Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ಉದ್ಯೋಗ ಪಡೆದ 51000+ ನೇಮಕಾತಿ ಪತ್ರಗಳ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ಉದ್ಯೋಗ ಪಡೆದ 51000+ ನೇಮಕಾತಿ ಪತ್ರಗಳ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ನಮಸ್ಕಾರ!
ಈ ‘ಆಜಾದಿ ಕಾ ಅಮೃತಕಾಲ್’ನಲ್ಲಿ ದೇಶದ ಸ್ವಾತಂತ್ರ್ಯದ ರಕ್ಷಕರಾಗಿರುವ ಮತ್ತು ಕೋಟ್ಯಂತರ ದೇಶವಾಸಿಗಳ ರಕ್ಷಕರಾಗಿರುವ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇಂದು ನೇಮಕಾತಿ ಪತ್ರ ಪಡೆಯುತ್ತಿರುವ ಯುವಕರು ದೇಶ ಸೇವೆ ಮಾಡುವುದಲ್ಲದೆ, ದೇಶದ ನಾಗರಿಕರ ರಕ್ಷಣೆ ಮಾಡುತ್ತಾರೆ ಎಂಬ ಕಾರಣಕ್ಕೆ ನಾನು ನಿಮ್ಮನ್ನು ಅಮೃತ ರಕ್ಷಕರು ಎಂದು ಕರೆಯುತ್ತಿದ್ದೇನೆ. ಅದಕ್ಕಾಗಿಯೇ ನೀವು ಒಂದು ರೀತಿಯಲ್ಲಿ ಜನರ ರಕ್ಷಕರು ಮತ್ತು ‘ಅಮೃತಕಾಲ’ದ ‘ಅಮೃತ ರಕ್ಷಕರು’.

ನನ್ನ ಕುಟುಂಬ ಸದಸ್ಯರೆ,
ದೇಶವೇ ಹೆಮ್ಮೆ ಮತ್ತು ಆತ್ಮವಿಶ್ವಾಸ ಬೀಗುತ್ತಿರುವ ವಾತಾವರಣದಲ್ಲಿ ಈ ಬಾರಿ ರೋಜ್‌ಗಾರ್ ಮೇಳ ಆಯೋಜಿಸಲಾಗಿದೆ. ನಮ್ಮ ಚಂದ್ರಯಾನ ಮತ್ತು ಅದರ ರೋವರ್ ಪ್ರಗ್ಯಾನ್, ಇತಿಹಾಸ ಸೃಷ್ಟಿಸುವ ಚಂದ್ರನಿಂದ ಚಿತ್ರಗಳನ್ನು ನಿರಂತರವಾಗಿ ಕಳುಹಿಸುತ್ತಿದೆ. ಈ ಹೆಮ್ಮೆಯ ಕ್ಷಣದಲ್ಲಿ, ನಿಮ್ಮ ಜೀವನದ ಪ್ರಮುಖ ಪ್ರಯಾಣವನ್ನು ನೀವು ಪ್ರಾರಂಭಿಸಲಿದ್ದೀರಿ. ಎಲ್ಲಾ ಯಶಸ್ವಿ ಅಭ್ಯರ್ಥಿಗಳಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೆ,
ಸೇನೆಗೆ ಸೇರುವುದು, ರಕ್ಷಣಾ ಪಡೆ ಸೇರುವುದು, ಪೊಲೀಸ್ ಸೇವೆಗೆ ಸೇರುವುದು ಹೀಗೆ ಪ್ರತಿಯೊಬ್ಬ ಯುವಕನೂ ದೇಶ ರಕ್ಷಣೆಯ ಕಾವಲುಗಾರನಾಗುವ ಕನಸು ಕಾಣುತ್ತಾನೆ. ಇದರಿಂದ ನೀವು ದೊಡ್ಡ ಜವಾಬ್ದಾರಿ ಹೊಂದಿದ್ದೀರಿ. ಅದಕ್ಕಾಗಿಯೇ ನಮ್ಮ ಸರ್ಕಾರವು ನಿಮ್ಮ ಅಗತ್ಯಗಳ ಬಗ್ಗೆಯೂ ಬಹಳ ಗಂಭೀರವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ, ಅರೆಸೇನಾ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಾವು ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಿದ್ದೇವೆ. ಅರ್ಜಿಯಿಂದ ಹಿಡಿದು ಆಯ್ಕೆ ಪ್ರಕ್ರಿಯೆವರೆಗೆ ಕಾರ್ಯ ಚುರುಕುಗೊಂಡಿದೆ. ಅರೆಸೇನಾ ಪಡೆಗಳ ನೇಮಕಾತಿ ಪರೀಕ್ಷೆಯನ್ನು ಈಗ 13 ಸ್ಥಳೀಯ ಭಾಷೆಗಳಲ್ಲಿಯೂ ನಡೆಸಲಾಗುತ್ತಿದೆ. ಈ ಹಿಂದೆ ಇಂತಹ ಪರೀಕ್ಷೆಗಳಲ್ಲಿ ಹಿಂದಿ ಅಥವಾ ಇಂಗ್ಲಿಷ್ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು, ಆದರೆ ಈಗ ಮಾತೃಭಾಷೆಗೆ ಪ್ರಾಮುಖ್ಯತೆ ನೀಡಲಾಗಿದೆ. ಈ ಬದಲಾವಣೆಯು ಲಕ್ಷಾಂತರ ಯುವಕರಿಗೆ ಉದ್ಯೋಗ ಪಡೆಯಲು ಅವಕಾಶಗಳನ್ನು ಒದಗಿಸಿದೆ.
ಕಳೆದ ವರ್ಷ ಛತ್ತೀಸ್‌ಗಢದ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ನೂರಾರು ಬುಡಕಟ್ಟು ಸಮುದಾಯದ ಯುವಕರನ್ನು ನೇಮಿಸಲಾಗಿತ್ತು. ಅವರು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಸಂಪರ್ಕದಲ್ಲಿರಲು ನಿಯಮಗಳನ್ನು ಸರಾಗಗೊಳಿಸುವ ಮೂಲಕ ರಕ್ಷಣಾ ಪಡೆಗಳಲ್ಲಿ ನೇಮಕಗೊಳ್ಳಲು ಅವಕಾಶ ನೀಡಲಾಯಿತು. ಅದೇ ರೀತಿ, ಗಡಿ ಜಿಲ್ಲೆಗಳು ಮತ್ತು ನಕ್ಸಲ್ ಪೀಡಿತ ಜಿಲ್ಲೆಗಳ ಯುವಕರಿಗೆ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಕೋಟಾ ಹೆಚ್ಚಿಸಲಾಗಿದೆ. ಸರ್ಕಾರದ ಪ್ರಯತ್ನದಿಂದಾಗಿ ಅರೆಸೇನಾ ಪಡೆಗಳು ನಿರಂತರವಾಗಿ ಬಲಗೊಳ್ಳುತ್ತಿವೆ.

