ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುಜರಾತ್ನ ಪಂಚಮಹಲ್ನ ಜಂಬುಘೋಡಾದಲ್ಲಿ ಇಂದು ಸುಮಾರು 860 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಪೂರ್ಣಗೊಂಡ ಯೋಜನೆಗಳನ್ನು ಲೋಕಾರ್ಪಣೆ ನೆರವೇರಿಸಿದರು.
ಬಳಿಕ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, ಇಂದು ಗುಜರಾತ್ನಲ್ಲಿರುವ ಆದಿವಾಸಿಗಳು ಹಾಗೂ ಬುಡಕಟ್ಟು ಸಮುದಾಯದವರಿಗೆ ಸ್ಮರಣೀಯ ದಿನ ಎಂದು ಬಣ್ಣಿಸಿದರು. ಇಂದು ಬೆಳಗ್ಗೆ ಮಾನ್ ಗಢ್ ಗೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿಗಳು, ಗೋವಿಂದ ಗುರು ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಬುಡಕಟ್ಟು ಸಮುದಾಯದ ಸಾವಿರಾರು ಹೋರಾಟಗಾರರಿಗೆ ನಮನ ಸಲ್ಲಿಸಿದರು.
ಈ ಪ್ರದೇಶದೊಂದಿಗೆ ತಮಗಿರುವ ಬಹುಕಾಲದ ಒಡನಾಟವನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಗಳು, ದೇಶದ ಆದಿವಾಸಿಗಳ ಶ್ರೇಷ್ಠ ತ್ಯಾಗಕ್ಕೆ ಸಾಕ್ಷಿಯಾದ ಜಂಬುಘೋಡಾ ಪ್ರದೇಶದಲ್ಲಿರುವುದಕ್ಕೆ ಹೆಮ್ಮೆ ಎನಿಸಿದೆ ಎಂದು ಭಾವುಕರಾಗಿ ನುಡಿದರು. “ಜೊರಿಯಾ ಪರಮೇಶ್ವರ್, ರೂಪ್ ಸಿಂಗ್ ನಾಯಕ್, ಗಲಾಲಿಯಾ ನಾಯಕ್, ರವ್ಜಿಡಾ ನಾಯಕ್ ಹಾಗೂ ಬಬಾರಿಯಾ ಗಲ್ಮ ನಾಯಕ್ರಂತಹ ಅಮರ ಹೋರಾಟಗಾರರಿಗೆ ನಮನ ಸಲ್ಲಿಸುವ ಮೂಲಕ ನಾವೆಲ್ಲಾ ಇಂದು ಹೆಮ್ಮೆ ಪಡುತ್ತಿದ್ದೇವೆ,ʼʼ ಎಂದು ಹೇಳಿದರು.
ಪ್ರಧಾನ ಮಂತ್ರಿಗಳು ಮಾತನಾಡಿ, “ಈ ಭಾಗದ ಇಡೀ ಪ್ರದೇಶದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸೇವೆಗೆ ಸಂಬಂಧಪಟ್ಟಂತೆ ನೂರಾರು ಕೋಟಿ ರೂ. ಮೊತ್ತದ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯವನ್ನು ನೆರವೇರಿಸಲಾಗಿದೆ. ಗೋವಿಂದ ಗುರು ವಿಶ್ವವಿದ್ಯಾಲಯದ ಹೊಸ ಆಡಳಿತಾತ್ಮಕ ಕ್ಯಾಂಪಸ್ ಹಾಗೂ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಾಣದಂತಹ ಯೋಜನೆಗಳು ನಮ್ಮ ಬುಡಕಟ್ಟು ಮಕ್ಕಳಿಗೆ ಬಹಳ ಉಪಯುಕ್ತವಾಗಲಿವೆ,ʼʼ ಎಂದು ಹೇಳಿದರು.
