Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶೇಷ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನುದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

ವಿಶೇಷ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನುದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶೇಷ ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದರು.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸುವ ಮೂಲಕ ಪ್ರಧಾನಮಂತ್ರಿಯವರು ಸದನವನ್ನುದ್ದೇಶಿಸಿ ಭಾಷಣ ಆರಂಭಿಸಿದರು. ಸಂಸತ್ತಿನ ಹೊಸ ಕಟ್ಟಡದಲ್ಲಿ ಸದನದ ಕಲಾಪಗಳು ಆರಂಭವಾಗುತ್ತಿರುವ ಇಂದಿನ ಸಂದರ್ಭದ ಬಗ್ಗೆ ಅವರು ಗಮನ ಸೆಳೆದರು. “ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಕಲ್ಪ ಮತ್ತು ದೃಢ ನಿಶ್ಚಯದೊಂದಿಗೆ ನಾವು ಹೊಸ ಸಂಸತ್ ಕಟ್ಟಡದತ್ತ ಸಾಗುತ್ತಿದ್ದೇವೆ,” ಎಂದು ಪ್ರಧಾನಿ ಹೇಳಿದರು.

ಸಂಸತ್ ಭವನ ಮತ್ತು ಸೆಂಟ್ರಲ್ ಹಾಲ್ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅದರ ಸ್ಫೂರ್ತಿದಾಯಕ ಇತಿಹಾಸದ ಬಗ್ಗೆ ವಿವರಿಸಿದರು. ಆರಂಭಿಕ ವರ್ಷಗಳಲ್ಲಿ ಕಟ್ಟಡದ ಈ ಭಾಗವನ್ನು ಒಂದು ರೀತಿಯ ಗ್ರಂಥಾಲಯವಾಗಿ ಬಳಸಲಾಗುತ್ತಿತ್ತು ಎಂದು ಅವರು ಸ್ಮರಿಸಿದರು. ಸ್ವಾತಂತ್ರ್ಯದ ಸಮಯದಲ್ಲಿ ಸಂವಿಧಾನವು ರೂಪುಗೊಂಡ ಮತ್ತು ಅಧಿಕಾರ ಹಸ್ತಾಂತರ ನಡೆದ ಸ್ಥಳ ಇದು ಎಂದು ಅವರು ನೆನಪಿಸಿಕೊಂಡರು. ಈ ಸೆಂಟ್ರಲ್ ಹಾಲ್‌ನಲ್ಲಿ ಭಾರತದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಸ್ಮರಿಸಿದರು. 1952ರ ನಂತರ ವಿಶ್ವದಾದ್ಯಂತದ ಸುಮಾರು 41 ರಾಷ್ಟ್ರಗಳು ಮತ್ತು ಸರ್ಕಾರಗಳ ಮುಖ್ಯಸ್ಥರು ಸೆಂಟ್ರಲ್ ಹಾಲ್‌ನಲ್ಲಿ ಭಾರತದ ಸಂಸತ್ತನ್ನುದ್ದೇಶಿಸಿ ಮಾತನಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.  ಭಾರತದ ವಿವಿಧ ರಾಷ್ಟ್ರಪತಿಗಳು ಸೆಂಟ್ರಲ್ ಹಾಲ್‌ ಉದ್ದೇಶಿಸಿ 86 ಬಾರಿ ಮಾತನಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಕಳೆದ ಏಳು ದಶಕಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸುಮಾರು ನಾಲ್ಕು ಸಾವಿರ ಕಾಯ್ದೆಗಳನ್ನು ಅಂಗೀಕರಿಸಿವೆ ಎಂದು ಅವರು ಹೇಳಿದರು. ಜಂಟಿ ಅಧಿವೇಶನದ ಕಾರ್ಯವಿಧಾನದ ಮೂಲಕ ಅಂಗೀಕರಿಸಲಾದ ಕಾನೂನುಗಳ ಬಗ್ಗೆಯೂ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ, ಬ್ಯಾಂಕಿಂಗ್ ಸೇವಾ ಆಯೋಗ ಮಸೂದೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ಜಾರಿಗೊಳಿಸಿದ ಕಾನೂನುಗಳನ್ನು ಉಲ್ಲೇಖಿಸಿದರು. ತ್ರಿವಳಿ ತಲಾಖ್ ನಿಷೇಧಿಸುವ ಕಾನೂನು, ತೃತೀಯ ಲಿಂಗಿಗಳು ಮತ್ತು ದಿವ್ಯಾಂಗರಿಗಾಗಿ ಇರುವ ಕಾನೂನುಗಳನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದರು. 

370ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಜನಪ್ರತಿನಿಧಿಗಳ ಕೊಡುಗೆಗಳನ್ನು ಎತ್ತಿ ತೋರಿಸಿದ ಪ್ರಧಾನಿ, ನಮ್ಮ ಪೂರ್ವಜರು ನಮಗೆ ಒದಗಿಸಿದ ಸಂವಿಧಾನವನ್ನು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಅಪಾರ ಹೆಮ್ಮೆಯಿಂದ  ಹೇಳಿದರು. “ಇಂದು, ಜಮ್ಮು ಮತ್ತು ಕಾಶ್ಮೀರವು ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಅಲ್ಲಿನ ಜನರು ಇನ್ನು ಮುಂದೆ ಅವಕಾಶಗಳು ತಮ್ಮ ಕೈಯಿಂದ ಜಾರಿಹೋಗಲು ಬಯಸುವುದಿಲ್ಲ” ಎಂದು ಶ್ರೀ ಮೋದಿ ಹೇಳಿದರು.

2023ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಮಾಡಿದ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸರಿಯಾದ ಸಮಯ ಈಗ ಬಂದಿದೆ.  ಮತ್ತು ಇದು ನವೀಕೃತ ಪ್ರಜ್ಞೆಯೊಂದಿಗೆ ಭಾರತದ ಪುನರುತ್ಥಾನವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. “ಭಾರತವು ಅಗಾಧ ಶಕ್ತಿಯಿಂದ ತುಂಬಿದೆ” ಎಂದು ಹೇಳಿದ ಶ್ರೀ ಮೋದಿ, ಈ ನವೀಕೃತ ಪ್ರಜ್ಞೆಯು ಪ್ರತಿಯೊಬ್ಬ ನಾಗರಿಕನಿಗೂ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಆಯ್ಕೆಮಾಡಿದ ಹಾದಿಯಲ್ಲಿ ಭಾರತವು ಪ್ರತಿಫಲವನ್ನು ಪಡೆಯುವುದು ಖಚಿತ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. “ವೇಗದ ಪ್ರಗತಿಯ ದರದೊಂದಿಗೆ ವೇಗದ ಫಲಿತಾಂಶಗಳನ್ನು ಸಾಧಿಸಬಹುದು” ಎಂದು ಅವರು ಹೇಳಿದರು. ಭಾರತವು ಜಗತ್ತಿನ ಅಗ್ರ ಐದು ಆರ್ಥಿಕತೆಗಳ ಸ್ಥಾನಕ್ಕೆ ಏರಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ಅಗ್ರ ಮೂರು ಆರ್ಥಿಕತೆಗಳಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದರು. ಭಾರತದ ಬ್ಯಾಂಕಿಂಗ್ ಕ್ಷೇತ್ರದ ದೃಢತೆಯ ಬಗ್ಗೆ ಅವರು ಉಲ್ಲೇಖಿಸಿದರು. ಭಾರತದ ಡಿಜಿಟಲ್ ಮೂಲಸೌಕರ್ಯ, ಯುಪಿಐ ಮತ್ತು ಡಿಜಿಟಲ್ ಸಾಧನಗಳ ಬಗ್ಗೆ ವಿಶ್ವದ ಆಕರ್ಷಣೆಯನ್ನು ಅವರು ಉಲ್ಲೇಖಿಸಿದರು. ಈ ಯಶಸ್ಸು ವಿಶ್ವಕ್ಕೆ ವಿಸ್ಮಯ, ಆಕರ್ಷಣೆ ಮತ್ತು ಸ್ವೀಕಾರದ ವಿಷಯವಾಗಿದೆ ಎಂದು ಅವರು ಹೇಳಿದರು.

