Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವಸಂಸ್ಥೆಯ ವರ್ಲ್ಡ್ ಜಿಯೋಸ್ಪೇಷಿಯಲ್ ಇಂಟರ್‌ನ್ಯಾಶನಲ್ ಕಾಂಗ್ರೆಸ್‌ನಲ್ಲಿ ಪ್ರಧಾನಮಂತ್ರಿಯವರ ಭಾಷಣ

ವಿಶ್ವಸಂಸ್ಥೆಯ ವರ್ಲ್ಡ್ ಜಿಯೋಸ್ಪೇಷಿಯಲ್ ಇಂಟರ್‌ನ್ಯಾಶನಲ್ ಕಾಂಗ್ರೆಸ್‌ನಲ್ಲಿ ಪ್ರಧಾನಮಂತ್ರಿಯವರ ಭಾಷಣ


ಅಂತರರಾಷ್ಟ್ರೀಯ ಪ್ರತಿನಿಧಿಗಳೇ, ಜಾಗತಿಕ ಭೂ-ಪ್ರಾದೇಶಿಕ ವಲಯದ ತಜ್ಞರೇ, ಗೌರವಾನ್ವಿತ ಗಣ್ಯರೆ ಮತ್ತು ಸ್ನೇಹಿತರೇ.  ನಿಮಗೆಲ್ಲರಿಗೂ ಭಾರತಕ್ಕೆ ಸುಸ್ವಾಗತ!

ಎರಡನೇ ವಿಶ್ವಸಂಸ್ಥೆಯ ವಿಶ್ವ ಭೂ-ಪ್ರಾದೇಶಿಕ ಅಂತಾರಾಷ್ಟ್ರೀಯ ಕಾಂಗ್ರೆಸ್ಸಿನ ಭಾಗವಾಗಿ ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ನನಗೆ ಸಂತೋಷವಾಗಿದೆ. ನಾವು ಒಟ್ಟಾಗಿ ನಮ್ಮ ಭವಿಷ್ಯವನ್ನು ನಿರ್ಮಿಸುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮ ಆತಿಥೇಯರಾಗಲು ಭಾರತೀಯರು ಸಂತೋಷಪಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಅದ್ಭುತ. ಈ ನಗರವು ಅದರ ಸಂಸ್ಕೃತಿ ಮತ್ತು ತಿನಿಸಿಗೆ, ಅದರ ಆತಿಥ್ಯ ಮತ್ತು ಹೈಟೆಕ್ ದೂರದೃಷ್ಟಿಗೆ ಹೆಸರುವಾಸಿಯಾಗಿದೆ.

ಸ್ನೇಹಿತರೇ,

ಈ ಸಮ್ಮೇಳನದ ವಿಷಯ  ‘ಜಿಯೋ-ಎನೇಬಲಿಂಗ್ ದಿ ಗ್ಲೋಬಲ್ ವಿಲೇಜ್: ನೋ ಒನ್‌ ಶುಡ್‌ ಬಿ ಲೆಫ್ಟ್‌ ಬಿಹೈಂಡ್‌ ʼ (ಪ್ರತಿಯೊಬ್ಬರನ್ನೂ ತಲುಪುವಿಕೆ) ಇದು ಕಳೆದ ಕೆಲವು ವರ್ಷಗಳಿಂದ ಭಾರತ ತೆಗೆದುಕೊಂಡ ಹೆಜ್ಜೆಗಳಲ್ಲಿ ಕಂಡುಬರುವ ವಿಷಯವಾಗಿದೆ. ನಾವು ʼಅಂತ್ಯೋದಯ ಯೋಜನೆಯʼ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದೇವೆ, ಅಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮಿಷನ್ ಮೋಡ್‌ನಲ್ಲಿ ಸಬಲೀಕರಣಗೊಳಿಸುವುದು. ಈ ದೃಷ್ಟಿಯೇ ನಮಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಬಲೀಕರಣದಲ್ಲಿ ಬೃಹತ್ ಪ್ರಮಾಣದಲ್ಲಿ ಮಾರ್ಗದರ್ಶನ ನೀಡಿದೆ.  ಬ್ಯಾಂಕ್‌ ಸೌಲಭ್ಯ ಹೊಂದಿರದಿದ್ದ 450 ದಶಲಕ್ಷ  ಜನರಿಗೆ  ಬ್ಯಾಂಕಿಂಗ್ ಸೇವೆ, ಈ ಪ್ರಮಾಣವು  ಅಮೆರಿಕಾಕ್ಕಿಂತ ಹೆಚ್ಚಿನ ಜನಸಂಖ್ಯೆಯಾಗಿದೆ, 135 ದಶಲಕ್ಷ ವಿಮೆ ಇಲ್ಲದ  ಜನರಿಗೆ ವಿಮೆ, ಈ ಪ್ರಮಾಣವು ಫ್ರಾನ್ಸ್‌ನ ಸುಮಾರು ಎರಡು ಪಟ್ಟು ಜನಸಂಖ್ಯೆಯಾಗಿದೆ, 110 ದಶಲಕ್ಷ ಕುಟುಂಬಗಳಿಗೆ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು ಮತ್ತು 60 ದಶಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ, ಇವುಗಳಿಂದಾಗಿ ಭಾರತವು ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳುತ್ತಿದೆ.

