Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ನಡೆದ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

ನವದೆಹಲಿಯಲ್ಲಿ ನಡೆದ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ


ಇಂದಿನ ಸಮ್ಮೇಳನದಲ್ಲಿ ನನ್ನ ಜೊತೆಗಿರುವ ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ನರೇಂದ್ರ ತೋಮರ್, ಮನ್ಸುಖ್ ಮಾಂಡವಿಯಾ, ಶ್ರೀ ಪಿಯೂಷ್ ಗೋಯೆಲ್ ಮತ್ತು ಶ್ರೀ ಕೈಲಾಶ್ ಚೌಧರಿ ಅವರೇ; ಗಯಾನಾ, ಮಾಲ್ಡೀವ್ಸ್, ಮಾರಿಷಸ್, ಶ್ರೀಲಂಕಾ, ಸುಡಾನ್, ಸುರಿನಾಮ್ ಮತ್ತು ಗಾಂಬಿಯಾದ ಗೌರವಾನ್ವಿತ ಸಚಿವರೇ; ವಿಶ್ವದ ವಿವಿಧ ಭಾಗಗಳಿಂದ ಬಂದ ಕೃಷಿ, ಪೌಷ್ಠಿಕಾಂಶ ಮತ್ತು ಆರೋಗ್ಯ ಕ್ಷೇತ್ರದ ವಿಜ್ಞಾನಿಗಳು ಮತ್ತು ತಜ್ಞರೇ; ದೇಶದ ವಿವಿಧ ʻಎಫ್ ಪಿ ಒʼ ಗಳು ಮತ್ತು ನವೋದ್ಯಮ ಜಗತ್ತಿನ ಯುವ ಸ್ನೇಹಿತರೇ; ದೇಶದ ಮೂಲೆ ಮೂಲೆಗಳಿಂದ ಹಾಜರಾದ ಲಕ್ಷಾಂತರ ರೈತರೇ; ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

‘ಜಾಗತಿಕ ಸಿರಿಧಾನ್ಯಗಳ ಸಮ್ಮೇಳನ’ವನ್ನು ಆಯೋಜಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ಕಾರ್ಯಕ್ರಮಗಳು ಜಾಗತಿಕ ಒಳಿತಿಗಾಗಿ ಮಾತ್ರವಲ್ಲ, ಜಾಗತಿಕ ಒಳಿತಿಗಾಗಿ ಹೆಚ್ಚುತ್ತಿರುವ ಭಾರತದ ಜವಾಬ್ದಾರಿಯ ಸಂಕೇತವೂ ಹೌದು. 

ಸ್ನೇಹಿತರೇ,

ಭಾರತದ ಪ್ರಸ್ತಾಪ ಮತ್ತು ಪ್ರಯತ್ನಗಳ ಬಳಿಕವಷ್ಟೇ, ವಿಶ್ವಸಂಸ್ಥೆಯು 2023ನೇ ಸಾಲಿನ ವರ್ಷವನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷʼ ಎಂದು ಘೋಷಿಸಿತು ಎಂಬ ವಿಷಯ ನಿಮಗೆಲ್ಲಾ ತಿಳಿದಿದೆ. ನಾವು ಯಾವುದೇ ನಿರ್ಣಯವನ್ನು ಕೈಗೊಂಡಾಗ ಅದನ್ನು ಸಾಧಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಸಹ ಅಷ್ಟೇ ಮುಖ್ಯ. ಇಂದು ವಿಶ್ವವು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ವನ್ನು ಆಚರಿಸುತ್ತಿರುವಾಗ, ಭಾರತವು ಈ ಅಭಿಯಾನವನ್ನು ಮುನ್ನಡೆಸುತ್ತಿರುವುದು ನನಗೆ ಸಂತೋಷ ತಂದಿದೆ. ‘ಜಾಗತಿಕ ಸಿರಿಧಾನ್ಯಗಳ ಸಮ್ಮೇಳನ’ ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಸಮ್ಮೇಳನದಲ್ಲಿ, ಎಲ್ಲಾ ವಿದ್ವಾಂಸರು ಮತ್ತು ತಜ್ಞರು ಸಿರಿಧಾನ್ಯಗಳ ಕೃಷಿ, ಅದಕ್ಕೆ ಸಂಬಂಧಿಸಿದ ಆರ್ಥಿಕತೆ, ಆರೋಗ್ಯದ ಮೇಲೆ ಅದರ ಪರಿಣಾಮ, ರೈತರ ಆದಾಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಸಮ್ಮೇಳನದಲ್ಲಿ, ಗ್ರಾಮ ಪಂಚಾಯಿತಿಗಳು, ಕೃಷಿ ಕೇಂದ್ರಗಳು, ಶಾಲಾ-ಕಾಲೇಜುಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಸಹ ನಮ್ಮೊಂದಿಗೆ ಇವೆ. ಭಾರತೀಯ ರಾಯಭಾರ ಕಚೇರಿಗಳು ಮತ್ತು ಹಲವಾರು ದೇಶಗಳು ಸಹ ಇಂದು ನಮ್ಮೊಂದಿಗೆ ಸೇರಿಕೊಂಡಿವೆ. ಭಾರತದ 75 ಲಕ್ಷಕ್ಕೂ ಹೆಚ್ಚು ರೈತರು ಇಂದು ನಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದಾರೆ. ಇದು ಕಾರ್ಯಕ್ರಮದ ಭವ್ಯತೆಯನ್ನು ಸೂಚಿಸುತ್ತದೆ.

ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಸಿರಿಧಾನ್ಯಗಳ ಸ್ಮರಣಾರ್ಥ ಅಂಚೆಚೀಟಿಗಳು ಮತ್ತು ನಾಣ್ಯಗಳನ್ನು ಸಹ ಇಲ್ಲಿ ಬಿಡುಗಡೆ ಮಾಡಲಾಗಿದೆ. ʻಸಿರಿಧಾನ್ಯಗಳ ಮಾನದಂಡʼ ಪುಸ್ತಕವನ್ನು ಸಹ ಇಲ್ಲಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿಯ ʻಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆʼಯನ್ನು ʻಜಾಗತಿಕ ಉತ್ಕೃಷ್ಟತಾ ಕೇಂದ್ರʼ ಎಂದು ಘೋಷಿಸಲಾಗಿದೆ. ಈ ವೇದಿಕೆಗೆ ಬರುವ ಮೊದಲು, ನಾನು ಪ್ರದರ್ಶನವನ್ನು ನೋಡಲು ಹೋಗಿದ್ದೆ. ನೀವೆಲ್ಲರೂ ಸಹ ಅಲ್ಲಿಗೆ ಭೇಟಿ ನೀಡಬೇಕೆಂದು ಒತ್ತಾಯಿಸುತ್ತೇನೆ. ಪ್ರಸ್ತುತ ದೆಹಲಿಯಲ್ಲಿ ಇರುವವರು ಅಥವಾ ದೆಹಲಿಗೆ ಬರುವವರು ಸಹ ಒಂದೇ ಸೂರಿನಡಿ ಸಿರಿಧಾನ್ಯಗಳ ಇಡೀ ಜಗತ್ತನ್ನು ಅರ್ಥಮಾಡಿಕೊಳ್ಳಲು ಈ ಪ್ರದರ್ಶನಕ್ಕೆ ಸಾಕ್ಷಿಯಾಗಬೇಕೆಂದು ನಾನು ಒತ್ತಾಯಿಸುತ್ತೇನೆ. ಪರಿಸರ, ಪ್ರಕೃತಿ, ಆರೋಗ್ಯ ಮತ್ತು ರೈತರ ಆದಾಯಕ್ಕೆ ಅದರ ಪ್ರಾಮುಖ್ಯತೆಯೂ ಈ ಪ್ರದರ್ಶನದಲ್ಲಿ ಮನದಟ್ಟಾಗುತ್ತದೆ. ನೀವೆಲ್ಲರೂ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ. ನಮ್ಮ ಯುವ ಸ್ನೇಹಿತರು ತಮ್ಮ ಹೊಸ ನವೋದ್ಯಮಗಳೊಂದಿಗೆ ಈ ಕ್ಷೇತ್ರಕ್ಕೆ ಬಂದಿರುವ ವಿಧಾನವೂ ಅತ್ಯಂತ ಪ್ರಭಾವಶಾಲಿಯಾಗಿದೆ. ಇದು ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 