ಸ್ನೇಹಿತರೆ,
ದೇಶದ ಅಭಿವೃದ್ಧಿ ಖಾತ್ರಿಪಡಿಸುವಲ್ಲಿ ನೀವು ಮಹತ್ವದ ಪಾತ್ರ ವಹಿಸುತ್ತೀರಿ. ಭದ್ರತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ವಾತಾವರಣವು ಅಭಿವೃದ್ಧಿಯ ವೇಗ ಹೆಚ್ಚಿಸುತ್ತದೆ. ನೀವು ಉತ್ತರ ಪ್ರದೇಶದ ಉದಾಹರಣೆ ತೆಗೆದುಕೊಳ್ಳಬಹುದು. ಒಂದು ಕಾಲದಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಯ ವಿಷಯದಲ್ಲಿ ತೀರಾ ಹಿಂದುಳಿದಿತ್ತು, ಅಪರಾಧದ ವಿಷಯದಲ್ಲಿ ಬಹಳ ಮುಂದಿತ್ತು. ಆದರೆ ಈಗ ಕಾನೂನಿನ ನಿಯಮ ಸ್ಥಾಪಿಸುವುದರೊಂದಿಗೆ ಉತ್ತರ ಪ್ರದೇಶ  ಅಭಿವೃದ್ಧಿಯ ಹೊಸ ಎತ್ತರ ಮುಟ್ಟುತ್ತಿದೆ. ಒಂದು ಕಾಲದಲ್ಲಿ ಗೂಂಡಾಗಳು ಮತ್ತು ಮಾಫಿಯಾಗಳ ಭೀತಿಯಲ್ಲಿ ಬದುಕುತ್ತಿದ್ದ ಉತ್ತರ ಪ್ರದೇಶದಲ್ಲಿ ಭಯಮುಕ್ತ ಸಮಾಜ ನಿರ್ಮಾಣವಾಗುತ್ತಿದೆ. ಇಂತಹ ಕಾನೂನು ಸುವ್ಯವಸ್ಥೆ ಜನರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಅಪರಾಧದ ಪ್ರಮಾಣ ಕಡಿಮೆಯಾದಾಗ, ಯುಪಿಯಲ್ಲಿ ಹೂಡಿಕೆಯೂ ಹೆಚ್ಚಾಗತೊಡಗಿತು, ಹೂಡಿಕೆ ಹರಿದುಬರಲು ಪ್ರಾರಂಭಿಸಿತು. ಇದಕ್ಕೆ ವಿರುದ್ಧವಾಗಿ, ಅಪರಾಧದ ಪ್ರಮಾಣವು ಉತ್ತುಂಗದಲ್ಲಿರುವ ರಾಜ್ಯಗಳಲ್ಲಿ ಹೂಡಿಕೆ ಕಡಿಮೆಯಾಗುವುದನ್ನು ನಾವು ನೋಡುತ್ತೇವೆ ಮತ್ತು ಜೀವನೋಪಾಯಕ್ಕಾಗಿ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳುತ್ತವೆ.

ನನ್ನ ಕುಟುಂಬ ಸದಸ್ಯರೆ,
ಇತ್ತೀಚಿನ ದಿನಗಳಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗುತ್ತಿರುವುದನ್ನು ನೀವು ನಿರಂತರವಾಗಿ ಓದುತ್ತಿದ್ದೀರಿ. ಈ ದಶಕದಲ್ಲಿ ಭಾರತವು ವಿಶ್ವದ ಅಗ್ರ-3 ಆರ್ಥಿಕತೆಗಳಲ್ಲಿ ಸೇರಲಿದೆ. ನಾನು ನಿಮಗೆ ಈ ಗ್ಯಾರಂಟಿ ನೀಡಿದಾಗ ಅಥವಾ ಮೋದಿ ತನ್ನ ದೇಶವಾಸಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ಈ ಭರವಸೆ ನೀಡಿದಾಗ, ಅದನ್ನು ದೊಡ್ಡ ಜವಾಬ್ದಾರಿಯೊಂದಿಗೆ ಮಾಡಲಾಗುತ್ತದೆ. ಆದರೆ ನೀವು ಇದನ್ನು ಓದಿದಾಗ, ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರುತ್ತದೆ. ಇದು ದೇಶದ ಸಾಮಾನ್ಯ ನಾಗರಿಕರ ಮೇಲೆ ಏನು ಪರಿಣಾಮ ಬೀರುತ್ತದೆ? ಮತ್ತು ಈ ಪ್ರಶ್ನೆ ತುಂಬಾ ಸ್ವಾಭಾವಿಕವಾಗಿದೆ.

