Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೌರಾದಿಂದ ನ್ಯೂ ಜಲ್‌ಪೈಗುರಿಯನ್ನು ಸಂಪರ್ಕಿಸುವ `ವಂದೇ ಭಾರತ್ ಎಕ್ಸ್ಪ್ರೆಸ್‌ʼ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದ ಪ್ರಧಾನಿ

ಹೌರಾದಿಂದ ನ್ಯೂ ಜಲ್‌ಪೈಗುರಿಯನ್ನು ಸಂಪರ್ಕಿಸುವ `ವಂದೇ ಭಾರತ್ ಎಕ್ಸ್ಪ್ರೆಸ್‌ʼ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲ್‌ಪೈಗುರಿಯನ್ನು ಸಂಪರ್ಕಿಸುವ `ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ  ಹಸಿರು ನಿಶಾನೆ ತೋರಿದರು. ಪ್ರಧಾನಮಂತ್ರಿಯವರು ಜೋಕಾ-ಎಸ್‌ಪ್ಲೆನೇಡ್‌ ಮೆಟ್ರೋ ಯೋಜನೆಯ (ನೇರಳೆ ಮಾರ್ಗ) ಜೋಕಾ-ತಾರಾತಲಾ ವಿಸ್ತರಣೆಯನ್ನು ಉದ್ಘಾಟಿಸಿದರು. ಬೋಯಿಂಚಿ – ಶಕ್ತಿಗಢ್‌ 3ನೇ ಮಾರ್ಗ, ಡಂಕುನಿ-ಚಂದನ್‌ಪುರ್‌ 4ನೇ ಮಾರ್ಗ ಯೋಜನೆ, ನಿಮ್ತಿತಾ – ನ್ಯೂ ಫರಕ್ಕಾ ಜೋಡಿ ಮಾರ್ಗ ಮತ್ತು ಅಂಬಾರಿ ಫಲಕಾಟಾ – ಹೊಸ ಮೈನಾಗುರಿ – ಗುಮಾನಿಹಾತ್ ಡಬ್ಲಿಂಗ್ ಯೋಜನೆ ಸೇರಿದಂತೆ ನಾಲ್ಕು ರೈಲ್ವೆ ಯೋಜನೆಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಪ್ರಧಾನಮಂತ್ರಿಯವರು ಹೊಸ ಜಲ್‌ಪೈಗುರಿ ರೈಲು ನಿಲ್ದಾಣದ ಪುನರಾಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಭೌತಿಕವಾಗಿ ಕಾರ್ಯಕ್ರಮಕ್ಕೆ ತಾವು ಹಾಜರಾಗಲು ಸಾಧ್ಯವಾಗದ್ದಕ್ಕೆ ಕ್ಷಮೆಯಾಚಿಸಿದರು.  ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಕಣಕಣದಲ್ಲೂ ತುಂಬಿಕೊಂಡಿರುವ ಬಂಗಾಳದ ನಾಡಿಗೆ ತಲೆಬಾಗುವ ದಿನ ಇದಾಗಿದೆ ಎಂದರು. “ವಂದೇ ಮಾತರಂನ ಕರೆ ಜನ್ಮ ತಳೆದ ಸ್ಥಳದಿಂದ ಇಂದು ʻವಂದೇ ಭಾರತ್ʼ ರೈಲಿಗೆ ಹಸಿರು ನಿಶಾನೆ ತೋರಲಾಗುತ್ತಿದೆ” ಎಂದು ಪ್ರಧಾನಿ ಹೇಳಿದರು. 1943ರ ಡಿಸೆಂಬರ್ 30ರಂದು ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರೀಕಾರ ಹಾಡಿದರು ಎಂದು ಪ್ರಧಾನಿ ಸ್ಮರಿಸಿದರು.

