Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನಕ್ಕೆ, ಮುಂಚಿತವಾಗಿಯೇ ಬಜೆಟ್ ಮಂಡನೆ ಮತ್ತು ಬಜೆಟ್ ಹಾಗೂ ಖಾತೆಯಲ್ಲಿ ಯೋಜನಾ ಮತ್ತು ಯೋಜನೇತರ ವರ್ಗೀಕರಣದ ವಿಲೀನಕ್ಕೆ ಸಂಪುಟ ಸಮ್ಮತಿ


ಕೇಂದ್ರ ಸಚಿವ ಸಂಪುಟವು ಹಣಕಾಸು ಸಚಿವಾಲಯದ ಮೈಲಿಗಲ್ಲಾಗಬಹುದಾದ ಬಜೆಟ್ ಸುಧಾರಣೆಗಳು ಅಂದರೆ (1) ಸಾಮಾನ್ಯ ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನ (2) ಬಜೆಟ್ ಮಂಡನೆಯ ದಿನಾಂಕವನ್ನು ಮುಂಚಿತವಾಗಿ ಅಂದರೆ ಫೆಬ್ರವರಿ ಕೊನೆಯ ದಿನದ ಬದಲಿಗೆ ಫೆಬ್ರವರಿ 1ಕ್ಕೆ ಬದಲಾಯಿಸುವುದು ಮತ್ತು (3) ಬಜೆಟ್ ಮತ್ತು ಖಾತೆಗಳಲ್ಲಿ ಯೋಜನೆ ಮತ್ತು ಯೋಜನೇತರ ಎಂಬುದನ್ನು ವಿಲೀನಗೊಳಿಸುವುದಕ್ಕೆ ತನ್ನ ಅನುಮೋದನೆ ನೀಡಿದೆ. ಈ ಎಲ್ಲ ಬದಲಾವಣೆಗಳೂ ಏಕ ಕಾಲದಲ್ಲಿ 2017-18ನೇ ಸಾಲಿನ ಬಜೆಟ್ ನಿಂದಲೇ ಜಾರಿಗೆ ಬರಲಿವೆ. 

ಸಾಮಾನ್ಯ ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನ:

ಈ ಕೆಳಗಿನ ಆರ್ಥಿಕ ಮತ್ತು ಆಡಳಿತಾತ್ಮಕ ಸಿದ್ಧತೆಗಳೊಂದಿಗೆ ಸಂಪುಟವು ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ನಲ್ಲಿ ವಿಲೀನಗೊಳಿಸಲು ತನ್ನ ಅನುಮೋದನೆ ನೀಡಿದೆ:-

(i) ರೈಲ್ವೆಯು ಹಾಲಿ ಇರುವಂತೆಯೇ ಇಲಾಖೆಯಿಂದ ನಿರ್ವಹಿಸಲ್ಪಡುವ ವಾಣಿಜ್ಯ ಸಂಸ್ಥೆಯಾಗಿ- ತನ್ನ ವಿಶಿಷ್ಟವಾದ ಘಟಕವಾಗಿ ಮುಂದುವರಿಯುತ್ತದೆ;

(ii) ರೈಲ್ವೆಯು ತನ್ನ ಕಾರ್ಯನಿರ್ವಹಣಾ ಸ್ವಾಯತ್ತತೆ ಮತ್ತು ಹಣಕಾಸು ಅಧಿಕಾರವನ್ನು ಹಾಲಿ ಇರುವ ಮಾರ್ಗ ಸೂಚಿಯಂತೆಯೇ ಉಳಿಸಿಕೊಳ್ಳುತ್ತದೆ;

(iii) ಸಾಮಾನ್ಯ ಕಾರ್ಯನಿರ್ವಹಣಾ ವೆಚ್ಚ, ಸಂಬಳ ಮತ್ತು ಸಾರಿಗೆ ಹಾಗೂ ಪಿಂಚಣಿ ಇತ್ಯಾದಿ ಸೇರಿದಂತೆ ತನ್ನ ಆದಾಯದ ಪಾವತಿಯಿಂದ ತನ್ನ ವೆಚ್ಚಗಳನ್ನು ನಿರ್ವಹಿಸಲು ರೈಲ್ವೆ ಹಾಲಿ ಹೊಂದಿರುವ ಹಣಕಾಸು ವ್ಯವಸ್ಥೆ ಹಾಗೇ ಮುಂದುವರಿಯಲಿದೆ.