ಸ್ನೇಹಿತರೇ, 
ಇಂದು ʻಜಾಗತಿಕ ಸಿರಿಧಾನ್ಯಗಳ ಸಮ್ಮೇಳನʼದಲ್ಲಿ ನಮ್ಮೊಂದಿಗೆ ಇರುವ ಲಕ್ಷಾಂತರ ರೈತರು ಮತ್ತು ವಿದೇಶಿ ಅತಿಥಿಗಳ ಮುಂದೆ ನಾನು ಒಂದು ವಿಷಯವನ್ನು ಪುನರುಚ್ಚರಿಸಲು ಬಯಸುತ್ತೇನೆ. ಸಿರಿಧಾನ್ಯಗಳ ಜಾಗತಿಕ ಬ್ರ್ಯಾಂಡಿಂಗ್ ಅಥವಾ ಸಾಮಾನ್ಯ ಬ್ರ್ಯಾಂಡಿಂಗ್ ದೃಷ್ಟಿಯಿಂದ, ಭಾರತದಲ್ಲಿ ಈ ಸಿರಿಧಾನ್ಯಗಳಿಗೆ ಈಗ ‘ಶ್ರೀ ಅನ್ನ’ ಎಂಬ ಗುರುತನ್ನು ನೀಡಲಾಗಿದೆ. ‘ಶ್ರೀ ಅನ್ನ’ ಕೇವಲ ಕೃಷಿ ಅಥವಾ ಅನುಭೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಸಂಪ್ರದಾಯಗಳ ಬಗ್ಗೆ ತಿಳಿದಿರುವವರಿಗೆ, ನಮ್ಮ ದೇಶದಲ್ಲಿ ‘ಶ್ರೀ’ ಎನ್ನುವ ಪದವನ್ನು ಕಾರಣವಿಲ್ಲದೆ ಯಾವುದೇ ಹೆಸರಿನೊಂದಿಗೆ ನಂಟು ಮಾಡುವುದಿಲ್ಲ ಎಂದು ತಿಳಿದಿದೆ. ‘ಶ್ರೀ’ ಎಂಬುದು ಸಮೃದ್ಧಿ ಮತ್ತು ಸಮಗ್ರತೆಗೆ ಸಂಬಂಧಿಸಿದೆ. ‘ಶ್ರೀ ಅನ್ನ’ ಕೂಡ ಭಾರತದ ಒಟ್ಟಾರೆ ಅಭಿವೃದ್ಧಿಯ ಮಾಧ್ಯಮವಾಗಿ ಬದಲಾಗುತ್ತಿದೆ. ಹಳ್ಳಿಗಳು ಮತ್ತು ಬಡವರು ಇದರೊಂದಿಗೆ ಸಂಪರ್ಕ ಹೊಂದಿದ್ದಾರೆ. ‘ಶ್ರೀ ಅನ್ನ’ ಎಂದರೆ ದೇಶದ ಸಣ್ಣ ರೈತರಿಗೆ ಸಮೃದ್ಧಿಯ ಬಾಗಿಲು; ‘ಶ್ರೀ ಅನ್ನ’ ಎಂದರೆ ದೇಶದ ಕೋಟ್ಯಂತರ ಜನರಿಗೆ ಪೌಷ್ಠಿಕಾಂಶದ ಹರಿಕಾರ; ‘ಶ್ರೀ ಅನ್ನ’ ಎಂದರೆ ದೇಶದ ಬುಡಕಟ್ಟು ಸಮಾಜದ ಕಲ್ಯಾಣ; ‘ಶ್ರೀ ಅನ್ನ’ ಎಂದರೆ ಕಡಿಮೆ ನೀರಿನಿಂದ ಹೆಚ್ಚಿನ ಬೆಳೆ ಇಳುವರಿ; ‘ಶ್ರೀ ಅನ್ನ’ ಎಂದರೆ ರಾಸಾಯನಿಕ ಮುಕ್ತ ಕೃಷಿ; ‘ಶ್ರೀ ಅನ್ನ’ ಎಂದರೆ ಹವಾಮಾನ ಬದಲಾವಣೆಯ ಸವಾಲನ್ನು ನಿಭಾಯಿಸುವ ಒಂದು ಮಾರ್ಗ. 

