Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜಸ್ಥಾನದ ದೌಸಾದಲ್ಲಿ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ ದೆಹಲಿ – ದೌಸಾ – ಲಾಲ್‌ಸೋಟ್ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ

ರಾಜಸ್ಥಾನದ ದೌಸಾದಲ್ಲಿ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ ದೆಹಲಿ – ದೌಸಾ – ಲಾಲ್‌ಸೋಟ್ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ 246 ಕಿಮೀ ಉದ್ದದ ದೆಹಲಿ – ದೌಸಾ – ಲಾಲ್ಸೋಟ್ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 5,940 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ 247 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ನವಭಾರತದಲ್ಲಿ ಬೆಳವಣಿಗೆ, ಅಭಿವೃದ್ಧಿ ಮತ್ತು ಸಂಪರ್ಕದ ಎಂಜಿನ್‌ ಆಗಿ ಅತ್ಯುತ್ತಮ ರಸ್ತೆ ಮೂಲಸೌಕರ್ಯಗಳ ನಿರ್ಮಾಣಕ್ಕೆ ಪ್ರಧಾನ ಮಂತ್ರಿಯವರು ಒತ್ತು ನೀಡಿದ್ದು, ದೇಶದಾದ್ಯಂತ ನಡೆಯುತ್ತಿರುವ ಹಲವಾರು ವಿಶ್ವ ದರ್ಜೆಯ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣದಿಂದ ಇದು ಸಾಕಾರಗೊಳ್ಳುತ್ತಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದ ಭವ್ಯ ಚಿತ್ರಣವನ್ನು ಪ್ರಸ್ತುತಪಡಿಸುವ ವಿಶ್ವದ ಅತ್ಯಂತ ಸುಧಾರಿತ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಇಂತಹ ಆಧುನಿಕ ರಸ್ತೆಗಳು, ರೈಲು ನಿಲ್ದಾಣಗಳು, ರೈಲು ಮಾರ್ಗಗಳು, ಮೆಟ್ರೋ ಮತ್ತು ವಿಮಾನ ನಿಲ್ದಾಣಗಳು ನಿರ್ಮಾಣವಾದಾಗ ದೇಶದ ಅಭಿವೃದ್ಧಿ ವೇಗ ಪಡೆಯುತ್ತದೆ ಎಂದು ಪ್ರಧಾನಿ ಹೇಳಿದರು. ಮೂಲಸೌಕರ್ಯದ ಮೇಲೆ ಹೂಡಿಕೆಯ ಪರಿಣಾಮವನ್ನು ಅವರು ವಿವರಿಸಿದರು. ಕೇಂದ್ರ ಸರ್ಕಾರವು ಕಳೆದ 9 ವರ್ಷಗಳಿಂದ ನಿರಂತರವಾಗಿ ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ರಾಜಸ್ಥಾನದಲ್ಲಿ ಹೆದ್ದಾರಿಗಳ ನಿರ್ಮಾಣಕ್ಕಾಗಿ 50,000 ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಈ ವರ್ಷದ ಬಜೆಟ್‌ನಲ್ಲಿ, ಮೂಲಸೌಕರ್ಯಕ್ಕಾಗಿ 2014 ರ ಹಂಚಿಕೆಗಿಂತ 5 ಪಟ್ಟು ಹೆಚ್ಚು ಅಂದರೆ, 10 ಲಕ್ಷ ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ ಎಂದು ಪ್ರಧಾನಿ ತಿಳಿಸಿದರು. ರಾಜಸ್ಥಾನದ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಹೂಡಿಕೆಗಳಿಂದ ಹೆಚ್ಚಿನ ಲಾಭವಾಗಲಿದೆ ಎಂದು ಅವರು ಒತ್ತಿ ಹೇಳಿದರು. ಆರ್ಥಿಕತೆಯ ಮೇಲೆ ಮೂಲಸೌಕರ್ಯದಲ್ಲಿನ ಹೂಡಿಕೆಯ ಪ್ರಯೋಜನಗಳನ್ನು ಒತ್ತಿಹೇಳಿದ ಪ್ರಧಾನಿಯವರು, ಇದು ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದರು.

ಹೆದ್ದಾರಿಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಆಪ್ಟಿಕಲ್ ಫೈಬರ್‌ಗಳು, ಡಿಜಿಟಲ್ ಸಂಪರ್ಕಗಳು, ಪಕ್ಕಾ ಮನೆಗಳು ಮತ್ತು ಕಾಲೇಜುಗಳ ನಿರ್ಮಾಣದಲ್ಲಿ ಹೂಡಿಕೆ ಮಾಡಿದಾಗ, ಸಮಾಜದ ಪ್ರತಿಯೊಂದು ವರ್ಗವೂ ಸಬಲೀಕರಣಗೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು.