ಸಾವಿರ ವರ್ಷಗಳ ಬಳಿಕ  ಭಾರತೀಯರ ಆಕಾಂಕ್ಷೆಗಳು ಸಾರ್ವಕಾಲಿಕ ಉತ್ತುಂಗ ಮಟ್ಟದಲ್ಲಿ ಇರುವ ಪ್ರಸ್ತುತ ಸಮಯದ ಮಹತ್ವವನ್ನು ಪ್ರಧಾನಿ ಹೇಳಿದರು. ಸಾವಿರಾರು ವರ್ಷಗಳಿಂದ ಆಕಾಂಕ್ಷೆಗಳನ್ನು ಸರಪಳಿಯಿಂದ ಕಟ್ಟಿಹಾಕಿದ್ದ ಭಾರತವು ಇನ್ನಷ್ಟು ಕಾಲ ಕಾಯಲು ಸಿದ್ಧವಿಲ್ಲ, ಅದು ಆಕಾಂಕ್ಷೆಗಳೊಂದಿಗೆ ಸಾಗಲು ಮತ್ತು ಹೊಸ ಗುರಿಗಳನ್ನು ಹೊಂದಲು ಬಯಸುತ್ತದೆ ಎಂದು ಅವರು ಹೇಳಿದರು. ಹೊಸ ಆಕಾಂಕ್ಷೆಗಳಿಗೆ ಅನುಗುಣವಾಗಿ, ಹೊಸ ಕಾನೂನುಗಳನ್ನು ರೂಪಿಸುವುದು ಮತ್ತು ಹಳೆಯ ಕಾನೂನುಗಳನ್ನು ತೊಡೆದುಹಾಕುವುದು ಸಂಸದರ ಅತ್ಯುನ್ನತ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಅಂಗೀಕರಿಸಿದ ಎಲ್ಲಾ ಕಾನೂನುಗಳು, ಚರ್ಚೆಗಳು ಮತ್ತು ಸಂಸತ್ತಿನಿಂದ ಪ್ರಸಾರವಾಗುವ ಸಂದೇಶಗಳು ಭಾರತೀಯ ಆಕಾಂಕ್ಷೆಗಳನ್ನು ಉತ್ತೇಜಿಸಬೇಕು ಎಂಬುದು ಪ್ರತಿಯೊಬ್ಬ ನಾಗರಿಕನ ನಿರೀಕ್ಷೆ ಮತ್ತು ಪ್ರತಿಯೊಬ್ಬ ಸಂಸದರ ನಂಬಿಕೆಯಾಗಿದೆ ಎಂದು ಪ್ರಧಾನಿ ಹೇಳಿದರು. “ಸಂಸತ್ತಿನಲ್ಲಿ ಪರಿಚಯಿಸಲಾಗುವ ಪ್ರತಿಯೊಂದು ಸುಧಾರಣೆಯಲ್ಲೂ ಭಾರತೀಯರ ಆಕಾಂಕ್ಷೆಗಳಿಗೆ ಅತ್ಯುನ್ನತ ಆದ್ಯತೆ ನೀಡಬೇಕು” ಎಂದು ಪ್ರಧಾನಿ ಒತ್ತಿ ಹೇಳಿದರು.