 ಸ್ನೇಹಿತರೇ,

ಭಾರತದ ಅಭಿವೃದ್ಧಿಯ ಪಯಣದಲ್ಲಿ ಎರಡು ಸ್ತಂಭಗಳು ಪ್ರಮುಖವಾಗಿವೆ: ತಂತ್ರಜ್ಞಾನ ಮತ್ತು ಪ್ರತಿಭೆ. ಮೊದಲ ಸ್ತಂಭ – ತಂತ್ರಜ್ಞಾನವನ್ನು ನೋಡೋಣ. ತಂತ್ರಜ್ಞಾನವು ಪರಿವರ್ತನೆಯನ್ನು ತರುತ್ತದೆ. ನೈಜ-ಸಮಯದ ಡಿಜಿಟಲ್ ಪಾವತಿಗಳಲ್ಲಿ ಭಾರತವು ವಿಶ್ವದ ನಂಬರ್ 1 ಎಂದು ನಿಮ್ಮಲ್ಲಿ ಕೆಲವರು ಕೇಳಿರಬಹುದು. ನೀವು ಪ್ರಯತ್ನಿಸಿದರೆ, ಚಿಕ್ಕ ಮಾರಾಟಗಾರರು ಸಹ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತಾರೆ, ಆದ್ಯತೆ ನೀಡುತ್ತಾರೆ. ಅದೇ ರೀತಿ, ತಂತ್ರಜ್ಞಾನದ ಮೂಲಕ ನಾವು ಕೋವಿಡ್-‌19ರ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿದ್ದೇವೆ. ನಮ್ಮ ತಂತ್ರಜ್ಞಾನ ಆಧಾರಿತ ಜಾಮ್‌ ಟ್ರಿನಿಟಿಯು 800 ದಶಲಕ್ಷ ಜನರಿಗೆ ಕಲ್ಯಾಣ ಯೋಜನೆಯ ಪ್ರಯೋಜನಗಳನ್ನ ಅಡೆತಡೆಯಿಲ್ಲದೆ ತಲುಪಿಸಿದೆ! ವಿಶ್ವದ ಅತಿದೊಡ್ಡ ಲಸಿಕೆ ನೀಡುವ ಅಭಿಯಾನವು ಕೂಡ ತಂತ್ರಜ್ಞಾನದ ಪ್ಲಾಟ್‌ಫಾರ್ಮ್‌ನಿಂದ ಚಾಲಿತವಾಗಿದೆ. ಭಾರತದಲ್ಲಿ, ತಂತ್ರಜ್ಞಾನವು ಹೊರಗಿನ ಅಂಶವಲ್ಲ. ಇದು ಒಳಗೊಳ್ಳುವ ಅಂಶವಾಗಿದೆ. ನೀವೆಲ್ಲರೂ ಜಿಯೋ-ಸ್ಪೇಷಿಯಲ್ – ಭೂ-ಪ್ರಾದೇಶಿಕ ವಲಯಕ್ಕೆ ಸಂಬಂಧಿಸಿದ ಜನರು. ಜಿಯೋ-ಸ್ಪೇಷಿಯಲ್ ತಂತ್ರಜ್ಞಾನವು ಸೇರ್ಪಡೆ ಮತ್ತು ಪ್ರಗತಿಗೆ ಚಾಲನೆ ನೀಡುತ್ತಿದೆ ಎಂದು ತಿಳಿದುಕೊಳ್ಳಲು ನಿಮಗೆ ತುಂಬಾ ಸಂತೋಷವಾಗುತ್ತದೆ. ಉದಾಹರಣೆಗೆ ನಮ್ಮ ಸ್ವಾಮಿತ್ವ ಯೋಜನೆಯನ್ನು ತೆಗೆದುಕೊಳ್ಳಿ. ಗ್ರಾಮಗಳಲ್ಲಿನ ಆಸ್ತಿಗಳನ್ನು ನಕ್ಷೆ ಮಾಡಲು ನಾವು ಡ್ರೋನ್‌ಗಳನ್ನು ಬಳಸುತ್ತಿದ್ದೇವೆ. ಈ ದತ್ತಾಂಶವನ್ನು ಬಳಸಿಕೊಂಡು, ಗ್ರಾಮಸ್ಥರು ಆಸ್ತಿ ಕಾರ್ಡ್‌ಗಳನ್ನು ಪಡೆಯುತ್ತಿದ್ದಾರೆ. ದಶಕಗಳಲ್ಲಿ ಮೊದಲ ಬಾರಿಗೆ, ಗ್ರಾಮೀಣ ಪ್ರದೇಶದ ಜನರು ಮಾಲೀಕತ್ವದ ಸ್ಪಷ್ಟ ದಾಖಲೆಗಳನ್ನು ಹೊಂದಿದ್ದಾರೆ. ಆಸ್ತಿಯ ಹಕ್ಕುಗಳು ಪ್ರಪಂಚದ ಎಲ್ಲಿಯಾದರೂ ಸಮೃದ್ಧಿಯ ಅಡಿಪಾಯ ಎಂದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ಮಹಿಳೆಯರು ಮಾಲೀಕತ್ವದ ಪ್ರಧಾನ ಫಲಾನುಭವಿಗಳಾದಾಗ ಈ ಏಳಿಗೆಯನ್ನು ಇನ್ನಷ್ಟು ವೇಗಗೊಳಿಸಬಹುದು.

