Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೆಲಂಗಾಣದ ವಾರಂಗಲ್‌ನಲ್ಲಿ ಸುಮಾರು 6,100 ಕೋಟಿ ರೂಪಾಯಿ ಮೌಲ್ಯದ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ

ತೆಲಂಗಾಣದ ವಾರಂಗಲ್‌ನಲ್ಲಿ ಸುಮಾರು 6,100 ಕೋಟಿ ರೂಪಾಯಿ ಮೌಲ್ಯದ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣದ ವಾರಂಗಲ್‌ನಲ್ಲಿಂದು ಸುಮಾರು 6,100 ಕೋಟಿ ರೂಪಾಯಿ ಮೊತ್ತದ ಹಲವಾರು ನಿರ್ಣಾಯಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅಭಿವೃದ್ಧಿ ಕಾಮಗಾರಿಗಳಲ್ಲಿ 5,550 ಕೋಟಿ ರೂ. ಮೌಲ್ಯದ 176 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು 500 ಕೋಟಿ ರೂ. ವೆಚ್ಚದಲ್ಲಿ ಕಾಜಿಪೇಟೆ ರೈಲ್ವೆ ಉತ್ಪಾದನಾ ಘಟಕ ಅಭಿವೃದ್ಧಿ ಸೇರಿದೆ. ಇದೇ ವೇಳೆ ಪ್ರಧಾನಿ ಅವರು ಭದ್ರಕಾಳಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಿದರು.
 
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತೆಲಂಗಾಣವು ತುಲನಾತ್ಮಕವಾಗಿ ಹೊಸ ರಾಜ್ಯವಾಗಿ, ಅದರ ಅಸ್ತಿತ್ವಕ್ಕೆ ಕೇವಲ 9 ವರ್ಷ ತುಂಬಿದ್ದರೂ, ತೆಲಂಗಾಣ ಜನರ ಕೊಡುಗೆಗಳು ಭಾರತದ ಇತಿಹಾಸದಲ್ಲಿ ಬಹಳ ಮಹತ್ವದ್ದಾಗಿದೆ. “ತೆಲುಗಿನ ಜನರ ಸಾಮರ್ಥ್ಯಗಳು ಯಾವಾಗಲೂ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಿವೆ”. ಭಾರತವನ್ನು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವಲ್ಲಿ ತೆಲಂಗಾಣದ ನಾಗರಿಕರ ಮಹತ್ವದ ಪಾತ್ರವಿದೆ. ವಿಶ್ವವು ಭಾರತವನ್ನು ಹೂಡಿಕೆಯ ತಾಣವಾಗಿ ನೋಡುತ್ತಿರುವಾಗ ವಿಫುಲ ಅವಕಾಶಗಳ ಬೆಳವಣಿಗೆಗೆ ಇಲ್ಲಿ ಜಾಗವಿದೆ. “ವಿಕ್ಷಿತ್ ಭಾರತ್‌ಗಾಗಿ ಸಾಕಷ್ಟು ನಿರೀಕ್ಷೆಯಿದೆ” ಎಂದು ಪ್ರಧಾನಿ ಹೇಳಿದರು.
 
“ಇಂದಿನ ಹೊಸ ಯುವ ಭಾರತವು ಅಪಾರ ಶಕ್ತಿಯಿಂದ ತುಂಬಿದೆ”. 21ನೇ ಶತಮಾನದ 3ನೇ ದಶಕವು ಸುವರ್ಣ ಅವಧಿಯಾಗಿದೆ. ಈ ಅವಧಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರತಿಯೊಬ್ಬರು ಮುಂದೆ ಬರಬೇಕು. ವೇಗದ ಅಭಿವೃದ್ಧಿಯ ವಿಷಯದಲ್ಲಿ ಭಾರತದ ಯಾವುದೇ ಭಾಗವು ಹಿಂದೆ ಉಳಿಯಬಾರದು. ಕಳೆದ 9 ವರ್ಷಗಳಲ್ಲಿ ತೆಲಂಗಾಣದ ಮೂಲಸೌಕರ್ಯ ಮತ್ತು ಸಂಪರ್ಕ ಸುಧಾರಿಸುತ್ತಾ ಬಂದಿದೆ. 6,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರಧಾನಿ ಅವರು ತೆಲಂಗಾಣದ ಜನರನ್ನು ಅಭಿನಂದಿಸಿದರು.
 