ಸಣ್ಣ ಹಾಳೆಯ ಮೇಲೆ ದೊಡ್ಡ ವರ್ಣಚಿತ್ರವನ್ನು ಬಿಡಿಸಲು ಸಾಧ್ಯವೇ? ಎಂದು ಪ್ರಧಾನಿ ಕೇಳಿದರು. ನಮ್ಮ ಚಿಂತನೆಯ ಹಾಳೆಯನ್ನು ವಿಸ್ತರಿಸದ ಹೊರತಾಗಿ, ನಾವು ನಮ್ಮ ಕನಸಿನ ಭವ್ಯ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಭಾರತದ ಭವ್ಯ ಪರಂಪರೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಮ್ಮ ಚಿಂತನೆಯು ಈ ಭವ್ಯ ಪರಂಪರೆಯೊಂದಿಗೆ ಬೆಸೆದುಕೊಂಡರೆ ನಾವು ಆ ಭವ್ಯ ಭಾರತದ ಚಿತ್ರಕಲೆಯನ್ನು ಚಿತ್ರಿಸಬಹುದು ಎಂದರು. “ಭಾರತವು ವಿಶಾಲ ಚಿಂತನೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಸಣ್ಣ ವಿಷಯಗಳಲ್ಲಿ ಸಿಲುಕಿಕೊಳ್ಳುವ ಸಮಯ ಮುಗಿದಿದೆ”, ಎಂದು ಶ್ರೀ ಮೋದಿ ಹೇಳಿದರು.

ʻಆತ್ಮನಿರ್ಭರ ಭಾರತʼ ನಿರ್ಮಾಣದ ಮಹತ್ವವನ್ನು ಅವರು ಒತ್ತಿ ಹೇಳಿದರು. ಆರಂಭಿಕ ಆತಂಕವನ್ನು ಧಿಕ್ಕರಿಸಿ, ಜಗತ್ತು ಇಂದು ಭಾರತದ ಆತ್ಮನಿರ್ಭರ ಮಾದರಿಯ ಬಗ್ಗೆ ಮಾತನಾಡುತ್ತಿದೆ ಎಂದು ಅವರು ಹೇಳಿದರು. ರಕ್ಷಣೆ, ಉತ್ಪಾದನೆ, ಇಂಧನ ಮತ್ತು ಖಾದ್ಯ ತೈಲದಲ್ಲಿ ಸ್ವಾವಲಂಬಿಯಾಗಲು ಯಾರು ಬಯಸುವುದಿಲ್ಲ? ಈ ಅನ್ವೇಷಣೆಯಲ್ಲಿ ಪಕ್ಷ ರಾಜಕಾರಣವು ಅಡ್ಡಿಯಾಗಬಾರದು ಎಂದು ಅವರು ಹೇಳಿದರು.

ಉತ್ಪಾದನಾ ಕ್ಷೇತ್ರದಲ್ಲಿ ಭಾರತವು ಹೊಸ ಎತ್ತರಕ್ಕೆ ಏರುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ‘ಶೂನ್ಯ ದೋಷ, ಶೂನ್ಯ ಪರಿಣಾಮ'(ಝೀರೊ ಡಿಫೆಕ್ಟ್‌, ಝೀರೋ ಎಫೆಕ್ಟ್‌) ಮಾದರಿಯ ಬಗ್ಗೆ ಒತ್ತಿ ಹೇಳಿದರ. ಭಾರತೀಯ ಉತ್ಪನ್ನಗಳು ಯಾವುದೇ ದೋಷಗಳಿಂದ ಮುಕ್ತವಾಗಿರಬೇಕು ಮತ್ತು ಅವುಗಳ ಉತ್ಪಾದನಾ ಪ್ರಕ್ರಿಯೆಯು ಪರಿಸರದ ಮೇಲೆ ಶೂನ್ಯ ಪರಿಣಾಮ ಬೀರಬೇಕು ಎಂದರು. ಕೃಷಿ, ವಿನ್ಯಾಸ, ಸಾಫ್ಟ್‌ವೇರ್‌ಗಳು, ಕರಕುಶಲ ವಸ್ತುಗಳು ಮುಂತಾದ ಉತ್ಪನ್ನಗಳಿಗೆ ಭಾರತದ ಉತ್ಪಾದನಾ ವಲಯದಲ್ಲಿ ಹೊಸ ಜಾಗತಿಕ ಮಾನದಂಡಗಳನ್ನು ಸೃಷ್ಟಿಸುವ ಉದ್ದೇಶದಿಂದ ಮುಂದುವರಿಯುವಂತೆ ಅವರು ಒತ್ತಿ ಹೇಳಿದರು. “ನಮ್ಮ ಉತ್ಪನ್ನವು ನಮ್ಮ ಹಳ್ಳಿಗಳು, ಪಟ್ಟಣಗಳು, ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಮಾತ್ರವಲ್ಲದೆ ವಿಶ್ವದ ಮಟ್ಟದಲ್ಲಿ ಅತ್ಯುತ್ತಮವಾಗಿರುತ್ತದೆ ಎಂಬ ನಂಬಿಕೆಯನ್ನು ನಾವು ಹೊಂದಿರಬೇಕು,” ಎಂದರು.