ಜಂಬುಘೋಡಾವನ್ನು ಪವಿತ್ರ ಸ್ಥಳಕ್ಕೆ ಹೋಲಿಸಿ ಬಣ್ಣಿಸಿದ ಪ್ರಧಾನ ಮಂತ್ರಿಗಳು, ಬುಡಕಟ್ಟು ಸಮುದಾಯದವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ತೋರಿದ ಶೌರ್ಯ ಹಾಗೂ ಸಾಹಸದ ವೈಭವಯುತ ಇತಿಹಾಸವನ್ನುಸ್ಮರಿಸಿದರು. ಹಾಗೆಯೇ 1857ರ ಕ್ರಾಂತಿಗೆ ಪ್ರೇರಣೆ ನೀಡಿದ ನೈಕ್ಡಾ ಚಳವಳಿಯನ್ನೂ ನೆನಪಿಸಿಕೊಂಡರು. ನಂತರ ಪರಮೇಶ್ವರ್ ಜೊರಿಯಾ ಅವರು ಚಳವಳಿಯನ್ನು ವಿಸ್ತರಿಸಿದರೆ ರೂಪ್ ಸಿಂಗ್ ನಾಯಕ್ ಅವರು ಹೋರಾಟಕ್ಕೆ ಜೊತೆಗೂಡಿದರು. 1857ರ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ತಾತ್ಯಾ ಟೋಪಿ ಅವರ ಜೊತೆಗೂಡಿ ಹೋರಾಟ ನಡೆಸಿದ್ದನ್ನು ಪ್ರಧಾನ ಮಂತ್ರಿಗಳು ನೆನಪಿಸಿಕೊಂಡರು. ಬ್ರಿಟೀಷರು ಈ ವೀರರನ್ನು ಗಲ್ಲಿಗೇರಿಸಿದ ಮರಕ್ಕೆ ನಮಿಸುವ ಅವಕಾಶ ತಮಗೆ ದೊರಕಿದ ಬಗ್ಗೆ ಹಾಗೂ ಆ ಸಂಬಂಧ 2012ರಲ್ಲಿ ಒಂದು ಪುಸ್ತಕ ಕೂಡ ಬಿಡುಗಡೆಯಾಗಿದ್ದನ್ನು ಸ್ಮರಿಸಿದರು.
ಗುಜರಾತ್ನಲ್ಲಿ ಬಹಳ ಹಿಂದೆಯೇ ಶಾಲೆಗಳಿಗೆ ಹುತಾತ್ಮರ ಹೆಸರು ನಾಮಕರಣ ಮಾಡುವ ಸಂಪ್ರದಾಯ ಶುರು ಮಾಡಿರುವುದನ್ನು ಸ್ಮರಿಸಿದ ಪ್ರಧಾನ ಮಂತ್ರಿಗಳು, ವಡೇಕ್ ಹಾಗೂ ದಾಂಡಿಯಾಪುರದ ಪ್ರಾಥಮಿಕ ಶಾಲೆಗಳಿಗೆ ಸಂತ ಜೊರಿಯಾ ಪರಮೇಶ್ವರ್ ಹಾಗೂ ರೂಪ್ ಸಿಂಗ್ ನಾಯಕ ಅವರ ಹೆಸರಿಡಲಾಗಿದೆ. ಇಂದು ಆ ಶಾಲೆಗಳು ಸಂಪೂರ್ಣ ಹೊಸ ರೂಪ ಪಡೆದುಕೊಂಡಿವೆ. ಈ ಎರಡೂ ಶಾಲೆಗಳಲ್ಲಿ ಬುಡಕಟ್ಟು ಸಮುದಾಯದ ಇಬ್ಬರೂ ವೀರರ ಪ್ರತಿಮೆ ಅನಾವರಣಗೊಂಡಿದ್ದು, ಶಿಕ್ಷಣ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಬುಡಕಟ್ಟು ಸಮಾಜದ ಕೊಡುಗೆಗಳನ್ನು ಸಾರುವ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮಿವೆ ಎಂದು ಹೇಳಿದರು.
