ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ದಿಲ್ಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ದೇಶದ ಪ್ರಮುಖ ಸಿಖ್ ಬುದ್ಧಿಜೀವಿಗಳ ನಿಯೋಗವನ್ನು ಭೇಟಿ ಮಾಡಿದರು.
ರೈತರ ಕಲ್ಯಾಣ, ಯುವಜನ ಸಬಲೀಕರಣ, ಮಾದಕ ವಸ್ತು ಮುಕ್ತ ಸಮಾಜ, ರಾಷ್ಟ್ರೀಯ ಶಿಕ್ಷಣ ನೀತಿ, ಕೌಶಲ್ಯ, ಉದ್ಯೋಗ, ತಂತ್ರಜ್ಞಾನ ಮತ್ತು ಪಂಜಾಬಿನ ಸರ್ವಾಂಗೀಣ ಅಭಿವೃದ್ಧಿ ಪಥದಂತಹ ವೈವಿಧ್ಯಮಯ ವಿಷಯಗಳ ಬಗ್ಗೆ ನಿಯೋಗದೊಂದಿಗೆ ಪ್ರಧಾನಮಂತ್ರಿಯವರು ಮುಕ್ತವಾಗಿ ಸಂವಾದ ನಡೆಸಿದರು.
ನಿಯೋಗವನ್ನು ಭೇಟಿಯಾಗಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಬುದ್ಧಿಜೀವಿಗಳು ಸಮಾಜದ ಅಭಿಪ್ರಾಯ ರೂಪಿಸುವವರು ಎಂದು ಹೇಳಿದರು. ಸಾರ್ವಜನಿಕರ ಜೊತೆ ತೊಡಗಿಸಿಕೊಂಡು ಅವರಿಗೆ ಮಾರ್ಗದರ್ಶನ ನೀಡುವಂತೆ ಹಾಗೂ ನಾಗರಿಕರಿಗೆ ಸರಿಯಾದ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ನಿಯೋಗದ ಸದಸ್ಯರನ್ನು ಅವರು ಒತ್ತಾಯಿಸಿದರು. ನಮ್ಮ ದೇಶದ ವಿಶಾಲ ಮತ್ತು ಸುಂದರ ವೈವಿಧ್ಯತೆಯ ನಡುವೆ ಕೇಂದ್ರ ಸ್ತಂಭವಾಗಿ ಕಾರ್ಯನಿರ್ವಹಿಸುವ ಏಕತೆಯ ಮನೋಭಾವದ ಮಹತ್ವವನ್ನು ಅವರು ಒತ್ತಿ ಹೇಳಿದರು.
ಮಾತೃಭಾಷೆಯಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣದ ಕನಸು ನನಸಾಗಿಸಲು ಭಾರತೀಯ ಭಾಷೆಗಳಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿಯವರ ಆಹ್ವಾನಕ್ಕಾಗಿ ನಿಯೋಗವು ಅವರಿಗೆ ಧನ್ಯವಾದಗಳನ್ನು ಅರ್ಪಿಸಿತು ಮತ್ತು ದೇಶದ ಪ್ರಧಾನ ಮಂತ್ರಿಗಳು ಇಂತಹ ಅನೌಪಚಾರಿಕ ಸಭೆಯಲ್ಲಿ ತಮ್ಮೊಂದಿಗೆ ಸಮಾಲೋಚನೆ ನಡೆಸುತ್ತಾರೆಂಬ ಊಹೆಯೂ ತಮಗಿರಲಿಲ್ಲ ಎಂದು ಹೇಳಿದರು. ಸಿಖ್ ಸಮುದಾಯದ ಸುಧಾರಣೆಗಾಗಿ ಪ್ರಧಾನಮಂತ್ರಿಯವರು ಕೈಗೊಂಡ ನಿರಂತರ ಮತ್ತು ನಾನಾ ಕ್ರಮಗಳನ್ನು ಅವರು ಶ್ಲಾಘಿಸಿದರು.
****
Had a productive meeting with members of the Sikh community. We had extensive discussions on various subjects. https://t.co/3uXeVRUugS
— Narendra Modi (@narendramodi) March 24, 2022