Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ಕಾರಿ ಇಲಾಖೆಗಳಿಗೆ ಮತ್ತು ಸಂಸ್ಥೆಗಳಿಗೆ ರೋಜ್ ಗಾರ್ ಮೇಳದಲ್ಲಿ ಹೊಸದಾಗಿ ಸೇರ್ಪಡೆಯಾದ 70,000 ಕ್ಕೂ ಹೆಚ್ಚು ಜನರಿಗೆ ಜುಲೈ 22 ರಂದು ಪ್ರಧಾನಮಂತ್ರಿಗಳಿಂದ ನೇಮಕಾತಿ ಪತ್ರ ವಿತರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 22 ರ ಬೆಳಗ್ಗೆ 10.30 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ಸೇರ್ಪಡೆಯಾಗುವ 70 ಸಾವಿರಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಅವರು ಈ ಸಂದರ್ಭದಲ್ಲಿ ಹೊಸದಾಗಿ ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದೇಶಾದ್ಯಂತ 44 ಸ್ಥಳಗಳಲ್ಲಿ ರೋಜ್ ಗಾರ್ ಮೇಳ ಆಯೋಜಿಸಲಾಗುತ್ತದೆ. ಈ ಉಪಕ್ರಮದಡಿ ಕೇಂದ್ರ ಸರ್ಕಾರಿ ಇಲಾಖೆಗಳು ಮಾತ್ರವಲ್ಲದೇ ರಾಜ್ಯ ಸರ್ಕಾರಿ / ಕೇಂದ್ರಾಡಳಿತ ಪ್ರದೇಶಗಳ ಇಲಾಖೆಗಳಿಗೂ ನೇಮಕಾತಿಗಳು ನಡೆಯುತ್ತಿವೆ. ದೇಶಾದ್ಯಂತ ಆಯ್ಕೆಯಾಗಿರುವ ಹೊಸದಾಗಿ ನೇಮಕಗೊಂಡಿರುವವರು ಕಂದಾಯ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಸಾರ್ವಜನಿಕ ಸ್ವಾಮ್ಯದ ಇಲಾಖೆಗಳು, ಜಲ ಸಂಪನ್ಮೂಲ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಹಾಗೂ ಗೃಹ ವ್ಯವಹಾರಗಳ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿದ್ದಾರೆ. 

ಉದ್ಯೋಗ ಸೃಷ್ಟಿಗೆ ಅತಿ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಗಳ ಬದ್ಧತೆಯ ಈಡೇರಿಕೆಯೆಡೆಗೆ ರೋಜ್ ಗಾರ್ ಮೇಳ ಮಹತ್ವದ ಹೆಜ್ಜೆಯಾಗಿದೆ. ಭವಿಷ್ಯದ ಉದ್ಯೋಗ ಸೃಷ್ಟಿಗೆ ಈ ರೋಜ್ ಗಾರ್ ಮೇಳಗಳು ವರ್ಧಕಗಳಂತೆ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ ಮತ್ತು ಯುವಕರಿಗೆ ಅರ್ಥಪೂರ್ಣ ಉದ್ಯೋಗಾವಕಾಶ ನೀಡುವ ಜೊತೆಗೆ ಅವರ ಸಬಲೀಕರಣಕ್ಕೆ ಪೂರಕವಾಗಿ ಅವರು ರಾಷ್ಟ್ರದ ಅಭಿವೃದ್ಧಿಯಲ್ಲಿ ಭಾಗಿಯಾಗಲು ಅವಕಾಶ ನೀಡಲಿದೆ. 

ಐಜಿಒಟಿ ಕರ್ಮಯೋಗಿ ಪೋರ್ಟಲ್ ನ ಕರ್ಮಯೋಗಿ ಪ್ರಾರಂಭ್ ಎಂಬ ಆನ್ ಲೈನ್ ಮಾಡ್ಯೂಲ್ ಮೂಲಕ ಹೊಸದಾಗಿ ನೇಮಕಗೊಂಡವರ ಸ್ವಯಂ ಕಲಿಕೆಗೂ ಅವಕಾಶ ದೊರೆತಿದೆ. ಈ ಪೋರ್ಟಲ್ ನಲ್ಲಿ 580 ಇ-ಕಲಿಕಾ ಕೋರ್ಸ್ ಗಳನ್ನು ಎಲ್ಲಿಂದಲಾದರೂ, ಯಾವುದೇ ಸಾಧನದಿಂದಲಾದರೂ ಕಲಿಯಬಹುದಾಗಿದೆ.

****