Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಪ್ರಧಾನಿ ಚಾಲನೆ

ಭಾರತೀಯ ಬಾಹ್ಯಾಕಾಶ ಸಂಘಕ್ಕೆ ಪ್ರಧಾನಿ ಚಾಲನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಭಾರತೀಯ ಬಾಹ್ಯಾಕಾಶ ಸಂಘʼಕ್ಕೆ (ಐಎಸ್‌ಪಿಎ) ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಾಹ್ಯಾಕಾಶ ಉದ್ಯಮದ ಪ್ರತಿನಿಧಿಗಳೊಂದಿಗೆ ಅವರು ಸಂವಾದ ನಡೆಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ದೇಶದ ಇಬ್ಬರು ಮಹಾನ್ ಪುತ್ರರಾದ ಭಾರತ ರತ್ನ ಜಯಪ್ರಕಾಶ್ ನಾರಾಯಣ್ ಮತ್ತು ಭಾರತ ರತ್ನ ನಾನಾಜಿ ದೇಶಮುಖ್ ಅವರ ಜನ್ಮ ದಿನವೆಂಬ ವಿಷಯವನ್ನು ಗಮನಕ್ಕೆ ತಂದರು. ಸ್ವಾತಂತ್ರ್ಯೋತ್ತರ ಭಾರತಕ್ಕೆ ನಿರ್ದೇಶನ ನೀಡುವಲ್ಲಿ ಈ ಇಬ್ಬರು ಮಹಾನ್ ವ್ಯಕ್ತಿಗಳು ದೊಡ್ಡ ಪಾತ್ರ ವಹಿಸಿದರು. ಪ್ರತಿಯೊಬ್ಬರ ಪ್ರಯತ್ನಗಳೊಂದಿಗೆ ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಮೂಲಕ, ದೇಶದಲ್ಲಿ ಮಹತ್ವದ ಬದಲಾವಣೆಗಳನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದನ್ನು ಅವರು ತೋರಿಸಿದರು. ಅವರ ಜೀವನ ತತ್ವವು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತದಲ್ಲಿ ಇಂದಿನ ರೀತಿಯ ನಿರ್ಣಾಯಕ ಸರಕಾರ ಹಿಂದೆಂದೂ ಇರಲಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಬಾಹ್ಯಾಕಾಶ ವಲಯ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇಂದು ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಸುಧಾರಣೆಗಳು ಇದಕ್ಕೆ ಉದಾಹರಣೆಯಾಗಿವೆ ಎಂದರು. ಭಾರತೀಯ ಬಾಹ್ಯಾಕಾಶ ಸಂಘ (ಐಎಸ್ ಪಿಎ) ರಚನೆಗಾಗಿ ಹಾಜರಿದ್ದ ಎಲ್ಲರನ್ನೂ ಅವರು ಅಭಿನಂದಿಸಿದರು.
ಬಾಹ್ಯಾಕಾಶ ಸುಧಾರಣೆಗಾಗಿ ಸರಕಾರದ ಕಾರ್ಯವಿಧಾನವು ವಿಧಾನವು 4 ಸ್ತಂಭಗಳನ್ನು ಆಧರಿಸಿದೆ ಎಂದು ಪ್ರಧಾನಿ ಹೇಳಿದರು. ಮೊದಲನೆಯದಾಗಿ, ಖಾಸಗಿ ವಲಯಕ್ಕೆ ಆವಿಷ್ಕಾರದ ಸ್ವಾತಂತ್ರ್ಯ. ಎರಡನೆಯದಾಗಿ, ಸಕ್ರಿಯಗೊಳಿಸುವಿಕೆಯಲ್ಲಿ ಸರಕಾರದ ಪಾತ್ರ. ಮೂರನೆಯದಾಗಿ, ಭವಿಷ್ಯಕ್ಕಾಗಿ ಯುವಕರನ್ನು ಸಿದ್ಧಗೊಳಿಸುವುದು. ಮತ್ತು ನಾಲ್ಕನೆಯದಾಗಿ, ಬಾಹ್ಯಾಕಾಶ ವಲಯವನ್ನು ಸಾಮಾನ್ಯ ಜನರ ಪ್ರಗತಿಗೆ ಸಂಪನ್ಮೂಲವಾಗಿ ನೋಡುವುದು. 130 ಕೋಟಿ ದೇಶವಾಸಿಗಳ ಪ್ರಗತಿಗೆ ಬಾಹ್ಯಾಕಾಶ ಕ್ಷೇತ್ರ ಪ್ರಮುಖ ಮಾಧ್ಯಮವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಪಾಲಿಗೆ ಬಾಹ್ಯಾಕಾಶ ವಲಯ ಎಂದರೆ ಸಾಮಾನ್ಯ ಜನರಿಗೆ ಉತ್ತಮ ನಕ್ಷೆ,  ಇಮೇಜಿಂಗ್ ಮತ್ತು ಸಂಪರ್ಕ ಸೌಲಭ್ಯಗಳು ಎಂದು ಅವರು ಹೇಳಿದರು. ಅಲ್ಲದೆ, ಉದ್ಯಮಿಗಳ ಪಾಲಿಗೆ ಬಾಹ್ಯಾಕಾಶ ವಲಯ ಎಂದರೆ ಸಾಗಣೆಯಿಂದ ವಿತರಣೆವರೆಗೆ ಉತ್ತಮ ವೇಗ ಎಂದರ್ಥ.  ಮೀನುಗಾರರಿಗೆ ಉತ್ತಮ ಸುರಕ್ಷತೆ ಮತ್ತು ಆದಾಯ, ನೈಸರ್ಗಿಕ ವಿಪತ್ತುಗಳ ಉತ್ತಮ ಮುನ್ಸೂಚನೆ ಪ್ರಯೋಜನವೂ ಇದರಿಂದ ದೊರೆಯಲಿದೆ ಎಂದು ಅವರು ಹೇಳಿದರು.