ಇದನ್ನೇ ನಾವು ಭಾರತದಲ್ಲಿ ಮಾಡುತ್ತಿರುವುದು. ನಮ್ಮ ಸಾರ್ವಜನಿಕ ವಸತಿ ಯೋಜನೆಯು ಸುಮಾರು 24 ದಶಲಕ್ಷ ಬಡ ಕುಟುಂಬಗಳಿಗೆ ಮನೆಗಳನ್ನು ಒದಗಿಸಿದೆ. ಈ ಮನೆಗಳಲ್ಲಿ ಸುಮಾರು 70% ರಷ್ಟು ಮಹಿಳೆಯರು ಏಕೈಕ ಅಥವಾ ಜಂಟಿ ಮಾಲೀಕರಾಗಿದ್ದಾರೆ. ಈ ಕ್ರಮಗಳು ಬಡತನ ಮತ್ತು ಲಿಂಗ ಸಮಾನತೆಯ ಮೇಲೆ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ನಮ್ಮ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್‌ ಪ್ಲಾನ್ ಬಹು ಮಾದರಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ. ಇದು ಜಿಯೋ-ಸ್ಪೇಷಿಯಲ್ ತಂತ್ರಜ್ಞಾನದಿಂದ ಚಾಲಿತವಾಗುತ್ತಿದೆ. ನಮ್ಮ ಡಿಜಿಟಲ್ ಓಷನ್ ಪ್ಲಾಟ್‌ಫಾರ್ಮ್ ನಮ್ಮ ಸಾಗರಗಳ ನಿರ್ವಹಣೆಗಾಗಿ ಜಿಯೋ-ಸ್ಪೇಷಿಯಲ್ ತಂತ್ರಜ್ಞಾನವನ್ನು ಬಳಸುತ್ತಿದೆ. ಇದು ನಮ್ಮ ಪರಿಸರ ಮತ್ತು ಸಮುದ್ರ ಪರಿಸರ ವ್ಯವಸ್ಥೆಗೆ ನಿರ್ಣಾಯಕವಾಗಿದೆ. ಜಿಯೋ-ಸ್ಪೇಶಿಯಲ್ ತಂತ್ರಜ್ಞಾನದ ಪ್ರಯೋಜನಗಳನ್ನು ಹಂಚಿಕೊಳ್ಳುವಲ್ಲಿ ಭಾರತವು ಈಗಾಗಲೇ ಒಂದು ಮಾದರಿಯಾಗಿದೆ. ನಮ್ಮ ದಕ್ಷಿಣ ಏಷ್ಯಾ ಉಪಗ್ರಹವು ನಮ್ಮ ನೆರೆಹೊರೆಯಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತಿದೆ ಮತ್ತು ಸಂವಹನವನ್ನು ಸುಗಮಗೊಳಿಸುತ್ತಿದೆ.

