ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಸಂವಿಧಾನವು ಜನವರಿ ತಿಂಗಳಲ್ಲಿ ಜಾರಿಗೆ ಬಂದಿತು ಮತ್ತು ಸ್ವತಂತ್ರ ಭಾರತದಲ್ಲಿ ನಾಗರಿಕರ ಹಕ್ಕುಗಳನ್ನು ಖಾತ್ರಿಪಡಿಸಲಾಯಿತು ಎಂದು ಸ್ಮರಿಸಿದರು ಹಾಗೂ ಇಂದು ಈ ಪವಿತ್ರ ಜನವರಿ ಮಾಸದಲ್ಲಿ ಕರ್ನಾಟಕ ಸರ್ಕಾರವು ಸಾಮಾಜಿಕ ನ್ಯಾಯದ ಕಡೆಗೆ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಒತ್ತಿ ಹೇಳಿದರು.
ಮೊದಲ ಬಾರಿಗೆ ಐವತ್ತು ಸಾವಿರಕ್ಕೂ ಹೆಚ್ಚು ಬಂಜಾರ ಸಮುದಾಯದ ಕುಟುಂಬಗಳು ಹಕ್ಕುಪತ್ರಗಳನ್ನು ಪಡೆದ ಈ ಮಹತ್ವದ ಸಂದರ್ಭವನ್ನು ಉಲ್ಲೇಖಿಸಿ, ಇದು ತಾಂಡಾಗಳಲ್ಲಿ ವಾಸಿಸುತ್ತಿರುವ ಅಂತಹ ಕುಟುಂಬಗಳ ಪುತ್ರರು ಮತ್ತು ಪುತ್ರಿಯರಿಗೆ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಬಂಜಾರ ಸಮುದಾಯದ ನಾಗರಿಕರನ್ನು ಅಭಿನಂದಿಸಿದರು.
ಮೂರು ಸಾವಿರಕ್ಕೂ ಹೆಚ್ಚು ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಕರ್ನಾಟಕ ಸರ್ಕಾರದ ನಿರ್ಣಾಯಕ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಪ್ರಧಾನಮಂತ್ರಿಯವರು, ಈ ಮಹತ್ವದ ಕ್ರಮಕ್ಕಾಗಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸಿದರು.
ಈ ಪ್ರದೇಶ ಮತ್ತು ಬಂಜಾರ ಸಮುದಾಯದೊಂದಿಗಿನ ತಮ್ಮ ಸಂಪರ್ಕವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಈ ಸಮುದಾಯದ ಜನರು ರಾಷ್ಟ್ರೀಯ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದರು. 1994 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಾವು ಭಾಗವಹಿಸಿದ್ದ ರ‍್ಯಾಲಿಯಲ್ಲಿ ಲಕ್ಷಾಂತರ ಬಂಜಾರ ಕುಟುಂಬಗಳು ಭಾಗವಹಿಸಿದ್ದ ಅವಿಸ್ಮರಣೀಯ ಕ್ಷಣವನ್ನು ಅವರು ಸ್ಮರಿಸಿದರು ಮತ್ತು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿದ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ ತಮ್ಮ ಮೇಲೆ ಇದೆ ಎಂದರು.
