Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜಸ್ತಾನದ ಜೋಧ್ ಪುರದಲ್ಲಿ ಸುಮಾರು 5000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಲೋಕಾರ್ಪಣೆಗೊಳಿಸಿದ ಪ್ರಧಾನಮಂತ್ರಿ

ರಾಜಸ್ತಾನದ ಜೋಧ್ ಪುರದಲ್ಲಿ ಸುಮಾರು 5000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಲೋಕಾರ್ಪಣೆಗೊಳಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಜಸ್ತಾನದ ಜೋಧ್ ಪುರದಲ್ಲಿಂದು ಸುಮಾರು 5000 ಕೋಟಿ ರೂ. ಮೌಲ್ಯದ ಹಲವು ರಸ್ತೆ, ರೈಲು, ವಿಮಾನಯಾನ, ಆರೋಗ್ಯ ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಲಯಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಲೋಕಾರ್ಪಣೆಗೊಳಿಸಿದರು. ಈ ಯೋಜನೆಗಳಲ್ಲಿ ಜೋಧ್ ಪುರ ಏಮ್ಸ್ ನಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ ಬ್ಲಾಕ್ ಮತ್ತು 350 ಹಾಸಿಗೆಗಳ ಟ್ರಾಮಾ ಸೆಂಟರ್ ಗೆ ಶಂಕುಸ್ಥಾಪನೆ, ಪಿಎಂ-ಎಬಿಎಚ್ಐಎಂ ಅಡಿಯಲ್ಲಿ 7 ಕ್ರಿಟಿಕಲ್ ಕೇರ್ ಬ್ಲಾಕ್ ಗಳ ನಿರ್ಮಾಣ ಮತ್ತು ಜೋಧ್ ಪುರ್ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ ಶಂಕುಸ್ಥಾಪನೆಯೂ ಒಳಗೊಂಡಿದೆ. ಅಲ್ಲದೆ ಪ್ರಧಾನಿ ಅವರು, ರಾಜಸ್ತಾನದ ಕೇಂದ್ರೀಯ ವಿಶ್ವವಿದ್ಯಾಲಯದ ಉನ್ನತೀಕರಿಸಿದ ಮೂಲಸೌಕರ್ಯ ಮತ್ತು ಐಐಟಿ, ಜೋಧ್ ಪುರ ಕ್ಯಾಂಪಸ್ ಅನ್ನು ಲೋಕಾರ್ಪಣೆಗೊಳಿಸಿದರು. ಪ್ರಧಾನಮಂತ್ರಿ ಅವರು, ಹಲವು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು 145  ಕಿ.ಮೀ. ಉದ್ದದ ದೇಗನಾ-ರೈ ಕಾ ಬಾಗ್ ಮತ್ತು 57 ಕಿ.ಮೀ. ಉದ್ದದ ದೇಗನಾ-ಕುಚಮನ್ ನಗರ ರೈಲು ಸಂಚಾರವನ್ನು ಉದ್ಘಾಟಿಸಿದರು. ಶ್ರೀ ನರೇಂದ್ರ ಮೋದಿ ಅವರು, ದೆಹಲಿ-ಜೈಸಲ್ಮೇರ್ ಗೆ ಸಂಪರ್ಕ ಕಲ್ಪಿಸುವ ರುನಿಚಾ ಎಕ್ಸ್ ಪ್ರೆಸ್ ಮತ್ತು ಮಾರ್ವಾರ್ ಜಂಕ್ಷನ್ ಮತ್ತು ಖಂಬ್ಲಿ ಘಾಟ್ ನಡುವೆ ಸಂಪರ್ಕ ಕಲ್ಪಿಸುವ ಹೊಸ ಪಾರಂಪರಿಕ ರೈಲು ಸೇರಿ, ಎರಡು ಹೊಸ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ಇದೇ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವೀರ ದುರ್ಗಾದಾಸ್ ಅವರ ಪವಿತ್ರ ಭೂಮಿ ನಮಿಸಿ, ನಮನ ಸಲ್ಲಿಸಿದರು. ಸರ್ಕಾರಗಳ ನಿಯಂತರ ಪ್ರಯತ್ನದಿಂದಾಗಿ ಫಲಿತಾಂಶಗಳಿಗೆ ಇಂದು ಈ ಯೋಜನೆಗಳು ಸಾಕ್ಷಿಯಾಗಿವೆ. ಅದಕ್ಕಾಗಿ ರಾಜಸ್ತಾನದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ದೇಶದ ಶೌರ್ಯ, ಸಮೃದ್ಧಿ ಮತ್ತು ಸಂಸ್ಕೃತಿಯಲ್ಲಿ ಪ್ರಾಚೀನ ಭಾರತದ ವೈಭವವು ಗೋಚರಿಸುವ ರಾಜ್ಯ ರಾಜಸ್ಥಾನವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಜೋಧ್‌ಪುರದಲ್ಲಿ ಇತ್ತೀಚೆಗೆ ನಡೆದ ಅತ್ಯಂತ ಮೆಚ್ಚುಗೆ ಪಡೆದ ಜಿ-20 ಸಭೆಯನ್ನೂ ಅವರು ಸ್ಮರಿಸಿಕೊಂಡರು. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಸೂರ್ಯನಗರಿ ಜೋಧ್‌ಪುರದ ಆಕರ್ಷಣೆಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. “ಭಾರತದ ಗತ ವೈಭವವನ್ನು ಪ್ರತಿನಿಧಿಸುವ ರಾಜಸ್ಥಾನವು ಭಾರತದ ಭವಿಷ್ಯವನ್ನೂ ಪ್ರತಿನಿಧಿಸುವುದು ಮುಖ್ಯ. ಮೇವಾರ್‌ನಿಂದ ಮಾರ್ವಾರ್‌ವರೆಗೆ, ಆಧುನಿಕ ಮೂಲಸೌಕರ್ಯಗಳನ್ನು ಇಲ್ಲಿ ನಿರ್ಮಿಸಿದಾಗ ಮಾತ್ರ ಇಡೀ ರಾಜಸ್ಥಾನವು ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

