ಜೈ ಜೋಹರ್!
ಛತ್ತೀಸ್ ಗಢದ ರಾಜ್ಯಪಾಲರಾದ ಶ್ರೀ ಬಿಸ್ವಭೂಷಣ್ ಹರಿಚಂದನ್ ಜೀ, ಸಂಸತ್ತಿನ ನನ್ನ ಇಬ್ಬರು ಜನಪ್ರಿಯ ಸಹೋದ್ಯೋಗಿಗಳೇ ಮತ್ತು ರಾಜ್ಯ ವಿಧಾನಸಭೆಯ ಪ್ರತಿನಿಧಿಗಳೇ, ಸಂಸದರೇ, ಜಿಲ್ಲಾ ಮಂಡಳಿಗಳು, ತಾಲ್ಲೂಕು ಮಂಡಳಿಗಳ ಪ್ರತಿನಿಧಿಗಳೇ ಮತ್ತು ಮಹಿಳೆಯರೇ ಹಾಗು ಮಹನೀಯರೇ,
ಪ್ರತಿ ರಾಜ್ಯ, ಪ್ರತಿ ಜಿಲ್ಲೆ ಮತ್ತು ಪ್ರತಿ ಗ್ರಾಮವು ಅಭಿವೃದ್ಧಿ ಹೊಂದಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ಕನಸು ನನಸಾಗುತ್ತದೆ. ಈ ಸಂಕಲ್ಪವನ್ನು ಸಶಕ್ತಗೊಳಿಸಲು, ಇಂದು, ಸುಮಾರು 27,000 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆದಿದೆ. ನಾನು ನಿಮ್ಮೆಲ್ಲರಿಗೂ ಮತ್ತು ಛತ್ತೀಸ್ ಗಢದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನನ್ನ ಕುಟುಂಬದ ಸದಸ್ಯರೇ,
ಭೌತಿಕ, ಡಿಜಿಟಲ್ ಮತ್ತು ಸಾಮಾಜಿಕ ಮೂಲಸೌಕರ್ಯಗಳು ಭಾರತದ ಅಭಿವೃದ್ಧಿಗೆ ಸಂಬಂಧಿಸಿ ಭವಿಷ್ಯದ ಅಗತ್ಯಗಳೊಂದಿಗೆ ಹೊಂದಿಕೆಯಾಗಬೇಕು. ನಮ್ಮ ಸರ್ಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ಮೂಲಸೌಕರ್ಯಗಳ ಮೇಲಿನ ವೆಚ್ಚವನ್ನು ಹಲವಾರು ಪಟ್ಟು ಹೆಚ್ಚಿಸಲು ಇದು ಒಂದು ಕಾರಣವಾಗಿದೆ. ಈ ವರ್ಷ ಮೂಲಸೌಕರ್ಯದ ಮೇಲಿನ ವೆಚ್ಚವನ್ನು 10 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ, ಇದು ಮೊದಲಿಗಿಂತ 6 ಪಟ್ಟು ಹೆಚ್ಚು.