ಸ್ನೇಹಿತರೇ,

ಭಾರತದ ಪ್ರಯಾಣವು ತಂತ್ರಜ್ಞಾನ ಮತ್ತು ಪ್ರತಿಭೆಯಿಂದ ನಡೆಸಲ್ಪಡುತ್ತದೆ ಎಂದು ನಾನು ನಿಮ್ಮೊಂದಿಗೆ ಮಾತನಾಡಿದ್ದೆ. ಈಗ ನಾವು ಎರಡನೇ ಸ್ತಂಭ, ಪ್ರತಿಭೆಗೆ ಬರೋಣ. ಭಾರತವು ಉತ್ತಮ ನಾವೀನ್ಯತೆಯ ಮನೋಭಾವವನ್ನು ಹೊಂದಿರುವ ಯುವ ರಾಷ್ಟ್ರವಾಗಿದೆ. ನಾವು ವಿಶ್ವದ ಟಾಪ್ ಸ್ಟಾರ್ಟ್ಅಪ್ ಹಬ್‌ಗಳ ಪಟ್ಟಿಯಲ್ಲಿದ್ದೇವೆ. 2021ರಿಂದ, ನಾವು ಯುನಿಕಾರ್ನ್ ಸ್ಟಾರ್ಟ್‌ಅಪ್‌ ನವೋದ್ಯಮಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದೇವೆ. ಇದಕ್ಕೆ ಭಾರತದ ಯುವ ಪ್ರತಿಭೆಯೇ ಕಾರಣ. ಭಾರತವು ವಸಾಹತುಶಾಹಿ ಆಳ್ವಿಕೆಯಿಂದ ಬಿಡುಗಡೆಗೊಂಡ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಒಂದು ಪ್ರಮುಖ ಸ್ವಾತಂತ್ರ್ಯವೆಂದರೆ ನಾವೀನ್ಯತೆಯ ಸ್ವಾತಂತ್ರ್ಯ. ಭಾರತದಲ್ಲಿನ ಭೂ-ಪ್ರಾದೇಶಿಕ ವಲಯಕ್ಕೆ ಇದನ್ನು ಖಾತ್ರಿಪಡಿಸಲಾಗಿದೆ. ನಮ್ಮ ಪ್ರತಿಭಾವಂತ, ಯುವ ಮನಸ್ಸುಗಳಿಗಾಗಿ ನಾವು ಹಲವು ಕ್ಷೇತ್ರಗಳನ್ನು ತೆರೆದಿದ್ದೇವೆ. ಎರಡು ಶತಮಾನಗಳಿಂದ ಸಂಗ್ರಹಿಸಿದ ಎಲ್ಲಾ ದತ್ತಾಂಶಗಳು ಕೂಡಲೇ  ಮುಕ್ತವಾದವು ಮತ್ತು ಲಭ್ಯವಾಗತೊಡಗಿದವು. ಭೌಗೋಳಿಕ-ಪ್ರಾದೇಶಿಕ ದತ್ತಾಂಶದ ಸಂಗ್ರಹಣೆ, ಉತ್ಪಾದನೆ ಮತ್ತು ಡಿಜಿಟಲೀಕರಣವು ಈಗ ಸಾರ್ವಜನಿಕವಾಗಿ ಲಭ್ಯವಾಗಿದೆ. ಅಂತಹ ಸುಧಾರಣೆಗಳು ಪ್ರತ್ಯೇಕವಾಗಿಲ್ಲ. ಜಿಯೋ-ಸ್ಪೇಷಿಯಲ್ ಸೆಕ್ಟರ್ ಜೊತೆಗೆ, ನಾವು ನಮ್ಮ ಡ್ರೋನ್ ವಲಯಕ್ಕೆ ಪ್ರಮುಖ ಉತ್ತೇಜನವನ್ನು ನೀಡಿದ್ದೇವೆ. ನಮ್ಮ ಬಾಹ್ಯಾಕಾಶ ಕ್ಷೇತ್ರವೂ ಖಾಸಗಿ ಸಹಭಾಗಿತ್ವಕ್ಕೆ ತೆರೆದುಕೊಂಡಿದೆ. ಭಾರತದಲ್ಲಿಯೂ 5ಜಿ ಪ್ರಾರಂಭವಾಗಿದೆ. ಅಸ್ತಿತ್ವದಲ್ಲಿರುವ ದತ್ತಾಂಶಕ್ಕೆ ಪ್ರವೇಶ, ಹೊಸ ದತ್ತಾಂಶವನ್ನು ಪಡೆಯಲು ಡ್ರೋನ್ ತಂತ್ರಜ್ಞಾನ, ಬಾಹ್ಯಾಕಾಶ ಸಾಮರ್ಥ್ಯಗಳಿಗೆ ವೇದಿಕೆ ಮತ್ತು ಹೈ-ಸ್ಪೀಡ್ ಸಂಪರ್ಕವು ಯುವ ಭಾರತ ಮತ್ತು ಜಗತ್ತಿಗೆ ಗಮನಾರ್ಹ ಬದಲಾವಣೆಯನ್ನೇ ತರುತ್ತದೆ.