ಬಿಕನೇರ್ ನಿಂದ ಬರ್ಮೇರ್‌ ಮೂಲಕ ಹಾದುಹೋಗುವ ಜಾಮ್‌ನಗರ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ರಾಜಸ್ಥಾನದ ಹೈಟೆಕ್ ಮೂಲಸೌಕರ್ಯಕ್ಕೆ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.

ರಾಜಸ್ಥಾನಕ್ಕೆ ಈ ವರ್ಷ ರೈಲ್ವೆಯಲ್ಲಿ ಸುಮಾರು 9500 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಹಂಚಿಕೆ ಮಾಡಲಾಗಿದೆ, ಇದು ಹಿಂದಿನ ಸರ್ಕಾರಗಳ ಸರಾಸರಿ ಬಜೆಟ್ ಗೆ ಹೋಲಿಸಿದರೆ ಶೇ. 14 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರ 2014 ರವರೆಗೆ ರಾಜಸ್ಥಾನದಲ್ಲಿ ಸರಿಸುಮಾರು 600 ಕಿಮೀ ರೈಲು ಮಾರ್ಗಗಳನ್ನು ಮಾತ್ರ ವಿದ್ಯುದ್ದೀಕರಿಸಲಾಗಿದೆ, ಆದರೆ ಪ್ರಸ್ತುತ ಸರ್ಕಾರವು ಕಳೆದ 9 ವರ್ಷಗಳಲ್ಲಿ ಈಗಾಗಲೇ 3700 ಕಿಲೋಮೀಟರ್‌ಗಳಿಗಿಂತ ಅಧಿಕ ಮಾರ್ಗವನ್ನು ವಿದ್ಯುದ್ದೀಕರಿಸಿದೆ ಎಂದು ಪ್ರಧಾನಿ ಪ್ರಸ್ತಾಪಿಸಿದರು. “ಇದೀಗ ಡೀಸೆಲ್ ಎಂಜಿನ್ ರೈಲುಗಳ ಬದಲಿಗೆ ವಿದ್ಯುತ್ ರೈಲುಗಳು ಮಾರ್ಗಗಳಲ್ಲಿ ಸಂಚರಿಸುತ್ತವೆ’’ ಇದು ಮಾಲಿನ್ಯವನ್ನು ತಗ್ಗಿಸಲು ಮತ್ತು ರಾಜ್ಯದಲ್ಲಿ ಗಾಳಿಯನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿ, ರಾಜಸ್ಥಾನದಲ್ಲಿ 80ಕ್ಕೂ ಅಧಿಕ  ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶದ ವಿಮಾನ ನಿಲ್ದಾಣಗಳ ಅಭಿವೃದ್ಧಿಯಂತೆಯೇ ಬಡವರು ಹೆಚ್ಚಾಗಿ ಭೇಟಿ ನೀಡುವ ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿ ಮಾಡುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಜೋಧ್‌ಪುರ ರೈಲು ನಿಲ್ದಾಣದ ಮರು ಅಭಿವೃದ್ಧಿ ಕಾರ್ಯಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಇಂದಿನ ರೈಲು ಮತ್ತು ರಸ್ತೆ ಅಭಿವೃದ್ಧಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ವೇಗವನ್ನು ನೀಡುತ್ತವೆ ಎಂದು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. ರೈಲು ಮಾರ್ಗಗಳನ್ನು ಜೋಡಿ ಮಾರ್ಗ(ಡಬ್ಬಿಂಗ್ )ಗಳಾಗಿ  ರೈಲುಗಳ ಪ್ರಯಾಣದ ಸಮಯದಲ್ಲಿ ಕಡಿತ ಆಗಿದೆ ಎಂದು ಅವರು ಪ್ರಸ್ತಾಪಿಸಿದರು ಮತ್ತು ಜೈಸಲ್ಮೇರ್‌ಗೆ ದೆಹಲಿಗೆ ಸಂಪರ್ಕ ಕಲ್ಪಿಸುವ ರುನಿಚಾ ಎಕ್ಸ್‌ಪ್ರೆಸ್ ಮತ್ತು ಮಾರ್ವಾರ್ ಜಂಕ್ಷನ್ – ಖಂಬ್ಲಿ ಘಾಟ್ ನಡುವಿನ ಹೊಸ ಪಾರಂಪರಿಕ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದನ್ನು ಮತ್ತು ಕೆಲವು ದಿನಗಳ ಹಿಂದೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಚಾಲನೆ ನೀಡಿದ್ದನ್ನು ಅವರು ಉಲ್ಲೇಖಿಸಿದರು. 