ಎರಡು ದಶಕಗಳ ಹಿಂದೆ ಗುಜರಾತ್ ರಾಜ್ಯಕ್ಕೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕ ಸಂದರ್ಭದಲ್ಲಿ ಅದಕ್ಕೂ ಹಿಂದಿನ ಸರಕಾರಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿದ್ದ ಕೊರತೆಯನ್ನು ಪ್ರಧಾನ ಮಂತ್ರಿಗಳು ಸ್ಮರಿಸಿದರು. ಬುಡಕಟ್ಟು ಜನರು ನೆಲೆಸಿರುವ ಪ್ರದೇಶದಲ್ಲಿ ಶಿಕ್ಷಣ, ಪೋಷಣೆ ಹಾಗೂ ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳ ಕೊರತೆ ವ್ಯಾಪಕವಾಗಿತ್ತು. “ಆ ಪರಿಸ್ಥಿತಿಯನ್ನು ನಿಭಾಯಿಸಲು, ʼಸಬ್ಕಾ ಪ್ರಯಾಸ್ʼ ಸ್ಫೂರ್ತಿಯೊಂದಿಗೆ ನಾವು ಕಾರ್ಯನಿರ್ವಹಿಸಲಾರಂಭಿಸಿದೆವು. ನಮ್ಮ ಬುಡಕಟ್ಟು ಸಹೋದರರು ಹಾಗೂ ಸಹೋದರಿಯರು ಬದಲಾವಣೆಯ ಹಾದಿಯತ್ತ ಹೆಜ್ಜೆ ಹಾಕಿದರು. ಅವರ ಸ್ನೇಹಿತನಂತೆ ಸರಕಾರ ಅವರಿಗೆ ಸಾಧ್ಯವಿರುವ ಎಲ್ಲ ಬಗೆಯ ನೆರವು ಒದಗಿಸಿತು,ʼʼ ಎಂದು ಹೇಳಿದರು.
ಈಗ ಕಾಣುತ್ತಿರುವ ಫಲಿತಾಂಶವು ಕೇವಲ ಒಂದು ದಿನದ ಕಾರ್ಯದ ಪರಿಣಾಮವಾಗಿರದೆ ಬುಡಕಟ್ಟು ಸಮುದಾಯದ ಲಕ್ಷಾಂತರ ಕುಟುಂಬಗಳು ಪ್ರತಿ ದಿನ, ಪ್ರತಿ ಕ್ಷಣ ನಿರಂತರವಾಗಿ ನಡೆಸಿದ ಪ್ರಯತ್ನದ ಫಲವಾಗಿ ಸಾಕಾರಗೊಂಡಿದೆ ಎಂದು ಪ್ರಧಾನ ಮಂತ್ರಿಗಳು ಹೆಮ್ಮೆಯಿಂದ ನುಡಿದರು. ಬುಡಕಟ್ಟು ಜನರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತದವರೆಗೆ 10,000 ಹೊಸ ಶಾಲೆಗಳ ಆರಂಭ, ಡಜನ್ಗೂ ಹೆಚ್ಚು ಏಕಲವ್ಯ ಮಾದರಿ ಶಾಲೆಗಳು, ವಿದ್ಯಾರ್ಥಿನಿಯರಿಗಾಗಿ ವಿಶೇಷ ವಸತಿ ಶಾಲೆಗಳು ಹಾಗೂ ಆಶ್ರಮ ಶಾಲೆಗಳನ್ನು ಆರಂಭಿಸಿರುವುದನ್ನು ಪ್ರಧಾನ ಮಂತ್ರಿಗಳು ಉದಾಹರಣೆಯಾಗಿ ನೀಡಿದರು. ಹಾಗೆಯೇ ಶಾಲೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ಜತೆಗೆ ಹೆಣ್ಣು ಮಕ್ಕಳು ಶಾಲೆಗೆ ಹೋಗಿ ಬರಲು ಸರಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿರುವುದನ್ನು ಅವರು ಉಲ್ಲೇಖಿಸಿದರು.
