ಗೌರವಾನ್ವಿತರಾದ ಫಿಜಿಯ ಪ್ರಧಾನ ಮಂತ್ರಿ ಬೈನಿಮರಾಮ ಜೀ, ಸದ್ಗುರು ಮಧುಸೂದನ ಸಾಯಿ, ಸಾಯಿ ಪ್ರೇಮ ಪ್ರತಿಷ್ಠಾನದ ಎಲ್ಲಾ ವಿಶ್ವಸ್ಥರೇ, ಆಸ್ಪತ್ರೆಯ ಸಿಬ್ಬಂದಿವರ್ಗದವರೇ, ಗಣ್ಯ ಅತಿಥಿಗಳೇ ಮತ್ತು ಫಿಜಿಯ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ!.
‘नि-साम बुला विनाका’,
ನಮಸ್ಕಾರ !
ಸುವಾದಲ್ಲಿ ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆಯ ಕಾರ್ಯಾರಂಭ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನನಗೆ ಬಹಳ ಸಂತೋಷ ನೀಡುತ್ತಿರುವ ಸಂಗತಿಯಾಗಿದೆ. ನಾನು ಗೌರವಾನ್ವಿತ, ಫಿಜಿಯ ಪ್ರಧಾನ ಮಂತ್ರಿ ಮತ್ತು ಫಿಜಿಯ ಜನತೆಗೆ ಇದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಪರಸ್ಪರ ಸಂಬಂಧ ಮತ್ತು ಪ್ರೀತಿಗೆ ಸಂಬಂಧಿಸಿದ ಇನ್ನೊಂದು ಸಂಕೇತ ಇದಾಗಿದೆ. ಇದು ಭಾರತ ಮತ್ತು ಫಿಜಿಯ ಸಹಪ್ರಯಾಣದ ಇನ್ನೊಂದು ಅಧ್ಯಾಯವಾಗಿದೆ. ಈ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆಯು ಫಿಜಿಯ ಮೊದಲ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಮಾತ್ರವಲ್ಲ, ಇಡೀ ದಕ್ಷಿಣ ಫೆಸಿಫಿಕ್ ವಲಯದಲ್ಲಿರುವ ಇಂತಹ ಮೊದಲ ಅಸ್ಪತ್ರೆಯಾಗಿದೆ ಎಂದು ನನಗೆ ತಿಳಿಸಲಾಗಿದೆ. ಹೃದಯ ಸಂಬಂಧಿ ಖಾಯಿಲೆಗಳು ಪ್ರಮುಖ ಸವಾಲು ಆಗಿರುವಂತಹ ವಲಯಕ್ಕೆ ಈ ಆಸ್ಪತ್ರೆ ಸಾವಿರಾರು ಮಕ್ಕಳಿಗೆ ಹೊಸ ಜೀವನ ಒದಗಿಸುವ ಮಾಧ್ಯಮವಾಗಲಿದೆ. ಇಲ್ಲಿಯ ಪ್ರತೀ ಮಗುವೂ ವಿಶ್ವ ದರ್ಜೆಯ ಚಿಕಿತ್ಸೆಯನ್ನು ಪಡೆಯುವುದಲ್ಲದೆ, ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಯಾವುದೇ ವೆಚ್ಚ ಇಲ್ಲದೆ ನಡೆಸಲಿರುವುದು ನನಗೆ ಸಂತೋಷದಾಯಕ ವಿಷಯವಾಗಿದೆ. ಫಿಜಿ ಸರಕಾರಕ್ಕೆ, ಫಿಜಿಯ ಸಾಯಿ ಪ್ರೇಮ ಪ್ರತಿಷ್ಠಾನಕ್ಕೆ ಮತ್ತು ಭಾರತದ ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆಗೆ ಇದಕ್ಕಾಗಿ ನಾನು ನನ್ನ ಪ್ರಾಮಾಣಿಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ.