ಇಂದು ಮೂರು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು  ತಿಳಿಸಿದರು. ಇಂದಿನ ಯೋಜನೆಗಳು ಪ್ರಾದೇಶಿಕ ಆರ್ಥಿಕತೆಯನ್ನು ಬಲಪಡಿಸುವ ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ತೇಜನವನ್ನು ನೀಡುತ್ತವೆ ಮತ್ತು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಶಕ್ತಿಯನ್ನು ನೀಡುತ್ತವೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು.

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣದಲ್ಲಿ ರಾಜಸ್ಥಾನದ ವಿಶೇಷ ಸ್ಥಾನ ಗಳಿಸಿರುವುದನ್ನು ಸ್ಮರಿಸಿದ ಪ್ರಧಾನಿ, ಕೋಟಾದ ಕೊಡುಗೆಯನ್ನು ಪ್ರಸ್ತಾಪಿಸಿದರು ಮತ್ತು ಶಿಕ್ಷಣದ ಜೊತೆಗೆ ರಾಜಸ್ಥಾನವು ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ನ ತಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದರು. ಅದಕ್ಕಾಗಿ ಜೋಧ್‌ಪುರ ಏಮ್ಸ್‌ ನಲ್ಲಿ ‘ಆಘಾತ, ತುರ್ತು ಮತ್ತು ಕ್ರಿಟಿಕಲ್ ಕೇರ್’ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಪ್ರಧಾನ ಮಂತ್ರಿ – ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಬಿಎಚ್ಐಎಚ್ ಎಂ) ಅಡಿಯಲ್ಲಿ ಏಳು ಕ್ರಿಟಿಕಲ್ ಕೇರ್ ಬ್ಲಾಕ್‌ ಗಳನ್ನು ರಾಜಸ್ಥಾನದಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜಸ್ಥಾನ ಮಾತ್ರವಲ್ಲದೆ, ದೇಶದ ಪ್ರಮುಖ ಸಂಸ್ಥೆಗಳಲ್ಲಿ ಏಮ್ಸ್‌ ಜೋಧ್‌ಪುರ ಮತ್ತು ಐಐಟಿ ಜೋಧ್‌ಪುರವನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು. “ಏಮ್ಸ್ ಮತ್ತು ಐಐಟಿ ಜೋಧ್‌ಪುರ ಒಟ್ಟಾಗಿ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಕುರಿತು ಕೆಲಸ ಆರಂಭಿಸಿವೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯಂತಹ ಹೈಟೆಕ್ ವೈದ್ಯಕೀಯ ತಂತ್ರಜ್ಞಾನವು ಸಂಶೋಧನೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಎತ್ತರಕ್ಕೆ ಕೊಂಡೊಯ್ಯತ್ತದೆ. ಇದು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ’’ಎಂದು ಅವರು ಹೇಳಿದರು.

