿರುವ ಆರ್ಥಿಕತೆ ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯಗಳಿಂದಾಗಿ ಜಾಗತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ಸುಕವಾಗಿದೆ ಎಂದು ಒತ್ತಿ ಹೇಳಿದರು. ದೇಶದ 60ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾದ ʻಜಿ-20ʼ ಶೃಂಗಸಭೆಯ ಉದಾಹರಣೆಯನ್ನು ನೀಡಿದ ಅವರು, ಇದು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಸಂಘಟನಾ ಸಾಮರ್ಥ್ಯಕ್ಕೆ ಪುರಾವೆಯಾಗಿದೆ ಎಂದು ಹೇಳಿದರು. ಭಾರತದ 140 ಕೋಟಿ ನಾಗರಿಕರ ನಂಬಿಕೆಯನ್ನು ಪ್ರಧಾನಿ ಪ್ರತಿಪಾದಿಸಿದರು.
“ದೇಶದಲ್ಲಿ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ. 2036ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಭಾರತ ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲಿದೆ, ಇದು 140 ಕೋಟಿ ಭಾರತೀಯರ ಕನಸಾಗಿದೆ”, ಎಂದು ಪ್ರಧಾನಿ ಹೇಳಿದರು. ಎಲ್ಲಾ ಪಾಲುದಾರರ ಬೆಂಬಲದೊಂದಿಗೆ ಈ ಕನಸನ್ನು ಈಡೇರಿಸಲು ರಾಷ್ಟ್ರ ಬಯಸುತ್ತದೆ ಎಂದು ಅವರು ಒತ್ತಿ ಹೇಳಿದರು. “2029ರಲ್ಲಿ ನಡೆಯಲಿರುವ ʻಯೂತ್ ಒಲಿಂಪಿಕ್ಸ್ʼ ಆತಿಥ್ಯ ವಹಿಸಲೂ ಭಾರತ ಉತ್ಸುಕವಾಗಿದೆ,” ಎಂದು ಶ್ರೀ ಮೋದಿ ಹೇಳಿದರು ಮತ್ತು ಐಒಸಿ ಭಾರತಕ್ಕೆ ತನ್ನ ಬೆಂಬಲವನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
“ಕ್ರೀಡೆಯು ಕೇವಲ ಪದಕಗಳನ್ನು ಗೆಲ್ಲಲು ಮಾತ್ರವಲ್ಲ, ಹೃದಯಗಳನ್ನು ಗೆಲ್ಲುವ ಮಾಧ್ಯಮವಾಗಿದೆ. ಕ್ರೀಡೆ ಎಲ್ಲರಿಗೂ ಸೇರಿದ್ದು. ಇದು ಚಾಂಪಿಯನ್‌ಗಳನ್ನು ಸಿದ್ಧಪಡಿಸುವುದಲ್ಲದೆ ಶಾಂತಿ, ಪ್ರಗತಿ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ. ಆದ್ದರಿಂದ, ಕ್ರೀಡೆ ಜಗತ್ತನ್ನು ಒಂದುಗೂಡಿಸುವ ಮತ್ತೊಂದು ಮಾಧ್ಯಮವಾಗಿದೆ,” ಎಂದು ಹೇಳಿದರು. ಮತ್ತೊಮ್ಮೆ ಪ್ರತಿನಿಧಿಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಅಧಿವೇಶನದ ಅಧಿಕೃತ ಆರಂಭವನ್ನು ಘೋಷಿಸಿದರು.
ʻಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿʼಯ ಅಧ್ಯಕ್ಷ ಶ್ರೀ ಥಾಮಸ್ ಬಾಚ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆ ಶ್ರೀಮತಿ ನೀತಾ ಅಂಬಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ʻಐಒಸಿʼ ಅಧಿವೇಶನವು ʻಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿʼ(ಐಒಸಿ) ಸದಸ್ಯರ ಪ್ರಮುಖ ಸಭೆಯಾಗಿ ಕಾರ್ಯನಿರ್ವಹಿಸುತ್ತದೆ. ಒಲಿಂಪಿಕ್ ಕ್ರೀಡಾಕೂಟದ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಐಒಸಿ ಅಧಿವೇಶನಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಸುಮಾರು 40 ವರ್ಷಗಳ ಅಂತರದ ನಂತರ ಭಾರತವು ಎರಡನೇ ಬಾರಿಗೆ ಐಒಸಿ ಅಧಿವೇಶನವನ್ನು ಆಯೋಜಿಸುತ್ತಿದೆ. ಐಒಸಿಯ 86ನೇ ಅಧಿವೇಶನವು 1983ರಲ್ಲಿ ನವದೆಹಲಿಯಲ್ಲಿ ನಡೆದಿತ್ತು.
ಭಾರತದಲ್ಲಿ ನಡೆಯುತ್ತಿರುವ 141ನೇ ʻಐಒಸಿ ಅಧಿವೇಶನʼವು ಜಾಗತಿಕ ಸಹಕಾರವನ್ನು ಉತ್ತೇಜಿಸಲು, ಕ್ರೀಡಾ ಶ್ರೇಷ್ಠತೆಯನ್ನು ಆಚರಿಸಲು ಮತ್ತು ಸ್ನೇಹ, ಗೌರವ ಮತ್ತು ಶ್ರೇಷ್ಠತೆಯ ಒಲಿಂಪಿಕ್ ಆದರ್ಶಗಳನ್ನು ಮುಂದುವರಿಸಲು ರಾಷ್ಟ್ರದ ಸಮರ್ಪಣೆಯನ್ನು ಸಾಕಾರಗೊಳಿಸುತ್ತದೆ. ಇದು ವಿವಿಧ ಕ್ರೀಡಾ ಸಂಬಂಧಿತ ಮಧ್ಯಸ್ಥಗಾರರ ನಡುವೆ ಸಂವಹನ ಮತ್ತು ಜ್ಞಾನ ಹಂಚಿಕೆಗೆ ಅವಕಾಶ ಒದಗಿಸುತ್ತದೆ.
ಈ ಅಧಿವೇಶನದಲ್ಲಿ ʻಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿʼಯ ಅಧ್ಯಕ್ಷ ಶ್ರೀ ಥಾಮಸ್ ಬಾಚ್ ಮತ್ತು ʻಐಒಸಿʼಯ ಇತರ ಸದಸ್ಯರು, ಪ್ರಮುಖ ಭಾರತೀಯ ಕ್ರೀಡಾ ವ್ಯಕ್ತಿಗಳು ಮತ್ತು ʻಭಾರತೀಯ ಒಲಿಂಪಿಕ್ ಅಸೋಸಿಯೇಷನ್ʼ ಸೇರಿದಂತೆ ವಿವಿಧ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
***
Addressing the 141st International Olympic Committee Session in Mumbai. https://t.co/qmO6WLh10a
— Narendra Modi (@narendramodi) October 14, 2023
140 करोड़ देशवासियों का सपना है कि 2036 में भारत की धरती पर ओलंपिक का सफल और शानदार आयोजन हो। इसके लिए हम अपने प्रयासों में कोई कोर-कसर नहीं रखेंगे। pic.twitter.com/bUBlVp4tvP
— Narendra Modi (@narendramodi) October 14, 2023
Sports is an important aspect of Indian culture and lifestyle. pic.twitter.com/3L7zswdgDZ
— PMO India (@PMOIndia) October 14, 2023
In sports there are no losers, there are only winners and learners. pic.twitter.com/6dabjDqLcl
— PMO India (@PMOIndia) October 14, 2023
With special focus on sports, today India is performing brilliantly in international events. pic.twitter.com/9KJZjW6QW0
— PMO India (@PMOIndia) October 14, 2023
India eagerly anticipates hosting the Olympics. pic.twitter.com/NOAIcau7SK
— PMO India (@PMOIndia) October 14, 2023