ಸ್ನೇಹಿತರೇ, 
‘ಶ್ರೀ ಅನ್ನ’ವನ್ನು ಜಾಗತಿಕ ಆಂದೋಲನವನ್ನಾಗಿ ಮಾಡಲು ನಾವು ಅವಿಶ್ರಾಂತವಾಗಿ ಶ್ರಮಿಸಿದ್ದೇವೆ. 2018ರಲ್ಲಿ, ನಾವು ಸಿರಿಧಾನ್ಯಗಳನ್ನು ಪೌಷ್ಟಿಕ-ಧಾನ್ಯಗಳು ಎಂದು ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ, ರೈತರಲ್ಲಿ ಜಾಗೃತಿ ಮೂಡಿಸುವುದರಿಂದ ಹಿಡಿದು ಮಾರುಕಟ್ಟೆಯಲ್ಲಿ ಇವುಗಳ ಬಗ್ಗೆ ಆಸಕ್ತಿ ಮೂಡಿಸುವವರೆಗೆ ಪ್ರತಿಯೊಂದು ಹಂತದಲ್ಲೂ ಕೆಲಸ ಮಾಡಲಾಗಿದೆ. ನಮ್ಮ ದೇಶದಲ್ಲಿ, ಸಿರಿಧಾನ್ಯಗಳನ್ನು ಮುಖ್ಯವಾಗಿ 12-13 ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಆದರೆ, ಮನೆಯಲ್ಲಿ ಸಿರಿಧಾನ್ಯಗಳ ಬಳಕೆಯು ತಿಂಗಳಿಗೆ ಒಬ್ಬ ವ್ಯಕ್ತಿಗೆ 2-3 ಕೆಜಿಗಿಂತ ಹೆಚ್ಚಿರಲಿಲ್ಲ. ಇಂದು ಅದು ತಿಂಗಳಿಗೆ 14 ಕೆ.ಜಿಗೆ ಏರಿದೆ. ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನಗಳ ಮಾರಾಟವೂ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿದೆ. ಈಗ ರಾಗಿ ಕೆಫೆಗಳು ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ; ಸಿರಿಧಾನ್ಯಗಳಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳನ್ನು ಸಹ ಆರಂಭಿಸಲಾಗುತ್ತಿದೆ. ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಡಿ ದೇಶದ 19 ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಆಯ್ಕೆ ಮಾಡಲಾಗಿದೆ. 

