Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೀಪಾವಳಿಯ ಮುನ್ನಾ ದಿನ ಅಕ್ಟೋಬರ್ 23ರಂದು ಅಯೋಧ್ಯೆಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ದೀಪಾವಳಿಯ ಮುನ್ನಾ ದಿನ ಅಕ್ಟೋಬರ್ 23 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಪ್ರಧಾನಮಂತ್ರಿಯವರು ಭಗವಾನ್ ಶ್ರೀ ರಾಮಲಾಲಾ ವಿರಾಜಮಾನ್ ದರ್ಶನ ಪಡೆದು, ಪೂಜೆ ನೆರವೇರಿಸಲಿದ್ದಾರೆ. ನಂತರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸ್ಥಳವನ್ನು ಪರಿವೀಕ್ಷಿಸಲಿದ್ದಾರೆ. ಸಂಜೆ ಸುಮಾರು 5.45ಕ್ಕೆ ಸಾಂಕೇತಿಕವಾಗಿ ಭಗವಾನ್ ಶ್ರೀ ರಾಮನ ರಾಜ್ಯಾಭಿಷೇಕ ನೆರವೇರಿಸಲಿದ್ದಾರೆ. ಸಂಜೆ ಸುಮಾರು 6.30ರ ಹೊತ್ತಿಗೆ ಪ್ರಧಾನಮಂತ್ರಿಯವರು ಸರಯೂ ನದಿಯ ಹೊಸ ಘಾಟ್ ನಲ್ಲಿ ನಡೆಯುವ ಆರತಿಗೆ ಸಾಕ್ಷಿಯಾಗಲಿದ್ದು, ಅನಂತರ ಭವ್ಯ ದೀಪೋತ್ಸವ ಆಚರಣೆಗೆ ಚಾಲನೆ ನೀಡಲಿದ್ದಾರೆ.

ಈ ವರ್ಷ, ದೀಪೋತ್ಸವದ ಆರನೇ ಆವೃತ್ತಿ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿಗಳು ಈ ಆಚರಣೆಯಲ್ಲಿ ಖುದ್ದು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ 15 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುವುದು. ದೀಪೋತ್ಸವದಲ್ಲಿ ಐದು ಅನಿಮೇಟೆಡ್ ಸ್ತಬ್ಧಚಿತ್ರಗಳು ಮತ್ತು ವಿವಿಧ ರಾಜ್ಯಗಳ ವಿವಿಧ ನೃತ್ಯ ಪ್ರಕಾರಗಳೊಂದಿಗೆ ಹನ್ನೊಂದು ರಾಮಲೀಲಾ ಸ್ತಬ್ಧಚಿತ್ರಗಳನ್ನು ಸಹ ಪ್ರದರ್ಶಿಸಲಾಗುವುದು. ಭವ್ಯವಾದ ಸಂಗೀತಮಯ ಲೇಸರ್ ಪ್ರದರ್ಶನದ ಜೊತೆಗೆ ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ ನಡೆಯಲಿರುವ 3-ಡಿ ಹೋಲೋಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನಕ್ಕೂ ಪ್ರಧಾನಮಂತ್ರಿಯವರು ಸಾಕ್ಷಿಯಾಗಲಿದ್ದಾರೆ.

****