ಈ ಐತಿಹಾಸಿಕ ದಿನದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನೇತಾಜಿ ಅವರ ಗೌರವಾರ್ಥವಾಗಿ ದ್ವೀಪವೊಂದಕ್ಕೆ ಅವರ ಹೆಸರಿಡಲು ಅಂಡಮಾನ್‌ಗೆ ಭೇಟಿ ನೀಡುವ ಸೌಭಾಗ್ಯ ತಮಗೆ ತೊರೆಯಿತು ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ʻಆಜಾದಿ ಕಾ ಅಮೃತ್ ಮಹೋತ್ಸವʼದ ಆಚರಣೆಯ ಸಂದರ್ಭದಲ್ಲಿ ಭಾರತವು 475 ʻವಂದೇ ಭಾರತ್ʼ ರೈಲುಗಳನ್ನು ಪ್ರಾರಂಭಿಸುವ ಸಂಕಲ್ಪವನ್ನು ತೊಟ್ಟಿದೆ. ಹೌರಾದಿಂದ ನ್ಯೂ ಜಲ್‌ಪೈಗುರಿಗೆ ಇಂದು ಹಸಿರು ನಿಶಾನೆ ತೋರಿಸುತ್ತಿರುವ ರೈಲು ಅವುಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಇಂದು ಶಂಕುಸ್ಥಾಪನೆ ನೆರವೇರಿಸುವ ಮತ್ತು ಉದ್ಘಾಟನೆಗೊಳ್ಳುತ್ತಿರುವ ಹಲವು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ಯೋಜನೆಗಳನ್ನು ಪೂರ್ಣಗೊಳಿಸಲು ಸರಕಾರ ಸುಮಾರು 5000 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ ಎಂದರು.

ಗಂಗಾನದಿಯ ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಪಶ್ಚಿಮ ಬಂಗಾಳಕ್ಕೆ ಸಮರ್ಪಿಸುವ ಅವಕಾಶ ತಮಗೆ ಲಭಿಸಲಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ʻನಮಾಮಿ ಗಂಗೆʼ ಯೋಜನೆಯಡಿ ಪಶ್ಚಿಮ ಬಂಗಾಳದಲ್ಲಿ 25ಕ್ಕೂ ಹೆಚ್ಚು ಒಳಚರಂಡಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಅವುಗಳಲ್ಲಿ 11 ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಏಳು ಯೋಜನೆಗಳು ಇಂದು ಪೂರ್ಣಗೊಂಡಿವೆ.

1500 ಕೋಟಿ ರೂ.ಗಳ ವೆಚ್ಚದ 5 ಹೊಸ ಯೋಜನೆಗಳ ಕೆಲಸವು ಇಂದಿನಿಂದ ಪ್ರಾರಂಭವಾಗುತ್ತಿದೆ. ಗಂಗಾ ನದಿ ಸ್ವಚ್ಛಗೊಳಿಸುವ ಉದ್ದೇಶದ ʻಆದಿ ಗಂಗಾʼ ಎಂಬ ಪ್ರಮುಖ ಯೋಜನೆಯನ್ನು ಪ್ರಧಾನ ಮಂತ್ರಿಯವರು ಉಲ್ಲೇಖಿಸಿದರು. ಇದರ ಭಾಗವಾಗಿ 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ನದಿಗಳನ್ನು ಶುಚಿಗೊಳಿಸುವುದರ ಜೊತೆಗೆ, ಕೇಂದ್ರ ಸರಕಾರವು ಮಾಲಿನ್ಯ ತಡೆಗಟ್ಟುವಿಕೆಯತ್ತ ಗಮನ ಹರಿಸಿದೆ. ಇದರ ಭಾಗವಾಗ ಹೆಚ್ಚಿನ ಸಂಖ್ಯೆಯ ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಮುಂದಿನ 10-15 ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು. 

ಭಾರತೀಯ ರೈಲ್ವೆಯ ಸುಧಾರಣೆಗಳು ಮತ್ತು ಅಭಿವೃದ್ಧಿಯನ್ನು ದೇಶದ ಅಭಿವೃದ್ಧಿಯೊಂದಿಗೆ ಪ್ರಧಾನಮಂತ್ರಿಯವರು ನಂಟು ಮಾಡಿದರು. ಅದಕ್ಕಾಗಿಯೇ, ಕೇಂದ್ರ ಸರಕಾರವು ಆಧುನಿಕ ರೈಲ್ವೆ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ ಎಂದು ತಿಳಿಸಿದರು. ಭಾರತೀಯ ರೈಲ್ವೆಯ ಪರಿವರ್ತೆನಗಾಗಿ ರಾಷ್ಟ್ರವ್ಯಾಪಿ ಅಭಿಯಾನ ನಡೆಯುತ್ತಿದೆ. ʻವಂದೇ ಭಾರತ್ʼ, ʻತೇಜಸ್ ಹಮ್‌ ಸಫರ್ʼ ಮತ್ತು ʻವಿಸ್ಟಾಡೋಮ್ʼ ಬೋಗಿಗಳಂತಹ ಆಧುನಿಕ ರೈಲುಗಳು ಇದರ ಭಾಗವೇ ಆಗಿವೆ. ನ್ಯೂ ಜಲ್‌ಪೈಗುರಿ ಸೇರಿದಂತೆ ರೈಲ್ವೆ ನಿಲ್ದಾಣಗಳ ಆಧುನೀಕರಣ, ರೈಲ್ವೆ ಮಾರ್ಗಗಳ ಡಬ್ಲಿಂಗ್‌ ಮತ್ತು ವಿದ್ಯುದ್ದೀಕರಣ ಈ ಆಧುನೀಕರಣದ ಉದಾಹರಣೆಗಳಾಗಿವೆ ಎಂದು ಅವರು ಪಟ್ಟಿ ಮಾಡಿದರು. ಪೂರ್ವ ಮತ್ತು ಪಶ್ಚಿಮದ ವಿಶೇಷ ಸರಕು-ಸಾಗಣೆ ಕಾರಿಡಾರ್‌ಗಳನ್ನು ಸರಕು ಸಾಗಣೆ (ಲಾಜಿಸ್ಟಿಕ್ಸ್‌) ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುವ ಯೋಜನೆಗಳು ಎಂದು ಅವರು ಬಣ್ಣಿಸಿದರು.

ರೈಲ್ವೆ ಸುರಕ್ಷತೆ, ಸ್ವಚ್ಛತೆ, ಸಮನ್ವಯ, ಸಾಮರ್ಥ್ಯ, ಸಮಯಪ್ರಜ್ಞೆ ಮತ್ತು ಸೌಲಭ್ಯಗಳ ವಿಚಾರದಲ್ಲಿ ಆದ ಸಾಧನೆಗಳನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಕಳೆದ 8 ವರ್ಷಗಳಲ್ಲಿ, ಭಾರತೀಯ ರೈಲ್ವೆಯು ಆಧುನಿಕತೆಯ ಅಡಿಪಾಯದ ಮೇಲೆ ಕೆಲಸ ಮಾಡಿದೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತೀಯ ರೈಲ್ವೆ ಆಧುನೀಕರಣದ ಹೊಸ ಪ್ರಯಾಣವನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಸ್ವಾತಂತ್ರ್ಯದ ಮೊದಲ 70 ವರ್ಷಗಳಲ್ಲಿ ದೇಶಾದ್ಯಂತ 20 ಸಾವಿರ ಮಾರ್ಗ ಕಿಲೋಮೀಟರ್ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಂಡಿದ್ದವು. ಆದರೆ, 2014ರಿಂದ ಈಚೆಗೆ 32 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಮೆಟ್ರೋ ರೈಲು ವ್ಯವಸ್ಥೆಯು ಇಂದು ಭಾರತದ ವೇಗ ಮತ್ತು ಪ್ರಮಾಣಕ್ಕೆ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. “2014ಕ್ಕಿಂತ ಮೊದಲು ಮೆಟ್ರೋ ಜಾಲವು 250 ಕಿ.ಮೀ.ಗಿಂತಲೂ ಕಡಿಮೆ ಇತ್ತು, ಜೊತೆಗೆ ಅದು ಕೇವಲ ದೆಹಲಿ-ಎನ್‌ಸಿಆರ್‌ʼ ಪ್ರದೇಶಕ್ಕಷ್ಟೇ ಸೀಮಿತವಾಗಿತ್ತು. ಕಳೆದ 7-8 ವರ್ಷಗಳಲ್ಲಿ ಮೆಟ್ರೋ 2 ಡಜನ್‌ಗಿಂತಲೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ. ಇಂದು ದೇಶದ ವಿವಿಧ ನಗರಗಳಲ್ಲಿ ಸುಮಾರು 800 ಕಿ.ಮೀ ಉದ್ದದ ಹಳಿಯಲ್ಲಿ ಮೆಟ್ರೋ ರೈಲುಗಳು ಚಲಿಸುತ್ತಿವೆ.  1000 ಕಿ.ಮೀ.ಗಿಂತ ಹೆಚ್ಚಿನ ಮೆಟ್ರೋ ಮಾರ್ಗಗಳಲ್ಲಿ ಕೆಲಸ ನಡೆಯುತ್ತಿದೆ,” ಎಂದು ಅವರು ಮಾಹಿತಿ ನೀಡಿದರು.

