Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ವಿಶ್ವದ ಅತಿ ಉದ್ದದ ರಿವರ್ ಕ್ರೂಸ್-ಎಂ.ವಿ. ಗಂಗಾ ವಿಲಾಸಕ್ಕೆ ಹಸಿರು ನಿಶಾನೆ ತೋರಲಿರುವ ಪ್ರಧಾನಮಂತ್ರಿಯವರು ಜನವರಿ 13ರಂದು ವಾರಾಣಸಿಯಲ್ಲಿ ಟೆಂಟ್ ಸಿಟಿಯನ್ನು ಉದ್ಘಾಟಿಸಲಿದ್ದಾರೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಶ್ವದ ಅತಿ ಉದ್ದದ ರಿವರ್ ಕ್ರೂಸ್-ಎಂ.ವಿ. ಗಂಗಾ ವಿಲಾಸಕ್ಕೆ ಹಸಿರು ನಿಶಾನೆ ತೋರಲಿದ್ದು, ಜನವರಿ 13ರಂದು ಬೆಳಿಗ್ಗೆ 10.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಾರಾಣಸಿಯಲ್ಲಿ ಟೆಂಟ್ ಸಿಟಿಯನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು 1000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಇತರ ಹಲವಾರು ಒಳನಾಡು ಜಲಸಾರಿಗೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಕೂಡಾ ನೆರವೇರಿಸಲಿದ್ದಾರೆ.

ಎಂ.ವಿ. ಗಂಗಾ ವಿಲಾಸ:
ಎಂ.ವಿ. ಗಂಗಾ ವಿಲಾಸ್ ಉತ್ತರ ಪ್ರದೇಶದ ವಾರಣಾಸಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಇದು 51 ದಿನಗಳಲ್ಲಿ ಸುಮಾರು 3,200 ಕಿ.ಮೀ ಪ್ರಯಾಣಿಸಿ ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ. ಇದು ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳಲ್ಲಿ ಈ ಹಡಗು ಹಾದುಹೋಗುತ್ತದೆ. ಎಂ.ವಿ. ಗಂಗಾ ವಿಲಾಸ್ ಮೂರು ಡೆಕ್ ಗಳು, 18 ಸೂಟ್ ಗಳನ್ನು ಹೊಂದಿದ್ದು, 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್ ನ 32 ಪ್ರವಾಸಿಗರು ಈ ಪ್ರಯಾಣದ ಸಂಪೂರ್ಣ ಅನುಭವಕ್ಕೆ ಸಾಕ್ಷಿಯಾಗಲಿದ್ದಾರೆ.

ದೇಶದ ಉತ್ಕೃಷ್ಟತೆಯನ್ನು ಹೊರಹೊಮ್ಮಿಸಲು, ಎಂ.ವಿ. ಗಂಗಾ ವಿಲಾಸ ಕ್ರೂಸ್ ಅನ್ನು ಜಗತ್ತಿಗೆ ಪ್ರದರ್ಶಿಸಲು ಅಣಿಯಾಗಿಸಲಾಗಿದೆ. ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಬಿಹಾರದ ಪಾಟ್ನಾ, ಜಾರ್ಖಂಡ್ ನ ಸಾಹಿಬ್ಗಂಜ್, ಪಶ್ಚಿಮ ಬಂಗಾಳದ ಕೋಲ್ಕತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳವರೆಗೆ ಈ ಕ್ರೂಸ್ ಅನ್ನು ಆಯೋಜಿಸಲಾಗಿದೆ. ಈ ಪ್ರಯಾಣವು ಪ್ರವಾಸಿಗರಿಗೆ ಅಪ್ರತಿಮ ಅನುಭವದ ಪ್ರಯಾಣದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಐತಿಹಾಸಕ ಮತ್ತು ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ.