(iv) ರೈಲ್ವೆಯ ಶುಲ್ಕರಹಿತ ಬಂಡವಾಳವನ್ನು ರೂ.2.27 ಕೋಟಿ ಎಂದು ಅಂದಾಜು ಮಾಡಲಾಗಿದ್ದು, ಅದರಲ್ಲಿ ರೈಲ್ವೆ ಕೊಡುವ ವಾರ್ಷಿಕ ಡಿವಿಡೆಂಡ್ (ಲಾಭಾಂಶ)ವನ್ನು ತೆಗೆದುಹಾಕಲಾಗಿದೆ. ಹೀಗಾಗಿ 2017-18ರಿಂದ ರೈಲ್ವೆಗೆ ಡಿವಿಡೆಂಡ್ ಹೊಣೆ ಇರುವುದಿಲ್ಲ ಮತ್ತು ರೈಲ್ವೆ ಸಚಿವಾಲಯಕ್ಕೆ ಒಟ್ಟಾರೆ ಬಜೆಟ್ ಬೆಂಬಲ ದೊರಕಲಿದೆ. ಅಲ್ಲದೆ ಇದು ಭಾರತ ಸರ್ಕಾರಕ್ಕೆ ವಾರ್ಷಿಕ ಅಂದಾಜು 9700 ಕೋಟಿ ರೂಪಾಯಿ ಡಿವಿಡೆಂಡ್ ನೀಡುವುದನ್ನೂ ಉಳಿಸಲಿದೆ;

ಪ್ರತ್ಯೇಕವಾದ ರೈಲ್ವೆ ಬಜೆಟ್ ಮಂಡನೆ 1924ರಲ್ಲಿ ಆರಂಭವಾಯಿತು, ಮತ್ತು ಸ್ವಾತಂತ್ರ್ಯಾನಂತರವೂ ಸಂವಿಧಾನದ ಅವಕಾಶಗಳಿಗಿಂತ ಮಿಗಿಲಾಗಿ ಸಾಂಪ್ರದಾಯಿಕವಾಗಿ ಮುಂದುವರಿಯಿತು.

ಈ ವಿಲೀನವು ಈ ಕೆಳಗಿನಂತೆ ಸಹಕಾರಿಯಾಗಲಿದೆ:

  • ಏಕೀಕೃತವಾದ ಬಜೆಟ್ ಮಂಡನೆಯು ರೈಲ್ವೆ ವ್ಯವಹಾರವನ್ನು ಕೇಂದ್ರಬಿಂದುವಿಗೆ ತರಲಿದೆ ಮತ್ತು ಸರ್ಕಾರದ ಆರ್ಥಿಕ ಸ್ಥಿತಿಯ ಸಮಗ್ರ ಚಿತ್ರಣವನ್ನು ಮುಂದಿಡಲಿದೆ.
  • ಈ ವಿಲೀನವು ಕಾರ್ಯವಿಧಾನದ ಅವಶ್ಯಕತೆಗಳನ್ನು ಸಹ ಕಡಿಮೆ ಮಾಡಿ, ಬದಲಿಗೆವಿತರಣೆ ಮತ್ತು ಉತ್ತಮ ಆಡಳಿತ ಅಂಶಗಳನ್ನು ಗಮನಕ್ಕೆ ತರಲಿದೆ ಎಂದು ನಿರೀಕ್ಷಿಸಲಾಗಿದೆ.
  • ವಿಲೀನದ ತರುವಾಯ ರೈಲ್ವೆಯ ಧನ ವಿನಿಯೋಗವು ಪ್ರಧಾನ ಧನ ವಿನಿಯೋಗ ವಿಧೇಯಕದ ಭಾಗವಾಗಲಿದೆ.

ಮುಂಚಿತವಾಗಿ ಬಜೆಟ್ ಮಂಡನೆ:

ಬಜೆಟ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತೊಂದು ಸುಧಾರಣೆಗೂ ಅಂದರೆ ಬಜೆಟ್ ಮಂಡನೆಯ ದಿನಾಂಕವನ್ನು ಫೆಬ್ರವರಿಯ ಕೊನೆಯ ದಿನದ ಬದಲಾಗಿ ಸೂಕ್ತ ದಿನಾಂಕ ಮಂಡಿಸುವುದಕ್ಕೂ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. 2017-18ನೇ ಸಾಲಿನ ಬಜೆಟ್ ಮಂಡನೆಯನ್ನು ರಾಜ್ಯಗಳ ವಿಧಾನಸಬೆಗೆ ನಡೆಯಲಿರುವ ಚುನಾವಣೆ ದಿನಾಂಕ ದೃಷ್ಟಿಯಲ್ಲಿಟ್ಟುಕೊಂಡು ನಿರ್ಧರಿಸಲಾಗುವುದು.

ಇದು ಈ ಕೆಳಕಂಡ ಮಾರ್ಗದಲ್ಲಿ ನೆರವಾಗಲಿದೆ:

