ಕೋಲ್ಕೊತಾದ ಜೋಕಾದಲ್ಲಿರುವ ರಾಷ್ಟ್ರೀಯ ಕುಡಿಯುವ ನೀರು, ನೈರ್ಮಲ್ಯೀಕರಣ ಮತ್ತು ಗುಣಮಟ್ಟ ಕೇಂದ್ರವನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ರಾಷ್ಟ್ರೀಯ ನೀರು ಮತ್ತು ನೈರ್ಮಲ್ಯೀಕರಣ (ಎಸ್ ಪಿಎಂ-ನಿವಾಸ್) ಸಂಸ್ಥೆಯಾಗಿ ಪೂರ್ವಾನ್ವಯವಾಗಿ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕೊತಾ ನಗರದ ಜೋಕಾದ ಡೈಮಂಡ್ ಹಾರ್ಬರ್ ರಸ್ತೆಯಲ್ಲಿ 8.72 ಎಕರೆ ವಿಶಾಲ ಪ್ರದೇಶದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ತರಬೇತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್, ಕುಡಿಯುವ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಮುಖ ಸಂಸ್ಥೆಯಾಗಿ ಇದನ್ನು ರೂಪಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಮತ್ತು ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ತೊಡಗಿರುವ ಮುಂಚೂಣಿ ನೌಕರ ಪಡೆಗಳಿಗೆ ಮಾತ್ರವಲ್ಲದೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೂ ಇಂತಹ ಸಾಮರ್ಥ್ಯಗಳನ್ನು ಕಲ್ಪಿಸಲಾಗಿದೆ. ಅದರಂತೆ, ತರಬೇತಿ ಮೂಲಸೌಕರ್ಯ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ, ವಸತಿ ಸಂಕೀರ್ಣ ಸೇರಿದಂತೆ ಸೂಕ್ತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯಲ್ಲಿ ತರಬೇತಿಗೆ ಅನುಕೂಲವಾಗುವಂತೆ ನೀರಿನ ನೈರ್ಮಲ್ಯ ಮತ್ತು ಸ್ವಚ್ಛತೆ ತಂತ್ರಜ್ಞಾನಗಳ ಕಾರ್ಯ ನಿರ್ವಹಣೆ ಮತ್ತು ಚಿಕಣಿ ಮಾದರಿಗಳನ್ನು ಸಹ ಸ್ಥಾಪಿಸಲಾಗಿದೆ.
ಪಶ್ಚಿಮ ಬಂಗಾಳ ಮಣ್ಣಿನ ಮಗ ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ಮುಂಚೂಣಿಯಲ್ಲಿದ್ದ, ಕೈಗಾರಿಕೀಕರಣಕ್ಕೆ ಸ್ಫೂರ್ತಿದಾಯಕರಾಗಿದ್ದ, ಡಾ. ಶ್ಯಾಂಪ್ರಸಾದ್ ಮುಖರ್ಜಿ ಅವರು ಪ್ರಖ್ಯಾತ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರಾಗಿ, ಕಲ್ಕತ್ತಾದ ವಿಶ್ವವಿದ್ಯಾಲಯದ ಕಿರಿಯ ಉಪಕುಲಪತಿಯಾಗಿದ್ದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೆಸರನ್ನು ಸಂಸ್ಥೆಗೆ ಇಡುವುದರಿಂದ ಅವರ ಪ್ರಾಮಾಣಿಕತೆ, ಸಮಗ್ರತೆ ಮತ್ತು ಸಂಸ್ಥೆಯ ಕೆಲಸದ ನೀತಿಗಳ ಬದ್ಧತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮತ್ತು ಗೌರವಿಸಲು ಎಲ್ಲಾ ಪಾಲುದಾರರನ್ನು ಪ್ರೇರೇಪಿಸುತ್ತದೆ. ಈ ಸಂಸ್ಥೆಯನ್ನು 2022 ಡಿಸೆಂಬರ್‌ನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
*****