ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಗೌರವಿಸುವ ಸಮಾರಂಭದಲ್ಲಿ ಭಾಗವಹಿಸಲು ‘ನೋ ಯುವರ್ ಲೀಡರ್’ (ನಿಮ್ಮ ನಾಯಕನ ಬಗ್ಗೆ ತಿಳಿಯಿರಿ) ಕಾರ್ಯಕ್ರಮದಡಿ ಆಯ್ಕೆಯಾದ ಯುವಜನರೊಂದಿಗೆ ಸಂವಾದ ನಡೆಸಿದರು. ಈ ಸಂವಾದವು ಲೋಕ ಕಲ್ಯಾಣ ಮಾರ್ಗದ 7 ನೇ ಸಂಖ್ಯೆಯ ಅವರ ನಿವಾಸದಲ್ಲಿ ನಡೆಯಿತು.
ಪ್ರಧಾನಮಂತ್ರಿಯವರು ಯುವಜನರೊಂದಿಗೆ ಬಿಚ್ಚುಮನದ ಮತ್ತು ನಿಯಮ ಸಂಪ್ರದಾಯಗಳನ್ನು ಮೀರಿ ಸಂವಾದದಲ್ಲಿ ತೊಡಗಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನದ ವಿವಿಧ ಆಯಾಮಗಳು ಮತ್ತು ಅವರಿಂದ ನಾವು ಏನನ್ನು ಕಲಿಯಬಹುದು ಎಂಬುದರ ಕುರಿತು ಅವರು ಚರ್ಚಿಸಿದರು. ಐತಿಹಾಸಿಕ ವ್ಯಕ್ತಿಗಳ ಜೀವನಚರಿತ್ರೆಗಳನ್ನು ಓದಲು ಪ್ರಯತ್ನಿಸಬೇಕು ಮತ್ತು ಅವರು ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳು ಮತ್ತು ಈ ಸವಾಲುಗಳನ್ನು ಅವರು ಹೇಗೆ ಜಯಿಸಿದರು ಎಂಬುದನ್ನು ತಿಳಿಯಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.
ದೇಶದ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ಮತ್ತು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಕುಳಿತುಕೊಳ್ಳುವ ವಿಶಿಷ್ಟ ಅವಕಾಶವನ್ನು ಪಡೆದ ಬಗ್ಗೆ ಯುವಜನರು ತಮ್ಮ ಉತ್ಸಾಹವನ್ನು, ಸಂಭ್ರಮವನ್ನು ಹಂಚಿಕೊಂಡರು. ಈ ಕಾರ್ಯಕ್ರಮವು ದೇಶದ ಮೂಲೆ ಮೂಲೆಗಳಿಂದ ಬಂದ ಅನೇಕ ವ್ಯಕ್ತಿಗಳನ್ನು ನೋಡುವ ಮೂಲಕ ವಿವಿಧತೆಯಲ್ಲಿ ಏಕತೆ ಎಂದರೇನು ಎಂಬುದರ ತಿಳಿವಳಿಕೆಯನ್ನು ನೀಡಿದೆ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ರಾಷ್ಟ್ರೀಯ ಮಹಾನ್ ನಾಯಕರಿಗೆ ಪುಷ್ಪ ನಮನ ಸಲ್ಲಿಸಲು ಗಣ್ಯರನ್ನು ಮಾತ್ರ ಆಹ್ವಾನಿಸುತ್ತಿದ್ದ ಹಿಂದಿನ ಪದ್ಧತಿಯಿಂದ ಸ್ವಾಗತಾರ್ಹ ರೀತಿಯ ಬದಲಾವಣೆಯಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಸಂಸತ್ತಿನಲ್ಲಿ ನಡೆಯುವ ಪುಷ್ಪ ನಮನ ಸಮಾರಂಭದಲ್ಲಿ ಭಾಗವಹಿಸಲು ಈ 80 ಯುವಜನರನ್ನು ದೇಶಾದ್ಯಂತದಿಂದ ಆಯ್ಕೆ ಮಾಡಲಾಗಿದೆ. ದೇಶದ ಯುವಜನರಲ್ಲಿ ಅತ್ಯುನ್ನತ ರಾಷ್ಟ್ರೀಯ ಮಹಾನ್ ನಾಯಕರ ಜೀವನ ಮತ್ತು ಕೊಡುಗೆಗಳ ಬಗ್ಗೆ ಹೆಚ್ಚಿನ ಜ್ಞಾನ ಮತ್ತು ಜಾಗೃತಿಯನ್ನು ಮೂಡಿಸಲು ಸಂಸತ್ತಿನಲ್ಲಿ ನಡೆಯುತ್ತಿರುವ ಪುಷ್ಪ ನಮನ ಕಾರ್ಯಗಳನ್ನು ಪರಿಣಾಮಕಾರಿ ಮಾಧ್ಯಮವಾಗಿ ಬಳಸಲು ಪ್ರಾರಂಭಿಸಲಾದ ‘ನೋ ಯುವರ್ ಲೀಡರ್’ ಕಾರ್ಯಕ್ರಮದ ಅಡಿಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ದೀಕ್ಷಾ ಪೋರ್ಟಲ್ ಮತ್ತು MyGov ನಲ್ಲಿ ರಸಪ್ರಶ್ನೆಗಳನ್ನು ಒಳಗೊಂಡ ವಿಸ್ತಾರವಾದ, ವಸ್ತುನಿಷ್ಠ ಮತ್ತು ಅರ್ಹತೆ ಆಧಾರಿತ ಪ್ರಕ್ರಿಯೆಯ ಮೂಲಕ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾಷಣ / ಭಾಷಣ ಸ್ಪರ್ಧೆ; ಮತ್ತು ನೇತಾಜಿಯವರ ಬದುಕು ಮತ್ತು ಕೊಡುಗೆಯ ಕುರಿತಂತೆ ಆಯೋಜಿಸಲಾದ ಸ್ಪರ್ಧೆಯ ಮೂಲಕ ವಿಶ್ವವಿದ್ಯಾಲಯಗಳಿಂದ ಅವರ ಆಯ್ಕೆಯನ್ನು ಮಾಡಲಾಗಿದೆ. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಆಯೋಜಿಸಿದ್ದ ಪುಷ್ಪ ನಮನ ಸಮಾರಂಭದಲ್ಲಿ ನೇತಾಜಿ ಅವರ ಕೊಡುಗೆಗಳ ಬಗ್ಗೆ ಮಾತನಾಡಲು ಅವರಲ್ಲಿ 31 ಜನರಿಗೆ ಅವಕಾಶ ದೊರಕಿತು. ಅವರು ಐದು ಭಾಷೆಗಳಲ್ಲಿ ಅಂದರೆ ಹಿಂದಿ, ಇಂಗ್ಲಿಷ್, ಸಂಸ್ಕೃತ, ಮರಾಠಿ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಮಾತನಾಡಿದರು.
***
Had a lively interaction with a group of youngsters from across the country who were a part of the ‘Know Your Leader’ programme. Here are highlights from this programme. pic.twitter.com/0MZRZ5L5lx
— Narendra Modi (@narendramodi) January 24, 2023