ಬಳಕೆಯಲ್ಲಿಲ್ಲದ ಮೂಲಸೌಕರ್ಯದಿಂದ ಭಾರತದಲ್ಲಿ ವೇಗದ ಅಭಿವೃದ್ಧಿ ಅಸಾಧ್ಯ. ಹೊಸ ಗುರಿಗಳನ್ನು ಸಾಧಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ.  ಕಳಪೆ ಸಂಪರ್ಕ ಮತ್ತು ದುಬಾರಿ ಸಾಗಣೆ ವೆಚ್ಚಗಳು ವ್ಯವಹಾರಗಳ ಪ್ರಗತಿಗೆ ಅಡ್ಡಿಯಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರದ ಅಭಿವೃದ್ಧಿಯ ವೇಗ ಮತ್ತು ಪ್ರಮಾಣದಲ್ಲಿ ಬಹುಪಟ್ಟು ಹೆಚ್ಚಳವಾಗಿದೆ. ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ಆರ್ಥಿಕ ಕಾರಿಡಾರ್‌ಗಳು ಮತ್ತು ಕೈಗಾರಿಕಾ ಕಾರಿಡಾರ್‌ಗಳ ಜಾಲವನ್ನು ಸೃಷ್ಟಿಸಲಾಗುತ್ತಿದೆ.  ದ್ವಿಪಥ ಮತ್ತು ಚತುಷ್ಪಥ ಹೆದ್ದಾರಿಗಳನ್ನು ಕ್ರಮವಾಗಿ 4 ಮತ್ತು 6 ಪಥಗಳ ಹೆದ್ದಾರಿಗಳಾಗಿ ಪರಿವರ್ತಿಸಲಾಗುತ್ತಿದೆ. ತೆಲಂಗಾಣದ ಹೆದ್ದಾರಿ ಜಾಲವು 2,500 ಕಿಮೀನಿಂದ 5,000 ಕಿಮೀಗೆ 2 ಪಟ್ಟು ಏರಿಕೆ ಕಂಡಿದೆ. 2,500 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವು ಅಭಿವೃದ್ಧಿಯ ವಿವಿಧ ಹಂತಗಳಲ್ಲಿದೆ.  ಭಾರತಮಾಲಾ ಯೋಜನೆಯ ಭಾಗವಾಗಿ ನಿರ್ಮಾಣವಾಗುತ್ತಿರುವ ಹತ್ತಾರು ಕಾರಿಡಾರ್‌ಗಳು ತೆಲಂಗಾಣದ ಮೂಲಕ ಹಾದು ಹೋಗುತ್ತವೆ. ಹೈದರಾಬಾದ್ – ಇಂದೋರ್ ಆರ್ಥಿಕ ಕಾರಿಡಾರ್, ಚೆನ್ನೈ – ಸೂರತ್ ಆರ್ಥಿಕ ಕಾರಿಡಾರ್, ಹೈದರಾಬಾದ್ – ಪಂಜಿ ಆರ್ಥಿಕ ಕಾರಿಡಾರ್ ಮತ್ತು ಹೈದರಾಬಾದ್ – ವಿಶಾಖಪಟ್ಟಣಂ ಇಂಟರ್ ಕಾರಿಡಾರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ತೆಲಂಗಾಣವು ಸುತ್ತಮುತ್ತಲಿನ ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸುತ್ತಿದೆ ಮತ್ತು ಆರ್ಥಿಕ ಚಟುವಟಿಕೆಯ ಕೇಂದ್ರವಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇಂದು ಶಂಕುಸ್ಥಾಪನೆಯಾದ ನಾಗ್ಪುರ-ವಿಜಯವಾಡ ಕಾರಿಡಾರ್‌ನ ಮಂಚೇರಿಯಲ್ – ವಾರಂಗಲ್ ವಿಭಾಗವು ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದೊಂದಿಗೆ ತೆಲಂಗಾಣಕ್ಕೆ ಆಧುನಿಕ ಸಂಪರ್ಕ ಒದಗಿಸುತ್ತದೆ, ಮಂಚೇರಿಯಲ್ ಮತ್ತು ವಾರಂಗಲ್ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ, ವಿಶಏಷವಾಗಿ ಸಂಚಾರ ತೊಂದರೆಗಳನ್ನು ಕೊನೆಗೊಳಿಸಲಿದೆ. “ಈ ಪ್ರದೇಶವು ಅನೇಕ ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿದೆ. ಆದರೆ ಇದು ದೀರ್ಘಕಾಲದಿಂದ ನಿರ್ಲಕ್ಷಿಸಲ್ಪಟ್ಟಿದೆ”. ಈ ಕಾರಿಡಾರ್ ರಾಜ್ಯದಲ್ಲಿ ಬಹುಮಾದರಿ ಸಂಪರ್ಕ ಕಲ್ಪಿಸುತ್ತದೆ. ಕರೀಂನಗರ-ವಾರಂಗಲ್ ವಿಭಾಗದ ಚತುಷ್ಪಥವು ಹೈದರಾಬಾದ್-ವಾರಂಗಲ್ ಇಂಡಸ್ಟ್ರಿಯಲ್ ಕಾರಿಡಾರ್, ಕಾಕತೀಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮತ್ತು ವಾರಂಗಲ್ ವಿಶೇಷ ಆರ್ಥಿಕ ವಲಯ(ಎಸ್‌ಇಜೆಡ್‌)ಕ್ಕೆ ಸಂಪರ್ಕ ಬಲಪಡಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.
 