ಸ್ನೇಹಿತರೆ,
ಯಾವುದೇ ಆರ್ಥಿಕತೆ ಮುಂದುವರಿಯಬೇಕಾದರೆ ದೇಶದ ಪ್ರತಿಯೊಂದು ಕ್ಷೇತ್ರವೂ ಅಭಿವೃದ್ಧಿ ಹೊಂದುವುದು ಅವಶ್ಯಕ. ಆಹಾರ ಕ್ಷೇತ್ರದಿಂದ ಫಾರ್ಮಾದವರೆಗೆ, ಬಾಹ್ಯಾಕಾಶದಿಂದ ಸ್ಟಾರ್ಟಪ್‌ಗಳವರೆಗೆ, ಪ್ರತಿಯೊಂದು ಕ್ಷೇತ್ರವೂ ಮುಂದೆ ಸಾಗಿದಾಗ, ಆರ್ಥಿಕತೆಯೂ ಮುಂದುವರಿಯುತ್ತದೆ. ಫಾರ್ಮಾ ಉದ್ಯಮದ ಉದಾಹರಣೆ ತೆಗೆದುಕೊಳ್ಳೋಣ. ಸಾಂಕ್ರಾಮಿಕ ಕೋವಿಡ್ ಸಮಯದಲ್ಲಿ ಭಾರತದ ಫಾರ್ಮಾ ಉದ್ಯಮವನ್ನು ಬಹಳವಾಗಿ ಪ್ರಶಂಸಿಸಲಾಯಿತು. ಇಂದು ಈ ಉದ್ಯಮವು 4 ಲಕ್ಷ ಕೋಟಿ ರೂ. ಮತ್ತು 2030ರ ವೇಳೆಗೆ ಭಾರತದ ಫಾರ್ಮಾ ಉದ್ಯಮವು ಸುಮಾರು 10 ಲಕ್ಷ ಕೋಟಿ ರೂ.ಗೆ ಏರಿಕೆ ಕಾಣಲಿದೆ. ಈಗ ಈ ಫಾರ್ಮಾ ಉದ್ಯಮವು ಮುಂದೆ ಸಾಗಿದಾಗ, ಇದರ ಅರ್ಥವೇನು? ಇದರರ್ಥ ಈ ದಶಕದಲ್ಲಿ ಫಾರ್ಮಾ ಉದ್ಯಮಕ್ಕೆ ಇಂದಿನ ಯುವಕರ ಸಂಖ್ಯೆಗಿಂತ ಹಲವು ಪಟ್ಟು ಹೆಚ್ಚಿನ ಸಂಖ್ಯೆಯ ಅಗತ್ಯವಿದೆ. ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಸ್ನೇಹಿತರೆ,
ಇಂದು ದೇಶದಲ್ಲಿ ಆಟೋಮೊಬೈಲ್ ಮತ್ತು ಆಟೋ ಘಟಕಗಳ ಉದ್ಯಮಗಳು ಕೂಡ ತ್ವರಿತ ಬೆಳವಣಿಗೆಗೆ ಸಾಕ್ಷಿಯಾಗುತ್ತಿವೆ. ಪ್ರಸ್ತುತ, ಈ ಎರಡೂ ಕೈಗಾರಿಕೆಗಳು 12 ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿವೆ. ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಬೆಳವಣಿಗೆ ನಿಭಾಯಿಸಲು, ಆಟೋಮೊಬೈಲ್ ಉದ್ಯಮಕ್ಕೆ ಹೆಚ್ಚಿನ ಸಂಖ್ಯೆಯ ಹೊಸ ಯುವಕರ ಅಗತ್ಯವಿದೆ. ಹೊಸ ಉದ್ಯೋಗಿಗಳು ಬೇಕಾಗುತ್ತಾರೆ ಮತ್ತು ಅಸಂಖ್ಯಾತ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಆಹಾರ ಸಂಸ್ಕರಣಾ ಉದ್ಯಮದ ಮಹತ್ವದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವುದನ್ನು ನೀವು ನೋಡಿರಬೇಕು. ಭಾರತದ ಆಹಾರ ಸಂಸ್ಕರಣಾ ಮಾರುಕಟ್ಟೆ ಕಳೆದ ವರ್ಷ ಸುಮಾರು 26 ಲಕ್ಷ ಕೋಟಿ ರೂ.ಗೆ ಬೆಳವಣಿಗೆ ಕಂಡಿತ್ತು. ಈಗ ಮುಂದಿನ 3-3.5 ವರ್ಷಗಳಲ್ಲಿ ಈ ವಲಯವು ಸುಮಾರು 35 ಲಕ್ಷ ಕೋಟಿ ರೂ. ಅಂದರೆ, ಅದು ಹೆಚ್ಚು ವಿಸ್ತಾರವಾದಷ್ಟೂ ಹೆಚ್ಚು ಯುವಕರ ಅಗತ್ಯವಿರುತ್ತದೆ, ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

ಸ್ನೇಹಿತರೆ,
ಇಂದು ಭಾರತದಲ್ಲಿ ಮೂಲಸೌಕರ್ಯಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮೂಲಸೌಕರ್ಯಕ್ಕೆ 30 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಇದು ದೇಶಾದ್ಯಂತ ಸಂಪರ್ಕ ವಿಸ್ತರಿಸುತ್ತಿದೆ.ಇದು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಹೊಸ ಸಾಧ್ಯತೆಗಳು ಅಂದರೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂದರ್ಥ.