ʻಆತ್ಮನಿರ್ಭರ ಭಾರತʼ ಅಭಿಯಾನವು ಕೇವಲ ದೂರದೃಷ್ಟಿಯನ್ನು ಮಾತ್ರ ಹೊಂದಿಲ್ಲ, ಅದೊಂದು  ಉತ್ತಮ ಚಿಂತನೆಯ, ಯೋಜಿತ, ಸಮಗ್ರ ಆರ್ಥಿಕ ಕಾರ್ಯತಂತ್ರವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಉದ್ಯಮಿಗಳು ಮತ್ತು ಭಾರತದ ಯುವಕರ ಕೌಶಲ್ಯ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಕೇಂದ್ರವನ್ನಾಗಿ ಮಾಡುವ ಕಾರ್ಯತಂತ್ರ ಅದಾಗಿದೆ. ಭಾರತದ ತಾಂತ್ರಿಕ ಪರಿಣತಿಯ ಆಧಾರದ ಮೇಲೆ ಭಾರತವನ್ನು ಆವಿಷ್ಕಾರಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಕಾರ್ಯತಂತ್ರವೂ ಹೌದು. ಜಾಗತಿಕ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸುವ ಕಾರ್ಯತಂತ್ರ ಇದಾಗಿದ್ದು, ಜಾಗತಿಕವಾಗಿ ಭಾರತದ ಮಾನವ ಸಂಪನ್ಮೂಲ ಮತ್ತು ಪ್ರತಿಭೆಯ ಘನತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಂಬಂಧಿಸಿದಂತೆ ಸರಕಾರ ಸ್ಪಷ್ಟ ನೀತಿಯೊಂದಿಗೆ ಮುನ್ನಡೆಯುತ್ತಿದೆ ಮತ್ತು ಸರಕಾರದ ಪಾತ್ರ ಅಗತ್ಯವಿಲ್ಲದ ಈ ವಲಯಗಳಲ್ಲಿನ ಬಹುತೇಕ ಉದ್ಯಮಗಳನ್ನು ಖಾಸಗಿಗೆ ಮುಕ್ತಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಏರ್ ಇಂಡಿಯಾಗೆ ಸಂಬಂಧಿಸಿದ ನಿರ್ಧಾರವು ನಮ್ಮ ಬದ್ಧತೆ ಮತ್ತು ಗಂಭೀರತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಕಳೆದ 7 ವರ್ಷಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಅಂಚಿನಲ್ಲಿರುವ ಜನರನ್ನು ತಲುಪಲು ಮತ್ತು ಸೋರಿಕೆ ಮುಕ್ತ, ಪಾರದರ್ಶಕ ಆಡಳಿತದ ಸಾಧನವಾಗಿ ಪರಿವರ್ತಿಸಲಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. ಬಡವರ ವಸತಿ ಯೋಜನೆ ಘಟಕಗಳು, ರಸ್ತೆಗಳು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಜಿಯೋಟ್ಯಾಗ್ ಬಳಸಿದ ಉದಾಹರಣೆಗಳನ್ನು ಅವರು ನೀಡಿದರು. ಅಭಿವೃದ್ಧಿ ಯೋಜನೆಗಳನ್ನು ಉಪಗ್ರಹ ಇಮೇಜಿಂಗ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಫಸಲ್ ಬಿಮಾ ಯೋಜನೆ ಕ್ಲೇಮುಗಳ ಇತ್ಯರ್ಥದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ʻನಾವಿಕ್‌ʼ(ಎನ್ಎವಿಐಸಿ)  ವ್ಯವಸ್ಥೆಯು ಮೀನುಗಾರರಿಗೆ ಸಹಾಯಕವಾಗಿದೆ, ವಿಪತ್ತು ನಿರ್ವಹಣಾ ಯೋಜನೆ ರೂಪಿಸಲೂ ಸಹ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಡಿಜಿಟಲ್ ತಂತ್ರಜ್ಞಾನದ ಉದಾಹರಣೆ ನೀಡಿದ ಅವರು, ಭಾರತವು ಇಂದು ಅಗ್ರಗಣ್ಯ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿದೆ. ಏಕೆಂದರೆ ನಾವು ಡೇಟಾದ ಶಕ್ತಿಯನ್ನು ಕಡು ಬಡವರಿಗೆ ಲಭ್ಯವಾಗುವಂತೆ ಮಾಡಬಹುದು ಎಂದು ಹೇಳಿದರು.
