ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶದ ಮೂಲಕ ಉತ್ತರ ಪ್ರದೇಶದ ಕಾಶಿಯಲ್ಲಿ ಕಾಶಿ ತೆಲುಗು ಸಂಗಮ ಉದ್ದೇಶಿಸಿ ಭಾಷಣ ಮಾಡಿದರು.
ಗಂಗಾ ಪುಷ್ಕರಲು ಉತ್ಸವ ಸಂದರ್ಭದಲ್ಲಿ ಜತೆಗೆ ಶುಭಾಶಯ ತಿಳಿಸಿ ತಮ್ಮ ಭಾಷಣ ಆರಂಭಿಸಿದ ಪ್ರಧಾನ ಮಂತ್ರಿ, ನೆರೆದಿದ್ದ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದರು. ಇಲ್ಲಿ ಹಾಜರಿರುವ ಎಲ್ಲರೂ ತಮ್ಮ ವೈಯಕ್ತಿಕ ಅತಿಥಿಗಳು. ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳು ದೇವರಿಗೆ ಸಮಾನವಾದ ಸ್ಥಾನಮಾನ ಹೊಂದಿದ್ದಾರೆ. “ನಿಮ್ಮನ್ನು ಸ್ವಾಗತಿಸಲು ನಾನು ಅಲ್ಲಿ ಹಾಜರಾಗಲು ಸಾಧ್ಯವಾಗದಿದ್ದರೂ, ನನ್ನ ಮನಸ್ಸು ನಿಮ್ಮೆಲ್ಲರೊಂದಿಗಿದೆ”. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಕಾಶಿ-ತೆಲುಗು ಸಮಿತಿ ಮತ್ತು ಸಂಸದ ಶ್ರೀ ಜಿವಿಎಲ್ ನರಸಿಂಹರಾವ್ ಅವರನ್ನು ಅಭಿನಂದಿಸುತ್ತೇನೆ. ಕಾಶಿಯ ಘಟ್ಟಗಳಲ್ಲಿ ಗಂಗಾ-ಪುಷ್ಕರಾಳು ಉತ್ಸವವು ಗಂಗಾ ಮತ್ತು ಗೋದಾವರಿ ನದಿಗಳ ಸಂಗಮವಿದ್ದಂತೆ. ಇದು ಭಾರತದ ಪ್ರಾಚೀನ ನಾಗರಿಕತೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಸಂಗಮದ ಆಚರಣೆಯಾಗಿದೆ. ಕೆಲವು ತಿಂಗಳ ಹಿಂದೆ ಇಲ್ಲಿ ನಡೆದ ಕಾಶಿ – ತಮಿಳು ಸಂಗಮವನ್ನು ನೆನಪಿಸಿಕೊಂಡ ಅವರು, ಕೆಲವು ದಿನಗಳ ಹಿಂದೆ ಸೌರಾಷ್ಟ್ರ – ತಮಿಳು ಸಂಗಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ಅವರು ಆಜಾದಿ ಕಾ ಅಮೃತ ಕಾಲವನ್ನು ಭಾರತದ ವೈವಿಧ್ಯತೆ ಮತ್ತು ಸಂಸ್ಕೃತಿಗಳ ಸಂಗಮ ಎಂದು ಸಾದೃಶ್ಯಗೊಳಿಸಿದ್ದರು. “ಈ ವೈವಿಧ್ಯಗಳ ಸಂಗಮವು ರಾಷ್ಟ್ರೀಯತೆಯ ಅಮೃತ ಹುಟ್ಟುಹಾಕುತ್ತಿದೆ. ಇದು ಭವಿಷ್ಯದಲ್ಲಿ ಭಾರತಕ್ಕೆ ಸಂಪೂರ್ಣ ಶಕ್ತಿ ಖಾತ್ರಿಪಡಿಸುತ್ತದೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ತೆಲುಗು ಭಾಷಿಕರೊಂದಿಗೆ ಕಾಶಿ ಮತ್ತು ಅದರ ನಿವಾಸಿಗಳ ಆಳವಾದ ಸಂಪರ್ಕ ಕುರಿತು ಬೆಳಕು ಚೆಲ್ಲಿದ ಪ್ರಧಾನಿ, ಕಾಶಿಯು