Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಣೆಯ ದೇಹುವಿನಲ್ಲಿ ಜಗದ್ಗುರು ಶ್ರೀ ಸಂತ ತುಕಾರಾಂ ಮಹಾರಾಜ್ ದೇವಾಲಯವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

ಪುಣೆಯ ದೇಹುವಿನಲ್ಲಿ ಜಗದ್ಗುರು ಶ್ರೀ ಸಂತ ತುಕಾರಾಂ ಮಹಾರಾಜ್ ದೇವಾಲಯವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆಯ ದೇಹುವಿನಲ್ಲಿ ಜಗದ್ಗುರು ಶ್ರೀ ಸಂತ ತುಕಾರಾಂ ಮಹಾರಾಜ್ ದೇವಾಲಯವನ್ನು ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪುಣ್ಯಭೂಮಿ ದೇಹುವಿನಲ್ಲಿ ಉಪಸ್ಥಿತರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಮ್ಮ ಧರ್ಮಗ್ರಂಥಗಳನ್ನು ಉಲ್ಲೇಖಿಸಿದ ಪ್ರಧಾನಿಯವರು, ಸಂತರ ಸತ್ಸಂಗ ಮಾನವ ಜನ್ಮದಲ್ಲಿ ಸಿಗುವ ಅಪರೂಪದ ಸೌಭಾಗ್ಯ. ಸಂತರ ಕೃಪೆಗೆ ಪಾತ್ರರಾದರೆ ಭಗವಂತನ ಸಾಕ್ಷಾತ್ಕಾರ ತಾನಾಗಿಯೇ ಆಗುತ್ತದೆ ಎಂದರು. “ಇಂದು ದೇಹುವಿನ ಈ ಪವಿತ್ರ ತೀರ್ಥಕ್ಷೇತ್ರಕ್ಕೆ ಬಂದಿರುವ ನಾನು ಅದೇ ರೀತಿ ಭಾವಿಸುತ್ತೇನೆ” ಎಂದು ಅವರು ಹೇಳಿದರು. “ದೇಹುವಿನ ಶಿಲಾ ಮಂದಿರವು ಭಕ್ತಿಯ ಶಕ್ತಿ ಕೇಂದ್ರ ಮಾತ್ರವಾಗಿರದೆ ಭಾರತದ ಸಾಂಸ್ಕೃತಿಕ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈ ಪವಿತ್ರ ಸ್ಥಳವನ್ನು ಪುನರ್ನಿರ್ಮಿಸಿದ ದೇವಸ್ಥಾನದ ಟ್ರಸ್ಟ್ ಮತ್ತು ಎಲ್ಲಾ ಭಕ್ತರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.” ಎಂದರು.