ಸ್ನೇಹಿತರೆ,
2030ರ ವೇಳೆಗೆ, ನಮ್ಮ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯು 20 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಉದ್ಯಮದಿಂದ 13 ರಿಂದ 14 ಕೋಟಿ ಜನರು ಹೊಸ ಉದ್ಯೋಗಗಳನ್ನು ಪಡೆಯಲಿದ್ದಾರೆ ಎಂದು ನಂಬಲಾಗಿದೆ. ಈ ಎಲ್ಲಾ ಉದಾಹರಣೆಗಳಿಂದ, ಭಾರತದ ಅಭಿವೃದ್ಧಿ ಕೇವಲ ಸಂಖ್ಯೆಗಳ ಓಟವಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. ಈ ಬೆಳವಣಿಗೆಯು ಭಾರತದ ಪ್ರತಿಯೊಬ್ಬ ನಾಗರಿಕನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರರ್ಥ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದು ಆದಾಯ ಮತ್ತು ಜೀವನದ ಗುಣಮಟ್ಟದಲ್ಲಿ ಹೆಚ್ಚಳ ಖಾತ್ರಿಪಡಿಸುತ್ತದೆ. ರೈತರ ಕುಟುಂಬಗಳನ್ನು ನಾವು ಸಹ ನೋಡುತ್ತೇವೆ, ಬಂಪರ್ ಬೆಳೆ ಬಂದರೆ ಮತ್ತು ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕರೆ, ಆಗ ಮನೆಯಲ್ಲಿ ಸಂತೋಷ ತುಂಬಿರುತ್ತದೆ. ಅವರು ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ; ಅವರು ಹೊರಗೆ ಹೋಗಿ ಹೊಸ ವಸ್ತುಗಳನ್ನು ಖರೀದಿಸಲು ಬಯಸುತ್ತಾರೆ. ಮನೆಯ ಆದಾಯ ಹೆಚ್ಚಾದರೆ, ಕುಟುಂಬದ ಸದಸ್ಯರ ಜೀವನದಲ್ಲೂ ಸಕಾರಾತ್ಮಕ ಬದಲಾವಣೆ ಕಂಡುಬರುತ್ತದೆ. ಸಂಸಾರದಲ್ಲೂ ಮತ್ತು ದೇಶದಲ್ಲೂ ಅಷ್ಟೇ. ದೇಶದ ಆದಾಯ ಹೆಚ್ಚಾದಂತೆ ದೇಶದ ಶಕ್ತಿ ಹೆಚ್ಚುತ್ತದೆ, ಸಂಪತ್ತು ಹೆಚ್ಚುತ್ತದೆ. ದೇಶದ ಪ್ರಜೆಗಳು ಕೂಡ ಸಮೃದ್ಧರಾಗಲು ಪ್ರಾರಂಭಿಸುತ್ತಾರೆ.