ಹೊಸ ಶಿಕ್ಷಣ ನೀತಿಯ ಮುಕ್ತತೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದನ್ನು ಸಾರ್ವತ್ರಿಕವಾಗಿ ಸ್ವೀಕರಿಸಲಾಗಿದೆ ಎಂದರು. ʻಜಿ-20ʼ ಶೃಂಗಸಭೆಯ ಸಂದರ್ಭದಲ್ಲಿ ಪ್ರದರ್ಶಿಸಲಾದ ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಛಾಯಾಚಿತ್ರವನ್ನು ಉಲ್ಲೇಖಿಸಿದ ಪ್ರಧಾನಿಯವರು, ಈ ಸಂಸ್ಥೆ 1500 ವರ್ಷಗಳ ಹಿಂದೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ಅರಿತು ವಿದೇಶಿ ಗಣ್ಯರು ಚಕಿತಗೊಂಡರು ಎಂದು ತಿಳಿಸಿದರು. “ನಾವು ಇದರಿಂದ ಸ್ಫೂರ್ತಿ ಪಡೆಯಬೇಕು ಮತ್ತು ವರ್ತಮಾನದಲ್ಲಿ ನಮ್ಮ ಗುರಿಗಳನ್ನು ಸಾಧಿಸುವತ್ತ ಗಮನ ಹರಿಸಬೇಕು,” ಎಂದು ಶ್ರೀ ಮೋದಿ ಹೇಳಿದರು.

ರಾಷ್ಟ್ರದ ಯುವಜನರಲ್ಲಿ ಹೆಚ್ಚುತ್ತಿರುವ ಕ್ರೀಡಾ ಯಶಸ್ಸನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಕ್ರೀಡಾ ಸಂಸ್ಕೃತಿಯ ಬೆಳವಣಿಗೆಯನ್ನು ಉಲ್ಲೇಖಿಸಿದರು. “ಪ್ರತಿಯೊಂದು ಕ್ರೀಡಾ ವೇದಿಕೆಯಲ್ಲಿ ನಮ್ಮ ತ್ರಿವರ್ಣ ಧ್ವಜ ಇರಬೇಕು ಎಂಬುದು ರಾಷ್ಟ್ರದ ಸಂಕಲ್ಪವಾಗಬೇಕು,” ಎಂದು ಶ್ರೀ ಮೋದಿ ಕರೆ ನೀಡಿದರು. ಸಾಮಾನ್ಯ ನಾಗರಿಕರ ಜೀವನದ ಗುಣಮಟ್ಟದ ಆಕಾಂಕ್ಷೆಗಳನ್ನು ಪೂರೈಸುವ ಸಲುವಾಗಿ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅವರು ಮನವಿ ಮಾಡಿದರು.