ಭಗವಾನ್ ಬಸವೇಶ್ವರರು ತೋರಿಸಿದ ಉತ್ತಮ ಆಡಳಿತ ಮತ್ತು ಸಾಮರಸ್ಯದ ಹಾದಿಯನ್ನು ಡಬಲ್ ಇಂಜಿನ್ ಸರ್ಕಾರ ಅನುಸರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಗವಾನ್ ಬಸವೇಶ್ವರರ ಆದರ್ಶಗಳಿಂದ ಪ್ರೇರಿತರಾಗಿ ನಾವು ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ ಎಂದರು. ಅನುಭವ ಮಂಟಪದಂತಹ ವೇದಿಕೆಗಳ ಮೂಲಕ ಭಗವಾನ್ ಬಸವೇಶ್ವರರು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಮಾದರಿಯನ್ನು ಹೇಗೆ ನೀಡಿದರು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿದರು. ಎಲ್ಲರ ಸಬಲೀಕರಣಕ್ಕಾಗಿ ಎಲ್ಲ ರೀತಿಯ ತಾರತಮ್ಯಗಳನ್ನು ಮೀರಿ ನಿಲ್ಲುವ ಮಾರ್ಗವನ್ನು ಅವರು ತೋರಿಸಿದರು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ಬಂಜಾರ ಸಮುದಾಯವು ಕಠಿಣ ದಿನಗಳನ್ನು ಕಂಡಿದೆ, ಆದರೆ ಈಗ ಅವರು ಸುಲಭವಾಗಿ ಮತ್ತು ಘನತೆಯಿಂದ ಬದುಕುವ ಸಮಯ ಬಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಂಜಾರ ಸಮುದಾಯದ ಯುವಕರಿಗೆ ವಿದ್ಯಾರ್ಥಿವೇತನ ಮತ್ತು ಜೀವನೋಪಾಯಕ್ಕೆ ಸಹಾಯ, ಪಕ್ಕಾ ಮನೆಗಳಂತಹ ಕ್ರಮಗಳ ಬಗ್ಗೆ ಅವರು ಮಾತನಾಡಿದರು. ಅಲೆಮಾರಿ ಜೀವನಶೈಲಿಯಿಂದ ಉದ್ಭವಿಸುವ ಸಮಸ್ಯೆಗಳನ್ನು ಸಹ ಪರಿಹರಿಸಲಾಗುತ್ತಿದೆ ಎಂದು ಅವರು ಹೇಳಿದರು. ಇಂದು ಕೈಗೊಂಡ ಕ್ರಮಗಳನ್ನು 1993ರಲ್ಲಿ ಶಿಫಾರಸು ಮಾಡಲಾಗಿತ್ತು, ಆದರೆ ವೋಟ್ ಬ್ಯಾಂಕ್ ರಾಜಕೀಯದಲ್ಲಿ ಇದು ವಿಳಂಬವಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. “ಆದರೆ ಈಗ ಆ ಅಸಡ್ಡೆಯ ವಾತಾವರಣ ಬದಲಾಗಿದೆ” ಎಂದು ಪ್ರಧಾನಮಂತ್ರಿ ತಿಳಿಸಿದರು.
