Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ʻಶಾಹೀದ್ ದಿವಸʼದಂದು ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ʻಬಿಪ್ಲೋಬಿ ಭಾರತ್ ಗ್ಯಾಲರಿʼ ಉದ್ಘಾಟಿಸಿದ ಪ್ರಧಾನಿ

ʻಶಾಹೀದ್ ದಿವಸʼದಂದು ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ʻಬಿಪ್ಲೋಬಿ ಭಾರತ್ ಗ್ಯಾಲರಿʼ ಉದ್ಘಾಟಿಸಿದ ಪ್ರಧಾನಿ


ಶಹೀದ್ ದಿವಸ್ ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್‌ನಲ್ಲಿ ʻಬಿಪ್ಲೋಬಿ ಭಾರತ್ ಗ್ಯಾಲʼರಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಶ್ರೀ ಜಗದೀಪ್ ಧನಕರ್‌ ಮತ್ತು ಕೇಂದ್ರ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿರ್ಭೂಮ್‌ನಲ್ಲಿ ನಡೆದ ಹಿಂಸಾಚಾರ ಘಟನೆಯ ಸಂತ್ರಸ್ತರಿಗೆ ಸಂತಾಪ ಸೂಚಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು.  ಇಂತಹ ಘೋರ ಕೃತ್ಯದ ಅಪರಾಧಿಗಳಿಗೆ ರಾಜ್ಯ ಸರಕಾರವು ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. “ಇಂತಹ ಘಟನೆಗಳ ಅಪರಾಧಿಗಳನ್ನು ಮತ್ತು ಅಂತಹ ಅಪರಾಧಿಗಳಿಗೆ ಪ್ರೋತ್ಸಾಹ ನೀಡುವವರನ್ನು ಎಂದಿಗೂ ಕ್ಷಮಿಸಬೇಡಿ ಎಂದು ನಾನು ಬಂಗಾಳದ ಜನರನ್ನು ಒತ್ತಾಯಿಸುತ್ತೇನೆ,” ಎಂದು ಅವರು ಹೇಳಿದರು.
ʻಶಹೀದ್ ದಿವಸ್ʼನಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗದ ಕಥೆಗಳು ದೇಶಕ್ಕಾಗಿ ದಣಿವರಿಯದೆ ದುಡಿಯಲು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತವೆ ಎಂದರು. “ನಮ್ಮ ಭೂತಕಾಲದ ಪರಂಪರೆಯು ನಮ್ಮ ವರ್ತಮಾನಕ್ಕೆ ಮಾರ್ಗದರ್ಶನ ನೀಡುತ್ತದೆ, ಉತ್ತಮ ಭವಿಷ್ಯವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಆದ್ದರಿಂದ, ಇಂದು ದೇಶವು ತನ್ನ ಇತಿಹಾಸ ಮತ್ತು ಗತಕಾಲವನ್ನು ಚೈತನ್ಯದ ಜೀವಂತ ಮೂಲವಾಗಿ ನೋಡುತ್ತದೆ”, ಎಂದು ಅವರು ಹೇಳಿದರು.
ಭಾರತದಿಂದ ಕಳ್ಳಸಾಗಣೆ ಮಾಡಲಾಗಿದ್ದ ಪ್ರಾಚೀನ ಪ್ರತಿಮೆಗಳನ್ನು ವಿದೇಶಗಳಿಂದ ಪುನಃ ತರುವ ಮೂಲಕ ʻನವ ಭಾರತವುʼ ದೇಶದ ಪರಂಪರೆಯನ್ನು ಮರಳಿ ತರುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 2014ರ ಹಿಂದಿನ ದಶಕಗಳಲ್ಲಿ ಕೇವಲ ಒಂದು ಡಜನ್ ಪ್ರತಿಮೆಗಳನ್ನು ಮಾತ್ರ ಭಾರತಕ್ಕೆ ತರಲು ಸಾಧ್ಯವಾಗಿತ್ತು. ಆದರೆ ಕಳೆದ 7 ವರ್ಷಗಳಲ್ಲಿ, ಈ ಸಂಖ್ಯೆ 225ಕ್ಕಿಂತ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು.