ಯುವ ಉದ್ಯಮಿಗಳು ಮತ್ತು ನವೋದ್ಯಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸರಕಾರವು ಪ್ರತಿಯೊಂದು ಹಂತದಲ್ಲೂ ಉದ್ಯಮ, ಯುವ ನವೋದ್ಯಮಿಗಳು ಮತ್ತು ನವೋದ್ಯಮಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.  ಬಲವಾದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು, ವೇದಿಕೆ ವಿಧಾನವು ಬಹಳ ಮುಖ್ಯ ಎಂದು ಅವರು ವಿವರಿಸಿದರು. ವೇದಿಕೆ ವ್ಯವಸ್ಥೆಯನ್ನು ವ್ಯಾಖ್ಯಾನಿಸಿದ ಅವರು “ಈ ವಿಧಾನದಲ್ಲಿ ಸರಕಾರವು ಮುಕ್ತ ಪ್ರವೇಶ ಹೊಂದಿರುವ ಸಾರ್ವಜನಿಕ ನಿಯಂತ್ರಿತ ವೇದಿಕೆಗಳನ್ನು ರಚಿಸಿ, ಅವುಗಳು ಉದ್ಯಮ ಮತ್ತು ಸಂಸ್ಥೆಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. ಉದ್ಯಮಿಗಳು ಈ ಮೂಲ ವೇದಿಕೆಯಲ್ಲಿ ಹೊಸ ಪರಿಹಾರಗಳನ್ನು ತಯಾರಿಸುತ್ತಾರೆ,” ಎಂದರು. ಬಲವಾದ ಹಣಕಾಸು-ತಂತ್ರಜ್ಞಾನ (ಫಿನ್‌ಟೆಕ್) ಜಾಲದ ಆಧಾರವಾದ ʻಯುಪಿಐʼ ವೇದಿಕೆಯ ಉದಾಹರಣೆಯೊಂದಿಗೆ ಪ್ರಧಾನಿ ಇದನ್ನು ವಿವರಿಸಿದರು. ಬಾಹ್ಯಾಕಾಶ, ಭೂಪ್ರದೇಶ ಮತ್ತು ವಿವಿಧ ಪ್ರದೇಶಗಳಲ್ಲಿ ಡ್ರೋನ್‌ಗಳ ಬಳಕೆಗಾಗಿ ಇದೇ ರೀತಿಯ ವೇದಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇಂದಿನ ಸಭೆಯ ಸಲಹೆಗಳ ಮೂಲಕ ಮತ್ತು ಮಧ್ಯಸ್ಥಗಾರರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಶೀಘ್ರದಲ್ಲೇ ಉತ್ತಮ ʻಬಾಹ್ಯಾಕಾಶ-ದೂರಸಂಪರ್ಕ (ಸ್ಪೇಸ್‌ಕಾಮ್) ನೀತಿʼ ಮತ್ತು ʻದೂರ ಸಂವೇದಿ ನೀತಿʼ ಹೊರಹೊಮ್ಮಲಿವೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.
20ನೇ ಶತಮಾನದಲ್ಲಿ ಬಾಹ್ಯಾಕಾಶ ಮತ್ತು ಬಾಹ್ಯಾಕಾಶ ವಲಯವನ್ನು ಆಳಲು ಪ್ರಯತ್ನಿಸಿದ ಪ್ರವೃತ್ತಿಯು ವಿಶ್ವದ ದೇಶಗಳನ್ನು ಹೇಗೆ ವಿಭಜಿಸಿತು ಎಂಬುದನ್ನು ಪ್ರಧಾನಿ ಗಮನಕ್ಕೆ ತಂದರು. ಈಗಿನ 21ನೇ ಶತಮಾನದಲ್ಲಿ, ಜಗತ್ತನ್ನು ಒಗ್ಗೂಡಿಸುವಲ್ಲಿ ಮತ್ತು ಸಂಪರ್ಕಿಸುವಲ್ಲಿ ಬಾಹ್ಯಾಕಾಶವು ಪ್ರಮುಖ ಪಾತ್ರ ವಹಿಸುವಂತೆ ಭಾರತವು ನೋಡಿಕೊಳ್ಳಬೇಕು ಎಂದು ಹೇಳಿ ಪ್ರಧಾನಿಯವರು ಮಾತು ಮುಗಿಸಿದರು. 

 

*****