ರಿವರ್ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಧಾನಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿ, ಈ ಸೇವೆಯ ಪ್ರಾರಂಭದೊಂದಿಗೆ ರಿವರ್ ಕ್ರೂಸ್ ನ ಅಗಾಧವಾದ ಇದುವರೆವಿಗೂ ಬೆಳಕಿಗೆ ಬಾರದ, ಬಳಕೆಯಾಗದ ಸಾಮರ್ಥ್ಯವು ತೆರೆದುಕೊಳ್ಳಲಿದೆ. ಇದು ಭಾರತಕ್ಕೆ ರಿವರ್ ಕ್ರೂಸ್ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

ವಾರಣಾಸಿಯಲ್ಲಿ ಟೆಂಟ್ ಸಿಟಿ:
ವಾರಣಾಸಿಯ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಗಂಗಾ ನದಿಯ ದಡದಲ್ಲಿ ಟೆಂಟ್ ಸಿಟಿಯನ್ನು ಸ್ಥಾಪಿಸಲು ಪರಿಕಲ್ಪನೆ ಮಾಡಲಾಗಿದೆ. ಈ ಯೋಜನೆಯನ್ನು ನಗರ ಘಟ್ಟಗಳ ಎದುರು ಅಭಿವೃದ್ಧಿಪಡಿಸಲಾಗಿದೆ. ವಿಶೇಷವಾಗಿ ಈ ಯೋಜನೆಯು ಕಾಶಿ ವಿಶ್ವನಾಥ ಧಾಮ ಉದ್ಘಾಟನೆಯ ನಂತರ  ವಾರಣಾಸಿಯಲ್ಲಿ ಹೆಚ್ಚುತ್ತಿರುವ ಪ್ರವಾಸಿಗರಿಗೆ ವಸತಿ ಸೌಲಭ್ಯಗಳನ್ನು ಒದಗಿಸಿ ಅದನ್ನು ಪೂರೈಸುತ್ತದೆ. ಇದನ್ನು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರವು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿದೆ. ಪ್ರವಾಸಿಗರು ಸುತ್ತಮುತ್ತಲಿನ ವಿವಿಧ ಘಾಟ್ ಗಳಿಂದ ದೋಣಿಗಳ ಮೂಲಕ ಟೆಂಟ್ ಸಿಟಿಯನ್ನು ತಲುಪುತ್ತಾರೆ. ಟೆಂಟ್ ಸಿಟಿ ಪ್ರತಿ ವರ್ಷ ಅಕ್ಟೋಬರ್ ನಿಂದ ಜೂನ್ ವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ಮಳೆಗಾಲದಲ್ಲಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗುವುದರಿಂದ ಮೂರು ತಿಂಗಳವರೆಗೆ ಟೆಂಟ್ ಸಿಟಿಯನ್ನು ತೆಗೆದುಹಾಕಲಾಗುತ್ತದೆ.

ಒಳನಾಡು ಜಲಸಾರಿಗೆ ಯೋಜನೆಗಳು:
ಪ್ರಧಾನಮಂತ್ರಿಯವರು ಪಶ್ಚಿಮ ಬಂಗಾಳದಲ್ಲಿ ಹಲ್ದಿಯಾ ಬಹು-ಮಾದರಿ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಜಲಮಾರ್ಗ ವಿಕಾಸ್ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಹಲ್ದಿಯಾ ಮಲ್ಟಿ ಮಾಡಲ್ ಟರ್ಮಿನಲ್ ವಾರ್ಷಿಕವಾಗಿ ಸುಮಾರು 3 ಮಿಲಿಯನ್ ಮೆಟ್ರಿಕ್ ಟನ್ (ಎಂ.ಎಂ.ಟಿ.ಪಿ.ಎ) ಗಿಂತ ಹೆಚ್ಚು ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೊಂದಿದೆ. ಬರ್ತ್ ಗಳನ್ನು ಸುಮಾರು 3000 ಡೆಡ್ ವೇಟ್ ಟನ್ (ಡಿ.ಡಬ್ಲ್ಯೂ.ಟಿ) ವರೆಗಿನ ಹಡಗುಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