ಕನ್ಯಾ ಶಿಕ್ಷಾ ರಥ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಉತ್ತೇಜಿಸಲು ಸರಕಾರ ಕೈಗೊಂಡಿರುವ ಪ್ರಯತ್ನಗಳತ್ತ ಬಗ್ಗೆ ಒತ್ತಿ ಹೇಳಿದರು. ಶಾಲೆಗಳಲ್ಲಿ ವೈಜ್ಞಾನಿಕ ಶಿಕ್ಷಣದ ಕೊರತೆಯ ಸವಾಲಿನ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಕಳೆದ ಎರಡು ದಶಕಗಳಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿರುವ ಜಿಲ್ಲೆಗಳಲ್ಲಿ 11 ವಿಜ್ಞಾನ ಕಾಲೇಜುಗಳು, 11 ವಾಣಿಜ್ಯ ಕಾಲೇಜುಗಳು, 23 ಕಲಾ ಕಾಲೇಜುಗಳು ಹಾಗೂ ನೂರಾರು ಹಾಸ್ಟೆಲ್ಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.
20- 25 ವಷಗಳ ಹಿಂದೆ ಬುಡಕಟ್ಟು ಜನರಿರುವ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಶಾಲೆಗಳ ಕೊರತೆಯಿದ್ದುದರ ಕುರಿತು ಬೆಳಕು ಚೆಲ್ಲಿದ ಪ್ರಧಾನ ಮಂತ್ರಿಗಳು, “ಇಂದು ಎರಡು ಬುಡಕಟ್ಟು ವಿಶ್ವವಿದ್ಯಾಲಯಗಳಿದ್ದು, ಗೋಧ್ರಾದಲ್ಲಿ ಗೋವಿಂದ ಗುರು ವಿಶ್ವವಿದ್ಯಾಲಯ ಹಾಗೂ ನರ್ಮದಾದಲ್ಲಿರುವ ಬಿರ್ಸಾ ಮುಂಡಾ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದಲ್ಲಿ ಅತ್ಯುನ್ನತ ಸಂಸ್ಥೆಗಳಾಗಿವೆ,ʼʼ ಎಂದು ಹೇಳಿದರು. ಗೋವಿಂದ ಗುರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನ ಮಂತ್ರಿಗಳು, ಅಹಮದಾಬಾದ್ನ ಕೌಶಲ್ಯ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ನಿಂದಾಗಿ ಪಂಚಮಹಲ್ ಸೇರಿದಂತೆ ಬುಡಕಟ್ಟು ಜನರು ನೆಲೆಸಿರುವ ಪ್ರದೇಶಗಳ ಯುವಜನತೆಗೆ ಅನುಕೂಲವಾಗಲಿದೆ. ಇದು ಡ್ರೋಣ್ ಪೈಲಟ್ ಪರವಾನಗಿ ನೀಡಲು ಮಾನ್ಯತೆ ಪಡೆದ ದೇಶದ ಪ್ರಥಮ ವಿಶ್ವವಿದ್ಯಾಲಯವಾಗಿದೆ,ʼʼ ಎಂದು ಬಣ್ಣಿಸಿದರು.
ಕಳೆದ ದಶಕದಿಂದೀಚೆಗೆ ವನಬಂಧು ಕಲ್ಯಾಣ ಯೋಜನೆಯು ಬುಡಕಟ್ಟು ಜನರಿರುವ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಳೆದ 14-15 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಈ ಯೋಜನೆಯಡಿ ವಿನಿಯೋಗಿಸಿ ಬುಡಕಟ್ಟು ಜನರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಗುಜರಾತ್ ಸರಕಾರವು ಇನ್ನೂ ಒಂದು ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಿದೆ ಎಂದು ಘೋಷಿಸಿದರು.