‘ನಿರ್ಭಿಕ್ ಸುಭಾಶ್‌’ ನಂತರ ʻಬಿಪ್ಲೋಬಿ ಭಾರತ್ ಗ್ಯಾಲರಿʼಯ ರೂಪದಲ್ಲಿ ಕೋಲ್ಕತಾದ ಶ್ರೀಮಂತ ಪರಂಪರೆಯ ಮುಕುಟಕ್ಕೆ  ಹೊಸ ಮುತ್ತನ್ನು ಸೇರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಪಶ್ಚಿಮ ಬಂಗಾಳದ ಪರಂಪರೆಯನ್ನು ಸಂರಕ್ಷಿಸುವ ಮತ್ತು ಬೆಳೆಸುವ ಸರಕಾರದ ಬದ್ಧತೆಗೆ ʻಬಿಪ್ಲೋಬಿ ಭಾರತ್ ಗ್ಯಾಲರಿʼ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ʻವಿಕ್ಟೋರಿಯಾ ಮೆಮೋರಿಯಲ್ʼ, ʻಸಾಂಪ್ರದಾಯಿಕ ಗ್ಯಾಲರಿಗಳು, ʻಮೆಟ್ಕಾಫ್ ಹೌಸ್ʼ ಮುಂತಾದ ರಾಜ್ಯದ ಅಪ್ರತಿಮ ಹೆಗ್ಗುರುತುಗಳನ್ನು ನವೀಕರಿಸುವ ಕೆಲಸ ಬಹುತೇಕ ಮುಗಿದಿದೆ ಎಂದು ಅವರು ಮಾಹಿತಿ ನೀಡಿದರು. “ನಮ್ಮ ಸಂಸ್ಕೃತಿ, ನಾಗರಿಕತೆಯ ಈ ಸಂಕೇತಗಳು ಭಾರತದ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಲಿವೆ, ಇದು ಈ ದಿಕ್ಕಿನಲ್ಲಿ ಒಂದು ದೊಡ್ಡ ಪ್ರಯತ್ನವಾಗಿದೆ” ಎಂದು ಅವರು ಹೇಳಿದರು.
ಪಾರಂಪರಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತದಲ್ಲಿ ರಾಷ್ಟ್ರವ್ಯಾಪಿ ಅಭಿಯಾನ ನಡೆಯುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ʻಸ್ವದೇಶ್ ದರ್ಶನ್ʼನಂತಹ ಹಲವಾರು ಯೋಜನೆಗಳ ಮೂಲಕ ಪಾರಂಪರಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ʻದಾಂಡಿ ಯಾತ್ರೆಯ ಸ್ಮಾರಕʼ, ʻಜಲಿಯನ್ ವಾಲಾ ಸ್ಮಾರಕʼದ ನವೀಕರಣ, ʻಏಕತಾ ಪ್ರತಿಮೆʼ, ʻದೀನ್ ದಯಾಳ್ ಸ್ಮಾರಕʼ, ʻಬಾಬಾ ಸಾಹೇಬ್ ಸ್ಮಾರಕʼ, ʻಭಗವಾನ್ ಬಿರ್ಸಾ ಮುಂಡಾ ಸ್ಮಾರಕʼ, ಅಯೋಧ್ಯೆ ಮತ್ತು ಕಾಶಿಯಲ್ಲಿನ ಘಟ್ಟಗಳನ್ನು ಸೊಗಸಾಗಿಸುವುದು ಅಥವಾ ಭಾರತದಾದ್ಯಂತ ದೇವಾಲಯಗಳ ನವೀಕರಣದಂತಹ ಉಪಕ್ರಮಗಳೊಂದಿಗೆ, ಪಾರಂಪರಿಕ ಪ್ರವಾಸೋದ್ಯಮವು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು.