ಸ್ನೇಹಿತರೇ, 
ಆಹಾರ ಧಾನ್ಯಗಳನ್ನು ಬೆಳೆಯುವ ಹೆಚ್ಚಿನ ಕೃಷಿಕರು ಸಣ್ಣ ಮತ್ತು ಅತಿಸಣ್ಣ ರೈತರು ಎಂದು ನಮಗೆ ತಿಳಿದಿದೆ. ಭಾರತದಲ್ಲಿ ಸುಮಾರು 2.5 ಕೋಟಿ ಸಣ್ಣ ರೈತರು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ ಎಂದರೆ ಅದು ಕೆಲವರಿಗೆ ಖಂಡಿತವಾಗಿಯೂ ಅಚ್ಚರಿ ಮೂಡಿಸಬಹುದು. ಅವರಲ್ಲಿ ಹೆಚ್ಚಿನ ಮಂದಿ ಸಣ್ಣ ಭೂಮಿಯನ್ನು ಹೊಂದಿದ್ದಾರೆ; ಮತ್ತು ಹವಾಮಾನ ಬದಲಾವಣೆಯ ಸವಾಲುಗಳಿಂದ ಅವರು ಹೆಚ್ಚು ಬಾಧಿತರಾಗುತ್ತಾರೆ. ‘ಶ್ರೀ ಅನ್ನ’ಕ್ಕಾಗಿ ಪ್ರಾರಂಭಿಸಲಾದ ಭಾರತದ ಸಿರಿಧಾನ್ಯ ಅಭಿಯಾನವು ದೇಶದ 2.5 ಕೋಟಿ ರೈತರಿಗೆ ವರದಾನವಾಗಲಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಸಿರಿಧಾನ್ಯಗಳನ್ನು ಉತ್ಪಾದಿಸುವ 2.5 ಕೋಟಿ ಸಣ್ಣ ರೈತರನ್ನು ಸರಕಾರವು ಇಷ್ಟು ಆದ್ಯತೆಯಿಂದ ನೋಡಿಕೊಂಡಿದೆ. ಸಿರಿಧಾನ್ಯಗಳು ಮತ್ತು ಹಸಿರು ಧಾನ್ಯಗಳ ಮಾರುಕಟ್ಟೆ ವಿಸ್ತರಿಸಿದಾಗ, ಈ 2.5 ಕೋಟಿ ಸಣ್ಣ ರೈತರ ಆದಾಯವೂ ಹೆಚ್ಚಾಗುತ್ತದೆ. ಇದು ಗ್ರಾಮೀಣ ಆರ್ಥಿಕತೆಗೆ ಅಪಾರ ಪ್ರಯೋಜನವನ್ನು ನೀಡುತ್ತದೆ. ಸಿರಿಧಾನ್ಯಗಳು ಈಗ ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೂಲಕ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ತಲುಪುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ ‘ಶ್ರೀ ಅನ್ನ’ದಲ್ಲಿ ಕೆಲಸ ಮಾಡುವ 500ಕ್ಕೂ ಹೆಚ್ಚು ನವೋದ್ಯಮಗಳು ತಲೆ ಎತ್ತಿವೆ. ಹೆಚ್ಚಿನ ಸಂಖ್ಯೆಯ ʻಕೃಷಿ ಉತ್ಪನ್ನ ಸಂಘಗಳುʼ (ಎಫ್‌ಪಿಒ) ಈ ನಿಟ್ಟಿನಲ್ಲಿ ಮುಂದೆ ಬರುತ್ತಿವೆ. ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಹಳ್ಳಿಗಳಿಂದ, ಈ ಉತ್ಪನ್ನಗಳು ಮಾಲ್‌ಗಳು ಮತ್ತು ಸೂಪರ್ ಮಾರ್ಕೆಟ್‌ಗಳನ್ನು ತಲುಪುತ್ತಿವೆ. ಅಂದರೆ, ದೇಶದಲ್ಲಿ ಸಂಪೂರ್ಣ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪರಿಣಾಮವಾಗಿ, ಯುವಕರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ, ಮತ್ತು ಸಣ್ಣ ರೈತರು ಸಹ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಿತರೇ,
ಪ್ರಸ್ತುತ, ಭಾರತವು ʻಜಿ 20ʼ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದು ಭಾರತದ ಧ್ಯೇಯವಾಕ್ಯವಾಗಿದೆ. ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವು ಇಡೀ ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸುವ ಈ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರಪಂಚದ ಬಗ್ಗೆ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯತೆಯ ಸೇವೆ ಮಾಡುವ ಸಂಕಲ್ಪ ಸದಾ ಭಾರತದ ಹೃದಯದಲ್ಲಿದೆ. ನೀವು ಕಂಡಿರುವಂತೆ, ನಾವು ಯೋಗದೊಂದಿಗೆ ಮುಂದೆ ಬಂದಾಗ ʻಅಂತರರಾಷ್ಟ್ರೀಯ ಯೋಗ ದಿನʼದ ಮೂಲಕ ಇಡೀ ಜಗತ್ತು ಅದರ ಪ್ರಯೋಜನಗಳನ್ನು ಪಡೆಯುವಂತೆ ನಾವು ಖಾತರಿಪಡಿಸಿದ್ದೇವೆ. ಇಂದು ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಯೋಗವನ್ನು ಅಧಿಕೃತವಾಗಿ ಉತ್ತೇಜಿಸಲಾಗುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಇಂದು, ವಿಶ್ವದ 30ಕ್ಕೂ ಹೆಚ್ಚು ದೇಶಗಳು ಆಯುರ್ವೇದಕ್ಕೂ ಮಾನ್ಯತೆ ನೀಡಿವೆ. ಇಂದು, ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟʼ(ಐಎಸ್‌ಎ) ರೂಪದಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನವು ಸುಸ್ಥಿರ ಭೂಗ್ರಹಕ್ಕೆ ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. 100ಕ್ಕೂ ಹೆಚ್ಚು ದೇಶಗಳು ʻಐಎಸ್ಎʼಗೆ ಸೇರಿರುವುದು ಭಾರತಕ್ಕೆ ಬಹಳ ಸಂತೋಷದ ವಿಷಯವಾಗಿದೆ. ಇಂದು, ಅದು ʻಲೈಫ್‌ʼ(LiFE) ಮಿಷನ್ ಅನ್ನು ಮುನ್ನಡೆಸುವುದರಲ್ಲಿರಲಿ ಅಥವಾ ಹವಾಮಾನ ಬದಲಾವಣೆಯ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸುವುದರಲ್ಲಿರಲಿ, ನಾವು ನಮ್ಮ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತೇವೆ, ಸಮಾಜದಲ್ಲಿ ಬದಲಾವಣೆಯನ್ನು ಪ್ರೇರೇಪಿಸುತ್ತೇವೆ ಮತ್ತು ಆ ಬದಲಾವಣೆಯನ್ನು ಜಾಗತಿಕ ಒಳಿತಿಗಾಗಿ ಮುಂದಕ್ಕೆ ಕೊಂಡೊಯ್ಯುತ್ತೇವೆ. ಇದು ಇಂದು ಭಾರತದ ‘ಸಿರಿಧಾನ್ಯ ಆಂದೋಲನ’ದಲ್ಲೂ ಕಂಡುಬರುತ್ತದೆ. ‘ಶ್ರೀ ಅನ್ನ’ ಶತಮಾನಗಳಿಂದ ಭಾರತದ ಜೀವನಶೈಲಿಯ ಒಂದು ಭಾಗವಾಗಿದೆ. ದೇಶದ ವಿವಿಧ ಪ್ರದೇಶಗಳಲ್ಲಿ, ಜೋಳ, ಸಜ್ಜೆ, ರಾಗಿ, ಸಾಮಾ, ಕಾಂಗ್ನಿ, ಚೀನಾ, ಕೋಡನ್, ಕುಟ್ಕಿ, ಕುಟ್ಟು ಮುಂತಾದ ಅನೇಕ ರೀತಿಯ ಸಿರಿಧಾನ್ಯಗಳು ಪ್ರಚಲಿತದಲ್ಲಿವೆ. ‘ಶ್ರೀ ಅನ್ನ’ಕ್ಕೆ ಸಂಬಂಧಿಸಿದ ನಮ್ಮ ಕೃಷಿ ಪದ್ಧತಿಗಳು ಮತ್ತು ಅನುಭವಗಳನ್ನು ನಾವು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಜಗತ್ತು ಮತ್ತು ಇತರ ದೇಶಗಳು ನೀಡುವ ಹೊಸ ಮತ್ತು ವಿಶೇಷವಾದದ್ದನ್ನು ನಾವು ಕಲಿಯಲು ಬಯಸುತ್ತೇವೆ. ನಾವು ಸಹ ಕಲಿಯಲು ಉದ್ದೇಶಿಸಿದ್ದೇವೆ. ಆದ್ದರಿಂದ, ಈ ನಿಟ್ಟಿನಲ್ಲಿ ಸ್ಥಿರವಾದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಂತೆ ಇಲ್ಲಿ ಉಪಸ್ಥಿತರಿರುವ ಮಿತ್ರ ರಾಷ್ಟ್ರಗಳ ಕೃಷಿ ಸಚಿವರಿಗೆ ನಾನು ವಿಶೇಷವಾಗಿ ವಿನಂತಿಸುತ್ತೇನೆ. ಈ ಕಾರ್ಯವಿಧಾನದ ಮೂಲಕ, ಹೊಲದಿಂದ ಮಾರುಕಟ್ಟೆಗೆ ಮತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಿರಿಧಾನ್ಯಗಳ ಹೊಸ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸುವುದು ನಮ್ಮ ಪರಸ್ಪರ ಜವಾಬ್ದಾರಿಯಾಗಿದೆ.