“ಚಿಂತಿಸಬೇಡಿ! ನಿಮ್ಮ ಒಬ್ಬ ಮಗ ದೆಹಲಿಯಲ್ಲಿ ಗಮನಿಸುತ್ತಿದ್ದಾನೆ” ಎಂದು ಬಂಜಾರ ಸಮುದಾಯದ ತಾಯಂದಿರಿಗೆ ಪ್ರಧಾನಮಂತ್ರಿಯವರು ಮನವಿ ಮಾಡಿದರು. ತಾಂಡಾ ಜನವಸತಿ ಪ್ರದೇಶಗಳನ್ನು ಗ್ರಾಮಗಳು ಎಂದು ಗುರುತಿಸಿದ ನಂತರ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಉತ್ತೇಜನ ದೊರಕುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಹಕ್ಕುಪತ್ರಗಳನ್ನು ಪಡೆದ ನಂತರ ಕುಟುಂಬಗಳು ಮುಕ್ತವಾಗಿ ಬದುಕುತ್ತವೆ ಮತ್ತು ಅವರು ಬ್ಯಾಂಕುಗಳಿಂದ ಸಾಲ ಪಡೆಯುವುದು ತುಂಬಾ ಸುಲಭವಾಗುತ್ತದೆ ಎಂದು ಅವರು ಉಲ್ಲೇಖಿಸಿದರು. ಕೇಂದ್ರ ಸರ್ಕಾರವು ಸ್ವಾಮಿತ್ವ ಯೋಜನೆಯ ಮೂಲಕ ದೇಶಾದ್ಯಂತ ಗ್ರಾಮೀಣ ವಸತಿಗಳಿಗೆ ಸ್ವತ್ತಿನ ಕಾರ್ಡ್ ಗಳನ್ನು ವಿತರಿಸುತ್ತಿದೆ ಮತ್ತು ಈಗ ಕರ್ನಾಟಕದ ಬಂಜಾರ ಸಮುದಾಯವೂ ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಧಾನಮಂತ್ರಿ ತಿಳಿಸಿದರು. ಪಕ್ಕಾ ಮನೆಗಳು, ಶೌಚಾಲಯಗಳು, ವಿದ್ಯುತ್ ಸಂಪರ್ಕಗಳು, ಕೊಳವೆ ನೀರಿನ ಸಂಪರ್ಕಗಳು ಮತ್ತು ಅನಿಲ ಸಂಪರ್ಕಗಳನ್ನು ನೀಡುವ ಪಿಎಂ ವಸತಿ ಯೋಜನೆಯ ಬಗ್ಗೆ ಪ್ರಧಾನಮಂತ್ರಿ ಉಲ್ಲೇಖಿಸಿದರು ಮತ್ತು ಬಂಜಾರಾ ಸಮುದಾಯವು ಈಗ ಡಬಲ್ ಎಂಜಿನ್ ಸರ್ಕಾರದ ಈ ಎಲ್ಲ ಕಲ್ಯಾಣ ಯೋಜನೆಗಳನ್ನು ಪಡೆಯಬಹುದು ಎಂದು ಹೇಳಿದರು. “ಕೊಳೆಗೇರಿಗಳಲ್ಲಿ ವಾಸಿಸುವುದು ಈಗ ಗತಕಾಲದ ವಿಷಯವಾಗಿದೆ”, ಎಂದು ಪ್ರಧಾನಮಂತ್ರಿ ಹೇಳಿದರು.
ಕರ್ನಾಟಕ ಸರ್ಕಾರವು ಬಂಜಾರ ಸಮುದಾಯಕ್ಕೆ ಸೃಷ್ಟಿಸುತ್ತಿರುವ ಉದ್ಯೋಗಾವಕಾಶಗಳ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಅದು ಅರಣ್ಯ ಉತ್ಪನ್ನಗಳಾಗಿರಬಹುದು, ಒಣ ಮರ, ಜೇನುತುಪ್ಪ, ಹಣ್ಣುಗಳು ಅಥವಾ ಅಂತಹ ಇತರ ಉತ್ಪನ್ನಗಳಾಗಿರಬಹುದು, ಇವು ಈಗ ಆದಾಯದ ಮೂಲವಾಗುತ್ತಿವೆ. ಹಿಂದಿನ ಸರ್ಕಾರಗಳು ಬೆರಳೆಣಿಕೆಯಷ್ಟು ಅರಣ್ಯ ಉತ್ಪನ್ನಗಳಿಗೆ ಮಾತ್ರ ಎಂಎಸ್ಪಿಗಳನ್ನು ನೀಡುತ್ತಿದ್ದವು, ಆದರೆ ಇಂದು ಆ ಸಂಖ್ಯೆ 90 ಕ್ಕೂ ಹೆಚ್ಚು ಅರಣ್ಯ ಉತ್ಪನ್ನಗಳಿಗೆ ಹೆಚ್ಚಿದೆ ಮತ್ತು ಈ ನಿಟ್ಟಿನಲ್ಲಿ ಬಂಜಾರ ಸಮುದಾಯಕ್ಕೆ ಅನುಕೂಲವಾಗುವ ಕರ್ನಾಟಕ ಸರ್ಕಾರದ ನಿರ್ಧಾರಗಳನ್ನು ಅವರು ಪುನರುಚ್ಚರಿಸಿದರು.