ಬುಡುಕಟ್ಟು ಜನರಿರುವ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಧಾನ ಮಂತ್ರಿಗಳು, ಕೊಳವೆಗಳ ಮೂಲಕ ನೀರು ಪೂರೈಕೆ, ಸೂಕ್ಷ್ಮ ನೀರಾವರಿ ಹಾಗೂ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಬುಡಕಟ್ಟು ಸಹೋದರಿಯರ ಸಬಲೀಕರಣ ಹಾಗೂ ಆದಾಯ ಹೆಚ್ಚಳಕ್ಕೆ ನೆರವಾಗಲು ಸಖಿ ಮಂಡಲಗಳು ರಚನೆಯಾಗಿವೆ. ಗುಜರಾತ್ನಲ್ಲಿ ಕೈಗಾರಿಕೀಕರಣದ ಪ್ರಯೋಜನವನ್ನು ಬುಡಕಟ್ಟು ಸಮುದಾಯದ ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕಿದೆ. ಅದಕ್ಕೆ ಪೂರಕವಾಗಿ ಐಟಿಐಗಳು, ಕಿಸಾನ್ ವಿಕಾಸ ಕೇಂದ್ರಗಳು ಹಾಗೂ ವೃತ್ತಿಪರ ತರಬೇತಿ ಕೇಂದ್ರಗಳು ದೊಡ್ಡ ಪ್ರಮಾಣದಲ್ಲಿ ಆರಂಭವಾಗಿದ್ದು, ಈವರೆಗೆ ಸುಮಾರು 18 ಲಕ್ಷ ಬುಡಕಟ್ಟು ಯುವಜನತೆ ತರಬೇತಿ ಪಡೆದು ಉದ್ಯೋಗ ಪಡೆದಿದ್ದಾರೆ ಎಂದು ವಿವರಿಸಿದರು.
ಸುಮಾರು 20- 25 ವರ್ಷಗಳ ಹಿಂದೆ ʼಸಿಕಲ್ ಸೆಲ್ʼ ರೋಗದ ಹಾವಳಿ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, ಬುಡಕಟ್ಟು ಜನರಿರುವ ಜಿಲ್ಲೆಗಳಲ್ಲಿ ಚಿಕಿತ್ಸಾಲಯಗಳ ಕೊರತೆ ಹಾಗೂ ದೊಡ್ಡ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿಯೂ ಬೆರಳೆಣಿಕೆ ಚಿಕಿತ್ಸೆಯಷ್ಟೇ ಲಭ್ಯವಿತ್ತು. ಆದರೆ ಇಂದು, ಡಬಲ್ ಎಂಜಿನ್ ಸರಕಾರವು ಗ್ರಾಮ ಗಳ ಮಟ್ಟದಲ್ಲಿ ನೂರಾರು ಸಣ್ಣ ಆಸ್ಪತ್ರೆಗಳನ್ನು ತೆರೆದಿದ್ದು, ಈ ಪ್ರದೇಶಗಳಲ್ಲಿ 1400ಕ್ಕೂ ಹೆಚ್ಚು ಆರೋಗ್ಯ ಹಾಗೂ ಯೋಗಕ್ಷೇಮ ಕೇಂದ್ರಗಳನ್ನು ಆರಂಭಿಸಲಾಗಿದೆ. ಗೋಧ್ರಾ ವೈದ್ಯಕೀಯ ಕಾಲೇಜಿನ ಹೊಸ ಕಟ್ಟಡ ನಿರ್ಮಾಣ ಕಾರ್ಯದಿಂದ ದಾಹೋದ್, ಬನಸ್ಕಾಂತ ಹಾಗೂ ವಲ್ಸದ್ ವೈದ್ಯಕೀಯ ಕಾಲೇಜುಗಳ ಮೇಲಿನ ಒತ್ತಡ ತಗ್ಗಲಿದೆ,ʼʼ ಎಂದು ಹೇಳಿದರು.