ಶತಮಾನಗಳ ಗುಲಾಮಗಿರಿಯ ಸಮಯದಲ್ಲಿ, ಮೂರು ಶಕ್ತಿಗಳು ಜಂಟಿಯಾಗಿ ಸ್ವಾತಂತ್ರ್ಯ ಗಳಿಸಲು ಕಾರಣವಾದವು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಶಕ್ತಿಗಳೆಂದರೆ ಕ್ರಾಂತಿ, ಸತ್ಯಾಗ್ರಹ ಮತ್ತು ಜನಜಾಗೃತಿ ಎಂದರು. ರಾಷ್ಟ್ರ ಧ್ವಜದ ತ್ರಿವರ್ಣಗಳ ಸಂಕೇತದ ಬಗ್ಗೆ ಪ್ರಧಾನ ಮಂತ್ರಿಯವರು ಸುದೀರ್ಘವಾಗಿ ಚರ್ಚಿಸಿದರು. ಈ ಮೂರು ಶಕ್ತಿಗಳನ್ನು ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಪ್ರತಿನಿಧಿಸಲಾಗಿದೆ, ಕೇಸರಿಯು ಕ್ರಾಂತಿಕಾರಿ ಶಕ್ತಿಯನ್ನು ಪ್ರತಿನಿಧಿಸುತ್ತದೆ, ಶ್ವೇತ ಅಥವಾ ಬಿಳಿ ಬಣ್ಣವು ಸತ್ಯಾಗ್ರಹದ ಸಂಕೇತ ಮತ್ತು ಹಸಿರು ವರ್ಣವು ದೇಶದ ಸೃಜನಶೀಲ ನಾಡಿಮಿಡಿತವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರಧ್ವಜದಲ್ಲಿರುವ ನೀಲಿ ಬಣ್ಣವು ದೇಶದ ಸಾಂಸ್ಕೃತಿಕ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. ತಾವು ʻನವ ಭಾರತʼದ ಭವಿಷ್ಯವನ್ನು ರಾಷ್ಟ್ರಧ್ವಜದ ಮೂರು ಬಣ್ಣಗಳಲ್ಲಿ ನೋಡುವುದಾಗಿ ಅವರು ಹೇಳಿದರು. ಕೇಸರಿ ಬಣ್ಣವು ನಮ್ಮಲ್ಲಿ ಕರ್ತವ್ಯ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಜ್ಞೆಯನ್ನು ಪ್ರೇರೇಪಿಸುತ್ತದೆ; ಬಿಳಿಯ ಬಣ್ಣವು ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ʼಗೆ ಸಮಾನಾರ್ಥಕವಾಗಿದೆ; ಹಸಿರು ವರ್ಣವು ಪರಿಸರ ಸಂರಕ್ಷಣೆಯನ್ನು ಮತ್ತು ನೀಲಿ ಚಕ್ರವು ನೀಲಿ ಆರ್ಥಿಕತೆಯನ್ನು ಸಂಕೇತಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 
ಭಗತ್ ಸಿಂಗ್, ಸುಖದೇವ್, ರಾಜಗುರು, ಆಜಾದ್ ಮತ್ತು ಖುದಿರಾಮ್ ಬೋಸ್ ಅವರಂತಹ ಕ್ರಾಂತಿಕಾರಿಗಳ ಯುವ ವಯಸ್ಸನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತದ ಯುವಕರು ತಮ್ಮನ್ನು ಎಂದಿಗೂ ಕಡಿಮೆ ಎಂದು ಭಾವಿಸಬಾರದು ಎಂದು ಹೇಳಿದರು. “ಭಾರತದ ಯುವಕರು ಏನೂ ಮಾಡಲು ಆಗದಂಥದ್ದು ಏನೂ ಇಲ್ಲ, ಭಾರತದ ಯುವಕರು ಸಾಧಿಸಲಾಗದಂತಹ ಗುರಿ ಯಾವುದೂ ಇಲ್ಲ,” ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶ ಸೇವೆಗಾಗಿ ಮತ್ತು ದೇಶಭಕ್ತಿಗಾಗಿ ವಿವಿಧ ಪ್ರದೇಶಗಳು, ಭಾಷೆಗಳು, ಸಂಪನ್ಮೂಲಗಳನ್ನು ಒಗ್ಗೂಡಿಸಿದ ಏಕತೆಯ ಎಳೆಯ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. “ಭಾರತ-ಭಕ್ತಿ, ಏಕತೆ, ಭಾರತದ ಸಮಗ್ರತೆಯ ಈ ಚಿರಂತನ ಭಾವನೆಯು ಇಂದಿಗೂ ನಮ್ಮ ಮೊದಲ ಆದ್ಯತೆಯಾಗಿರಬೇಕು. ನಿಮ್ಮ ರಾಜಕೀಯ ಚಿಂತನೆ ಏನೇ ಇರಲಿ, ನೀವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರಬಹುದು, ಆದರೆ ಭಾರತದ ಏಕತೆ ಮತ್ತು ಸಮಗ್ರತೆಯೊಂದಿಗೆ ಯಾವುದೇ ರೀತಿಯ ರಾಜಿಯು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಅತಿದೊಡ್ಡ ದ್ರೋಹವಾಗುತ್ತದೆ”, ಎಂದು ಪ್ರಧಾನಿ ಒತ್ತಿ ಹೇಳಿದರು. “ನವ ಭಾರತದಲ್ಲಿ ನಾವು ಹೊಸ ದೃಷ್ಟಿಕೋನದೊಂದಿಗೆ ಮುಂದುವರಿಯಬೇಕಾಗಿದೆ. ಈ ಹೊಸ ದೃಷ್ಟಿಕೋನವು ಭಾರತದ ಆತ್ಮ ವಿಶ್ವಾಸ, ಸ್ವಾವಲಂಬನೆ, ಪ್ರಾಚೀನ ಅಸ್ಮಿತೆ ಮತ್ತು ಭವಿಷ್ಯದ ಉನ್ನತಿಯ ಕುರಿತದ್ದಾಗಿದೆ. ಇದರಲ್ಲಿ, ಕರ್ತವ್ಯದ ಪ್ರಜ್ಞೆಯು ಅತ್ಯಂತ ಮಹತ್ವದ್ದಾಗಿದೆ,” ಎಂದು ಪ್ರಧಾನಿ ಹೇಳಿದರು.