ಮೂಲಸೌಕರ್ಯದ ಮತ್ತೊಂದು ಪ್ರಯೋಜನವನ್ನು ವಿವರಿಸಿದ ಪ್ರಧಾನಿ, ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿದೆ ಎಂದು ಹೇಳಿದರು. ದೆಹಲಿ – ದೌಸಾ – ಲಾಲ್ಸೋಟ್ ಹೆದ್ದಾರಿ ನಿರ್ಮಾಣದಿಂದ ದೆಹಲಿ ಮತ್ತು ಜೈಪುರ ನಡುವಿನ ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಸ್ಥಳೀಯ ರೈತರು ಮತ್ತು ಕುಶಲಕರ್ಮಿಗಳಿಗೆ ಅನುಕೂಲವಾಗುವ ಎಕ್ಸ್‌ಪ್ರೆಸ್‌ವೇ ಗ್ರಾಮೀಣ ಹಾತ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರದ ಹಲವು ಪ್ರದೇಶಗಳೊಂದಿಗೆ ರಾಜಸ್ಥಾನಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಸರಿಸ್ಕಾ, ಕೇವಲಾದೇವ್‌ ರಾಷ್ಟ್ರೀಯ ಉದ್ಯಾನವನ, ರಣಥಂಬೋರ್ ಮತ್ತು ಜೈಪುರದಂತಹ ಪ್ರವಾಸಿ ತಾಣಗಳು ಹೆದ್ದಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತವೆ ಎಂದು ಅವರು ಹೇಳಿದರು.

ಇತರ ಮೂರು ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಿ, ಅವುಗಳಲ್ಲಿ ಒಂದು ಎಕ್ಸ್‌ಪ್ರೆಸ್‌ವೇಯಿಂದ ಜೈಪುರಕ್ಕೆ ನೇರ ಸಂಪರ್ಕ ದೊರೆಯುತ್ತದೆ ಎಂದು ಹೇಳಿದರು. ಎರಡನೇ ಯೋಜನೆಯು ಅಳ್ವಾರ್ ಬಳಿಯ ಅಂಬಾಲಾ-ಕೋಟ್‌ಪುಟ್ಲಿ ಕಾರಿಡಾರ್‌ ಎಕ್ಸ್‌ಪ್ರೆಸ್‌ವೇ ಅನ್ನು ಸಂಪರ್ಕಿಸುತ್ತದೆ. ಇದು ಹರಿಯಾಣ, ಪಂಜಾಬ್, ಹಿಮಾಚಲ ಮತ್ತು ಜಮ್ಮು ಕಾಶ್ಮೀರದಿಂದ ಬರುವ ವಾಹನಗಳು ಪಂಜಾಬ್, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಲಾಲ್ಸೋಟ್ ಕರೋಲಿ ರಸ್ತೆಯು ಈ ಪ್ರದೇಶವನ್ನು ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಅವರು ಹೇಳಿದರು.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್ ರಾಜಸ್ಥಾನ ಮತ್ತು ದೇಶದ ಪ್ರಗತಿಯ ಎರಡು ಬಲವಾದ ಸ್ತಂಭಗಳಾಗಲಿವೆ ಮತ್ತು ಮುಂಬರುವ ದಿನಗಳಲ್ಲಿ ರಾಜಸ್ಥಾನ ಸೇರಿದಂತೆ ಈ ಸಂಪೂರ್ಣ ಪ್ರದೇಶದಲ್ಲಿ ಪರಿವರ್ತನೆ ತರಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಎರಡು ಯೋಜನೆಗಳು ಮುಂಬೈ-ದೆಹಲಿ ಆರ್ಥಿಕ ಕಾರಿಡಾರ್ ಅನ್ನು ಬಲಪಡಿಸುತ್ತವೆ ಹಾಗು ರಸ್ತೆ ಮತ್ತು ಸರಕು ಸಾಗಣೆ ಕಾರಿಡಾರ್ ರಾಜಸ್ಥಾನ, ಹರಿಯಾಣ ಮತ್ತು ಪಶ್ಚಿಮ ಭಾರತದ ಅನೇಕ ಪ್ರದೇಶಗಳನ್ನು ಬಂದರುಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು. ಇದು ಸರಕು ಸಾಗಣೆ, ಸಂಗ್ರಹಣೆ, ಸಾರಿಗೆ ಮತ್ತು ಇತರ ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್‌ಪ್ಲಾನ್‌ನಿಂದ ಚಾಲಿತವಾಗಿದೆ ಎಂದು ತಿಳಿಸಿದ ಪ್ರಧಾನಿ, ಆಪ್ಟಿಕಲ್ ಫೈಬರ್, ವಿದ್ಯುತ್ ಮಾರ್ಗಗಳು ಮತ್ತು ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ ಮತ್ತು ಉಳಿದ ಭೂಮಿಯನ್ನು ಸೌರಶಕ್ತಿ ಉತ್ಪಾದನೆ ಮತ್ತು ಗೋದಾಮುಗಳಿಗಾಗಿ ಬಳಸಲಾಗುವುದು ಎಂದು ತಿಳಿಸಿದರು. ಈ ಪ್ರಯತ್ನಗಳು ಭವಿಷ್ಯದಲ್ಲಿ ರಾಷ್ಟ್ರಕ್ಕೆ ಬಹಳಷ್ಟು ಹಣವನ್ನು ಉಳಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು.

‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ರಾಜಸ್ಥಾನ ಮತ್ತು ದೇಶಕ್ಕೆ ನಮ್ಮ ಮಂತ್ರವಾಗಿದೆ ಎಂದು ಪ್ರಧಾನಿ ಹೇಳಿದರು. ಸರ್ಕಾರದ ಸಂಕಲ್ಪವು ಶಕ್ತ, ಸಮರ್ಥ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವುದಾಗಿದೆ ಎಂದು ಅವರು ಹೇಳಿದರು.

ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಹಾಯಕ ಸಚಿವ ಶ್ರೀ ಕೈಲಾಶ್ ಚೌಧರಿ, ರಾಜಸ್ಥಾನ ಸರ್ಕಾರದ ಲೋಕೋಪಯೋಗಿ ಸಚಿವ ಶ್ರೀ ಭಜನ್ ಲಾಲ್ ಜಾಟವ್ ಮತ್ತು ಸಂಸದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ 246 ಕಿಮೀ ದೆಹಲಿ – ದೌಸಾ – ಲಾಲ್‌ಸೋಟ್ ವಿಭಾಗವನ್ನು 12,150 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದರಿಂದ ದೆಹಲಿಯಿಂದ ಜೈಪುರಕ್ಕೆ ಪ್ರಯಾಣದ ಸಮಯ 5 ಗಂಟೆಗಳಿಂದ ಸುಮಾರು 3.5 ಗಂಟೆಗಳವರೆಗೆ ಕಡಿಮೆಯಾಗುತ್ತದೆ ಮತ್ತು ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಇದು ಪ್ರಮುಖ ಉತ್ತೇಜನವನ್ನು ನೀಡುತ್ತದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 1,386 ಕಿಮೀ ಉದ್ದದ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿರುತ್ತದೆ. ಇದು ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣದ ದೂರವನ್ನು 1,424 ಕಿಮೀ ನಿಂದ 1,242 ಕಿಮೀಗೆ ಅಂದರೆ, ಶೇ.12 ರಷ್ಟು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು 24 ಗಂಟೆಗಳಿಂದ 12 ಗಂಟೆಗಳಿಗೆ ಅಂದರೆ ಶೇ.50 ರಷ್ಟು ಕಡಿಮೆ ಮಾಡುತ್ತದೆ. ಇದು ಆರು ರಾಜ್ಯಗಳಲ್ಲಿ ಅಂದರೆ, ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತದೆ ಮತ್ತು ಕೋಟಾ, ಇಂದೋರ್, ಜೈಪುರ, ಭೋಪಾಲ್, ವಡೋದರಾ ಮತ್ತು ಸೂರತ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಎಕ್ಸ್‌ಪ್ರೆಸ್‌ವೇಯು 93 ಪಿಎಂ ಗತಿ ಶಕ್ತಿ ಆರ್ಥಿಕ ಪ್ರದೇಶಗಳು, 13 ಬಂದರುಗಳು, 8 ಪ್ರಮುಖ ವಿಮಾನ ನಿಲ್ದಾಣಗಳು ಮತ್ತು 8 ಬಹು-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಜೊತೆಗೆ ಮುಂಬರುವ ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಾದ ಜೆವಾರ್ ವಿಮಾನ ನಿಲ್ದಾಣ, ನವಿ ಮುಂಬೈ ವಿಮಾನ ನಿಲ್ದಾಣ ಮತ್ತು ಜೆ ಎನ್‌ ಪಿ ಟಿ ಬಂದರುಗಳಿಗೆ ಸಹ ಸೇವೆ ಕಲ್ಪಿಸುತ್ತದೆ. ಎಕ್ಸ್‌ಪ್ರೆಸ್‌ವೇ ಎಲ್ಲ ಪಕ್ಕದ ಪ್ರದೇಶಗಳ ಅಭಿವೃದ್ಧಿಯಲ್ಲಿ ವೇಗವರ್ಧಕ ಪರಿಣಾಮವನ್ನು ಬೀರುತ್ತದೆ, ಹೀಗಾಗಿ ದೇಶದ ಆರ್ಥಿಕ ಪರಿವರ್ತನೆಗೆ ಪ್ರಮುಖ ಕೊಡುಗೆ ನೀಡುತ್ತದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 5,940 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ 247 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ 2000 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಬಂದಿಕುಯಿಯಿಂದ ಜೈಪುರದವರೆಗಿನ 67 ಕಿ.ಮೀ ಉದ್ದದ ನಾಲ್ಕು ಪಥಗಳ ಸ್ಪರ್ (ಪೂರಕ) ರಸ್ತೆ, ಕೊಟ್‌ಪುಟ್ಲಿಯಿಂದ ಬರೋದಾನೇವ್‌ ವರೆಗೆ ಆರು ಪಥಗಳ ಸ್ಪರ್ ರಸ್ತೆಯನ್ನು ಸುಮಾರು 3775 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಎರಡು ಪಥಗಳ ಲಾಲ್ಸೋಟ್-ಕರೋಲಿ ವಿಭಾಗದ ಸುಸಜ್ಜಿತ ರಸ್ತೆಯನ್ನು ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

.

*****