ʼಸಬ್ಕಾ ಪ್ರಯಾಸ್ʼ ಕಾರಣದಿಂದಾಗಿ ಬುಡಕಟ್ಟು ಜಿಲ್ಲೆಗಳ ಪ್ರತಿ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕದ ಜತೆಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ವ್ಯವಸ್ಥೆಯಾಗಿದೆ. ದಾಂಗ್ ಬುಡಕಟ್ಟು ಜಿಲ್ಲೆಯು ಗುಜರಾತ್ನಲ್ಲಿ ದಿನದ 24 ಗಂಟೆ ವಿದ್ಯುತ್ ಪೂರೈಕೆ ವ್ಯವಸ್ಥೆ ಪಡೆದ ಪ್ರಥಮ ಜಿಲ್ಲೆಯಾಗಿದ್ದು, ಆ ಮೂಲಕ ಕೈಗಾರಿಕೆಗಳ ವಿಸ್ತರಣೆಗೆ ಸಹಕಾರಿಯಾಗಿದೆ. ಗುಜರಾತ್ನ ಗೋಲ್ಡನ್ ಕಾರಿಡಾರ್ ಯೋಜನೆ ಜತೆಗೆ ಅವಳಿ ನಗರಗಳ ಅಭಿವೃದ್ಧಿ ಕಾರ್ಯ ನಡೆದಿದೆ. ಹಲೋಲ್- ಕಲೋಲ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕಾ ಅಭಿವೃದ್ಧಿ ಕಾರ್ಯ ನಡೆದಿದೆ,ʼʼ ಎಂದು ಮಾಹಿತಿ ನೀಡಿದರು.
ಭಾರತದಲ್ಲಿ ಬುಡಕಟ್ಟು ಸಮುದಾಯಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನ ಮಂತ್ರಿಗಳು, ಬಿಜೆಪಿ ಸರ್ಕಾರವು ಪ್ರಥಮ ಬಾರಿಗೆ ಬುಡಕಟ್ಟು ಸಮುದಾಯಕ್ಕೆಂದೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿ ವನ್ ಧನ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಬ್ರಿಟೀಷರ ಕಾಲದಿಂದಲೂ ಜಾರಿಯಲ್ಲಿದ್ದ ಬಿದಿರು ಕೃಷಿ ಹಾಗೂ ಮಾರಾಟ ನಿಷೇಧವನ್ನು ಸರ್ಕಾರ ರದ್ದುಗೊಳಿಸಿರುವುದನ್ನು ಉದಾಹರಣೆಯಾಗಿ ನೀಡಿದ ಪ್ರಧಾನ ಮಂತ್ರಿಗಳು, ಅರಣ್ಯ ಉತ್ಪನ್ನಗಳ ಕಡೆಗಣನೆಗೆ ಅಂತ್ಯ ಹಾಡಿ 80ಕ್ಕೂ ಹೆಚ್ಚು ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೌಲಭ್ಯ ಕಲ್ಪಿಸುವ ಮೂಲಕ ಬುಡಕಟ್ಟು ಜನರಿಗೆ ನೆರವು ನೀಡಿ ಅವರು ಜೀವನ ನಿರ್ವಹಣೆಯನ್ನು ಉತ್ತಮ ಹಾಗೂ ಗೌರವಯುತಗೊಳಿಸಲಾಗಿದೆ ಎಂದರು. ಹಾಗಾಗಿ ಇದೇ ಮೊದಲ ಬಾರಿಗೆ ಅಭಿವೃದ್ಧಿ ಹಾಗೂ ನೀತಿ ನಿರೂಪಣೆಯಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಯ ಭಾವನೆ ಬುಡಕಟ್ಟು ಸಮುದಾಯದವರಲ್ಲಿ ಮೂಡಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು “ಜನ್ಜಾತಿಯ ಗೌರವ್ ದಿವಸʼವಾಗಿ ಆಚರಿಸಲು ಸರಕಾರ ನಿರ್ಧರಿಸಿದೆ,ʼʼ ಎಂದು ಪ್ರಕಟಿಸಿದರು.