ಕೆಲ ತಿಂಗಳ ಹಿಂದೆ ಪಾಲ್ಕಿ ಮಾರ್ಗದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳ ಚತುಷ್ಪಥ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಪ್ರಧಾನಿ ಸ್ಮರಿಸಿಕೊಂಡರು. ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಕಿ ಮಾರ್ಗವನ್ನು ಐದು ಹಂತಗಳಲ್ಲಿ ಮತ್ತು ಸಂತ ತುಕಾರಾಂ ಮಹಾರಾಜ್ ಪಾಲ್ಕಿ ಮಾರ್ಗವನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಹಂತಗಳಲ್ಲಿ 11000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ 350 ಕಿಮೀ ಉದ್ದದ ಹೆದ್ದಾರಿಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಭಾರತವು ವಿಶ್ವದ ಅತ್ಯಂತ ಹಳೆಯ ಜೀವಂತ ನಾಗರಿಕತೆಗಳಲ್ಲಿ ಒಂದಾಗಿದೆ ಎಂಬ ಹೆಮ್ಮೆ ನಮಗಿದೆ ಎಂದು ಪ್ರಧಾನಿ ಹೇಳಿದರು. ಇದರ ಶ್ರೇಯಸ್ಸು ಯಾರಿಗಾದರೂ ಸಲ್ಲುವುದಾದರೆ ಅದು ಭಾರತದ ಸಂತ ಪರಂಪರೆ ಮತ್ತು ಋಷಿಮುನಿಗಳಿಗೆ ಸಲ್ಲುತ್ತದೆ. ಭಾರತವು ಸಂತರ ನಾಡಾಗಿರುವುದರಿಂದ ಭಾರತ ಚಿರಂತನವಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರತಿ ಯುಗದಲ್ಲೂ, ನಮ್ಮ ದೇಶ ಮತ್ತು ಸಮಾಜಕ್ಕೆ ದಿಕ್ಕು ತೋರಲು ಕೆಲವು ಮಹಾನ್ ಆತ್ಮಗಳು ಜನ್ಮತಳೆದಿವೆ. ಇಂದು ದೇಶವು ಸಂತ ಕಬೀರದಾಸರ ಜನ್ಮದಿನವನ್ನು ಆಚರಿಸುತ್ತಿದೆ ಎಂದರು. ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್, ಸಂತ ನಿವೃತ್ತಿನಾಥ್, ಸಂತ ಸೋಪಾನದೇವ್ ಮತ್ತು ಆದಿಶಕ್ತಿ ಮುಕ್ತಾ ಬಾಯಿ ಅವರಂತಹ ಸಂತರ ಪ್ರಮುಖ ವಾರ್ಷಿಕೋತ್ಸವಗಳ ಬಗ್ಗೆ ಅವರು ಗಮನಸೆಳೆದರು.

