Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಪ್ರಿಲ್ 14 ರಂದು ʻಪ್ರಧಾನಮಂತ್ರಿ ಸಂಗ್ರಹಾಲಯʼವನ್ನು ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಏಪ್ರಿಲ್ 14ರಂದು ಬೆಳಗ್ಗೆ 11 ಗಂಟೆಗೆ `ಪ್ರಧಾನಮಂತ್ರಿ ಸಂಗ್ರಹಾಲಯ’ವನ್ನು ಉದ್ಘಾಟಿಸಲಿದ್ದಾರೆ. `ಆಜಾದಿ ಕಾ ಅಮೃತ ಮಹೋತ್ಸವ’ದ ಸಂದರ್ಭದಲ್ಲಿ ಉದ್ಘಾಟನೆಗೊಳ್ಳುತ್ತಿರುವ ಸಂಗ್ರಾಹಾಲಯವು ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು ದೇಶದ ಪ್ರಧಾನ ಮಂತ್ರಿಗಳ ಜೀವನ ಮತ್ತು ಕೊಡುಗೆಗಳ ಮೂಲಕ ಪ್ರಸ್ತುತಪಡಿಸಲಿದೆ.

ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗೌರವಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಿಂದ ಪ್ರೇರಿತವಾದ ಈ ಸಂಗ್ರಾಹಾಲಯವು ಸ್ವಾತಂತ್ರ್ಯಾನಂತರದ ಭಾರತದ ಪ್ರತಿಯೊಬ್ಬ ಪ್ರಧಾನಿಗೆ ಅವರ ಸಿದ್ಧಾಂತ ಅಥವಾ ಅಧಿಕಾರಾವಧಿಯನ್ನು ಲೆಕ್ಕಿಸದೆ ಗೌರವ ಸಲ್ಲಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಮಗ್ರ ಪ್ರಯತ್ನ ಇದಾಗಿದೆ. ನಮ್ಮ ಎಲ್ಲ ಪ್ರಧಾನಮಂತ್ರಿಗಳ ನಾಯಕತ್ವ, ಮುನ್ನೋಟ ಮತ್ತು ಸಾಧನೆಗಳ ಬಗ್ಗೆ ಯುವಪೀಳಿಗೆಯಲ್ಲಿ  ಸಂವೇದನಾಶೀಲತೆ ಮತ್ತು ಸ್ಫೂರ್ತಿ ತುಂಬುವ ಗುರಿಯನ್ನು ಇದು ಹೊಂದಿದೆ.

ಹಳೆಯ ಮತ್ತು ಹೊಸತುಗಳ ತಡೆರಹಿತ ಮಿಶ್ರಣವನ್ನು ಪ್ರತಿನಿಧಿಸುವ ಸಂಗ್ರಾಹಾಲಯವು ʻಬ್ಲಾಕ್-1ʼ ಎಂದು ಹೆಸರಿಸಲಾದ ಈ ಹಿಂದಿನ ʻತೀನ್ ಮೂರ್ತಿ ಭವನʼವನ್ನು ʻಬ್ಲಾಕ್-2ʼ ಎಂದು ಗುರುತಿಸಲಾದ ನೂತನ ಕಟ್ಟಡದೊಂದಿಗೆ ಸಂಪರ್ಕ ಕಲ್ಪಿಸಿದೆ. ಈ ಎರಡು ಬ್ಲಾಕ್ ಗಳ ಒಟ್ಟು ವಿಸ್ತೀರ್ಣ 15,600 ಚದರ ಮೀಟರ್‌ಗಳಿಗೂ ಅಧಿಕವಾಗಿದೆ.

ಮ್ಯೂಸಿಯಂ ಕಟ್ಟಡದ ವಿನ್ಯಾಸವು ಉದಯೋನ್ಮುಖ ಭಾರತದ ಕಥೆಯಿಂದ ಪ್ರೇರಿತವಾಗಿದ್ದು, ಸುಸ್ಥಿರ ಮತ್ತು ಇಂಧನ ಸಂರಕ್ಷಣಾ ವಿಧಾನಗಳನ್ನು ಸಹ ಒಳಗೊಂಡಿದೆ. ಯೋಜನೆಯ ಅನುಷ್ಠಾನದ ಅವಧಿಯಲ್ಲಿ ಒಂದೇ ಒಂದು ಮರವನ್ನೂ ಕಡಿದಿಲ್ಲ ಅಥವಾ ಸ್ಥಳಾಂತರಿಸಿಲ್ಲ. ಸಂಗ್ರಹಾಲಯದ ಲಾಂಛನವು ರಾಷ್ಟ್ರ ಮತ್ತು ಪ್ರಜಾಪ್ರಭುತ್ವದ ಸಂಕೇತವಾದ ಧರ್ಮ ಚಕ್ರವನ್ನು ಹಿಡಿದಿರುವ ಭಾರತದ ಜನರ ಕೈಗಳನ್ನು ಪ್ರತಿನಿಧಿಸುತ್ತದೆ.

ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಾಗಿ ಪ್ರಸಾರ ಭಾರತಿ, ದೂರದರ್ಶನ, ಚಲನಚಿತ್ರ ವಿಭಾಗ, ಸಂಸತ್‌ ಟಿವಿ, ರಕ್ಷಣಾ ಸಚಿವಾಲಯ, ಮಾಧ್ಯಮ ಸಂಸ್ಥೆಗಳು (ಭಾರತೀಯ ಮತ್ತು ವಿದೇಶಿ), ವಿದೇಶಿ ಸುದ್ದಿ ಸಂಸ್ಥೆಗಳು ಮುಂತಾದವುಗಳ  ಸಂಪನ್ಮೂಲಗಳು/ ಮಾಹಿತಿ ಭಂಡಾರಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪತ್ರಾಗಾರಗಳ ಸೂಕ್ತ ಬಳಕೆ (ಸಂಪಾದಿತ ಕೃತಿಗಳು ಮತ್ತು ಇತರ ಸಾಹಿತ್ಯ ಕೃತಿಗಳು, ಪ್ರಮುಖ ಪತ್ರವ್ಯವಹಾರಗಳು), ಕೆಲವು ವೈಯಕ್ತಿಕ ವಸ್ತುಗಳು, ಉಡುಗೊರೆಗಳು ಮತ್ತು ಸ್ಮರಣಿಕೆಗಳು (ಸನ್ಮಾನಗಳು, ಗೌರವಗಳು, ಪದಕಗಳು, ಸ್ಮರಣಾರ್ಥ ಅಂಚೆ ಚೀಟಿಗಳು, ನಾಣ್ಯಗಳು ಇತ್ಯಾದಿ), ಪ್ರಧಾನ ಮಂತ್ರಿಗಳ ಭಾಷಣಗಳು ಮತ್ತು ಸಿದ್ಧಾಂತಗಳ ಉಪಕಥೆಗಳ ಪ್ರಾತಿನಿಧ್ಯ ಮತ್ತು ಪ್ರಧಾನ ಮಂತ್ರಿಗಳ ಜೀವನದ ವಿವಿಧ ಅಂಶಗಳನ್ನು ವಿಷಯಾಧಾರಿತ ಸ್ವರೂಪದಲ್ಲಿ ಇಲ್ಲಿ ಪ್ರದರ್ಶಿಸಲಾಗಿದೆ.

ವಿಭಿನ್ನ ವಿಷಯ ಮತ್ತು ವೈವಿಧ್ಯವನ್ನು ಕಾಯ್ದುಕೊಳ್ಳಲು ಪ್ರದರ್ಶಿಸಲ್ಪಟ್ಟ ವಸ್ತುವಿನ ವರ್ತುಲ ಚಲನೆ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ಜೊತೆಗೆ ಇದಕ್ಕಾಗಿ ಸಂಗ್ರಾಹಾಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ-ಆಧಾರಿತ ಇಂಟರ್ಫೇಸ್‌ಗಳನ್ನು ಬಳಸಲಾಗಿದೆ.  ಹೊಲೊಗ್ರಾಮ್‌ಗಳು, ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ, ಮಲ್ಟ್‌-ಟಚ್, ಮಲ್ಟಿಮೀಡಿಯಾ, ಸಂವಾದಾತ್ಮಕ ಕಿಯೋಸ್ಕ್‌ಗಳು, ಕಂಪ್ಯೂಟರೀಕೃತ ಕೈನೆಟಿಕ್ ಶಿಲ್ಪಗಳು, ಸ್ಮಾರ್ಟ್ ಫೋನ್ ಅಪ್ಲಿಕೇಶನ್‌ಗಳು, ಸಂವಾದರೂಪ ಇತ್ಯಾದಿಗಳನ್ನು ಸಂಗ್ರಹಾಲಯವು ಒಳಗೊಂಡಿದ್ದು ಇವುಗಳು ಪ್ರದರ್ಶನವನ್ನು ಹೆಚ್ಚು  ಆಕರ್ಷಕವಾಗಿಸಲು ಅನುವು ಮಾಡಿಕೊಡುತ್ತವೆ.

ಸಂಗ್ರಹಾಲಯದಲ್ಲಿ ಒಟ್ಟು 43 ಗ್ಯಾಲರಿಗಳಿವೆ. ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ರಚನೆಯ ಪ್ರದರ್ಶನಗಳಿಂದ ಪ್ರಾರಂಭಿಸಿ, ನಮ್ಮ ಪ್ರಧಾನ ಮಂತ್ರಿಗಳು ವಿವಿಧ ಸವಾಲುಗಳನ್ನು ಮೆಟ್ಟಿ ದೇಶವನ್ನು ಹೇಗೆ ಮುನ್ನಡೆಸಿದರು ಮತ್ತು ದೇಶದ ಸರ್ವತೋಮುಖ ಪ್ರಗತಿಯನ್ನು ಹೇಗೆ ಖಾತ್ರಿಪಡಿಸಿದರು ಎಂಬ ಕಥೆಯನ್ನು ಸಂಗ್ರಾಹಾಲಯವು ಹೇಳುತ್ತದೆ.