ಭಾರತದ ಜಿ20 ಅಧ್ಯಕ್ಷತೆಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲು ಡಿಸೆಂಬರ್ 5, 2022 ರಂದು ಸರ್ವಪಕ್ಷ ಸಭೆಯನ್ನು ನಡೆಸಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾರತದ ಉದ್ದಗಲಕ್ಕೂ ಇರುವ ವಿವಿಧ ಪಕ್ಷಗಳ ರಾಜಕೀಯ ನಾಯಕರು ಸಕ್ರಿಯವಾಗಿ ಭಾಗವಹಿಸಿದರು.
“ಭಾರತದ ಜಿ20 ಅಧ್ಯಕ್ಷತೆಯು ಇಡೀ ರಾಷ್ಟ್ರಕ್ಕೆ ಸೇರಿದ್ದು ಮತ್ತು ಇಡೀ ವಿಶ್ವಕ್ಕೆ ಭಾರತದ ಶಕ್ತಿ – ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಅನನ್ಯ ಅವಕಾಶವಾಗಿದೆ. ಇಂದು ಭಾರತದ ಕಡೆಗೆ ಜಾಗತಿಕಮಟ್ಟದಲ್ಲಿ ಕುತೂಹಲ ಮತ್ತು ಆಕರ್ಷಣೆಯಿದೆ, ಇದು ಭಾರತದ ಜಿ20 ಅಧ್ಯಕ್ಷತೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಈ ನಿಟ್ಟಿನಲ್ಲಿ ಸಾಂಘಿಕ ಕಾರ್ಯದ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿಯವರು, ವಿವಿಧ ಜಿ20 ಕಾರ್ಯಕ್ರಮಗಳ ಸಂಘಟನೆಯಲ್ಲಿ ಎಲ್ಲ ನಾಯಕರ ಸಹಕಾರವನ್ನು ಕೋರಿದರು. “ಜಿ20 ಅಧ್ಯಕ್ಷತೆಯು ಸಾಂಪ್ರದಾಯಿಕ ಮಹಾನಗರ (ದೊಡ್ಡ ಮೆಟ್ರೋನಗರ) ಗಳನ್ನು ಮೀರಿ ಭಾರತದ ಇತರ ಭಾಗಗಳ ವೈಶಿಷ್ಟ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ, ಈ ಮೂಲಕ ನಮ್ಮ ರಾಷ್ಟ್ರದ ಪ್ರತಿಯೊಂದು ಭಾಗದ ಅನನ್ಯತೆಯನ್ನು ಹೊರತರಬಹುದಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ ಭಾರತಕ್ಕೆ ಬರುವ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಮತ್ತು ಸಂದರ್ಶಕರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಜಿ20 ಸಭೆಗಳನ್ನು ವಿವಿಧ ಸ್ಥಳಗಳಲ್ಲಿ ಆಯೋಜಿಸುವ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಪ್ರೋತ್ಸಾಹಿಸುವ ಸಾಮರ್ಥ್ಯವನ್ನು ಪ್ರಧಾನಮಂತ್ರಿ ಅವರು ವಿವರಿಸಿದರು.
ಪ್ರಧಾನಮಂತ್ರಿಯವರು ಮಾತನಾಡುವ ಮುನ್ನ ವಿವಿಧ ರಾಜಕೀಯ ನಾಯಕರಾದ ಸನ್ಮಾನ್ಯ ಶ್ರೀ ಜೆ.ಪಿ. ನಡ್ಡಾ, ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಮಮತಾ ಬ್ಯಾನರ್ಜಿ, ಶ್ರೀ ನವೀನ್ ಪಟ್ನಾಯಕ್, ಶ್ರೀ ಅರವಿಂದ್ ಕೇಜ್ರಿವಾಲ್, ಶ್ರೀ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಶ್ರೀ ಸೀತಾರಾಮ್ ಯೆಚೂರಿ, ಶ್ರೀ ಚಂದ್ರಬಾಬು ನಾಯ್ಡು, ಶ್ರೀ ಎಂ.ಕೆ. ಸ್ಟಾಲಿನ್, ಶ್ರೀ ಎಡಪ್ಪಾಡಿ ಕೆ. ಪಳನಿಸ್ವಾಮಿ, ಶ್ರೀ ಪಶುಪತಿನಾಥ ಪಾರಸ್, ಶ್ರೀ ಏಕನಾಥ್ ಶಿಂಧೆ ಮತ್ತು ಶ್ರೀ ಕೆ.ಎಂ. ಖಾದರ್ ಮೊಹಿದೀನ್ ಮೊದಲಾದ ನಾಯಕರು ಭಾರತದ ಜಿ 20 ಅಧ್ಯಕ್ಷತೆಯ ಬಗ್ಗೆ ತಮ್ಮ ಅಮೂಲ್ಯವಾದ ಒಳನೋಟ, ನಿರೀಕ್ಷೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.
ಕೇಂದ್ರ ಗೃಹ ಸಚಿವರು ಮತ್ತು ಹಣಕಾಸು ಸಚಿವರು ಈ ಕುರಿತು ಸಂಕ್ಷಿಪ್ತ ಮಾಹಿತಿ ವಿನಿಮಯ ಮಾಡಿದರು. ಭಾರತದ ಜಿ20 ಅಧ್ಯಕ್ಷತೆಯ ಅಂಶಗಳನ್ನು ಒಳಗೊಂಡ ವಿವರವನ್ನು ಸಹ ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.
ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಶ್ರೀ ಅಮಿತ್ ಶಾ, ಶ್ರೀಮತಿ ನಿರ್ಮಲಾ ಸೀತಾರಾಮನ್, ಡಾ. ಎಸ್. ಜೈಶಂಕರ್, ಶ್ರೀ ಪಿಯೂಷ್ ಗೋಯಲ್, ಶ್ರೀ ಪ್ರಲ್ಹಾದ್ ಜೋಶಿ, ಶ್ರೀ ಭೂಪೇಂದರ್ ಯಾದವ್ ಮತ್ತು ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
****
The All-Party meet on India's G-20 Presidency was a productive one. I thank all leaders who participated in the meeting and shared their insights. This Presidency belongs to the entire nation and will give us the opportunity to showcase our culture. https://t.co/wMaI0iSU8R pic.twitter.com/JVB9fEzGXm
— Narendra Modi (@narendramodi) December 5, 2022