ಸ್ನೇಹಿತರೆ,
ಕಳೆದ 9 ವರ್ಷಗಳಲ್ಲಿ ನಮ್ಮ ಪ್ರಯತ್ನದಿಂದ, ಬದಲಾವಣೆಯ ಮತ್ತೊಂದು ಹೊಸ ಹಂತ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಕಳೆದ ವರ್ಷ ಭಾರತವು ದಾಖಲೆಯ ರಫ್ತು ವಹಿವಾಟು ನಡೆಸಿದೆ. ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ವಸ್ತುಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದಕ್ಕೆ ಇದು ಸೂಚನೆಯಾಗಿದೆ. ಇದರರ್ಥ ನಮ್ಮ ಉತ್ಪಾದನೆಯು ಹೆಚ್ಚಾಗಿದೆ, ಅದೇ ಸಮಯದಲ್ಲಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಹೊಸ ಯುವಕರ ಅಗತ್ಯತೆಯಿಂದಾಗಿ ಉದ್ಯೋಗಗಳು ಸಹ ಹೆಚ್ಚಿವೆ. ಸಹಜವಾಗಿ, ಕುಟುಂಬದ ಆದಾಯವೂ ಹೆಚ್ಚುತ್ತಿದೆ. ಇಂದು ಭಾರತವು ವಿಶ್ವದ 2ನೇ ಅತಿ ದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ. ದೇಶದಲ್ಲಿ ಮೊಬೈಲ್ ಫೋನ್‌ಗಳ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಸರ್ಕಾರದ ಪ್ರಯತ್ನಗಳು ಮೊಬೈಲ್ ಉತ್ಪಾದನೆಯನ್ನು ಬಹುಪಟ್ಟು ಹೆಚ್ಚಿಸಿವೆ. ಈಗ ದೇಶವು ಮೊಬೈಲ್‌ಗಳನ್ನು ಮೀರಿ ಚಲಿಸುತ್ತಿದೆ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳತ್ತಲೂ ಗಮನ ಹರಿಸುತ್ತಿದೆ.
ಐಟಿ ಹಾರ್ಡ್‌ವೇರ್ ಉತ್ಪಾದನಾ ಕ್ಷೇತ್ರದಲ್ಲಿ, ಮೊಬೈಲ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಯಶಸ್ಸನ್ನು ಪುನರಾವರ್ತಿಸಲು ಹೊರಟಿದ್ದೇವೆ. ಭಾರತದಲ್ಲಿ ತಯಾರಾಗುವ ಅತ್ಯುತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳು ಮೊಬೈಲ್‌ಗಳಂತೆಯೇ ವಿಶ್ವಾದ್ಯಂತ ನಮ್ಮ ವೈಭವವನ್ನು ಹೆಚ್ಚಿಸುವ ದಿನ ದೂರವಿಲ್ಲ. ವೋಕಲ್ ಫಾರ್ ಲೋಕಲ್ ಎಂಬ ಮಂತ್ರ ಅನುಸರಿಸಿ, ಭಾರತ ಸರ್ಕಾರವು ಮೇಡ್ ಇನ್ ಇಂಡಿಯಾ ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳಂತಹ ಹಲವಾರು ಉತ್ಪನ್ನಗಳನ್ನು ಖರೀದಿಸಲು ಒತ್ತು ನೀಡುತ್ತಿದೆ. ಇದರಿಂದ ಉತ್ಪಾದನೆ ಹೆಚ್ಚಿದ್ದು, ಯುವಕರಿಗೆ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತಿವೆ. ಅದಕ್ಕಾಗಿಯೇ ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ, ಆರ್ಥಿಕತೆಯ ಈ ಸಂಪೂರ್ಣ ಚಕ್ರ ನಿರ್ವಹಿಸುವ ಮತ್ತು ರಕ್ಷಿಸುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲೆ ಇದೆ. ನೀವೆಲ್ಲರೂ ಭದ್ರತಾ ಸಿಬ್ಬಂದಿಯಾಗಿ ಉದ್ಯೋಗ ಪ್ರಾರಂಭಿಸುತ್ತಿರುವಾಗ, ನಿಮ್ಮಲ್ಲಿರುವ ಜವಾಬ್ದಾರಿಯನ್ನು ನೀವು ಊಹಿಸಬಹುದು.

ನನ್ನ ಕುಟುಂಬದ ಸದಸ್ಯರೆ,
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು 9 ವರ್ಷಗಳ ಹಿಂದೆ ಇದೇ ದಿನದಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಹಳ್ಳಿಗಳು ಮತ್ತು ಬಡವರ ಆರ್ಥಿಕ ಸಬಲೀಕರಣದಲ್ಲಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 9 ವರ್ಷಗಳ ಹಿಂದೆ, ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬ್ಯಾಂಕ್ ಖಾತೆ ಹೊಂದಿರಲಿಲ್ಲ. ಆದರೆ ಜನ್ ಧನ್ ಯೋಜನೆಯಿಂದಾಗಿ ಕಳೆದ 9 ವರ್ಷಗಳಲ್ಲಿ 50 ಕೋಟಿಗೂ ಹೆಚ್ಚು ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆಯು ಬಡವರು ಮತ್ತು ಗ್ರಾಮೀಣರಿಗೆ ನೇರವಾಗಿ ಸರ್ಕಾರದ ಸವಲತ್ತುಗಳನ್ನು ಒದಗಿಸಲು ಸಹಾಯ ಮಾಡಿದೆ, ಆದರೆ ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರಿಗೆ ಉದ್ಯೋಗ ಮತ್ತು ಸ್ವಯಂಉದ್ಯೋಗದ ವಿಷಯದಲ್ಲಿ ಸಾಕಷ್ಟು ಶಕ್ತಿ ನೀಡಿದೆ.
ಪ್ರತಿ ಹಳ್ಳಿಯಲ್ಲಿ ಬ್ಯಾಂಕ್ ಖಾತೆ ತೆರೆದಾಗ ಲಕ್ಷಾಂತರ ಯುವಕರು ಬ್ಯಾಂಕಿಂಗ್ ಪ್ರತಿನಿಧಿಗಳಾಗಿ ಮತ್ತು ಬ್ಯಾಂಕ್ ಮಿತ್ರರಾಗಿ ಉದ್ಯೋಗಾವಕಾಶಗಳನ್ನು ಪಡೆದರು. ನಮ್ಮ ಸಾವಿರಾರು ಗಂಡು, ಹೆಣ್ಣು ಮಕ್ಕಳಿಗೆ ಬ್ಯಾಂಕ್ ಮಿತ್ರ, ಬ್ಯಾಂಕ್ ಸಖಿ ರೂಪದಲ್ಲಿ ಉದ್ಯೋಗ ಸಿಕ್ಕಿದೆ. ಇಂದು 21 ಲಕ್ಷಕ್ಕೂ ಹೆಚ್ಚು ಯುವ ಸ್ನೇಹಿತರು ಪ್ರತಿ ಹಳ್ಳಿಯಲ್ಲಿ ಬ್ಯಾಂಕಿಂಗ್ ಪ್ರತಿನಿಧಿಗಳಾಗಿ ಅಥವಾ ಬ್ಯಾಂಕ್ ಮಿತ್ರ ಅಥವಾ ಬ್ಯಾಂಕ್ ಸಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಡಿಜಿಟಲ್ ಸಖಿಯರು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಬ್ಯಾಂಕಿಂಗ್ ಸೇವೆಗಳೊಂದಿಗೆ ಸಂಪರ್ಕಿಸುತ್ತಿದ್ದಾರೆ.