ತೆಲಂಗಾಣದಲ್ಲಿ ಹೆಚ್ಚಿದ ಸಂಪರ್ಕವು ರಾಜ್ಯದ ಉದ್ಯಮ ಮತ್ತು ಪ್ರವಾಸೋದ್ಯಮಕ್ಕೆ ನೇರವಾಗಿ ಪ್ರಯೋಜನ ನೀಡುತ್ತಿದೆ. ಏಕೆಂದರೆ ತೆಲಂಗಾಣದ ಪಾರಂಪರಿಕ ಕೇಂದ್ರಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸಲು ಈಗ ಹೆಚ್ಚು ಅನುಕೂಲಕರವಾಗಿದೆ. ಕರೀಂನಗರದ ಕೃಷಿ ಉದ್ಯಮ ಮತ್ತು ಗ್ರಾನೈಟ್ ಉದ್ಯಮಗಳಿಗೆ ಸರ್ಕಾರದ ಪ್ರಯತ್ನಗಳು ನೇರವಾಗಿ ಸಹಾಯ ಮಾಡುತ್ತಿವೆ. ರೈತರು ಅಥವಾ ಕಾರ್ಮಿಕರು, ವಿದ್ಯಾರ್ಥಿಗಳು ಅಥವಾ ವೃತ್ತಿಪರರು ಸೇರಿದಂತೆ ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಿದ್ದಾರೆ. ಯುವಕರು ತಮ್ಮ ಮನೆಗಳ ಬಳಿ ಹೊಸ ಉದ್ಯೋಗ ಮತ್ತು ಸ್ವಯಂ-ಉದ್ಯೋಗ ಅವಕಾಶಗಳನ್ನು ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದರು.