ತಲೆಮಾರುಗಳಿಂದ ಅವರನ್ನು ಸ್ವಾಗತಿಸುತ್ತಿದೆ. ಈ ಸಂಬಂಧವು ಕಾಶಿ ನಗರದಷ್ಟೇ ಪ್ರಾಚೀನವಾಗಿದೆ. ಕಾಶಿಯಲ್ಲಿ ತೆಲುಗು ಭಾಷಿಕರ ನಂಬಿಕೆ ಕಾಶಿಯಷ್ಟೇ ಪವಿತ್ರ ಎಂದು ಬಣ್ಣಿಸಿದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರು ಕಾಶಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. “ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕಾಶಿಗೆ ಅನೇಕ ಮಹಾನ್ ಸಾಧು ಸಂತರು, ಆಚಾರ್ಯರು ಮತ್ತು ಋಷಿಗಳನ್ನು ನೀಡಿವೆ”. ಕಾಶಿಯ ಜನರು ಮತ್ತು ಯಾತ್ರಿಕರು ಬಾಬಾ ವಿಶ್ವನಾಥನನ್ನು ಭೇಟಿ ಮಾಡಲು ಹೋದಾಗ, ಅವರ ಆಶೀರ್ವಾದ ಪಡೆಯಲು ತೈಲಂಗ್ ಸ್ವಾಮಿಯ ಆಶ್ರಮಕ್ಕೂ ಭೇಟಿ ನೀಡುತ್ತಾರೆ. ವಿಜಯನಗರದಲ್ಲಿ ಜನಿಸಿದ ತೈಲಂಗ್ ಸ್ವಾಮಿಯನ್ನು ಸ್ವಾಮಿ ರಾಮಕೃಷ್ಣ ಪರಮಹಂಸರು ಕಾಶಿಯ ಜೀವಂತ ಶಿವ ಎಂದು ಕರೆದರು. ಜಿಡ್ಡು ಕೃಷ್ಣಮೂರ್ತಿ ಅವರಂತಹ ಮಹಾನ್ ಚೇತನಗಳನ್ನು ಇಂದಿಗೂ ಕಾಶಿಯಲ್ಲಿ ನೆನಪಿಸಿಕೊಳ್ಳಲಾಗುತ್ತದೆ ಎಂದರು.
ತೆಲುಗು ಜನರು ಕಾಶಿಯನ್ನು ದತ್ತು ಸ್ವೀಕರಿಸಿ ಅರ್ಥ ಮಾಡಿಕೊಂಡಂತೆಯೇ, ಕಾಶಿಯನ್ನು ತಮ್ಮ ಆತ್ಮಕ್ಕೆ ಅಂಟಿಸಿಕೊಂಡಿದ್ದಾರೆ. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಪವಿತ್ರ ಕ್ಷೇತ್ರ ವೇಮುಲವಾಡ. ಆಂಧ್ರ ಮತ್ತು ತೆಲಂಗಾಣದ ದೇವಾಲಯಗಳಲ್ಲಿ ಕೈಗೆ ಕಟ್ಟುವ ಕಪ್ಪು ದಾರವನ್ನು ಕಾಶಿ ದಾರಂ ಎಂದು ಕರೆಯುತ್ತಾರೆ. ಕಾಶಿಯ ವೈಭವವು ತೆಲುಗು ಭಾಷೆ ಮತ್ತು ಸಾಹಿತ್ಯದಲ್ಲಿ ಆಳವಾಗಿ ಬೇರೂರಿದೆ. ಶ್ರೀನಾಥ ಮಹಾಕವಿಯವರ ಕಾಶಿ ಖಂಡಮು ಗ್ರಂಥ, ಎಂಗುಲ್ ವೀರಸ್ವಾಮಯ್ಯನವರ ಕಾಶಿ ಯಾತ್ರಾ ಪಾತ್ರ ಮತ್ತು ಜನಪ್ರಿಯ ಕಾಶಿ ಮಜಿಲಿ ಕಥಲುಗಳಲ್ಲಿ ಕಾಶಿಯ ವೈಭವವಿದೆ. ಇಷ್ಟು ದೂರದಲ್ಲಿರುವ ನಗರವು ಹೃದಯಕ್ಕೆ ಹೇಗೆ ಹತ್ತಿರವಾಗಿದೆ ಎಂಬುದನ್ನು ಹೊರಗಿನವರಿಗೆ ನಂಬಲು ಕಷ್ಟವಾಗಬಹುದು. ಆದರೆ ಇದು ಭಾರತದ ಪರಂಪರೆಯಾಗಿದ್ದು, ಶತಮಾನಗಳಿಂದಲೂ ‘ಏಕ್ ಭಾರತ್ ಶ್ರೇಷ್ಠ ಭಾರತ’ ಎಂಬ ನಂಬಿಕೆಯನ್ನು ಜೀವಂತವಾಗಿಟ್ಟಿದೆ.