ಹಿಂದಿನ ಕಾಲದಲ್ಲಿ ಭಾರತಕ್ಕೆ ಎದುರಾದ ಸವಾಲುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಭಾರತದ ಅಭಿವೃದ್ಧಿಯ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರಿದೆ ಎಂದರು.  ಈ ಪೈಕಿ ಪ್ರಮುಖ ಸವಾಲೊಂದರ ಬಗ್ಗೆ ಪ್ರಧಾನಿಯವರು ವಿವರಿಸಿದರು. ರಾಷ್ಟ್ರದ ಮೂಲಸೌಲಭ್ಯಗಳ ಅಭಿವೃದ್ಧಿಯಲ್ಲಿ ತೊಡಗಿರುವ ವಿವಿಧ ಏಜೆನ್ಸಿಗಳ ನಡುವೆ ಸಮನ್ವಯದ ಕೊರತೆಯನ್ನು ಒತ್ತಿ ಹೇಳಿದರು. ವಿವಿಧ ಸಾರಿಗೆ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆಯನ್ನು ಉಲ್ಲೇಖಿಸಿದರು. ಇದರ ಪರಿಣಾಮವಾಗಿ ಒಂದು ಸರಕಾರಿ ಸಂಸ್ಥೆಗೆ ಇತರ ಏಜೆನ್ಸಿಗಳು ಮಾಡುತ್ತಿರುವ ಕೆಲಸದ ಬಗ್ಗೆ ಯಾವುದೇ ಸುಳಿವು ಇರುತ್ತಿರಲಿಲ್ಲ ಎಂದರು. “ಇದು ದೇಶದ ಪ್ರಾಮಾಣಿಕ ತೆರಿಗೆದಾರರ ಮೇಲೆ ನೇರ ಪರಿಣಾಮ ಬೀರಿದೆ” ಎಂದು ಅವರು ಹೇಳಿದರು. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬಡವರಿಗಿಂತ ಹೆಚ್ಚಾಗಿ ಭ್ರಷ್ಟರ ಜೇಬುಗಳನ್ನು ತುಂಬಿಸಲು ಬಳಸಿದಾಗ ಜನರು ಅತೃಪ್ತಿಗೊಳ್ಳುವುದು ಸಹಜ ಎಂದು ಪ್ರಧಾನಿ ಹೇಳಿದರು. “ಏಜೆನ್ಸಿಗಳ ಸಮನ್ವಯದಲ್ಲಿನ ಅಂತರಗಳನ್ನು ತುಂಬಲು ಸರಕಾರವು ʻಪಿಎಂ ಗತಿ ಶಕ್ತಿʼ ಯೋಜನೆಯನ್ನು ಪ್ರಾರಂಭಿಸಿದೆ,” ಎಂದು ಶ್ರೀ ಮೋದಿ ಹೇಳಿದರು.