ಸಂತ ತುಕಾರಾಂ ಅವರ ದಯೆ, ಸಹಾನುಭೂತಿ ಮತ್ತು ಸೇವೆಯು ಅವರ ‘ಅಭಂಗʼಗಳ ರೂಪದಲ್ಲಿ ಇಂದಿಗೂ ನಮ್ಮೊಂದಿಗೆ ಇದೆ ಎಂದು ಪ್ರಧಾನಿ ಹೇಳಿದರು. ಈ ‘ಅಭಂಗʼಗಳು ತಲೆಮಾರುಗಳಿಂದ ಸ್ಫೂರ್ತಿ ನೀಡಿವೆ. ಯಾವುದು ಕೊನೆಯಾಗುವುದಿಲ್ಲವೋ ಅದು ಶಾಶ್ವತವಾಗಿ ಉಳಿಯುತ್ತದೆ ಮತ್ತು ಎಲ್ಲ ಕಾಲಕ್ಕೆ ಪ್ರಸ್ತುತವಾಗಿರುತ್ತದೆ, ಅದರಲ್ಲೊಂದು ಈ ಅಭಂಗವಾಗಿದೆ ಎಂದು ಅವರು ವಿವರಿಸಿದರು. ಇಂದಿಗೂ, ದೇಶವು ತನ್ನ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಸಮನ್ವಯದಲ್ಲಿ ಮುನ್ನಡೆಯುತ್ತಿರುವಾಗ, ಸಂತ ತುಕಾರಾಮರ ಅಭಂಗಗಳು ನಮಗೆ ಶಕ್ತಿಯನ್ನು ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು. ಪ್ರಧಾನಮಂತ್ರಿಯವರು ಸಂತರ ‘ಅಭಂಗʼಗಳ ವೈಭವೋಪೇತ ಪರಂಪರೆಗೆ ಗೌರವ ಸಲ್ಲಿಸಿದರು. ಮನುಷ್ಯರ ನಡುವಿನ ತಾರತಮ್ಯದ ವಿರುದ್ಧದ ಬೋಧನೆಗಳನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ಉಪದೇಶಗಳು ಅಧ್ಯಾತ್ಮಿಕ ಶ್ರದ್ಧೆಯಂತೆ ದೇಶ, ಸಮಾಜದ ಭಕ್ತಿಗೂ ಸಮಾನವಾಗಿವೆ ಎಂದರು. ಈ ಸಂದೇಶವು ವಾರ್ಕರಿ ಭಕ್ತರ ವಾರ್ಷಿಕ ಪಂಢರಪುರ ಯಾತ್ರೆಯನ್ನು ಒತ್ತಿಹೇಳುತ್ತದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್. ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಅಂತಹ ಶ್ರೇಷ್ಠ ಪರಂಪರೆಗಳಿಂದ ಪ್ರೇರಿತವಾಗಿದೆ ಎಂದು ಅವರು ಹೇಳಿದರು.  ವಾರ್ಕರಿ ಸಂಪ್ರದಾಯದಲ್ಲಿ ನಿರ್ದಿಷ್ಟವಾಗಿ ಲಿಂಗ ಸಮಾನತೆ ಮತ್ತು ಅಂತ್ಯೋದಯ ಮನೋಭಾವ ಸ್ಫೂರ್ತಿಯಾಗಿದೆ. ದಲಿತ, ವಂಚಿತ, ಹಿಂದುಳಿದ, ಬುಡಕಟ್ಟು, ಕಾರ್ಮಿಕರ ಕಲ್ಯಾಣ ದೇಶದ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರಂತಹ ರಾಷ್ಟ್ರನಾಯಕರ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಕೀರ್ತಿ ತುಕಾರಾಂರಂತಹ ಸಂತರಿಗೆ ಸಲ್ಲುತ್ತದೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಶಿಕ್ಷೆಗೆ ಗುರಿಯಾದಾಗ, ಜೈಲಿನಲ್ಲಿ ಚಿಪ್ಲಿಯಂತೆ ಕೈಕೋಳಗಳನ್ನು ಬಳಸಿ ತುಕಾರಾಂ ಅವರ ಅಭಂಗಗಳನ್ನು ಹಾಡುತ್ತಿದ್ದರು ಎಂದು ಪ್ರಧಾನಿ ಹೇಳಿದರು. ಸಂತ ತುಕಾರಾಂ ಅವರು ವಿವಿಧ ಸಮಯಗಳಲ್ಲಿ ದೇಶದಲ್ಲಿ ಚೈತನ್ಯ ಮತ್ತು ಶಕ್ತಿಯನ್ನು ತುಂಬಿದ್ದಾರೆ ಎಂದು ಅವರು ಹೇಳಿದರು. ಪಂಢರಪುರ, ಜಗನ್ನಾಥ, ಮಥುರಾದ ಬ್ರಿಜ್ ಪರಿಕ್ರಮ ಅಥವಾ ಕಾಶಿ ಪಂಚಕೋಸಿ ಪರಿಕ್ರಮ, ಚಾರ್ ಧಾಮ್ ಅಥವಾ ಅಮರನಾಥ ಯಾತ್ರೆಯಂತಹ ‘ಯಾತ್ರೆಗಳು’ನಮ್ಮ ರಾಷ್ಟ್ರದ ವೈವಿಧ್ಯತೆಯನ್ನು ಒಂದುಗೂಡಿಸಿ ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬ ಚೈತನ್ಯವನ್ನು ಸೃಷ್ಟಿಸಿವೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ನಮ್ಮ ಪ್ರಾಚೀನ ಅಸ್ಮಿತೆ ಮತ್ತು ಪರಂಪರೆಗಳನ್ನು ಜೀವಂತವಾಗಿಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆದ್ದರಿಂದ, “ಇಂದು ಆಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳು ಭಾರತದ ಅಭಿವೃದ್ಧಿಗೆ ಸಮಾನಾರ್ಥಕವಾಗುತ್ತಿರುವಾಗ, ಅಭಿವೃದ್ಧಿ ಮತ್ತು ಪರಂಪರೆ ಎರಡೂ ಒಟ್ಟಿಗೆ ಮುಂದುವರಿಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದರು. ಪಾಲ್ಕಿ ಯಾತ್ರೆಯ ಆಧುನೀಕರಣ, ಚಾರ್ ಧಾಮ್ ಯಾತ್ರೆಗೆ ಹೊಸ ಹೆದ್ದಾರಿಗಳು, ಅಯೋಧ್ಯೆಯ ಭವ್ಯವಾದ ರಾಮಮಂದಿರ, ಕಾಶಿ ವಿಶ್ವನಾಥ ಧಾಮದ ನವೀಕರಣ ಮತ್ತು ಸೋಮನಾಥದಲ್ಲಿ ಅಭಿವೃದ್ಧಿ ಕಾರ್ಯಗಳ ಉದಾಹರಣೆಗಳನ್ನು ಪ್ರಧಾನಿಯವರು ನೀಡಿದರು. ಪ್ರಸಾದ ಯೋಜನೆಯಡಿ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಮಾಯಣ ಸರ್ಕ್ಯೂಟ್ ಮತ್ತು ಬಾಬಾಸಾಹೇಬರ ಪಂಚತೀರ್ಥ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. ಪ್ರತಿಯೊಬ್ಬರ ಪ್ರಯತ್ನವು ಸರಿಯಾದ ದಿಕ್ಕಿನಲ್ಲಿದ್ದರೆ, ಬಗೆಹರಿಸಲಾಗದ ಸಮಸ್ಯೆಗಳನ್ನು ಸಹ ಪರಿಹರಿಸಬಹುದು ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ದೇಶವು ಇಂದು ಶೇ.100 ರಷ್ಟು ಸಬಲೀಕರಣದತ್ತ ಸಾಗುತ್ತಿದೆ. ಈ ಯೋಜನೆಗಳ ಮೂಲಕ ಬಡವರು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಸ್ವಚ್ಛ ಭಾರತ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದ ಪ್ರಧಾನಿಯವರು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಚ್ಛತೆ ಕಾಪಾಡುವ ಪ್ರತಿಜ್ಞೆ ಮಾಡುವಂತೆ ತಿಳಿಸಿದರು. ಈ ರಾಷ್ಟ್ರೀಯ ಪ್ರತಿಜ್ಞೆಗಳನ್ನು ತಮ್ಮ ಆಧ್ಯಾತ್ಮಿಕ ಪ್ರತಿಜ್ಞೆಗಳ ಭಾಗವಾಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸಹಜ ಕೃಷಿ ಮತ್ತು ಯೋಗ ಮತ್ತು ಯೋಗ ದಿನಾಚರಣೆಗೆ ಒತ್ತು ನೀಡುವಂತೆ ಅವರು ಸಭೆಯನ್ನು ಕೋರಿದರು.