“ಕಾಶಿಯು ವಿಮೋಚನೆ ಮತ್ತು ಮೋಕ್ಷದ ಭೂಮಿ”. ತೆಲುಗು ಜನರು ಕಾಶಿ ತಲುಪಲು ಸಾವಿರಾರು ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿದ್ದರು. ಆಧುನಿಕ ದಿನಗಳಲ್ಲಿ ಪರಿಸ್ಥಿತಿಗಳು ವೇಗವಾಗಿ ಬದಲಾಗುತ್ತಿವೆ. ಒಂದೆಡೆ ವಿಶ್ವನಾಥ ಧಾಮದ ದಿವ್ಯ ವೈಭವ, ಮತ್ತೊಂದೆಡೆ ಗಂಗಾ ಘಟ್ಟಗಳ ವೈಭವ ವರ್ಣನಾತೀತ. ಒಂದು ಕಡೆ ಕಾಶಿಯ ಬೀದಿಗಳು ಮತ್ತೊಂದೆಡೆ ಹೊಸ ರಸ್ತೆಗಳು ಮತ್ತು ಹೆದ್ದಾರಿಗಳ ಜಾಲ ವಿಸ್ತರಿಸುತ್ತಿದೆ. ಈ ಹಿಂದೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಕಾಶಿಗೆ ಬಂದವರು ನಗರದಲ್ಲಿ ಆಗುತ್ತಿರುವ ಬದಲಾವಣೆಯನ್ನು ಅನುಭವಿಸಬೇಕು. ಹೊಸ ಹೆದ್ದಾರಿ ನಿರ್ಮಾಣದಿಂದಾಗಿ ವಿಮಾನ ನಿಲ್ದಾಣದಿಂದ ದಶಾಶ್ವಮೇಧ ಘಟ್ಟಕ್ಕೆ ತಲುಪಲು ತೆಗೆದುಕೊಳ್ಳುವ ಸಮಯ ಕಡಿಮೆಯಾಗಿದೆ. ನಗರದ ಅಭಿವೃದ್ಧಿಯ ಉದಾಹರಣೆಗಳನ್ನು ನೀಡಿದ ಅವರು, ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳ ಭೂಗತಗೊಳಿಸುವಿಕೆ, ಕುಂಡಗಳ ಪುನರುಜ್ಜೀವನ, ದೇವಾಲಯ ಮಾರ್ಗಗಳು ಮತ್ತು ನಗರದ ಸಾಂಸ್ಕೃತಿಕ ಸ್ಥಳಗಳು ಮತ್ತು ಗಂಗಾನದಿಯಲ್ಲಿ ಸಿಎನ್‌ಜಿ ದೋಣಿಗಳ ಸಂಚಾರ ಅಭಿವೃದ್ಧಿ ಪಡಿಸಲಾಗಿದೆ. ಕಾಶಿಯ ನಾಗರಿಕರಿಗೆ ಅನುಕೂಲ ಕಲ್ಪಿಸಲು ಮುಂಬರುವ ದಿನಗಳಲ್ಲಿ ರೋಪ್‌ವೇ ಅಭಿವೃದ್ಧಿ ಪಡಿಸಲಾಗುವುದು. ಸ್ವಚ್ಛತಾ ಅಭಿಯಾನಗಳು ಮತ್ತು ಘಟ್ಟಗಳ ಸ್ವಚ್ಛತೆ ವಿಚಾರದಲ್ಲಿ ನಗರದ ನಿವಾಸಿಗಳು ಮತ್ತು ಯುವಕರು ಸೇರಿ ಸಾಮೂಹಿಕ ಆಂದೋಲನ ಸೃಷ್ಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಶ್ಲಾಘಿಸಿದರು.
