ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 12ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:15 ರ ಸುಮಾರಿಗೆ ಅವರು ಸಾಗರ್ ಜಿಲ್ಲೆಗೆ ಆಗಮಿಸಲಿದ್ದಾರೆ. ಅಲ್ಲಿ ಅವರು ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜಿ ಸ್ಮಾರಕ ಸ್ಥಳದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ 3:15 ರ ಸುಮಾರಿಗೆ, ಪ್ರಧಾನಮಂತ್ರಿಯವರು ಧನಾದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಲ್ಲಿ ಅವರು ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜಿ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಮುಖ ಸಂತರು ಮತ್ತು ಸಮಾಜ ಸುಧಾರಕರನ್ನು ಗೌರವಿಸುವುದಕ್ಕೆ ಪ್ರಧಾನ ಮಂತ್ರಿ ವಿಶೇಷ ಆದ್ಯತೆ ನೀಡಿದ್ದಾರೆ. ಅವರ ದೂರದೃಷ್ಟಿಯಿಂದ ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜಿ ಸ್ಮಾರಕವನ್ನು 11.25 ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮತ್ತು ಭವ್ಯವಾದ ಸ್ಮಾರಕವು ಸಂತ ಶಿರೋಮಣಿ ಗುರುದೇವ್ ಶ್ರೀ ರವಿದಾಸ್ ಜಿ ಅವರ ಜೀವನ, ತತ್ವಶಾಸ್ತ್ರ ಮತ್ತು ಬೋಧನೆಗಳನ್ನು ಪ್ರದರ್ಶಿಸಲು ಪ್ರಭಾವಶಾಲಿ ಕಲಾ ವಸ್ತುಸಂಗ್ರಹಾಲಯ ಮತ್ತು ಗ್ಯಾಲರಿಯನ್ನು ಹೊಂದಿರುತ್ತದೆ. ಸ್ಮಾರಕಕ್ಕೆ ಭೇಟಿ ನೀಡುವ ಭಕ್ತರಿಗೆ ಭಕ್ತ ನಿವಾಸ, ಭೋಜನಾಲಯ ಮುಂತಾದ ಸೌಲಭ್ಯಗಳನ್ನು ಸಹ ಇದು ಹೊಂದಿರುತ್ತದೆ.
4000 ಕೋಟಿ.ರೂ.ಗಿಂತ ಹೆಚ್ಚಿನ ಮೊತ್ತದ ರೈಲು ಮತ್ತು ರಸ್ತೆ ವಲಯದ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ರಾಷ್ಟ್ರಕ್ಕೆ ಸಮರ್ಪಣೆಯನ್ನು ಪ್ರಧಾನಮಂತ್ರಿ ನೆರವೇರಿಸಲಿದ್ದಾರೆ.
ಕೋಟಾ-ಬಿನಾ ರೈಲು ಮಾರ್ಗದ ಡಬ್ಲಿಂಗ್ ಯೋಜನೆಯನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 2475 ಕೋಟಿ ರೂ.ಗೂ ಹೆಚ್ಚು ವೆಚ್ಚದ ಯೋಜನೆ ರಾಜಸ್ಥಾನದ ಕೋಟಾ ಮತ್ತುಬರಾನ್ ಜಿಲ್ಲೆ ಮತ್ತು ಮಧ್ಯಪ್ರದೇಶದ ಗುನಾ, ಅಶೋಕನಗರ ಮತ್ತು ಸಾಗರ್ ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಹೆಚ್ಚುವರಿ ರೈಲು ಮಾರ್ಗವು ಉತ್ತಮ ಚಲನಶೀಲತೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಮಾರ್ಗದಲ್ಲಿ ರೈಲು ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
1580 ಕೋಟಿ ರೂ.ಗೂ ಅಧಿಕ ವೆಚ್ಚದ ಎರಡು ರಸ್ತೆ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ. ಇವುಗಳಲ್ಲಿ ಮೋರಿಕೋರಿ – ವಿದಿಶಾ – ಹಿನೋಟಿಯಾ ಸಂಪರ್ಕಿಸುವ ಚತುಷ್ಪಥ ರಸ್ತೆ ಯೋಜನೆ ಮತ್ತು ಹಿನೋಟಿಯಾದಿಂದ ಮೆಹ್ಲುವಾಗೆ ಸಂಪರ್ಕ ಕಲ್ಪಿಸುವ ರಸ್ತೆ ಯೋಜನೆಯೂ ಸೇರಿದೆ.
****