“ರಾಜಸ್ಥಾನವು ಪ್ರಕೃತಿ ಮತ್ತು ಪರಿಸರವನ್ನು ಪ್ರೀತಿಸುವವರ ನಾಡು’’ ಎಂದ ಪ್ರಧಾನಿ ಅವರು ಶತಮಾನಗಳಿಂದ ಜೀವನಶೈಲಿಯನ್ನು ಅನುಸರಿಸುತ್ತಿರುವ ಮತ್ತು ಜಗತ್ತು ಅನುಸರಿಸುತ್ತಿರುವ ಗುರು ಜಂಬೇಶ್ವರ ಮತ್ತು ಬಿಷ್ಣೋಯಿ ಅವರ ಸಮುದಾಯಗಳ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದರು. “ಆ ಪರಂಪರೆಯ ಆಧಾರದ ಮೇಲೆ ಭಾರತವು ಇಂದು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಪ್ರಯತ್ನಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜಸ್ಥಾನದ ಅಭಿವೃದ್ಧಿಯಿಂದ ಮಾತ್ರ ಭಾರತ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. “ನಾವು ಒಟ್ಟಾಗಿ ರಾಜಸ್ಥಾನವನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದನ್ನು ಸಮೃದ್ಧಗೊಳಿಸಬೇಕು” ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾ ಮತ್ತು ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕೈಲಾಶ್ ಚೌಧರಿ ಮತ್ತಿತರರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ:  

ರಾಜಸ್ಥಾನದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಪ್ರಮುಖ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಆ ಯೋಜನೆಗಳಲ್ಲಿ 350 ಹಾಸಿಗೆಗಳ ‘ಟ್ರಾಮಾ ಸೆಂಟರ್ ಮತ್ತು ಜೋಧ್‌ಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ನಲ್ಲಿ ಕ್ರಿಟಿಕಲ್ ಕೇರ್ ಹಾಸ್ಪಿಟಲ್ ಬ್ಲಾಕ್ ಮತ್ತು ಪ್ರಧಾನ ಮಂತ್ರಿ-ಆಯುಷ್ಮಾನ್ ಭಾರತ ಅರೋಗ್ಯ ಮೂಲಸೌಕರ್ಯ  ಮಿಷನ್ (ಪಿಎಂ-ಎಬಿಐಎಂ) ಅಡಿಯಲ್ಲಿ ಏಳು ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ರಾಜಸ್ಥಾನದಾದ್ಯಂತ ಅಭಿವೃದ್ಧಿಪಡಿಸಲಾಗುವುದು. ಏಮ್ಸ್‌ ಜೋಧ್‌ಪುರದಲ್ಲಿರುವ ‘ಟ್ರಾಮಾ, ಎಮರ್ಜೆನ್ಸಿ ಮತ್ತು ಕ್ರಿಟಿಕಲ್ ಕೇರ್’ ಗಾಗಿ ಸಂಯೋಜಿತ ಕೇಂದ್ರವನ್ನು 350 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ಚಿಕಿತ್ಸೆಯ ಸರದಿ ನಿರ್ಧಾರ(ಟ್ರಯೇಜ್), ಡಯಾಗ್ನೋಸ್ಟಿಕ್ಸ್, ಡೇಕೇರ್, ವಾರ್ಡ್‌ಗಳು, ಖಾಸಗಿ ಕೊಠಡಿಗಳು, ಮಾಡ್ಯುಲರ್ ಆಪರೇಟಿಂಗ್ ಥಿಯೇಟರ್‌ಗಳು, ಐಸಿಯುಗಳು ಮತ್ತು ಡಯಾಲಿಸಿಸ್ ಪ್ರದೇಶಗಳಂತಹ ವಿವಿಧ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದು ರೋಗಿಗಳಿಗೆ ಬಹುಶಿಸ್ತೀಯ ಮತ್ತು ಸಮಗ್ರ ಆರೈಕೆಯನ್ನು ಒದಗಿಸುವ ಮೂಲಕ ಆಘಾತ ಮತ್ತು ತುರ್ತು ಪ್ರಕರಣಗಳ ನಿರ್ವಹಣೆಗೆ ಸಮಗ್ರ ವಿಧಾನವನ್ನು ತರುತ್ತದೆ. ರಾಜಸ್ಥಾನದಾದ್ಯಂತ ಇರುವ ಏಳು ಕ್ರಿಟಿಕಲ್ ಕೇರ್ ಬ್ಲಾಕ್‌ಗಳು ರಾಜ್ಯದ ಜನರಿಗೆ ಪ್ರಯೋಜನವಾಗುವಂತೆ ಜಿಲ್ಲಾ ಮಟ್ಟದ ಕ್ರಿಟಿಕಲ್ ಕೇರ್ ಮೂಲಸೌಕರ್ಯವನ್ನು ವೃದ್ಧಿಸುತ್ತವೆ.

ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ ಪ್ರಧಾನಿ ಶಂಕುಸ್ಥಾಪನೆ ನೇರವೇರಿಸಿದರು. ಒಟ್ಟು 480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೊಸ ಟರ್ಮಿನಲ್ ಕಟ್ಟಡವನ್ನು ಸುಮಾರು 24,000 ಚದರ ಮೀಟರ್ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಜನದಟ್ಟಣೆ ಅಧಿಕವಿರುವ ಸಮಯದಲ್ಲಿ (ಪೀಕ್ ಹವರ್‌) 2,500 ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸಲು ಸಜ್ಜುಗೊಳಿಸಲಾಗುವುದು. ಇದು ವಾರ್ಷಿಕವಾಗಿ 35 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ, ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

ಪ್ರಧಾನಮಂತ್ರಿ ಅವರು ಐಐಟಿ ಜೋಧಪುರ ಕ್ಯಾಂಪಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 1135 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಂಪಸ್ ನಿರ್ಮಿಸಲಾಗಿದೆ. ಇದು ಉನ್ನತ ಗುಣಮಟ್ಟದ ಸಮಗ್ರ ಶಿಕ್ಷಣವನ್ನು ಒದಗಿಸುವ ಮತ್ತು ಅತ್ಯಾಧುನಿಕ ಸಂಶೋಧನೆ ಮತ್ತು ನಾವೀನ್ಯತೆ ಉಪಕ್ರಮಗಳನ್ನು ಬೆಂಬಲಿಸಲು ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ.

ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಮೂಲಸೌಕರ್ಯ ಉನ್ನತೀಕರಿಸುವುದಕ್ಕಾಗಿ, ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಕೇಂದ್ರೀಯ ಉಪಕರಣ ಪ್ರಯೋಗಾಲಯ, ಸಿಬ್ಬಂದಿ ಕ್ವಾರ್ಟರ್ಸ್ ಮತ್ತು ಯೋಗ ಮತ್ತು ಕ್ರೀಡಾ ವಿಜ್ಞಾನಗಳ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಗ್ರಂಥಾಲಯ, 600 ಸಾಮರ್ಥ್ಯದ ವಸತಿ  ನಿಲಯ ಮತ್ತು ವಿದ್ಯಾರ್ಥಿಗಳಿಗೆ ಊಟದ ಸೌಲಭ್ಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ರಾಜಸ್ಥಾನದಲ್ಲಿ ರಸ್ತೆ ಮೂಲಸೌಕರ್ಯವನ್ನು ಸುಧಾರಿಸುವ ಒಂದು ಹೆಜ್ಜೆಯಾಗಿ ರಾಷ್ಟ್ರೀಯ ಹೆದ್ದಾರಿ-125ಎ ನಲ್ಲಿ ಜೋಧ್‌ಪುರ ರಿಂಗ್ ರಸ್ತೆಯ ಕಾರವಾರದಿಂದ ಡಾಂಗಿಯವಾಸ್ ಭಾಗಕ್ಕೆ ನಾಲ್ಕು ಪಥದ ರಸ್ತೆ; ಜಾಲೋರ್ (ಎನ್ ಎಚ್‌-325) ಮೂಲಕ ಬಲೋತ್ರಾದಿಂದ ಸಂದೇರಾವ್ ವಲಯಕ್ಕೆ ಏಳು ಬೈಪಾಸ್‌ಗಳು/ಮರು-ಜೋಡಣೆಗಳ ನಿರ್ಮಾಣ; ಎನ್ ಎಚ್-25 ರ ಪಚ್ಪದ್ರ-ಬಗುಂಡಿ ಭಾಗದ ನಾಲ್ಕು ಪಥದ ಯೋಜನೆ ಸೇರಿದಂತೆ ಅನೇಕ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು; ಈ ರಸ್ತೆ ಯೋಜನೆಗಳನ್ನು ಸುಮಾರು 1475 ಕೋಟಿ ರೂ.ಗಳ ಒಟ್ಟಾರೆ ವೆಚ್ಚದಲ್ಲಿ ನಿರ್ಮಿಸಲಾಗುವುದು. ಜೋಧ್‌ಪುರ ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ಮತ್ತು ನಗರದಲ್ಲಿ ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸಲು, ವ್ಯಾಪಾರವನ್ನು ಉತ್ತೇಜಿಸಲು, ಉದ್ಯೋಗ ಸೃಷ್ಟಿ ಮತ್ತು ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ರಾಜಸ್ಥಾನದಲ್ಲಿ ಎರಡು ಹೊಸ ರೈಲು ಸೇವೆಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಅವುಗಳಲ್ಲಿ ಹೊಸ ರೈಲು — ಜೈಸಲ್ಮೇರ್‌ಗೆ ದೆಹಲಿಗೆ ಸಂಪರ್ಕ ಕಲ್ಪಿಸುವ ರುನಿಚಾ ಎಕ್ಸ್‌ಪ್ರೆಸ್ ಮತ್ತು ಮಾರ್ವಾರ್ ಜಂಕ್ಷನ್ – ಖಂಬ್ಲಿ ಘಾಟ್ ಹೊಸ ಹೆರಿಟೇಜ್ ರೈಲು ಸೇರಿವೆ. ರುನಿಚಾ ಎಕ್ಸ್‌ಪ್ರೆಸ್ ಜೋಧ್‌ಪುರ, ದೇಗಾನಾ, ಕುಚಮನ್ ಸಿಟಿ, ಫುಲೇರಾ, ರಿಂಗಾಸ್, ಶ್ರೀಮಧೋಪುರ್, ನೀಮ್ ಕಾ ಥಾನಾ, ನರ್ನಾಲ್, ಅಟೆಲಿ, ರೆವಾರಿ ಮೂಲಕ ಹಾದು ಹೋಗಲಿದ್ದು, ರಾಷ್ಟ್ರ ರಾಜಧಾನಿಯೊಂದಿಗೆ ಎಲ್ಲಾ ಪಟ್ಟಣಗಳ ಸಂಪರ್ಕವನ್ನು ಸುಧಾರಿಸುತ್ತದೆ. ಮಾರ್ವಾರ್ ಜಂಕ್ಷನ್ .-ಖಾಂಬ್ಲಿ ಘಾಟ್ ಅನ್ನು ಸಂಪರ್ಕಿಸುವ ಹೊಸ ಪಾರಂಪರಿಕ ರೈಲು ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತದೆ ಮತ್ತು ಈ ಪ್ರದೇಶದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ. ಇದಲ್ಲದೆ, ಇನ್ನೆರಡು ರೈಲು ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಅವುಗಳಲ್ಲಿ 145 ಕಿಮೀ ಉದ್ದದ ‘ದೇಗಾನಾ-ರಾಯ್ ಕಾ ಬಾಗ್’ರೈಲು ಮಾರ್ಗ ಮತ್ತು 58 ಕಿಮೀ ಉದ್ದದ ‘ದೇಗಾನಾ-ಕುಚಮನ್ ಸಿಟಿ’ ರೈಲು ಮಾರ್ಗವನ್ನು ಜೋಡಿ ಮಾರ್ಗ ಯೋಜನೆಗಳು ಸೇರಿವೆ.

*****