ಸ್ವಾತಂತ್ರ್ಯದ ಹಲವು ದಶಕಗಳ ನಂತರವೂ ಜನಸಂಖ್ಯೆಯ ಹೆಚ್ಚಿನ ಭಾಗವು ಅಭಿವೃದ್ಧಿಯ ಫಲಗಳಿಂದ ವಂಚಿತವಾಗಿದೆ ಮತ್ತು ಸರ್ಕಾರದ ನೆರವಿನ ವ್ಯಾಪ್ತಿಯಿಂದ ಹೊರಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದಲಿತರು, ವಂಚಿತರು, ಹಿಂದುಳಿದವರು, ಬುಡಕಟ್ಟು ಜನರು, ದಿವ್ಯಾಂಗರು, ಮಕ್ಕಳು ಮತ್ತು ಮಹಿಳೆಯರು ಮೊದಲ ಬಾರಿಗೆ ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ಅವರು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಮತ್ತು ಅವುಗಳನ್ನು ತ್ವರಿತವಾಗಿ ಪಡೆಯುತ್ತಿದ್ದಾರೆ. “ನಾವು ಜನರ ಸಬಲೀಕರಣಕ್ಕಾಗಿ ಸ್ಪಷ್ಟ ಕಾರ್ಯತಂತ್ರದೊಂದಿಗೆ ಶ್ರಮಿಸುತ್ತಿದ್ದೇವೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಆಯುಷ್ಮಾನ್ ಭಾರತ್ ಮತ್ತು ಉಚಿತ ಪಡಿತರದಂತಹ ಯೋಜನೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, “ಮೂಲಭೂತ ಅಗತ್ಯಗಳನ್ನು ಪೂರೈಸಿದಾಗ ಮತ್ತು ಘನತೆಯನ್ನು ಮರುಸ್ಥಾಪಿಸಿದಾಗ, ಜನರು ದೈನಂದಿನ ಅನಿಶ್ಚಿತತೆಗಳನ್ನು ಮೀರಿ ಜೀವನ ಮಟ್ಟವನ್ನು ಹೆಚ್ಚಿಸಲು ಶ್ರಮಿಸುವುದರಿಂದ ಹೊಸ ಆಕಾಂಕ್ಷೆಗಳು ಹುಟ್ಟುತ್ತವೆ” ಎಂದು ಹೇಳಿದರು. ಜನ್ ಧನ್ ಖಾತೆಗಳು ಈ ನಿರ್ಲಕ್ಷಿತ ವರ್ಗವನ್ನು ಆರ್ಥಿಕ ಮುಖ್ಯವಾಹಿನಿಗೆ ತಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂತೆಯೇ, ಮುದ್ರಾ ಯೋಜನೆಯು ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಮೇಲಾಧಾರವಿಲ್ಲದೆ ಸುಮಾರು 20 ಕೋಟಿ ಸಾಲಗಳನ್ನು ಖಾತ್ರಿಪಡಿಸಿದ್ದು, ಇದು ಈ ವರ್ಗಗಳಿಂದ ಹೊಸ ಉದ್ಯಮಿಗಳ ಹುಟ್ಟಿಗೆ ನಾಂದಿ ಹಾಡಿದೆ. ಶೇ.70ರಷ್ಟು ಮುದ್ರಾ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಸ್ವನಿಧಿ ಯೋಜನೆಯಲ್ಲಿ ಮೇಲಾಧಾರ ರಹಿತ ಸಾಲ ಪಡೆಯುತ್ತಿದ್ದಾರೆ. “ನಾವು ‘ಅವಕಾಶ’ದ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ, ಅಂದರೆ ಹೊಸ ಅವಕಾಶಗಳ ಸೃಷ್ಟಿ ಮತ್ತು ವಂಚಿತ ವರ್ಗಗಳ ಯುವಕರಿಗೆ ಹೊಸ ವಿಶ್ವಾಸವನ್ನು ನೀಡುತ್ತಿದ್ದೇವೆ”, ಎಂದು ಪ್ರಧಾನಮಂತ್ರಿ ಹೇಳಿದರು.