ಅದೇ ರೀತಿ, ಜನ್ ಧನ್ ಯೋಜನೆಯು ಉದ್ಯೋಗ ಮತ್ತು ಸ್ವಯಂಉದ್ಯೋಗಕ್ಕಾಗಿ ಮತ್ತೊಂದು ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿತು, ಅದು ಮುದ್ರಾ ಯೋಜನೆಯಾಗಿದೆ. ಇದು ಮಹಿಳೆಯರು ಸೇರಿದಂತೆ ಆ ವಿಭಾಗಗಳಿಗೆ ಸಣ್ಣ ವ್ಯಾಪಾರಗಳಿಗೆ ಸಾಲ ಪಡೆಯಲು ಸುಲಭವಾಯಿತು, ಅವರು ಹಿಂದೆಂದೂ ಯೋಚಿಸಲಿಲ್ಲ. ಈ ಜನರಿಗೆ ಬ್ಯಾಂಕ್‌ಗಳಿಗೆ ನೀಡಲು ಯಾವುದೇ ಗ್ಯಾರಂಟಿ ಇರಲಿಲ್ಲ. ಇಂತಹ ಸನ್ನಿವೇಶದಲ್ಲಿ ಸರ್ಕಾರವೇ ಅವರ ಪರವಾಗಿ ಗ್ಯಾರಂಟಿ ನೀಡಿತು. ಮುದ್ರಾ ಯೋಜನೆಯಡಿ ಈವರೆಗೆ 24 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ನೀಡಲಾಗಿದೆ. ಫಲಾನುಭವಿಗಳಲ್ಲಿ ಮೊದಲ ಬಾರಿಗೆ ತಮ್ಮ ವ್ಯವಹಾರ ಪ್ರಾರಂಭಿಸಿದ ಸುಮಾರು 8 ಕೋಟಿ ಜನರಿದ್ದಾರೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ, ಸುಮಾರು 43 ಲಕ್ಷ ಬೀದಿ ವ್ಯಾಪಾರಿಗಳಿಗೆ ಮೊದಲ ಬಾರಿಗೆ ಬ್ಯಾಂಕ್‌ಗಳಿಂದ ಯಾವುದೇ ಖಾತರಿಯಿಲ್ಲದೆ ಸಾಲ ಮಂಜೂರು ಮಾಡಲಾಗಿದೆ. ಮುದ್ರಾ ಮತ್ತು ಸ್ವಾನಿಧಿಯ ಫಲಾನುಭವಿಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು, ದಲಿತರು, ಹಿಂದುಳಿದವರು ಮತ್ತು ನನ್ನ ಬುಡಕಟ್ಟು ಯುವಕರು ಇದ್ದಾರೆ.
ಗ್ರಾಮಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಬಲಪಡಿಸುವಲ್ಲಿ ಜನ್ ಧನ್ ಖಾತೆಗಳು ಸಾಕಷ್ಟು ಸಹಾಯ ಮಾಡಿದೆ. ಈಗಿನ ಕಾಲದಲ್ಲಿ ಹಳ್ಳಿಗೆ ಹೋದಾಗ, ಮಹಿಳಾ ಸ್ವಸಹಾಯ ಸಂಘದ ಸಹೋದರಿಯರನ್ನು ಭೇಟಿಯಾದಾಗ, ‘ನಾನೊಬ್ಬ ಲಕ್ಷಪತಿ ದೀದಿ’ ಎಂದು ಅನೇಕರು ಬರುತ್ತಾರೆ. ಇದರಿಂದ ಎಲ್ಲವೂ ಸಾಧ್ಯವಾಗಿದೆ. ಸರಕಾರ ನೀಡುವ ಆರ್ಥಿಕ ನೆರವನ್ನು ಈಗ ನೇರವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ವೇಗಗೊಳಿಸುವಲ್ಲಿ ಜನ್ ಧನ್ ಯೋಜನೆಯು ವಹಿಸಿದ ಪಾತ್ರವು ನಿಜಕ್ಕೂ ಉನ್ನತ ವಿಶ್ವವಿದ್ಯಾಲಯಗಳಿಗೆ ಸಂಶೋಧನೆಯ ವಿಷಯವಾಗಿದೆ.