ಈ ಸಂದರ್ಭದಲ್ಲಿ ವಿಶೇಷವಾಗಿ, ನಾನು ಬ್ರಹ್ಮಾಲಿನ್ ಶ್ರೀ ಸತ್ಯ ಸಾಯಿ ಬಾಬಾ ಅವರಿಗೆ ಶಿರಬಾಗಿ ನಮಿಸುತ್ತೇನೆ. ಮಾನವತೆಗೆ ಸೇವೆ ಮಾಡುವ ಉದ್ದೇಶದಿಂದ ಅವರು ಬಿತ್ತಿದ ಬೀಜ ಇಂದು ಬೃಹತ್ ಆಲದ ಮರವಾಗಿ ಜನರ ಸೇವೆ ಮಾಡುತ್ತಿದೆ. ನಾನು ಈ ಮೊದಲು ಕೂಡಾ ಹೇಳಿದ್ದೆ, ಸತ್ಯ ಸಾಯಿ ಬಾಬಾ ಅವರು ಆಚರಣೆಗಳಿಂದ, ವಿಧಿ ವಿಧಾನಗಳಿಂದ ಆಧ್ಯಾತ್ಮವನ್ನು ಮುಕ್ತಗೊಳಿಸಿ ಅದನ್ನು ಸಾರ್ವಜನಿಕ ಕಲ್ಯಾಣದ ಜೊತೆ ಜೋಡಿಸುವ ಮೂಲಕ ಅತ್ಯದ್ಭುತ ಕೆಲಸವನ್ನು ಮಾಡಿದ್ದಾರೆ ಎಂದು. ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ, ಆರೋಗ್ಯ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ, ಬಡವರನ್ನು, ಕೆಳವರ್ಗದವರನ್ನು ಮತ್ತು ಅವಕಾಶವಂಚಿತರನ್ನು ಕುರಿತ ಅವರ ಸೇವಾ ಕಾರ್ಯಗಳು ಈಗಲೂ ನಮಗೆ ಪ್ರೇರಕ. ಎರಡು ದಶಕಗಳ ಹಿಂದೆ ಗುಜರಾತ್ ಭೂಕಂಪದಿಂದ ನಲುಗಿ ಹೋದಾಗ ಅದರಲ್ಲಿ ಸಂತ್ರಸ್ತರಾದವರಿಗೆ ಬಾಬಾ ಅವರ ಅನುಯಾಯಿಗಳು ಮಾಡಿದ ಸೇವೆಯನ್ನು ಗುಜರಾತಿನ ಜನರು ಮರೆಯಲಾರರು. ಸತ್ಯ ಸಾಯಿ ಬಾಬಾ ಅವರು ನಿರಂತರವಾಗಿ ನನ್ನನ್ನು ಆಶೀರ್ವದಿಸುತ್ತಿರುವುದು ನನ್ನ ಅತ್ಯಂತ ದೊಡ್ಡ ಸೌಭಾಗ್ಯ ಎಂದು ನಾನು ಭಾವಿಸುತ್ತೇನೆ. ಹಲವು ದಶಕಗಳ ಕಾಲ ನಾನು ಅವರ ಜೊತೆ ಸಂಪರ್ಕದಲ್ಲಿದ್ದೆ ಮತ್ತು ಇಂದು ಕೂಡಾ ಅವರ ಆಶೀರ್ವಾದಗಳು ನನಗೆ ಲಭಿಸುತ್ತಿವೆ.
ಸ್ನೇಹಿತರೇ,
ಭಾರತದಲ್ಲಿ , ”परोपकाराय सतां विभूतयः” ಎಂದು ಹೇಳಲಾಗುತ್ತದೆ. ಅಂದರೆ ದಾನ ಧರ್ಮ ಶ್ರೇಷ್ಠ ವ್ಯಕ್ತಿಗಳ ಆಸ್ತಿ ಎಂದು. ನಮ್ಮ ಸಂಪನ್ಮೂಲಗಳು ಮಾನವರ ಸೇವೆಗಾಗಿ ಮತ್ತು ಜೀವಿಗಳ ಕಲ್ಯಾಣಕ್ಕಾಗಿ ಇರುವಂತಹವು. ಈ ಮೌಲ್ಯಗಳ ಆಧಾರದ ಮೇಲೆ ಭಾರತ ಮತ್ತು ಫಿಜಿಯ ಸಾಮಾನ್ಯ ಪರಂಪರೆ ನಿಂತಿದೆ. ಈ ಮೌಲ್ಯಗಳು, ಆದರ್ಶಗಳನ್ನು ಆಧರಿಸಿ, ಕೊರೊನಾ ಜಾಗತಿಕ ಸಾಂಕ್ರಾಮಿಕದ ಕಷ್ಟಕಾಲದಲ್ಲಿಯೂ ಭಾರತವು ತನ್ನ ಕರ್ತವ್ಯಗಳನ್ನು ನಿಭಾಯಿಸಿದೆ. ಭಾರತವು “ವಸುಧೈವ ಕುಟುಂಬಕಂ” ಎಂಬ ಸಂದೇಶವನ್ನು ಸಾರುತ್ತದೆ. ಅದರರ್ಥ ಇಡೀ ಜಗತ್ತೇ ಒಂದು ಕುಟುಂಬ ಎಂಬುದಾಗಿ. ಈ ಸಂದೇಶವನ್ನು, ಅನುಸರಿಸಿ ಭಾರತವು ಜಗತ್ತಿನ 150 ದೇಶಗಳಿಗೆ ಔಷಧಿ ಮತ್ತು ಅವಶ್ಯಕ ಸಾಮಗ್ರಿಗಳನ್ನು ಕಳುಹಿಸಿದೆ. ತನ್ನ ಕೋಟ್ಯಂತರ ನಾಗರಿಕರಲ್ಲದೆ ಜಗತ್ತಿನ ಇತರ ದೇಶಗಳ ಜನರ ಬಗ್ಗೆಯೂ ಭಾರತವು ಕಾಳಜಿಯನ್ನು ತೋರಿದೆ. ನಾವು ಸುಮಾರು 100 ದೇಶಗಳಿಗೆ ಸುಮಾರು 100 ಮಿಲಿಯನ್ ಲಸಿಕೆಗಳನ್ನು ಕಳುಹಿಸಿದ್ದೇವೆ. ಈ ಪ್ರಯತ್ನದಲ್ಲಿ ನಾವು ಫಿಜಿಯನ್ನು ಆದ್ಯತೆಯನ್ನಾಗಿ ಪರಿಗಣಿಸಿದ್ದೇವೆ. ಫಿಜಿಗಾಗಿ ಇಡೀ ಭಾರತದ ವಿಶೇಷ ಬಾಂಧವ್ಯದ ಭಾವನೆಯನ್ನು ಮುಂದುವರಿಸಿಕೊಂಡು ಹೋಗಲು ಸಾಯಿ ಪ್ರೇಮ್ ಪ್ರತಿಷ್ಠಾನ ಇಲ್ಲಿದೆ ಎಂಬುದು ನನಗೆ ಸಂತೋಷ ತಂದಿದೆ.