ಸ್ನೇಹಿತರೇ,
ಇಂದು, ಈ ವೇದಿಕೆಯಲ್ಲಿ, ನಾನು ಸಿರಿಧಾನ್ಯಗಳ ಮತ್ತೊಂದು ಶಕ್ತಿಯನ್ನು ಒತ್ತಿಹೇಳಲು ಬಯಸುತ್ತೇನೆ. ಸಿರಿಧಾನ್ಯಗಳು ಹವಾಮಾನಕ್ಕೆ ಹೊಂದಿಕೊಳ್ಳಬಲ್ಲವಾಗಿವೆ . ಅತ್ಯಂತ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಿರಿಧಾನ್ಯಗಳನ್ನು ಸುಲಭವಾಗಿ ಉತ್ಪಾದಿಸಬಹುದು. ಇದನ್ನು ಉತ್ಪಾದಿಸಲು ತುಲನಾತ್ಮಕವಾಗಿ ಕಡಿಮೆ ನೀರು ಸಾಕಾಗುತ್ತದೆ, ಇದು ನೀರಿನ ಕೊರತೆಯ ಪ್ರದೇಶಗಳಿಗೆ ಆದ್ಯತೆಯ ಬೆಳೆಯಾಗಿದೆ. ರಾಸಾಯನಿಕಗಳಿಲ್ಲದೆ ನೈಸರ್ಗಿಕವಾಗಿ ಬೆಳೆಯಬಹುದಾದ ಮತ್ತೊಂದು ದೊಡ್ಡ ಗುಣವನ್ನು ಸಿರಿಧಾನ್ಯಗಳು ಹೊಂದಿವೆ ಎಂದು ನಿಮ್ಮಂತಹ ತಜ್ಞರಿಗೆ ನಾನು ಹೇಳುವ ಅಗತ್ಯವಿಲ್ಲ. ಅಂದರೆ, ಸಿರಿಧಾನ್ಯಗಳು ಮಾನವರು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ ಎಂಬುದು ಖಾತರಿಯಾಗಿದೆ.