ಬಡವರು, ತುಳಿತಕ್ಕೊಳಗಾದವರು, ಹಿಂದುಳಿದವರು ಹಾಗೂ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಡಬಲ್ ಎಂಜಿನ್ ಸರ್ಕಾರವು ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, ಉಚಿತ ಪಡಿತರ ಯೋಜನೆ, ಉಚಿತ ಕೋವಿಡ್ ಲಸಿಕೆ ವಿತರಣೆ, ಬಡವರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆ ವ್ಯವಸ್ಥೆ ಹಾಗೂ ಸಣ್ಣ ರೈತರು ರಸಗೊಬ್ಬರ, ಬಿತ್ತನೆ ಬೀಜ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಇತರೆ ವೆಚ್ಚ ಭರಿಸಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು ನೀಡುವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಉದಾಹರಣೆ ನೀಡಿದರು. ಪಕ್ಕಾ ಮನೆಗಳು, ಶೌಚಾಲಯಗಳು, ಅಡುಗೆ ಅನಿಲ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಸೌಲಭ್ಯಗಳ ಫಲಾನುಭವಿಗಳಲ್ಲಿ ಹೆಚ್ಚಿನವರು ಬುಡಕಟ್ಟು ಜನರು, ದಲಿತರು, ಹಿಂದುಳಿದ ವರ್ಗದ ಕುಟುಂಬದವರೇ ಆಗಿದ್ದಾರೆ,ʼʼ ಎಂದು ಉಲ್ಲೇಖಿಸಿದರು.
ಭಾರತದ ಸಂಸ್ಕೃತಿ ಹಾಗೂ ನಂಬಿಕೆಯನ್ನು ಉಳಿಸುವಲ್ಲಿ ಬುಡಕಟ್ಟು ಸಮುದಾಯದ ಪ್ರಮುಖರ ಮಹತ್ವವನ್ನು ಪ್ರಸ್ತಾಪಿಸುತ್ತಾ, ಚಂಪಾನೆರ್, ಪವಗಢ್, ಸೋಮನಾಥ್ ಹಾಗೂ ಹಲ್ಡಿಘಟಿಯ ಉದಾಹರಣೆ ನೀಡಿದರು. ಈಗ ಪವಗಢ ದೇವಸ್ಥಾನವು ನವೀಕರಣಗೊಂಡಿದ್ದು, ಅದರ ಧ್ವಜವು ವೈಭವದಿಂದ ರಾರಾಜಿಸುತ್ತಿದೆ. ಅದೇ ರೀತಿ ಅಂಬಾಜಿ ಮಾತಾ ಧಾಮ ಹಾಗೂ ದೇವ್ಮೊಗ್ರಾ ಮಾತಾ ದೇವಸ್ಥಾನಗಳ ಅಭಿವೃದ್ಧಿಗೂ ನಿರಂತರ ಪ್ರಯತ್ನ ನಡೆಯುತ್ತಿದೆ,ʼʼ ಎಂದು ಹೇಳಿದರು.