ಭಾರತವು ಅತ್ಯಧಿಕ ಸಂಖ್ಯೆಯ ಯುವಜನರನ್ನು ಹೊಂದಿರುವ ದೇಶವಾಗಿರುವುದರ ಮಹತ್ವವನ್ನು ಪ್ರಧಾನಿ ಉಲ್ಲೇಖಿಸಿದರು. ಭಾರತದ ಯುವಕರು ಸದಾ ಮುಂಚೂಣಿಯಲ್ಲಿರುವ ಸನ್ನಿವೇಶವನ್ನು ಸೃಷ್ಟಿಸಲು ನಾವು ಬಯಸುತ್ತೇವೆ. ಜಾಗತಿಕ ಮಟ್ಟದಲ್ಲಿ ಕೌಶಲ್ಯದ ಅವಶ್ಯಕತೆಗಳನ್ನು ಗುರುತಿಸಿದ ನಂತರ ಭಾರತವು ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಯತ್ತ ಗಮನ ಹರಿಸಿದೆ ಎಂದು ಅವರು ಹೇಳಿದರು. 150 ನರ್ಸಿಂಗ್ ಕಾಲೇಜುಗಳನ್ನು ತೆರೆಯುವ ಇತ್ತೀಚಿನ ಉಪಕ್ರಮವನ್ನು ಪ್ರಸ್ತಾಪಿಸಿದ ಅವರು, ಇದು ಆರೋಗ್ಯ ವೃತ್ತಿಪರರ ಜಾಗತಿಕ ಅಗತ್ಯವನ್ನು ಪೂರೈಸಲು ಭಾರತದ ಯುವಕರನ್ನು ಸಜ್ಜಗೊಳಿಸುತ್ತಿದೆ ಎಂದರು.

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, “ನಿರ್ಧಾರ ತೆಗೆದುಕೊಳ್ಳುವುದನ್ನು ವಿಳಂಬ ಮಾಡಲು ಸಾಧ್ಯವಿಲ್ಲ,” ಎಂದರು. ಇದೇ ವೇಳೆ, ಜನಪ್ರತಿನಿಧಿಗಳು ರಾಜಕೀಯ ಲಾಭ ಅಥವಾ ನಷ್ಟಗಳಿಗೆ ಅಂಟಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಹೇಳಿದರು. ದೇಶದ ಸೌರ ವಿದ್ಯುತ್ ಕ್ಷೇತ್ರದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಇದು ಈಗ ಇಂಧನ ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸುವ ಭರವಸೆ ಮೂಡಿಸಿದೆ ಎಂದರು. ʻಮಿಷನ್ ಹೈಡ್ರೋಜನ್ʼ, ʻಸೆಮಿಕಂಡಕ್ಟರ್ ಮಿಷನ್ʼ ಮತ್ತು ʻಜಲ ಜೀವನ್ ಮಿಷನ್ʼ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಇವುಗಳು ಉತ್ತಮ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದರು. ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು ತಲುಪುವ ಮತ್ತು ಸ್ಪರ್ಧಾತ್ಮಕವಾಗಿ ಉಳಿಯುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಪ್ರತಿಯೊಬ್ಬ ನಾಗರಿಕರಿಗೆ ಅವು ಲಭ್ಯವಾಗುವಂತೆ ಮಾಡಲು ದೇಶದ ಸರಕು-ಸಾಗಣೆ ವಲಯವನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡಿದರು. ಜ್ಞಾನ ಮತ್ತು ನಾವೀನ್ಯತೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇತ್ತೀಚೆಗೆ ಅಂಗೀಕರಿಸಲಾದ ಸಂಶೋಧನೆ ಮತ್ತು ನಾವೀನ್ಯತೆಗೆ ಸಂಬಂಧಿಸಿದ ಕಾನೂನನ್ನು ಉಲ್ಲೇಖಿಸಿದರು. ಚಂದ್ರಯಾನದ ಯಶಸ್ಸಿನಿಂದ ಸೃಷ್ಟಿಯಾದ ವೇಗವರ್ಧನೆ ಮತ್ತು ಆಕರ್ಷಣೆಯನ್ನು ವ್ಯರ್ಥ ಮಾಡಬಾರದು ಎಂದು ಅವರು ಹೇಳಿದರು.