ಸ್ನೇಹಿತರೇ,
ಆಹಾರ ಭದ್ರತೆಯ ವಿಷಯಕ್ಕೆ ಬಂದಾಗ, ನಮಗೆ ತಿಳಿದಿರುವಂತೆ ಜಗತ್ತು ಇಂದು ಎರಡು ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ, ಜಗತ್ತಿನ ದಕ್ಷಿಣ ಭಾಗದ ದೇಶಗಳು ತಮ್ಮ ಬಡ ಜನತೆಯ ಆಹಾರ ಭದ್ರತೆಯ ಬಗ್ಗೆ ಕಳವಳ ಹೊಂದಿದೆ. ಮತ್ತೊಂದೆಡೆ, ಜಗತ್ತಿನ ಉತ್ತರದ ಭಾಗದ ದೇಶಗಳಲ್ಲಿ ಆಹಾರ ಪದ್ಧತಿಗೆ ಸಂಬಂಧಿಸಿದ ರೋಗಗಳು ಪ್ರಮುಖ ಸಮಸ್ಯೆಯಾಗುತ್ತಿವೆ. ಕಳಪೆ ಪೌಷ್ಠಿಕಾಂಶವು ಇಲ್ಲಿ ದೊಡ್ಡ ಸವಾಲಾಗಿದೆ. ಅಂದರೆ, ಒಂದು ಕಡೆ ಆಹಾರ ಭದ್ರತೆಯ ಸಮಸ್ಯೆ ಇದ್ದರೆ, ಮತ್ತೊಂದೆಡೆ ಆಹಾರ ಪದ್ಧತಿಯ ಸಮಸ್ಯೆ ಇದೆ! ಎರಡೂ ಪ್ರದೇಶಗಳಲ್ಲಿ, ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುತ್ತಿರುವ ಬಗ್ಗೆ ಕಳವಳವಿದೆ. ಆದರೆ ‘ಶ್ರೀ ಅನ್ನ’ ಅಂತಹ ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ. ಹೆಚ್ಚಿನ ಸಿರಿಧಾನ್ಯಗಳನ್ನು ಬೆಳೆಯುವುದು ಸುಲಭ. ವೆಚ್ಚವು ತುಲನಾತ್ಮಕವಾಗಿ ಕಡಿಮೆ ಮತ್ತು ಇತರ ಬೆಳೆಗಳಿಗೆ ಹೋಲಿಸಿದರೆ ಬೇಗನೆ ಫಸಲು ಬರುತ್ತದೆ. ಸಿರಿಧಾನ್ಯಗಳು ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿರುವುದು ಮಾತ್ರವಲ್ಲ, ರುಚಿಯ ದೃಷ್ಟಿಯಿಂದಲೂ ಅವು ವಿಶಿಷ್ಟವಾಗಿವೆ. ಜಾಗತಿಕ ಆಹಾರ ಭದ್ರತೆಗಾಗಿ ಹೆಣಗಾಡುತ್ತಿರುವ ಜಗತ್ತಿನಲ್ಲಿ, ‘ಶ್ರೀ ಅನ್ನ’ ಒಂದು ಅದ್ಭುತ ಉಡುಗೊರೆ ಇದ್ದಂತೆ. ಅಂತೆಯೇ, ಆಹಾರ ಪದ್ಧತಿಯ ಸಮಸ್ಯೆಯನ್ನು ಸಹ ‘ಶ್ರೀ ಅನ್ನ’ ದೊಂದಿಗೆ ಪರಿಹರಿಸಬಹುದು. ಹೆಚ್ಚಿನ ನಾರಿನಂಶವನ್ನು ಹೊಂದಿರುವ ಈ ಆಹಾರಗಳನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೀವನಶೈಲಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುವಲ್ಲಿ ಇವು ಸಾಕಷ್ಟು ಸಹಾಯ ಮಾಡುತ್ತವೆ. ಅಂದರೆ, ವೈಯಕ್ತಿಕ ಆರೋಗ್ಯದಿಂದ ಜಾಗತಿಕ ಆರೋಗ್ಯದವರೆಗೆ, ‘ಶ್ರೀ ಅನ್ನ’ದೊಂದಿಗೆ ನಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಲು ನಾವು ಖಂಡಿತವಾಗಿಯೂ ಒಂದು ಮಾರ್ಗವನ್ನು ಕಂಡುಕೊಳ್ಳಬಹುದು.

