2023 ಜನವರಿ 3ರಂದು ಆಯೋಜಿತವಾಗಿರುವ 108ನೇ ಭಾರತೀಯ ವಿಜ್ಞಾನ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.
“ಸುಸ್ಥಿರ ಅಭಿವೃದ್ಧಿಯ ಜತೆಗೆ ಮಹಿಳಾ ಸಬಲೀಕರಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬುದು ಈ ವರ್ಷದ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಘೋಷವಾಕ್ಯವಾಗಿದೆ. ಸುಸ್ಥಿರ ಅಭಿವೃದ್ಧಿಯ ಜತೆಗೆ ಮಹಿಳಾ ಸಬಲೀಕರಣ ಸಾಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳ ಮೇಲೆ ಸಮಾವೇಶದಲ್ಲಿ ವಿಸ್ತೃತ ಚರ್ಚೆಗಳು ಮತ್ತು ಸಂವಾದಗಳು ನಡೆಯಲಿವೆ. ಉನ್ನತ ಶ್ರೇಣಿಯ ಬೋಧನೆ, ಸಂಶೋಧನೆ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಇರುವ ಮಾರ್ಗೋಪಾಯಗಳ ಕುರಿತು ಸಮಾವೇಶದಲ್ಲಿ ಭಾಗವಹಿಸುವ ಗಣ್ಯರು ಮತ್ತು ಪ್ರತಿನಿಧಿಗಳು ಚರ್ಚಿಸಲಿದ್ದಾರೆ. ಅಲ್ಲದೆ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತಶಾಸ್ತ್ರ(STEM) ಶಿಕ್ಷಣ, ಸಂಶೋಧನಾ ಅವಕಾಶಗಳು ಮತ್ತು ಆರ್ಥಿಕ ಪಾಲ್ಗೊಳ್ಳುವಿಕೆ ರಂಗದಲ್ಲಿ ಮಹಿಳೆಯರಿಗೆ ಸಮಾನ ಪ್ರವೇಶ ಕಲ್ಪಿಸಲು ಇರುವ ಮಾರ್ಗೋಪಾಯಗಳನ್ನು ಹುಡಕುವ ಪ್ರಯತ್ನ ನಡೆಸಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ನೀಡಿರುವ ಅಪಾರ ಕೊಡುಗೆಗಳನ್ನು ಪ್ರದರ್ಶಿಸುವ ವಿಶೇಷ ಕಾರ್ಯಕ್ರಮವೂ ಜರುಗಲಿದೆ. ಇದರ ಜತೆಗೆ, ಹೆಸರಾಂತ ಮಹಿಳಾ ವಿಜ್ಞಾನಿಗಳಿಂದ ಉಪನ್ಯಾಸ ಕಾರ್ಯಕ್ರಮವೂ ಜರುಗಲಿದೆ.
ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಇತರೆ ನಾನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ವಿಜ್ಞಾನ ಅಭಿರುಚಿ ಮತ್ತು ಆಸಕ್ತಿ ಮೂಡಿಸಲು ಮಕ್ಕಳ ವಿಜ್ಞಾನ ಸಮಾವೇಶವನ್ನು ಸಹ ಆಯೋಜಿಸಲಾಗುತ್ತಿದೆ. ರೈತ ವಿಜ್ಞಾನ ಸಮಾವೇಶವನ್ನು ಸಹ ಆಯೋಜಿಸಲಾಗುತ್ತಿದ್ದು, ಜೈವಿಕ ಆರ್ಥಿಕತೆ ಸುಧಾರಿಸಲು ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸಲು ಇದು ವೇದಿಕೆ ಒದಗಿಸಲಿದೆ. ಬುಡಕಟ್ಟು ವಿಜ್ಞಾನ ಸಮಾವೇಶ ಕೂಡ ನಡೆಯಲಿದೆ, ಇದು ಬುಡಕಟ್ಟು ಮಹಿಳೆಯರ ಸಬಲೀಕರಣದತ್ತ ಗಮನ ಹರಿಸುವುದರೊಂದಿಗೆ ಸ್ಥಳೀಯ ಪ್ರಾಚೀನ ಜ್ಞಾನ ವ್ಯವಸ್ಥೆ ಮತ್ತು ಅಭ್ಯಾಸದ ವೈಜ್ಞಾನಿಕ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
ಮೊದಲ ವಿಜ್ಞಾನ ಸಮಾವೇಶ 1914ರಲ್ಲಿ ನಡೆದಿತ್ತು. 108ನೇ ವಾರ್ಷಿಕ ಭಾರತೀಯ ವಿಜ್ಞಾನ ಸಮಾವೇಶವು ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ. ಈ ವಿಶ್ವವಿದ್ಯಾಲಯವು ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.
*****