“ಸಾಮಾಜಿಕ ನ್ಯಾಯವು ನಮ್ಮ ಪ್ರಾಥಮಿಕ ಆದ್ಯತೆ” ಎಂದು ಹೇಳಿದ ಪ್ರಧಾನಿ, ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆಯು ತುಂಬಾ ನಿರ್ಬಂಧಿತವಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ನೋಟದ ಅವಶ್ಯಕತೆಯಿದೆ ಎಂದು ಹೇಳಿದರು. ಅವಕಾಶವಂಚಿತ ವರ್ಗಗಳನ್ನು ಸಂಪರ್ಕಜಾಲ, ಶುದ್ಧ ನೀರು, ವಿದ್ಯುತ್, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಮೂಲಭೂತ ಸೌಕರ್ಯಗಳೊಂದಿಗೆ ಸಬಲೀಕರಣಗೊಳಿಸುವುದು ಸಾಮಾಜಿಕ ನ್ಯಾಯದಲ್ಲಿ ಸೇರಿದೆ ಎಂದು ಅವರು ಹೇಳಿದರು. ಅಭಿವೃದ್ಧಿಯಲ್ಲಿನ ಅಸಮತೋಲನವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ಒತ್ತಿ ಹೇಳಿದ ಅವರು, ದೇಶದ ಪೂರ್ವ ಭಾಗ ಹಿಂದುಳಿದಿರುವುದನ್ನು ಉಲ್ಲೇಖಿಸಿದರು. “ನಮ್ಮ ಪೂರ್ವ ಭಾಗವನ್ನು ಬಲಪಡಿಸುವ ಮೂಲಕ ನಾವು ಅಲ್ಲಿ ಸಾಮಾಜಿಕ ನ್ಯಾಯದ ಶಕ್ತಿಯನ್ನು ನೀಡಬೇಕಾಗಿದೆ,” ಎಂದು ಶ್ರೀ ಮೋದಿ ಹೇಳಿದರು.  ಸಮತೋಲಿತ ಅಭಿವೃದ್ಧಿಗೆ ಉತ್ತೇಜನ ನೀಡಿರುವ ʻಮಹತ್ವಾಕಾಂಕ್ಷೆಯ ಜಿಲ್ಲೆʼಗಳ ಯೋಜನೆಯನ್ನು ಅವರು ಉಲ್ಲೇಖಿಸಿದರು. ಈ ಯೋಜನೆಯನ್ನು 500 ಬ್ಲಾಕ್ ಗಳಿಗೆ ವಿಸ್ತರಿಸಲಾಗಿದೆ ಎಂದರು.

