ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನವನ್ನು 14ನೇ ಅಕ್ಟೋಬರ್ 2023ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಉದ್ಘಾಟಿಸಲಿದ್ದಾರೆ.
ಐಒಸಿ ಅಧಿವೇಶನವು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸದಸ್ಯರ ಮಹತ್ವದ ಸಭೆಯಾಗಿ ಕಾರ್ಯನಿರ್ವಹಿಸುತ್ತದೆ. ಒಲಿಂಪಿಕ್ ಕ್ರೀಡಾಕೂಟಗಳ ಭವಿಷ್ಯದ ಬಗ್ಗೆ ಪ್ರಮುಖವಾದ ನಿರ್ಧಾರಗಳನ್ನು ಈ ಐಒಸಿ ಅಧಿವೇಶನದಲ್ಲಿ ತೆಗೆದುಕೊಳ್ಳುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ. ಭಾರತವು ಎರಡನೇ ಬಾರಿಗೆ ಅಂದರೆ ಸುಮಾರು 40 ವರ್ಷಗಳ ನಂತರ ಐಒಸಿ ಅಧಿವೇಶನವನ್ನು ಆಯೋಜಿಸುತ್ತಿದೆ. ಐಒಸಿಯ 86ನೇ ಅಧಿವೇಶನವು 1983ರಲ್ಲಿ ನವದೆಹಲಿಯಲ್ಲಿ ನಡೆದಿತ್ತು.
ಭಾರತದಲ್ಲಿ ನಡೆಯುತ್ತಿರುವ 141ನೇ ಐಒಸಿ ಅಧಿವೇಶನವು ಜಾಗತಿಕ ಸಹಕಾರವನ್ನು ಉತ್ತೇಜಿಸಲು, ಕ್ರೀಡಾ ಶ್ರೇಷ್ಠತೆಯನ್ನು ಸಂಭ್ರಮಿಸಲು ಮತ್ತು ಪರಸ್ಪರ ಸ್ನೇಹ, ಗೌರವ ಹಾಗೂ ಶ್ರೇಷ್ಠತೆಯ ಒಲಿಂಪಿಕ್ ಆದರ್ಶಗಳನ್ನು ವೃದ್ಧಿಸುವ ಆಶಯವನ್ನು ಹೊಂದಿದೆ. ಹಾಗೆಯೇ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಪಾಲುದಾರರ ನಡುವೆ ಪರಸ್ಪರ ಸಂವಾದ ಹಾಗೂ ಜ್ಞಾನ- ಮಾಹಿತಿ ಹಂಚಿಕೆಗೂ ಅವಕಾಶ ಕಲ್ಪಿಸುವ ಪ್ರಮುಖ ವೇದಿಕೆಯಾಗಿದೆ.
ಈ ಐಒಸಿ ಅಧಿವೇಶನದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಶ್ರೀ ಥಾಮಸ್ ಬಾಚ್ ಮತ್ತು ಐಒಸಿಯ ಇತರ ಸದಸ್ಯರು ಸೇರಿದಂತೆ ಭಾರತದ ಪ್ರಮುಖ ಕ್ರೀಡಾಪಟುಗಳು ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸೇರಿದಂತೆ ವಿವಿಧ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
*****