ಕಾಶಿಯ ಜನರು ಅತಿಥಿಗಳಿಗೆ ಸೇವೆ ಸಲ್ಲಿಸಲು ಮತ್ತು ಸ್ವಾಗತಿಸಲು ಸದಾ ಮುಂದಿರುತ್ತಾರೆ. “ಬಾಬಾ ಅವರ ಆಶೀರ್ವಾದ, ಕಾಲಭೈರವ್ ಮತ್ತು ಅನ್ನಪೂರ್ಣ ಮಾತೆಯ ದರ್ಶನವು ಅದ್ಭುತವಾಗಿದೆ. ಗಂಗಾ ಜಲದಲ್ಲಿ ಸ್ನಾನವು ನಿಮ್ಮ ಆತ್ಮಕ್ಕೆ ಸಂತೋಷ ನೀಡುತ್ತದೆ”, ಲಸ್ಸಿ, ಥಂಡೈ, ಚಾಟ್, ಲಿಟ್ಟಿ-ಚೋಖಾ ಮತ್ತು ಬನಾರಸಿ ಪಾನ್ ಮುಂತಾದ ಭಕ್ಷ್ಯಗಳು ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ದೇಶವಾಸಿಗಳು ತಮ್ಮೊಂದಿಗೆ ಕೊಂಡೊಯ್ಯಬಹುದಾದ ಏಟಿಕೊಪ್ಪಕ ಆಟಿಕೆಗಳು ಮತ್ತು ಬನಾರಸಿ ಸೀರೆಗಳು ಮತ್ತು ವಾರಾಣಸಿಯ ಮರದ ಆಟಿಕೆಗಳು ಆಕರ್ಷಕವಾಗಿವೆ ಪ್ರಧಾನಿ ತಿಳಿಸಿದರು.
“ನಮ್ಮ ಪೂರ್ವಜರು ಭಾರತದ ಪ್ರಜ್ಞೆಯನ್ನು ವಿವಿಧ ಕೇಂದ್ರಗಳಲ್ಲಿ ಸ್ಥಾಪಿಸಿದರು, ಅದು ಒಟ್ಟಾಗಿ ಭಾರತ ಮಾತೆಯ ಸಂಪೂರ್ಣ ರೂಪವನ್ನು ರೂಪಿಸುತ್ತದೆ”. ಕಾಶಿಯ ಬಾಬಾ ವಿಶ್ವನಾಥ ಮತ್ತು ವಿಶಾಲಾಕ್ಷಿ ಶಕ್ತಿಪೀಠ, ಆಂಧ್ರದ ಮಲ್ಲಿಕಾರ್ಜುನ, ತೆಲಂಗಾಣದ ಭಗವಾನ್ ರಾಜ ರಾಜೇಶ್ವರ, ಆಂಧ್ರದ ಮಾತೆ ಭ್ರಮರಾಂಬ, ತೆಲಂಗಾಣದ ರಾಜರಾಜೇಶ್ವರಿ ಮುಂತಾದ ಪುಣ್ಯ ಕ್ಷೇತ್ರಗಳು ಭಾರತದ ಪ್ರಮುಖ ಕೇಂದ್ರಗಳಾಗಿದ್ದು, ಅವು ಸಾಂಸ್ಕೃತಿಕ ಅಸ್ಮಿತೆಯಾಗಿವೆ. ನಾವು ದೇಶದ ವೈವಿಧ್ಯತೆಯನ್ನು ಒಟ್ಟಾರೆಯಾಗಿ ನೋಡಿದಾಗ ಮಾತ್ರ ಭಾರತದ ಸಂಪೂರ್ಣತೆ ಮತ್ತು ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯ. ಆಗ ಮಾತ್ರ ನಾವು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಜಾಗೃತಗೊಳಿಸಲು ಸಾಧ್ಯವಾಗುತ್ತದೆ. ದೇಶ ಸೇವೆಯ ಈ ಸಂಕಲ್ಪವನ್ನು ಗಂಗಾ-ಪುಷ್ಕರಾಳುನಂತಹ ಉತ್ಸವಗಳು ಮುಂದಕ್ಕೆ ಕೊಂಡೊಯ್ಯಲಿವೆ ಎಂದು ವಿಶ್ವಾಸ ತಮಗಿದೆ ಎಂದು ಪ್ರಧಾನ ಮಂತ್ರಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
*****