“ಇಂದು ಇಡೀ ವಿಶ್ವವೇ ಭಾರತದತ್ತ ಎದುರು ನೋಡುತ್ತಿದೆ,ʼʼ ಎಂದು ಪ್ರಧಾನಿ ಹೇಳಿದರು. ಶೀತಲ ಸಮರದ ಯುಗದಲ್ಲಿ ಭಾರತವನ್ನು ತಟಸ್ಥ ದೇಶವೆಂದು ಪರಿಗಣಿಸಲಾಗಿತ್ತು, ಆದರೆ ಇಂದು, ಭಾರತವನ್ನು ‘ವಿಶ್ವ ಮಿತ್ರ’ ಎಂದು ಕರೆಯಲಾಗುತ್ತದೆ. ಈಗ ಭಾರತವು ಸ್ನೇಹ ಸಂಬಂಧಗಳಿಗಾಗಿ ಇತರ ರಾಷ್ಟ್ರಗಳತ್ತ ಹಸ್ತ ಚಾಚುತ್ತಿದೆ ಮತ್ತು ಆ ದೇಶಗಳು ಭಾರತದ ಜೊತೆಗಿನ ಸ್ನೇಹಕ್ಕಾಗಿ ಎದುರು ನೋಡುತ್ತಿವೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರವು ಜಗತ್ತಿಗೆ ಸ್ಥಿರ ಪೂರೈಕೆ ಸರಪಳಿಯಾಗಿ ಹೊರಹೊಮ್ಮಿರುವುದರಿಂದ ಭಾರತವು ಅಂತಹ ವಿದೇಶಾಂಗ ನೀತಿಯ ಪ್ರಯೋಜನಗಳನ್ನು ಪಡೆಯುತ್ತಿದೆ ಎಂದು ಅವರು ಉಲ್ಲೇಖಿಸಿದರು. ಜಿ-20 ಶೃಂಗಸಭೆಯು ಜಾಗತಿಕ ದಕ್ಷಿಣದ ಅಗತ್ಯಗಳನ್ನು ಪೂರೈಸುವ ಮಾಧ್ಯಮವಾಗಿದೆ ಎಂದು ಹೇಳಿದ ಶ್ರೀ ಮೋದಿ, ಈ ಮಹತ್ವದ ಸಾಧನೆಗಾಗಿ ಭವಿಷ್ಯದ ಪೀಳಿಗೆಯು ಅಪಾರ ಹೆಮ್ಮೆ ಪಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಜಿ-20 ಶೃಂಗಸಭೆಯು ನೆಟ್ಟ ಬೀಜಗಳು ವಿಶ್ವದ ಪಾಲಿಗೆ ವಿಶ್ವಾಸದ ಬೃಹತ್ ಆಲದ ಮರವಾಗಿ ಬೆಳೆಯುತ್ತವೆ,” ಎಂದು ಶ್ರೀ ಮೋದಿ ಬಣ್ಣಿಸಿದರು. ಜಿ-20 ಶೃಂಗಸಭೆಯಲ್ಲಿ ಅಧಿಕೃತಗೊಳಿಸಲಾದ ʻಜೈವಿಕ ಇಂಧನ ಮೈತ್ರಿʼಯನ್ನು ಪ್ರಧಾನಿ ಉಲ್ಲೇಖಿಸಿದರು. ಭಾರತದ ನಾಯಕತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಬೃಹತ್ ಜೈವಿಕ ಇಂಧನ ಆಂದೋಲನ ನಡೆಯುತ್ತಿದೆ ಎಂದು ಅವರು ಹೇಳಿದರು.

ಹೊಸ ಸಂಸತ್‌ ಭವನದ ವೈಭವ ಮತ್ತು ಘನತೆಯನ್ನು ಯಾವುದೇ ಬೆಲೆ ತೆತ್ತಾದರೂ ಸರಿ ರಕ್ಷಿಸಬೇಕು. ಅದನ್ನು ಹಳೆಯ ಸಂಸತ್ ಕಟ್ಟಡದ ಸ್ಥಾನಮಾನಕ್ಕೆ ಜಾರಲು ಬಿಡಬಾರದು ಎಂದು ಪ್ರಧಾನಿಯವರು ಉಪರಾಷ್ಟ್ರಪತಿ ಮತ್ತು ಸ್ಪೀಕರ್ ಅವರಿಗೆ ವಿನಂತಿಸಿದರು. ಈ ಕಟ್ಟಡವನ್ನು ‘ಸಂವಿಧಾನ ಸದನ’ ಎಂದು ಕರೆಯಲಾಗುವುದು ಎಂದು ಅವರು ಹೇಳಿದರು. “ಸಂವಿಧಾನ ಸದನವಾಗಿ, ಹಳೆಯ ಕಟ್ಟಡವು ನಮಗೆ ಮಾರ್ಗದರ್ಶನ ಮುಂದುವರಿಸುತ್ತದೆ ಮತ್ತು ಸಂವಿಧಾನ ಸಭೆಯ ಭಾಗವಾಗಿದ್ದ ಮಹಾನ್ ವ್ಯಕ್ತಿಗಳ ಬಗ್ಗೆ ನಮಗೆ ನೆನಪಿಸುತ್ತಲೇ ಇರುತ್ತದೆ,” ಎಂದು ಪ್ರಧಾನಿ ತಮ್ಮ ಮಾತು ಮುಗಿಸಿದರು.

*****