  • ಬಜೆಟ್ ಮಂಡನೆಯನ್ನು ಒಂದು ತಿಂಗಳು ಮೊದಲೇ ಮಾಡಿ ಮತ್ತು ಮಾರ್ಚ್ 31ರೊಳಗೆ ಬಜೆಟ್ ಗೆ ಸಂಬಂಧಿಸಿದ ಶಾಸನಾತ್ಮಕ ಕಲಾಪವನ್ನು ಪೂರ್ಣಗೊಳಿಸುವುದರಿಂದ ಬಜೆಟ್ ಚಕ್ರವನ್ನು ಬೇಗನೇ ಪೂರ್ಣಗೊಳಿಸಲು ಅವಕಾಶವಾಗುತ್ತದೆ ಮತ್ತು ಇಲಾಖೆಗಳಿಗೆ ಉತ್ತಮ ಯೋಜನೆ ಮತ್ತು ಯೋಜನೆಗಳ ಅನುಷ್ಠಾನವನ್ನು ಆರ್ಥಿಕ ವರ್ಷದ ಆರಂಭದಿಂದಲೇ ಆರಂಭಿಸುವ ಖಾತ್ರಿ ಒದಗಿಸುತ್ತದೆ ಮತ್ತು ಪ್ರಥಮ ತ್ರೈಮಾಸಿಕವೂ ಸೇರಿ ಸಂಪೂರ್ವವಾಗಿ ಕಾರ್ಯ ಋತುವಿನ ಬಳಕೆಗೂ ಅವಕಾಶ ಒದಗಿಸುತ್ತದೆ.
  • ಅಲ್ಲದೆ ಇದು ಲೇಖಾನುದಾನದ ಮೂಲಕ ಧನವಿನಿಯೋಗ ಕೋರುವ ಅಗತ್ಯವನ್ನೂ ನಿವಾರಿಸುತ್ತದೆ ಮತ್ತು ತೆರಿಗೆಯಲ್ಲಿ ಶಾಸನಾತ್ಮಕ ಬದಲಾವಣೆ ಜಾರಿ ಮಾಡಲು ಅವಕಾಶಕೊಡುತ್ತದೆ. ಆರ್ಥಿಕ ವರ್ಷದ ಆರಂಭದಿಂದಲೇ ಹೊಸ ತೆರಿಗೆ ಕ್ರಮಗಳ ಕಾನೂನು ಜಾರಿಯಾಗುತ್ತದೆ.

ಬಜೆಟ್ ಮತ್ತು ಖಾತೆಯಲ್ಲಿ ಯೋಜನೆ ಮತ್ತು ಯೋಜನೇತರ ವರ್ಗೀಕರಣದ ವಿಲೀನ:

ಇನ್ನು ಅನುಮೋದನೆಯಾದ ಮೂರನೇ ಪ್ರಸ್ತಾಪ 2017-18ನೇ ಸಾಲಿನಿಂದ ಬಜೆಟ್ ಮತ್ತು ಖಾತೆಗಳಲ್ಲಿ ಯೋಜನೆ ಮತ್ತು ಯೋಜನೇತರ ಎಂಬ ವರ್ಗೀಕರಣದ ವಿಲೀನದ್ದಾಗಿದ್ದು,  ಪರಿಶಿಷ್ಟ ಜಾತಿ ಉಪ ಯೋಜನೆ / ಬುಡಕಟ್ಟು ಉಪ ಯೋಜನೆ ಹಣ ಮೀಸಲಿಡುವುದು ಮುಂದುವರಿಕೆ ಆಗುತ್ತದೆ. ಹಾಗೆಯೇ, ಈಶಾನ್ಯ ರಾಜ್ಯಗಳ ಹಂಚಿಕೆಯು ಸಹ ಮುಂದುವರಿಯುತ್ತದೆ.

ಇದು ಈ ಕೆಳಗಿನ ಸಮಸ್ಯೆಗಳ ನಿವಾರಣೆಗೆ ನೆರವಾಗುತ್ತದೆ:

  • ಯೋಜನೆ/ ಯೋಜನೇತರ ವೆಚ್ಚದ ವರ್ಗೀಕರಣ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಹಂಚಿಕೆಯಲ್ಲಿ ಸಂಕೀರ್ಣ ನೋಟವನ್ನು ಮೂಡಿಸುತ್ತಿದ್ದು, ಇದು ಸೇವೆಗೆ ತಗುಲಿದ ವೆಚ್ಚವನ್ನು ಲೆಕ್ಕಹಾಕಲು ಅಷ್ಟೇ ಅಲ್ಲ ಫಲಶ್ರುತಿಗಾಗಿ ಮಾಡಿದ ವೆಚ್ಚಕ್ಕೆ ತಲುಕುಹಾಕಲೂ ತೊಂದರೆ ಆಗುತ್ತದೆ.
  • ಯೋಜನಾ ವೆಚ್ಚದ ಪರವಾದ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಪಕ್ಷಪಾತದಿಂದಾಗಿ ಸಾಮಾಜಿಕ ಸೇವೆಗಳನ್ನು ಒದಗಿಸುವ ಸಲುವಾಗಿ ಆಸ್ತಿಗಳು ಮತ್ತು ಸಂಸ್ಥೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಆಗುವ ಅಗತ್ಯ ವೆಚ್ಚದ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತಿತ್ತು.  
  • ಬಜೆಟ್ ನಲ್ಲಿ ಯೋಜನೆ ಮತ್ತು ಯೋಜನೇತರ ವೆಚ್ಚ ವಿಲೀನ ಮಾಡುತ್ತಿರುವುದು ಆದಾಯ ಮತ್ತು ಬಂಡವಾಳ ವೆಚ್ಚದ ಮೇಲೆ ಗಮನವಿಟ್ಟು ಆಯವ್ಯಯದ ಚೌಕಟ್ಟು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.  

        

AKT/VBA/SH