“ವಿವಿಧ ರಾಜ್ಯ ಸರಕಾರಗಳಿರಲೀ, ನಿರ್ಮಾಣ ಸಂಸ್ಥೆಗಳು ಅಥವಾ ಕೈಗಾರಿಕಾ ತಜ್ಞರಾಗಿರಲಿ, ಪ್ರತಿಯೊಬ್ಬರೂ ʻಗತಿ ಶಕ್ತಿʼ ವೇದಿಕೆಯಲ್ಲಿ ಒಗ್ಗೂಡುತ್ತಿದ್ದಾರೆ,ʼʼ ಎಂದು ವಿವರಿಸಿದರು. ʻಪಿಎಂ ಗತಿ ಶಕ್ತಿʼ ಯೋಜನೆಯು ದೇಶದ ವಿವಿಧ ಸಾರಿಗೆ ಮಾಧ್ಯಮಗಳನ್ನು ಒಗ್ಗೂಡಿಸುವುದು ಮಾತ್ರವಲ್ಲದೆ, ಬಹು ಮಾದರಿ ಯೋಜನೆಗಳ ವೇಗವನ್ನು ಹೆಚ್ಚಿಸುತ್ತದೆ ಎಂದರು. ನಾಗರಿಕರಿಗೆ ತಡೆರಹಿತ ಸಂಪರ್ಕವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಹೊಸ ವಿಮಾನ ನಿಲ್ದಾಣಗಳು, ಜಲಮಾರ್ಗಗಳು, ಬಂದರುಗಳು ಮತ್ತು ರಸ್ತೆಗಳ ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

“21ನೇ ಶತಮಾನದಲ್ಲಿ ಮುನ್ನಡೆಯಲು ರಾಷ್ಟ್ರದ ಸಾಮರ್ಥ್ಯವನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು,” ಎಂದು ಪ್ರಧಾನಿ ಕರೆ ನೀಡಿದರು. ದೇಶದಲ್ಲಿನ ಜಲಮಾರ್ಗಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು ಭಾರತದಲ್ಲಿ ಕೆಲಸ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕಾಗಿ ಜಲಮಾರ್ಗಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದ್ದ ದಿನಗಳನ್ನು ಸ್ಮರಿಸಿದರು. ಆದರೆ, ನಂತರ ಗುಲಾಮಗಿರಿಯ ಸಮಯದಲ್ಲಿ ಅವುಗಳನ್ನು ನಾಶಪಡಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಜಲಮಾರ್ಗಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಹಿಂದಿನ ಸರಕಾರಗಳು ತೋರಿದ ಪ್ರಯತ್ನಗಳ ಕೊರತೆಯ ಬಗ್ಗೆ ಅವರು ಗಮನಸೆಳೆದರು. “ಭಾರತವು ಇಂದು ತನ್ನ ಜಲಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ,” ಎಂದು ಶ್ರೀ ಮೋದಿ ಹೇಳಿದರು. ಇಂದು 100ಕ್ಕೂ ಹೆಚ್ಚು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ನದಿಗಳಲ್ಲಿ ಸುಧಾರಿತ ʻಕ್ರೂಸ್ʼ ಹಡಗುಗಳನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಎರಡು ನದಿಗಳ ನಡುವೆ ಜಲಮಾರ್ಗದ ಸಂಪರ್ಕವನ್ನು ಸ್ಥಾಪಿಸಲು ಭಾರತ ಹಾಗೂ ಬಾಂಗ್ಲಾದೇಶದ ಜಂಟಿಯಾಗಿ ಕೈಗೊಳ್ಳುತ್ತಿರುವ  ʻಗಂಗಾ-ಬ್ರಹ್ಮಪುತ್ರ ಯೋಜನೆʼಯ ಬಗ್ಗೆಯೂ ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು. 2023ರ ಜನವರಿ 13ರಂದು ಕಾಶಿಯಿಂದ ಬಾಂಗ್ಲಾದೇಶದ ಮೂಲಕ ದಿಬ್ರುಗಢಕ್ಕೆ ಪ್ರಯಾಣಿಸಲಿರುವ ʻಕ್ರೂಸ್ʼ ಹಡಗಿನ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 3200 ಕಿ.ಮೀ ಉದ್ದದ ಈ ಪ್ರಯಾಣವು ಇಡೀ ವಿಶ್ವದಲ್ಲಿಯೇ ಇಂತಹ ಮೊದಲ ಯಾನವಾಗಿದೆ ಎಂದು ಮಾಹಿತಿ ನೀಡಿದರು. ಜತೆಗೆ ಇದು ದೇಶದಲ್ಲಿ ಬೆಳೆಯುತ್ತಿರುವ ಕ್ರೂಸ್ ಪ್ರವಾಸೋದ್ಯಮದ ಪ್ರತಿಬಿಂಬವೂ ಹೌದು ಎಂದರು. 