ಸ್ನೇಹಿತರೆ,
ಇದುವರೆಗೆ ನಾನು ರೋಜ್‌ಗಾರ್ ಮೇಳದ ವಿವಿಧ ಕಾರ್ಯಕ್ರಮಗಳಲ್ಲಿ ಲಕ್ಷಗಟ್ಟಲೆ ಯುವಕರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಆ ಯುವಕರಿಗೆ ಸಾರ್ವಜನಿಕ ಸೇವೆ ಅಥವಾ ಇತರ ಕ್ಷೇತ್ರಗಳಲ್ಲಿ ಉದ್ಯೋಗ ಸಿಕ್ಕಿದೆ. ನೀವೆಲ್ಲರೂ ಯುವ ಸ್ನೇಹಿತರೇ, ಸರ್ಕಾರ ಮತ್ತು ಆಡಳಿತದಲ್ಲಿ ಬದಲಾವಣೆ ತರುವ ಉದ್ದೇಶದಲ್ಲಿ ನನ್ನ ದೊಡ್ಡ ಶಕ್ತಿಯಾಗಿದ್ದೀರಿ. ನೀವೆಲ್ಲರೂ ಹೊಸ ಪೀಳಿಗೆಗೆ ಸೇರಿದವರು, ಅಲ್ಲಿ ಎಲ್ಲವೂ ಕೇವಲ ಒಂದು ಕ್ಲಿಕ್ ದೂರದಲ್ಲಿದೆ. ಆದ್ದರಿಂದ, ಜನರು ಪ್ರತಿ ಸೇವೆಯ ವೇಗದ ವಿತರಣೆ ಬಯಸುತ್ತಾರೆ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. ಇಂದಿನ ಪೀಳಿಗೆಯು ಸಮಸ್ಯೆಗಳಿಗೆ ತುಂಡು ತುಂಡಾಗಿ ಪರಿಹಾರ ಬಯಸುವುದಿಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಅವರಿಗೆ ಶಾಶ್ವತ ಪರಿಹಾರ ಬೇಕು. ಆದ್ದರಿಂದ, ಸಾರ್ವಜನಿಕ ಸೇವಕರಾಗಿ, ನೀವು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಅಂತಹ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ದೀರ್ಘಾವಧಿಯಲ್ಲಿ ಜನರಿಗೆ ಅನುಕೂಲವಾಗುವ ರೀತಿ ಪ್ರತಿ ಕ್ಷಣವೂ ಸಿದ್ಧರಾಗಿರಬೇಕು.

ನೀವು ಸೇರಿರುವ ನವ ಪೀಳಿಗೆಯು ಯಶಸ್ಸನ್ನು ಸಾಧಿಸಲು ನಿರ್ಧರಿಸುತ್ತದೆ. ಈ ಪೀಳಿಗೆ ಯಾರ ಕೃಪಾಕಟಾಕ್ಷವನ್ನೂ ಬಯಸುವುದಿಲ್ಲ. ಇದು ಕೇವಲ ಒಂದು ವಿಷಯವನ್ನು ಬಯಸುತ್ತದೆ, ಅವರ ಆ ದಾರಿಯಲ್ಲಿ ಯಾರೂ ಅಡ್ಡಿಯಾಗಬಾರದು. ಆದ್ದರಿಂದ, ಸಾರ್ವಜನಿಕ ಸೇವೆಗಾಗಿ ಮತ್ತು ಸಾರ್ವಜನಿಕರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ ಯಾವಾಗಲೂ ಇರುತ್ತದೆ ಎಂಬುದನ್ನು ಸಾರ್ವಜನಿಕ ಸೇವಕರಾದ ನೀವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಿಮಗೆ ಸುಲಭವಾಗುತ್ತದೆ.

ಸ್ನೇಹಿತರೆ,
ಅರೆಸೇನಾ ಪಡೆಗಳಲ್ಲಿ ನಿಮ್ಮ ಪ್ರಮುಖ ಜವಾಬ್ದಾರಿಯನ್ನು ಪೂರೈಸುವಾಗ, ನೀವು ನಿರಂತರ ಕಲಿಕೆಯ ಮನೋಭಾವವನ್ನು ಸಹ ಕಾಪಾಡಿಕೊಳ್ಳಬೇಕು. ನಿಮ್ಮಂತಹ ಕರ್ಮಯೋಗಿಗಳಿಗಾಗಿ IGoT ಕರ್ಮಯೋಗಿ ಪೋರ್ಟಲ್‌ನಲ್ಲಿ 600ಕ್ಕೂ ಹೆಚ್ಚು ವಿವಿಧ ಕೋರ್ಸ್‌ಗಳು ಲಭ್ಯವಿದೆ, ಸರ್ಟಿಫಿಕೇಟ್ ಕೋರ್ಸ್‌ಗಳಿವೆ. 20 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರು ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ ಮತ್ತು ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ.

ನಿಮ್ಮೆಲ್ಲರನ್ನೂ ಮೊದಲ ದಿನದಿಂದ ಈ ಪೋರ್ಟಲ್‌ಗೆ ಸೇರಲು ಮತ್ತು ಮೊದಲ ದಿನದಿಂದ ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ, ಸಾಧ್ಯವಾದಷ್ಟು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಬೇಕು, ಸಾಧ್ಯವಾದಷ್ಟು ಪ್ರಮಾಣಪತ್ರಗಳನ್ನು ಪಡೆದುಕೊಳ್ಳಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು ಕಲಿಯುವ, ತಿಳಿದಿರುವ ಮತ್ತು ಅರ್ಥ ಮಾಡಿಕೊಳ್ಳುವ ಯಾವುದೇ ಪರೀಕ್ಷೆಗಳು ಕೇವಲ ಪರೀಕ್ಷೆಗಳಿಗೆ ಸೀಮಿತವಾಗಿಲ್ಲ. ಆದರೆ ನಿಮ್ಮ ಜೀವನದಲ್ಲಿ ನಿಮ್ಮ ಕರ್ತವ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದಾಗಿದೆ. ಇದು ನಿಮಗೆ ಉತ್ತಮ ಅವಕಾಶವಾಗಿ ಬದಲಾಗುವ ಸಾಮರ್ಥ್ಯವನ್ನು ಹೊಂದಿದೆ.