ಸ್ನೇಹಿತರೇ,
ಇಂದು ದೇಶದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಯೋಜನೆಗಳು, ವಾಹನಗಳು, ಬಡವರಿಗೆ ಮನೆಗಳು, ಶಾಲೆಗಳು-ಕಾಲೇಜುಗಳು-ಆಸ್ಪತ್ರೆಗಳಲ್ಲಿ ಉಕ್ಕು ಪ್ರಮುಖ ಪಾತ್ರ ವಹಿಸುತ್ತಿದೆ. ಉಕ್ಕು ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಕಳೆದ ಒಂಬತ್ತು ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಮುಖ ಉಕ್ಕು ಉತ್ಪಾದಿಸುವ ರಾಜ್ಯವಾಗಿರುವುದರಿಂದ, ಛತ್ತೀಸ್ ಗಢವು ಇದರಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿದೆ. ಇದರ ಭಾಗವಾಗಿ, ಭಾರತದ ಅತ್ಯಂತ ಆಧುನಿಕ ಉಕ್ಕು ಸ್ಥಾವರಗಳಲ್ಲಿ ಒಂದನ್ನು ಇಂದು ನಗರ್ನಾರ್ ನಲ್ಲಿ ಉದ್ಘಾಟಿಸಲಾಯಿತು. ಇಲ್ಲಿ ಉತ್ಪಾದಿಸಲಾಗುವ ಉಕ್ಕು ಭಾರತದ ಆಟೋಮೊಬೈಲ್, ಎಂಜಿನಿಯರಿಂಗ್ ಮತ್ತು ವೇಗವಾಗಿ ಬೆಳೆಯುತ್ತಿರುವ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತದೆ, ಮತ್ತು ಹೊಸ ಶಕ್ತಿಯನ್ನು ಒದಗಿಸುತ್ತದೆ. ಬಸ್ತಾರ್ ನಲ್ಲಿ ಉತ್ಪಾದಿಸುವ ಉಕ್ಕು ನಮ್ಮ ಸೇನೆಯನ್ನು ಬಲಪಡಿಸುವುದು ಮಾತ್ರವಲ್ಲದೆ ದೇಶದ ರಕ್ಷಣಾ ರಫ್ತಿಗೂ ಉತ್ತೇಜನ ನೀಡುತ್ತದೆ. ಈ ಉಕ್ಕು ಸ್ಥಾವರದಿಂದಾಗಿ ಬಸ್ತಾರ್ ಮತ್ತು ಸುತ್ತಮುತ್ತಲಿನ ಸುಮಾರು 50,000 ಯುವಜನರಿಗೆ ಉದ್ಯೋಗ ಸಿಗಲಿದೆ. ಬಸ್ತಾರ್ ನಂತಹ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆಗೆ ಈ ಉಕ್ಕು ಸ್ಥಾವರದಿಂದ ಗಮನಾರ್ಹ ಉತ್ತೇಜನ ಲಭಿಸಲಿದೆ. ಈ ಸಾಧನೆಗಾಗಿ ನಾನು ಬಸ್ತಾರ್ ಮತ್ತು ಛತ್ತೀಸ್ ಗಢದ ಯುವಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸಂಪರ್ಕದ ಮೇಲೆ ವಿಶೇಷ ಗಮನ ಹರಿಸಿದೆ. ಛತ್ತೀಸ್ ಗಢವು ಆರ್ಥಿಕ ಕಾರಿಡಾರ್ ಗಳು ಮತ್ತು ಆಧುನಿಕ ಹೆದ್ದಾರಿಗಳನ್ನು ಕೂಡಾ ಪಡೆದಿದೆ. 2014 ಕ್ಕೆ ಮೊದಲಿನ ಅವಧಿಗೆ ಹೋಲಿಸಿದರೆ ಛತ್ತೀಸ್ ಗಢದ ರೈಲ್ವೆ ಬಜೆಟ್ ಸುಮಾರು 20 ಪಟ್ಟು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಹಲವಾರು ಪ್ರಮುಖ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಛತ್ತೀಸ್ ಗಢದ ತಡೋಕಿ ರೈಲ್ವೆ ನಕ್ಷೆಯಲ್ಲಿ ಸ್ಥಾನ ಪಡೆದಿರಲಿಲ್ಲ. ಇಂದು, ತಡೋಕಿ ಹೊಸ ರೈಲು ಮಾರ್ಗದ ಉಡುಗೊರೆಯನ್ನು ಪಡೆಯುತ್ತಿದೆ. ಇದು ಬುಡಕಟ್ಟು ಸಮುದಾಯಗಳಿಗೆ ಅನುಕೂಲವನ್ನು ಒದಗಿಸುವುದಲ್ಲದೆ ಕೃಷಿ, ಅರಣ್ಯ ಮತ್ತು ಅರಣ್ಯ ಉತ್ಪನ್ನಗಳ ಸಾಗಣೆಗೆ ಅನುಕೂಲ ಮಾಡಿಕೊಡುತ್ತದೆ. ತಡೋಕಿ ಈಗ ರಾಯ್ಪುರ-ಅಂತಘರ್ ಡೆಮು ರೈಲಿಗೆ ಸಂಪರ್ಕ ಹೊಂದಿದ್ದು, ರಾಜಧಾನಿ ರಾಯ್ಪುರಕ್ಕೆ ಪ್ರಯಾಣವನ್ನು ಸುಲಭಗೊಳಿಸಿದೆ. ಜಗದಾಲ್ಪುರ-ದಂತೇವಾಡ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಯು ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಕೈಗಾರಿಕೆಗಳಿಗೆ ಸಾಗಾಣಿಕಾ (ಲಾಜಿಸ್ಟಿಕ್ಸ್) ವೆಚ್ಚವನ್ನು ಕಡಿಮೆ ಮಾಡುತ್ತದೆ. ಈ ಎಲ್ಲಾ ರೈಲ್ವೆ ಯೋಜನೆಗಳು ಈ ಪ್ರದೇಶದಲ್ಲಿ ಹಲವಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.
ಸ್ನೇಹಿತರೇ,
ಛತ್ತೀಸ್ ಗಢದಲ್ಲಿ ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣ ಶೇ.100ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತದೆ. ಇದು ರೈಲುಗಳ ವೇಗವನ್ನು ಹೆಚ್ಚಿಸುವುದಲ್ಲದೆ ಛತ್ತೀಸ್ ಗಢದ ಗಾಳಿಯನ್ನು ಸ್ವಚ್ಛವಾಗಿಡಲು ಸಹಕಾರಿಯಾಗಲಿದೆ. ಛತ್ತೀಸ್ ಗಢದಲ್ಲಿ ರೈಲ್ವೆ ಜಾಲದ ಸಂಪೂರ್ಣ ವಿದ್ಯುದ್ದೀಕರಣದ ನಂತರ, ವಂದೇ ಭಾರತ್ ಎಕ್ಸ್ ಪ್ರೆಸ್ ಕಾರ್ಯಾಚರಣೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗುವುದು.
ಸ್ನೇಹಿತರೇ,
ಮುಂದಿನ ದಿನಗಳಲ್ಲಿ ಛತ್ತೀಸ್ ಗಢದ ರೈಲ್ವೆ ನಿಲ್ದಾಣಗಳನ್ನು ಪುನರುಜ್ಜೀವನಗೊಳಿಸಲು ಭಾರತ ಸರ್ಕಾರ ಯೋಜಿಸುತ್ತಿದೆ. ಅಮೃತ್ ಭಾರತ್ ನಿಲ್ದಾಣ (ಸ್ಟೇಷನ್) ಯೋಜನೆಯಡಿ ರಾಜ್ಯದಲ್ಲಿ 30 ಕ್ಕೂ ಹೆಚ್ಚು ನಿಲ್ದಾಣಗಳನ್ನು ಗುರುತಿಸಲಾಗಿದೆ ಮತ್ತು ಇವುಗಳಲ್ಲಿ ಏಳು ನಿಲ್ದಾಣಗಳ ಪುನರಾಭಿವೃದ್ಧಿಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ. ಬಿಲಾಸ್ಪುರ, ರಾಯ್ಪುರ ಮತ್ತು ದುರ್ಗ್ ನಿಲ್ದಾಣಗಳ ಜೊತೆಗೆ, ಜಗದಾಲ್ಪುರ ನಿಲ್ದಾಣವನ್ನು ಕೂಡಾ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂಬರುವ ದಿನಗಳಲ್ಲಿ, ಜಗದಾಲ್ಪುರ ನಿಲ್ದಾಣವು ಇನ್ನಷ್ಟು ಹೆಚ್ಚಿನ ಪ್ರಯಾಣಿಕ ಸೌಲಭ್ಯಗಳೊಂದಿಗೆ ನಗರದ ಪ್ರಮುಖ ಕೇಂದ್ರವಾಗಲಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ರಾಜ್ಯದ 120 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸ್ನೇಹಿತರೇ,