ಪಶ್ಚಿಮ ಬಂಗಾಳ ಜನತೆಯ ನಾಡ ಪ್ರೇಮದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ಸಾಂಸ್ಕೃತಿಕ ಪರಂಪರೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡುವಲ್ಲಿ ಮತ್ತು ಅದರಿಂದ ಕಲಿಯುವಲ್ಲಿ ರಾಜ್ಯದ ಜನತೆ ತೋರುವ ಉತ್ಸಾಹದ ಬಗ್ಗೆ ಉಲ್ಲೇಖಿಸಿದರು. “ಬಂಗಾಳದ ಜನರು ಪ್ರವಾಸೋದ್ಯಮದಲ್ಲಿಯೂ ಸಹ ʻರಾಷ್ಟ್ರ ಮೊದಲುʼ ಎಂಬ ಮನೋಭಾವವನ್ನು ಹೊಂದಿದ್ದಾರೆ”, ಎಂದು ಅವರು ಶ್ಲಾಘಿಸಿದರು, “ದೇಶದಲ್ಲಿ ಸಂಪರ್ಕಜಾಲ ವೃದ್ಧಿಗೆ ಉತ್ತೇಜನ ದೊರೆತಾಗ ಮತ್ತು ರೈಲ್ವೆ, ಜಲಮಾರ್ಗ ಹಾಗೂ ಹೆದ್ದಾರಿಗಳು ಹೆಚ್ಚು ಸುಧಾರಣೆಗೊಂಡಾಗ, ಇದರ ಫಲಿತಾಂಶವೆಂಬಂತೆ ʻಸರಾಗ ಪ್ರಯಾಣʼ ಸಾಧ್ಯವಾಗುತ್ತದೆ. ಬಂಗಾಳದ ಜನರು ಸಹ ಇದರಿಂದ ಪ್ರಯೋಜನ ಪಡೆದಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು.

“ಓ ನನ್ನ ದೇಶದ ಮಣ್ಣೇ, ನಾನು ನಿನಗೆ ತಲೆಬಾಗುತ್ತೇನೆ” ಎಂಬ ಗುರು ರವೀಂದ್ರನಾಥ ಟ್ಯಾಗೋರ್ ಅವರ ಸಾಲುಗಳನ್ನು ಹೇಳುವ ಮೂಲಕ ಪ್ರಧಾನಮಂತ್ರಿಯವರು ಭಾಷಣವನ್ನು ಮುಕ್ತಾಯಗೊಳಿಸಿದರು. ಈಗಿನ ʻಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ, ನಮ್ಮ ತಾಯ್ನಾಡಿಗೆ ಅತಿ ಹೆಚ್ಚು ಆದ್ಯತೆ ನೀಡುವ ಮೂಲಕ ಪ್ರತಿಯೊಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು. “ಇಡೀ ಜಗತ್ತು ಭರವಸೆ ಮತ್ತು ನಿರೀಕ್ಷೆಗಳ ಕಣ್ಣುಗಳಿಂದ ಭಾರತದತ್ತ ನೋಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರದ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು”, ಎಂದು ಕರೆ ನೀಡುವ ಮೂಲಕ ಪ್ರಧಾನಮಂತ್ರಿಯವರು ಮಾತು ಮುಗಿಸಿದರು. 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಡಾ. ಸಿ.ವಿ.ಆನಂದ ಬೋಸ್, ಭಾರತದ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್; ಕೇಂದ್ರದ ಸಹಾಯಕ ಸಚಿವರಾದ ಶ್ರೀ ಜಾನ್ ಬಾರ್ಲಾ, ಡಾ. ಸುಭಾಶ್‌ ಸರ್ಕಾರ್ ಮತ್ತು ಶ್ರೀ ನಿಶಿತ್ ಪ್ರಮಾಣಿಕ್‌ ಹಾಗೂ ಸಂಸದರಾದ ಶ್ರೀ ಪ್ರಸೂನ್ ಬ್ಯಾನರ್ಜಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹೌರಾ ರೈಲ್ವೆ ನಿಲ್ದಾಣದಲ್ಲಿ ಹೌರಾದಿಂದ ನ್ಯೂ ಜಲ್‌ಪೈಗುರಿಯನ್ನು ಸಂಪರ್ಕಿಸುವ 7ನೇ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲಿಗೆ ಹಸಿರು ನಿಶಾನೆ ತೋರಿದರು. ಈ ಅತ್ಯಾಧುನಿಕ ಸೆಮಿ ಹೈಸ್ಪೀಡ್ ರೈಲು, ಸುಸಜ್ಜಿತ ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿದೆ. ಈ ರೈಲು ಎರಡೂ ದಿಕ್ಕುಗಳಲ್ಲಿ ಸಂಚರಿಸುವಾಗ ಮಾಲ್ಡಾ ಟೌನ್, ಬರ್‌ಸೋಯಿ ಮತ್ತು ಕಿಶನ್‌ಗಂಜ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