ಸ್ನೇಹಿತರೆ,
ನಿಮ್ಮ ಕ್ಷೇತ್ರವು ಸಮವಸ್ತ್ರದ ಜಗತ್ತಿಗೆ ಸೇರಿದೆ. ನಿಮ್ಮ ಕೆಲಸವು ನಿರ್ದಿಷ್ಟ ಸಮಯದ ಚೌಕಟ್ಟಿಗೆ ಸೀಮಿತವಾಗಿಲ್ಲದ ಕಾರಣ ದೈಹಿಕ ಸಾಮರ್ಥ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ ಎಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಹವಾಮಾನದ ಎಲ್ಲಾ ಬದಲಾವಣೆಗಳನ್ನು ನೀವು ಎದುರಿಸಬೇಕಾಗುತ್ತದೆ. ದೇಶ ರಕ್ಷಣೆಯ ಕೆಲಸ ಮಾಡುವವರಿಗೆ ದೈಹಿಕ ಸಾಮರ್ಥ್ಯ ಬಹಳ ಮುಖ್ಯ. ಅರ್ಧದಷ್ಟು ಕೆಲಸವನ್ನು ದೈಹಿಕ ಸಾಮರ್ಥ್ಯದೊಂದಿಗೆ ಮಾಡಲಾಗುತ್ತದೆ. ನೀವು ಬಲವಾಗಿ ನಿಂತರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನೀವು ಹೆಚ್ಚುವರಿ ಏನನ್ನೂ ಮಾಡಬೇಕಾಗಿಲ್ಲ; ಅಲ್ಲಿ ನಿಮ್ಮ ಉಪಸ್ಥಿತಿ ಸಾಕು.
ಎರಡನೆಯದಾಗಿ, ನಿಮ್ಮ ಕರ್ತವ್ಯ ಸಮಯದಲ್ಲಿ ನೀವು ಕೆಲವು ಒತ್ತಡದ ಕ್ಷಣಗಳನ್ನು ಎದುರಿಸಬಹುದು. ಸಣ್ಣಪುಟ್ಟ ವಿಷಯಗಳಿಗೆ ಒತ್ತಡ ಉಂಟಾಗಬಹುದು. ನನ್ನ ಅಭಿಪ್ರಾಯದಲ್ಲಿ, ಯೋಗವು ನಿಮ್ಮ ಜೀವನದಲ್ಲಿ ದೈನಂದಿನ ಅಭ್ಯಾಸವಾಗಿರಬೇಕು. ಸಮತೋಲಿತ ಮನಸ್ಸು ನಿಮ್ಮ ಕೆಲಸವನ್ನು ಅಗಾಧವಾಗಿ ಹೆಚ್ಚಿಸುತ್ತದೆ ಎಂಬುದನ್ನು ನೀವು ನೋಡುತ್ತೀರಿ. ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ. ಆರೋಗ್ಯವಂತ ಮನಸ್ಸಿಗೆ, ಸಮತೋಲನದ ಮನಸ್ಸಿಗೆ ಮತ್ತು ನಿಮ್ಮಂತಹವರು ಕರ್ತವ್ಯದ ಸಮಯದಲ್ಲಿ ಒತ್ತಡದಿಂದ ಮುಕ್ತರಾಗಲು ಅದನ್ನು ಜೀವನದ ಭಾಗವಾಗಿಸುವುದು ಬಹಳ ಮುಖ್ಯ.

ಸ್ನೇಹಿತರೆ,
2047ರಲ್ಲಿ ದೇಶವು 100 ವರ್ಷಗಳ ಸ್ವಾತಂತ್ರ್ಯ ಆಚರಿಸುತ್ತದೆ, ಆಗ ನೀವು ಸರ್ಕಾರದಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತೀರಿ. ದೇಶದ 25 ವರ್ಷಗಳು ಮತ್ತು ನಿಮ್ಮ ಜೀವನದ ಈ 25 ವರ್ಷಗಳು ಅಂತಹ ಅದ್ಭುತ ಸಂಬಂಧವನ್ನು ಹೊಂದಿವೆ! ಆದ್ದರಿಂದ, ನೀವು ಈಗ ಈ ಅವಕಾಶವನ್ನು ಕಳೆದುಕೊಳ್ಳಬಾರದು. ನಿಮ್ಮ ಸಂಪೂರ್ಣ ಶಕ್ತಿ, ಸಾಮರ್ಥ್ಯವನ್ನು ನೀವು ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿಪಡಿಸಿ ಮತ್ತು ನಿಮ್ಮಿಂದ ಸಾಧ್ಯವಾದಷ್ಟು ನಿಮ್ಮನ್ನು ಅರ್ಪಿಸಿಕೊಳ್ಳಿ. ನೀವು ಎಷ್ಟು ಜನ ಸಾಮಾನ್ಯರಿಗಾಗಿ ನಿಮ್ಮ ಜೀವನವನ್ನು ಮುಡಿಪಾಗಿಡುತ್ತೀರಿ, ಜೀವನದಲ್ಲಿ ನೀವು ಹೆಚ್ಚು ತೃಪ್ತಿ ಹೊಂದುತ್ತೀರಿ; ಇದು ನಿಮಗೆ ಅದ್ಭುತವಾದ ಸಂತೋಷವನ್ನು ತರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಯಶಸ್ಸು ನಿಮಗೆ ಅಪಾರವಾದ ಒಟ್ಟಾರೆ ತೃಪ್ತಿಯನ್ನು ನೀಡುತ್ತದೆ.
ನಿಮಗೆ ನನ್ನ ಶುಭಾಶಯಗಳು, ನಿಮ್ಮ ಕುಟುಂಬ ಸದಸ್ಯರಿಗೆ ಅನೇಕ ಅಭಿನಂದನೆಗಳು! ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಅಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

***