ಸ್ನೇಹಿತರೇ,
ಸಿರಿಧಾನ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡಲು ನಮ್ಮ ಮುಂದೆ ಅನಂತ ಸಾಧ್ಯತೆಗಳಿವೆ. ಇಂದು, ಭಾರತದ ಒಟ್ಟಾರೆ ರಾಷ್ಟ್ರೀಯ ಆಹಾರ ಧಾನ್ಯಗಳ ಉತ್ಪಾದನೆಗೆ ‘ಶ್ರೀ ಅನ್ನ’ದ ಕೊಡುಗೆ ಕೇವಲ 5-6 ಪ್ರತಿಶತದಷ್ಟಿದೆ. ಇದನ್ನು ಹೆಚ್ಚಿಸಲು ಭಾರತದ ವಿಜ್ಞಾನಿಗಳು ಮತ್ತು ಕೃಷಿ ಕ್ಷೇತ್ರದ ತಜ್ಞರು ವೇಗವಾಗಿ ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ನಾವು ಪ್ರತಿ ವರ್ಷ ಸಾಧಿಸಬಹುದಾದ ಗುರಿಗಳನ್ನು ನಿಗದಿಪಡಿಸಬೇಕು. ಆಹಾರ ಸಂಸ್ಕರಣಾ ವಲಯಕ್ಕೆ ಉತ್ತೇಜನ ನೀಡಲು ದೇಶವು ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ (ಪಿಎಲ್ಐ) ಯೋಜನೆಯನ್ನು ಪ್ರಾರಂಭಿಸಿದೆ. ಸಿರಿಧಾನ್ಯ ವಲಯವು ಇದರಿಂದ ಗರಿಷ್ಠ ಲಾಭವನ್ನು ಪಡೆಯುವಂತೆ ನಾವು ಖಚಿತಪಡಿಸಿಕೊಳ್ಳಬೇಕು. ಸಿರಿಧಾನ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಹೆಚ್ಚು ಕಂಪನಿಗಳು ಮುಂದೆ ಬರುತ್ತಿವೆ. ಈ ಕನಸು ನನಸಾಗುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಹಲವಾರು ರಾಜ್ಯಗಳು ತಮ್ಮ ಪಡಿತರ ವ್ಯವಸ್ಥೆಯಲ್ಲಿ ಸಿರಿಧಾನ್ಯಗಳನ್ನು ಸೇರಿಸಿವೆ. ಅಂತಹ ಪ್ರಯತ್ನಗಳನ್ನು ಇತರ ರಾಜ್ಯಗಳು ಸಹ ಪ್ರಾರಂಭಿಸಬಹುದು. ಮಧ್ಯಾಹ್ನದ ಊಟದಲ್ಲಿ ‘ಶ್ರೀ ಅನ್ನ’ ಸೇರಿಸುವ ಮೂಲಕ, ನಾವು ಮಕ್ಕಳಿಗೆ ಪೌಷ್ಠಿಕಾಂಶವನ್ನು ಒದಗಿಸಬಹುದು, ಜೊತೆಗೆ ಊಟದಲ್ಲಿ ಹೊಸ ರುಚಿ ಮತ್ತು ವೈವಿಧ್ಯತೆಯನ್ನು ತರಬಹುದು.

ಈ ಎಲ್ಲಾ ಅಂಶಗಳನ್ನು ಈ ಸಮ್ಮೇಳನದಲ್ಲಿ ವಿವರವಾಗಿ ಚರ್ಚಿಸಲಾಗುವುದು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಲಾಗುವುದು ಎಂದು ನನಗೆ ಖಾತರಿಯಿದೆ. ನಮ್ಮ ರೈತರು ಮತ್ತು ನಮ್ಮೆಲ್ಲರ ಸಂಘಟಿತ ಪ್ರಯತ್ನದಿಂದ, ‘ಶ್ರೀ ಅನ್ನ’ ಭಾರತ ಮತ್ತು ವಿಶ್ವದ ಸಮೃದ್ಧಿಗೆ ಹೊಸ ಆಯಾಮವನ್ನು ನೀಡುತ್ತದೆ. ಈ ಹಾರೈಕೆಯೊಂದಿಗೆ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎರಡು ದೇಶಗಳ ಅಧ್ಯಕ್ಷರು ತಮ್ಮ ಸಂದೇಶಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಸಮಯ ವ್ಯಯಿಸಿದ್ದಕ್ಕಾಗಿ ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಅನಂತ ಧನ್ಯವಾದಗಳು!

ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಅವರ ಮೂಲ ಭಾಷಣ ಹಿಂದಿಯಲ್ಲಿತ್ತು.

*****