ಪ್ರಧಾನಮಂತ್ರಿಯವರು ಜೋಕಾ-ಎಸ್‌ಪ್ಲೆನೇಡ್‌ ಮೆಟ್ರೋ ಯೋಜನೆಯ (ನೇರಳೆ ಮಾರ್ಗ) ಜೋಕಾ-ತಾರಾತಲಾ ವಿಸ್ತರಣೆಯನ್ನು ಉದ್ಘಾಟಿಸಿದರು. ಜೋಕಾ, ಠಾಕೂರ್‌ಪುಕುರ್, ಸಖೇರ್ ಬಜಾರ್, ಬೆಹಲಾ ಚೌರಾಸ್ತಾ, ಬೆಹಲಾ ಬಜಾರ್ ಮತ್ತು ತಾರಾತಲಾ ಎಂಬ 6 ನಿಲ್ದಾಣಗಳನ್ನು ಹೊಂದಿರುವ 6.5 ಕಿ.ಮೀ ಉದ್ದದ ಈ ಮಾರ್ಗವನ್ನು 2475 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೋಲ್ಕತಾ ನಗರದ ದಕ್ಷಿಣ ಭಾಗಗಳಾದ ಸರ್‌ಸುನಾ, ದಾಖರ್, ಮುಚಿಪಾರಾ ಮತ್ತು ದಕ್ಷಿಣ 24 ಪರಗಣಗಳ ಪ್ರಯಾಣಿಕರು ಈ ಯೋಜನೆಯ ಉದ್ಘಾಟನೆಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.

ಪ್ರಧಾನಮಂತ್ರಿಯವರು ನಾಲ್ಕು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇವುಗಳಲ್ಲಿ 405 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬೋಯಿಂಚಿ-ಶಕ್ತಿಗಢ 3ನೇ ಮಾರ್ಗ; 565 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಡಂಕುನಿ-ಚಂದನ್‌ಪುರ್‌ 4ನೇ ಮಾರ್ಗದ ಯೋಜನೆ; 254 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಿಮ್ತಿತಾ–ನ್ಯೂ ಫರಕ್ಕಾ ಜೋಡಿ ಮಾರ್ಗ ಹಾಗೂ 1080 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಅಂಬಾರಿ ಫಲಕಾಟಾ–ನ್ಯೂ ಮೈನಾಗುರಿ-ಗುಮಾನಿಹಾತ್ ಡಬ್ಲಿಂಗ್ ಯೋಜನೆ ಸೇರಿವೆ. 335 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಹೊಸ ಜಲಪೈಗುರಿ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೂ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು.

*****