ಉದ್ಯೋಗ ಸೃಷ್ಟಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಮಹತ್ವದ ಪಾತ್ರ ವಹಿಸಿರುವ ಬಗ್ಗೆ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು. ಮುಖ್ಯವಾಗಿ ಶ್ರೀಮಂತ ಪ್ರವಾಸಿ ತಾಣವಾಗಿ ಪಂಚಮಹಲ್ ಕ್ಷೇತ್ರ, ಪುರಾತನ ವಾಸ್ತುಶಿಲ್ಪಕ್ಕೆ ಹೆಸರಾದ ಚಂಪನೇರ್- ಪಾವಗದ್, ವನ್ಯಜೀವಿ ತಾಣಕ್ಕೆ ಹೆಸರಾದ ಜಂಬುಗೋಡಾ, ಹತ್ನಿಮಾತಾ ಜಲಪಾತ, ಧನ್ಪುರಿಯಲ್ಲಿನ ಪರಿಸರ ಪ್ರವಾಸೋದ್ಯಮ (ಎಕೋ ಟೂರಿಸಂ), ದಾಡಾ ಜಲಾಶಯ, ಧಾನೇಶ್ವರಿ ಮಾತಾ ದೇವಾಲಯ, ಜಂಡ್ ಹನುಮಾನ್ ಜಿ… ಇವೆಲ್ಲಾ ಪ್ರವಾಸೋದ್ಯಮ ಸರ್ಕಿಟ್ ಆಗಿ ಅಭಿವೃದ್ಧಿಯಾಗುವ ಮೂಲಕ ಹೊಸ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಲಿದೆ. ಬುಡಕಟ್ಟು ಜನರ ಹೆಮ್ಮೆ ಹಾಗೂ ನಂಬಿಕೆಯ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊನೆಗೆ ಸಮಾರೋಪದ ನುಡಿಗಳನ್ನಾಡಿದ ಪ್ರಧಾನ ಮಂತ್ರಿಗಳು, ಡಬಲ್ ಎಂಜಿನ್ ಸರಕಾರವು ದೊಡ್ಡ ಪ್ರಮಾಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿವೃದ್ಧಿಯ ಪ್ರಯೋಜನ ಪ್ರತಿಯೊಬ್ಬರಿಗೂ ತಲುಪಲಿದೆ. ಕಠಿಣ ಪರಿಶ್ರಮ ಹಾಗೂ ಬದ್ಧತೆಯ ಕಾರ್ಯ ನಿರ್ವಹಣೆ ಮೂಲಕ ವಾಸ್ತವದಲ್ಲಿ ಬದಲಾವಣೆ ತರುವುದು ನಮ್ಮ ಇಚ್ಛೆ. ನಾವೆಲ್ಲಾ ಒಟ್ಟಾಗಿ ಅಭಿವೃದ್ಧಿ ಹೊಂದಿದ ಗುಜರಾತ್ ಹಾಗೂ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡೋಣ,ʼʼ ಎಂದು ಕರೆ ನೀಡಿ ಮಾತಿಗೆ ವಿರಾಮ ಹೇಳಿದರು.
ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸರು, ಸಚಿವರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನ ಮಂತ್ರಿಗಳು ಗುಜರಾತ್ನ ಪಂಚಮಹಲ್ನ ಜಂಬುಗೋಡಾದಲ್ಲಿ ಸುಮಾರು 860 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನೇರವೇರಿಸುವ ಜತೆಗೆ ಪೂರ್ಣಗೊಂಡ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. ಗೋಧ್ರಾದ ಗೋವಿಂದ ಗುರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್, ವಡೇಕ್ ಗ್ರಾಮದಲ್ಲಿನ ಸಂತ ಜೋರಿಯಾ ಪರಮೇಶ್ವರ್ ಪ್ರಾಥಮಿಕ ಶಾಲೆ ಹಾಗೂ ಸ್ಮಾರಕ, ದಾಂಡಿಯಾಪುರ ಗ್ರಾಮದ ರಾಜ ರೂಪ್ ಸಿಂಗ್ ನಾಯಕ್ ಪ್ರಾಥಮಿಕ ಶಾಲೆ ಹಾಗೂ ಸ್ಮಾರಕವನ್ನು ಅವರು ಲೋಕಾರ್ಪಣೆ ನೆರವೇರಿಸಿದರು.
ಪ್ರಧಾನ ಮಂತ್ರಿಗಳು ಒಟ್ಟು 680 ಕೋಟಿ ರೂ. ವೆಚ್ಚದಲ್ಲಿ ಗೋಧ್ರಾದಲ್ಲಿ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣ, ಗೋಧ್ರಾ ವೈದ್ಯಕೀಯ ಕಾಲೇಜಿನ ಅಭಿವೃದ್ಧಿ ಕಾರ್ಯ, ʼಕೌಶಲ್ಯʼ- ದಿ ಸ್ಕಿಲ್ ಯೂನಿವರ್ಸಿಟಿ ವಿಸ್ತರಣೆ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು.
*******