ಇಂದು ಸಾಧಿಸಲಾದ 400 ಶತಕೋಟಿ ಡಾಲರ್ ಅಥವಾ 30 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಫ್ತಿನ ಮೈಲಿಗಲ್ಲನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, “ಹೆಚ್ಚುತ್ತಿರುವ ಭಾರತದ ರಫ್ತುಗಳು ನಮ್ಮ ಉದ್ಯಮ, ನಮ್ಮ ಸಣ್ಣ ಕೈಗಾರಿಕೆಗಳು (ಎಂಎಸ್ಎಂ), ನಮ್ಮ ಉತ್ಪಾದನಾ ಸಾಮರ್ಥ್ಯ ಮತ್ತು ನಮ್ಮ ಕೃಷಿ ವಲಯದ ಶಕ್ತಿಯ ಸಂಕೇತವಾಗಿದೆ” ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಕೊಡುಗೆ ಮತ್ತು ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಅವರ ಸಶಸ್ತ್ರ ಪ್ರತಿರೋಧವನ್ನು ʻಗ್ಯಾಲರಿʼಯಲ್ಲಿ ಪ್ರದರ್ಶಿಸಲಾಗಿದೆ. ಸ್ವಾತಂತ್ರ್ಯ ಚಳವಳಿಯ ಮುಖ್ಯವಾಹಿನಿಯ ನಿರೂಪಣೆಯಲ್ಲಿ ಈ ಅಂಶಕ್ಕೆ ಸೂಕ್ತ ಸ್ಥಾನವನ್ನು ನೀಡಲಾಗಿಲ್ಲ. ಹಾಗಾಗಿ, 1947ರವರೆಗೆ ನಡೆದ ಘಟನೆಗಳ ಸಮಗ್ರ ನೋಟವನ್ನು ಒದಗಿಸಲು ಮತ್ತು ಕ್ರಾಂತಿಕಾರಿಗಳು ನಿರ್ವಹಿಸಿದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವ ಉದ್ದೇಶದೊಂದಿಗೆ ಈ ಹೊಸ ಗ್ಯಾಲರಿಯನ್ನು ಸ್ಥಾಪಿಸಲಾಗಿದೆ. 
ʻಬಿಪ್ಲೋಬಿ ಭಾರತ್ ಗ್ಯಾಲರಿʼಯು ಕ್ರಾಂತಿಕಾರಿ ಚಳವಳಿಯನ್ನು ಪ್ರಚೋದಿಸಿದ ರಾಜಕೀಯ ಹಾಗೂ ಬೌದ್ಧಿಕ ಹಿನ್ನೆಲೆಯನ್ನು ಚಿತ್ರಿಸುತ್ತದೆ. ಕ್ರಾಂತಿಕಾರಿ ಚಳವಳಿಯ ಹುಟ್ಟು, ಕ್ರಾಂತಿಕಾರಿ ನಾಯಕರಿಂದ ಗಮನಾರ್ಹ ಸಂಘಗಳ ರಚನೆ, ಆಂದೋಲನದ ಹರಡುವಿಕೆ, ಭಾರತೀಯ ರಾಷ್ಟ್ರೀಯ ಸೈನ್ಯದ ರಚನೆ, ನೌಕಾ ದಂಗೆಯ ಕೊಡುಗೆ ಮುಂತಾದವುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

 

 

 

***