ಸಂತ ತುಕಾರಾಂ ಅವರು ವಾರ್ಕರಿ ಸಂತ ಮತ್ತು ಕವಿಯಾಗಿದ್ದು, ಕೀರ್ತನೆಗಳು ಎಂದು ಕರೆಯಲಾಗುವ ಆಧ್ಯಾತ್ಮಿಕ ಹಾಡುಗಳ ಮೂಲಕ ಅಭಂಗ ಭಕ್ತಿ ಕಾವ್ಯ ಮತ್ತು ಸಮುದಾಯ-ಆಧಾರಿತ ಆರಾಧನೆಗೆ ಹೆಸರುವಾಸಿಯಾಗಿದ್ದಾರೆ. ಅವರು ದೇಹುವಿನಲ್ಲಿ ವಾಸಿಸುತ್ತಿದ್ದರು. ಅವರ ನಿಧನದ ನಂತರ ಶಿಲಾ ಮಂದಿರವನ್ನು ನಿರ್ಮಿಸಲಾಯಿತು. ಆದರೆ ಇದು ಔಪಚಾರಿಕವಾಗಿ ದೇವಾಲಯವಾಗಿರಲಿಲ್ಲ. ಇದು 36 ಶಿಖರಗಳೊಂದಿಗೆ ಕಲ್ಲಿನಲ್ಲಿ ಪುನರ್ನಿರ್ಮಿಸಲ್ಪಟ್ಟಿದೆ ಮತ್ತು ಸಂತ ತುಕಾರಾಮರ ವಿಗ್ರಹವನ್ನು ಹೊಂದಿದೆ.

 

 

 

 

***