ಮೇಕ್ ಇನ್ ಇಂಡಿಯಾ ಅಭಿಯಾನದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಉತ್ಪಾದನಾ ವಲಯವು ದೇಶದಲ್ಲಿ ಯುವಕರಿಗೆ ಹೇಗೆ ಉದ್ಯೋಗದ ದೊಡ್ಡ ಮೂಲವಾಗುತ್ತಿದೆ ಎಂಬುದನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಉತ್ಪಾದನೆ ಅಥವಾ ತಯಾರಿಕೆ ಉತ್ತೇಜಿಸಲು ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್‌ಐ) ಯೋಜನೆ ಜಾರಿಗೆ ತರಲಾಗಿದೆ. “ಹೆಚ್ಚು ಉತ್ಪಾದನೆ ಮಾಡುತ್ತಿರುವವರು ಸರ್ಕಾರದಿಂದ ವಿಶೇಷ ನೆರವು ಪಡೆಯುತ್ತಿದ್ದಾರೆ”. ಈ ಯೋಜನೆಯಡಿ, ತೆಲಂಗಾಣದಲ್ಲಿ 50ಕ್ಕೂ ಹೆಚ್ಚು ದೊಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ವರ್ಷ ರಕ್ಷಣಾ ರಫ್ತಿನಲ್ಲಿ ಭಾರತ ಹೊಸ ದಾಖಲೆ ಸೃಷ್ಟಿಸಿದೆ. 9 ವರ್ಷಗಳ ಹಿಂದೆ ಸುಮಾರು 1,000 ಕೋಟಿ ರೂ.ಗಳಷ್ಟಿದ್ದ ಭಾರತದ ರಕ್ಷಣಾ ರಫ್ತು ಇಂದು 16,000 ಕೋಟಿ ರೂ.ಗಳನ್ನು ದಾಟಿದೆ ಎಂದು ಮಾಹಿತಿ ನೀಡಿದರು. ಹೈದರಾಬಾದ್ ಮೂಲದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಹ ಪಿಎಲ್‌ಐ  ಯೋಜನೆಯ ಲಾಭ ಪಡೆಯುತ್ತಿದೆ ಎಂದು ಹೇಳಿದರು.

ಉತ್ಪಾದನೆಯ ವಿಷಯದಲ್ಲಿ ಭಾರತೀಯ ರೈಲ್ವೆ ಹೊಸ ದಾಖಲೆ ಮತ್ತು ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ‘ಮೇಡ್ ಇನ್ ಇಂಡಿಯಾ’ ಮೂಲಕ ವಂದೇ ಭಾರತ್ ರೈಲುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತೀಯ ರೈಲ್ವೆಯು ಹಲವು ವರ್ಷಗಳಿಂದ ಸಾವಿರಾರು ಆಧುನಿಕ ಕೋಚ್‌ಗಳು ಮತ್ತು ಇಂಜಿನ್‌ಗಳನ್ನು ತಯಾರಿಸಿದೆ. ಇಂದು ಶಂಕುಸ್ಥಾಪನೆಯಾದ ಕಾಜಿಪೇಟೆಯ ರೈಲ್ವೆ ಉತ್ಪಾದನಾ ಘಟಕವನ್ನು ಉಲ್ಲೇಖಿಸಿದ ಪ್ರಧಾನಿ, ಇದು ಭಾರತೀಯ ರೈಲ್ವೆಯ ಪುನಶ್ಚೇತನವಾಗಿದೆ ಮತ್ತು ಕಾಜಿಪೇಟೆಯು ಮೇಕ್ ಇನ್ ಇಂಡಿಯಾದ ಹೊಸ ಶಕ್ತಿಯ ಭಾಗವಾಗಲಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪ್ರತಿಯೊಂದು ಕುಟುಂಬವೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆಯಲಿದೆ. “ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್” ಆಗಿದೆ. ಈ ನಿಟ್ಟಿನಲ್ಲಿ ತೆಲಂಗಾಣವನ್ನು ಅಭಿವೃದ್ಧಿಯ ಮಂತ್ರದಲ್ಲಿ ಮುಂದಕ್ಕೆ ಕೊಂಡೊಯ್ಯಬೇಕು ಒತ್ತಾಯಿಸಿದ ಪ್ರಧಾನಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯಪಾಲರಾದ ಡಾ ತಮಿಳಿಸೈ ಸೌಂದರರಾಜನ್, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಮತ್ತು ಸಂಸದ ಶ್ರೀ ಸಂಜಯ್ ಬಂಡಿ ಮತ್ತಿತರರು ಉಪಸ್ಥಿತರಿದ್ದರು.
 