ಸ್ನೇಹಿತರೇ,

ʼ ತಿಯೊಬ್ಬರನ್ನೂ ತಲುಪುವಿಕೆ’ ಎಂದು ನಾವು ಹೇಳಿದಾಗ, ಅದು ಎಲ್ಲೆಡೆ ಅನ್ವಯಿಸುತ್ತದೆ. ಕೋವಿಡ್-19 ಸಾಂಕ್ರಾಮಿಕವು ಎಲ್ಲರೂ ಜತೆಗೂಡಿ ಕೆಲಸ ಮಾಡುವೆಡೆಯಲ್ಲಿ ಜಗತ್ತಿಗೆ ಎಚ್ಚರಿಕೆಯ ಕರೆಯಾಗಬೇಕಿತ್ತು. ಅಭಿವೃದ್ಧಿಶೀಲ ಜಗತ್ತಿನಲ್ಲಿ ಶತಕೋಟಿ ಜನರಿಗೆ ರೋಗನಿರ್ಣಯ, ಔಷಧಗಳು, ವೈದ್ಯಕೀಯ ಉಪಕರಣಗಳು, ಲಸಿಕೆಗಳು ಮತ್ತು ಹೆಚ್ಚಿನವುಗಳ ಅಗತ್ಯವಿತ್ತು. ಆದಾಗ್ಯೂ, ಅವರನ್ನು ನಿರ್ಲಕ್ಷಿಸಲಾಯಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಲು ಅಂತರರಾಷ್ಟ್ರೀಯ ಸಮುದಾಯದಿಂದ ಸಾಂಸ್ಥಿಕ ವಿಧಾನದ ಅವಶ್ಯಕತೆಯಿದೆ. ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳು ಪ್ರತಿಯೊಂದು ಜಾಗಕ್ಕೂ   ಸಂಪನ್ಮೂಲಗಳನ್ನು ಕೊಂಡೊಯ್ಯುವಲ್ಲಿ ದಾರಿ ಮಾಡಬಹುದು.  ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವಲ್ಲಿಯೂ ಸಹ ಮಾರ್ಗದರ್ಶನ  ನೀಡುವುದು  ಮತ್ತು ತಂತ್ರಜ್ಞಾನ ವರ್ಗಾವಣೆಯು ನಿರ್ಣಾಯಕವಾಗಿದೆ. ನಾವು ಒಂದೇ ಭೂಮಿಯನ್ನು ಹಂಚಿಕೊಳ್ಳುತ್ತೇವೆ. ನಮ್ಮ ಭೂಮಿಯನ್ನು ಉಳಿಸಲು ನಾವು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಬಹುದು ಎಂದು ನನಗೆ ಖಾತ್ರಿಯಿದೆ. ಜಿಯೋ-ಸ್ಪೇಷಿಯಲ್ ತಂತ್ರಜ್ಞಾನವು ನೀಡುವ ಸಾಧ್ಯತೆಗಳಿಗೆ ಕೊನೆಯಿಲ್ಲ. ಸುಸ್ಥಿರ ನಗರಾಭಿವೃದ್ಧಿ, ವಿಪತ್ತುಗಳನ್ನು ನಿರ್ವಹಿಸುವುದು ಮತ್ತು ತಗ್ಗಿಸುವುದು, ಹವಾಮಾನ ಬದಲಾವಣೆಯ ಪ್ರಭಾವವನ್ನು ಪತ್ತೆಹಚ್ಚುವುದು, ಅರಣ್ಯ ನಿರ್ವಹಣೆ, ನೀರು ನಿರ್ವಹಣೆ, ಮರುಭೂಮಿಯಂತಾಗುವುದನ್ನು ನಿಲ್ಲಿಸುವುದು, ಆಹಾರ ಭದ್ರತೆ, ಜಿಯೋ-ಸ್ಪೇಷಿಯಲ್ ತಂತ್ರಜ್ಞಾನದ ಮೂಲಕ ನಮ್ಮ ಭೂಮಿಗೆ ನಾವು ಮಾಡಬಹುದು. ಅಂತಹ ಪ್ರಮುಖ ಕ್ಷೇತ್ರಗಳಲ್ಲಿನ ಬೆಳವಣಿಗೆಗಳನ್ನು ಚರ್ಚಿಸಲು ಈ ಸಮ್ಮೇಳನವು ವೇದಿಕೆಯಾಗಲಿ ಎಂದು ನಾನು ಬಯಸುತ್ತೇನೆ.

ಸ್ನೇಹಿತರೇ,

2ನೇ ವಿಶ್ವ ಸಂಸ್ಥೆಯ ವರ್ಲ್ಡ್ ಜಿಯೋ-ಸ್ಪೇಷಿಯಲ್ ಇಂಟರ್ನ್ಯಾಷನಲ್ ಕಾಂಗ್ರೆಸ್ ನನ್ನನ್ನು ಆಶಾವಾದಿಯನ್ನಾಗಿ ಮಾಡುತ್ತದೆ. ಜಾಗತಿಕ ಭೌಗೋಳಿಕ-ಪ್ರಾದೇಶಿಕ ಉದ್ಯಮದ ಪಾಲುದಾರರು ಒಗ್ಗೂಡುವುದರೊಂದಿಗೆ, ನೀತಿ ನಿರೂಪಕರು ಮತ್ತು ಶೈಕ್ಷಣಿಕ ಪ್ರಪಂಚವು ಪರಸ್ಪರ ಸಂವಹನ ನಡೆಸುವುದರೊಂದಿಗೆ, ಈ ಸಮ್ಮೇಳನವು ಜಾಗತಿಕ ಗ್ರಾಮವನ್ನು ಹೊಸ ಭವಿಷ್ಯಕ್ಕೆ ಕರೆದೊಯ್ಯಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ.

ಧನ್ಯವಾದಗಳು!

******