ಸಮಾಜದಲ್ಲಿ ಮಹಿಳೆಯರ ಕಲ್ಯಾಣದ ಬಗ್ಗೆ ಪ್ರಸ್ತುತ ಸರ್ಕಾರದ ಸಂವೇದನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅವರಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದರು. ಬುಡಕಟ್ಟು ಸಮುದಾಯಗಳ ಕಲ್ಯಾಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬುಡಕಟ್ಟು ಸಮಾಜದ ಹೆಮ್ಮೆಯ ಬಗ್ಗೆ ರಾಷ್ಟ್ರಕ್ಕೆ ಅರಿವು ಮೂಡಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದರು. ದಿವ್ಯಾಂಗ ಸಮುದಾಯದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕಳೆದ ಎಂಟು ವರ್ಷಗಳಲ್ಲಿ ಕೈಗೊಂಡ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದರು ಮತ್ತು ನಿರ್ಲಕ್ಷಿತ ಸಮುದಾಯಗಳ ಸ್ನೇಹಿತರು ದೇಶದ ಹಲವಾರು ಸಾಂವಿಧಾನಿಕ ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ, ಅಖಿಲ ಭಾರತ ವೈದ್ಯಕೀಯ ಕೋಟಾದಲ್ಲಿ ಒಬಿಸಿ ವರ್ಗಕ್ಕೆ ಮೀಸಲಾತಿ, ಕೇಂದ್ರ ಸರ್ಕಾರದ ವೃಂದ ಸಿ ಮತ್ತು ವೃಂದ ಡಿ ನಲ್ಲಿ ಸಂದರ್ಶನದ ಕಡ್ಡಾಯವನ್ನು ರದ್ದುಪಡಿಸಿದ್ದು ಹಾಗೂ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿಷಯಗಳನ್ನು ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಕಲಿಸಲು ಅವಕಾಶ ಕಲ್ಪಿಸಿದ್ದು ಪ್ರಸ್ತುತ ಸರ್ಕಾರ ಎಂದು ಅವರು ಹೇಳಿದರು. ಈ ಕ್ರಮಗಳ ಅತಿದೊಡ್ಡ ಫಲಾನುಭವಿಗಳು ನಮ್ಮ ಹಳ್ಳಿಗಳ ಯುವಕರು ಮತ್ತು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಬಡ ಕುಟುಂಬಗಳು ಎಂದು ಅವರು ಒತ್ತಿಹೇಳಿದರು.
ಈ ಸರ್ಕಾರವು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗಾಗಿ ವಿಶೇಷ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. “ಈ ಕುಟುಂಬಗಳನ್ನು ಪ್ರತಿಯೊಂದು ಕಲ್ಯಾಣ ಯೋಜನೆಯೊಂದಿಗೆ ಸಂಪರ್ಕಿಸಲು ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ” ಎಂದು ಪ್ರಧಾನಮಂತ್ರಿ ತಿಳಿಸಿದರು.
ಭಾರತದಲ್ಲಿ ವಾಸಿಸುವ ಪ್ರತಿಯೊಂದು ಸಮಾಜದ ಸಂಪ್ರದಾಯ, ಸಂಸ್ಕೃತಿ, ಆಹಾರ ಮತ್ತು ಉಡುಗೆ ತೊಡುಗೆಗಳನ್ನು ನಮ್ಮ ಶಕ್ತಿ ಎಂದು ಡಬಲ್ ಇಂಜಿನ್ ಸರ್ಕಾರ ಪರಿಗಣಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಶಕ್ತಿಯನ್ನು ಉಳಿಸಲು, ಅದನ್ನು ಸಂರಕ್ಷಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದು ಹೇಳಿದರು. “ಸುಹಾಲಿ, ಲಂಬಾಣಿ, ಲಂಬಾಡಾ, ಲಬಾನಾ ಮತ್ತು ಬಾಜಿಗಾರ್, ಎಂಬ ಏನೇ ಹೆಸರಿನಿಂದ ಕರೆದರೂ, ನೀವು ಸಾಂಸ್ಕೃತಿಕವಾಗಿ ಶ್ರೀಮಂತರು ಮತ್ತು ರೋಮಾಂಚಕ ವ್ಯಕ್ತಿಗಳು, ದೇಶದ ಹೆಮ್ಮೆ, ದೇಶದ ಶಕ್ತಿ. ನಿಮಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಕೊಡುಗೆ ಇದೆ”, ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವನ್ನು ಪ್ರತಿಪಾದಿಸಿದರು .