ಛತ್ತೀಸ್ ಗಢದ ಜನತೆ, ಪ್ರತಿಯೊಬ್ಬ ಸಹೋದರಿ, ಹೆಣ್ಣು ಮಕ್ಕಳು ಮತ್ತು ಯುವಜನರ ಜೀವನವನ್ನು ಸುಲಭಗೊಳಿಸಲು ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಇಂದು ನೆರವೇರಿಸಲಾದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಛತ್ತೀಸ್ ಗಢದಲ್ಲಿ ಪ್ರಗತಿಯ ವೇಗವನ್ನು ಹೆಚ್ಚಿಸಲಿದೆ, ಅದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಹೊಸ ವ್ಯವಹಾರಗಳನ್ನು ಉತ್ತೇಜಿಸುತ್ತದೆ. ಈ ನಿರಂತರ ವೇಗದಲ್ಲಿ ನಾವು ಛತ್ತೀಸ್ ಗಢವನ್ನು ಅಭಿವೃದ್ಧಿ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಭಾರತದ ಹಣೆಬರಹವನ್ನು, ಭವಿಷ್ಯವನ್ನು ಬದಲಾಯಿಸುವಲ್ಲಿ ಛತ್ತೀಸ್ ಗಢವು ಮಹತ್ವದ ಪಾತ್ರ ವಹಿಸಲಿದೆ. ಈ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ಛತ್ತೀಸ್ ಗಢದ ಜನರನ್ನು ಅಭಿನಂದಿಸುತ್ತೇನೆ. ಇದು ಸಣ್ಣ ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ, ನಾನು ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳುವುದಿಲ್ಲ. ನಾನು ಕೇವಲ 10 ನಿಮಿಷಗಳಲ್ಲಿ ಮತ್ತೊಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಛತ್ತೀಸ್ ಗಢಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ನಾಗರಿಕರೊಂದಿಗೆ ಇನ್ನಷ್ಟು ವಿವರ ಹಂಚಿಕೊಳ್ಳುತ್ತೇನೆ. ನಾನು ಅಲ್ಲಿನ ಛತ್ತೀಸ್ ಗಢದ ನಾಗರಿಕರೊಂದಿಗೆ ಅಭಿವೃದ್ಧಿಯ ಹಲವು ಅಂಶಗಳನ್ನು ಹಂಚಿಕೊಳ್ಳಲಿದ್ದೇನೆ. ಇಲ್ಲಿ ರಾಜ್ಯಪಾಲರ ಉಪಸ್ಥಿತಿಯು ರಾಜ್ಯದ ಪ್ರಾತಿನಿಧ್ಯವನ್ನು ಸೂಚಿಸುತ್ತದೆ. ಛತ್ತೀಸ್ ಗಢದ ಬಗ್ಗೆ ರಾಜ್ಯಪಾಲರ ಕಾಳಜಿ, ಛತ್ತೀಸ್ ಗಢದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕಾಳಜಿ ಸಕಾರಾತ್ಮಕವಾದ, ಧನಾತ್ಮಕವಾದ ಸಂದೇಶವಾಗಿದೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.
ಪ್ರತಿಯೊಬ್ಬರಿಗೂ ನಮಸ್ಕಾರ!
ಘೋಷಣೆ: ಇದು ಪ್ರಧಾನಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
*****
Dedicating and laying foundation stones for multiple projects in Jagdalpur, aimed at enhancing socioeconomic growth and 'Ease of Living' for the people. https://t.co/7BtXzz4q1e
— Narendra Modi (@narendramodi) October 3, 2023