ಘಾಜಿಪುರ ಜಿಲ್ಲೆಯ ಸೈದ್ ಪುರ್, ಚೋಚಕ್ ಪುರ, ಜಮಾನಿಯಾ ಮತ್ತು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕಾನ್ಸ್ ಪುರ್ ನಲ್ಲಿ ನಾಲ್ಕು ತೇಲುವ ಸಮುದಾಯ ಜೆಟ್ಟಿಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಪಾಟ್ನಾ ಜಿಲ್ಲೆಯ ದಿಘಾ, ನಕ್ತಾ ದಿಯಾರಾ, ಬಾರ್ಹ್, ಪಣಾಪುರ ಮತ್ತು ಬಿಹಾರದ ಸಮಸ್ತಿಪುರ ಜಿಲ್ಲೆಯ ಹಸನ್ ಪುರದಲ್ಲಿ ಐದು ಸಮುದಾಯ ಜೆಟ್ಟಿಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಈ ಪ್ರದೇಶದ ಸ್ಥಳೀಯ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸಲು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಗಂಗಾ ನದಿಯ ಉದ್ದಕ್ಕೂ 60ಕ್ಕೂ ಹೆಚ್ಚು ಸಮುದಾಯ ಜೆಟ್ಟಿಗಳನ್ನು ನಿರ್ಮಿಸಲಾಗುತ್ತಿದೆ. ಸಣ್ಣ ರೈತರು, ಮೀನುಗಾರಿಕಾ ಘಟಕಗಳು, ಅಸಂಘಟಿತ ಕೃಷಿ ಉತ್ಪಾದನಾ ಘಟಕಗಳು, ತೋಟಗಾರಿಕೆ ತಜ್ಞರು, ಹೂ ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳಿಗೆ ಗಂಗಾ ನದಿಯ ಒಳನಾಡು ಮತ್ತು ಸುತ್ತಮುತ್ತಲಿನ ಆರ್ಥಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವ ಸರಳ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸುವ ಮೂಲಕ ಜನರ ಜೀವನೋಪಾಯವನ್ನು ಸುಧಾರಿಸುವಲ್ಲಿ ಸಮುದಾಯ ಜೆಟ್ಟಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ ಈಶಾನ್ಯಕ್ಕೆ ಕಡಲ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಇದು ಈಶಾನ್ಯ ಪ್ರದೇಶದ ಶ್ರೀಮಂತ ಪ್ರತಿಭೆಗಳನ್ನು ಗೌರವಿಸಲು ಸಹಾಯ ಮಾಡುವುದಲ್ಲದೆ ಬೆಳೆಯುತ್ತಿರುವ ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ಇವುಗಳಲ್ಲದೆ, ಪ್ರಧಾನಮಂತ್ರಿಯವರು ಗುವಾಹಟಿಯ ಪಾಂಡು ಟರ್ಮಿನಲ್ ನಲ್ಲಿ ಹಡಗು ದುರಸ್ತಿ ಸೌಲಭ್ಯ ಮತ್ತು ಉಬ್ಬು ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಾಂಡು ಟರ್ಮಿನಲ್ ನಲ್ಲಿರುವ ಹಡಗು ದುರಸ್ತಿ ಸೌಲಭ್ಯವು ಸಾಕಷ್ಟು ಅಮೂಲ್ಯ ಸಮಯವನ್ನು ಉಳಿಸುತ್ತದೆ, ಏಕೆಂದರೆ ಒಂದು ಹಡಗನ್ನು ಕೋಲ್ಕತ್ತಾ ರಿಪೇರಿ ಸೌಲಭ್ಯಕ್ಕೆ ಸಾಗಿಸಿ ಮತ್ತೆ ಹಿಂತಿರುಗಿಸಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇದಲ್ಲದೆ, ಹಡಗಿನ ಸಾರಿಗೆ ವೆಚ್ಚವನ್ನು ಸಹ ಈ ಟರ್ಮಿನಲ್ ಉಳಿಸುವುದರಿಂದ ಇದು ಹಣದ ವಿಷಯದಲ್ಲಿ ಭಾರಿ ಉಳಿತಾಯಕ್ಕೆ ಕಾರಣವಾಗುತ್ತದೆ. ಪಾಂಡು ಟರ್ಮಿನಲ್ ನಿಂದ ರಾಷ್ಟ್ರೀಯ ಹೆದ್ದಾರಿ 27ಕ್ಕೆ ಸಂಪರ್ಕ ಕಲ್ಪಿಸುವ ಸಮರ್ಪಿತ ರಸ್ತೆ 24 ಗಂಟೆಗಳ ಸಂಪರ್ಕವನ್ನು ಹೊಂದಿರುತ್ತದೆ.

*****