ಸ್ನೇಹಿತರೇ,
ನಮ್ಮ ಎರಡು ದೇಶಗಳ ನಡುವೆ ವಿಸ್ತಾರವಾದ ಸಾಗರವಿದೆ. ಆದರೆ ನಮ್ಮ ಸಂಸ್ಕೃತಿ ನಮ್ಮನ್ನು ಪರಸ್ಪರ ಬೆಸೆದಿದೆ. ಪರಸ್ಪರ ಗೌರವ, ಸಹಕಾರ ಮತ್ತು ನಮ್ಮ ಜನರ ನಡುವಿನ ಬಲಿಷ್ಠ ಬಾಂಧವ್ಯದ ಮೂಲಕ ನಮ್ಮ ಬಾಂಧವ್ಯಗಳು ರೂಪುಗೊಂಡಿವೆ. ಫಿಜಿಯ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖವಾದಂತಹ ಪಾತ್ರವಹಿಸುವ ಹಾಗು ಕೊಡುಗೆ ನೀಡುವ ಅವಕಾಶ ನಮಗೆ ಲಭಿಸಿರುವುದು ಭಾರತಕ್ಕೆ ಉತ್ತಮ ಅದೃಷ್ಟ ತರುವ ಸಂಗತಿಯಾಗಿದೆ. ಕಳೆದ ದಶಕಗಳಲ್ಲಿ ಭಾರತ-ಫಿಜಿ ಸಂಬಂಧಗಳು ನಿರಂತರವಾಗಿ ಬಲಗೊಳ್ಳುತಾ ಸಾಗಿವೆ ಮತ್ತು ಅವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸುದೃಢವಾಗಿವೆ. ಫಿಜಿ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಸಹಕಾರದಿಂದ ಬರಲಿರುವ ದಿನಗಳಲ್ಲಿ ಈ ಬಾಂಧವ್ಯ ಇನ್ನಷ್ಟು ಬಲಿಷ್ಟಗೊಳ್ಳಲಿದೆ. ಯೋಗಾಯೋಗ ಎಂಬಂತೆ ನನ್ನ ಸ್ನೇಹಿತರಾದ ಪ್ರಧಾನ ಮಂತ್ರಿ ಬೈನಿಮರಾಮ ಜೀ ಅವರ ಜನ್ಮದಿನವೂ ಆಗಿರುವುದರಿಂದ ನಾನವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುತ್ತೇನೆ. ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆಯ ಜೊತೆ ಕೈಜೋಡಿಸಿರುವ ಎಲ್ಲಾ ಸದಸ್ಯರಿಗೂ ನಾನು ನನ್ನ ಶುಭವನ್ನು ಹಾರೈಸುತ್ತೇನೆ. ನನಗೆ ಬಹಳ ಖಚಿತವಿದೆ, ಈ ಆಸ್ಪತ್ರೆ ಫಿಜಿಯಲ್ಲಿ ಮತ್ತು ಈ ವಲಯದಲ್ಲಿ ಸೇವೆಯ ಬಹಳ ಬಲಿಷ್ಠವಾದಂತಹ ಸಂಸ್ಥೆಯಾಗಲಿದೆ. ಮತ್ತು ಅದು ಭಾರತ-ಫಿಜಿ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಡೊಯ್ಯಲಿದೆ.
ಬಹಳ ಬಹಳ ಧನ್ಯವಾದಗಳು!.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
My remarks at inauguration of children's heart hospital in Fiji. https://t.co/ThQKuyNZz2
— Narendra Modi (@narendramodi) April 27, 2022