ಹಿನ್ನೆಲೆ
5,550 ಕೋಟಿ ರೂ.ಗಿಂತ ಅಧಿಕ ಮೊತ್ತದ 176 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಗಳು 108 ಕಿಮೀ ಉದ್ದದ ಮಂಚೇರಿಯಲ್ – ನಾಗ್ಪುರ – ವಿಜಯವಾಡ ಕಾರಿಡಾರ್‌ನ ವಾರಂಗಲ್ ವಿಭಾಗವನ್ನು ಒಳಗೊಂಡಿವೆ. ಈ ವಿಭಾಗವು ಮಂಚೇರಿಯಲ್ ಮತ್ತು ವಾರಂಗಲ್ ನಡುವಿನ ಅಂತರವನ್ನು ಸುಮಾರು 34 ಕಿ.ಮೀ. ಕಡಿಮೆ ಮಾಡುತ್ತದೆ. ಅಲ್ಲದೆ,  ಪ್ರಯಾಣ ಸಮಯವನ್ನು ಕಡಿಮೆ ಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿ 44 ಮತ್ತು ಎನ್ಎಚ್ 65ರಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.  ಎನ್ಎಚ್ 563ರ 68 ಕಿಮೀ ಉದ್ದದ ಕರೀಂನಗರ – ವಾರಂಗಲ್ ವಿಭಾಗವನ್ನು ಈಗಿರುವ 2 ಪಥದಿಂದ 4 ಪಥ ರಸ್ತೆಗೆ ಮೇಲ್ದರ್ಜೆಗೆ ಏರಿಸಲು ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.  ಇದು ಹೈದರಾಬಾದ್-ವಾರಂಗಲ್ ಕೈಗಾರಿಕಾ ಕಾರಿಡಾರ್, ಕಾಕತೀಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮತ್ತು ವಾರಂಗಲ್‌ನಲ್ಲಿರುವ ವಿಶೇಷ ಆರ್ಥಿಕ ವಲಯಕ್ಕೆ ಸಂಪರ್ಕ ಸುಧಾರಿಸಲು ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿಅವರು ಕಾಜಿಪೇಟೆಯ ರೈಲ್ವೇ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 500 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ಆಧುನಿಕ ಉತ್ಪಾದನಾ ಘಟಕವು ರೋಲಿಂಗ್ ಸ್ಟಾಕ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇದು ಇತ್ತೀಚಿನ ತಂತ್ರಜ್ಞಾನದ ಮಾನದಂಡಗಳು ಮತ್ತು ವ್ಯಾಗನ್‌ಗಳ ರೋಬೋಟಿಕ್ ಪೇಂಟಿಂಗ್, ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಆಧುನಿಕ ವಸ್ತು ಸಂಗ್ರಹಣೆ ಮತ್ತು ನಿರ್ವಹಣೆಯೊಂದಿಗೆ ಸ್ಥಾವರದಂತಹ ಸೌಲಭ್ಯಗಳನ್ನು ಹೊಂದಿದೆ. ಇದು ಸ್ಥಳೀಯ ಉದ್ಯೋಗ ಸೃಷ್ಟಿಗೆ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪೂರಕ ಘಟಕಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
 

 

 
***