ಕೊನೆಯಲ್ಲಿ ಪ್ರಧಾನಮಂತ್ರಿಯವರು ಗುಜರಾತ್ ಮತ್ತು ರಾಜಸ್ತಾನದ ಬಂಜಾರ ಸಮುದಾಯಗಳು ಮತ್ತು ಜಲಕಾಯಗಳ ಸೃಷ್ಟಿಯಲ್ಲಿ ಲಖಾ ಬಂಜಾರರ ಪಾತ್ರವನ್ನು ಸ್ಮರಿಸಿದರು. ಅದೇ ಬಂಜಾರ ಸಮುದಾಯಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಹಾಯಕ ಸಚಿವ ಶ್ರೀ ಭಗವಂತ ಖೂಬಾ ಮತ್ತು ಕರ್ನಾಟಕ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಸರ್ಕಾರದ ಯೋಜನೆಗಳನ್ನು ಶೇ.100 ರಷ್ಟು ಪೂರ್ಣಗೊಳಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಮತ್ತು ವಿಜಯಪುರ ಐದು ಜಿಲ್ಲೆಗಳಲ್ಲಿ ಸುಮಾರು 1475 ದಾಖಲೆರಹಿತ ಜನವಸತಿಗಳನ್ನು ಹೊಸ ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ್ ಗ್ರಾಮದಲ್ಲಿ ಪ್ರಧಾನಮಂತ್ರಿಯವರು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ಎಸ್ಸಿ, ಎಸ್ಟಿ ಮತ್ತು ಒಬಿಸಿಯ ಸಮಾಜದ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳಿಗೆ ಸೇರಿದ ಐವತ್ತು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ, ಅವರ ಭೂಮಿಗೆ ಸರ್ಕಾರದಿಂದ ಔಪಚಾರಿಕ ಮಾನ್ಯತೆ ನೀಡುವ ಒಂದು ಕ್ರಮವಾಗಿದ್ದು, ಕುಡಿಯುವ ನೀರು, ವಿದ್ಯುತ್, ರಸ್ತೆಗಳು ಮುಂತಾದ ಸರ್ಕಾರಿ ಸೇವೆಗಳನ್ನು ಪಡೆಯಲು ಅವರನ್ನು ಅರ್ಹರನ್ನಾಗಿ ಇದು ಮಾಡುತ್ತದೆ.
Speaking at a programme in Kalaburagi, Karnataka where title deeds are being distributed to Banjara community. https://t.co/25R1bFOT3V
— Narendra Modi (@narendramodi) January 19, 2023
A historic day for the Banjara community in Karnataka. pic.twitter.com/HLnc9EPYCG
— PMO India (@PMOIndia) January 19, 2023
Inspired by the ideals of Bhagwaan Basaveshwara, we are working for welfare of all. pic.twitter.com/evt4K6TBhH
— PMO India (@PMOIndia) January 19, 2023
We are working with a clear strategy for empowering the people. pic.twitter.com/3jbP7vYVjm
— PMO India (@PMOIndia) January 19, 2023
Jan Dhan Yojana has revolutionised financial inclusion. pic.twitter.com/ABU8KqemmH
— PMO India (@PMOIndia) January 19, 2023
Our government is devoted to welfare of every section of society. pic.twitter.com/BoI98RWn0H
— PMO India (@PMOIndia) January 19, 2023
Thank you Yadgiri for the very warm welcome! pic.twitter.com/1z3nuIQn7I
— Narendra Modi (@narendramodi) January 19, 2023
Culturally and historically, the month of January is an important one. Today, several people belonging to the Banjara community will celebrate the festival of development. It is a big day for them… pic.twitter.com/XE9FYcNxeX
— Narendra Modi (@narendramodi) January 19, 2023
Here is how our Government has worked to address the inconveniences faced by the Banjara community. pic.twitter.com/RlEnCgU6hR
— Narendra Modi (@narendramodi) January 19, 2023
ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಜೀವನವನ್ನು ಹೇಗೆ ಸುಧಾರಿಸಿದೆ ಎಂಬುದನ್ನು ಕಾಣಬಹುದು. pic.twitter.com/CUKtkLTHCO
— Narendra Modi (@narendramodi) January 19, 2023